ಪುಸ್ತಕದ ಶೀರ್ಷಿಕೆ : ಸಮಯದ ಗೊಂಬೆ
ಲೇಖಕಿ : ಚಿತ್ರಲೇಖ
ಪ್ರಕಾಶಕರು : ವಿಕ್ರಂ ಪ್ರಕಾಶನ
ಪುಟಗಳು : 216
ಬೆಲೆ : 200
'ಸಮಯದ ಗೊಂಬೆ' ಎನ್ನುವ ಹೆಸರನ್ನು ಕೇಳಿದಾಗ ಮೊದಲಿಗೆ ನೆನಪಾಗುವುದು ಡಾ||ರಾಜ್ ಕುಮಾರ್ ರವರ ಚಲನಚಿತ್ರ. ಹೌದು, ಈ ಚಲನಚಿತ್ರ ಕಾದಂಬರಿ ಆಧಾರಿತ ಚಲನಚಿತ್ರ. ಕಾದಂಬರಿ ಹಾಗೂ ಚಲನಚಿತ್ರದಲ್ಲಿ ಕೆಲವು ಬದಲಾವಣೆಗಳಿವೆಯಾದರೂ ಎರಡರ ನೋಟವೂ ವಿಭಿನ್ನ ಹಾಗೂ ಚೆನ್ನಾಗಿದೆ.
ಲೇಖಕಿ ಈ ಕಾದಂಬರಿ ಬರೆದಿರುವ ಕಾಲ ಎಂಬತ್ತರ ದಶಕ. ಕೆಲವು ತುಮುಲಗಳು ಮನಸ್ಸಿನಲ್ಲಿ ಕಾಡಿದಾಗ ಅದನ್ನು ಅಕ್ಷರ ರೂಪಕ್ಕಿಳಿಸಿದಾಗ ಒಂದು ರೀತಿಯ ಬಿಡುಗಡೆಯ ಭಾವ. ಆ ಕಾಲದಲ್ಲಿ ಮಕ್ಕಳನ್ನು ಅಪಹರಣ ಮಾಡಿ ಅಂಗಾಂಗಗಳನ್ನು ಊನ ಮಾಡಿ ಭಿಕ್ಷಾಟನೆಗೆ ತಳ್ಳುವ ಹಾಗೂ ಅಪ್ರಾಪ್ತ ಹೆಣ್ಣು ಮಕ್ಕಳನ್ನು ಅಪಹರಣ ಮಾಡಿ ಅವರನ್ನು ಪಾಪ ಕೂಪಕ್ಕೆ ತಳ್ಳುವ ಘಟನೆಗಳನ್ನು ಓದಿ ಅಂತಹಾ ಮನೋವ್ಯಥೆಯಲ್ಲಿ ಬರೆದಿರುವ ಕಾದಂಬರಿ ಇದು. ದೊರೆ ಭಗವಾನ್ ರವರ ನಿರ್ದೇಶನದಲ್ಲಿ ರಾಜ್ ಕುಮಾರ್, ಶ್ರೀನಾಥ್, ರೂಪಾ ದೇವಿ ಹಾಗೂ ಮೇನಕಾರವರು ಜೀವ ತುಂಬಿ ನಟಿಸಿದ್ದಾರೆ. ಎಂಬತ್ತರ ದಶಕದ ಕಾದಂಬರಿ ಮರು ಮುದ್ರಿತವಾಗಿ ಓದಲು ದೊರೆತದ್ದು ಒಂದು ಸೌಭಾಗ್ಯವೇ ಸರಿ.
ಒಬ್ಬ ಶಾಲಾ ಬಾಲಕ ಓಡುತ್ತಿರುವ ಎಕ್ಸ್ಪ್ರೆಸ್ ರೈಲಿನಲ್ಲಿ ಹೋಗುತ್ತಿದ್ದಾನೆ. ಹಾದಿ ತಪ್ಪಿಲ್ಲ ಆದರೆ ತಪ್ಪಿಸಿಕೊಂಡಿಲ್ಲ ಎಂದು ಹೇಳಲಾಗದು. ಒಂದರ್ಥದಲ್ಲಿ ಮನೆ ಬಿಟ್ಟು ಓಡಿ ಹೊರಟಿದ್ದಾನೆ. ಸಿರಿವಂತ ಮನೆತನದ ಮಗನಾದ ಅವನಿಗೆ ಈಗ ತಿನ್ನಲು, ಹೊದೆಯಲು ಏನೂ ಇಲ್ಲ. ಹಸಿವು, ಚಳಿ ಮನೆಯ ನೆನಪು ಮಾಡಿಸುತ್ತಿದ್ದರೂ ಅಪ್ಪ- ಅಮ್ಮನ ಕುರಿತು ಒಂದು ರೀತಿಯ ರೋಷ ಮನದ ಮೂಲೆಯಲ್ಲಿ ಜಾಗೃತವಾಗಿದೆ. ತನ್ನ ತಂಗಿ ಸ್ಮಿತಾ ಕುರಿತು ತೋರುವ ಪ್ರೀತಿ ತನಗಿಲ್ಲವೆಂಬ ಅಸಹನೆ ಅವನಲ್ಲಿ ಆ ಭಾವ ಮೂಡಿಸಿದೆ. ರೈಲು ಪ್ರಯಾಣದಲ್ಲಿ ಪರಿಚಿತನಾದ ಒಬ್ಬ ಅಪರಿಚಿತನ ಬಳಿ ತನ್ನೆಲ್ಲಾ ಕಷ್ಟ, ತಾನು ಏಕೆ ಮನೆ ಬಿಟ್ಟು ಹೊರಟದ್ದು ಎಲ್ಲವನ್ನೂ ಅವನು ಪೋಲೀಸಿನವನಲ್ಲವೆಂದು ಖಾತ್ರಿ ಪಡಿಸಿಕೊಂಡ ನಂತರ ಹೇಳಿಕೊಳ್ಳುತ್ತಾನೆ. ಸಿಕ್ಕ ಅಪರಿಚಿತರೆಲ್ಲರೂ ಒಳ್ಳೆಯವರೇ ಆಗಿರಬೇಕೆಂಬ ನಿಯಮವೆಲ್ಲಿರುತ್ತದೆ ? ಅನಿಲ್ ಬಾಳಿನಲ್ಲಿಯೂ ಈಗ ಅಂತಹದ್ದೇ ಸಂಧರ್ಭ.
ಅನಿಲ್ ತಾನು ಕಷ್ಟಪಟ್ಟು ಒಂದು ಸ್ಪರ್ಧೆಗಾಗಿ ಮಾಡಿದ್ದ ರಟ್ಟಿನ ಮನೆಯನ್ನು ತಂಗಿ ಸ್ಮಿತಾ ಬಾಲಲೀಲೆಯಿಂದ ಹಾಲು ಮಾಡಿದ್ದಳು. ಈ ರೀತಿ ಆಗುತ್ತಿದ್ದದ್ದು ಮೊದಲಲ್ಲವಾದರೂ ತನ್ನ ತಂದೆ-ತಾಯಿ ತನ್ನನ್ನು ಕಡೆಗಣಿಸುತ್ತಿರುವುದು ಮನಸ್ಸಿನಲ್ಲಿ ಕುಳಿತಿತ್ತು. ಕೆಲವೇ ಸಮಯದ ಮೊದಲು ತನ್ನ ತಂದೆ ವಿಶ್ವನಾಥ ರಾಯರು ಸ್ಮಿತಾಳನ್ನು ಮುದ್ದಿಸಿ ತನ್ನ ಹೆಂಡತಿಗೆ ಆಕೆಯನ್ನು ಚೆನ್ನಾಗಿ ನೋಡಿಕೊಳ್ಳಲು ಹೇಳಿ ಹೋಗಿದ್ದರು. ಅದೂ ಸೇರಿ ಕೋಪ, ರೋಷ, ಹತಾಶೆ, ದುಃಖ ಎಲ್ಲದರಿಂದ ವ್ಯಗ್ರನಾಗಿ ತಂಗಿಯ ತಲೆಗೂದಲನ್ನು ಕೈಯ್ಯಲ್ಲಿ ಹಿಡಿದು ತಲೆಯನ್ನು ಟೀಪಾಯಿಗೆ ಗುದ್ದಿಸುತ್ತಿದ್ದನು. ಅವಳು ಭಯದಿಂದ ಚೀರಿ, ಸುಸ್ತಾಗಿ ಬಿದ್ದ ಅವಳಿಂದ ರಕ್ತ ಹರಿಯತೊಡಗಿದಾಗ ಅವಳನ್ನು ಅಲ್ಲಿಯೇ ಬಿಟ್ಟು ಪರಾರಿಯಾಗುತ್ತಾನೆ.
ನಂತರ, ರೈಲಿನಲ್ಲಿ ಗೊತ್ತು ಗುರಿಯಿಲ್ಲದ ಪಯಣ. ಅಪರಿಚಿತ ಇದೆಲ್ಲವನ್ನೂ ತಿಳಿದುಕೊಂಡು ದೆಹಲಿಯಿಂದ ಬಾಂಬೆಗೆ ಹೋಗುತ್ತಿದ್ದ ಆ ರೈಲಿನಲ್ಲಿ ಆತನಿಗೆ ತಾನು ಅವನಿಗೆ ಸಹಾಯ ಮಾಡುವುದಾಗಿ ಹೇಳಿ ಮನೆಗೆ ಹೋದರೆ ಪೋಲೀಸ್, ರಿಮ್ಯಾನ್ಡ್ ಹೋಮ್ ಎಂದೆಲ್ಲಾ ಪಾಡು ಪಡಬೇಕಾಗುತ್ತದೆ ಎಂದು ತಿಳಿಸಿ ರೈಲು ನಿಲ್ದಾಣ ಇನ್ನೂ ಕೊಂಚ ದೂರದಲ್ಲಿದ್ದಾಗಲೇ ಟಿಕೇಟು ಚೆಕ್ ಮಾಡುವರು ಎಂದು ಹೇಳಿ ನಿಧಾನಗೊಂಡ ರೈಲಿನಿಂದ ಧುಮುಕಿಸಿ ತಾನೂ ಧುಮುಕಿ ಬಿಡುತ್ತಾನೆ.
ಈಗ ಅನಿಲನ ಪರಿಸ್ಥಿತಿ ಬೆಂಕಿಯಿಂದ ಬಾಣಲೆಗೆ ಬಿದ್ದಂತಾಯಿತು. ಹುಸೇನ್ ಭಯ್ಯಾ ಜೊತೆಗೆ ಅನಿಲ್ ಬಂದದ್ದು ರಾಮು ದಾದಾ ಅಡ್ಡಕ್ಕೆ. ಈ ಅಡ್ಡಾ ಹೀಗೆ ದಾರಿ ತಪ್ಪಿದ ಮಕ್ಕಳನ್ನು ಹಾಗೂ ಅಪಹರಿಸಿದ ಮಕ್ಕಳನ್ನು ಅಂಗವಿಕಲರನ್ನಾಗಿಸಿ ಭಿಕ್ಷೆಗೆ ಹಾಗೂ ಕಳ್ಳತನಕ್ಕೆ ತೊಡಗಿಸುವ ತಾಣ. ತಾನೂ ಸದ್ಯದಲ್ಲೇ ಅಲ್ಲೇ ಅವರಂತೆಯೇ ಆಗುತ್ತೇನೆ ಎಂದು ಗೊತ್ತಾದ ನಂತರ ಅಲ್ಲಿನ ನರಕ ಸದೃಶ ವಾತಾವರಣದಿಂದ ರಾಮು ಪಾರಾಗಲು ಯೋಚಿಸುತ್ತಾನೆ. ಬುದ್ಧಿವಂತ ಬಾಲಕನಾಗಿದ್ದ ಅನಿಲ್ ಅಲ್ಲಿ ಎಲ್ಲರಿಗೂ ಊಟ ಕೊಟ್ಟು ಮೇಲ್ವಿಚಾರಣೆ ನಡೆಸುತ್ತಿದ್ದ ಬ್ರಿಜುವನ್ನು ಹೇಗೋ ವಿಶ್ವಾಸಕ್ಕೆ ತೆಗೆದುಕೊಂಡು ಅಲ್ಲಿಂದ ಪಾರಾಗಲು ಪ್ರಯತ್ನಿಸುತ್ತಾನೆ. ಅದಕ್ಕಾಗಿ ತನ್ನ ವಜ್ರದ ಉಂಗುರವನ್ನು ಬೇಡವೆಂದರೂ ಬ್ರಿಜುವಿಗೆ ನೀಡುತ್ತಾನೆ. ಅಂತೂ ಅಲ್ಲಿಂದ ತಪ್ಪಿಸಿಕೊಂಡ ಅನಿಲ್ ಗಾಯಗೊಂಡು ಕಷ್ಟದಿಂದ ಒಂದು ಲಾರಿ ಹತ್ತಿ ಬಿಡುತ್ತಾನೆ.
ಪ್ರಜ್ಞೆ ಬಂದ ನಂತರ ಕೇಳಿದ 'ಬೇಟಾ' ಎಂಬ ಪದದಿಂದ ಸಿಂಹದ ಬಾಯಿಯಿಂದ ಹುಲಿಯ ಬಾಯಿಗೆ ಬಿದ್ದು ಬಿಟ್ಟೆನೇ ಎಂದು ಗಾಬರಿಯಿಂದ ಪ್ರಜ್ಞೆ ತಪ್ಪಿದನು. ನಂತರವೂ ಆತನಿಗೆ ಭಯವೇ. ಆದರೆ ಗಡ್ಡಧಾರಿ ಸಾಧುಸಿಂಗ್ ಹಾಗೂ ಆತನ ಪತ್ನಿಯ ವಾತ್ಸಲ್ಯದಿಂದ ಅವರನ್ನು ನಂಬುತ್ತಾನೆ. ಹಾಗೂ ಸಂಪೂರ್ಣವಾಗಿ ಹುಷಾರಾಗುತ್ತಾನೆ. ಆ ಲಾರಿಯ ಚಾಲಕ ಸಾಧುಸಿಂಗ್ ಆಗಿದ್ದನು. ಈಗ ಅವರ ಮನೆಯಲ್ಲಿ ಅವರ ಮಗಳು ಸೋನಿಗೆ ಅಣ್ಣನಾಗಿ ತಾನು ಪರಿಚಯಿಸಿಕೊಂಡ ಸುನಿಲ್ ಎಂಬ ಹೆಸರಿನಿಂದ ಅವರ ಮಗನಂತೆಯೇ ಆಗಿ ಹೋಗುತ್ತಾನೆ. ಹಿಂದಿನ ಅನುಭವದಿಂದ ಊರಿನ ಹೆಸರೊಂದನ್ನು ಹೊರತುಪಡಿಸಿ ಉಳಿದ ಎಲ್ಲವನ್ನೂ ಸುಳ್ಳಾಡಿರುತ್ತಾನೆ. ಅಂದಿನಿಂದ ಆತ ಸುನಿಲ್.
ಸುನಿಲ್ ನ ಹೊಸ ಬದುಕು ಸಾಧು ಸಿಂಗ್, ಸೋನಿ ಹಾಗೂ ಕುಲ್ ದೀಪ್ ಎಂಬ ಪಂಜಾಬಿ ಕುಟುಂಬದವರು ನೆಲೆಸಿದ್ದ ತಮಿಳುನಾಡಿನಲ್ಲಿ ಹೊಸದೊಂದು ಆಯಾಮಕ್ಕೆ ತೆರೆದುಕೊಳ್ಳುತ್ತದೆ. ಪಾಪಪ್ರಜ್ಞೆ ಕಾಡುತ್ತಿದ್ದರೂ ತನ್ನ ತಂಗಿ ಸ್ಮಿತಾ ರೂಪವನ್ನು ಸೋನಿಯಲ್ಲೇ ಕಾಣುತ್ತಾನೆ. ಬಡ ಕುಟುಂಬವಾದರೂ ವಾತ್ಸಲ್ಯಕ್ಕೆ ಕೊರತೆ ಇಲ್ಲದ್ದರಿಂದ ಓದಲು ಸಾಧ್ಯವಾಗದು ಎಂದು ಗೊತ್ತಾದರೂ ಅದನ್ನು ಅರ್ಥ ಮಾಡಿಕೊಂಡು ದುಡಿಯಲು ತೊಡಗುತ್ತಾನೆ. ಆ ದಂಪತಿಗಳು ಚಿಕ್ಕ ವಯಸ್ಸಿನಲ್ಲಿಯೇ ಸತ್ತ ತಮ್ಮ ಮಗನನ್ನು ಅವನಲ್ಲಿಯೇ ಕಾಣುತ್ತಾರೆ.
ಇಂಡಸ್ಟ್ರಿಯಲಿಸ್ಟ್ ಆಗಬೇಕಿದ್ದವನು ಸಮಯದ ಗೊಂಬೆಯಾಗಿ ಟ್ಯಾಕ್ಸಿ ಡ್ರೈವರ್ ಆಗುತ್ತಾನೆ. ಜೊತೆಗೆ ಸುಂದರ ಸ್ನೇಹ ದೊರೆತು ಇದ್ದುದರಲ್ಲೇ ನೆಮ್ಮಡಿಯಾಗಿರುತ್ತಾನೆ. ಆಗಿನಿಂದಲೂ ಆತನ ತಂಗಿ ಸೆಲ್ವಿ ಎಂದರೆ ಈತನಿಗೆ ಅದೇನೋ ಸೆಳೆತ. ಸುಂದರ ಪ್ರೇಮ ಕತೆಯೂ ಸಾಗುತ್ತಿರುತ್ತದೆ.
ಸೋನಿಯ ವಿವಾಹವಾಗುತ್ತದೆ. ಸೆಲ್ವಿಯನ್ನು ವಿವಾಹವಾಗಲು ಆಕೆಯ ಮನೆಯಲ್ಲಿ ಅಡ್ಡಿ ಆತಂಕಗಳು. ನಂತರ, ಮೊದಲಿದ್ದ ಕೆಲಸ ಬಿಟ್ಟು ವಿನೋದ್ ತ್ರಿಪಾಠಿ ಎನ್ನುವ ಕಮ್ಯಾನ್ಡಿಂಗ್ ಆಫಿಸರ್ ಗೆ ಡ್ರೈವರ್ ಆಗುತ್ತಾನೆ. ಆತ, ಬೇರಾರೂ ಅಲ್ಲದೇ ತನ್ನ ಸ್ವಂತ ತಂಗಿ ಸ್ಮಿತಾಳ ಗಂಡ.
ಸ್ಮಿತಾಳನ್ನು ಭೇಟಿಯಾಗಿ ತಾನೇ ನಿನ್ನ ಅಣ್ಣ ಎಂದು ಹೇಳಿಕೊಳ್ಳುತ್ತಾನಾ ಅನಿಲ್ ? ಸುನಿಲ್ ಮತ್ತೆ ಅನಿಲ್ ಆಗುತ್ತಾನಾ ? ತನಗೆ ದಕ್ಕಬೇಕಾದ ಆಸ್ತಿಗಾಗಿ ದೆಹಲಿಗೆ ಹೋಗುತ್ತಾನಾ ? ಅತ್ಯಂತ ಸ್ಟ್ರಿಕ್ಟ್ ಎನ್ನಿಸಿದ್ದ ಭಾವ ಅನಿಲ್ ನ ಬಾಂಧವ್ಯಕ್ಕೆ ಸೋಲುತ್ತಾನಾ ಅಥವಾ ಇವರಿಬ್ಬರೂ ಪ್ರತಿಸ್ಪರ್ಧಿಗಳಾಗುತ್ತಾರಾ ? ಸಾಕಿ- ಸಲಹಿದ ತಂದೆ-ತಾಯಿ ಹಾಗೂ ರಕ್ತ ಸಂಬಂಧದ ನಡುವಿನ ಆಯ್ಕೆಗಳೇನು ? ಸೆಲ್ವಿ ಹಾಗೂ ಸುನಿಲ್ ನ ಪ್ರೇಮ ವಿವಾಹ ಬಂಧನಕ್ಕೆ ತಿರುಗುತ್ತದಾ ? ಸುಂದರ್ ನ ಸ್ನೇಹ ಹಾಗೆಯೇ ಉಳಿಯುತ್ತದಾ ? ಎಲ್ಲದಕ್ಕೂ ಉತ್ತರ ತಿಳಿಯಲು ಈ ಸುಂದರ ಕಾದಂಬರಿ ಓದಿ.
ಆಯಾ ಪ್ರಾದೇಶಿಕತೆಗೆ ತಕ್ಕ ಹಾಗೆ ಅಲ್ಲಿನ ಸೊಗಡು, ಭಾಷೆ, ತಿಂಡಿ- ತಿನಿಸು, ಧಿರಿಸು, ಮಾತುಗಳು ಎಲ್ಲವೂ ಫರ್ ಪೆಕ್ಟ್ ಆಗಿ ಮೂಡಿ ಬಂದಿವೆ. ಬಹುಶಃ, ಕಾದಂಬರಿಯ ಅಂತ್ಯ ಬೇರೆಯಾಗಿದ್ದರೆ ಕಾದಂಬರಿ ಮನಸ್ಸಿನಲ್ಲಿ ಉಳಿಯುವುದು ಕಷ್ಟವಿತ್ತೋ ಏನೋ.. ಆದರೆ, ಕಾದಂಬರಿಯ ಅಂತ್ಯ ಮನಸ್ಸಿನಲ್ಲಿ ಉಳಿದು ಹೋಗುತ್ತದೆ. ಮಕ್ಕಳ ಅಪಹರಣ ಮಾಡಿ ಸಾಗಿಸುತ್ತಿದ್ದವರ ಕಥೆ ಮತ್ತೊಂದು ಕಡೆಯೂ ಬರುತ್ತದೆ. ಅದು ಹೇಗೆ ಮತ್ತು ಅಲ್ಲೇನಾಯಿತು ಎಲ್ಲವನ್ನೂ ತಿಳಿಯಲು ಸವಿವರವಾಗಿ ಸವಿಯಲು ಓದಿ ಚಿತ್ರಲೇಖ ಮೇಡಂ ಬರೆದಿರುವ 'ಸಮಯದ ಗೊಂಬೆ'.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ