ಪುಸ್ತಕದ ಶೀರ್ಷಿಕೆ : ಗ್ರಾಫಿಟಿಯ ಹೂವು
ಲೇಖಕರು : ಆಕರ್ಷ ರಮೇಶ್ ಕಮಲ
ಪ್ರಕಾಶಕರು : ಬಹುರೂಪಿ
ಪ್ರಥಮ ಮುದ್ರಣ :2019
ಪುಟಗಳು : 88
ಬೆಲೆ : 90 ರೂ
ಗ್ರಾಫಿಟಿಯ ಹೂವು ಎಂಬ ಕವಿತೆಗಳ ಗುಚ್ಛ
"ಗ್ರಾಫಿಟಿಯ ಹೂವು" ಹೆಸರಿನಿಂದಲೇ ವಿಭಿನ್ನವಾಗಿ ಸೆಳೆದ ಕವಿತೆಗಳ ಗುಚ್ಛ. ಬಹುರೂಪಿ ಪ್ರಕಾಶನ ಪ್ರಕಟಿಸಿರುವ ಈ ಕವನ ಸಂಕಲನದ ಕವಿ "ಆಕರ್ಷ ರಮೇಶ್ ಕಮಲ". ಇವರ ತಾಯಿ ಎಂ.ಆರ್. ಕಮಲ ಕನ್ನಡದ ಪ್ರಸಿದ್ಧ ಲೇಖಕಿ ಹಾಗೂ ಕವಯಿತ್ರಿ. ತಂದೆ ರಮೇಶ್ ವಕೀಲರು. ಆಕರ್ಷ ಇವರು ಅಮೆರಿಕಾದ ಕ್ಯಾಲಿಫೋರ್ನಿಯಾ ಸ್ಟೇಟ್ ಯೂನಿವರ್ಸಿಟಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ವ್ಯಾಸಂಗವನ್ನು ಮಾಡಿ ಕೆಲಕಾಲ ಅಮೆರಿಕಾ, ಸ್ವಿಟ್ಸರ್ಲ್ಯಾಂಡ್, ಮತ್ತು ಫ್ರಾನ್ಸ್, ದೇಶಗಳಲ್ಲಿ ನೆಲೆಸಿದ್ದರು. ಇವರ ಕೆಲವು ಕಿರು ಚಿತ್ರಗಳನ್ನು ನೋಡಿದ್ದೆ. ಕೆಲವು ಬಿಡಿ ಬಿಡಿ ಕವಿತೆಗಳನ್ನು ಫೇಸ್ಬುಕ್ ನಲ್ಲಿ ಓದಿದ್ದೆ. ಆದರೆ, ಈ ಪುಸ್ತಕದ 88 ಪುಟಗಳ ನಲವತ್ತೆಂಟು ಕವಿತೆಗಳು ಒಂದೇ ಗುಕ್ಕಿಗೆ ಮುಗಿಸಿ ಕೆಳಗಿಡುವಂತಹದ್ದಲ್ಲ.
ಅರ್ಪಣೆಯಲ್ಲಿಯೇ ಮನಸೆಳೆಯುವ ಸಾಲೊಂದನ್ನು ಬರೆಯುತ್ತಾರೆ.
ಎಂದೂ ಬರೆಯಲಾಗದ ಕವಿತೆ
'ಅಮ್ಮ'ನಿಗೆ
ಈ
'ಗ್ರಾಫಿಟಿಯ ಹೂವು'
ಎಂದು ಬಿಡುತ್ತಾರೆ.
ಸೂಕ್ಷ್ಮಗಳನ್ನು ಅಷ್ಟೇ ಸಾಕಾರವಾಗಿ ಬಿಚ್ಚಿಡುವ ಈ ಕವನ ಸಂಕಲನ ಹೊಸ ತಲೆಮಾರಿನ ಕವಿತೆಗಳ ಪ್ರತಿನಿಧಿಯೊಂದರಂತೆ ಭಾಸವಾಗುತ್ತದೆ. ಇಲ್ಲಿ ಯಾವ ಕವಿತೆಗಳಿಗೂ ಶೀರ್ಷಿಕೆಗಳಿಲ್ಲ. ಕಟ್ಟುಪಾಡಿಲ್ಲದ ಕವಿತೆಗಳು ಎಲ್ಲೆಡೆಯನ್ನೂ ನಮ್ಮ ಮನಸ್ಸಿಗೆ ತಂದು ನೋಡುವಂತೆ ಮಾಡುತ್ತವೆ. ಇಲ್ಲಿ ಬರೀ ಈ ನೆಲದ ಕವಿತೆಗಳಿಲ್ಲ.. ಇಲ್ಲಿ ದೇಶ-ವಿದೇಶದ ಪರಿಸರವಿದೆ, ನೆಲೆ ಇದೆ. ನಮ್ಮೊಳಗು ಕಾಣುತ್ತದೆ.. ಸಾಮಾಜಿಕ ಪ್ರಜ್ಞೆ, ತಲ್ಲಣ, ಭಾವನೆ, ಅಂತರಂಗ-ಬಹಿರಂಗ ಎಲ್ಲವೂ ಕಾಣುತ್ತದೆ. ಪ್ರತಿಮೆಗಳು, ಉಪಮೆಗಳಿದ್ದರೂ ವಿಭಿನ್ನವಾಗಿದೆ ಎಂದೆನಿಸುತ್ತವೆಯೇ ಹೊರತು ಕ್ಲಿಷ್ಟವಾಗಿದೆ ಎಂದೆನಿಸುವುದಿಲ್ಲ. ನಮ್ಮ ನಡುವೆಯೇ ನಡೆದಾಡಿದ ಕವಿತೆಗಳಾಗಿರಬಹುದಾ ಇವುಗಳು ಎಂಬ ಅನುಮಾನವಂತೂ ಕಾಡುತ್ತದೆ. ಹೀಗೂ ಯೋಚಿಸಬಹುದಾ, ಹೀಗೆಯೂ ಇರಬಹುದಾ ಎಂಬ ಬೆರಗು ಹುಟ್ಟಿಸುತ್ತಲೇ ಆಲೋಚನೆಗೆ ಹಚ್ಚುತ್ತವೆ.
ಕಳೆದು ಹೋದ ನಿರಾಶ್ರಿತರು, ಕಳೆದುಕೊಂಡ ನಗರಗಳು, ನೆತ್ತರ ಬಣ್ಣ, ಕವಿ ಕತೆಯಾಗುವ ಪರಿ, ವಿಮಾನದ ಕಿಟಕಿಯಿಂದ ಇಣುಕಿದಾಗ ಭೂಮಿಗೆ ಆಗಿದ್ದ ಗಾಯಗಳು, ಮೌನಿ ಅಪ್ಪ ಅಸಹಾಯಕತೆಯ ಪರಿಧಿ ಕಂಡಾಗ ಇರುವ ಬದುಕಿನ ಭಾರ, ಕಪಾಟಿನ ಶರ್ಟು, ಅವರಿವರ ಮನೆಯ ಕಾಣದ ಕತೆ, ದೊಂಬಿಗಳ ಮಧ್ಯೆ ಕಳೆದು ಹೋದವನ ವಾಸ್ತವ, ಹುಚ್ಚನಂತಿದ್ದ ಹುಚ್ಚನೇ ಆದವನ.. ಹುಚ್ಚು ಹಿಡಿಯದೆಯೂ ಹುಚ್ಚ ಎನ್ನಿಸಿಕೊಂಡಿದ್ದವನ ಬದುಕು, ಬದಲಾದ ಕತೆಗಳ ಪಾತ್ರಗಳು, ಬಣ್ಣಗಳು, ಕವಿಯ ಭಾವ, ಅಸಂಗತ ಚಿತ್ರಣಗಳು, ಅಮೆರಿಕಾದ ಗೋಲ್ಡ್ ಫಿಶ್ ಮತ್ತು ಏಕಾಂತ, ಬೇರು ಕತ್ತರಿಸಿ ಬದುಕಿದವರು, ಕವಿತೆ ಬರೆಯುವ ಪರಿ, ನಂಬಿಕೆ, ಶಹರದ ಮತ್ತು ಸಾಗರದ ಸ್ವಗತಗಳಂತೆ ಭಾಸವಾಗುವ ಭಾವಗಳು, ಅಲೆಮಾರಿಗಳು, ಭವಿಷ್ಯದ ಕತೆಗಳು, ಕಾಫಿಯ ಹೊಳಹು ಹೀಗೆ ವಿಭಿನ್ನ ವಿಚಾರಗಳ ಜೊತೆಗೆ ಕೊನೆಯಲ್ಲೊಂದು ವಿಶೇಷ ಗಪದ್ಯವಿದೆ.
ನನಗೆ ತುಂಬಾ ಹಿಡಿಸಿದ ಕವಿತೆಯೊಂದನ್ನು ನಾನಿಲ್ಲಿ ಉಲ್ಲೇಖಿಸುತ್ತೇನೆ.
'ಮರುಭೂಮಿಯಲ್ಲಿ ಕಳೆದು ಹೋಗಿದ್ದ
ನಗರವನ್ನು ಕಂಡುಹಿಡಿದಿದ್ದಾರೆ'
ಸುದ್ದಿ ಪತ್ರಿಕೆ ನೋಡುತ್ತಿದ್ದ ಅಪ್ಪ ಹೇಳಿದ
ಆ ಕಟ್ಟಕಡೆಯ ರಾತ್ರಿ
ನಗರದ ಗೋಡೆಗಳ ಒಳಗೆ
ಒಂಟಿಯಾಗಿ ಅಲೆದು
ಮುಂಜಾವಿನಲ್ಲಿ ನಗರವನ್ನು
ಸಮಾಧಿ ಮಾಡಿ ಹೊರ ನಡೆದ
ಆ ಕೊನೆಯ ಮನುಷ್ಯನನ್ನು ನೆನೆದೆ.
ಆದರೆ ನಾನು ಅವನನ್ನೂ ನೆನೆಯಬೇಕಿತ್ತು
ಇಲ್ಲಿ ನೆಲೆಸಿದ ಮೊದಲ ದಿನವೇ
ಮುಂಜಾವಿನಲ್ಲಿ ಮರುಭೂಮಿಯ
ನಗರವಾಗಿಸಬೇಕೆಂಬ ಕನಸ ಹೊತ್ತು
ನನಸಾಗಿಸಿದ್ದ ಆ ಅವನನ್ನು
ಕೂಡಾ ನಾನು ನೆನೆಯಬೇಕಿತ್ತು.
ಇದು ಕೇವಲ ಒಂದು ಕವಿತೆ. ಇಂತಹ ಹೊಳಹು ಹೊಳೆಸುವ ಎಷ್ಟೋ ಕವಿತೆಗಳಿವೆ ಇದರಲ್ಲಿ. ಮತ್ತಷ್ಟು ಕವಿತೆಗಳನ್ನು ಬರೆಯುತ್ತಿರಿ ಎಂದಷ್ಟೇ ಹೇಳಬಹುದು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ