ಸೋಮವಾರ, ಏಪ್ರಿಲ್ 6, 2026

ನೆನಪೇ ಸಂಗೀತ (ಪುಸ್ತಕ ಯಾನ - 1)


ಪುಸ್ತಕದ ಶೀರ್ಷಿಕೆ : ನೆನಪೇ ಸಂಗೀತ

ಲೇಖಕರು : ವಿದ್ಯಾಭೂಷಣ

ಅರಿಯದ ವೈರಾಗ್ಯ ಹರಹಿಕೊಂಬುದಕಿಂತ ಎಂದವರ ಜೀವನ ಕಥನವಿದು

'ನೆನಪೇ ಸಂಗೀತ ' ಇದು 'ವಿದ್ಯಾಭೂಷಣ'ರ ಜೀವನ ಕಥನ. ಒಂದು ಕಾಲದಲ್ಲಿ ಮಠಾಧೀಶ, ಸನ್ಯಾಸಿಯಾಗಿದ್ದವರು. ಅದನ್ನು ತ್ಯಜಿಸಿ ಲೌಕಿಕಕ್ಕೆ ಬಂದವರು. ಈಗ ಇವರು ದಾಸರ ಪದಗಳ ಹರಿಕಾರ, ಸಂಗೀತ ಲೋಕದಲ್ಲಿ ಇವರ 'ಪಿಳ್ಳಂಗೋವಿಯ ಚೆಲ್ವ ಕೃಷ್ಣನ' , 'ನಮ್ಮಮ್ಮ ಶಾರದೆ', 'ನಂಬಿ ಕೆಟ್ಟವರಿಲ್ಲವೋ' ಇಂತಹಾ ಗೀತೆಗಳನ್ನು ಹಾಡಿರುವ ಖ್ಯಾತನಾಮರು.


ನನಗೂ ಈ ಪುಸ್ತಕ ಹಿಡಿಯುವಾಗ ಸಹಜವಾಗಿಯೇ ಅವರು ಮತ್ತೆ ಸಂಸಾರ ಸಾಗರಕ್ಕೆ ಈಜಲು ಬಂದದ್ದು ಯಾಕೆ ಎಂದು ತಿಳಿದುಕೊಳ್ಳುವ ಕುತೂಹಲವಿತ್ತು. ಆದರೆ, ಅವರು ಇದನ್ನು ಜೀವನ ಕಥನವಾಗಿ ದಾಖಲಿಸಿದ್ದಾರೆ. ಅವರ ಎರಡು .ಮಾತುಗಳನ್ನು ಹೇಳುವಾಗ 'ಇಲ್ಲಿ ಹೇಳದೇ ಉಳಿದುದು ಬಹಳಷ್ಟಿವೆ. ಮತ್ತದು ಬೇಕೆಂದೇ ಹೇಳದೇ ಉಳಿದದ್ದು. ಹಾಗೆಂದು ಹೇಳಿದವುಗಳಲ್ಲಿ ಅತಿಶಯೋಕ್ತಿಯಂತೂ ಇಲ್ಲ !' ಎಂದಿದ್ದಾರೆ. ಹಾಗಾಗಿ, ತೀರಾ ವೈಯಕ್ತಿಕವನ್ನು ಕೆದಕಿ ತಿಳಿಯುವೆನೆಂದು ಪುಸ್ತಕ ಹಿಡಿಯುವುದಕ್ಕಿಂತ ಅವರ ಸಂಗೀತ ಹಾಗೂ ತೆರೆದಿಟ್ಟಷ್ಟು ಬದುಕನ್ನು ನೋಡೋಣ. 


ಕೆಲವರ ಆತ್ಮಚರಿತ್ರೆಯಲ್ಲಿ ತೀರಾ ವೈಯಕ್ತಿಕ ವಿಚಾರಗಳನ್ನು ಬರೆದುಕೊಂಡಾಗ , ಅದನ್ನು ಓದಿದಾಗ ಅವರ ಮೇಲಿನ ಅಭಿಪ್ರಾಯ ಬದಲಾಗಬಹುದು. ಆದರೆ, ಇಲ್ಲಿ ಹಾಗಾಗದು. ವಿದ್ಯಾಭೂಷಣರು ಹೇಳುವಂತೆ.. ಅವರು ಮನಸ್ಸು ಮಾಡಿದ್ದರೆ ಅಡ್ಡ ದಾರಿ ಹಿಡಿದೋ ಅಥವಾ ಕದ್ದು ಮುಚ್ಚಿಯೋ ಸುಖ ಅನುಭವಿಸುವ ಅವಕಾಶ ಇಲ್ಲದ್ದೇನೂ ಇರಲಿಲ್ಲ. ಆದರೆ, ಅವರ ಪ್ರಾಮಾಣಿಕತೆ, ಧೈರ್ಯ ಮತ್ತು ನ್ಯಾಯಯುತವಾಗಿಯೇ ಇರಬೇಕೆಂಬ ಆತ್ಮಸಾಕ್ಷಿ ಅವರನ್ನು ದಿಟ್ಟ ನಿರ್ಧಾರ ಕೈಗೊಳ್ಳುವಂತೆ ಮಾಡಿತು. ಹಾಗಾದರೆ, ಸನ್ಯಾಸತ್ವ ಸ್ವೀಕರಿಸಲು ಅವರು ಒಪ್ಪಿದ್ದಾದರೂ ಏಕೆ..??


ಬಾಲ ಸನ್ಯಾಸತ್ವ ಕೊಟ್ಟಾಗ ಮನಸ್ಸಿಲ್ಲದ ಮನಸ್ಸಿನಲ್ಲಿ ಸ್ವೀಕರಿಸಿದವರು ಅದನ್ನು ಸಂಪೂರ್ಣ ಮನಸ್ಸಿನಿಂದ ಒಪ್ಪಿರಲಿಲ್ಲ. ಮನೆಯ ಹಾಗೂ ಸುತ್ತಮುತ್ತಲಿನ ಪರಿಸ್ಥಿತಿ ಕೆಲವೊಮ್ಮೆ ಹಾಗೆ ಮಾಡುವ ಸಂದಿಗ್ಧತೆಯನ್ನು ತಂದಿಟ್ಟುಬಿಡುತ್ತದೆ. ಕುಟುಂಬ ಮಠಕ್ಕೆ ನಿಷ್ಠರಾಗಿದ್ದು ಹಾಗೂ ಮುತ್ತಜ್ಜ ಹಾಗೂ ತಾತ ಸನ್ಯಾಸತ್ವ ಸ್ವೀಕರಿಸಿದ್ದು ಸಹಾ ಇದಕ್ಕೆ ಪೂರಕವೆನಿಸುತ್ತದೆ. 


ಮೊದಲಿಗೆ ನೆನಪ ಸುರುಳಿಯನ್ನು ಬಿಚ್ಚುತ್ತಾ ಪಲ್ಲವಿಯನ್ನು ಹಾಡುತ್ತಾರೆ. ಇಲ್ಲಿ ತಮ್ಮ ಕುಟುಂಬದ ಪರಿಚಯ, ಹಿನ್ನೆಲೆ, ಬೆಳೆದ ವಾತಾವರಣದ ಸ್ಥೂಲ ಪರಿಚಯವಿದೆ. ಮನೆಯಲ್ಲಿ ಸಂಗೀತದ ವಾತಾವರಣ ಇದ್ದದ್ದು ಇವರು ಸಂಗೀತದತ್ತ ಒಲವಾಗುವಂತೆ ಮಾಡಿದ್ದರೂ ಶಾಸ್ತ್ರೀಯವಾಗಿ ಅಭ್ಯಾಸ ಮಾಡಿದ್ದು ಮಠದಲ್ಲಿಯೇ.. 


ವಿದ್ಯಾಭೂಷಣರ ಹೆಸರು ವಿಶಿಷ್ಟವಾಗಿದುದ್ದನ್ನು ಕಂಡಾಗ ಹೆಸರಿನ ಕುರಿತು ಕುತೂಹಲ ಮೂಡಿತ್ತು. ಇವರ ಪೂರ್ವಾಶ್ರಮದ ಹೆಸರು ಯೋಗೀಂದ್ರ. ನಂತರ ವಿದ್ಯಾಭೂಷಣರೆಂಬ ಹೆಸರು ಬಂದದ್ದು. 


ಸುಬ್ರಹ್ಮಣ್ಯ ಮಠದ ಸ್ವಾಮಿಗಳಾದ ನಂತರ ಅಲ್ಲಿ ಎಷ್ಟೋ ಬದಲಾವಣೆಗಳಾಗಿವೆ. ಸುಧಾರಣೆ ಮಾಡುವಾಗ ತಮ್ಮ ಸ್ವಂತದ ಹಣವನ್ನು ಖರ್ಚು ಮಾಡಿದ್ದೂ ಇದೆ. ಮೊದಲಿದ್ದ ಕುಮಾರ ಕೃಪಾ ಮುಂಭಾಗದ ಜಾಗವನ್ನು ತಾರಸಿ ಇರುವ ಮಳಿಗೆ ಮಾಡಿಸಿ ಬಾಡಿಗೆ ನೀಡಿದ್ದರಿಂದ ಮಠದ ಆದಾಯ ಹೆಚ್ಚಿಸಿದರೂ ಸಹಾ ಅಲ್ಲಿನ ವಾತಾವರಣಕ್ಕೆ ಪೂರಕವಾಗಲಿಲ್ಲ. ಅಲ್ಲಿನ ಪ್ರಕೃತಿಯ ಹೆಂಚಿನ ಮನೆಗಳ, ಕಟ್ಟಡಗಳ ನಡುವೆ ಈ ರೀತಿ ಮಾಡಿದ್ದಕ್ಕೆ ಪಶ್ಚಾತ್ತಾಪವಿದೆ. ಇದು ಒಂದು ಉದಾಹರಣೆಯಷ್ಟೇ.. ಇಂತಹಾ ಕೆಲ ಸುಧಾರಣೆಗಳು ಒಂದು ರೀತಿ ಒಳ್ಳೆಯದ್ದನ್ನೇ ಮಾಡಿದ್ದರೂ ಮತ್ತೊಂದು ರೀತಿಯಲ್ಲಿ ನೆಗೆಟಿವ್ ಎನ್ನಿಸಿದ್ದರ ಕುರಿತು ಹೇಳಿದ್ದಾರೆ. ಬಿಳಿನೆಲೆಯ ಶಾಲೆ ಇವರ ಹೆಮ್ಮೆಯ ಹೆಗ್ಗುರುತು. 


ಮಠದ ಮಡಿ, ಆಚರಣೆ, ಚಾತುರ್ಮಾಸ್ಯ , ಅಲ್ಲಿ ಕಲಿತ ವಿಚಾರಧಾರೆಗಳು, ಹರಿಕಥಾ ಪ್ರಸಂಗ, ಉಡುಪಿಯ ಮಠ ಮತ್ತು ಅಲ್ಲಿಯ ಶ್ರೀಗಳು ಇದೆಲ್ಲದರ ಜೊತೆಗೆ ಆಪ್ತರಾದ ಲಕ್ಷ್ಮೀಶ ತೋಳ್ಪಾಡಿಯವರ ಒಡನಾಟದ ಕುರಿತೂ ಬರೆದಿದ್ದಾರೆ.


ಸುಬ್ರಹ್ಮಣ್ಯ ಮಠದಲ್ಲಿ ಇಬ್ಬರು ಸ್ವಾಮಿಗಳ ಪರಂಪರೆ ಇದ್ದಾಗ ಮತ್ತೊಬ್ಬರು ತೀರಿ ಹೋಗುತ್ತಾರೆ. ಆಗ ಪ್ರಸ್ತಾಪವಾಗವುದು ಇವರ ತಮ್ಮನನ್ನೇ ಅಲ್ಲಿನ ಪೀಠದಲ್ಲಿ ಕೂರಿಸುವುದೆಂದು. ಹಾಗೂ ಮತ್ತೊಂದು ಪ್ರಸಂಗ ಕೂಡಾ ಬಾಲ ಸನ್ಯಾಸಿಯನ್ನೇ ಪೀಠಾರೋಹಣಕ್ಕೆ ಆರಿಸಿರುವಾಗ ಎರಡೂ ಪ್ರಸಂಗಗಳಲ್ಲಿಯೂ ವಿದ್ಯಾಭೂಷಣರು ವಿರೋಧಿಸುತ್ತಾರೆ. ತಮ್ಮ ಅನುಭವವೇ ಇತ್ತಲ್ಲ.. ಬೆಚ್ಚನೆಯ ಮನೆ, ವೆಚ್ಚಕ್ಕೆ ಹಣ, ಇಚ್ಛೆಯನರಿವ ಸತಿ ಹಾಗೂ ವೆಚ್ಚದ ಹಣ ಸನ್ಮಾರ್ಗದಿಂದ ಗಳಿಸಿದ್ದಾಗಿರಬೇಕು ಎಂಬ ಆಸೆ ಇಟ್ಟುಕೊಂಡಿದ್ದವರು ವೈಯಕ್ತಿಕ ಆಸೆಗಳನ್ನು ಬದಿಗೊತ್ತಿ ಸನ್ಯಾಸತ್ವ ಸ್ವೀಕರಿಸಿರುತ್ತಾರೆ. ವೈರಾಗ್ಯದ ಹಂತ ಬಾಲ್ಯ, ಗೃಹಸ್ಥ, ವಾನಪ್ರಸ್ಥ ದಾಟಿದ ನಂತರ ಬಂದರೆ ಪರಿಪಕ್ವವೆಂಬುದು ಅವರ ಅಂಬೋಣ. ಹಾಗಾಗಿ, ತಾನೂ ಆ ಇಬ್ಬರ ಹಂತದಲ್ಲಿದ್ದಾಗ ಆದ ತಪ್ಪು ಮರುಕಳಿಸುವುದು ಬೇಡ ಎನ್ನುತ್ತಾ ವಿರೋಧಿಸುತ್ತಾರೆ.


ಎಷ್ಟೋ ಅಭಿವೃದ್ಧಿ ಕಾರ್ಯಗಳಿಗೆ ತಾವು ದಾಸರ ಪದಗಳನ್ನು ಹಾಡಿ ಕ್ಯಾಸೆಟ್ ಮಾಡಿ ಸಂಪಾದಿಸಿ ನೀಡಿದ್ದಾಗಿದೆ. 


25 ವರ್ಷಗಳು ಪೀಠದಲ್ಲಿ ಕಳೆದರೂ ಲೌಕಿಕದತ್ತ ಮನಸ್ಸು ತುಡಿಯುತ್ತಿದ್ದದ್ದು ಈ ಜೀವನ ಕಥನದಲ್ಲಿ ಮೊದಲಿನಿಂದಲೂ ಸುಸ್ಪಷ್ಟ. ಗಣಪತಿಯ ಮದುವೆಯ ಹಾಗೆ ಅದು ದಿನೇ ದಿನೇ ಮುಂದೂಡುತ್ತಿದ್ದದ್ದಕ್ಕೆ ಹಲವು ಕಾರಣಗಳಿದ್ದರೂ ಅದೆಲ್ಲದರಿಂದ ಇವರು ಇರುವಷ್ಟು ದಿನ ಕ್ಷೇತ್ರಕ್ಕೆ ಸುಧಾರಣೆ ಆಗಿದೆ ಎಂಬುದು ಒಪ್ಪುವ ಮಾತು.


ಇನ್ನು ಇವರಿಗೂ ರಮಾ ಅವರಿಗೂ ಬೆಸೆದುಕೊಂಡ ನಂಟಿನ ಬಗ್ಗೆ, ಸನ್ಯಾಸತ್ವ ತ್ಯಜಿಸಿದುದರ ಬಗ್ಗೆ ಹೇಳಿದ್ದಾರೆ. ಆನಂತರದ ಬದುಕನ್ನು ತೆರೆದಿಟ್ಟಿದ್ದಾರೆ. ಇದು ಕೊನೆಯ ನಾಲ್ಕೈದು ಅಧ್ಯಾಯಗಳಲ್ಲಿ ಕ್ಲುಪ್ತವಾಗಿದೆ.


ಲಕ್ಷ್ಮೀಶ ತೋಳ್ಪಾಡಿಯವರ ಕುರಿತು ತುಸು ಹೆಚ್ಚೇ ಉಲ್ಲೇಖವಾಗಿದೆ ಎನ್ನಿಸಿತು. ಬರೆದಿರುವಷ್ಟೂ ಅಧ್ಯಾಯಗಳಲ್ಲಿ ಭಾಷೆಯ ರಸಗವಳವನ್ನು ಉಣಿಸಿದಂತಿದೆ. ಎಲ್ಲಿಯೂ ಅತಿಶಯೋಕ್ತಿ ಎನ್ನಿಸಲಿಲ್ಲ. ಪೂರ್ಣ ಪ್ರಮಾಣದ ಜೀವನ ಕಾಣದಿದ್ದರೂ ಇದಿಷ್ಟೇ ಸಾಕು ಎನಿಸಿದ್ದೂ ಹೌದು. ದಿಟ್ಟ ನಡೆ, ಪ್ರಾಮಾಣಿಕತೆ, ಸತ್ಯ ಘಟನೆಗಳ ನಿರೂಪಣೆ ಮನದ ತಂತಿಯನ್ನು ಮೀಟಿ ನೆನಪೇ ಸಂಗೀತದಂತೆ, ಸಂಗೀತದ ನೆನಪುಗಳನ್ನು ಅಲೆಅಲೆಯಾಗಿ ಹೊಮ್ಮಿಸುತ್ತದೆ.

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ