ಸೋಮವಾರ, ಏಪ್ರಿಲ್ 6, 2026

ತ್ರಿವೇಣಿಯವರ ಬರಹಗಳು


ಬಹುಶಃ ತ್ರಿವೇಣಿಯವರು ಇಂದು ಬದುಕಿದ್ದಿದ್ದರೆ ನಮಗೆ ಇನ್ನೂ ಅದೆಷ್ಟು ಮೌಲ್ಯಯುತ ಕಾದಂಬರಿಗಳು ಸಿಗುತ್ತಿದ್ದವಲ್ಲವಾ ಎಂಬ ಆಲೋಚನೆ ಮೂಡದಿರಲಾರದು. ಕೆಲವರ ಬದುಕು ಬೇಗ ಮುಗಿಯಬಹುದು. ಆದರೆ, ಅವರ ಸಾಧನೆಗಳು ಎಂದಿಗೂ ಅಜರಾಮರ. ತ್ರಿವೇಣಿಯವರು ಕೂಡಾ ಇದೇ ಸಾಲಿಗೆ ಸೇರಿದ ಮನೋಜ್ಞ ಕಾದಂಬರಿಗಳನ್ನು ಕೊಟ್ಟ ಲೇಖಕಿ.


ಮೊದಲಿಗೆ ಅಂದರೆ ನಾನು ಹೈ ಸ್ಕೂಲ್ ನಲ್ಲಿರುವಾಗ ನಾನು ಲೈಬ್ರರಿಗೆ ಹೋದಾಗ ನನಗೆ ಬೇಕಾದ ಪುಸ್ತಕಗಳ ಜೊತೆಗೆ ಅಮ್ಮ ಹಾಗೂ ಚಿಕ್ಕಮ್ಮನಿಗೆ ಬೇಕಾದ ಕಾದಂಬರಿಗಳನ್ನು ತರಲು ಹೋದಾಗ ಮೊದಲು ತಂದದ್ದೇ ತ್ರಿವೇಣಿಯವರ "ಬೆಕ್ಕಿನ ಕಣ್ಣು" ಕಾದಂಬರಿ. ಅವರೂ ಮನೆಯಿಂದಲೇ ಹೇಳಿ ಕಳುಹಿಸುತ್ತಿದ್ದದ್ದು ತ್ರಿವೇಣಿಯವರ ಕಾದಂಬರಿಯನ್ನೇ ತೆಗೆದುಕೊಂಡು ಬಾ ಎಂದು. ನನಗೆ ಆಯ್ಕೆ ಗೊತ್ತಾಗದೇ ಕೆಲವೊಮ್ಮೆ ಲೈಬ್ರರಿಯನ್ ಅನ್ನು ಕೇಳಿದಾಗ ಕೈಗಿಡುತ್ತಿದ್ದದ್ದು ಸಹಾ ತ್ರಿವೇಣಿಯವರ ಕಾದಂಬರಿಯನ್ನೇ..


ನಾನು ಕಾದಂಬರಿ ಓದುವಂತಾದ ಮೇಲೆ ಮೊದಲು ಓದಿದ ತ್ರಿವೇಣಿಯವರ ಕಾದಂಬರಿ "ಬೆಳ್ಳಿ ಮೋಡ". ಕಾದಂಬರಿ ಜೊತೆಗೆ ನೋಡಿದ ಚಲನಚಿತ್ರ ಕೂಡಾ ಅಚ್ಚಳಿಯದಂತೆ ಉಳಿದಿದೆ.


ಸೋತು ಗೆದ್ದವಳು ಓದಿದಾಗ ಅದು ಆ ಕಾಲಘಟ್ಟದಲ್ಲಿ ಆಲೋಚನೆಯಲ್ಲಿ ಮುಂದಿದ್ದ ಕತೆ ಎನ್ನಿಸುತ್ತದೆ. ಬಹುಶಃ ಹೆಣ್ಣಿನ ತಪ್ಪಿಗೆ ಕ್ಷಮೆ ಸಿಗುವುದು ವಿರಳ. ಗಂಡನ್ನು ಹೆಣ್ಣು ಕ್ಷಮಿಸಿ ಮತ್ತೆ ಸ್ವೀಕರಿಸಿದರೂ ಗಂಡು ಹೆಣ್ಣನ್ನು ಸ್ವೀಕರಿಸುವ ಮನಸ್ಥಿತಿ ಹೊಂದಿರುವುದು ವಿರಳ. ಅಂದು ಮಾತ್ರವಲ್ಲ ಇಂದಿಗೂ ಅದು ವಿರಳವೇ..


ಅದು ಬಿಟ್ಟರೆ ಶರಪಂಜರದ ಕಾವೇರಿ ಪಾತ್ರ ಮನದಲ್ಲಿ ಇನ್ನೂ ಅಚ್ಚುಳಿದಿದೆ. ಈ ಸಮಾಜ ಮತ್ತೆ ಅವಳಿಗೆ ಬಾಳುವ ಅವಕಾಶ ನೀಡಿದ್ದರೆ .?? ಮಾರ್ಮಿಕ ಸಂಚುಗಳು, ವಂಚನೆಗಳು, ನಂಬಿಕೆಗಳೇ ಅವಳ ಪಾಲಿಗೆ ಮುಳುವಾದವಾ..??


ತ್ರಿವೇಣಿಯವರ ಬರವಣಿಗೆಯ ಶೈಲಿ ನಮ್ಮನ್ನು ಅದರಲ್ಲಿಯೇ ಮುಳುಗಿಸಿ ಓದಿಸಿಕೊಂಡು ಹೋಗುವಂತಹದ್ದು. ಜೊತೆ ಕಥಾ ಹಂದರಗಳೂ ಒಂದಕ್ಕಿಂತ ಒಂದು ವಿಭಿನ್ನವೇ.. ತಾವು ಓದಿರುವ ಮನಃಶಾಸ್ತ್ರವನ್ನು ಸಶಕ್ತವಾಗಿ ಬರವಣಿಗೆಯ ಮೂಲಕ ಹೊರ ಹಾಕಿ ತಮ್ಮ ಜ್ಞಾನವನ್ನು ಪಸರಿಸಿದವರು ಅವರು. 


ಬಹುಶಃ, ದುಃಖದಲ್ಲಿದ್ದಾಗ ನೋವಿನಲ್ಲಿದ್ದಾಗ ಅವರ ಪುಸ್ತಕಗಳನ್ನು ಹಿಡಿದರೆ ಕೆಲವೊಮ್ಮೆ ಸಾಂತ್ವನ ಸಿಕ್ಕರೆ ಮತ್ತೆ ಹಲವೊಮ್ಮೆ ದುಃಖಾಂತ್ಯದಿಂದ ವಿಷಾಧ ಆವರಿಸುತ್ತದೆ. ಅವರು ನಿಲುಕದ ನಕ್ಷತ್ರ ಎಂದರೂ ತಪ್ಪಾಗಲಾರದು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ