ಸೋಮವಾರ, ಏಪ್ರಿಲ್ 6, 2026

ಉಪ್ಪುಚ್ಚಿ ಮುಳ್ಳು ಮತ್ತಿತರ ಕತೆಗಳು (ಪುಸ್ತಕ ಯಾನ - 30)


ಪುಸ್ತಕದ ಹೆಸರು : ಉಪ್ಪುಚ್ಚಿ ಮುಳ್ಳು ಮತ್ತಿತರ ಕತೆಗಳು

ಲೇಖಕಿ : ದಯಾ ಗಂಗನಘಟ್ಟ

ಪ್ರಕಾಶಕರು : ಹಾಡ್ಲಹಳ್ಳಿ ಪಬ್ಲಿಕೇಶನ್ಸ್

ಪುಟಗಳು : 136

ಬೆಲೆ : 150 ರೂ.


"ಉಪ್ಪುಚ್ಚಿ ಮುಳ್ಳು" ಚುಚ್ಚುವ ನೋವು ಭಯಾನಕವಾಗಿರುತ್ತದೆ ಎಂಬ ಅರಿವಿದ್ದರೂ ಈ ಉಪ್ಪುಚ್ಚಿ ಮುಳ್ಳಿನ ನೋವು ಬೇರೆಯೇ ತೆರನಾದದ್ದು. ಆ ನೋವು ಯಾತನೆ ನೀಡಿದರೆ ಈ ನೋವು ಸತ್ಯ ದರ್ಶನ ಮಾಡಿಸುತ್ತದೆ. ಇದು ನೀಡುವುದು ಯಾತನೆಯನ್ನಲ್ಲ.. ಬದಲಾಗಿ, ಭರವಸೆಗಳನ್ನು. ನನಗೆ ಈ ಪುಸ್ತಕದಲ್ಲಿ ಬಹಳ ಹಿಡಿಸಿದ ವಿಚಾರ ಎಂದರೆ ಬದುಕಿನತ್ತ ತೋರುವ ಪಾಸಿಟಿವ್ ಸೈಡ್. ಈಗಿನ ನಗರದ ಕತೆಗಳಲ್ಲಿ ಅಥವಾ ಜೀವನದಲ್ಲಿ ಸಣ್ಣ ನೋವಿಗೂ ಅಳು, ಡಿಪ್ರೆಷನ್ ಎಂಬುದು ಕಾಣುವಾಗ ಅದೆಲ್ಲದರ ಮೇರೆ ಮೀರಿ ಈ ಕತೆಗಳು ದಿಟ್ಟತನ, ಜೀವನಪ್ರೀತಿಯನ್ನು ಕಾಣುತ್ತವೆ. ಅದಕ್ಕೆ ಕಾರಣ ಹಳ್ಳಿಯ ಘಮಲು ಹಾಗೂ ಅಲ್ಲಿನ ಕಸುವು ಆಗಿರಬಹುದಾ ? ಅಥವಾ ತಮ್ಮ ಮನೆಯ ವಿಚಾರಗಳನ್ನು ಹಂಚಿಕೊಂಡಾಗ ಅದೆಲ್ಲವನ್ನೂ ತಮ್ಮ ಕೆಲಸದ ಜೊತೆಗೆ ಸೇರಿಸಿ ಹೆಣೆದು, ಬೆಸೆದು ಸಾಂತ್ವನ ನೀಡುವ ಥೆರಪಿಸ್ಟ್ ಗಳಂತೆ ಕಾಣುವ ನಮ್ಮ ಹಳ್ಳಿಯ ಹೆಣ್ಣು ಮಕ್ಕಳ ಗುಣ ಇದ್ದಿರಬಹುದಾ ?? ಓದಿದ ನಂತರ ಇಲ್ಲಿನ ಕತೆಗಳು ಕೇವಲ ಕತೆಗಳಾಗಿ ಮನದೊಳಗೆ ಉಳಿಯುವುದಿಲ್ಲ. ಜೀವಂತಿಕೆಯಿರುವ ಬದುಕನ್ನು ಎತ್ತಿ ಹಿಡಿದು ಆಳವಾದ ಇಂಪ್ರೆಶನ್ ಮೂಡಿಸಿ ಬಿಡುತ್ತವೆ.


ಪುಸ್ತಕದ ಹೆಸರಿನಷ್ಟೇ ಸೊಗಸಾಗಿ, ವಿಭಿನ್ನವಾಗಿವೆ ಇಲ್ಲಿನ ಶೀರ್ಷಿಕೆಗಳು ಹಾಗೂ ಕತೆಗಳು. ಹಳ್ಳಿಯ ಭಾಷೆ ಅದರಲ್ಲೂ ಬಯಲುಸೀಮೆಯ ಘಮಲು ಕಾಣುತ್ತದೆ.


"ಜಗತ್ತಿನ ಸ್ವಲ್ಪ ಆ ಕಡೆಗೆ" ನೋಡಿದಾಗ ಇಷ್ಟು ಬಿಡುಬೀಸಾಗಿ ಭಾಷೆಯನ್ನು ಬಳಸಬಹುದಾ ಎಂದು ತೋರುತ್ತದೆ. ಹಳ್ಳಿಯ ಬೈಗುಳದ ಜೊತೆಗೆ ಕಟು ವಾಸ್ತವದ ದರ್ಶನ ಇಲ್ಲಿದೆ. ಶೌಚ ಎನ್ನುವ ವಿಷಯಕ್ಕೆ ಬಂದರೆ ಈಗ ಸೊಫಿಸ್ಟಿಕೇಟೆಡ್ ಭಾಷೆ ಉಪಯೋಗಿಸಿದರೂ ಮಿಕಿಮಿಕಿ ಎಂದು ನೋಡುವಾಗ ಹಸಿ ಸತ್ಯವನ್ನು ಅಪಥ್ಯವಾಗದಂತೆ ಬರೆದ ಕಥೆ ಇದು. ಬರೀ ಶೌಚ ಅಥವಾ ವಿದ್ಯೆಯ ವಿಚಾರವಾಗಿ ಕಾಣದೇ ಹೆಣ್ಣುಮಕ್ಕಳಿಗೆ ಒಂದು ಸಣ್ಣ ವಿಚಾರವೂ ಬದುಕಲ್ಲಿ ಎಷ್ಟು ಮುಖ್ಯ ಹಾಗೂ ಅದರ ಸಮಸ್ಯೆಗಳ ಪರಿ ಅದೆಷ್ಟು ತೊಂದರೆ ಎನ್ನುವುದೂ ಕಾಣುತ್ತದೆ. 


"ರೂಡಣ್ಣನ ಸಲ್ಲೇಖನ" ದ ರೂಡಣ್ಣ ಜಗತ್ತಿನ ಕಣ್ಣಿಗೆ ಕಂಡ ವಿಕ್ಷಿಪ್ತ ಪರಿ ಹಾಗೂ ಅವನ ವಿಭಿನ್ನ ನಡವಳಿಕೆಯ ಜೊತೆಗೆ ಆತನ ಸಾವಿನ ಬಗ್ಗೆಯೂ ವಿಭಿನ್ನತೆ ಇದೆ. ಆಧ್ಯಾತ್ಮದ ಕತೆ ಇರಬಹುದಾ ಎನ್ನುತ್ತಲೇ ಗರಿಗೆದರಿದ ಕುತೂಹಲ ಮತ್ತೊಂದು ಆಯಾಮವನ್ನು   ಕೂಡಾ ತೋರಿತ್ತು. 


"ಹಲ್ಗೆ ಸಿದ್ಧನೂ, ಉರ್ಲಾಡಿ ಲಚ್ಚಿಯೂ" ಉಪ್ಪಿನ ಮಂಟಿಯಿದ್ದ ಅಕ್ಕ ಪಕ್ಕದ ಹಳ್ಳಿಯವರು. ಹಳ್ಳಿಯ ಪ್ರೇಮ ಕತೆಗೆ ಎಷ್ಟೆಲ್ಲಾ ತಿರುವುಗಳಿರಬಹುದು..

ಈ ಪುಸ್ತಕದಲ್ಲಿ ಮತ್ತೊಂದು ನವಿರಾದ ಆದರೆ ಇದಕ್ಕೆ ವೈರುಧ್ಯವೆನಿಸುವಂತಹಾ ಆದರೆ ಪ್ರೇಮವಲ್ಲದ ಪ್ರೇಮವೆನಿಸುವಂತಹಾ ಮತ್ತೊಂದು ಕತೆ "ಮಲೆಯಾಳಿ ಪಾರಿಜಾತ". ಪಾರಿಜಾತದ ಘಮಲಿನಷ್ಟೇ ನವಿರಾದ ಈ ಕತೆಯಲ್ಲಿ ಆ ಪ್ರೀತಿಯ ಆಯುಷ್ಯ ಪಾರಿಜಾತದಷ್ಟೇ ಇರಬಹುದಾ..?? ಓದಿ ನೋಡಿ.


"ಅಬ್ದುಲ್ಲಣ್ಣನ ಸಾಮಿಲ್ಲು" ಮಾಯವಾಗುವ ಸುದ್ದಿಯಿಂದ ಎಂದರೆ ಆ ಸಾಮಿಲ್ಲನ್ನು ಎತ್ತಿಕೊಂಡು ಹೋಗುವುದರಿಂದ ಶುರುವಾಗುವ ಈ ಕತೆ ಓದುತ್ತಾ ಹೋದಂತೆ ಸಾಮಿಲ್ಲು ಅದೆಷ್ಟು ರಹಸ್ಯಗಳನ್ನು ಅವಿತಿಸಿಕೊಂಡಿತ್ತು ಎನ್ನಿಸುವಷ್ಟರಲ್ಲೇ ಅಂತ್ಯದ ಊಹೆ ಮಾಡುತ್ತಿದ್ದೆ. ಆದರೆ, ಊಹಿಸಲಾರದಂತಹಾ ಅಂತ್ಯವಿತ್ತು ಈ ಕತೆಗೆ. ಓದುವಾಗ ಒಂದು ರೀತಿಯ ಪತ್ತೆದಾರಿಕೆ ನಮ್ಮೊಳಗೇ ಶುರುವಾದರೂ ಕೊನೆಯಲ್ಲಿ ನಮ್ಮ ಪತ್ತೆದಾರಿಕೆ ಫೇಲ್ ಆಗಬಹುದು. 


"ಕುರ್ಚಿ" ಕತೆ ಈ ಕಥಾ ಸಂಕಲನದ ಅತ್ಯಂತ ವಿಭಿನ್ನ ಕತೆ. ಅಣ್ಣ - ತಮ್ಮಂದಿರ ಪಾಲುದಾರಿಕೆಯಿಂದ ಶುರುವಾಗುವ ಈ ಕತೆಯಲ್ಲಿ ತಮ್ಮ ಎಲ್ಲವನ್ನೂ ಬಿಡಲು ಸಿದ್ಧನಾದರೂ ಕುರ್ಚಿಯ ಮೋಹವೊಂದನ್ನು ಬಿಡಲಾಗದೆ ಅದನ್ನು ತನ್ನ ಪಾಲಿಗೇ ಇಟ್ಟುಕೊಳ್ಳುತ್ತಾನೆ. ಆದರೆ, ನಂತರದಲ್ಲಿ ಆ ಕುರ್ಚಿ ನೀಡುವ ವಿಭಿನ್ನ ಅನುಭವಗಳು ಒಂದು ರೀತಿ ಮಾಯೆಯಲ್ಲಿ ಸುತ್ತಿಸಿದಂತೆ ಭಾಸವಾಗಿ, ಭೂತಕಾಲಕ್ಕೊಮ್ಮೆ ಟೈಮ್ ಟ್ರಾವೆಲ್ ಅನ್ನೂ ಮಾಡಿಸಿಬಿಡುತ್ತದೆ.

ಒಂದಲ್ಲಾ ಒಂದು ಕಾಲದ ಕೋಪ, ದ್ವೇಷಗಳೆಲ್ಲಾ ಅಳಿದು ಹೋದರೆ.. ಬಹುಶಃ ಹಾಗಾಗುವುದೇ ಅಂತ್ಯವಾದರೆ.. ಈ ಕತೆಯಲ್ಲಿ ಕುರ್ಚಿ ಬಂದಿತಾ.. ಕತೆಯೊಳಗೆ ಕುರ್ಚಿ ಇತ್ತಾ.. ಅಥವಾ ಕುರ್ಚಿಯಲ್ಲಿ ಈ ಕತೆ ಬಂಧಿಯಾಯಿತಾ.. ಒಂದು ಕುರ್ಚಿ ಏನೆಲ್ಲವನ್ನೂ ತೋರುತ್ತದೆ. ಈ ಕತೆ ಮೂಡಿಸಿದ ತಣ್ಣನೆಯ ಭಾವಗಳು ಒಳಗಿಳಿದು ಒಂದಷ್ಟು ಹೊತ್ತು ಸುಮ್ಮನಾಗಿಸಿದವು.


"ಇದೇ ಈಗ ಬಲು ಸಾಬಸ್ತನಂತೆ ಪೋಸು ಕೊಡುತ್ತಿರುವ ಕನ್ನಡ ಮೇಸ್ಟ್ರ ಹೆಬ್ಳೆ ಬೆಕ್ಕಿನಂತಹ ಗುಣವನ್ನು ಬಹಳ ಹತ್ತಿರದಿಂದ ಕಂಡಿದ್ದವಳು ನಾನಲ್ಲವೇ ?" ಎನ್ನುತ್ತಾ ಹಿಂದಿನದ್ದನ್ನು ನೆನಪಿಸಿಕೊಳ್ಳುವ ಸುನೀತ ಹೇಳುವುದು ಹೀಗೆ.

"ಮೊದಲೇ ಕನ್ನಡ ಮೇಷ್ಟ್ರು, ಪುಸ್ತಕದಲ್ಲಿ ಇದ್ದ ಚಂದದ ಪದ್ಯಗಳನ್ನೆಲ್ಲಾ, ಇವನಿಗೆ ಬೇಕಾದಂತೆ ತಿರುಚಿ, ತನ್ನ ಮನಸ್ಸಿನ ಕೊಳಕನ್ನೆಲ್ಲಾ ಅದ್ಹೇಗೋ ಹೋಲಿಕೆ ಮಾಡಿ ಹೇಳುತ್ತಿದ್ದ. ಇವನು ಈ ರೀತಿ ವರ್ಣಿಸುವಾಗ ಹೆಣ್ಣುಮಕ್ಕಳು ತಲೆತಗ್ಗಿಸಿ ಕೇಳುತ್ತಿದ್ದರೆ , ಅವರ ಕಡೆ ಅಸಹ್ಯವಾಗಿ ನೋಡಿ ನಗುತ್ತಿದ್ದ. ಹುಡುಗರು ಕಿಸಕಿಸನೆ ನಗುತ್ತಿದ್ದವು. ಪಠ್ಯಪುಸ್ತಕ ತೆಗಿರಿ ಅನ್ನೋದನ್ನ ಅಸಹ್ಯವಾಗಿ "ಎಲ್ರೂ ಬಿಚ್ಚಿ" ಅನ್ನೋನು. ಬೋರ್ಡ್ ಮೇಲೆ ಬರೆದದ್ದನ್ನು "ಅಳಿಸಲಾ ?" ಅನ್ನುವ ಬದಲು ಹುಡುಗಿಯರ ಕಡೆ ತಿರುಗಿ "ಕೆಡುಸ್ಲಾ" ಅನ್ನನು. " ಹೀಗೆ ಹೆಬ್ಳೆ ಬೆಕ್ಕಿನಂತಹಾ ಈತನ ಕುರಿತ ಕತೆ ಸಾಗುತ್ತದೆ.

ಈ ಕತೆಯಿಂದ ನನಗೂ ಒಂದು ಹೊಸ ರೂಪಕ ಸಿಕ್ಕಿತು. ಇಂತಹಾ ಜನರನ್ನು ಇನ್ನು ಇದೇ ಹೆಸರಲ್ಲಿ ಗುರುತಿಸಲು ತೀರ್ಮಾನಿಸಿದೆ. "ಹೆಬ್ಳೆ ಬೆಕ್ಕು" ಒಂದು ರೀತಿ ಧೈರ್ಯ , ದಿಟ್ಟತನ ಹುಟ್ಟಿಸುವ ಕತೆ ಎಂದರೆ ತಪ್ಪಾಗಲಾರದು.  


"ಉಳ್ಳಾವಳ್ಳಿ ಇಂದ್ರಾಣಿ"ಗೆ ನಾವು ತೋರಬಹುದಾದ ಭಾವ ಯಾವ ರೀತಿಯದ್ದಾಗಿರಬಹುದು ? ಆಯಾ ವಯಸ್ಸು ಒಂದಷ್ಟು ಭಾವಗಳಿಗೆ ಮಾತ್ರ ಮೀಸಲಾ ? ಪ್ರೀತಿ ಹುಟ್ಟಲು ಇರುವ ಮಾಪನವೇನು ? ಅಸಹನೆ, ಅಪಮಾನ, ಮುಗ್ಧತೆ, ಪ್ರೀತಿ, ಬಾಂಧವ್ಯ, ಬೆನ್ನ ಹಿಂದಿನ ಘಾತಕತನ ಎಲ್ಲವನ್ನೂ ಮೇಳೈಸಿದಂತಿದ್ದರೂ ಅದೆಲ್ಲವನ್ನೂ ಮೀರಿದ ಭಾವವೂ ಇದೆ ಇಲ್ಲಿ. "ನೀ ಮುಡಿದಾ ಮಲ್ಲಿಗೆ" ಕತೆಯಲ್ಲಿ ಹಣೆ ಬರಹಗಳು ಬದಲಾದ ಕಥೆಯಿದೆ. ಇದು ಬದಲಾದದ್ದಲ್ಲ.. ಬದಲಾಯಿಸಿಕೊಂಡದ್ದು. ಸರಿ - ತಪ್ಪುಗಳನ್ನು ನಿರ್ಧಾರ ಮಾಡಲು ಹೊರಟರೆ ಇಲ್ಲಿ ಅದಾಗದು ಎನ್ನಿಸುತ್ತದೆ. ಎರಡೂ ಕತೆಗಳನ್ನು ಪಕ್ಕಕ್ಕಿಟ್ಟು ನೋಡಿದರೆ ಒಂದೇ ನಾಣ್ಯದ ಎರಡು ಮುಖಗಳಂತೆ ಕಂಡವು. 


ಕೊರೋನಾ ಕಾಲದ ಕತೆಯಂತೆ ಕಂಡರೂ.. "ರಿಸರ್ವೇಷನ್" ನೋವುಗಳು ದಿಟ್ಟತನವಾಗಿ ಬದಲಾದಂತಹಾ, ಸಿಡಿದೆದ್ದು ನಿಲ್ಲುವ ಸ್ಥೈರ್ಯ ಕೊಟ್ಟಂತಹಾ ಕತೆ. ಇಂತಹಾ ಬದಲಾವಣೆಯಾದರೆ ಎಲ್ಲವೂ ಎಷ್ಟು ಸರಿಯಾದ ಹಾದಿಯಲ್ಲಿ ಸಾಗುತ್ತವೆ ಎನ್ನಿಸಿತು. 


ಹೂವಿಗಿಂತ ಮುಳ್ಳೇ ಅಭ್ಯಾಸವಾಗಿ ಹೋದವನ ಕತೆ "ಉಪ್ಪುಚ್ಚಿ ಮುಳ್ಳು". ಈ ಕಥಾ ಸಂಕಲನದ ಹೈಲೈಟೆಡ್ ಕತೆ. ಈ ಕತೆಯ ಕುರಿತು ಹೆಚ್ಚೇನೂ ಹೇಳಲಾರೆ. ಓದಿಯೇ ಈ ಮುಳ್ಳಿನ ರುಚಿ ಹತ್ತಿಸಿಕೊಳ್ಳಿ.


"ನೀಲಿ ಬಣ್ಣದ ದನಿ" ಶೀರ್ಷಿಕೆಗೆ ಒಪ್ಪುವಂತಹಾ ಕತೆ. ಕಲ್ಲು ದೇವಿಗೆ ಕಣ್ಣೀರಾಗಿದ್ದ ಜನ ನನ್ನ ಕಣ್ಣೀರನ್ನು ಒರಸೇ ಒರಸುತ್ತಾರೆ ಎಂಬ ಗಟ್ಟಿ ನಂಬಿಕೆಯಲ್ಲಿ ಧೈರ್ಯದಿಂದ ನಿಜ ಹೇಳಿದವಳಿಗೆ ಸಿಕ್ಕ ಪಟ್ಟವಾದರೂ ಯಾವುದು ? ಯಾರಿಂದ ? ಇಂತಹಾ ಕತೆಗೆ ನೂರು ಜನರ ಬಾಯಲ್ಲಿ ಸಾವಿರಾರು ಬಣ್ಣಗಳು. ಆದರೆ ಇದು ಒಂದೇ ಬಣ್ಣದಿಂದ ಮುಗಿದ ಕತೆ. ಮುಗಿಸಿದ್ದು "ನೀಲಿ"ಯೇ..


ಒಂದು ಓಣಿಯಲ್ಲಿ, ಏರಿಯಾದಲ್ಲಿ ಸಂಚರಿಸಿ ಬಂದರೆ ಸಿಕ್ಕುವ, ದಕ್ಕುವ, ಕಾಣುವ, ಕಾಣದ ಎಲ್ಲವೂ ಇಲ್ಲಿ ದಾಖಲಾಗಿದೆ. ಇಂತಹಾ ಎಲ್ಲವನ್ನೂ ಕುತೂಹಲಕಾರಿಯಾಗಿ ಕಟ್ಟಿಟ್ಟ ಕತೆಯೇ "ತಿಲಕ್ ನಗರ ಡೈರೀಸ್".


"ಗಂಗಾಮಾಳಕ್ಕ"ನ ಬದುಕು ಅದೇನೆಲ್ಲವನ್ನು ಕಂಡು ಅರಗಿಸಿಕೊಂಡುಬಿಟ್ಟಿತು. ಹುಟ್ಟಿದ ಮನೆಗೂ ಮೆಟ್ಟಿದ ಮನೆಗೂ ಇರುವ ಅಂತರಕ್ಕೆ ಹೊಂದಿಕೊಳ್ಳುವಷ್ಟರಲ್ಲೇ.. ಹೊಂದಾಣಿಕೆಯೇ ಬದುಕು ಎಂದುಕೊಳ್ಳುವಂತೆ ಮಾಡಿದ್ದಳು ತಂಗಿ. ತಂಗಿಯೇ ಸವತಿಯಾದಾಗ.. ಸಾಯಲು ಹೊರಟು ಮತ್ತೆ ಬದುಕಿನತ್ತ ಮುಖ ಮಾಡಿದ ಕತೆ. ಜೀವನ್ಮುಖಿಯ ಬದುಕಿನ ಕತೆ.


"ಕಾಮಣ್ಣನನ್ನು ಸುಡೋ ರಾತ್ರಿ" ಈ ಪುಸ್ತಕದಲ್ಲಿ ನನಗೆ ಬಹಳ ಇಷ್ಟವಾದ ಕತೆಗಳಲ್ಲೊಂದು. 

"ಲಕ್ಷ್ಮೀ ನಮ್ಮವ್ವಾ, ಕಷ್ಟ ಪಡಾಕೆ ಮತ್ತೆ ನನ್ ಮಡ್ಲಿಗೆ ಬಂದ್ಯೆನೇ" ಅನ್ನುತ್ತಾ, ಪಕ್ಕದಲ್ಲಿ ಮೊದಲೇ ಮಾಡಿಟ್ಟುಕೊಂಡಿದ್ದ ಸಕ್ಕರೆ ನೀರಿನಲ್ಲಿ ಒಂದೆರಡು ಹನಿಯನ್ನು ಬೆರಳದ್ದಿ ತೆಗೆದು ಮಗುವಿನ ಬಾಯಿಗೆ ಹನಿಕಿಸಿದಳು, ನೋವಿನಿಂದ "ಕಷ್ಟ ತಡ್ಕಳ ಸಕ್ತಿ ಬರಲಿ ನನ್ ಕೂಸೇ" ಅಂದ್ಲು.

ಮತ್ತೊಂದು ಜೀವನ್ಮುಖಿಯ ಕತೆ ಇದು.


"ಒಂದು ಪಯಣದ ಅಸ್ವಸ್ಥತೆ"ಯ ನಿಂಗತೋಡನ ಕುರಿತು ಹೇಳಿದಷ್ಟೂ ಕಡಿಮೆ. ನಿಂಗತೋಡನ ಜೀವನ ಹೇಗಿತ್ತು ನೀವೇ ಓದಿ ನೋಡಿ.


ನನಗೂ ಕೆಲವೊಮ್ಮೆ ಎನ್ನಿಸುವುದುಂಟು ಅಪರಿಚಿತರೇ ಎಷ್ಟೋ ಮೇಲು ಎಂದು. ಪರಿಚಿತರೇ ಬಹಳ ಡೇಂಜರ್ ಎನ್ನಿಸುವಾಗ ಅಪರಿಚಿತರು ಎಷ್ಟು ಸೇಫ್. ತಿಳಿಯಲು ಓದಿ "ಅಪರಿಚಿತವೆಂಬ ಸೇಫ್ ಝೋನಲ್ಲಿ". 


ಈ ಕಥೆಗಳು ಲೇಖಕಿಯದ್ದೇ ಇರಬಹುದಾ ಎನ್ನುವಷ್ಟು ಸಂದೇಹ ಹುಟ್ಟಿಸಿ ಓದಲು ಹಚ್ಚುತ್ತಿರುವಾಗಲೇ ಅದು ನಮ್ಮ ಕತೆಯೂ ಆಗಿದ್ದಿರಬಹುದಾ.. ನಮ್ಮ ಸುತ್ತಮುತ್ತಲಿನವರದ್ದೂ ಆಗಿರಬಹುದಾ.. ಎನ್ನಿಸತೊಡಗುತ್ತದೆ. ತಿಪಟೂರು ಸೀಮೆಯ ಕತೆಗಳಾದ್ದರಿಂದ ಕೊಂಚ ಆಪ್ತತೆ ಹೆಚ್ಚೇ ಇದೆ ಎನ್ನಿಸಿತು. ಗ್ರಾಮೀಣ ಕತೆಗಳು ಜೊತೆಗೆ ಸ್ತ್ರೀಯರೂ ಸೇರಿದರೆ ಸಿಗುವ ಆ ಕತೆಯ ಹೂರಣಕ್ಕೆ ಬೇರೆಯದ್ದೇ ಸೊಗಸು. ಅಂತಹಾ ಸೊಗಸಿನ ಪುಸ್ತಕವೇ ಉಪ್ಪುಚ್ಚಿ ಮುಳ್ಳು.


ಮುನ್ನುಡಿಯಲ್ಲಿ ಲೇಖಕಿ ಹೇಳುವ ಈ ಮಾತು ಒಂದು ರೀತಿಯ ಅಪ್ಯಾಯಮಾನವೆನ್ನಿಸಿತು. 

"ಮನೆಗೆ ಬಂದ ಹೊಸ ಕಿರಿ ಸೊಸೆಯು ಮೊದಲ ದಿನ ಅಡುಗೆ ಮಾಡಿ, ಬಡಿಸಿ, ಹೊಸ್ತಿಲ ಹಿಂದೆ ನಿಂತು ತನ್ನ ಮನೆಯವರ ಪ್ರತಿಕ್ರಿಯೆಗಾಗಿ ಕಾಯುತ್ತಾ ನಿಲ್ಲುತ್ತಾಳಲ್ಲ ಅದೇ ತರ ನಾನೀಗ ನಿಮ್ಮೆದುರು ನನ್ನ ಕಥೆಗಳನ್ನು ಇಟ್ಟು ನಿಂತಿರುವೆ" ಎನ್ನುತ್ತಾರೆ. ಮೊದಲ ದಿನದ ಅಡುಗೆ ಹದವಾಗಿ ಹಾಗೂ ರುಚಿಕಟ್ಟಾಗಿ ವಿಭಿನ್ನವಾಗಿ ಮೂಡಿದರೆ ಅದು ಪಳಗಿದ ಕೈ  ಎನ್ನಿಸುತ್ತದೆ. ಈ ಕಥೆಗಳನ್ನು ಓದಿದಾಗ ಅನ್ನಿಸಿದ್ದೂ ಹೀಗೆಯೇ..ಮತ್ತಷ್ಟು ಬರೆಯುತ್ತಿರಿ ಎನ್ನುವ ಹಾರೈಕೆ ನನ್ನದು. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ