ಸೋಮವಾರ, ಏಪ್ರಿಲ್ 6, 2026

ಸಂಗೀತ ಲೋಕದ ಸಂತ ಬಿಸ್ಮಿಲ್ಲಾ ಖಾನ್ (ಪುಸ್ತಕ ಯಾನ - 16)


ಪುಸ್ತಕದ ಹೆಸರು : ಸಂಗೀತ ಲೋಕದ ಸಂತ ಬಿಸ್ಮಿಲ್ಲಾ ಖಾನ್

ಲೇಖಕರು : ಡಾ. ಎನ್. ಜಗದೀಶ್ ಕೊಪ್ಪ

ಪುಸ್ತಕದ ಶೈಲಿ : ಜೀವನ ಚರಿತ್ರೆ

ಮೊದಲ ಮುದ್ರಣ : 2020

ಪ್ರಕಾಶಕರು : ಮನೋಹರ ಗ್ರಂಥ ಮಾಲಾ, ಧಾರವಾಡ

ಮೂಲ ಬೆಲೆ : 200 ರೂಪಾಯಿಗಳು


'ಸನಾದಿ ಅಪ್ಪಣ್ಣ' ಸಿನಿಮಾ ನೋಡಿದಾಗ ಅಥವಾ ಅದರ ಹಾಡುಗಳನ್ನು ಹೇಳಿದಾಗ ಮನಸೆಳೆಯುವುದು ಶಹನಾಯಿಯ ವಾದನ. ಆ ಚಿತ್ರಕ್ಕೆ ಡಾಕ್ಟರ್ ರಾಜ್ ಕುಮಾರ್ ಅವರು ಜೀವ ತುಂಬಿರುವ ಹಾಗೆ ಶಹನಾಯಿಯ ವಾದನದ ಮೂಲಕ ಜೀವ ತುಂಬಿರುವವರು ಸಂಗೀತ ಲೋಕದ ಸಂತ ಬಿಸ್ಮಿಲ್ಲಾ ಖಾನ್. ಇವರ ಬಗ್ಗೆ ತಿಳಿಯುತ್ತಾ ಹೋದಂತೆ ಇವರ ಮೇಲಿನ ಗೌರವ ಹೆಚ್ಚಿತು ಹಾಗೂ ನಾನು ಇಷ್ಟಪಟ್ಟು ಆಲಿಸುವ ಕೊಳಲು, ವಯೋಲಿನ್ ಹಾಗೂ ವೀಣಾ ವಾದನದ ಜೊತೆಗೆ ಶಹನಾಯಿ ಕೂಡಾ ಸೇರ್ಪಡೆಯಾಯಿತು.


ಸಂಗೀತಾಸಕ್ತರಿಗೆ ಸಂಗೀತವೆಂದರೆ ಕೇವಲ ಸಪ್ತಸ್ವರಗಳಲ್ಲ. ಅದೊಂದು ದಿವ್ಯ ಅನುಭೂತಿ. ಹಾಗಿದ್ದ ಮೇಲೆ ಸಂಗೀತಗಾರರು ಅದೆಷ್ಟು ದಿವ್ಯ ಅನುಭೂತಿಗಳನ್ನು ಪಡೆದಿರುತ್ತರಲ್ಲಾ.. ಭಾರತದ ಸಂಗೀತದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವೆಂದು ವಿಂಗಡಿಸಲಾಗುತ್ತದೆ. ಬಿಸ್ಮಿಲ್ಲಾ ಖಾನರು ಹಿಂದೂಸ್ತಾನಿ ಶಾಸ್ತ್ರೀಯ ವಿಭಾಗದಲ್ಲಿನ ಹಾಡುಗಾರರು ಹಾಗೂ ಶಹನಾಯಿ ವಾದಕರು. ಇವರ ಶಹನಾಯಿ ವಾದನ ಉತ್ತರ - ದಕ್ಷಿಣ ಎಂದ ಭೇಧವಿಲ್ಲದೆ ಹರಡಿದೆ ಹಾಗೂ ಹಿಂದೂ ಮುಸಲ್ಮಾನ ಎಂಬ ಭೇಧವನ್ನೂ ಮೀರಿದೆ.


ಬಿಸ್ಮಿಲ್ಲಾ ಖಾನರು ಹುಟ್ಟಿದ್ದು ಬಿಹಾರದ ಬಕ್ಸಾರ್ ಜಿಲ್ಲೆಯ ದುಮ್ ರಹೋನ್ ಎಂಬ ಪಟ್ಟಣದಲ್ಲಿ.. ಆದರೆ, ಬೆಳೆದದ್ದೆಲ್ಲವೂ ತಾಯಿಯ ತವರು ಮನೆ ಉತ್ತರಪ್ರದೇಶದ ಗಂಗಾ ನದಿಯ ತಟದ ವಾರಣಾಸಿಯಲ್ಲಿ. ತಂದೆಯ ಹಾಗೂ ತಾಯಿಯ ಕುಟುಂಬದಲ್ಲಿ ಇದ್ದದ್ದು ಸಂಗೀತಗಾರರೇ.. ಬಿಸ್ಮಿಲ್ಲಾ ಖಾನರ ಅಜ್ಜ, ಮುತ್ತಜ್ಜ, , ಅಪ್ಪ ಎಲ್ಲರೂ ಬಿಹಾರದಲ್ಲಿದ್ದ ರಜಪೂತರ ಅರಮನೆಯ ಖಾಯಂ ಸದಸ್ಯರಾಗಿ ಸೇವೆ ಸಲ್ಲಿಸಿದವವರು. ಬಿಸ್ಮಿಲ್ಲಾ ಖಾನರ ಅಜ್ಜ ರಸೂಲ್ ಭಕ್ಸ್ ಖಾನ್ . ತಂದೆ ಪೈಗಂಬರ್ ಬಕ್ಸ್. ಬಿಸ್ಮಿಲ್ಲಾಖಾನರ ನಿಜ ನಾಮಧೇಯ ಕಮರುದ್ದೀನ್ ಖಾನ್. ರಸೂಲ್ ಅವರು ಮೊಮ್ಮಗ ಹುಟ್ಟಿದಾಗ ಸಂತೋಷದಿಂದ ದೇವರಿಗೆ ಕೃತಜ್ಞತೆ ಅರ್ಪಿಸಿ "ಬಿಸ್ಮಿಲ್ಲಾ" ಎಂದು ಉದ್ಗಾರ ಹೊರಡಿಸಿದ್ದರು. ಅಷ್ಟೇ ಅಲ್ಲ, ಮೊಮ್ಮಗನನ್ನು ಪ್ರೀತಿಯಿಂದ ಬಿಸ್ಮಿಲ್ಲಾ ಎಂದೇ ಕರೆಯುತ್ತಿದ್ದರು. ನಂತರದಲ್ಲಿ.. ಬಿಸ್ಮಿಲ್ಲಾ ಖಾನ್ ಎಂದೇ ಪ್ರಸಿದ್ದರಾದರು. 


ಬಿಸ್ಮಿಲ್ಲಾರ ಅಣ್ಣ ಶಂಶುದ್ದೀನ್ ಖಾನ್. ಇವರಿಬ್ಬರನ್ನೂ ಅರಮನೆಯ ಸಂಗೀತಗಾರರನ್ನಾಗಿ ಮಾಡುವ ಬದಲು ವಾರಾಣಾಸಿಗೆ ಕಳುಹಿಸಿದ್ದಕ್ಕೆ ಕಾರಣ ಅವರ ತಾಯಿ ಮಿಥಾನ್. ಅಲ್ಲಿ ಅವರ ತಂದೆ ಹಾಗೂ ಸಹೋದರರು ವಾರಣಾಸಿಯ ಕಾಶಿ ವಿಶ್ವನಾಥ ಸೇರಿದಂತೆ ಅನೇಕ ದೇವಾಲಯಗಳಲ್ಲಿ ಶಹನಾಯ್ ನುಡಿಸುವ ವೃತ್ತಿಯಲ್ಲಿ ತೊಡಗಿದ್ದರು. ಮೂರು ವರ್ಷದ ಬಿಸ್ಮಿಲ್ಲಾ ಖಾನ್ ಮಿಥಾನ್ ರ ಸಹೋದರರ ವಾದ್ಯ ವಾದನವನ್ನು ಕೇಳುತ್ತಾ ಅತ್ಯಾಸಕ್ತಿ ತೋರಿದ್ದನ್ನು ಕಂಡ ಅವರ ತಮ್ಮ ಆಲಿ ಭಕ್ಸ್ ಅಕ್ಕನ ಬಳಿ ಆ ಕುರಿತು ಹೇಳಿದರು. ನಂತರ ಅವರೇ ತನ್ನ ಸೋದರಳಿಯನ ಗುರುವೂ ಆದರು. ಅವರನ್ನು ಬಿಸ್ಮಿಲ್ಲಾ ಖಾನ್ ಪ್ರೀತಿಯಿಂದ "ಮಾಮು" ಎಂದೇ ಕರೆಯುತ್ತಿದ್ದರು. ಇವರಿಬ್ಬರ ಅನುಬಂಧ ಗುರು-ಶಿಷ್ಯ, ಮಾವ-ಸೋದರಳಿಯ ಎಂಬುದಕ್ಕಿಂತ ತಂದೆ- ಮಕ್ಕಳಿಗಿಂತಲೂ ಹೆಚ್ಚು.


ಅರಮನೆಯ ಸಂಪ್ರದಾಯದ ಪ್ರಕಾರ ಶಹನಾಯ್ ಅಥವಾ ಬೇರೆ ವಾದ್ಯಗಾರರಿಗೆ ಅರಮನೆಗೆ, ಸಭಾಂಗಣದಕ್ಕೆ ಮತ್ತು ದೇವಸ್ಥಾನಗಳಿಗೆ ಪ್ರವೇಶವಿರಲಿಲ್ಲ. ಮದುವೆ ಮನೆಗಳಲ್ಲಿಯೂ ಅಷ್ಟೇ.. ಇವರೆನ್ನು ಒಂದು ರೀತಿಯ ಅಸ್ಪೃಶ್ಯರು ಎಂಬಂತೆ ಕಾಣುತ್ತಿದ್ದರು. ಯಾರೂ ಚಕಾರವೆತ್ತುತ್ತಿರಲಿಲ್ಲ. ಕಾರಣ , ಅದು ಹೊಟ್ಟೆಪಾಡು ಎಂಬುದು ಮತ್ತು ಸಂಗೀತದ ಮೇಲಿದ್ದ ಅವರ ನಂಬಿಕೆ. ಎಷ್ಟೋ ಪ್ರಸಿದ್ದಿ ಪಡೆದ ನಂತರವೂ ಸಹಾ ಬಿಸ್ಮಿಲ್ಲಾ ಖಾನರು ಈ ಕುರಿತು ಮೌನಕ್ಕೆ ಶರಣಾಗಿದ್ದರು. ಕಾರಣವಿಷ್ಟೇ.. ಪ್ರಸಿದ್ದಿ, ಮನ್ನಣೆ ಹಾಗೂ ಗೌರವಗಳು ನಮ್ಮನ್ನು ಹುಡುಕಿಕೊಂಡು ಬರಬೇಕೇ ವಿನಃ ನಾವು ಅವುಗಳನ್ನು ಅರಸಿ ಹೊರಡಬಾರದು ಎಂದು.


ಆಲಿ ಭಕ್ಸ್ ರ ಗರಡಿಯಲ್ಲಿ ಪಳಗಿದ ಬಿಸ್ಮಿಲ್ಲಾ ಖಾನ್ ಅವರು ಒಮ್ಮೆ ತಾವು ಎಲ್ಲವನ್ನೂ ಕಲಿತಿದ್ದೇವೆ ಎಂಬ ಹೆಮ್ಮೆಯಿಂದ ತನ್ನ ತಾತನ ಬಳಿ ನುಡಿಸಲು ಹೋದಾಗ ಅವರು ಬಿಸ್ಮಿಲ್ಲಾ ಖಾನ್ ನುಡಿಸಿದ ನಂತರ "ನಾನೇನೋ ನೀನು ಶಹನಾಯ್ ಮೂಲಕ ಸಿಂಹದಂತೆ ಗರ್ಜಿಸುತ್ತೀಯ ಎಂದುಕೊಂಡರೆ ಬೆಕ್ಕಿನಂತೆ ಮಿಯಾವ್ ಎನ್ನುತ್ತಿದ್ದೀಯಲ್ಲಾ" ಎಂದು ನಕ್ಕಿದ್ದರು. ಅದಾದ ನಂತರ ಸಂಗೀತಗಾರನಿಗೆ ಶಾರೀರದಷ್ಟೇ ಶರೀರವೂ ಮುಖ್ಯ. ಉಸಿರನ್ನು ಬಿಗಿ ಹಿಡಿದು ವಾದ್ಯಕ್ಕೆ ತುಂಬಬೇಕು. ಅದಕ್ಕಾಗಿ ಕಲಾವಿದ ತನ್ನ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದಿದ್ದರು. ಅದಾದ ನಂತರ ತಮ್ಮ ದೇಹವನ್ನು ಕಟ್ಟುಮಸ್ತು ಮಾಡಿಕೊಳ್ಳುವತ್ತಲೂ ಇವರು ಗಮನ ಹರಿಸಿದರು. ತಮ್ಮಿಷ್ಟದ ಸಿಹಿ ತಿಂಡಿಗಳನ್ನು, ಕರಿದ ತಿಂಡಿ ತಿನ್ನುವುದನ್ನು ಕಡಿಮೆ ಮಾಡಿ ಹಣ್ಣು ಸೇವನೆಗೆ ಮುಂದಾದರು. ಅದಾದ ನಂತರ ಎಂದೂ ಅಹಂಕಾರ ಪಡಲಿಲ್ಲ.


ವಾರಣಾಸಿಯ ಗಂಗಾ ನದಿಯ ದಡದಲ್ಲಿ ಹಾಗೂ ದೇವಾಲಯದ ಅಂಗಳದಲ್ಲಿ ಕುಳಿತು ಸತತ ಆರು ಗಂಟೆಗಳ ನಿರಂತರ ಅಭ್ಯಾಸ ಮಾಡುತ್ತಿದ್ದರು. ಗಂಗಾನದಿ ಇವರ ಜೀವನದಲ್ಲಿ ಅದೆಷ್ಟು ಹಾಸು ಹೊಕ್ಕಾಗಿತ್ತು ಎಂದರೆ ಒಮ್ಮೆ ಅಮೆರಿಕಾದಲ್ಲಿ ಇವರ ವಾದನವನ್ನು ಕೇಳಿದ ನಂತರ ನೀವು ಕೇಳಿದನ್ನು ಕೊಡುತ್ತೇನೆ. ಇಲ್ಲಿಯೇ ಇದ್ದು ಬಿಡಿ. ಎಂದಾಗ ಬಿಸ್ಮಿಲ್ಲಾರವರು ಕೇಳಿದ್ದು ಒಂದೇ ಮಾತಂತೆ. "ಗಂಗಾ ನದಿಯನ್ನು ಇಲ್ಲಿಗೆ ತರುತ್ತೀರಾ " ಎಂದು. ದೇವಾಲಯದೊಂದಿಗೂ ಅವರಿಗೆ ಅವಿನಾಭಾವ ನಂಟು. ಅಲ್ಲಿನ ಪ್ರಸಾದಕ್ಕಾಗಿ ಪ್ರತಿದಿನವೂ ಕಾಯುತ್ತಿದ್ದರಂತೆ. ಅಲ್ಲದೆ, ಶಹನಾಯ್  ನುಡಿಸುವಾಗ  ಒಂದೆರಡು ದಿವ್ಯ ಅನುಭೂತಿಗಳನ್ನು  ಪಡೆದುಕೊಂಡರೂ ನಂತರ ಅದರ ಕುರಿತು ಹೇಳುವುದಿಲ್ಲ. ಕಾರಣವೆಂದರೆ.. ಅವರ ಗುರು ಆಲಿ ಭಕ್ಸ್ ಅವರು "ನಿನ್ನ ಅನುಭೂತಿಯನ್ನು ಯಾರೊಡನೆಯೂ ಹಂಚಿಕೊಳ್ಳಬೇಡ" ಎಂದು ಹೇಳಿ ಎಚ್ಚರಿಸಿದ್ದರು. ಸಂಗೀತದ ಮೂಲಕ ಅದೆಷ್ಟು ದಿವ್ಯ ಅನುಭೂತಿಗಳನ್ನು ಅನುಭವಿಸಿರಬೇಕು ಇವರು..


ಅಜ್ಜನ ಹಿತನುಡಿ ಹಾಗೂ ಮಾವನ ಗರಡಿಯಲ್ಲಿ ಪಳಗುತ್ತಾ ಮುಂದೆ ಶಹನಾಯಿಯ ಸ್ವರೂಪವನ್ನು ಸ್ವಲ್ಪ ಮಟ್ಟಿಗೆ ಬದಲಾಯಿಸಿಕೊಂಡು ಕರ್ಕಶ ಎಂಬಂತೆ ಕೇಳುತ್ತಿದ್ದುದನ್ನು ಸುಶ್ರಾವ್ಯವಾಗಿ ಮಾಡಿದರು.


ಇವರ ಸರಳತೆ ಹೇಗಿತ್ತೆಂದರೆ, ಎಷ್ಟೇ ದೊಡ್ಡ ಸಂಗೀತಗಾರ ಹಾಗೂ ವಾದನಕಾರರಾದರೂ ತನಗೆ ಹಾಗೂ ಮನೆಗೆ ಬೇಕಾದುದ್ದನ್ನು ಇಟ್ಟುಕೊಂಡು ಬಡವರಿಗೆ ಉಳಿದದ್ದನ್ನು ಹಂಚುತ್ತಿದ್ದವರು. ರೈಲಿನಲ್ಲಿಯೇ ಹೆಚ್ಚಿನಂಶದ ಪ್ರಯಾಣ. ಅದರಲ್ಲಿಯೂ ಸಾಧಾರಣ ದರ್ಜೆಯ ಬೋಗಿಯಲ್ಲಿಯೇ.. ವಿಮಾನದಲ್ಲಿಯೂ ಅಷ್ಟೇ ಬ್ಯುಸಿನೆಸ್ ಕ್ಲಾಸ್ ಬೇಡವೆನ್ನುತ್ತಿದ್ದವರು. ಆದಷ್ಟು ಜನರ ಜೊತೆಗೆ ಒಡನಾಡುತ್ತಿದ್ದವರು. ತನ್ನ ಸ್ನೇಹಿತ ಮುನ್ನು ಮಾಸ್ತರ ಹೊಲಿದುಕೊಟ್ಟದ್ದಷ್ಟೇ ಹೊಸ ಬಟ್ಟೆ. ಸರಳ ಬಟ್ಟೆ. 


ಇವರು ತನ್ನ ಮತ್ತೊಬ್ಬ ಸೋದರಮಾವನ ಮಗಳನ್ನೇ ಮದುವೆಯಾಗಿ ಅಲ್ಲಿಯೇ ಉಳಿದರು. ಮುಂದೆ ಅವರ ಪ್ರೀತಿಯ ಮಾಮು ಸತ್ತಾಗ ಅವರ ಕುಟುಂಬದ ಜವಾಬ್ದಾರಿಯನ್ನು ತೆಗೆದುಕೊಂಡರು. ಅದಾದ ಸ್ವಲ್ಪ ದಿನದಲ್ಲಿಯೇ ತನ್ನ ಅಣ್ಣ ಶಂಶುದ್ದೀನ್ ಸತ್ತಾಗ ಅವರ ಕುಟುಂಬದ ಜವಾಬ್ದಾರಿಯನ್ನು ಸಹಾ ಹೊತ್ತರು. ಅವರ ಮಾಮು ಸತ್ತದ್ದು ಅವರ ಮೇಲೆ ಎಷ್ಟು ಪರಿಣಾಮ ಬೀರಿತೆಂದರೆ ಅವರಿಷ್ಟದ ರಾಗವನ್ನು ಅವರಿಂದ ಎಷ್ಟೋ ವರ್ಷ ನುಡಿಸಲೇ ಆಗಿರಲಿಲ್ಲ. ತನ್ನ ಜೊತೆ ಕಣ್ಸನ್ನೆ ಅರಿತು ಜುಗಲ್ ಬಂಧಿ ಮಾಡುತ್ತಿದ್ದ ಅಣ್ಣ ಸತ್ತಾಗಲೂ ಅವರು ಭಾವಪೂರ್ಣವಾಗಿ ನುಡಿಸಲು ಬಹಳಷ್ಟು ಕಷ್ಟ ಪಟ್ಟಿದ್ದರು. 


ಹಿಂದಿ ಚಿತ್ರ ರಂಗದ ಕಟು ಅನುಭವದಿಂದ ಸಿನಿಮಾದಲ್ಲಿ ನುಡಿಸುವುದಿಲ್ಲ ಎಂದವರನ್ನು ಕೃಷ್ಣಮೂರ್ತಿ ಪುರಾಣಿಕರ ಕಾದಂಬರಿ ಆಧಾರಿತ ಚಲನಚಿತ್ರ ಸನಾದಿ ಅಪ್ಪಣ್ಣ ಚಿತ್ರಕ್ಕೆ ನುಡಿಸಲು ಒಪ್ಪಿಸಿದ್ದು ಹಾಗೂ ಅದರ ಅನುಭವಗಳು ಓದಿಯೇ ದಕ್ಕಿಸಿಕೊಳ್ಳಬೇಕು. ಅದರ ಕುರಿತು ಇಲ್ಲಿ ಉಲ್ಲೇಖಿಸಿದರೆ ರಸಭಂಗವಾದೀತು. 


ಸ್ವಾತಂತ್ರೋತ್ಸವದ ಸಂಧರ್ಭದಲ್ಲಿ ಅವರು ನುಡಿಸಿದ ಶಹನಾಯಿ ವಾದನ ಇಂದಿಗೂ ಪ್ರಸಾರವಾಗುತ್ತದೆ. ಅದರ ಹಿಂದಿನ ಘಟನೆಯೂ ಮಹತ್ವ ಉಳ್ಳದ್ದು.ಅವರ ವಿದೇಶ ಕಾರ್ಯಕ್ರಮಗಳು, ಮಹಾನ್ ಸಂಗೀತಗಾರರೊಡನೆ ಅವರ ಬಾಂಧವ್ಯ ಎಲ್ಲವನ್ನೂ ಓದಿಯೇ ದಕ್ಕಿಸಿಕೊಳ್ಳಬೇಕು.


ಕಾಶಿಯಲ್ಲಿ ಬಾಂಬ್ ದಾಳಿಯಾದಾಗ ಅಲ್ಲಿನ ಸಾಮರಸ್ಯ ಕೆಡದಂತೆ ಕಾಪಾಡಿದ್ದು ಹಾಗೂ ತಾವೇ ಅಲ್ಲಿ ಸ್ವಯ್ನಪ್ರೇರಣೆಯಿಂದ ಒಂದು ಕಾರ್ಯಕ್ರಮ ನಡೆಸಿದ್ದು ಜಾತಿಗಳನ್ನು ಮೀರಿದ ಸಂಗೀತದ ಬಾಂಧವ್ಯ. ಗಂಗೆ ಹಾಗೂ ಕಾಶಿ ವಿಶ್ವನಾಥನ ಮೇಲಿನ ಅಭಿಮಾನ. ಗಾಲಿ ಖುರ್ಚಿಯಲ್ಲಿಯೇ ಕುಳಿತು ಈ ಕಾರ್ಯಕ್ರಮ ಮಾಡಿದ್ದರು.


ವಯೋ ಸಹಜ ವೃದ್ದಾಪ್ಯದಿಂದ ಸಾವನ್ನಪ್ಪಿದ್ದರೂ ಕೊನೆ ಉಸಿರಿನವರೆಗೂ ಸಂಗೀತವನ್ನೇ ಉಸಿರಾಡಿದ ಮಹಾನ್ ಸಂತ. ಅವರ ಕುಟುಂಬದ ಈಗಿನ ಪೀಳಿಗೆಯವರ ಕೆಲ ವರ್ತನೆ ಅದಕ್ಕೆ ವಿರುದ್ಧವಾಗಿದೆ.


ಇದನ್ನು ಓದಿದ ನಂತರ ಅನ್ನಿಸಿದ್ದು ಬಿಸ್ಮಿಲ್ಲಾ ಖಾನ್ ರಂತಹಾ ಮತ್ತೊಬ್ಬ ಶಹನಾಯ್ ವಾದಕ ಹಾಗೂ ಸಂಗೀತ ಲೋಕದ ಮಹಾನ್ ಸಂತ, ಮಹಾನ್ ಚೇತನ ಮತ್ತೆ ಹುಟ್ಟುವುದು ಅಸಾಧ್ಯ. 


ಇವರ ಬಗ್ಗೆ ಅರಿಯಲು ಒಮ್ಮೆ ಓದಲೇಬೇಕಾದ ಪುಸ್ತಕ ಇದು ಎಂದು ನನಗನ್ನಿಸಿತು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ