ಸೋಮವಾರ, ಏಪ್ರಿಲ್ 6, 2026

ಉತ್ತರ ದೃವದಿಂ.. ದಕ್ಷಿಣ ದೃವಕೂ.. ನನ್ನ ಸಾಹಿತ್ಯ ಪಯಣದಲಿ (ಪುಸ್ತಕ ಯಾನ - 24)


 ಪುಸ್ತಕದ ಶೀರ್ಷಿಕೆ : ಉತ್ತರ ದೃವದಿಂ.. ದಕ್ಷಿಣ ದೃವಕೂ.. ನನ್ನ ಸಾಹಿತ್ಯ ಪಯಣದಲಿ

ಲೇಖಕಿ : ಶ್ರೀಮತಿ ಲಲಿತಾ ಬೆಳವಾಡಿ

ಪ್ರಕಾಶಕರು : ಹೆಚ್. ಎಸ್. ಆರ್. ಎ ಪ್ರಕಾಶನ

ಪ್ರಥಮ ಮುದ್ರಣ : 2022


ಈ ಪುಸ್ತಕ ಶ್ರೀಮತಿ ಲಲಿತಾ ಬೆಳವಾಡಿಯವರ ಮಳೆಬಿಲ್ಲು (ಬಹುರೂಪಿ ಲೇಖನಗಳ ಸಂಕಲನ) ,ಯುರೋಪ್ ಪ್ರವಾಸ ಕಥನ ಮತ್ತು ಕುಸುಮಾಂಜಲಿ ಈ ಮೂರು ಕೃತಿಗಳ ನಂತರ ಬಂದ ಕೃತಿ.


ಅತ್ಯಂತ ಲವಲವಿಕೆಯಿಂದ ಇರುವ ಇವರ ಸಾಹಿತ್ಯ ಚಟುವಟಿಕೆಗಳು ಹಾಗೂ ಪ್ರೋತ್ಸಾಹಕ ಗುಣವನ್ನು ಕಂಡ ನಂತರ ನಾನು ಪುಸ್ತಕ ಕೈಯ್ಯಲ್ಲಿ ಹಿಡಿದೆ. ಈ ಪುಸ್ತಕದಿಂದ ಅವರ ಸಾಹಿತ್ಯ ಪಯಣವನ್ನು ಅರಿಯಲು ಸಾಧ್ಯವಾಯಿತು. ತಮ್ಮ ಸಾಹಿತ್ಯ ಪಯಣದ ಜೊತೆ ಜೊತೆಗೆ ಆ ಪ್ರದೇಶಗಳ ಮಾಹಿತಿಯನ್ನೂ ನೀಡುತ್ತಾ, ಸಂಸ್ಕೃತಿಯ ವಿಚಾರಗಳು, ಅಲ್ಲಿನ ವಿಶೇಷಗಳ ಜೊತೆ ಜೊತೆಗೆ ತಮ್ಮ ವಿಶಿಷ್ಟ ಅನುಭವಗಳನ್ನು ತೆರೆದಿಡುತ್ತಾ ಹೋಗುತ್ತಾರೆ.


ಬೆಂಗಳೂರಿಗೆ ಮಾತ್ರ ಇವರ ಪಯಣ ಸೀಮಿತವಾಗದೆ ಇವರ ವಿಸ್ತಾರವಾದ ಪಯಣ ಶುರುವಾದದ್ದರ ಜೊತೆಗೆ ಹೊಸತನಕ್ಕೆ ತೆರೆದುಕೊಂಡ ಪರಿ, ಕವನ ವಾಚನ, ಪ್ರಶಸ್ತಿ ಪಡೆದುಕೊಂಡದ್ದು, ಪುಸ್ತಕ ಬಿಡುಗಡೆ, ನಾಟಕದಲ್ಲಿ ಭಾಗಿಯಾದದ್ದು, ಹೊಸ ಪರಿಚಯಗಳು, ಹೆಸರು ಮಾತ್ರ ಕೇಳಿದ್ದವರ ಜೊತೆ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದೆಲ್ಲವನ್ನೂ ಒಂದೊಂದಾಗಿ ತೆರೆದಿಡುತ್ತಾ ಹೋಗುತ್ತಾರೆ. ಇದೆಲ್ಲದರ ಜೊತೆಗೆ ಮುಖ್ಯವಾಗಿ "ಅಂತಾರಾಷ್ಟ್ರೀಯ ಅಖಿಲ ಭಾರತ ಕವಯಿತ್ರಿ ಸಮ್ಮೇಳನ ಸಂಸ್ಥೆಯ" ಕುರಿತು ಹೇಳುತ್ತಾ ಇಲ್ಲಿಂದ ದೊರೆತ ಅವಕಾಶಗಳಿಂದ ತಮ್ಮ ಸಾಹಿತ್ಯ ಪಯಣದ ಮೈಲಿಗಲ್ಲುಗಳನ್ನು ದಾಖಲಿಸುತ್ತಾ ಹೋಗಿದ್ದಾರೆ.


2015 ರಲ್ಲಿ ಗುಲ್ಬರ್ಗಾದಲ್ಲಿ ನಡೆದ ಅಖಿಲ ಭಾರತ ಕವಯಿತ್ರಿಯಾರ ಸಮ್ಮೇಳನದಿಂದ ಶುರುವಾಗುವ ಪಯಣದ ಕುರಿತು ಹೇಳುತ್ತಾ ಮೊದಲ ಎಐಪಿಸಿ ಸಮ್ಮೇಳನದ ಸವಿ ಅನುಭವವನ್ನು ಹಂಚಿಕೊಳ್ಳುತ್ತಾರೆ. 


2016 ರ ಫೆಬ್ರವರಿಯಲ್ಲಿ ಮೇಘಾಲಯದ ಷಿಲ್ಲಾಂಗ್ , ಮೈಸೂರು , ಬೆಂಗಳೂರಿನಲ್ಲಿ ಎಐಪಿಸಿ ಘಟಕ ಉದ್ಘಾಟನೆ, ಚಂಡೀಘರ್ ಸಮ್ಮೇಳನ, ಬೀದರ್ ಸಮ್ಮೇಳನ, ತ್ರಿವೇಂಡ್ರಮ್ ಸಮ್ಮೇಳನ, 2019 ರಲ್ಲಿ ಬೆಂಗಳೂರಿನ ಮಹಿಳಾ ದಿನಾಚರಣೆ , ಜುಲೈ 2019 ರಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನಕ್ಕಾಗಿ ಯುರೋಪ್ ಪ್ರವಾಸ, ತೇಜ್ ಪುರ್ ಸಮ್ಮೇಳನ ಎಲ್ಲದರ ಕುರಿತು ಹೇಳುತ್ತಾ ಅಲ್ಲಿನ ಕಾರ್ಯಕ್ರಮಗಳ ಚಿತ್ರಣ ರೂಪದಲ್ಲಿ ಕಟ್ಟಿಕೊಟ್ಟಿರುವುದರ ಜೊತೆಗೆ ಕೆಲವು ಫೋಟೋಗಳೂ ಇವೆ. 


ಅಹಮದಾಬಾದ್ ಸಮ್ಮೇಳನದ ಸಂಧರ್ಭದಲ್ಲಿ ಅಲ್ಲಿನ ವೃದ್ಧಾಶ್ರಮದ ಮಹಿಳೆಯರಿಗೆ ಸಹಾಯ ಮಾಡಿದಾಗ ಅವರ ಕಣ್ಣಲ್ಲಿ ಬಂದ ಆನಂದಬಾಷ್ಪದ ಕುರಿತು ಒಂದು ಮಾತು ಹೇಳುತ್ತಾರೆ. "ಭಾಷೆ ದೇಶ ಯಾವುದಾದರೇನು ಮನುಷ್ಯನ ಭಾವ ಬಡತನ ಒಂದೇ ಅಲ್ಲವೇ ? ಒಂದೊಂದು ಜಾಗದಲ್ಲೂ ಹೊಸ ಹೊಸ ಅನುಭವ ನಮ್ಮನ್ನು ಪ್ರಬುದ್ಧರಾಗಿಸುತ್ತದೆ ಎನ್ನುವುದು ಸುಳ್ಳಲ್ಲ" ಎನ್ನುತ್ತಾರೆ. ಈ ಮಾತು ಎಷ್ಟು ನಿಜವಲ್ಲವಾ ಎನ್ನಿಸಿತು.


ಇದರ ಜೊತೆಗೆ ತಮ್ಮ ಕುಟುಂಬದವರ ಭಾಗವಹಿಸುವಿಕೆ ಕುರಿತು ಹೇಳಿದ್ದಾರೆ. ಪಾಸಿಟಿವಿಟಿ ತುಂಬಿರುವ ಈ ಪುಸ್ತಕ ನಮ್ಮಲ್ಲಿಯೂ ಲವಲವಿಕೆ ಮೂಡಿಸುತ್ತದೆ.


ಕೃತಜ್ಞತೆ ಹೇಳುತ್ತಾ This book is a small attempt from me to collate and combine all the beautiful memories of my AIPC journey in one place.. ಎಂದಿದ್ದಾರೆ. 


ಸರಳ ಓದಿನ ಪುಟ್ಟ ಪುಸ್ತಕ ಮುಗಿದಾಗ ಎಷ್ಟು ಬೇಗ ಮುಗಿಯಿತಾ ಎಂದೆನ್ನಿಸಿತು. ಇದೇ ರೀತಿ ಎಲ್ಲವೂ ದಾಖಲಾಗುವಂತೆ ನಿಮ್ಮ ಆತ್ಮಚರಿತ್ರೆ ಬರಿಯಿರಿ ಎಂದು ಹಾರೈಸುತ್ತಾ ಮುಂದಿನ ಪುಸ್ತಕಕ್ಕಾಗಿ ಕಾಯುತ್ತಿರುವೆ ಎಂದು ಹೇಳಲು ಇಚ್ಛಿಸುತ್ತೇನೆ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ