ಸೋಮವಾರ, ಏಪ್ರಿಲ್ 6, 2026

ಭಾವಸಾಗರ (ಪುಸ್ತಕ ಯಾನ - 17)


ಪುಸ್ತಕದ ಹೆಸರು : ಭಾವಸಾಗರ

ಲೇಖಕರು : ಮೀನಾ ಹರೀಶ್ ಕೋಟ್ಯಾನ್

ಪ್ರಕಾಶಕರು : ಅನುರಶ್ಮಿ ಪ್ರಕಾಶನ

ಪ್ರಥಮ ಮುದ್ರಣ : 2021

ಬೆಲೆ : 200 ರೂಪಾಯಿ

ಮೀನಾ ಹರೀಶ್ ಕೋಟ್ಯಾನ್ ಅವರ ಸಾಮಾಜಿಕ ಕಾದಂಬರಿ 'ಭಾವಸಾಗರ'. 

ಶಾರದಮ್ಮನವರಿಗೆ ಇದ್ದದ್ದು ಇಬ್ಬರು ಮಕ್ಕಳು. ಮಗಳು ಭಾವಿಕ ಹಾಗೂ ಮಗ ಮಹೇಂದ್ರ. ಪತಿ ಶ್ರೀಕಂಠಯ್ಯ ಭಾವಿಕಾಳಿಗೆ ಆರು ವರ್ಷದವರಿದ್ದಾಗ ಅಪಘಾತದಲ್ಲಿ ಮೃತ ಪಟ್ಟಿದ್ದರು. ಮಹೇಂದ್ರ ಕಾಲಿಲ್ಲದ ಹುಡುಗ. ಆತನಿಗೆ ಒಂದನೇ ತರಗತಿಯಲ್ಲಿದ್ದಾಗ ಯಾವುದೋ ಜ್ವರ ಬಂದು ಕಾಲಿನ ಶಕ್ತಿ ಕಳೆದುಕೊಂಡು ಅಂಗವಿಕಲನಾಗಿದ್ದ. ಶಾರದಮ್ಮನಿಗೆ ಅಪ್ಪ-ಅಮ್ಮ ಇಲ್ಲದೇ ಸೋದರಮಾವನ ಆಶ್ರಯದಲ್ಲಿ ಬೆಳೆದಿದ್ದವರು ಇಂತಹಾ ಸಂಧರ್ಭದಲ್ಲಿ ದಿಕ್ಕು ತೋಚದೆ ರಾಜಾರಾಯರ ಮನೆಯಲ್ಲಿ ಅಡುಗೆಯವರಾಗಿ ಕೆಲಸಕ್ಕೆ ಸೇರಿದ್ದರು. 


ಅಂತಹದ್ದೇ ಮತ್ತೊಂದು ಸಂಧರ್ಭ ಈಗ ಅವರ ಬಾಳಲ್ಲಿ ಎದುರಾಗಿತ್ತು. ರಾಜಾರಾಯರು ಹಾಸಿಗೆ ಹಿಡಿದ ನಂತರ ಅವರ ಮಕ್ಕಳು ಹಾಗೂ ಸೊಸೆಯಂದಿರ ಕಾರುಬಾರಿನಲ್ಲಿ ಇವರ ಬದುಕು ದುಸ್ತರವಾದಾಗ ಆಗಷ್ಟೇ ಓದು ಮುಗಿಸಿದ್ದ ಭಾವಿಕ ಕೆಲಸದ ಹುಡುಕಾಟದಲ್ಲಿ ಇರುತ್ತಾಳೆ. ಅಲ್ಲದೇ, ಯಾವಾಗಲೂ ತಮ್ಮ ಮಹೇಂದ್ರನಿಗೆ ವೀಲ್ ಚೇರ್ ಕೊಡಿಸುವ ಭರವಸೆಯನ್ನು ಕೊಡುತ್ತಿರುತ್ತಾಳೆ. ಮಹೇಂದ್ರನ ಕಣ್ಣಲ್ಲಿಯೂ ಅದೇ ರಂಗು. ಆತನಿಗೆ ಕಾಲಿಲ್ಲದಿದ್ದರೂ ಜಗತ್ತನ್ನೇ ತನ್ನ ಕೈಯ್ಯಲ್ಲಿನ ಕ್ಯಾನ್ವಾಸ್ ನಲ್ಲಿ ತುಂಬುವ ಕಾತುರ. ಆತ ಬಿಡಿಸುವ ಚಿತ್ರಗಳು ಸೊಗಸು.


ಇಂತಹಾ ಸಂಧರ್ಭದಲ್ಲಿ ಪೇಪರ್ ನಲ್ಲಿ ಒಂದು ಜಾಹೀರಾತು ನೋಡುವ ಭಾವಿಕ ತನಗೆ ಸಿಗುವ ಸಂಬಳದ ಮೊತ್ತ ನೋಡಿ ಅಚ್ಚರಿಯಾಗಿ ಅಲ್ಲಿಗೆ ಹೊರಡುತ್ತಾಳೆ. ಎಂದೂ ಕಾಣದ ಹಾಗೂ ಕೇಳದ ತಿಲ್ಲಾಪುರ ಎಂಬ ಊರಿಗೆ ಹೊರಡುತ್ತಾಳೆ. ಅಲ್ಲಿ 'ನಿಸರ್ಗಧಾಮ'ದಲ್ಲಿ ಕಾಲಿಲ್ಲದ ಒಬ್ಬಾಕೆಯನ್ನು ನೋಡಿಕೊಳ್ಳಬೇಕು.


ಹಾಗೆ ಸಿಕ್ಕವಳೇ ಅಪರೂಪ. ಅಪರೂಪ ಹಾಗೂ ಭಾವಿಕಾರ ಸಂಬಂಧ ಬಾಸ್ ಹಾಗೂ ಕೆಲಸದವರು ಎನ್ನುವುದಕ್ಕಿಂತ ಗೆಳೆತನ ಅಥವಾ ತೀರಾ ಹತ್ತಿರದವರೇನೋ ಎಂಬಂತಿತ್ತು. ಆದರೆ, ಭಾವಿಕಾಳಿಗೆ ಆ ಮನೆಯಿಂದ ಹೊರಟು ಬಿಡಬೇಕೇನೋ ಎನ್ನುವ ಸಂಧರ್ಭ ಬಂದದ್ದು ಅಪರೂಪಳ ಅಣ್ಣ ಸಾಗರ್ ನಿಂದ.


ಭಾವಿಕ ತಿಲ್ಲಾಪುರಕ್ಕೆ ಬರುವ ದಾರಿಯಲ್ಲಿ.. ಅದೂ ಆ ಉದ್ದದ ಪ್ರಯಾಣದಲ್ಲಿ ವಿಭಿನ್ನ ಅನುಭವವೊಂದು ಉಂಟಾಗಿತ್ತು. ಆ ರೀತಿಯ ಇರುಸು - ಮುರುಸಿನ ಸಂಧರ್ಭದಲ್ಲಿ ಸಿಕ್ಕವರೇ ಭಾವಿಕಾ ಹಾಗೂ ಸಾಗರ್. 


ಸಾಗರ್ ಭಾವಿಕಾಳಿಗೆ ಅಲ್ಲಿಂದ ಹೊರಟು ಹೋಗಲು ಹೇಳಿದನಾದರೂ ಅದಕ್ಕೆ ತಡೆ ಬಂದದ್ದು ಅಪರೂಪಳಿಂದ. ಅಪರೂಪಳದ್ದು ಬೇರೆಯೇ ಕತೆ. ಆಕೆ ನಡೆಯಲಾರದ್ದಕ್ಕೆ ಕಾರಣವೂ ವಿಭಿನ್ನವೇ.. ಅಪಘಾತವಾಗಿತ್ತಾದರೂ ಆಕೆಗೆ ದೈಹಿಕವಾಗಿ ಯಾವುದೇ ಸಮಸ್ಯೆ ಇರಲಿಲ್ಲ. ತನ್ನ ಹತ್ತಿರದವರಿಂದ ದೂರ ಉಳಿಯಲು ನಿಸರ್ಗಧಾಮಕ್ಕೆ ಬರುವ ಅಪರೂಪಳಿಗೆ ಎಲ್ಲವೂ ಅಣ್ಣನೇ.. ಅಣ್ಣ-ತಂಗಿ ಇಬ್ಬರ ಸ್ವಭಾವವೂ ವಿರುದ್ಧ. ಅಪರೂಪಳದ್ದು ಒಂದು ರೀತಿಯಲ್ಲಿ ಅಪರೂಪದ ವ್ಯಕ್ತಿತ್ವ ಎಂದರೂ ತಪ್ಪಾಗಲಾರದು.


ಆದರೆ, ಅಪರೂಪಳ ಸ್ನೇಹಿತೆಯರು ಅವಳನ್ನು ನೋಡಲು ಬಂದಾಗ ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯಲು ಇಚ್ಛಿಸುತ್ತಾರೆ. ಆಗ ಸಾಗರ್ ಜೊತೆಗೆ ಅವರೆಲ್ಲರ ಪಯಣ ಸಾಗುತ್ತದೆ. ಅದರಲ್ಲಿನ 'ರಾಣಿ'ಗೂ ಹಾಗೂ ಸಾಗರ್ ಗೂ ಪ್ರೇಮ ಇರಬಹುದೆಂದೇ ಎಲ್ಲರ ಅನಿಸಿಕೆ. ಇಂತಹಾ ಸಂಧರ್ಭದಲ್ಲಿ ಇಷ್ಟವಿಲ್ಲದಿದ್ದರೂ ಸಾಗರ್ ಹಾಗೂ ಅಪರೂಪಳ ಸ್ನೇಹಿತೆಯರ ಜೊತೆಗೂಡಿ ಭಾವಿಕ ಹೊರಡುತ್ತಾಳೆ. ಆದರೆ, ಅದಾದ ನಂತರದ ಕಹಿ ಘಟನೆಯಿಂದ ಭಾವಿಕ ನೊಂದು ತಿಲ್ಲಾಪುರವನ್ನು ಬಿಟ್ಟು ಹೊರಡುತ್ತಾಳೆ. 


ಅಲ್ಲಿ ಅಂದು ಏನಾಯಿತು ?ಅಪರೂಪ ಇದಕ್ಕೆ ನ್ಯಾಯ ದೊರಕುವಂತೆ ಮಾಡಿದಳಾ ? ಸಾಗರ್ ಹಠ ಮತ್ತೂ ಮುಂದುವರಿಯಿತೇ ? ಚಂದನ್ ಇವರಿಬ್ಬರ ಮಧ್ಯೆ ಸೇತುವೆಯಾಗಿ ನಿಂತನಾ ? ಕೆಲಸ ಬಿಟ್ಟು ನಡೆದ ಭಾವಿಕಾ ಮುಂದೆ ಏನು ಮಾಡಿದಳು ? ಅಮ್ಮ ಹಾಗೂ ತಮ್ಮನನ್ನು ಹೇಗೆ ಸಾಕಿದಳು ? ಅಪರೂಪ ಬದುಕು ಮುಂದೇನಾಯಿತು ? ಎಲ್ಲವನ್ನೂ ತಿಳಿಯಲು ಭಾವಸಾಗರದಲ್ಲಿ ಮಿಂದೇಳುವಂತೆ ಮಾಡಿದ ಈ ಕೃತಿಯನ್ನು ಓದಲೇ ಬೇಕು. 


ತಾಳ್ಮೆ, ಹಠ, ಮುಸುಕಿನ ಪ್ರೀತಿ, ದ್ವೇಷದ ಪರದೆ, ಅಸಹಾಯಕತೆ ಇವೆಲ್ಲಾ ಭಾವನೆಗಳ ನಡುವೆ ಮಿಂದೇಳುವಂತೆ ಮಾಡಿದ ಮೀನಾ ಹರೀಶ್ ಕೋಟ್ಯಾನ್ ರವರ ಕಾದಂಬರಿಯೇ 'ಭಾವಸಾಗರ'

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ