ಪುಸ್ತಕದ ಹೆಸರು : ವಾಡಿವಾಸಲ್
ಮೂಲ ಕೃತಿ : ಚಿ.ಸು ಚೆಲ್ಲಪ್ಪನವರ ತಮಿಳಿನ ಕ್ಲಾಸಿಕ್ ಕಾದಂಬರಿ
ಕನ್ನಡ ಅನುವಾದ : ಸತ್ಯಕಿ
ಮೊದಲ ಮುದ್ರಣ : 2021
ಪ್ರಕಾಶಕರು : ಛಂದ ಪ್ರಕಾಶನ
ಪುಟಗಳು : 96
ಬೆಲೆ : 70 ರೂ
'ವಾಡಿವಾಸಲ್' ಎನ್ನುವುದು ಯಾವುದಕ್ಕೆ ಸಂಬಂಧಪಟ್ಟ ಪದ ಆಗಿರಬಹುದು ಎಂದು ಯೋಚಿಸುತ್ತಿದ್ದೀರಾ..??
'ಜಲ್ಲಿಕಟ್ಟು' ಎನ್ನುವ ಪದ ಕೇಳಿರುತ್ತೀರಿ. ಹೌದು, ಜಲ್ಲಿಕಟ್ಟು ತಮಿಳುನಾಡಿನ ಪ್ರಮುಖ ಸಾಹಸ ಕ್ರೀಡೆ. ಮೊದಲೆಲ್ಲಾ ಈ ಕ್ರೀಡೆಗೆ 'ಏರು ತಲುವುದಲ್' ಎಂಬ ಪದ ಬಳಸುತ್ತಿದ್ದರಂತೆ. 'ಏರು' ಎಂದರೆ ಗೂಳಿ ಅಥವಾ ಎತ್ತು ಎಂಬ ಅರ್ಥವಿದೆ. ಈ ಕ್ರೀಡೆ ನೆನ್ನೆ ಮೊನ್ನೆ ಹುಟ್ಟಿಕೊಂಡದ್ದಲ್ಲ. ಸುಮಾರು ವರ್ಷಗಳ ಇತಿಹಾಸ ಹೊಂದಿದೆ. ಪ್ರಾಚೀನ ತಮಿಳು ಸಾಹಿತ್ಯವಾದ 'ಕಲಿತ್ತೊಗೈ'ನಲ್ಲಿ ಆಯರ್ ಗಳು ಬಾಳುವ ಮುಲ್ಲೈ ನೆಲದಲ್ಲಿ ನಡೆಯುವ ಜಲ್ಲಿಕಟ್ಟಿನ ಕುರಿತು ಸಾಕಷ್ಟು ವರ್ಣಿಸಲಾಗಿದೆ.
ಇದು ಚಿ.ಸು. ಚೆಲ್ಲಪ್ಪ ಅವರು ಜಲ್ಲಿಕಟ್ಟು ಕುರಿತು 1959 ರಲ್ಲಿ ಬರೆದ ತಮಿಳಿನ ಕ್ಲಾಸಿಕ್ ಕಾದಂಬರಿಯ ಕನ್ನಡ ಅನುವಾದ. ಇದು ಜಲ್ಲಿಕಟ್ಟು ಕುರಿತ ಮೊದಲ ಕೃತಿ ಎಂದರೂ ತಪ್ಪಾಗಲಾರದು. ತಮಿಳಿನ ಖ್ಯಾತ ಚಿತ್ರಕಾರರಾದ ಕೆ. ಎಂ. ಆದಿಮೂಲನ್ ಅವರು ತಮಿಳಿನ ಪುಸ್ತಕಕ್ಕೆ ರೇಖಾ ಚಿತ್ರಗಳನ್ನು ರಚಿಸಿದ್ದವರು. ಅಂತಹಾ ಅಪರೂಪದ ರೇಖಾಚಿತ್ರಗಳು ಯಥಾವತ್ತಾಗಿ ನಮಗೆ ಈ ಅನುವಾದಿತ ಪುಸ್ತಕದಲ್ಲಿಯೂ ಕಾಣಸಿಗುತ್ತವೆ.
ಈ ಪುಸ್ತಕದ ಕನ್ನಡ ಅನುವಾದಕಾರರು ಸತ್ಯಕಿ ಅವರು. ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಿದ್ದರೂ ಸಿನಿಮಾ ಹಾಗೂ ಟಿ.ವಿ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. 'ಜೊತೆ ಜೊತೆಯಲಿ' ಧಾರಾವಾಹಿಯ ಸಂಭಾಷಣೆಕಾರರಾಗಿ ಇವರು ಹಲವರಿಗೆ ಪರಿಚಿತರು. ಮೊದಲನೆಯದ್ದು 'ಯುಗೇ ಯುಗೇ' ಕಥಾ ಸಂಕಲನವಾದರೆ ಎರಡನೆಯದ್ದು ಅಪರೂಪದ ಅನುವಾದ 'ವಾಡಿವಾಸಲ್'.
'ಕಲಿತ್ತೊಗೈ' ಪ್ರಕಾರ 'ಏರು ತಳುವುದಲ್ ' ಮೊದಲಿಗೆ ಸರ್ವೇ ಸಾಮಾನ್ಯ ಕ್ರೀಡೆಯಾಗಿದ್ದು ಮೋಜಿನ ಉದ್ದೇಶದಿಂದ ಶುರುವಾಗಿದ್ದರೂ ನಂತರ ಸಾಕಷ್ಟು ರೂಪ ತಳೆದಿದೆ. ಬುಡಕಟ್ಟು ಸೊಗಡನ್ನು ಬಿಂಬಿಸುತ್ತಿದ್ದ ಈ ಕ್ರೀಡೆ ಕಾಲಾಂತರದಲ್ಲಿ ಅತೀವ ಸಂಭ್ರಮ, ಮದ್ಯಪಾನದ ಅಮಲು ಹಾಗೂ ವಿಜಯದ ಕುಣಿತಗಳಿಂದ ಮುಕ್ತಾಯಗೊಳ್ಳುತ್ತಿತ್ತಂತೆ.
'ಮುಲ್ಲೈ ಕಲಿ' ಕೃತಿಯಲ್ಲಿ ಜಲ್ಲಿಕಟ್ಟನ್ನು ಯುದ್ಧಭೂಮಿಗೆ ಸಮನಾಗಿ ವರ್ಣಿಸಲಾಗಿದೆ. ರಾಜಮ್ ಅಯ್ಯರ್ ಅವರ 'ಕಮಲಂಬಾಳ್ ಸರಿತ್ತಿರಮ್' ನಲ್ಲಿ ವಿವರಿಸಿದಂತೆ ಅದು ಬರೀ ಸಾಹಸ ಕ್ರೀಡೆಯಾಗಿ ಉಳಿದಿರುವುದಿಲ್ಲ.. ಬದಲಿಗೆ ಮೃಗ ಮತ್ತು ಮನುಷ್ಯನಿಗೆ ಕ್ರೀಡೆಯಾಗುವ ಬದಲು ಮನುಷ್ಯ ಮತ್ತು ಮನುಷ್ಯನಿಗೆ ಮಧ್ಯೆ ಹಿಟ್ಟಿಕೊಳ್ಳುವ ರಾಜಕೀಯ ಮತ್ತು ದರ್ಪಗಳ ದಳ್ಳುರಿಯಾಗುತ್ತದೆ. ಸೋತ ವ್ಯಕ್ತಿಯಂತೂ ಆ ಗೂಳಿಗೆ ಜೀವಂತವಾಗಿಯೇ ಅದರ ಚರ್ಮ ಸುಲಿಯಲು ಆಜ್ಞೆ ನೀಡುತ್ತಾನೆ.
ಕು.ಪ. ರಾಜಗೋಪಾಲರ 'ವೀರಮ್ಮಾಳ್ ಕಾಲೈ' ಎಂಬ ಸಣ್ಣ ಕತೆಯಲ್ಲಿ ಈ ಕ್ರೀಡೆಯಲ್ಲಿ ಗೆದ್ದವನು ಆ ಮನೆಯ ಹೆಣ್ಣು ಮಗಳನ್ನು ಮದುವೆಯಾಗುವ ಅರ್ಹತೆ ಪಡೆಯುತ್ತಾನೆ.. ಇದು ಒಂದು ರೀತಿಯ ಸ್ವಯಂವರ ಎಂದರೂ ತಪ್ಪಾಗಲಾರದು.
ಆದರೆ, ವಾಡಿವಾಸಲ್ ಈ ಎಲ್ಲಾ ಕತೆಗಳಿಗಿಂತ ವಿಭಿನ್ನ. 96 ಪುಟಗಳ ಈ ಪುಸ್ತಕದಲ್ಲಿ ವಿವರಿಸುವ ಪರಿ ಹೇಗಿದೆ ಎಂದರೆ ಎಲ್ಲವೂ ಕಣ್ಣ ಮುಂದೆ ಬಂದಂತಾಗುತ್ತದೆ. ಈ ಕ್ರೀಡೆ ದಕ್ಷಿಣ ಕನ್ನಡ ಭಾಗದಲ್ಲಿ ಪರಿಚಿತವಿರುವ 'ಕೋಳಿ ಅಂಕ'ಕ್ಕೆ ಸಮೀಪವೆಂದು ಕಂಡು ಬಂದರೂ ಇದು ವಿಭಿನ್ನವೇ.. ಇಲ್ಲಿ ಮೃಗ ಮತ್ತು ಮೃಗಗಳ ನಡುವೆಯೋ ಅಥವಾ ಮನುಷ್ಯ ಮತ್ತು ಮನುಷ್ಯರ ಮಧ್ಯೆಯೋ ಕಾಳಗ ನಡೆಯುವುದಿಲ್ಲ. ಇಲ್ಲಿ ಯುದ್ಧ ನಡೆಯುವುದು ಮೃಗ ಮತ್ತು ಮನುಷ್ಯನ ನಡುವೆ.. ಸಮಬಲದವರಲ್ಲದವರ ನಡುವಲ್ಲಿ. ಮನುಷ್ಯ ಹಾಗೂ ಮೃಗಕ್ಕೆ ಬುದ್ಧಿಮತ್ತೆಯಲ್ಲಿ ವಿಭಿನ್ನತೆ ಇರುತ್ತದೆ. ಮನುಷ್ಯ ಕುಯುಕ್ತಿಗಳನ್ನೂ ಮಾಡಬಲ್ಲ. ಆದರೆ, ಮೃಗಕ್ಕೆ ಅಷ್ಟೆಲ್ಲಾ ಯುಕ್ತಿ ಇರುವುದಕ್ಕಿಂತಲೂ ಬಲ ಮಾತ್ರವಿರುತ್ತದೆ.
ಜಲ್ಲಿಕಟ್ಟು ಶುರುವಾಗುವುದಕ್ಕೆ ಮುನ್ನ ದನಗಳನ್ನು ಹೊರಬಿಡುವ ಇಕ್ಕಟ್ಟಾದ ಬಾಗಿಲೇ ವಾಡಿವಾಸಲ್. ಇಲ್ಲಿನ ಜಲ್ಲಿಕಟ್ಟು ನಡೆಯುವ ಸ್ಥಳ 'ಸೆಲ್ಲಾಯಿ ಸಾಟ್ಟು'. ಇದು ಪ್ರತಿಷ್ಟಿತ ಸ್ಥಳ. ಇಂತಹಾ ಜಲ್ಲಿಕಟ್ಟು ಪಂದ್ಯದಲ್ಲಿ 'ಕಾರಿ' ಎಂಬ ಗೂಳಿಯನ್ನು ಅಡಗಿಸಿ ಗೆಲ್ಲುವ ಉದ್ದೇಶದಿಂದಲೇ ಬರುವ ಮುರುದನ್ ಹಾಗೂ ಪಿಚ್ಚಿ ಇಬ್ಬರೂ ಬಾವ ಬಾಮೈದ.
ಇವರಿಗೆ ಮಾತಿಗೆ ಸಿಗುವ ಅಜ್ಜ ಒಂದರ್ಥದಲ್ಲಿ ಇವರಿಬ್ಬರ ಹಿತೈಷಿ ಕೂಡಾ.. ವಾಡಿವಾಸಲ್ ನಿಂದ ಈಚೆ ಬರುವ ಗೂಳಿಯ ಕುರಿತು ಅದರ ಇತಿಹಾಸವನ್ನು ಹಾಗೂ ಅದರ ಆಕ್ರಮಣವನ್ನು ಗಮನಿಸಿ ಅಭ್ಯಾಸ ಮಾಡಿದ್ದವ. ಈತನಿಗೆ ಪಿಚ್ಚಿಯ ಅಪ್ಪ ಗೊತ್ತಿದ್ದ. ಪಿಚ್ಚಿಯ ಅಪ್ಪ ಅಂಬುಲಿ. ಜಮೀನ್ದಾರರ ಗೂಳಿ 'ಕಾರಿ'ಯ ಕೊಂಬಿಗೆ ಸಿಲುಕಿ ಮೂರು ವರ್ಷದ ಹಿಂದೆ ಪ್ರಾಣ ಬಿಟ್ಟಿದ್ದ ಹೆಸರಾಂತ ಆಟಗಾರ. ಇಳಿ ವಯಸ್ಸು ಸಹಾ ಆತನಿಗೆ ಸಾಥ್ ಕೊಟ್ಟಿರಲಿಲ್ಲ.
ಪಿಚ್ಚಿ ಅಪ್ಪನಿಂದಾಗದ ಸಾಹಸ ಕಾರ್ಯವನ್ನು ನೆರವೇರಿಸಿದನಾ..??
ಪಿಚ್ಚಿ ಎರಡು ಹೆಸರಾಂತ ಗೂಳಿಗಳನ್ನು ಗೆಲ್ಲುವ ಅವಕಾಶವನ್ನು ಕೈ ಬಿಟ್ಟಿರದಿದ್ದರೂ ಈ 'ಕಾರಿ'ಯನ್ನು ಗೆಲ್ಲುವುದು ಅಷ್ಟು ಸುಲಭದ ಮಾತಾಗಿತ್ತೇ..??
'ಕಾರಿ'ಯ ಇತಿಹಾಸವೇನು..??
ಪಂದ್ಯ ಗೆದ್ದವನಿಗೆ ಸಿಗುವ ಇನಾಮು ಏನಿತ್ತು..??
ಮುರುಗು ಎಂಬ ಆಟಗಾರ ಇವನ ವಿರುದ್ಧ ಸಂಚು ಮಾಡಿದ್ದೇಕೆ..?? ಆ ಸಂಚು ಏನು..?? ಅದೆಲ್ಲದರ ಫಲವೇನಾಯಿತು..??
ತಿಳಿಯಲು ಓದಿ ವಾಡಿವಾಸಲ್.
ಇದು ಪ್ರಾಚೀನ ತಮಿಳಿನ ಗ್ರಾಮ್ಯ ಭಾಷೆಯಲ್ಲಿದ್ದ ಪುಸ್ತಕ. ಇದನ್ನು ನಮ್ಮ ಮಂಡ್ಯದ ಆಡುಗನ್ನಡದ ಭಾಷೆಯಲ್ಲಿ ನಿರೂಪಿಸಿದ್ದಾರೆ ಲೇಖಕರು. ಆಡು ಮಾತನ್ನು ಅರ್ಥ ಮಾಡಿಕೊಂಡು ಸವಿಯುತ್ತಾ ಓದುವುದಕ್ಕೆ ಕೊಂಚ ಹೆಚ್ಚು ಸಮಯ ಬೇಕಾಗುತ್ತದೆ.. ಎಲ್ಲೆಡೆ ತಮಿಳಿನ ಹೆಸರುಗಳನ್ನೇ ಬಳಸಿಕೊಂಡಿರುವುದು ಹಾಗೂ ತಮಿಳಿನ ಗ್ರಾಮಗಳ ದಿಕ್ಕುಗಳ ಹೆಸರು ಅಂದರೆ ಮೂಡಣ, ಪಡುವಣ, ತೆಂಕಣ ಸೀಮೆ ಎಂದು ಬಳಸಿರುವುದರಿಂದ ಮೊದಲು ಕೊಂಚ ಅಡಚಣೆಯಾದರೂ ಬೇಗನೆ ಹೊಂದಿಕೊಂಡು ಬಿಡುತ್ತೇವೆ.
ವಸುಧೇಂದ್ರ ಅವರ ಛಂದ ಪುಸ್ತಕದ ಪ್ರಕಟಣೆ ಎಂದು ನಂಬಿ ಕೊಂಡು ಓದಲು ಶುರುವಿಟ್ಟದ್ದು. ನಿಜಕ್ಕೂ, ಓದದಿದ್ದರೆ ಇಷ್ಟೊಳ್ಳೆ ಪುಸ್ತಕವನ್ನು, ಅನುಭವವನ್ನೂ ಕಳೆದುಕೊಂಡು ಬಿಡುತ್ತಿದ್ದೆನೇನೋ ಎನ್ನಿಸಿತು. ಅನುವಾದ ಸೊಗಸಾಗಿ ಮೂಡಿ ಬಂದಿದೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ