ಪುಸ್ತಕದ ಶೀರ್ಷಿಕೆ : ಇಜಯಾ
ಲೇಖಕರು : ಪೂರ್ಣಿಮಾ ಮಾಳಗಿಮನಿ
ಪ್ರಕಾಶಕರು : ಗೋಮಿನಿ ಪ್ರಕಾಶನ
ಇಜಯಾ ಕಾದಂಬರಿಯ ಲೇಖಕಿ ಪೂರ್ಣಿಮಾ ಮಾಳಗಿಮನಿ. ಈ ವರ್ಷದಲ್ಲಿ ನಾನು ಓದಿದ ಕಾದಂಬರಿಗಳಲ್ಲಿ ವಿಶಿಷ್ಟ ಛಾಪು ಮೂಡಿಸಿ ಕಾಡಿದ ಕಾದಂಬರಿ ಇಜಯಾ.
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವ ಮನಸ್ಸಿನ ಕಥನ. ಇದು ಕೇವಲ ಹೆಣ್ಣು ಮಾತ್ರವಲ್ಲ ಗಂಡಿನದ್ದೂ ಆಗಬಹುದಾದ ಕಥನ. ಇಲ್ಲಿ ಇಜಯಾ ಕೇವಲ ಸಾಂಕೇತಿಕ ಪಾತ್ರ ಅಷ್ಟೇ. ವಿ ಬಿಟ್ಟುಹೋಗಿರಬಹುದಾ ಅಥವಾ ಅವಳ ಹೆಸರಿನ ಪ್ರೀತಿಪೂರ್ವಕ ರೂಪದ ಹೆಸರೇ ಅಥವಾ ಅಡ್ಡ ಹೆಸರಿರಬಹುದೇ 'ಇಜಯಾ' ಎನ್ನುವ ಹೆಸರು ಎಂದು ಯೋಚಿಸಲು ಶುರು ಮಾಡಿಯೇ ಈ ಪುಸ್ತಕವನ್ನು ಶುರು ಮಾಡಿದ್ದು. ಆದರೆ, ಇಜಯಾ ಎಂಬುದೇ ಅವಳ ಹೆಸರು ಎಂದಾದಾಗ ವಿಭಿನ್ನ ಆಲೋಚನೆಯಲ್ಲಿ ಇಟ್ಟ ಹೆಸರು ಎನ್ನಿಸಿತು.
ಮಧ್ಯಮ ವರ್ಗದ ಕುಟುಂಬದ ಹೆಣ್ಣು ಮಗಳಾದ ಇಜಯಾಳ ಕತೆ ನಮ್ಮ ನಿಮ್ಮದೂ ಆಗಬಹುದು. ಆದರೆ, ಕೊನೆಯಲ್ಲಿ ಕಟ್ಟಿಕೊಟ್ಟ ಪ್ಯಾರಾ ಸೇಲಿಂಗ್, ರಾಫ್ಟಿಂಗ್ ನಂತಹಾ ಘಟನೆಗಳು ಯುನಿಕ್ ಎನ್ನಿಸಿದ್ದಂತೂ ಹೌದು. ಕುಟುಂಬದ ಅನಿವಾರ್ಯತೆಯ ಆಸರೆ ನಮ್ಮಿಂದ ಎಂಬ ಭ್ರಮೆ ಕಳಚುವ ಎಷ್ಟೋ ವಾಸ್ತವದ ಘಟನೆಗಳು ಆಗಾಗ ನಡೆಯುತ್ತಲೇ ಇದ್ದರೂ ಕುಟುಂಬದ ಮೂಲ ಆಸರೆಗೆ ನಾವೇ ಇರಬೇಕು ಎನ್ನುವ ಭ್ರಮೆ ಕಳಚಿಟ್ಟು ಕನಸನ್ನು ಹುಡುಕಿ ಹೊರಟರೆ ಏನಾಗಬಹುದು..?? ಅದರಲ್ಲೂ ಮಧ್ಯವಯಸ್ಸಿನ ಹೆಣ್ಣು ತನ್ನ ಆಸೆಗಳ ಬೆನ್ನು ಹತ್ತುವುದು ತಪ್ಪೇ..?? ತಮ್ಮ ಆಸೆಗಳಿಗಿಂತ ಮಕ್ಕಳ ಆಸೆಗಳಿಗೆ ಬೆಲೆ ಕೊಡಬೇಕೆ..?ನಮ್ಮ ಆಸೆಗಳನ್ನು ಕೊಂದು ಜೀವಂತವಾಗಿ ಬದುಕಬೇಕೇ..??
ಹಾಗೆ ಬದುಕುತ್ತಿರುವವರಿಗೂ, ಆಸೆಗಳನ್ನು ಜೀವಂತವಾಗಿಟ್ಟುಕೊಂಡಿರುವವರಿಗೂ, ಅವೆರಡರ ನಡುವೆ ಸಮತೋಲನ ಕಾಪಾಡಿಕೊಂಡು ಬದುಕುತ್ತಿರುವವರಿಗೂ ಇದು ವಿಭಿನ್ನವಾದ ಕತೆ ಎನ್ನಿಸುತ್ತದೆ.
ಮನಸ್ಸು ಸೃಜನಶೀಲವಾಗಿದ್ದಷ್ಟು ಸಾಧನೆಯ ಹಾದಿಯಲ್ಲಿ ಇಳಿದು ಬಿಡುತ್ತೇವೆ. ಸಂಸಾರದ ಜಂಜಾಟದಲ್ಲಿ ಮುಳುಗಿದ್ದಾಗಲೆಲ್ಲಾ ಈ ತಾಪತ್ರಯಗಳು ಮುಗಿದು ನೆಮ್ಮದಿ ಸಿಕ್ಕರೆ ಸಾಕಪ್ಪಾ ಎಂದು ಹಳಹಳಿಸುತ್ತಿರುವಾಗಲೇ ಸಂಸಾರವೇ ಇಲ್ಲದೆ ಬಯಲಲ್ಲಿ ಬಿಟ್ಟಾಗ ಏನನ್ನಿಸಬಹುದು..?? ಮನೆಯಲ್ಲಿ ನೆಮ್ಮದಿಯಾಗಿ ಕೂತು ಕೆಲಸ ಮಾಡುವಂತಾದರೆ ಎಂದಾಗಲೇ ಲಾಕ್ ಡೌನ್ ಆದರೆ..?? ನಿರೀಕ್ಷೆ ಮಾಡದಿರುವ ಆ ರೀತಿಯ ಆಸೆ ಒಂದು ರೀತಿಯ ವರದಾನವಾದರೆ ಕೆಲ ಸಮಯದ ನಂತರ ಎಂದಿನ ಹಾಗೆ ಬದುಕು ಸಾಗಿ ಬಿಡಲಿ ಎಂದು ಆಶಿಸುವುದು ಸಹಾ ತಪ್ಪುವುದಿಲ್ಲ. ಮನಸ್ಸು ಹಾಗೆಯೇ ಹರಿಯ ಬಿಟ್ಟದ್ದರ ಆಚೆಗೂ ಕೈ ಚಾಚಬೇಕೆಂದು ಹವಣಿಸಿ ಸಿಕ್ಕ ಮರುಕ್ಷಣವೇ ಬಿಸುಟಿ ಕೈ ಬೀಸಿಕೊಂಡು ನಡೆವಂತೆ..
Life goes on with or without you ಎನ್ನುವ ಕಹಿ ಸತ್ಯವನ್ನು ಅರಗಿಸಿಕೊಂಡ ಕೆಲವರು ಬದುಕಿದರೆ ಕೆಲವರು ಅದೇ ಆಲೋಚನೆಯಲ್ಲಿ ಕೊರಗಿ ಕಣ್ಣುಮುಚ್ಚುತ್ತಾರೆ. ಅಂತಹ ವೈರುಧ್ಯ ಮನಸ್ಥಿತಿಗಳ ಜೊತೆಗೆ ಇದು ಕನಸಾಗಿರಲಿ ಅಥವಾ ಭ್ರಮೆಯಾಗಿರಲಿ ಎಂದು ಆಶಿಸುವಂತೆ ಮಾಡುತ್ತಲೇ ದಟ್ಟ ಅನುಭವ ಹಾಗೂ ನೈಜತೆಯ ಕಥೆಯಾಗಿಸಿಬಿಡುತ್ತಾರೆ. ಹೆಣ್ಣು ಮನಸ್ಸುಗಳ ಗೊಂದಲದ ಗುದ್ದಾಟಗಳಿಗೆ ಉತ್ತರವಾಗಬಲ್ಲ ಕಥನ ಇದು. ಮಾನಸಿಕವಾಗಿ ಮುಳುಗಿ ಹೋಗದೆ ಕನಸಿನ ದಾರಿಯಲ್ಲಿ ನಡೆದರೆ ಈ ರೀತಿಯ ಒಳಗುದಿಗಳಿಂದ ಪಾರಾಗಬಹುದೇ..??
ಇಜಯಾ, ಸುಧೀ, ಅವ್ನಿ, ಶರ್ವಾರೀ, ಅತ್ತೆ ಮಾವ, ಅಪ್ಪ, ವೆಂಕಟ್, ಬಸಪ್ಪ, ಮಂಜ, ಮಾಲಿನಿ ಮುಂತಾದವರಿಂದ ಕೂಡಿದ ಈ ಪುಸ್ತಕ ಗೋಮಿನಿ ಪ್ರಕಾಶನದ ಪ್ರಕಟಣೆ.
ಇಜಯಾ ಆಳಕ್ಕಿಳಿದು ಕಾಡಿದ್ದು ಸುಳ್ಳಲ್ಲ. ಮತ್ತೊಮ್ಮೆ ಓದಬೇಕೆನಿಸುವ ನನ್ನ ಆಯ್ಕೆಯ ಕೆಲವೇ ಪುಸ್ತಕಗಳಲ್ಲಿ ಇದೂ ಒಂದು. ಏಳು ತಿಂಗಳಲ್ಲಿ ಮೂರು ಬಾರಿ ತಿರುವಿ ಆಗಿದೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ