ಪುಸ್ತಕದ ಶೀರ್ಷಿಕೆ : ಹೊಸ ಬಾಳು
ಲೇಖಕರು : ಕೃಷ್ಣಮೂರ್ತಿ ಪುರಾಣಿಕ
ಪ್ರಕಾಶಕರು : ಶಾಂತಿ ಸಾಹಿತ್ಯ ಮಾಲೆ, ಬಾದಾಮಿ
ಪ್ರಥಮ ಮುದ್ರಣ : 1952
ಕೃಷ್ಣಮೂರ್ತಿ ಪುರಾಣಿಕರು ಈ ಕಥಾವಸ್ತುವನ್ನು ಆಗಲೇ ಆಯ್ದುಕೊಂಡರೂ ಇದು ಈ ಕಾಲಕ್ಕೂ ಪ್ರಸ್ತುತ ಕಥಾವಸ್ತು ಎಂದೆನಿಸುತ್ತಿದೆ. ಆದರೆ, ಆಗಿನಷ್ಟು ಒಳ್ಳೆಯತನ, ಸದಾಚಾರ ಈಗ ಅಷ್ಟು ರೂಢಿಯಲಿಲ್ಲ ಎನ್ನಬಹುದೇನೋ..
ಕಾದಂಬರಿಯ ಪ್ರಾರಂಭದಲ್ಲಿ ಇದನ್ನು ಸಾಮಾಜಿಕ ಸರಸ ಕಾದಂಬರಿ ಎಂದಿದ್ದಾರೆ. ಸರಸ ಎಂಬುದಕ್ಕೆ ಶೃಂಗಾರದ ಅರ್ಥೈಸುವಿಕೆಯನ್ನು ನೀವು ತಿಳಿದುಕೊಂಡರೆ ಅದು ನಿಮ್ಮ ತಪ್ಪಾದೀತು. ವಿರಸವಿಲ್ಲದ ಹೊಂದಿಕೊಂಡು ಬಾಳುವಿಕೆ ಇಲ್ಲಿ ಎಲ್ಲೆಡೆಯೂ ಕಂಡು ಆದರ್ಶವಾಗುತ್ತದೆ.
ಕಾದಂಬರಿಯ ಶುರುವಿನಲ್ಲಿಯೇ ಓರಗಿತ್ತಿಯರ ಕಿತ್ತಾಟವಿದೆ. ತುಂಗಮ್ಮ ಕೊಂಚ ಜೋರು ಜಬರ್ದಸ್ತಿನಿಂದ ತಾರಾಳ ಜೊತೆಗೆ ನಡೆದುಕೊಳ್ಳುತ್ತಿರುತ್ತಾಳೆ. ಅಸಲಿಗೆ ತುಂಗಮ್ಮ ಮೊದಲು ಹೀಗಿರಲಿಲ್ಲ. ಆಕೆ ಅಚ್ಯುತರಾಯರನ್ನು ಮದುವೆಯಾಗಿ ಬಂದಾಗ ಮನೆಯವರನ್ನೆಲ್ಲಾ ಸ್ವಂತದವರಂತೆ ನೋಡಿಕೊಳ್ಳುತ್ತಿದ್ದಳು. ಅಚ್ಯುತರಾಯರ ತಾಯಿ ತೀರಿ ಹೋದಾಗಲೂ ಇರುವ ಒಬ್ಬ ಮೈದುನನನ್ನು ಸ್ವಂತ ಮಗನಂತೆ ನೋಡಿಕೊಳ್ಳುತ್ತೇನೆಂದು ಭರವಸೆ ಕೊಟ್ಟಿದ್ದಳು. ಹಾಗೆಯೇ ನೋಡಿಕೊಳ್ಳುತ್ತಿದ್ದಳು ಸಹಾ.
ಆಕೆಯ ಮೈದುನ ಅಂದರೆ ಅಚ್ಯುತರಾಯರ ಒಬ್ಬನೇ ತಮ್ಮ ವಿಶ್ವಾಸ ತಾನು ತೋರಿಸಿದ ತನ್ನ ನೆಂಟರ ಪೈಕಿಯ ಹುಡುಗಿ ಮನೋರಮಾಳನ್ನು ಮದುವೆಯಾಗದೇ ಪಕ್ಕದ ಮನೆಯ ಬಡವರ ಹುಡುಗಿ ತಾರಾಳನ್ನು ಮದುವೆಯಾದಾಗಿನಿಂದ ತಾತ್ಸಾರ, ದುಸುಮುಸು, ಅಸಹನೆ ಎಲ್ಲವೂ ಶುರುವಾಗಿತ್ತು. ಆಕೆಯಾದರೂ ಏನು ಮಾಡಿಯಾಳು.. ಬಡತನದ ಬವಣೆ ಅವಳಿಂದ ಹಾಗೆ ಮಾಡಿಸುತ್ತಿತ್ತು. ಆಕೆಗೆ ಕೃಷ್ಣ, ಸಾವಿತ್ರಿ, ಸುಮನಾ ಎಂಬ ಮೂರು ಮಕ್ಕಳು. ವಿಶ್ವಾಸ ಹಾಗೂ ತಾರಾಳಿಗೆ ಕಿರಣ ಹಾಗೂ ಉಷಾ ಎಂಬ ಇಬ್ಬರು ಮಕ್ಕಳು. ವಿಶ್ವಾಸ ನಾಡಿಗೇ ಹೆಸರಾಂತ ಕವಿ. ತಾರಾ ಅದನ್ನು ಮೆಚ್ಚಿ ಬಂದವಳು. ಆದರೆ, ಆ ಕಾವ್ಯ, ಕವಿತ್ವದಿಂದ ಆದಾಯವಿರಲಿಲ್ಲ. ಅದನ್ನು ಬಿಟ್ಟು ಬೇರೇನನ್ನೂ ಮಾಡುತ್ತಿರಲಿಲ್ಲ ವಿಶ್ವಾಸ. ಅಚ್ಯುತರಾಯರೂ ಎಷ್ಟೆಂದು ದುಡಿದಾರು..?? ಅಪ್ಪನ ಕಾಲದಲ್ಲಿದ್ದ ಆಸ್ತಿಯೆಲ್ಲಾ ಕರಗಿತ್ತು. ಮನೋರಮಾಳನ್ನು ಮದುವೆಯಾಗಿದ್ದರೆ ಕೊಂಚ ಸ್ಥಿತಿವಂತರಾದ ಅವರ ಕಡೆಯಿಂದಲಾದರೂ ಆದಾಯದ ಮೂಲವಿರುತ್ತಿತ್ತು. ಆದರೆ, ಅದೂ ಆಗಲಿಲ್ಲ.
ತಾರಾ ಸಾಧು ಸ್ವಭಾವದವಳು. ಹೊಂದಿಕೊಂಡು ಬಾಳುವ ಮನಸ್ಥಿತಿಯವಳು. ಆದರೂ, ಎಲ್ಲವನ್ನೂ ಎಷ್ಟು ದಿನ ಸಹಿಸಿಯಾಳು..?ಎಷ್ಟೇ ಬೇಸರವಾದರೂ ಗಂಡನ ಎದುರಲ್ಲಿ ತೋರಿಸುತ್ತಿರಲಿಲ್ಲ. ಆದರೆ, ವಿಶ್ವಾಸನಿಗೆ ಇದೆಲ್ಲವೂ ಚುಚ್ಚಿದಂತಾಗಿ ಆತ ತನ್ನ ಓದಿಗೆ ಒಂದು ಕೆಲಸ ಹುಡುಕಿಕೊಂಡ. ಗೋವಿನಪುರಕ್ಕೆ ಸಂಸಾರ ಸಮೇತ ಹೊರಟು ನಿಂತ. ತುಂಗವ್ವ ಈಗ ಕರಗಿದ್ದಳು. ಎಲ್ಲವನ್ನೂ ಹೊಂದಿಸಿಕೊಟ್ಟಳು. ತಾರಾಳ ಮನಸ್ಸಲ್ಲಿ ಯಾವ ಕಹಿಯೂ ಇರುತ್ತಿರಲಿಲ್ಲ. ಈಗ ತುಂಗವ್ವಳ ಮನದಲ್ಲಿಯೂ ಯಾವ ಕಹಿಯೂ ಉಳಿದಿರಲಿಲ್ಲ. ಅವರ ಈ ಅಗಲುವಿಕೆಯಿಂದ ಹೆಚ್ಚು ನೊಂದವಳು ಕೂಡಾ ಅವಳೇ..
ಅಲ್ಲಿಂದ ಅವರ ಹೊಸ ಬಾಳು ಶುರುವಾಯಿತು. ಗೋವಿನಪುರದ ಶಿಕ್ಷಕ ವೃತ್ತಿಯ ಆದಾಯ ಸಂತೃಪ್ತಿಯ ಜೀವನವನ್ನು ನಡೆಸಲು ಸಾಧ್ಯವಾಗುವಂತೆ ಮಾಡಿತು. ಆದರೆ, ಕಾವ್ಯದ ಅಮಲಿನಲ್ಲಿ ಮೈ ಮರೆಯುತ್ತಾ ಸಮಸ್ಯೆಗಳನ್ನು ತಾನೇ ಮೈ ಮೇಲೆ ಎಳೆದುಕೊಂಡ ವಿಶ್ವಾಸ. ತಾರಾ ಎಷ್ಟೇ ನಿಭಾಯಿಸಿದರೂ ಕೊನೆಗೆ ಅದು ಅಂತ್ಯವಾಗಿದ್ದು ಆತನನ್ನು ಶಿಕ್ಷಕ ವೃತ್ತಿಯಿಂದ ವಜಾ ಮಾಡಿದಾಗಲೇ.. ಈಗಲೂ ಕಾವ್ಯ, ಕವಿತ್ವ ಕೈ ಹಿಡಿಯಲಿಲ್ಲ. ತೀರಾ ಬಡತನದ ಸ್ಥಿತಿಗೆ ಬಂದು ಮತ್ತೆ ಅಚ್ಯುತರಾಯರೇ ಬಂದು ಕರೆದ ಸಂಧರ್ಭದಲ್ಲಿ ಹೊಸ ಆಶಾಕಿರಣವೊಂದು ಗೋಚರಿಸಿತ್ತು.
ಕವಿ ಸಮ್ಮೇಳನಕ್ಕೆ ಮುಖ್ಯ ಅತಿಥಿಯಾಗಿ ಕರೆ ಬಂದಾಗ ಹೋದ ವಿಶ್ವಾಸನ ಬಾಳು ಮತ್ತೊಂದು ತಿರುವು ಪಡೆಯಿತು. ಆತನ ಒಂದು ಕಾಲದ ಆಪ್ತ ಮಿತ್ರ ವೆಂಕಟೇಶ ಆತನಿಗೆ ತನ್ನಲ್ಲಿ ಕೆಲಸ ನೀಡಿದ್ದ. ಅದಕ್ಕೆ ಆಗ್ರಹಿಸಿದ್ದು ಆತನ ಪತ್ನಿ ಮನೋರಮಾ. ಹೌದು, ಇವಳು ಒಂದು ಕಾಲದಲ್ಲಿ ವಿಶ್ವಾಸ ಬೇಡವೆಂದಿದ್ದ ಮನೋರಮಾ.
ಇಲ್ಲಿಂದ ವಿಶ್ವಾಸ ಹಾಗೂ ತಾರಾ ಹೊಸ ಬದುಕನ್ನು ಪ್ರಾರಂಭಿಸಿದರು. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿತ್ತು. ಆದರೆ, ವಿಶ್ವಾಸನ ಕಾವ್ಯದ ಬದುಕು ಅಲ್ಲಿಗೇ ನಿಂತು ಹೋಗಿತ್ತು. ವೆಂಕಟೇಶನದ್ದು ಅವ್ಯವಹಾರ ಎಂದು ತಿಳಿದರೂ ಆತನ ಬಳಿ ಕೆಲಸಕ್ಕೆ ಸೇರಿದ್ದ ವಿಶ್ವಾಸ ಅದನ್ನು ಮುಂದುವರಿಸಿದನೇ..?? ತಾರಾಳ ಇಚ್ಛೆ ಏನಿತ್ತು ?? ವೆಂಕಟೇಶ ಎಂಥಹವನು ?? ತಾರಾ ಹಾಗೂ ಮನೋರಮೆಯರ ಒಡನಾಟ ಹೇಗಿತ್ತು ?? ಮನೋರಮೆ ವಿಶ್ವಾಸನನ್ನು ಅಲ್ಲಿಗೆ ಕರೆಸಿಕೊಂಡದ್ದರ ಹಿಂದಿನ ಮನಸ್ಥಿತಿಯಾದರೂ ಏನು ?? ಒಮ್ಮೆಲೆ ಬಡತನದಿಂದ ಸಿರಿತನಕ್ಕೆ ಬಂದಾಗ ಅವರ ಬಾಳಲ್ಲಿ ಆದ ಬದಲಾವಣೆಗಳೇನು ?? ಆ ಬದಲಾವಣೆ ತಾತ್ಕಾಲಿಕವಾ ಅಥವಾ ಶಾಶ್ವತವಾ ?? ಅವರೆಲ್ಲರ ಬದುಕಲ್ಲಿ ಜೀವಣ್ಣನ ಪಾತ್ರವೇನು ?? ಜೀವಣ್ಣ ಬರದಿದ್ದರೆ ಏನಾಗುತ್ತಿತ್ತು ??
ಇದನ್ನು ಹೊರತುಪಡಿಸಿ ಹೊಸ ಬಾಳು ಇದೆಯಾ ? ಅಥವಾ ಇದೇ ಇವರ ಹೊಸ ಬಾಳಿನ ಕತೆಯಾ ?
ಇದರಲ್ಲಿ ಚಿಕ್ಕ ಪಾತ್ರವಾದರೂ ನೀಲವ್ವನ ಪಾತ್ರವೂ ಮಮಾತಾಮಯಿಯಾಗಿ ಬಹಳ ಕಾಲ ಮನಸ್ಸಲ್ಲಿ ಉಳಿಯುವಂತಿದೆ. ಈ ನೀಲವ್ವ ಯಾರು..? ಎಲ್ಲವನ್ನೂ ತಿಳಿಯಲು ಓದಿ ಕೃಷ್ಣಮೂರ್ತಿ ಪುರಾಣಿಕರ "ಹೊಸ ಬಾಳು".
ಈ ಕಾದಂಬರಿ ಓದುವಾಗ ಈಗ ನಾವು ರೂಢಿಯಲ್ಲಿ ಬಳಸದ ಎಷ್ಟೋ ಪದಗಳು ಕಂಡವು. ಪದಗಳಿಗೆ ಅರ್ಥ ತಿಳಿದಿದ್ದರೂ ಬರಹದಲ್ಲಿ ಬಹಳ ಕಮ್ಮಿ ಬಳಸುವಂತಹಾ ಶಬ್ದಗಳು. ತುಂಬಾ ಸುಂದರ ಪದ ಪ್ರಯೋಗಗಳು ಇಷ್ಟವಾದವು. ನಾನು ಈ ಪುಸ್ತಕವನ್ನು ಓದಿದ್ದು ಡಿಜಿಟಲ್ ಆಗಿ. ಅಂದರೆ ಪಿ.ಡಿ.ಎಫ್ ರೂಪದಲ್ಲಿ. ಡಿಜಿಟಲ್ ಇಂಡಿಯಾ ಲೈಬ್ರರಿಯಲ್ಲಿ ಈ ಪುಸ್ತಕ ಲಭ್ಯವಿದೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ