ಪುಸ್ತಕದ ಶೀರ್ಷಿಕೆ : ಎಲ್ಲಿಂದಲೋ ಬಂದವರು
ಲೇಖಕರು : ಭಾರತಿ ಬಿ.ವಿ
ಪ್ರಕಾಶಕರು : ಸಾವಣ್ಣ ಎಂಟರ್ಪ್ರೈಸಸ್
"ಎಲ್ಲಿಂದಲೋ ಬಂದವರು" ಬದುಕಲ್ಲಿ ಹತ್ತಿರವಾಗಲು ಸಾಧ್ಯವಾ ? ಖಂಡಿತಾ.. ಅವರ ಬೆಚ್ಚನೆಯ ನೆನಪುಗಳಿಂದ ಅವರು ನಮ್ಮೊಳಗೆ ಸೇರಿ ನಮ್ಮವರೇ ಆಗಿ ಬಿಟ್ಟಿರುತ್ತಾರೆ. ಹಾಗೆಂದು ಅವರೆಲ್ಲರೂ ಒಳ್ಳೆಯವರೇ ಆಗಿರುತ್ತಾರಾ..?? ಆಗಿಲ್ಲದಿದ್ದರೆ ಬದುಕಿಗೆ ಚೆಂದದ ಒಂದು ಪಾಠವನ್ನಂತೂ ಕಲಿಸಿರುತ್ತಾರೆ. ಈ ಪುಸ್ತಕ ಓದುತ್ತಾ ಹೋದಂತೆ ಲೇಖಕಿಯ ಅನುಭವಗಳಂತೆ ನಮ್ಮ ನೆನಪಿನ ಅನುಭವದ ಮೂಟೆಯೂ ತೆರೆದುಕೊಳ್ಳುತ್ತಾ ಹೋಗುತ್ತದೆ.
ಇದರಲ್ಲಿ ಮೊದಲಿಗೆ ಥ್ಯಾಂಕ್ಯೂ ಅರ್ಪಿಸುತ್ತಾ ಒಬ್ಬರಿಗೆ ಅರ್ಪಿಸಿದ ಥ್ಯಾಂಕ್ಯೂ ಅಂತೂ ಬಹಳ ಮನಸೆಳೆಯಿತು. "ಎಲ್ಲೆಲ್ಲಿಯೋ ಇದ್ದ ಎಷ್ಟೋ ಜನರನ್ನು ಫೇಸ್ಬುಕ್ ಮೂಲಕ ನನ್ನವರನ್ನಾಗಿಸಿದ ಮಾರ್ಕ್ ಜುಕರ್ ಬರ್ಗ್ ಗೆ" ಎನ್ನುತ್ತಾರೆ. ಈ ಶೀರ್ಷಿಕೆಯ ಧ್ವನಿಯನ್ನು ಇಲ್ಲಿಯೇ ಕೇಳಬಹುದು. 23 ವಿಭಿನ್ನ ಘಟನೆಗಳು ಇರುವ ಈ ಪುಸ್ತಕದಲ್ಲಿ ಬದುಕಿನ ಘಟನೆಗಳೇ ಕತೆಗಳಂತಾಗಿವೆ. ಕೆಲವೊಂದನ್ನು ನಾನು ಇವರ ಫೇಸ್ಬುಕ್ ನಲ್ಲಿ ಓದಿದ್ದೆ. ಆದರೆ, ಇದು ಅಂತಹಾ ಹಲವು ಹೂರಣಗಳನ್ನು ಒಳಗಿಟ್ಟುಕೊಂಡ ಪುಸ್ತಕ. ಇವರು ತಮ್ಮದೇ ಬದುಕಿನ ಕತೆ ಅದರಲ್ಲೂ ಕ್ಯಾನ್ಸರ್ ಅನ್ನು ಗೆದ್ದು ಬಂದದ್ದನ್ನು ಎಲ್ಲಿಯೂ ಬೋರಾಗದ ಹಾಗೆ, ಅನುಕಂಪ ಬೇಡದ ಹಾಗೆ, ತಮ್ಮ ಲವಲವಿಕೆಯ ಶೈಲಿಯಲ್ಲೇ ಹೇಳಿರುವ ಲೇಖಕಿ ಭಾರತಿ ಬಿ.ವಿ. ಇವರ ಸರಳ ವಿಭಿನ್ನ ಶೈಲಿಗಾಗಿಯೇ ಇವರ 'ಕಿಚನ್ ಕವಿತೆ' , 'ಆನು ನಿನ್ನ ಹಾಡಿದಲ್ಲದೇ ಸೈರಿಸಲಾರೆನಯ್ಯಾ', 'ಜಸ್ಟ್ ಮಾತ್ ಮಾತಲ್ಲಿ', 'ನಕ್ಷತ್ರಗಳ ಸುಟ್ಟ ನಾಡಿನಲ್ಲಿ' ಎಲ್ಲವನ್ನೂ ಹಿಡಿದದ್ದು.
ಜಗತ್ತಿನಲ್ಲಿ ಮೋಸ ಮಾಡುವವರಿದ್ದ ಹಾಗೆಯೇ ಸಹಾಯ ಮಾಡುವವರೂ ಇರುತ್ತಾರೆ. ಅದೂ ಅಪರಿಚಿತ ನಾಡಿನಲ್ಲಿ ಹಾಗೆ ಸಿಗುವುದು ಎಷ್ಟು ಅದೃಷ್ಟ ಅಲ್ಲವಾ.. ಕೆಲವೊಮ್ಮೆ ಅಂತಹವರ ಹೆಸರು, ಫೋಟೋ ಯಾವುದೂ ಇಲ್ಲದೇ ನೆನಪಾಗಿಯೇ ಉಳಿದಿರುತ್ತಾರೆ. 'ಒಳ್ಳೆಯವರು ನೆನಪಾಗಿ ಉಳಿಯುತ್ತಾರೆ' ಎನ್ನುವಾಗ ನಾವೂ ಒಳ್ಳೆಯತನದಿಂದ ಮಾತ್ರ ಮತ್ತೊಬ್ಬರ ನೆನಪಿನಲ್ಲಿ ಉಳಿಯಬೇಕು ಎನ್ನಿಸುತ್ತದೆ.
'ಬದುಕಿನ ಧನಾತ್ಮಕತೆಯ ಬುತ್ತಿ' ಕಟ್ಟುತ್ತಲೇ ಹೋಗುವವರು ಋಣಾತ್ಮಕ ವ್ಯಕ್ತಿಗಳ ನಡುವಲ್ಲಿಯೇ ಇದ್ದರೂ ಕೆಸರು ಅಂಟದ ಕಮಲದಂತೆ ಇರುತ್ತಾರೆ. ಅಂತಹವರು ನಾವೂ ಆಗಬೇಕು ಎನ್ನಿಸುತ್ತದೆ.
ನಂಬಿ ಕೆಟ್ಟವರಿಲ್ಲ ಎನ್ನುತ್ತಾರೆ. ಆದರೆ, ಯಾರದ್ದೇ ನಂಬಿಕೆಗೆ ಮೋಸ ಮಾಡಿದರೆ ಅದು ನಮ್ಮ ಆತ್ಮಸಾಕ್ಷಿಗೂ ನಾವೇ ಮಾಡಿಕೊಳ್ಳುವ ಮೋಸವಲ್ಲವೇ.. ಋಣಭಾರ ಹೊತ್ತು ಸಾಕಾಗಿ ತಾನೇ ಋಣಮುಕ್ತೆಯಾಗಲು ಹಂಬಲಿಸಿದ ಯಾನದಲ್ಲಿ 'ಬೆಂಕಿಯನ್ನೂ ದೀಪವೆಂದು ನಂಬುವವನು..' . ಇವರಿಬ್ಬರ ಈ ನಂಬಿಕೆಯ ಯಾನ ಮತ್ತಷ್ಟು ಬಲವಾಗುತ್ತದೆ.
'ಬದುಕಿನ ಬುತ್ತಿಯಲ್ಲಿ ಯಾರ್ಯಾರೆಲ್ಲಾ ಕೊಟ್ಟ ಕಾಳುಗಳು" ಹೆಮ್ಮರವಾಗಿ ಫಲ ಕೊಡುವಾಗ ಅದೆಷ್ಟು ಕೃತಜ್ಞತೆ ಹೊಮ್ಮುತ್ತದೆ ಅಲ್ಲವೇ..?? ಅವರ ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆ ಸಮಯದಲ್ಲಿ ತೀರಾ ಅನಾರೋಗ್ಯದಿಂದ ನರಳಿದ್ದಾಗ ಕೇಳದಿದ್ದರೂ ನೋಟ್ಸ್ ಬರೆದು ಸಹಾಯ ಮಾಡಿದ ಕೆಲಸದ ಹೊನ್ನಿನ ಗುಣದ 'ಹೊನ್ನಯ್ಯ' ಆಪ್ತವಾಗುತ್ತಾನೆ.
ಬದುಕಿನ ಪ್ರಯಾಣಗಳು ನಮ್ಮ ಅನುಭವವನ್ನು ವಿಸ್ತರಿಸುತ್ತಾ ಹೋಗುತ್ತವೆ. ಹಾಗೆ, 'ಬದುಕಿನ ಪಯಣದಲ್ಲೊಂದು ದಿನ'ವಾದ ಇಟಲಿ ಹಾಗೂ ಸ್ವಿಟ್ಜರ್ಲೆಂಡ್ ನ ಪ್ರಯಾಣದ ಅನುಭವದಲ್ಲಿ ಎಲ್ಲಿಂದಲೋ ಹೋದವರು ಇವರೇ ಆದರೂ ಅಲ್ಲಿನ ಅನುಭವ ಉತ್ತಮವೇ ಆಗಿತ್ತು. ಬದುಕಿನ ಒಳ್ಳೆಯತನದ ಪರಿಚಯ ಹೀಗೂ ಆಗುತ್ತದಾ ಎನ್ನಿಸಿದರೂ ಅದೇ ವಿದೇಶಿಯರು ನಮ್ಮ ದೇಶಕ್ಕೆ ಬಂದು ಇದೇ ಪರಿಸ್ಥಿತಿಯಲ್ಲಿ ಸಿಕ್ಕಿಬಿದ್ದರೆ..?? ಎಂದೂ ಯೋಚಿಸುವಂತಾಗುತ್ತದೆ.
ಯಾರದ್ದೋ ಒಂದು ಸಣ್ಣ ಭರವಸೆ, ಸಾಂತ್ವನ ಬದುಕಲ್ಲಿ ಒಮ್ಮೊಮ್ಮೆ ಅದೆಷ್ಟು ಮುಖ್ಯವಾಗುತ್ತದೆ ಅಲ್ಲವಾ ? 'ಎಲ್ಲಿಂದಲೋ ಬಂದವರು' ನಾವೋ.. ಅವರೋ.. ಗೊತ್ತಿಲ್ಲ..
ಕಿರಾಣಿ ಅಥವಾ ತರಕಾರಿಗಳನ್ನು ಲೋಕಲ್ ಅಂಗಡಿಗಳಲ್ಲಿಯೇ ಯಾಕೆ ಮಾಡಬೇಕು. ಮಾಲ್ ಗಳು ಬಂದ ಮೇಲೆ ಲೋಕಲ್ ಅಂಗಡಿಗಳು . ಬಹುಶಃ ಒಂದು ಉತ್ತಮ ಬಾಂಧವ್ಯಕ್ಕಾಗಿಯಾ.. ಸಣ್ಣ ಮುಗುಳ್ನಗುವಿಗಾ ಅಥವಾ ಒಂದು 'ಸಿಹಿ ನೆನಪು' ಪಡೆಯಲಿಕ್ಕಾ. ಇದು ಅಂತಹದ್ದೇ ಸಿಹಿ ಸವಿ ನೆನಪು. ರಾಜಣ್ಣನಂತಹವರು ನಮ್ಮ ಸುತ್ತಮುತ್ತಲೂ ಇರುತ್ತಾರೆ ಅಲ್ಲವಾ..
ತಮ್ಮ ಸಿನಿಮಾ ಹುಚ್ಚಿನಿಂದ ಅಪ್ಪ, ಅಕ್ಕನೊಂದಿಗೆ ತಡ ರಾತ್ರಿ ಸಿನಿಮಾ ನೋಡಿ ಬರುವಾಗ 'ನಡುರಾತ್ರಿಯಲ್ಲಿ ಬೈಕ್ ಕೆಟ್ಟು ನಿಂತಾಗ' ಹೇಗಾಗಬಹುದು. ಬಹುಶಃ, ಅವತ್ತು ಅವರ ಅದೃಷ್ಟ ಒಳ್ಳೆಯದಿತ್ತಾ.. ಅಥವಾ.. ಇವರು ಅಂದುಕೊಂಡಂತೆ ಅಂದು ನಡೆದಿದ್ದರೆ.. ! ಒಟ್ಟಿನಲ್ಲಿ ಉಸಿರು ಬಿಗಿ ಹಿಡಿದು ಓದುವಂತೆ ಮಾಡಿದ ಅನುಭವ ಇದು.
'ಭಾಳ ಒಳ್ಳೇವ್ರ್ ನಮ್ ಮಿಸ್ಸು' ಎನ್ನುತ್ತಾ ಗೀತಾ ಮಿಸ್ ಬಗ್ಗೆ ಹೇಳುವಾಗ ನನಗೂ ನನ್ನ ಚೆನ್ನಮ್ಮ ಮಿಸ್ ನೆನಪಾದರು. ವಿದ್ಯಾರ್ಥಿಗಳನ್ನು ಸರಿ ಪಡಿಸುವ ಪರಿ ಎಲ್ಲರಿಗೂ ತಿಳಿದಿರುವುದಿಲ್ಲ. ತಿಳಿದಿದ್ದರೂ ಎಷ್ಟೋ ಜನ ಹಾಗೆ ನಡೆದುಕೊಳ್ಳುವುದಿಲ್ಲ. ಕಾರಣಗಳು ಏನೇ ಇದ್ದರೂ ಗೀತಾ ಮಿಸ್ ಸಖತ್ ಇಷ್ಟ ಆದ್ರು.
'ಕಿಲಾಡಿ ಜೋಡಿ'ಯ ಕಳ್ಳ ಕೂಡಾ 'ಎಲ್ಲಿಂದಲೋ ಬಂದವರಲ್ಲಿ' ಒಬ್ಬನಾದ. ಆದರೂ, ಕಳ್ಳರೂ ಹೀಗಿರುತ್ತಾರಾ.. ಅಥವಾ ಆತ ಕಳ್ಳನೇ ಅಲ್ಲವಾ.. ತಿಳಿಯದ ಕೆಲ ಪ್ರಶ್ನೆಗಳಿಗೆ ಉತ್ತರ ಹುಡುಕಿ ಹೊರಡಬಾರದು ನೋಡಿ.
'ಆ ಪರೀಕ್ಷೆ'ಯಲ್ಲಿ ನಿದ್ದೆ ಹೋಗುತ್ತಿದ್ದವರನ್ನು ಆ ಸರ್ ಎಚ್ಚರಿಸದೇ ಹೋಗಿದ್ರೆ..?? ಅಷ್ಟಕ್ಕೂ ಇವರಿಗೆ ಅಷ್ಟು ನಿದ್ದೆ ಬಂದದ್ದು ಯಾಕೆ..?? ಅವರ ಅಕ್ಷರದಲ್ಲಿಯೇ ಸವಿಯಬೇಕು.
'ಪವಾಡಗಳು ನಿಜಕ್ಕೂ ಘಟಿಸುತ್ತವೆ !' ಅಲ್ಲವಾ..?? ನಾವು ಅಂದುಕೊಂಡದ್ದು ಆ ಕ್ಷಣದಲ್ಲಿ ನೆರವೇರಿದ್ರೆ.. ಅದೂ ತಿಳಿಯದ ಅನಾಮಿಕರು ಸಣ್ಣ ಪುಟ್ಟ ಆಸೆಗಳನ್ನು ನೆರವೇರಿಸಿದ್ರೆ.. ಪವಾಡ ಅನ್ನಿಸಿದರೂ ಕೆಲವೊಮ್ಮೆ ಹೀಗೂ ಆಗುತ್ತವೆ. ಬದುಕಲ್ಲಿ ಇಂತಹವೇ ಹೆಚ್ಚು ಖುಷಿ ಕೊಡುವುದು.
ಕೆಲವೊಮ್ಮೆ ಅವರ ಅಲಂಕಾರ ಅಥವಾ ಮುಖ ನೋಡಿ ಅಳಿತಿವಿ. ಅದು ಸತ್ಯವೇ ಆಗಿರಬಹುದು. ಆದರೆ, ಅದರ ಹಿಂದೆ ಮತ್ತೊಂದು ವ್ಯಕ್ತಿತ್ವ ಕೂಡಾ ಇರುತ್ತಲ್ವಾ.. ಇಲ್ಲಿದೆ 'ಕಷ್ಟಕ್ಕಾದ ಅಲಂಕಾರ ಪುಟ್ಸಾಮಿ..' ಕುರಿತು.
ಕಾಣದ ಊರಲ್ಲಿ ಅಚಾನಕ್ಕಾಗಿ ಎದುರಾಗುವ ಸಂಕಷ್ಟಗಳು ಅದೆಷ್ಟೇ ಧೈರ್ಯದಿಂದ ಇದ್ದರೂ ಕೆಲವೊಮ್ಮೆ ಹೆದರಿಸಿಬಿಡುತ್ತವೆ. ಕೆಲವೊಬ್ಬರು ಬಂದ ಧೈರ್ಯದಿಂದ ಬೀಗ ತೆಗೆಯುವಲ್ಲಿ ಸಹಕಾರಿಯಾಗುತ್ತಾರೆ. 'ತೆರೆದ ಬೀಗ..'ದಿಂದ ಅಂತರಂಗಕ್ಕೆ ಆಪ್ತರೂ ಆಗುತ್ತಾರೆ.
ಕ್ಯಾನ್ಸರ್ ನಂತಹಾ ಖಾಯಿಲೆಯನ್ನು ಜಯಿಸುವ ಪರಿಯನ್ನು ಹೇಳುವಾಗ ತಮ್ಮ ಕಷ್ಟಗಳನ್ನು ಕೂಡಾ ಅರಿವಿಗೆ ಬರುವಂತೆ ಬರೆಯುತ್ತಾರೆ.. ಅದೂ ಯಾವುದೇ ಭಯ ಅಥವಾ ಅನುಕಂಪ ಹುಟ್ಟಿಸದೇ.. ಅಂತಹಾ ಸಮಯದಲ್ಲಿ ಹೆಸರು ಹೇಳಲು ಇಚ್ಛಿಸದ ನರ್ಸ್ ಒಬ್ಬಳು 'ಎಂದುರೋ ಮಹಾನುಭಾವುಲು..' ಎಂಬಂತೆ ನಿಯಮ ಮೀರಿ ಸಹಾಯ ಮಾಡಲು ಹೊರಟಿದ್ದು ಸಣ್ಣ ವಿಷಯವೇನಲ್ಲ..
ಎತ್ತರದ ಹಾದಿಗೇರುವಾಗ ಯಾರೋ ಒಬ್ಬರು ನೆರವಾದರೆ. 'ಕೈ ಹಿಡಿದು ನಡೆಸೆನ್ನನು' ಎನ್ನದಿದ್ದರೂ ಮುನ್ನಡೆಸಿದರೆ.. ಬದುಕಿನ ಎಷ್ಟೋ ರೋಚಕತೆ ಕಂಡುಕೊಳ್ಳಲು, ಸಂತಸದ ಹೊನಲನ್ನು ತುಂಬಿಕೊಳ್ಳಲು ನೆರವಾದರೆ.. ಆ ಸಂತಸ ಹೇಳ ತೀರದ್ದು ಅಲ್ಲವಾ..
'ಇಂಥವರೂ ಇರುತ್ತಾರೆ' ಅಂದರೆ ಕೆಟ್ಟವರು ಹಾಗೂ ಒಳ್ಳೆಯವರು ಇಬ್ಬರೂ. ಇಂಥವರಿಂದಲೇ ಅಂಥವರ ಸಹಾಯ ದೊರೆತದ್ದು ಎಂಬುದೂ ನೆನಪಿಸಿಕೊಳ್ಳುವಂತಹದ್ದೇ..
'ಒಂದು ಕೊಲೆಯ ಸಂಚು' ಹೇಗೆಲ್ಲಾ ರೂಪುಗೊಳ್ಳುತ್ತದೆ. ಹಾಗೂ ಯಾವ ಕಾರಣಕ್ಕೆಲ್ಲಾ.. ತೀರಾ ದೊಡ್ಡವರ ಅಥವಾ ದೊಡ್ಡ ಕೋಟಲೆಗಲ್ಲ ಅಥವಾ ದೊಡ್ಡವರಾದಾಗ ಮಾಡಿದ್ದಲ್ಲ. ಆದರೂ, ಆ ಕೊಲೆಯ ಸಂಚು ತಪ್ಪಿಸಿದವರು ಒಳ್ಳೆಯದೇ ಮಾಡಿದ್ದರು.
ಕೆಲವರು ಮಾಡಿದ್ದು ಅವರ ಕಣ್ಣಲ್ಲಿ ಚಿಕ್ಕದೇ ಆಗಿದ್ದರೂ ನಮಗೆ ಅದು ಮರೆಯಲಾಗದ್ದು. 'ಕರುಣಾಳು ಬಾ ಬೆಳಕೆ..' ಎನ್ನುವಂತಹದ್ದು.
'ಮತ್ತೆ ಸಿಕ್ಕ ನೆನಪುಗಳು' ಅದೆಷ್ಟು ಖುಷಿ ತರುತ್ತವೆ ಗೊತ್ತೇ.. ಕಳೆದೇ ಹೋಗಿದ್ದ ನೆನಪುಗಳು ಮತ್ತೆ ಮರಳಿ ಕೈ ಸೇರಿದರೆ ಆ ಸಂತಸ ವರ್ಣಿಸಲಾರದ್ದು. ಮತ್ತದು ಬೆಲೆಕಟ್ಟಲಾಗದ್ದು ಸಹಾ. ಆ ನೆನಪುಗಳನ್ನು ಮರಳಿಸಿದವರಿಗೂ ಅವರ ಅರಿವಿದ್ದಿರಬಹುದು.
'ಸಮಯಕ್ಕಾದವನೇ ನೆಂಟ' ಎಂಬ ಮಾತು ಸತ್ಯವಲ್ಲದೇ ಮತ್ತೇನು.. ಇಂತಹಾ ಎಷ್ಟೋ ಜನರು ತಮ್ಮ ಲಾಭವನ್ನು ಮರೆತು ಸಹಾಯ ಮಾಡಿರಬಹುದು. ಅಂತಹವರನ್ನು ಕಡೆಗಣಿಸುವುದಾದರೂ ಹೇಗೆ ?
'ಇಂಥವರೂ ಎಲ್ಲಿಂದಲೋ ಬರುತ್ತಾರೆ!' ಎನ್ನುತ್ತಾ ಹೇಳಿದ್ರಲ್ಲಿ ಇದುವರೆಗೂ ಹೇಳಿದ್ದಕ್ಕಿಂತ ಭಿನ್ನವಾದ ಅನುಭವವಿದೆ. ಎಲ್ಲವೂ ಒಳ್ಳೆಯದ್ದೇ ಆಗಬೇಕು.. ಎಲ್ಲವರೂ ಒಳ್ಳೆಯವರೇ ಸಿಗಬೇಕೆಂದರೆ ಹೇಗೆ ಅಲ್ಲವಾ..??
ಕೊನೆಗೆ "ಒಳ್ಳೆಯವರು ಬದುಕಿನ ನೆನಪಾಗಿ ಉಳಿದರೆ, ಕೆಟ್ಟವರು ಬದುಕಿನ ಪಾಠವಾಗಿ ಉಳಿಯಬೇಕು ಅಷ್ಟೇ.. ಅವರವರ ಬದುಕಿನ ಪಾಠವಾಗಿ... ಎನ್ನುತ್ತಾ 'ಲೈಫ್ ಈಸ್ ಬ್ಯುಟಿಫುಲ್' ಎನ್ನುತ್ತಾರೆ.
ನಿಜ ಬದುಕಿನ ಎಲ್ಲವೂ ಪಾಠಗಳೇ.. ಎಲ್ಲ ತರಹದ ಪಾಠಗಳೂ ಇದ್ದರೇ ಬದುಕು ಸುಂದರ ಅಲ್ಲವೇ.. ಈ ಪುಸ್ತಕ ನಾನು ಹೇಳಿದಷ್ಟರ ಮಟ್ಟಿಗೆ ಸೀರಿಯಸ್ ಆಗಿ ಚರ್ಚಿತವಾಗುವುದಿಲ್ಲ. ಎಲ್ಲಿಯೂ ಬೋರಾಗದಂತೆ ತಿಳಿ ಹಾಸ್ಯದ ಶೈಲಿಯಲ್ಲಿದೆ. ಇದನ್ನು ಓದಿದ ನಂತರ ನನಗೂ ನನ್ನ ಬದುಕಲ್ಲಿ 'ಎಲ್ಲಿಂದಲೋ ಬಂದವರು' ಯಾರು ಯಾರು ಎಂದು ನೆನಪಿಸಿಕೊಳ್ಳುವಂತಾಗಿದೆ. ಒಂದೊಳ್ಳೆ ಅನುಭವಗಳ ರಸದೌತಣ ಬಡಿಸಿದ್ದಕ್ಕೆ ಧನ್ಯವಾದಗಳು ಭಾರತಿ ಮೇಡಂ
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ