ಸೋಮವಾರ, ಏಪ್ರಿಲ್ 6, 2026

ಆ ಮನಿ (ಪುಸ್ತಕ ಯಾನ - 7)



ಪುಸ್ತಕದ ಶೀರ್ಷಿಕೆ : ಆ ಮನಿ

ಲೇಖಕರು : ಕೀರ್ತಿನಾಥ ಕುರ್ತಕೋಟಿ

ಪ್ರಕಾಶಕರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಮರು ಮುದ್ರಣ :2011 

ಪುಟಗಳು : 108 

ಬೆಲೆ :40 ರೂ

'ಆ ಮನಿ' ನಾಟಕ ಬರೆದವರು ಶ್ರೀಯುತ ಕೀರ್ತಿನಾಥ ಕುರ್ತಕೋಟಿ. ಇದು ಸುಮಾರು 45 ವರ್ಷದ ಹಿಂದಿನ ನಾಟಕ. ಈ ನಾಟಕ ಹುಟ್ಟಿದಾಗ ಹೆಚ್ಚು ಪ್ರಚಲಿತದಲ್ಲಿದ್ದದ್ದು ಕೈಲಾಸಂ ಹಾಗೂ ಶ್ರೀರಂಗರ ನಾಟಕಗಳು. ವಿಡಂಬನೆಯಿಂದಲೇ ಸಮಾಜದ ಓರೆ-ಕೋರೆಗಳನ್ನು ತಿದ್ದುತ್ತಿದ್ದವರು ಅವರು. ಸಮಾಜದ ಅನೇಕ ಗಂಭೀರ ಸಮಸ್ಯೆಗಳನ್ನು ನಾಟಕದ ಮೂಲಕ ಪ್ರಸ್ತುತ ಪಡಿಸುತ್ತಿದ್ದವರು. ಈ ಕಾಲದಲ್ಲಿ ಆ ನಾಟಕಗಳಂತಿರದೇ ಇದು ವಿಭಿನ್ನ ಆಯಾಮವನ್ನು ಹಾಗೂ ವಿಭಿನ್ನ ವಿಷಯವನ್ನು ಪ್ರಸ್ತುತಪಡಿಸಿದ ನಾಟಕ. 


ಯಾವುದೇ ಮನೆಗಳ ಬಾಗಿಲು ಮುಚ್ಚಿದ್ದರೆ, ಅಥವಾ ಹಾಳು ಬಂಗಲೆ, ಪಾಳು ಬಿದ್ದ ಮನೆಗಳು ನಮ್ಮ ಆಸಕ್ತಿಗಳನ್ನು ಹೆಚ್ಚಿಸುತ್ತವೆ. ಇವುಗಳ ಸುತ್ತ ಅನೇಕ ಘಟನೆಗಳು ತಳುಕು ಹಾಕಿಕೊಂಡು ಪುಕಾರು ಹುಟ್ಟಿಸುತ್ತಿರುತ್ತವೆ. ಅಂತಹದ್ದೇ ಮನೆಯೊಂದರ ಕತೆ ಇದು.


ಶಾಲೆಯ ಬಳಿಯೇ ಇರುವ ಇಂತಹಾ ಮನೆಯ ಕತೆ ತೆರೆದುಕೊಳ್ಳುವುದು ಇಬ್ಬರು ಮುದುಕರಿಂದ. ಆ ಮನೆಗೆ ನೇಮಿಸದಿದ್ದರೂ ಕಾವಲುಗಾರನಂತೆ ವರ್ತಿಸುವ ಮುದುಕ ಅಲ್ಲಿಯೇ ಸಕ್ಕರೆ-ಗಿಣಿ ಮಾರುತ್ತಿರುತ್ತಾನೆ. ಅಲ್ಲಿಗೆ ಹಣ್ಣು ಮಾರಲು ಬರುವ ಹೆಂಗಸೊಬ್ಬಳು ಬಂದಾಗ ನಡುವೆ ನಡೆಯುವ ಮಾತುಕತೆ ಆ ಮುದುಕನ ಅನುಭವ ಕಥನದಂತೆ ಭಾಸವಾಗುತ್ತದೆ. ಆ ಮನೆಯ ಕತೆ ಹೇಳುತ್ತಲೇ ತನ್ನ ತಲೆಯ ಮೇಲಿರುವ 'ಪಟಕಾ'ದ ಕಥೆಯನ್ನೂ ಬಿಚ್ಚಿಡುವ ಮುದುಕ ಭೂತಕಾಲದ ದರ್ಶನ ಮಾಡಿಸುತ್ತಾನೆ. ಕಥನಾತ್ಮಕವಾಗಿ ರೂಪುಗೊಂಡಿದೆ ಈ ಭಾಗ. ಇದರಲ್ಲಿ ಹೆಚ್ಚಿನಂಶ ಸಾವಿನ ಸುದ್ದಿಯದ್ದೇ ಕಾರುಬಾರು. 


ಆಗಿನ ಸಾಂಕ್ರಾಮಿಕ ಖಾಯಿಲೆಗೆ ತುತ್ತಾಗಿ ಬಲಿಯಾಗುವ ಜನರಂತೆಯೇ ಇಲ್ಲಿಯ ಜನರೂ ಬಲಿಯಾಗಿದ್ದರೂ.. ಆ ಮನೆಯ ಬಾವಿಗೆ ಒಬ್ಬ ಹೆಣ್ಣು ಮಗಳು ಬಿದ್ದು ಸತ್ತಿರುತ್ತಾಳೆ. ಅವಳು ಮೋಹಿನಿಯಾಗಿ ಅಲ್ಲಿಯೇ ವಾಸವಾಗಿರುವಳು ಎಂಬುದನ್ನು ಸುತ್ತಮುತ್ತಲಿನವರು ಮಾತನಾಡಿಕೊಳ್ಳುತ್ತಾರೆ. 


ಆ ಹಣ್ಣು ಮಾರುವ ಹೆಂಗಸು ಸಹಾ ಸಾವನ್ನು ಕಂಡವಳೇ.. ತಾಯಿಯನ್ನು ಕಳೆದುಕೊಂಡಿದ್ದವಳು, ಇಬ್ಬರು ಗಂಡಂದಿರನ್ನೂ ಕಳೆದುಕೊಂಡಿದ್ದವಳು. ಸಾವನ್ನು ಕಂಡಿದ್ದರೂ ಅವಳಿಗೆ ಈ ಮುದುಕ ಹೇಳುವುದು ಭಯಾನಕವಾಗಿಯೇ ಅನ್ನಿಸುತ್ತಿರುತ್ತದೆ. 


ನಾಟಕದ ಮೊದಲಿನ ಅರ್ಧ ಹೀಗಿದ್ದರೆ ಮುಂದಿನ ಅರ್ಧ ಮಕ್ಕಳ ಸಾಮ್ರಾಜ್ಯದಂತೆ ಕಾಣುತ್ತದೆ. ಇಲ್ಲಿನ ಮಾತುಗಳು ಅನುಭವದಂತೆ ಭಾಸವಾದರೆ, ಮಕ್ಕಳದ್ದು ಲವಲವಿಕೆಯಿಂದ ಕೂಡಿದೆ. ಶನಿವಾರ ಶಾಲೆ ಬಿಟ್ಟ ನಂತರ ಆಟ ಆಡಲು ಬರುವ ಮಕ್ಕಳು ಆಯ್ದುಕೊಳ್ಳುವುದು ಆ ಮನೆಯನ್ನೇ.. ಮಕ್ಕಳಿಗೆ ಯಾರ ಭಯವೂ ಇರುವುದಿಲ್ಲವಲ್ಲಾ..


ಕಾಶಿ ಇಲ್ಲಿ ಹೆಣ್ಣುಮಕ್ಕಳಿಗೆಲ್ಲಾ ಮುಖ್ಯಸ್ಥೆಯಂತೆ ಕಂಡರೆ ಗಂಗೂ ನಾಯಕಿಯಂತೆ ಕಂಡುಬರುತ್ತಾಳೆ. ಕಿಟ್ಟಿ ನಾಯಕನಂತಿದ್ದರೆ, ರಂಗ ಖಳನಾಯಕನಂತೆ ಕಾಣುತ್ತಾನೆ. ದೊಡ್ಡವರು ಬದುಕುವಂತೆ ಆಟ ಮಾಡಲು ಶುರು ಮಾಡುವ ಮಕ್ಕಳುಗಳೆಲ್ಲಾ ಮೊದಲಿಗೆ ಮದುವೆಯ ಪ್ರಕ್ರಿಯೆಯಿಂದ ಶುರು ಮಾಡುತ್ತಾರೆ. ಆದರೆ, ಆಟ ಮುಗಿದರೂ ತನ್ಮಯತೆಯಿಂದ ಕೆಲವು ಪಾತ್ರಗಳು ಆಟವನ್ನು ಮುಂದುವರಿಸುತ್ತಲೇ ಹೋಗುತ್ತಾರೆ. ಅದಕ್ಕೆ ಸಿಕ್ಕಿಕೊಳ್ಳುವುದು ಆಟದಲ್ಲಿ ಮದುವೆಯಾಗಿದ್ದ ಜೋಡಿ ಕಿಟ್ಟಿ - ಗಂಗೂ.


ಆಟ ಮುಗಿಯಬೇಕೆಂದು ಬಚ್ಚಿಟ್ಟುಕೊಳ್ಳುವ ಕಿಟ್ಟಿ ಹಾಗೂ ಗಂಗುವನ್ನು ಹುಡುಕಲಾರದೆ ಎಲ್ಲರೂ ಮನೆಗೆ ತೆರಳುತ್ತಾರೆ. ಆಗ ಅದಾಗಲೇ ಬೆಳದಿಂಗಳು ಮೂಡಿರುತ್ತದೆ. ಕೊನೆಗೆ , ಎಲ್ಲರೂ ಹೋದ ನಂತರವೂ ಇಬ್ಬರೂ ಇನ್ನೂ ಕುಳಿತಿದ್ದಾಗ ಆಟ ಮುಗಿಯಿತು ಎಂದು ಕಿಟ್ಟಿ ಹೇಳಿದರೂ ಗಂಗೂ ಇನ್ನೂ ಇಲ್ಲ ಎನ್ನುತ್ತಾಳೆ. ಇನ್ನೂ ಸಾವಿನ ಆಟ ಬಾಕಿ ಇದೆ ಎನ್ನುತ್ತಾಳೆ. ಕಾರಣ, ಅದೇ ಮನೆಯ ಬಾವಿಗೆ ಬಿದ್ದಿದ್ದವಳು ಆಕೆಯ ತಾಯಿಯೇ.. ಕೊನೆಗೆ , ಕಿಟ್ಟಿ ಅವಳನ್ನು ಬೇರೆ ವಿಷಯ ಹಿಡಿದು ಮಾತನಾಡಿಸುತ್ತಾ ವಿಷಯಾಂತರ ಮಾಡುತ್ತಾನೆ. ಇದಾದ ನಂತರವೂ ಕತೆ ಮುಂದುವರಿಯುತ್ತದೆ. ಅವರಿಬ್ಬರೂ ಅಲ್ಲಿಂದ ಹೊರ ಬಂದರಾ..?? ಮನೆಯಲ್ಲಿ ಮೋಹಿನಿ ಇತ್ತಾ..??


ಕೊನೆ ಒಂದು ರೀತಿ ಓಪನ್ ಎಂಡೆಡ್. ನಾಟಕದ ಕೊನೆಯ ಭಾಗ ನನಗೆ ತುಂಬಾ ಇಷ್ಟವಾಯಿತು.


ಇನ್ನೊಂದು ಕುತೂಹಲಕಾರಿ ವಿಷಯವನ್ನು ಹೇಳುತ್ತೇನೆ. ಈ ವಿಚಾರವನ್ನು ಪುಸ್ತಕದ ಹಿನ್ನುಡಿಯಲ್ಲಿ ಹಂಚಿಕೊಳ್ಳಲಾಗಿದೆ. ನಾಟಕ ಬರೆದರೂ ಅದನ್ನು ರಂಗದ ಮೇಲೆ ತರುವುದು ಮತ್ತೊಂದು ಸವಾಲು ಎಂದರೂ ತಪ್ಪಾಗಲಾರದು. 


ಈ 'ಆ ಮನಿ' ನಾಟಕ ದಿಲ್ಲಿಯ ದೂರದರ್ಶನದಲ್ಲಿ ಹಿಂದಿಯಲ್ಲಿ ಬಿತ್ತರವಾಗಿತ್ತು. ಅದನ್ನು ನಿರ್ದೇಶಿಸಿದ್ದವರು ಗಿರೀಶ್ ಕಾರ್ನಾಡ್. ಕಿಟ್ಟಿ - ಗಂಗೂವಿಗೆ ಸಾವಿನ ವಿಚಾರದಿಂದ ವಿಷಯಾಂತರಗೊಳಿಸಲು ಕತೆ ಹೇಳುವ ಬದಲಾಗಿ ದೃಶ್ಯ ರೂಪಕವೊಂದನ್ನು ತೆರೆಯ ಮೇಲೆ ತರುತ್ತಾರೆ. ಗಂಗೂ ಹಾಗೂ ಕಿಟ್ಟಿಯ ಎದುರಿನ ಗೋಡೆಯ ಮೇಲೆ ನವಿಲು ಗರಿಬಿಚ್ಚಿ ಕುಣಿಯತೊಡಗುತ್ತದೆ. ಆ ನವಿಲನ್ನೇ ನೋಡುತ್ತಾ ತನ್ಮಯರಾಗಿ ಇಬ್ಬರೂ ತಲೆಯಲ್ಲಿನ ವಿಚಾರವನ್ನು ಮರೆತು ನಿದ್ರಿಸತೊಡಗುತ್ತಾರೆ.


ಒಂದು ದೃಶ್ಯ ಪ್ರತಿಮೆ ಎಷ್ಟೆಲ್ಲವನ್ನೂ ಕಟ್ಟಿಕೊಡಬಲ್ಲದು ಅಲ್ಲವಾ.. ನಾಟಕ ಬರೆಯುವುದು ಒಂದು ಸವಾಲು.. ಅದನ್ನು ರಂಗದ ಮೇಲೆ ತರುವುದು ಮತ್ತೊಂದು ಸವಾಲು. ಅಲ್ಲಿ ಧ್ವನಿ, ಭಾವ, ನಟನೆ, ಬೆಳಕು ಎಲ್ಲವೂ ಬೇಕು. ಈ 'ಆ ಮನಿ' ಓದುತ್ತಲೇ ಅದೆಲ್ಲವನ್ನೂ ಕಲ್ಪಿಸಿಕೊಳ್ಳುವಷ್ಟು ಶಕ್ತವಾಗಿ ರೂಪಿತವಾಗಿದೆ. 


40 ರೂ ಬೆಲೆಯ 108 ಪುಟಗಳ ಈ ಪುಸ್ತಕವನ್ನು 2011 ರಲ್ಲಿ 'ವಿಶ್ವಕನ್ನಡ ಸಮ್ಮೇಳನ ಸಾಹಿತ್ಯಮಾಲೆ' ಅಡಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಿಸಿದೆ. 'ಕಣಜ'ದಲ್ಲಿ ಉಚಿತ ಈ-ಬುಕ್ ಆಗಿಯೂ ಲಭ್ಯವಿದೆ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ