ಸೋಮವಾರ, ಏಪ್ರಿಲ್ 6, 2026

ಅಭಿನಂದನೆ (ಪುಸ್ತಕ ಯಾನ - 10)


ಪುಸ್ತಕದ ಶೀರ್ಷಿಕೆ : ಅಭಿನಂದನೆ

ಲೇಖಕರು : ಸಾಯಿಸುತೆ

 ದೊಡ್ಡವರ ಪ್ರತಿಷ್ಟೆ, ಅಹಂಕಾರಗಳು ಹೆಚ್ಚಾದಾಗ ಚಿಕ್ಕವರ ಬದುಕು ಹೇಗೆ ಬಳಲುತ್ತದೆ ಎಂಬುದನ್ನು ಕಟ್ಟಿಕೊಡುತ್ತದೆ ಸಾಯಿಸುತೆಯವರ ಕಾದಂಬರಿ "ಅಭಿನಂದನೆ". ಹೆಚ್ಚಾಗಿ ಸಾಯಿಸುತೆಯವರ ಕಾದಂಬರಿಗಳು ಸಂಸಾರಗಳು ಒಟ್ಟಾಗಿ ಬಾಳುವುದನ್ನು ಕಟ್ಟಿ ಕೊಡುತ್ತವೆ. ಇದರಲ್ಲಿ ಆ ರೀತಿ ಒಂದಾಗುವ ಚಿತ್ರಣಕ್ಕಿಂತ ಸ್ವಾಭಿಮಾನ ಹೆಚ್ಚು ಮಹತ್ವ ಪಡೆದುಕೊಂಡಿದೆ. ನನಗೆ ಇವರ ಕಾದಂಬರಿಗಳಲ್ಲಿ ಹೆಚ್ಚು ಇಷ್ಟವಾಗುವ ವಿಚಾರವೆಂದರೆ ಶೃಂಗಾರ ಭಾವ ಹೆಚ್ಚು ಬರುವುದಿಲ್ಲ. ಅಶ್ಲೀಲತೆಯಂತೂ ದೂರದ ಮಾತು. 


ಚಾರುಲತಾ ಮತ್ತು ಮೂರ್ತಿಯದ್ದು ಅನುರೂಪದ ದಾಂಪತ್ಯ. ಮದುವೆಯಾದ ಒಂಬತ್ತು ತಿಂಗಳಲ್ಲಿ ವಿರಸ ಬಂದದ್ದೇ ಇಲ್ಲ. ತಂದೆ-ತಾಯಿಯರಿಗೆ ಮಗನ ಸಂಬಳದ ಹಣದ ಅವಶ್ಯಕತೆ ಕೂಡಾ ಇಲ್ಲದ್ದರಿಂದ ಆತನ ಹಣ ಕೂಡಾ ಅವನಲ್ಲಿಯೇ.. ಸ್ವತಂತ್ರ ಸಂಸಾರ ಎಂದರೆ ತಪ್ಪಾಗಲಾರದು. ಆದರೆ, ಆತನ ಈ ಸುಖಿ ಸಂಸಾರ ಸುಗಮವಾಗಿ ಸಾಗುತ್ತಿರುವಾಗ ತಂದೆಯಿಂದ ಬಂದ ಒಂದು ಫೋನ್ ಕೊಂಚ ಅಲ್ಲೋಲಕಲ್ಲೋಲವನ್ನೇ ಮಾಡಿಬಿಡುತ್ತದೆ. ಆತನ ತಂಗಿ ಪೂಜಾಳಿಗೆ ಚಾರುಲತಾ ಅಣ್ಣ ಡಾ|| ನವೀನ್ ಇಷ್ಟವಾಗಿರುತ್ತಾನೆ. ಮದುವೆಯಾದರೆ ಆತನನ್ನೇ ಎಂದು ಪಟ್ಟು ಹಿಡಿದು ಕೂತಾಗ ಬದಲು ಹೇಳದ ತಂದೆ ಯುಗಂಧರ್ ಹಾಗೂ ತಾಯಿ ಮೃಣಾಲಿನಿ ಹೋಗಿ ಚಾರುಲತಾ ತಂದೆ ವಾಸುದೇವಯ್ಯನವರ ಬಳಿ ವಿಷಯ ಪ್ರಸ್ತಾಪ ಮಾಡುತ್ತಾರೆ. 


ಡಾ|| ನವೀನ್ ಹಾಗೂ ಎದುರು ಮನೆಯ ನೀರದಾ ಪ್ರೇಮಿಸುತ್ತಿರುತ್ತಾರೆ. ಅಲ್ಲದೇ, ಚಾರುಲತಾ ತಾಯಿ ಸತ್ತಾಗಿನಿಂದ ಅವರ ಮನೆಯಿಂದ ಸಹಾಯ ದೊರೆತು, ಓಡಾಟ ಹಾಗೂ ಒಡನಾಟ ಹೆಚ್ಚಿರುತ್ತದೆ. ಎರಡೂ ಮನೆಯಲ್ಲಿ ಆಕ್ಷೇಪವಿರುವುದಿಲ್ಲ. ಈ ಸಂಬಂಧ ಮದುವೆಯಲ್ಲಿ ಒಂದಾಗುವುದು ಎಲ್ಲರಿಗೂ ಇಷ್ಟ. ಇದನ್ನು ತಿಳಿಸಿದ ವಾಸುದೇವಯ್ಯ ಹಾಗೂ ನವೀನ್ ಮದುವೆಗೆ ನಿರಾಕರಿಸುತ್ತಾರೆ.


ವರದಕ್ಷಿಣೆ ಪಡೆಯದೆ ಚಾರುಲತಾಳನ್ನು ತನ್ನ ಮಗನಿಗೆ ತಂದುಕೊಂಡಿದ್ದೇನೆಂಬ ಆದರ್ಶ, ದೊಡ್ಡಸ್ತಿಕೆಗೆ ಈ ನಿರಾಕರಣೆಯಿಂದ ಪೆಟ್ಟು ಬೀಳುತ್ತದೆ. ಮಗಳ ಆಸೆಯನ್ನು ಹೇಗಾದರೂ ನೆರವೇರಿಸುವ ಸಲುವಾಗಿ ಆತ ಮಗನ ಮೂಲಕ ಚಾರುಲತಾಳನ್ನು ಮುಂದಿರಿಸಿಕೊಂಡು ಬಗ್ಗಿಸಲು ನೋಡುತ್ತಾರೆ. ಚಾರುಲತಾಳಿಗೂ ನೀರದಾ ಕುರಿತು ಇಷ್ಟವಿದ್ದುದರಿಂದ ಜೊತೆಗೆ ಅದೇ ಆದರ್ಶ ಹಾಗೂ ನ್ಯಾಯವಾಗಿದ್ದುದರಿಂದ ಆಕೆ ಅಣ್ಣನ ಪರವೇ ನಿಂತು ಒತ್ತಡ ಹಾಕಲಾರದಾಗುತ್ತಾಳೆ. ಸೌಮ್ಯವಾಗಿ ಕಾಣುತ್ತಿದ್ದವರು ಪಟ್ಟು ಹಿಡಿದು ನಿಂತಾಗ ಯುಗಂಧರ್ ಅಹಂಗೆ ಪೆಟ್ಟು ಬೀಳುತ್ತದೆ. 


ನವೀನ್ ಹಾಗೂ ನೀರದಾ ಮದುವೆಯಾದರೆ ಎಲ್ಲವೂ ಸರಿಯಾಗುತ್ತದೆ. ಮಗಳ ಬದುಕು ಕೂಡಾ ಸರಿಯಾಗುತ್ತದೆ ಎಂಬ ದೂರದ ಆಸೆ ಹೊತ್ತು ನವೀನ್ ನ ಮದುವೆಯನ್ನು ಹತ್ತಿರದ ಮುಹೂರ್ತದಲ್ಲಿ ಆತುರಾತುರವಾಗಿ ಮಾಡಲಾಗುತ್ತದೆ. ಆದರೆ, ಅತ್ತ ಪೂಜಾ ನಿದ್ದೆ ಮಾತ್ರೆ ತೆಗೆದುಕೊಂಡು ಆತ್ಮಹತ್ಯೆಗೆ ಪ್ರಯತ್ನ ಮಾಡಿದಾಗ ಚಾರುಲತಾ ಗಂಡನ ಮನೆಯವರಿಗೆ ಕೋಪ ಹೆಚ್ಚುತ್ತದೆ. ಸೊಸೆ ತಮ್ಮ ಪರವಾಗಿ ನಿಲ್ಲಬೇಕು ಎಂದು ಹುಚ್ಚು ಆಲೋಚನೆಯಿಂದ ಅವಳನ್ನು ದೂರುತ್ತಾರೆ. ದೂರ ಮಾಡುತ್ತಾರೆ. ಅಷ್ಟು ಪ್ರೀತಿಸುತ್ತಿದ್ದ ಮಡದಿಯನ್ನು ತಂಗಿಗಾಗಿ ದೂರ ಮಾಡಿಕೊಳ್ಳುತ್ತಾನೆ ಮೂರ್ತಿ. ಇತ್ತ ನವೀನ್ ತಾನು ಪ್ರೀತಿಸಿದವಳನ್ನು ಕೈ ಹಿಡಿದರೂ ತಂಗಿಯ ಜೀವನ ಹಳಿ ತಪ್ಪಿದೆ ಎಂದು ಪರಿತಪಿಸುತ್ತಿರುತ್ತಾನೆ. ಒಟ್ಟಿನಲ್ಲಿ ಎಲ್ಲರ ನಡುವೆಯೂ ಸಿಕ್ಕು ಬಳಲಿದ್ದು ಚಾರುಲತಾಳೇ..


ಮೂರ್ತಿ ಚಾರುಲತಾ ಬದುಕು ಮುಂದೇನಾಯಿತು ? ಪ್ರೀತಿಸಿ ಮದುವೆಯಾದ ನೀರದಾ ಮತ್ತು ನವೀನ್ ದಾಂಪತ್ಯ ಹೇಗಿತ್ತು ? ಪೂಜಾಳ ಭವಿಷ್ಯ ಏನಾಯಿತು ? ಇಲ್ಲಿ ಮೊದಲು ತಪ್ಪಿನ ಅರಿವಾದದ್ದು ಯಾರಿಗೆ ? ಯುಗಂಧರ್, ಮೃಣಾಲಿನಿಗೆ ಮಗಳ ಬದುಕು ಮುಖ್ಯವಾದರೂ ಮಗನದ್ದು ಸಹಾ ಅಷ್ಟೇ ಮುಖ್ಯ ಎಂದು ಅರಿವಾಯಿತೇ ? ವಾಸುದೇವಯ್ಯನವರ ಮುಂದಿನ ಬದುಕು ಏನಾಯಿತು ? ಎಲ್ಲವನ್ನೂ ತಿಳಿಯಲು ಓದಿ "ಅಭಿನಂದನೆ". 


ನನಗಿಲ್ಲಿ ಕೋಪ ತರಿಸಿದ್ದು ಮೂರ್ತಿಯ ವರ್ತನೆ. ಎಂ.ಎಸ್ಸಿ ಮಾಡಿಕೊಂಡು ಲೆಕ್ಚರರ್ ಆಗಿರುವವನಿಗೆ ಯೋಚಿಸಲು ಇರಬೇಕಾದ ತಾಳ್ಮೆ ತಪ್ಪಿ ಹೋಗಿತ್ತು. ತನ್ನ ತಂದೆ-ತಾಯಿ ತನಗೆ ಹೇಗೆ ಮುಖ್ಯವೋ ಚಾರುಲತಾಳಿಗೂ ಅವಳ ತವರಿನವರು ಅಷ್ಟೇ ಮುಖ್ಯ ಎಂದು ಅರಿವಾಗದ್ದು ದುರಂತವೇ ಸರಿ. ದಾಂಪತ್ಯದಲ್ಲಿ ಮೂರನೆಯವರ ಅಭಿಪ್ರಾಯ ಗಂಡನದ್ದೋ ಅಥವಾ ಹೆಂಡತಿಯದ್ದೋ ತಲೆ ಕೆಡಿಸಿದಾಗ ದಾಂಪತ್ಯ ಹೇಗೆ ಹಳಿತಪ್ಪುತ್ತದೆ ಎನ್ನಿಸಿತು. ಅದು ಮೂರ್ತಿಯ ತಂದೆಯೇ ಆಗಿದ್ದು ವಿಪರ್ಯಾಸ.


ಇಲ್ಲಿ ಚಾರುಲತಾ ದೈನ್ಯದಿಂದ ಬೇಡಲಿಲ್ಲ.. ಅಳುಮುಂಜಿಯಂತೆ ಅಳುತ್ತಾ ಕುಳಿತುಕೊಳ್ಳದೆ, ಧೈರ್ಯದಿಂದ ಬಂದದ್ದನ್ನು ಎದುರಿಸಿದಳು. ಹಠಮಾರಿಯಾಗಲಿಲ್ಲ, ದ್ವೇಷ ಸಾಧಿಸಲಿಲ್ಲ. ಅವಳ ದಿಟ್ಟ ನಿಲುವು ಹಾಗೂ ಸ್ವಾಭಿಮಾನ ಎಲ್ಲರಿಗೂ ಸ್ಫೂರ್ತಿಯೇ.. ಅವಳ ಆ ನಡೆಗೆ ಬೆಂಬಲಿಸಿದ ತಂದೆ, ಅಣ್ಣನಂತಹವರು ಎಷ್ಟು ಜನರ ಬದುಕಲ್ಲಿ ಸಿಗಬಹುದು..


ಮುಗಿದ ಮೇಲೆಯೂ ಕಾಡಿದ ಸಾಯಿಸುತೆಯವರ 'ಅಭಿನಂದನೆ' ಕಾದಂಬರಿ ಹಾಗೂ ಚಾರುಲತಾ ಪಾತ್ರ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ