ಸೋಮವಾರ, ಏಪ್ರಿಲ್ 6, 2026

ವೀರಗಾಥೆ (ಪುಸ್ತಕ ಯಾನ - 8)


ಪುಸ್ತಕದ ಶೀರ್ಷಿಕೆ : ವೀರಗಾಥೆ

ಲೇಖಕರು : ಡಾ || ಸಿಂಧು ಪ್ರಶಾಂತ್

ಪ್ರಕಾಶಕರು :ಸಮನ್ವಿತ ಪ್ರಕಾಶನ

ಇದು ಪುರಾಣ ಕಾಲದ ವೀರರ ಕತೆಯಲ್ಲ. ನಮ್ಮ ನಿಮ್ಮ ನಡುವೆ ಸಾಮಾನ್ಯರಂತೆ ಬದುಕಿ ಊಹಿಸಲೂ ಸಾಧ್ಯವಾಗದಷ್ಟು ಶೌರ್ಯ ತೋರಿದವರ ಅದ್ಭುತ 'ವೀರಗಾಥೆ' ಇದು. ಸ್ವಾತಂತ್ರ್ಯ ತಂದುಕೊಟ್ಟವರ ಹೋರಾಟ ಒಂದೆಡೆ ಇದ್ದರೆ ತಂದುಕೊಟ್ಟ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ತಮ್ಮ ಉಸಿರನ್ನೇ ಪಣವಾಗಿಟ್ಟವರ ಜೀವನಗಾಥೆ ಇದು. ಈ ಪುಸ್ತಕ ಸಮನ್ವಿತ ಪ್ರಕಾಶನ ಪ್ರಕಟಿಸಿದೆ. ಆ ಐವತ್ತು ವೀರ ಯೋಧರ ಕತೆಯನ್ನು ಅಲ್ಲಲ್ಲ ಜೀವನವನ್ನು ತೆರೆದಿಟ್ಟಿರುವವರು ಡಾ || ಸಿಂಧು ಪ್ರಶಾಂತ್.


ಸ್ವಾತಂತ್ರ್ಯದ ಹೋರಾಟಕ್ಕಾಗಿ ಪ್ರಾಣವನ್ನೇ ಪಣಕ್ಕಿಟ್ಟವರು ಸ್ವಾತಂತ್ರ್ಯ ತಂದುಕೊಟ್ಟ ನಂತರ ಶುರುವಾದದ್ದು ಅಳಿವು-ಉಳಿವಿನ ಹೋರಾಟ. ಇದಕ್ಕಾಗಿ ದುಡಿದವರು ಲಕ್ಷಾಂತರ ಮಂದಿ. ಅನ್ ಸಂಗ್ ಹೀರೋಸ್ ಎನ್ನುತ್ತಾರಲ್ಲಾ ಅಂತಹವರು ವೀರ ಯೋಧರು. ಗಾಳಿ, ಚಳಿ, ಮಳೆ ಎಲ್ಲಾ ಸಂಧರ್ಭದಲ್ಲಿಯೂ ದೇಶಪ್ರೇಮವನ್ನು ಕಾಪಾಡಿಕೊಂಡು ಬದುಕುವುದು, ಸಮಯ ಬಂದಾಗ ಪ್ರಾಣವನ್ನೂ ಲೆಕ್ಕಿಸದೇ ಹೋರಾಡಿ ಪ್ರಾಣವನ್ನೇ ಕೊಡುವವರು ಎಷ್ಟು ಮಂದಿ ಸಿಕ್ಕಾರು..??


ಇಲ್ಲಿ ಕೆಲವರದ್ದು ಕುಟುಂಬದಿಂದ ತಲೆತಲಾಂತರದಿಂದ ಬಂದ ದೇಶಪ್ರೇಮವಾದರೆ ಮತ್ತೆ ಹಲವರದ್ದು ತಾವಾಗಿಯೇ ಬೆಳೆಸಿಕೊಂಡದ್ದು.. ಎಷ್ಟೋ ಮನೆಗಳಲ್ಲಿ ಬೇಡವೆಂದ ಅಮ್ಮಂದಿರೂ ಇದ್ದರು. ಮಕ್ಕಳನ್ನು ಕಳೆದುಕೊಂಡ ಅವರಲ್ಲಿಯೂ ದೇಶಭಕ್ತಿ ಕಡಿಮೆಯಾಗಿಲ್ಲ. ಇದೊಬ್ಬ ಮಗನನ್ನು ಕಳೆದುಕೊಂಡ ನಂತರವೂ ದೇಶವನ್ನು ಮಗನಂತೆಯೇ ಪ್ರೀತಿಸಿದವರಿದ್ದಾರೆ. ತನ್ನ ಮಗನ ದೇಹ ಶತ್ರುಗಳ ದಾಳಿಗೆ ಸಿಕ್ಕು ಬಲಿಯಾದಾಗ ಅವನ ದೇಹ ತರುವುದು ಕಷ್ಟ ಎಂದಾದಾಗ ಅವರು ನನ್ನ ಸತ್ತ ಮಗನಿಗಾಗಿ ಉಳಿದ ಸೈನಿಕರನ್ನು ಬಲಿ ಕೊಡಲಾರೆ, ಅವರೂ ನನ್ನ ಮಕ್ಕಳೇ ಎನ್ನುತ್ತಾರೆ. ಗಂಡ ಸತ್ತ ನಂತರ ಮಕ್ಕಳನ್ನು ದೇಶದ ಸೇವೆಗಾಗಿ ಕಳುಹಿಸಿದವರಿದ್ದಾರೆ. ಹುತಾತ್ಮನಾದ ಗಂಡನ ಸೇವೆಯನ್ನು ಹೆಂಡತಿ ಮುಂದುವರಿಸಿದ ಘಟನೆ ಇದೆ.


ತನಗೆ ಸಿಗದ ಶೌರ್ಯ ಪ್ರಶಸ್ತಿ ಮಗನಿಗೆ ಸಿಕ್ಕಾಗ ಹೆಮ್ಮೆ ಪಟ್ಟ ತಂದೆ ಇದ್ದರೂ.. ಅವರಲ್ಲಿ ಅದಕ್ಕಾಗಿ ದುಃಖವೂ ಇದೆ.. ಕಾರಣ, ಅದು ಮರಣೋತ್ತರ ಪ್ರಶಸ್ತಿ.


ಸೈನಿಕರೆಂದರೆ ಬರೀ ಗಡಿಯಲ್ಲಿ ನಿಂತು ದೇಶ ಕಾಯುವವರಲ್ಲ. ಏರ್ ಫೋರ್ಸ್ ಹಾಗೂ ಜಲಮಾರ್ಗದ ಯೋಧರೂ ಇದ್ದಾರೆ. ಪೋಲೀಸ್ ಇದ್ದಾರೆ. ಇವರೆಲ್ಲರ ಬದುಕು ಆದರ್ಶವಾಗಬೇಕು.


ಕಾಲು ಕಳೆದುಕೊಂಡ ಯೋಧನೊಬ್ಬ ನಕಲಿ ಕಾಲಿನಲ್ಲಿ ಮತ್ತೆ ಸೈನ್ಯ ಸೇರಿದ ಮಹತ್ವದ ಘಟನೆಯಿದೆ. ಕಾಲು ಕಳೆದುಕೊಂಡು ಮತ್ತೆ ಸೈನ್ಯ ಸೇರಲು ಸಾಧ್ಯವೇ ಇಲ್ಲ ಎಂದು ಡಿಪ್ರೆಶನ್ ಗೆ ಒಳಗಾಗಿ ನಂತರ ಅದರಿಂದ ಚೇತರಿಸಿಕೊಂಡು ಹೊರಬಂದು ಬೇರೆ ಸಾಧನೆಯಲ್ಲಿ ತೊಡಗಿಕೊಂಡ ಕತೆಯಿದೆ. 


ಯೋಧರೆಂದರೆ ಶತ್ರುಗಳ ಎದೆಯಲ್ಲಿ ನಡುಕ ಹುಟ್ಟಿಸುವವರೂ ಹೌದು.. ತಮ್ಮವರಿಗಾಗಿ ಮಿಡಿಯುತ್ತಾ ಅವರನ್ನು ಕಾಪಾಡಲು ತಮ್ಮನ್ನೇ ಅಪಾಯಕ್ಕೊಡ್ಡಿಕೊಳ್ಳಲು ಹಿಂಜರಿಯದೆ ಪ್ರಾಣ ನೀಡುವವರು ಸಹಾ ಹೌದು. ಶರೀರದಲ್ಲಿ 12 ಗುಂಡುಗಳು ತೂರಿದರೂ, ಕಾಲುಗಳೇ ನುಜ್ಜುಗುಜ್ಜಾಗಿ ಹೋದರೂ, ಮೈಯ್ಯಲ್ಲಿನ ರಕ್ತವೇ ಸೋರಿ ಹೋದರೂ ಯಾವುದನ್ನೂ ಲೆಕ್ಕಿಸದೇ ಶತ್ರುಗಳನ್ನು ಬಲಿ ಪಡೆದುಕೊಂಡೇ ಸತ್ತವರು ಸಹಾ ಹೌದು.


ಇಲ್ಲಿ ಒಬ್ಬೊಬ್ಬರದ್ದೂ ಒಂದೊಂದು ಕತೆ. ಆದರೆ, ಎಲ್ಲರೆದೆಯಲ್ಲಿಯೂ ದೇಶಪ್ರೇಮ ತುಂಬಿದೆ. ಕೇವಲ ಯೋಧರಲ್ಲಿ ಅಲ್ಲ.. ಅವರ ಕುಟುಂಬದವರಲ್ಲಿಯೂ.. ಒಂದೊಂದು ವೀರಗಾಥೆಯನ್ನು ಓದುತ್ತಿದ್ದರೂ ದೇಶಪ್ರೇಮದ ಕಿಚ್ಚು ಹುಟ್ಟುತ್ತದೆ.


ಇಲ್ಲಿ ಭಾವನಾತ್ಮಕತೆ ಇದೆ. ಹೌದು.

ಕಣ್ಣ ಮುಂದೆ ಸಾಯುತ್ತಿದ್ದವರನ್ನು ಬದುಕಿಸಲು ಬದುಕುವ ಅವಕಾಶ ಇದ್ದಾಗಲೂ ಅವರಿಗಾಗಿ ಮಿಡಿದು, ಅವರ ಕ್ಷೇಮಕ್ಕಾಗಿ ಮಿಡಿದ ವೀರಯೋಧರ ಕುರಿತು ಹೇಳುವಾಗ ಅಷ್ಟು ಭಾವುಕತೆ ಅಗತ್ಯ ಎನ್ನಿಸಿತು.


ಇದನ್ನು ಬೇರೆ ಪುಸ್ತಕದಂತೆ ಒಂದೇ ಗುಟುಕಿಗೆ ಓದಿ ಅರಗಿಸಿಕೊಳ್ಳಲು ಆಗಲಿಲ್ಲ.. ಇದು ಓದಿ ಮರೆಯುವಂತಹಾ ಪುಸ್ತಕವೂ ಅಲ್ಲ. ನಮ್ಮ ಮಕ್ಕಳಲ್ಲಿ ದೇಶಭಕ್ತಿ ಬೆಳೆಸಲು ಒಮ್ಮೆ ಈ ಪುಸ್ತಕದ ಘಟನೆಗಳನ್ನು ಅವರು ಓದಬೇಕು. ಯುವ ಜನತೆ ಯಾವುದೋ ಮತ್ತಿನಲ್ಲಿ ಮೈ ಮರೆಯುವ ಮುನ್ನ ಇದನ್ನು ಓದಬೇಕು. ದೇಶಪ್ರೇಮವನ್ನು ಜಾಗೃತಿಗೊಳಿಸಿಕೊಳ್ಳಲು ಈ ವೀರಗಾಥೆಗಳನ್ನು ಓದುವುದು ಈ ಕಾಲಕ್ಕೆ ಅವಶ್ಯಕ ಎನ್ನಿಸಿತು. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ