ಪುಸ್ತಕದ ಶೀರ್ಷಿಕೆ : ಹನ್ನೊಂದನೇ ಅಡ್ಡರಸ್ತೆ
ಲೇಖಕಿ : ಸುಮಂಗಲಾ
ಪ್ರಕಾಶಕರು : ಛಂದ ಪುಸ್ತಕ
ಮೊದಲ ಮುದ್ರಣ : 2014
ಪುಟಗಳು : 144
ಬೆಲೆ : 100 ರೂಪಾಯಿಗಳು
ಲೇಖಕಿ ಸುಮಂಗಲಾರವರು ಮೂಲತಃ ಸಾಗರದವರು. ಉಪನ್ಯಾಸಕಿಯಾಗಿದ್ದವರು. 'ಸೀತಾಳೆ ಹೂ ಮತ್ತು ಇತರೆ ಕಥೆಗಳು', 'ಜುಮರು ಮಳೆ' ಮತ್ತು ಕಾಲಿಟ್ಟಲ್ಲಿ ಕಾಲುದಾರಿ ಇವರ ಬೇರೆ ಕಥಾ ಸಂಕಲನಗಳು.
ಈ ಕಥಾ ಸಂಕಲನ ತಲುಪಿಸಬೇಕಾದದ್ದನ್ನು ಅದೆಷ್ಟು ಸರಳವಾಗಿ , ನಿರಾಳವಾಗಿ ತಲುಪಿಸುತ್ತವೆ ಅಲ್ಲವಾ ಎನ್ನಿಸಿತು. ತನ್ನಷ್ಟಕ್ಕೆ ತಾನು ಹೇಳಬೇಕಾದದ್ದನ್ನು ಹೇಳುತ್ತಾ.. ತಲುಪಿಸಬೇಕಾದದ್ದನ್ನು ತಣ್ಣಗೆ ತಲುಪಿಸಿ ನಮ್ಮೊಳಗೆ ಒಂದು ಆಲೋಚನೆಗೆ ಕಿಡಿ ಮೂಡಿಸಿ ಹಾಗೆಯೇ ಮುಗಿಯುತ್ತದೆ ಎಂದುಕೊಂಡರೂ ಅಸಲಿಗೆ ಅವು ಮುಗಿದಿರುವುದಿಲ್ಲ. ಸದಾ ಜೀವಂತಿಕೆಯ ಕತೆಗಳು ಮುಗಿಯುವುದಾದರೂ ಹೇಗೆ ಹೇಳಿ..
ಇದು ನಾನು ಓದಿದ ಈ ಲೇಖಕಿಯ ಮೊದಲ ಪುಸ್ತಕ. ಆದರೆ, ವಿಭಿನ್ನ ಕತೆಗಳು ಆಳಕ್ಕಿಳಿದವು. ಕತೆ ಕಟ್ಟುವಿಕೆ, ಸರಾಗವಾಗಿ ಓದಿಸಿಕೊಂಡು ಹೋಗುವ ಶೈಲಿ, ವಿಭಿನ್ನ ಕಥಾ ವಸ್ತುಗಳು ಎಲ್ಲವೂ ನಾವು ನೋಡಿರದ ನಮ್ಮ ಸುತ್ತಲಿನದ್ದನ್ನು ನಮಗೆ ತೋರಿಸುವ ಪರಿ ಎನ್ನಿಸಿತು. 'ಹನ್ನೊಂದನೇ ಅಡ್ಡರಸ್ತೆ' ನೀಳ್ಗತೆಯಂತೂ ನಾವೇ ಅಲ್ಲಿರುವಂತಹಾ ಭಾವ ಮೂಡಿಸಿತು.
ಸಿಟಿಗಳಲ್ಲಿ ಈಗ ನಾಯಿ ಸಾಕುವುದು ಸರ್ವೇಸಾಮಾನ್ಯ. ಆದರೆ, ಕೆಲವರಿಗೆ ನಾಯಿ ತಂದಾಗ ಮೊದಲಿಗೆ ಇರುವ ಉತ್ಸಾಹ ನಂತರದ ದಿನಗಳಲ್ಲಿ ಇರುವುದಿಲ್ಲ. ಇನ್ನು ಕೆಲವರಿಗೆ ಅದು ಶಿಸ್ತಿನಿಂದ ಇದ್ದರೆ, ಹೇಳಿದಂತೆಲ್ಲಾ ಕೇಳಿದರೆ ಮುದ್ದು. ಇಲ್ಲವೇ ಕೆಂಡದಂತಹಾ ಕೋಪ. 'ಸ್ಕೂಬಿ' ಎಂಬ ಪುಟ್ಟ ನಾಯಿಮರಿಯ ತಪ್ಪಿಗೆ ಕೆಂಡದಂತಹಾ ಕೋಪ ಬಂದು ಅದಕ್ಕೆ ಶಿಕ್ಷೆ ಕೊಟ್ಟು ಬುದ್ಧಿ ಕಲಿಸುತ್ತೇನೆ ಎನ್ನುವ ಭ್ರಮೆಯಲ್ಲಿದ್ದ ಗಿರಿಧರ ಅದಕ್ಕೆ ಶಿಕ್ಷಿಸುವುದಕ್ಕೆ ಬೇಕಾಬಿಟ್ಟಿ ಬೈಯುತ್ತಾ ಬೆಲ್ಟಿನಿಂದ ಹೊಡೆಯುತ್ತಿರುವಾಗ ಅದನ್ನೆಲ್ಲಾ ಆಗಿನಿಂದ ನೋಡುತ್ತಿದ್ದ ಲಲಿತಮ್ಮ ಇನ್ನು ತಡೆಯಲು ಸಾಧ್ಯವೇ ಇಲ್ಲ ಎಂದಾಗ ಬಂದು ಅದೇ ಬೆಲ್ಟಿನಿಂದ ಗಿರಿಧರನಿಗೆ ಬಾರಿಸಿದ್ದರು. ಅಷ್ಟು ದೊಡ್ಡವನಾಗಿ ಏಟು ತಿನ್ನುವುದು ಒಂದು ಅಪಮಾನವಾದರೆ.. ಯಾರೋ ಸಂಬಂಧವೇ ಇಲ್ಲದವರು ಬಂದು ಹೊಡೆದರೆ.. ಹೊಡೆಯಲು ಲಲಿತಮ್ಮನಿಗೂ ಗತನೆನಪುಗಳಿದ್ದ ಹಾಗೆ ಗಿರಿಧರನಿಗೂ ಇದ್ದವು. ಯಾರದ್ದು ಸರಿ ಅಥವಾ ಯಾರದ್ದು ತಪ್ಪು ಎಂದು ಆಲೋಚಿಸುವಾಗಲೇ 'ಸ್ಕೂಬಿ'ಗೆ ಅದೇ ಹೆಸರಿಟ್ಟದ್ದು ಯಾಕೆ ಎನ್ನಿಸುವಂತೆ ಮಾಡುತ್ತದೆ ಈ ಕತೆ
ಸಾವು ಒಂದು ನಿಗೂಢ ಕ್ರಿಯೆ. ಸಾವು ಹತ್ತಿರಕ್ಕೆ ಬಂದಾಗ ಅದು ಸಾಯುವವರಿಗೆ ತಿಳಿಯುತ್ತದಾ ?? 'ಆ ಕ್ಷಣದಲ್ಲಿ ಅದೆಂಥಾ ನಿಗೂಢತೆ' ಎನ್ನುತ್ತಾ ಸುಜಾತಾರ ಸಾವು ತಟ್ಟುತ್ತದೆ. ಅವಿವಾಹಿತ ಹಾಗೂ ಮನೆಯ ಹಿರಿಯರಾಗಿದ್ದ ಕೃಷ್ಣಮೂರ್ತಿಯವರಿಗೆ ಬರುವ ತಮ್ಮ ರಮೇಶನ ಕರೆ ಚೆನ್ನಾಗಿಯೇ ಇದ್ದ ಆತನ ಹೆಂಡತಿ ಬ್ರೈನ್ ಹೆಮರೇಜ್ ಆಗಿ ಸತ್ತ ಸುದ್ದಿಯನ್ನು ತಿಳಿಸುತ್ತಾನೆ. ಮನೆಯಲ್ಲಿ ವಾರ್ಡ್ ರೋಬ್ ಬಾಗಿಲು ತೆರೆದೇ ಇರುವುದು ಇದೊಂದು ಪತ್ತೇದಾರಿ ಕತೆಯಾ ಎನ್ನಿಸುವಂತೆ ಮಾಡಿದರೂ ಅದೇ ಜಾಡಿನಲ್ಲೇ ಸಾಗುತ್ತಾ ಆಕೆಯ ಮಹತ್ವ ಹಾಗೂ ಹಿರಿಮೆಯನ್ನು ಸಾರುತ್ತದೆ ? ಸುಜಾತಾರ ಅನುಪಸ್ಥಿತಿಯ ಜೊತೆಗೆ ಕೆಲವೊಂದು ಪ್ರಶ್ನೆಗಳು, ವಿಚಿತ್ರ ಸನ್ನಿವೇಶಗಳು ಇದ್ದರೂ ನಂತರ ಆ ಕ್ಷಣದಲ್ಲಿ ಇದ್ದ ನಿಗೂಢತೆ ಯಾವುದು ? ಎಂದು ತಿಳಿದಾಗ ಬೇರೆಯದ್ದೇ ಭಾವ ಹೊಕ್ಕಿದಂತಾಗುತ್ತದೆ.
ಬಾಡಿ ಶೇಮಿಂಗ್ ಬಗ್ಗೆ ಕೆಲವು ಕತೆಗಳು ಬಂದಿವೆ. ಆದರೆ, ಇಲ್ಲಿ ಅಷ್ಟು ಬಿಡು ಬೀಸಾದ ಮಾತುಗಳು ತಲೆಗೆ ಹೊಕ್ಕದಿದ್ದರೂ.. ತನ್ಮ ದೇಹದ ಮೇಲೆ ಮತ್ತೊಬ್ಬರ ಗಮನಿಸುವಿಕೆ ಇರುವಂತಹ ರೀತಿ ಇಲ್ಲಿ ಲತಾಳ ಮಾತಿನಲ್ಲಿ ವ್ಯಕ್ತವಾದರೆ, ನಮ್ಮ ಮನಸ್ಸಿನಲ್ಲಿಯೂ ವ್ಯಕ್ತವಾಗುತ್ತದೆ. ಕ್ರೋನೋಲಜಿಕಲ್ ವಯಸ್ಸು ಹಾಗೂ ಬಯಾಲಜಿಕಲ್ ವಯಸ್ಸಿನ ಅಂತರ ಏನೆಲ್ಲಾ ಸಮಸ್ಯೆಗಳನ್ನು ಮೂಡಿಸಬಲ್ಲದು ಎಂಬುದರ ಜೊತೆಗೆ ಅದರ ಜೊತೆಗೆ ಗುದ್ದಾಡುವ ಒಂಟಿ ಹೆಣ್ಣಿನ ತುಮುಲವಿದೆ. ಅಷ್ಟೇ ಅಲ್ಲ, ಇಷ್ಟು ಬೋಲ್ಡ್ ಆದ ಭಾವಗಳು ಸಹಜವೆಂಬಂತೆ ಮೂಡಿ ಬಂದಿವೆ.
ಈ ಕತೆಯಿಂದ ನನಗಿಷ್ಟವಾದ ಸಾಲುಗಳು ಈಗಿವೆ.
'ದಡಕ್ಕೆ ತೇಲಿಸಲು ಒಂದು ಅಭಿಮಾನದ ಎಳೆ, ಒಂದು ಜೀವಸ್ಪರ್ಶ, ಏನೆಲ್ಲ ದೌರ್ಬಲ್ಯಗಳನ್ನು ಒಪ್ಪಿಕೊಂಡು ಪ್ರೀತಿಸುವ ಒಂದು ಆಸರೆಯೂ ಇಲ್ಲದೆ ಇದ್ದರೆ ಎಂತಹಾ ಒಂಟಿತನ ಕಾಡುತ್ತೆ ಅಂದ್ರೆ.. ಇಡೀ ಬದುಕು ಇನ್ನು ಇಷ್ಟೇ ಅನ್ನೋ ಭಾವನೆ ಒಳಗೆ ಎಂತಹಾ ಖಾಲಿತನ, ಎಂತಹ ಟೊಳ್ಳುತನ ತುಂಬುತ್ತೆ ಅಂದ್ರೆ.. ನಿಂಗರ್ಥ ಆಗಲ್ಲ ಮಮ್ತಾ, ಅದು ನಿರ್ವಾತವೂ ಇಲ್ಲದ ಶೂನ್ಯ.' ಎಂದಳು. ಏನೂ ಇಲ್ಲದಲ್ಲಿ ನಿರ್ವಾತವಾದರೂ ಇರುತ್ತೆ ಎಂದು ವಿಜ್ಞಾನದಲ್ಲಿ ಕಲಿತಿದ್ದ ನನಗೆ ಭಾವನೆಗಳು ಮಾತ್ರವಲ್ಲ, ವಿಜ್ಞಾನದ ಮಟ್ಟದಲ್ಲಿಯೂ ನಿರ್ವಾತದ ಸ್ಥಿತಿಯನ್ನು ಊಹಿಸಿಕೊಳ್ಳಲು ಆಗಲಿಲ್ಲ.
ಮುಂದಿನ ಕತೆ 'ಒಂದೇ ಒಂದು ಬಿಸಿರೊಟ್ಟಿ'. ಮನುಷ್ಯನ ಸ್ವಭಾವಗಳು ತೀರಾ ಹತ್ತಿರದವರಿಗಷ್ಟೇ ತಿಳಿದಿರುತ್ತವೆ. ಆದರೆ, ತೀರಾ ಹತ್ತಿರದವರೇ ಅಪರಿಚಿತರಾಗಿ ಕಂಡಾಗ.. ನಮ್ಮವರ ಸುಭಗತನ ಅರಿವಾದಾಗ ಮನಸ್ಥಿತಿ ಹೇಗಿರಬಹುದು. ಆಸ್ಪತ್ರೆಯಲ್ಲಿ ಅನಾರೋಗ್ಯದ ಸ್ಥಿತಿಯಲ್ಲಿ ಬಳಲುತ್ತಿದ್ದ ಆತನಿಗೆ ಆತ ಬಯಸಿದ 'ಒಂದೇ ಒಂದು ಬಿಸಿರೊಟ್ಟಿ' ಕೂಡಾ ಸಿಗದಿದ್ದರೆ..?? ಅದು ಆತನ ಪಾಪಕರ್ಮದ ಫಲವಾ ? ಅಥವಾ ದುರಾದೃಷ್ಟವಾ ? ಎಂದು ಯೋಚಿಸಿ ನೋಡಿದರೆ ಅದು ಆತನಿಗೆ ಆತನೇ ತಂದುಕೊಂಡ ಸ್ಥಿತಿ. ಹಾಗೆ ಒಂದೇ ಒಂದು ಬಿಸಿರೊಟ್ಟಿಯೂ ಸಿಗದಿದ್ದದ್ದು ಯಾರಿಗೆ ಮತ್ತು ಯಾಕೆ ಎಂದು ತಿಳಿಯಲು ಈ ಕತೆ ಓದಬೇಕು.
'ನಿಂತ ಗಡಿಯಾರ, ಚಲಿಸುವ ಕಾಲಚಕ್ರ'ದಲ್ಲಿ ಈ ಕಾಲಚಕ್ರ ಪರಿಚಿತವೇ ಆದರೂ.. ಒಂದಲ್ಲಾ ಒಂದು ಬಾರಿ ಎಲ್ಲರ ಜೀವನದ ಗಡಿಯಾರ ನಿಲ್ಲುತ್ತವಾ ? ಹಾಗೆ , ನಿಂತದನ್ನು ಸರಿ ಪಡಿಸಿಕೊಳ್ಳಬೇಕಾದದ್ದು ಹಾಗೂ ಸರಿ ಪಡಿಸಿಕೊಳ್ಳುವ ಬಗೆ ಹೇಗೆ ? ಇಲ್ಲಿಯ ನಿಮ್ಮಿಯ ಬದುಕು ಇದಕ್ಕೆಲ್ಲಾ ಉತ್ತರ ನೋಡಬಲ್ಲದಾ ? ಅಫ್ಗಾನ್ ಹೆಣ್ಣುಮಕ್ಕಳ ಬದುಕು ಒಂದು ರೂಪಕದಂತೆ ತೋರಿದರೂ ಅವರ ಬದುಕಿಗೂ ನಿಮ್ಮಿಯ ಬದುಕಿಗೂ ಎಷ್ಟು ವ್ಯತ್ಯಾಸ.. ಅಷ್ಟೇ ಅಲ್ಲದೆ, ಕಾಲಚಕ್ರದಲ್ಲಿ ಆಪ್ತರೂ ಸ್ಪಂದಿಸಲೂ ಆಗದಷ್ಟು ಬ್ಯುಸಿ ಆಗಿ ಹೋದರೆ.. ಆದರೂ ಇದು ದೈನಂದಿನ ಜೀವನದ ಭಾಗದಂತೆ ತೋರಿತು.
ರಸ್ತೆಗೂ ವಯಸ್ಸಾಗಬಹುದಾ ? ಹಾಗೆ ವಯಸ್ಸಾದ ರಸ್ತೆಗೆ ಅನುಭವ ಎಷ್ಟಿರಬಹುದು ? ಈ ಪ್ರಶ್ನೆ ಮೂಡುವುದು 'ಹನ್ನೊಂದನೇ ಅಡ್ಡರಸ್ತೆ'ಎಂಬ ನೀಳ್ಗತೆ ಓದಿದ ನಂತರ. ಈ ಕತೆಯಲ್ಲಿ ಕತೆ ಹೆಣೆಯುವಿಕೆ ನಾನು ಇಷ್ಟು ದಿವಸ ಓದಿರುವ ಪುಸ್ತಕಗಳಿಗಿಂತ ವಿಭಿನ್ನವಾಗಿ ಕಂಡಿತು. ಹನ್ನೊಂದನೇ ಅಡ್ಡರಸ್ತೆಗೆ ಮೂಡಿದ ಪ್ರಶ್ನೆಗೆ ಉತ್ತರ ಸಿಗಬಹುದೇ ? ಎಲ್ಲಾ ಪ್ರಶ್ನೆಗಳಿಗೂ ಉತ್ತರದ ಹಂಗು ಇದೆಯಾ..? ಹನ್ನೊಂದನೇ ಅಡ್ಡರಸ್ತೆ ಕತೆಯ ಕುರಿತು ಹೆಚ್ಚೇನೂ ಹೇಳಲಾರೆ. ನೀವೇ ಓದಿ ಸವಿಯಬೇಕು ಈ ಕತೆಯ ಸೊಬಗನ್ನು.
ಛಂದ ಪುಸ್ತಕದ ಪುಸ್ತಕಗಳು ಎಂದಿಗೂ ನನ್ನ ಭರವಸೆಯನ್ನು ಸುಳ್ಳಾಗಿಸುವುದಿಲ್ಲ. ಅಂತಹದ್ದೇ ಪುಸ್ತಕದ ಸಾಲಿನಲ್ಲಿದೆ ಈ ಕಥಾ ಸಂಕಲನ. ವಿಭಿನ್ನ ಸಂಕಲನಗಳ ಒಂದೊಳ್ಳೆ ಓದು. ಸುಮಂಗಲಾ ಮೇಡಂರವರ 'ಹನ್ನೊಂದನೇ ಅಡ್ಡರಸ್ತೆ'ಯನ್ನು ಇನ್ನೂ ದರ್ಶಿಸಿಲ್ಲವಾದರೆ ಇನ್ನೇಕೆ ತಡ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ