ಸೋಮವಾರ, ಏಪ್ರಿಲ್ 6, 2026

ಹಸಿಮಾಂಸ ಮತ್ತು ಹದ್ದುಗಳು (ಪುಸ್ತಕ ಯಾನ - 19)


ಪುಸ್ತಕದ ಹೆಸರು : ಹಸಿಮಾಂಸ ಮತ್ತು ಹದ್ದುಗಳು

ಲೇಖಕರು : ಶ್ರೀಮತಿ ಗೀತಾ ನಾಗಭೂಷಣ

ಪುಟಗಳು : 84

ಮೊದಲ ಮುದ್ರಣ : 1978

ದ್ವಿತೀಯ ಮುದ್ರಣ : 1998 

ಬೆಲೆ : 20 ರೂಪಾಯಿಗಳು

ಹಕ್ಕು : ಕನ್ನಡ ಪುಸ್ತಕ ಪ್ರಾಧಿಕಾರ


( ಈ ಪುಸ್ತಕ ಈಗ ಡಿಜಿಟಲ್ ಲೈಬ್ರರಿಯಲ್ಲಿ ಉಚಿತವಾಗಿ ಪಿ.ಡಿ.ಎಫ್ ರೂಪದಲ್ಲಿ ಲಭ್ಯವಿದೆ )


ಇದು ನಾನು ಓದಿದ ಗೀತಾ ನಾಗಭೂಷಣ ಅವರ ಮೊದಲ ಪುಸ್ತಕ. ಈ ಪುಸ್ತಕದ ಶೀರ್ಷಿಕೆ ನೋಡಿದಾಗ ಬಡತನ ಹಾಗೂ ಸಿರಿವಂತರ ದಬ್ಬಾಳಿಕೆಯ ಕತೆ ಇರಬಹುದಾ ಎನ್ನಿಸಿದರೂ ಸಹಾ ಇನ್ನೊಮ್ಮೆ ಹಸಿಮಾಂಸ ಎಂದು ಇರುವುದರಿಂದ ಹೆಣ್ಣನ್ನು ಕಿತ್ತು ತಿನ್ನುವ ಕ್ರೂರಿ ಗಂಡುಗಳ ಕತೆ ಇದಾಗಿರಬಹುದಾ ಎಂದೂ ಅನ್ನಿಸಿತ್ತು. ಆದರೆ, ಇದೆಲ್ಲದರ ಮಿಳಿತ ಹಾಗೂ ನನ್ನ ನಿರೀಕ್ಷೆಯನ್ನು ಮೀರಿದ ಹಾಗಿತ್ತು ಈ ಪುಸ್ತಕ. ಕೆಲವೊಮ್ಮೆ ಇಷ್ಟು ಕ್ರೌರ್ಯ ಇರಬಹುದಾ ಎನ್ನಿಸಿದರೂ, ಇಷ್ಟು ಅಸಹಾಯಕತೆ, ಇಷ್ಟು ಬಡತನದ ಬವಣೆ ಇರಬಹುದಾ.. ವಿಧಿ ಕರುಣೆಯಿಲ್ಲದೆ ಇಷ್ಟು ಕ್ರೂರಿಯಾಗಿರುತ್ತದಾ ಎಂದನ್ನಿಸಿದರೂ ಮತ್ತೊಮ್ಮೆ ಈ ಕತೆ ಈ ಮಣ್ಣಿನದ್ದೇ, ಇದು ವಾಸ್ತವದ ಕಟು ಸತ್ಯವನ್ನು ತೆರೆದಿಡುವ ಕತೆ ಎನ್ನಿಸಿತು. ಹೀಗೂ ಇರುತ್ತದಾ.. ಅಥವಾ ಹೀಗೂ ಇತ್ತಾ ಎಂದು ಕೇಳುವವರಿಗೂ ಕಟು ವಾಸ್ತವ ಹೀಗೆಯೇ ಇತ್ತು ಎಂದು ಅರ್ಥ ಮಾಡಿಸುವ ಕತೆ ಇಲ್ಲಿದೆ. ಓದುತ್ತಾ ಓದುತ್ತಾ ಕಣ್ಣಂಚಿನಲ್ಲಿ ನೀರು ಜಿನುಗಿದ್ದೂ ಇದೆ. ಬಹುಶಃ ಇದನ್ನು ಕೇವಲ ಸ್ತ್ರೀ ಕೇಂದ್ರಿತ ಅಥವಾ ಬಂಡಾಯಕ್ಕೆ ಸಂಬಂಧಿಸಿದ್ದು ಎಂದು ಹೇಳಲಾರೆ.


ಈ ಪುಸ್ತಕ ನಾನು ಉಳಿದ ಪುಸ್ತಕಗಳನ್ನು ಓದಿದ್ದಕ್ಕಿಂತ ಹೆಚ್ಚು ಸಮಯ ಬೇಡಿತು. ಏಕೆಂದರೆ, ಇಲ್ಲಿನ ಭಾಷೆ ಕಲ್ಬುರ್ಗಿಯ ಕನ್ನಡ. ಆಡುಭಾಷೆಯಲ್ಲಿ ಬರೆದ ಈ ಕಾದಂಬರಿಯಲ್ಲಿ ಸಾಹಿತ್ಯ ರೂಪದ ರೂಪಕಗಳೂ ಸೇರಿ ಇದನ್ನು ಕಣ್ಣ ಮುಂದೆ ಕಟ್ಟಿಕೊಡುವಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿವೆ. ಅಲ್ಲಿಯ ಜೀವನಶೈಲಿ ಹಾಗೂ ಆಹಾರ ಪದ್ಧತಿ ಗೊತ್ತಿಲ್ಲದಿದ್ದರೂ ಇದರ ಮೂಲಕ ಪರಿಚಯವಾಗುತ್ತದೆ. 


ಫಕೀರಪ್ಪ ಅರವತ್ತು ದಾಟಿದ ಮುದುಕ. ಆತನ ಹೆಂಡತಿ ಅದಾಗಲೇ ಹಾಸಿಗೆ ಹಿಡಿದಿದ್ದು.. ಅವರಿಗಿದ್ದದ್ದು ಒಬ್ಬಳೇ ಮಗಳು ಲಚ್ಚಿ. ಅವಳ ಕುರಿತು ಫಕೀರಪ್ಪ ಒಂದು ಮಾತು ಉಲ್ಲೇಖಿಸುತ್ತಾನೆ. ಆಕೆ ಮೈ ನೆರೆದು ಎರಡು ವರ್ಷವಾಗಿದ್ದು ಅವಳಿಗೆ ಮದುವೆ ಮಾಡುವ ಮಾತೆತ್ತಿದ್ದಾಗ "ಹಳ್ಯಾಗ ಹರೇದ ಮಗಳಿಗೆ ಬಕ್ಕಳ ದಿನಾ ಮನೆಯಾಗಿಟ್ಕೊಂಡು ಕೂಡ್ರಾದು ಅಂದ್ರ ಹದ್ದುಗೋಳ ಕಣ್ಣಲಿಂದ ಕೋಳಿ ಮರೀಗಿ ಕಾಯ್ದಂಗ"ಎನ್ನುತ್ತಾನೆ. ಏಕೆಂದರೆ ಆತನಿಗೆ ಆ ಕಹಿ ಅನುಭವ ತನ್ನ ಮದುವೆಯಾದಾಗಲೇ ಆಗಿತ್ತು. 


ಫಕೀರಪ್ಪನ ಹೆಂಡತಿ ಗುರ್ಲಿಂಗವ್ವ. ಆಕೆ ಎಲ್ಲರ ಬಾಯಲ್ಲಿಯೂ ಗುಲ್ಲಿಂಗಿ. ಆಗಿದ್ದ ಕುಲಕರ್ಣಿ ಈತನ ಮದುವೆಯಾದ ಮರುದಿನವೇ ಈತನನ್ನು ಕರೆಸಿ ಆತನ ಹೆಂಡತಿಯನ್ನು ಮೊದಲು ತಾನು ಹಾಗೂ ಊರಿನ ಗೌಡ ಅನುಭವಿಸಿದ ನಂತರವೇ ನಿನಗೆ. ಇದು ಊರಿನ ಪದ್ದತಿ ಎಂದಾಗ ಸುಳ್ಳು ಹೇಳಿ ಆ ಕ್ಷಣಕ್ಕೆ ತಪ್ಪಿಸಿಕೊಂಡು ಬಂದರೂ ಅದು ಆತನ ಎದೆಯಲ್ಲಿ ರೋಷ ಹುಟ್ಟಿಸಿತ್ತು. ಆದರೆ , ಆದದ್ದೇ ಮತ್ತೊಂದು ಎನ್ನುವಂತೆ ಕುಲಕರ್ಣಿಯ ಹೆಂಡತಿಯ ಗುಟ್ಟು ರಟ್ಟಾಗಿ ನಂತರ ತಾನು ಹೆಂಡತಿಯನ್ನು ಕರೆದುಕೊಂಡು ಊರು ಬಿಟ್ಟು ನಂತರ ಕುಲಕರ್ಣಿಯ ಮರಣದ ನಂತರ ಬರುತ್ತಾನೆ. ಅಷ್ಟರಲ್ಲಿ ಲಚ್ಚಿ ಹುಟ್ಟಿರುತ್ತಾಳೆ. 


ಫಕೀರಪ್ಪನ ಹೆಂಡತಿ ಸತ್ತದ್ದರಿಂದ ಶುರುವಾಗುವ ಕಥಾನಕ ಈ ಎಲ್ಲಾ ನೆನಪುಗಳನ್ನು ಹೊತ್ತು ಸಾಗುತ್ತದೆ. ಕೆಲವೇ ದಿನಗಳಲ್ಲಿ ಲಕ್ವಾ ಅಂದರೆ ಪಾರ್ಶ್ವವಾಯುವಿಗೆ ತುತ್ತಾಗುವ ಫಕೀರಪ್ಪ ಕೂಡಾ ಕೊನೆಯುಸಿರೆಳೆದಾಗ ಲಚ್ಚಿ ಅಕ್ಷರಶಃ ಅನಾಥೆಯಾಗುತ್ತಾಳೆ. ಆದರೆ, ಅದಕ್ಕಿಂತಲೂ ಕೊಂಚ ಮುನ್ನ ಫಕೀರಪ್ಪ ಗೆಲುವಾಗಿದ್ದಾಗಲೇ ಲಚ್ಚಿಯ ಬದುಕಲ್ಲಿ ಒಂದು ನವಿರಾದ ಪ್ರೇಮ ಶುರುವಾಗುತ್ತದೆ. ಅದು ಕಾಸಿನಾಥ. ಇಬ್ಬರ ಮದುವೆಗೂ ತೊಡಕು. ಕಾರಣ ಲಚ್ಚಿ ಹೊಲೆಯಳಾದರೆ ಆತ ಮಾದಿಗ. ಆದರೆ, ಇಬ್ಬರ ಮನೆಯಲ್ಲಿಯೂ ವಿಚಾರ ತಿಳಿಯದಿದ್ದುದರಿಂದ ಮದುವೆಯವರೆಗೂ ವಿಚಾರ ಹೋಗಿರುವುದಿಲ್ಲ.


ಇಂತಹಾ ವಿಷಮ ಸ್ಥಿತಿಯಲ್ಲಿ ಭೀಕರ ಬರಗಾಲ ಬಂದು ಮುಕ್ಕಾಲು ಊರು ಗುಳೆ ಹೋದಾಗಲೂ ಲಚ್ಚಿ ತನ್ನ ಪಕ್ಕದ ಮನೆಯ ಹಾಗೂ ಜೀವದ ಗೆಳತಿ ಕೆಂಚಿ ಹೋಗುವಾಗ, ಅವರು ಅನಾಥೆಯಾಗಿದ್ದ ಅವಳನ್ನು ಕರೆದರೂ ಹೋಗಲು ಒಪ್ಪುವುದಿಲ್ಲ. ಕಾರಣ ಕೆಂಚಿಗೆ ತಿಳಿದಿರುವುದರಿಂದ , ಕಾಸಿನಾಥ ಕುಲಕರ್ಣಿಯ ಮನೆಯಲ್ಲಿ ಕೆಲಸ ಮಾಡುತ್ತಿದುದರಿಂದ ಅವಳ ಬದುಕು ಹಸನಾಗಿರುತ್ತದೆ ಎಂದು ತಿಳಿದು ಹೊರಡುತ್ತಾಳೆ.


ಎಲ್ಲವೂ ಸರಿಯಾಗಿದ್ದರೆ.. ಎಂದು ಯೋಚಿಸಿದರೆ ಕಾಸಿನಾಥ ಹಾಗೂ ಲಚ್ಚಿ ಸುಖವಾಗಿರುತ್ತಿದ್ದರು. ಆದರೆ, ಭೀಕರ ಬರಗಾಲ ಹಾಗೂ ಲಚ್ಚಿಯ ಸೌಂದರ್ಯ ಅವಳಿಗೆ ಮುಳುವಾಯಿತು. ಒಮ್ಮೆ ಗುಡಿಯ ಪೂಜಾರಿ ಅವಳೊಡನೆ ಅನುಚಿತವಾಗಿ ವರ್ತಿಸಿದ್ದ ಅನುಭವವಾಗಿತ್ತು ಅವಳಿಗೆ. 


ಕಾಸಿನಾಥ ಅವಳ ಹಸಿವು ನೀಗಿಸಲು ಕುಲಕರ್ಣಿಯ ತೋಟದ ಕುಂಬಳಕಾಯಿ ಕೊಡುತ್ತಾನೆ. ಆದರೆ , ಅವಳ ಅದೃಷ್ಟ ಕೆಟ್ಟಿದ್ದರಿಂದ ಆಕೆ ಕುಲಕರ್ಣಿಯ ಕೈಗೆ ಸಿಕ್ಕಿ ಬೀಳುತ್ತಾಳೆ. ಅವಳನ್ನು ಅನುಭವಿಸಲು ಹೊಂಚು ಹಾಕಿದ್ದವನಿಗೆ ಇದು ಸದವಕಾಶ. ಆದರೆ, ಲಚ್ಚಿ ಒಪ್ಪದೇ ಹೋದದ್ದರಿಂದ ದೂರು ಪೋಲೀಸರವರೆಗೂ ಹೋಗುತ್ತದೆ.


ಪೋಲೀಸರ ಪ್ರತಿಕ್ರಿಯೆ ಏನಿತ್ತು ? ಪೋಲೀಸ್ ಸ್ಟೇಷನ್ ವಾಸ ಅವಳನ್ನು ಸಂಪೂರ್ಣ ಬದಲಾಯಿಸಿದ್ದು ಏಕೆ ? ಕಾಸಿನಾಥ ಲಚ್ಚಿಯ ನಂಬಿಕೆ ಹಾಗೂ ಪ್ರೀತಿಗೆ ಅರ್ಹನೇ ? ಜೈಲುವಾಸದ ನಂತರ ಲಚ್ಚಿಯ ಬದುಕು ಎಲ್ಲಿಗೆ ಬಂದು ನಿಂತಿತು ? ಸ್ತ್ರೀ ನಿಕೇತನ ಲಚ್ಚಿಯ ಪಾಲಿಗೆ ನಂದಾದೀಪವಾಯಿತೇ ಅಥವಾ ಸುಡುವ ಜ್ವಾಲೆಯೋ ? ಬಸೆಣ್ಣಿ ಲಚ್ಚಿಯ ಪಾಲಿನ ದೇವರೇ ಅಥವಾ ದೆವ್ವವೇ ?


ಇದೆಲ್ಲ ಉತ್ತರಗಳನ್ನು ತಿಳಿಯಲು ನೀವು ಈ ಪುಸ್ತಕ ಓದಲೇಬೇಕು. 


ಹೆಣ್ಣು ಎಂದರೆ ಭೋಗಕ್ಕೆ ಮಾತ್ರವಾ ? ಆಕೆಯ ತೊಗಲು ಮಾತ್ರ ಬಯಸುವವರಿಗೆ ಆಕೆಯ ಮನಸ್ಸು ಏಕೆ ಅರ್ಥವಾಗದು ? ಶೀಲ ಎಂಬುದು ಹೆಣ್ಣಿನ ಬದುಕನ್ನು ಅಳೆಯುವ ಮಾನದಂಡವೇ ? ಈ ಎಲ್ಲಾ ಪ್ರಶ್ನೆಗಳು ಅಂದೂ ಇದ್ದವು. ಇಂದೂ ಇವೆ. ಈ ಪುಸ್ತಕ ಓದಿದ ನಂತರ ಮನಸ್ಸಿಗೆ ಗಾಢ ವಿಷಾಧ ಆವರಿಸಿಕೊಳ್ಳುತ್ತದೆ. 


ಲೇಖಕಿ ಈ ಕತೆಯ ಅಂತ್ಯವನ್ನು ಬದಲಾಯಿಸಬಹುದಾಗಿತ್ತು ಎಂದನಿಸಿದರೂ ವಾಸ್ತವವನ್ನು ಢಾಳಾಗಿ ತೋರಿಸಿದವರು ಅಂತ್ಯವನ್ನೂ ಹಾಗೆಯೇ ಮಾಡಿದ್ದಾರೆ ಎನ್ನಿಸಿತು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ