ಪುಸ್ತಕದ ಶೀರ್ಷಿಕೆ : ಕ್ಷಯ
ಲೇಖಕರು : ಡಾ. ವಾಸುದೇವ ಶೆಟ್ಟಿ
ಪ್ರಕಾಶಕರು : ವೀರಲೋಕ ಬುಕ್ಸ್
ಮೊದಲ ಮುದ್ರಣ : 2022
ಪುಟಗಳು : 104
ಬೆಲೆ : 120 ರೂ.
'ಕ್ಷಯ' ನಾನು ಓದಿದ ವಾಸುದೇವ ಶೆಟ್ಟಿಯವರ ಮೊದಲ ಪುಸ್ತಕ. ಈ ಕಾದಂಬರಿ ಹಿಡಿಯುವ ಮುನ್ನ 'ಕ್ಷಯ' ಎಂಬ ಪದ ಖಾಯಿಲೆಯಾಗಿ ಮಾತ್ರ ಗೋಚರಿಸುತ್ತಿತ್ತು. ಆದರೆ, ಇದನ್ನು ಓದಿದ ನಂತರ ಕ್ಷಯ ಎಂಬುದು ಖಾಯಿಲೆಯ ಜೊತೆಗೆ ಕ್ಷೀಣವಾಗುತ್ತಿರುವುದು ಎಂಬುದನ್ನೂ ಸೂಚಿಸುವಂತೆ ಮನಸ್ಸಿಗೆ ತೋರಿತು.
ಲೇಖಕರು ಈ ಪುಸ್ತಕವನ್ನು ಪ್ರಕಟಿಸಿರುವುದು 2022 ರಲ್ಲಿ ಆದರೂ ಈ ಕಾದಂಬರಿ ರೂಪುಗೊಂಡಿರುವುದು 1988-89 ರ ಆಸುಪಾಸಿನಲ್ಲಿ ಎನ್ನುತ್ತಾರೆ. ಬಹುಶಃ, ಇಂದಿಗೂ ಇದು ಈ ಕಾಲದ ಘಟನೆಯೇ ಎಂಬಂತೆ ಭಾಸವಾಗುತ್ತದೆ. ಪುಸ್ತಕದ ಪುಟಗಳು ಕಡಿಮೆ ಎಂದು ಓದಲು ಹಿಡಿದು ಇದರ ಒಳ ಹೊಕ್ಕು ನೋಡಿದರೆ ಇಲ್ಲಿನ ಹರಹು ದೊಡ್ಡದು. ಊರೊಂದರ ಕಥೆ ಹೇಳುವುದು ಸುಲಭವಲ್ಲ. ಇದು ಕೇವಲ ಊರಿನ ಕತೆ ಮಾತ್ರವಲ್ಲ. ಜನರ ನೈತಿಕ ಅಧಃ ಪತನ, ವಿನಾಶ, ಸಂಘರ್ಷಗಳ ಕಥೆ ಕೂಡಾ. ಇದನ್ನು ಹಲವಾರು ರೀತಿಯಲ್ಲಿ ನೋಡಬಹುದಾದರೂ.. ಅವರವರ ದೃಷ್ಟಿಯಿಂದಲೂ.. ಉಳಿದವರ ದೃಷ್ಟಿಯಿಂದಲೂ ಎಲ್ಲವೂ ಬಿಂಬಿತವಾಗಿದೆ. ಹಾಗೆಂದು, ತಪ್ಪುಗಳ ಸಮರ್ಥನೆ ಇಲ್ಲಿಲ್ಲ. ತಪ್ಪನ್ನು ತಪ್ಪು ಎಂದು ಹೇಳುವ ಪಾತ್ರಗಳ ದಿಟ್ಟತನವೂ ಕಡಿಮೆಯಾದರೂ ಓದುಗನ ಮನಸ್ಸಲ್ಲಿ ತಪ್ಪನ್ನು ತಪ್ಪು ಎಂದು ಅಲ್ಲಗಳೆಯುವ ಗಟ್ಟಿತನ ಮೂಡುವಂತೆ ಮಾಡುತ್ತದೆ. ತಪ್ಪು - ಸರಿ ಎಂಬ ನಿರ್ಧಾರವನ್ನು ಹೇಳದೆಯೂ ಹೇಳುವ ಈ ಕಾದಂಬರಿ ನಮ್ಮಲ್ಲಿಯೂ 'ಕ್ಷಯ'ವಾಗುತ್ತಿರುವ ಧ್ವನಿಯನ್ನು ನೆನಪಿಸುತ್ತದೆ.
ಕರಾವಳಿ ಭಾಗದ ಹಳ್ಳಿಯೊಂದರಲ್ಲಿ ನಡೆಯುವ ಘಟನೆಗಳು ಒಂದಕ್ಕೊಂದು ಸಂಬಂಧವಿಲ್ಲದಂತೆ ಕಂಡರೂ ಒಂದನ್ನೊಂದು ಬೆಸೆದುಕೊಳ್ಳುವ ಪರಿ ಕಥೆಯನ್ನು ಮತ್ತಷ್ಟು ಆಸಕ್ತಿದಾಯಕವನ್ನಾಗಿಸಿದೆ. ಮೂಲತಃ ಶ್ರೀನಿವಾಸ ನಾಯ್ಕ ಆ ಹಳ್ಳಿಯವನಾಗದಿದ್ದರೂ... ಮುತ್ತಜ್ಜನ ಕಾಲದಿಂದ ಬಂದು ಒಕ್ಕಲು ನಿಂತರೂ.. ಮೊದಮೊದಲು ಸುತ್ತಮುತ್ತಲಿನ ಜನರು ವಿರೋಧಿಸಿದರೂ ನಂತರ ಅದೇ ಹಳ್ಳಿಯವನಾಗಿ ನೆಲೆ ನಿಲ್ಲುತ್ತಾರೆ. ಶ್ರೀನಿವಾಸ ನಾಯ್ಕನ ಕೆಮ್ಮಿನ ಮೂಲಕ ತೆರೆದುಕೊಳ್ಳುವ ಕಥೆ ಕೆಮ್ಮಿನ ಜೊತೆ ಜೊತೆಗೆ ರಕ್ತವೂ ಹೋಗುತ್ತಿರಬಹುದೇ ಎಂಬ ಅನುಮಾನದಲ್ಲಿಯೇ ಇದ್ದಾಗ ಅದಕ್ಕೆ ಪಕ್ಕದ ಮನೆಯ ಆತ್ಮೀಯ ತನ್ನ ಹಿರಿಯರಿಂದ ಕೇಳಿ ನೆನಪಿಟ್ಟುಕೊಂಡಿದ್ದ ಔಷಧಿ ಅಂದರೆ ಒಂದು ರೀತಿಯ ಕಷಾಯವನ್ನು ತಯಾರಿಸುವ ವಿಧಾನವನ್ನು ಹೇಳಿದ್ದ. ಅದರ ಹುಡುಕಾಟ, ತಯಾರಿಯ ಜೊತೆಗೆ ಜೊತೆಗೆ ಮುಂದಿನ ಕಥೆ ಬೆಳೆಯುತ್ತಾ ಹೋಗುತ್ತದೆ. ಒಂದಕ್ಕೊಂದು ರೀತಿಯ ವಿಭಿನ್ನ ಸಂಬಂಧ ಬೆಸೆದುಕೊಂಡಂತೆ ಭಾಸವಾಗುತ್ತದೆ.
ಹೊಸಬಯ್ಯ ನಾಯ್ಕನ ಮೂರನೇ ಮಗಳು ಹೆಣವಾಗಿದ್ದು.. ಅದನ್ನು ಪೋಲೀಸರಿಗೆ ಗೊತ್ತಾಗದಂತೆ ಸುಟ್ಟು ಹಾಕಿದ್ದು ನಡೆದ ನಂತರದ ಘಟನೆಗಳು ಹಳ್ಳಿಯ ಸ್ವಾಸ್ಥ್ಯ ಕದಡಿದ್ದನ್ನು, ಹಾಗೆ ಕದಡುತ್ತಿರುವುದು ಗೊತ್ತೇ ಆಗದಂತೆ ನಡೆದದ್ದೂ ಆಯಿತು.
ವಾಮನ ಎಂಬ ವ್ಯಕ್ತಿ ಮಾತ್ರ ಇದರ ಅರ್ಧದಿಂದ ಬಂದರೂ.. ಇಡೀ ಕಥೆಯನ್ನು ಅವನೇ ಆವರಿಸಿಕೊಂಡನೇನೋ ಎನ್ನಿಸಿತು. ಗಾತ್ರದಿಂದ ಚಿಕ್ಕದಾದರೂ.. ನಂತರ ಬೆಳೆದು ನಿಂತ ವಾಮನನಂತೆ ಅವನ ಬದಲಾವಣೆ, ನಡವಳಿಕೆ ಎಲ್ಲವೂ ಇದೆ. ವಾಮನನ ಚಿತಾವಣೆಯಂತೆ ಎಲ್ಲವೂ ನಡೆಯಿತೋ ಅಥವಾ ಅವನು ಹಚ್ಚಿದ ಒಂದು ಕಿಡಿ ಎಲ್ಲವನ್ನೂ ಆವರಿಸಿಕೊಂಡ ಹಾಗೆ ಭಾಸವಾಯಿತೋ ನೀವೇ ಓದಿ ನೋಡಿ.
ಒಂದು ಅನೈತಿಕ ಸಂಬಂಧ, ಹಾದರ ಏನೆಲ್ಲವನ್ನು ಹಾನಿ ಮಾಡಬಹುದು ಎಂದುಕೊಂಡರೂ ಅಳ್ಳಂಕಿಯ ಪಾತ್ರ ಕೊನೆಯಲ್ಲಿ ವಿಭಿನ್ನವಾಗಿ ಕಂಡಿತು. ಸುರೇಶನ ಮನಸ್ಥಿತಿ ಮಾನಸಿಕ ಅಸ್ವಸ್ಥತೆಯಿಂದ ಗುಣವಾಗುತ್ತಿದೆ ಎನ್ನುವಾಗಲೇ ಬಂದ ತಿರುವು, ಮಂತ್ರವಾದಿಗಳ ತಂತ್ರ, ಕುತಂತ್ರ, ಹಳ್ಳಿಯ ಜನರ ಮನಸ್ಥಿತಿ ಎಲ್ಲವೂ ಯಾರದ್ದೋ ಸ್ವಾರ್ಥ, 'ಕ್ಷಯ'ವಾಗುತ್ತಿರುವ ಬದುಕಿನ ಮೌಲ್ಯಗಳನ್ನು ತೋರಿಸಿತು. ಇದು ಕೊಳೆತು ಇಡೀ ಹಳ್ಳಿಯೇ ನಾಶವಾಗುವುದಾ ಅಥವಾ ಗುಣವಾಗುವುದಾ ಎಂಬುದಕ್ಕಿಂತ ಇದರ ಮೂಲವನ್ನೇ ನಿವಾರಿಸುವುದು ಒಳ್ಳೆಯದು ಎಂಬ ಅಭಿಪ್ರಾಯ ಹುಟ್ಟಿದರೂ ಆದಷ್ಟು ಸುಲಭವಾ..? ಎಂದೂ ಅನ್ನಿಸಿತು.
ಈ ಪುಸ್ತಕದ ಕಥೆ ಪ್ರಾದೇಶಿಕ ಭಾಷೆಯಾಗಿದ್ದು.. ಲೇಖಕರ ಊರಿನ ಅಂದರೆ ಉತ್ತರ ಕರ್ನಾಟಕದ ಹೊನ್ನಾವರದ ಕಡೆಯ ಭಾಷೆಯಾಗಿದೆ. ಆ ಭಾಗದ ಜನರಿಗೆ ಇದು ಮತ್ತಷ್ಟು ಆಪ್ತವಾಗುತ್ತದೆ. ನನಗೆ ಗೊತ್ತಿಲ್ಲದ ಎಷ್ಟೋ ಹೊಸ ಪದಗಳನ್ನು ಇದರಿಂದ ತಿಳಿದೆ. ಅಲ್ಲಲ್ಲಿ ಸಿಕ್ಕ ಈ ಪದಗಳು ಓದಿನ ಓಘಕ್ಕೆ ಅಡ್ಡಿಯಾಗಲಾರವು. ಕಾದಂಬರಿಯ ಕೊನೆಯಲ್ಲಿ ಈ ಪದಗಳ ಅರ್ಥ ಸಹಾ ಸಿಗುತ್ತದೆ.
ಕೆಲವು ಪುಸ್ತಕಗಳು ಗಾತ್ರದಲ್ಲಿ ಹಿರಿಯವಾದರೆ, ಇನ್ನು ಕೆಲವು ಸತ್ವದಲ್ಲಿ. ಹಲವಾರು ಪಾತ್ರಗಳಿಂದ ಕೂಡಿದ್ದರೂ ಅಚ್ಚುಕಟ್ಟಾಗಿ, ಹೇಳ ಬೇಕಾದುದನ್ನಷ್ಟೇ ತಲುಪಿಸುವಷ್ಟು ಸತ್ವಯುತವಾಗಿ ಮೂಡಿ ಬಂದಿರುವ ಕಾದಂಬರಿ ಎಷ್ಟು ಬೇಗ ಮುಗಿಯಿತಾ ಎಂದೆನ್ನಿಸಿತು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ