ಸೋಮವಾರ, ಏಪ್ರಿಲ್ 6, 2026

ಪುಸ್ತಕ ಯಾನ

 

ಬದುಕಿನಲ್ಲಿ ನಾವು ಅದೆಷ್ಟು ಪಾಠ ಕಲಿಯುತ್ತೇವೆ. ಅಲ್ಲವಾ..?? "ದೇಶ ಸುತ್ತು, ಕೋಶ ಓದು" ಎನ್ನುವ ಮಾತಂತೂ ಜನಜನಿತ. ದೇಶ ಸುತ್ತುವ ಆಯ್ಕೆ ಅದೆಷ್ಟು ಜನರಿಗೆ ಸರಿಯಾಗಿ ಸಿಗುವುದೋ..?? ಗೊತ್ತಿಲ್ಲ..! ಏಕೆಂದರೆ, ದೇಶ ಸುತ್ತುವ ಬರದಲ್ಲಿ ಕೆಲವೊಮ್ಮೆ ಅಕ್ಕ-ಪಕ್ಕದಲ್ಲಿರುವ ಜಾಗಗಳನ್ನೇ ನಾವಿನ್ನೂ ಸರಿಯಾಗಿ ಗಮನಿಸಿರುವುದಿಲ್ಲ. ಬಹುಶಃ ದೃಷ್ಟಿಕೋನ ಹಾಗೂ ಆಲೋಚನೆ ಕೂಡಾ ಇದಕ್ಕೆ ಅತ್ಯವಶ್ಯಕ. ಆದರೆ, ಪುಸ್ತಕಗಳು ಹಾಗಲ್ಲ. ಒಂದೆಡೆ ಕುಳಿತು ಕೈಯ್ಯಲ್ಲಿಡಿದರೆ ಸಾಕು. ಪ್ರಿಂಟೆಡ್ ಸಿಗದವರಿಗೆ ಮೊಬೈಲ್ ನಲ್ಲಿಯೇ ಇ-ಬುಕ್. ಓದುವ ಆಸಕ್ತಿ ಇಲ್ಲದಿದ್ದರೆ ಕೇಳಿಸಿಕೊಳ್ಳುವ ಆಯ್ಕೆ ಇರುವ ಆಡಿಯೋ ಬುಕ್. ಈಗಂತೂ ಅದೆಷ್ಟೋ ಬಗೆಯ ಪುಸ್ತಕಗಳು.. ದಿನಕ್ಕೆ ಅದೆಷ್ಟು ಪುಸ್ತಕಗಳು ಬಿಡುಗಡೆಯಾಗುತ್ತವೋ ಗೊತ್ತಿಲ್ಲ. ಇಂದು ಓದುಗನಿಗಿಂತ ಹೆಚ್ಚಾಗಿ ಲೇಖಕರೇ ಇದ್ದಾರೇನೋ ಎನ್ನಿಸಿಬಿಡುತ್ತದೆ. ಪ್ರಕಟಿತ ಪುಸ್ತಕಗಳಲ್ಲಿ ಗಟ್ಟಿ ಸಾಹಿತ್ಯ ಹಾಗೂ ಜೊಳ್ಳು ಸಾಹಿತ್ಯ ಎರಡನ್ನೂ ಪ್ರತ್ಯೇಕಿಸಿ.. ಯಾವುದು ನಮ್ಮ ಆಯ್ಕೆಯ ಸಾಹಿತ್ಯವಾಗುತ್ತದೆ ಎಂಬುದನ್ನು ನಾವೇ ಅರಿಯಬೇಕಾಗಿದೆ. 


"ಡೋಂಟ್ ಜಡ್ಜ್ ಬುಕ್ ಬೈ ಇಟ್ಸ್ ಕವರ್" ಎನ್ನುವಂತೆ ಯಾವುದೇ ಲೇಖಕನನ್ನು, ಅವರ ಜೀವನವನ್ನು ಅಥವಾ ಪುಸ್ತಕದ ಮುಖಪುಟವನ್ನು ಅಥವಾ ಮತ್ತಾರೋ ಪುಸ್ತಕದ ಬಗ್ಗೆ ಬರೆದ ಸಾಲುಗಳನ್ನು ಗಮನಿಸಿ, ಅದಕ್ಕೆ ತಕ್ಕಂತೆ ನಮ್ಮ ಆಲೋಚನೆಗಳನ್ನು ಮೂಡಿಸಿಕೊಳ್ಳುತ್ತೇವೆ ಎಂದರೆ ಅದು ಸರಿಯಾಗುವುದಿಲ್ಲವೇನೋ.. ಏಕೆಂದರೆ, ಪ್ರತಿಯೊಬ್ಬ ಓದುಗನ ಶೈಲಿಯೂ ವಿಭಿನ್ನ. ಕೆಲವರಿಗೆ ಕವನ ಸಂಕಲನಗಳು ಇಷ್ಟವಾದರೆ ಕೆಲವರಿಗೆ ಕಥಾ ಸಂಕಲನ, ಮತ್ತೆ ಕೆಲವರಿಗೆ ಕಾದಂಬರಿ, ಇನ್ನೂ ಹಲವರಿಗೆ ಆತ್ಮಚರಿತ್ರೆ, ಜೀವನ ಚರಿತ್ರೆ ಹೀಗೆ.. ನಮ್ಮ ನಮ್ಮ ಆಸಕ್ತಿಯ ಕ್ಷೇತ್ರಗಳನ್ನು ನಾವೇ ಗುರುತಿಸಿಕೊಳ್ಳಬೇಕು ಹಾಗೂ ಅದಕ್ಕೆ ತಕ್ಕಂತಹಾ ಲೇಖಕರ, ವಸ್ತು-ವಿಷಯದ ಆಯ್ಕೆಯನ್ನು ನಾವು ಓದುತ್ತಲೇ ಕಂಡುಕೊಳ್ಳಬೇಕು.


ನನ್ನ ಅನುಭವಕ್ಕೆ ಬಂದ ವಿಚಾರಗಳೆಂದರೆ ಎಷ್ಟೋ ಪುಸ್ತಕಗಳ ಶೀರ್ಷಿಕೆ ಸೆಳೆಯದಿದ್ದರೂ.. ಕಥಾವಸ್ತುಗಳಂತೂ ಬಹಳವೇ ಚೆಂದವಿರುತ್ತವೆ. ಇನ್ನೂ ಅನನುಭವಿ ಲೇಖಕರು ಎಂದು ಪಕ್ಕಕ್ಕೆ ಎತ್ತಿಟ್ಟವರ ಪುಸ್ತಕಗಳಲ್ಲಿಯೇ ನನಗೆ ನನ್ನ ನೆಚ್ಚಿನ ಕಥೆಗಳು ಹಾಗೂ ಇಷ್ಟಪಡುವ ಸಾಲುಗಳು ಸಿಕ್ಕುತ್ತವೆ. ಕೆಲವೊಮ್ಮೆ ನಾವು ಕೈಗೆತ್ತಿಕೊಳ್ಳುವ ಪುಸ್ತಕ ನಮ್ಮ ಮನಸ್ಥಿತಿಯ ಮೇಲೆಯೂ ಆಧಾರಿತವಾಗಿರುತ್ತದೆ. ಕೆಲವು ಪುಸ್ತಕಗಳನ್ನು ಓದಲು ನಮ್ಮ ಮನಸ್ಸು, ಅನುಭವ, ವಯಸ್ಸು ಎಲ್ಲವೂ ಪರಿಪಕ್ವವಾಗಿರಬೇಕಾಗುತ್ತದೆ. 


ಆಗಿನ್ನೂ ಪುಸ್ತಕ ಓದಲು ಶುರು ಮಾಡುವವರಿಗೆ ಯಾವುದೋ ಮಹಾಕಾವ್ಯವನ್ನು ಸಜೆಸ್ಟ್ ಮಾಡಿದರೆ.. ಅವರಿಗೆ ಅದು ಬೋರಾಗಿ ಹೋಗಬಹುದು. ಅದರ ಬದಲಿಗೆ, ಮೊದಲಿಗೆ ಆಸಕ್ತಿಯುಳ್ಳ ಕಥಾವಸ್ತುವಿನ ಕಥಾಸಂಕಲನವನ್ನು ಅಥವಾ ಕಾದಂಬರಿಯನ್ನು ಕೈಗಿತ್ತರೆ ಅವರಿಗೆ ಓದಿನಲ್ಲಿ ಆಸಕ್ತಿ ಹೆಚ್ಚಾಗಬಹುದು. ಅಂತಹಾ ಪುಸ್ತಕಗಳು ಹೆಚ್ಚು ರುಚಿಸುತ್ತವೆ ಎಂಬುದು ಸತ್ಯ. ಇನ್ನೂ ಓದಲು ಸರಿಯಾಗಿ ಶುರುಮಾಡಿದ ಅಥವಾ ಓದಿನ ಕುರಿತು ಆಸಕ್ತಿ ಬೆಳೆಸಿಕೊಳ್ಳದಿದ್ದವರನ್ನು ನೋಡಿ ಯಾರೋ ಕವಿಯೊಬ್ಬರು ಹೇಳಿದ ಚೆಂದದ ಮಾತೊಂದು ನನಗೆ ನೆನಪಾಗುತ್ತದೆ. "ಅವರಿಗಿನ್ನೂ ಓದಿನ ಕುರಿತು ಆಸಕ್ತಿ ಬೆಳೆದಿಲ್ಲ ಎಂದಿದ್ದರೆ.. ಅದಕ್ಕೆ ಕಾರಣ ಅವರಿಗಿನ್ನೂ ಅವರ ಆಸಕ್ತಿ ಕೆರಳಿಸುವಂತಹಾ ಪುಸ್ತಕ ದೊರೆತಿಲ್ಲ ಎಂಬುದು". ಇದು ಹೌದಾದರೂ.. ಅಂತಹಾ ಆಸಕ್ತಿ ಬೆಳೆಸಿಕೊಳ್ಳುವುದು ಸಹಾ ಅವರವರ ಆಸಕ್ತಿಯ ಕ್ಷೇತ್ರ, ಹವ್ಯಾಸ ಹಾಗೂ ಪ್ರಯತ್ನಗಳ ಮೇಲೆಯೇ ನಿಂತಿರುತ್ತದೆ. 


ಎಷ್ಟೋ ಬಾರಿ ಕೆಲವು ಸಿನಿಮಾಗಳನ್ನು ನೋಡಲು ಹೋದಾಗ ಮಧ್ಯಂತರದ ನಂತರದ ಕಥೆ ಹೆಚ್ಚು ಇಷ್ಟವಾಗಬಹುದು ಅಥವಾ ಆಸಕ್ತಿ ಮೂಡಿಸುವಂತಹಾ ಪಾತ್ರಗಳ ಪಾತ್ರಪೋಷಣೆ ಅಲ್ಲಿಂದ ದೊರೆಯಬಹುದು. ಈ ಅನುಭವ ನನಗೂ ಎಷ್ಟೋ ಬಾರಿ ಆಗಿದೆ. "ಅಯ್ಯೋ.. ಆ ಪಿಚ್ಚರ್ರಾ..?? ಪೂರ್ತಿ ನೋಡಿದ್ಯಾ...?? ನಾನಾಗಿದ್ರೆ ಇಂಟರ್ವಲ್ ನಲ್ಲೆ ಎದ್ದು ಬರ್ತಾ ಇದ್ದೆ." ಎಂಬ ಮಾತನ್ನು ನಾನು ಕೇಳಿದ್ದೇನೆ. ಆದರೆ, ನನಗೊಂದು ವಿಚಿತ್ರ ಅಭ್ಯಾಸವಿದೆ. ಯಾವುದೇ ಸಿನಿಮಾವನ್ನಾಗಲಿ ಅಥವಾ ಯಾವುದೇ ಪುಸ್ತಕವನ್ನಾಗಲಿ ಅದು ಎಷ್ಟೇ ಮಹಾನ್ ಬೋರು ಎನ್ನಿಸಿದರೂ.. ಎಷ್ಟೇ ಕಷ್ಟವಾದರೂ.. ಪೂರ್ತಿ ಮುಗಿಸುತ್ತೇನೆ. ಯಾರಿಗೆ ಗೊತ್ತು..?? ಯಾವುದೋ ಕೊನೆಯ ಸಾಲಿನಲ್ಲಿ ಅಥವಾ ಕೊನೆಯ ಐದು ನಿಮಿಷದಲ್ಲಿ ಎಂತಹದ್ದೋ ಟ್ವಿಸ್ಟ್ ಸಿಗಬಹುದು ಅಥವಾ ಯಾವುದೋ ಮೋಟಿವೇಷನ್ ಸಿಗಬಹುದು. ಯಾವುದೇ ಆದರೂ ಅದರಲ್ಲಿ ಕೆಟ್ಟದ್ದು ಎಂಬುದು ಇಲ್ಲವೆಂದೇ ನನ್ನ ಅಭಿಪ್ರಾಯ. "ಒಳ್ಳೆಯವರನ್ನು ಹುಡುಕುತ್ತಾ ಹೋದ ದುರ್ಯೋಧನನಿಗೆ ಒಳ್ಳೆಯವರು ಸಿಗಲಿಲ್ಲವಂತೆ. ಹಾಗೆಯೇ, ಕೆಟ್ಟವರನ್ನು ಹುಡುಕುತ್ತಾ ಹೋದ ಧರ್ಮರಾಯನಿಗೆ ಕೆಟ್ಟವರೇ ಸಿಗಲಿಲ್ಲವಂತೆ. " ಹಾಗೆಯೇ.. ಎಲ್ಲವೂ ನಮ್ಮ-ನಮ್ಮ ದೃಷ್ಟಿಕೋನದ ಮೇಲೆ ಅವಲಂಬಿತ ಎನ್ನುವ ಮಾತು ಒಪ್ಪದಕ್ಕದ್ದೇ. ಅಲ್ಲವೇ..??


ಎಷ್ಟೋ ಬಾರಿ ಓದು ಸಮಾಧಾನವನ್ನು ತಂದುಕೊಟ್ಟರೆ, ಎಷ್ಟೋ ಬಾರಿ ಅದೇ ಓದು ಮನಕಲಕಿ ಮನಸ್ಸನ್ನು ದುಗುಡದ ಕೂಪಕ್ಕಿಳಿಸುವುದು ಸಹಾ ಹೌದು. ಆದರೆ, ಅಂತಹಾ ಸಮಾಧಾನವನ್ನು ಉಳಿಸಿಕೊಳ್ಳುವುದು ಹಾಗೂ ದುಗುಡವನ್ನು ದೂರಪಡಿಸಿ ಮತ್ತೊಂದು ಪುಸ್ತಕವನ್ನು ಕೈಗೆತ್ತಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ಎಷ್ಟೋ ಬಾರಿ 'ನಾನೇಕೆ ಬರೆಯಲಿ..?' ಎಂದು ನನಗನಿಸುವುದಂತೂ ಹೌದು. ಏಕೆಂದರೆ, ಓದಬೇಕಾದ ಎಷ್ಟೋ ವಿಷಯಗಳು ಹಾಗೆಯೇ ಉಳಿದು ಹೋಗಿವೆ. ನಾನಿನ್ನೂ ಕಲಿಯಬೇಕಾದದ್ದು ಬಹಳವೇ ಇದೆ ಎನಿಸುತ್ತದೆ. ಎಷ್ಟೋ ಬಾರಿ ಯಾವುದೋ ಹೊಸ ವಿಷಯವೇನೋ ಎಂಬಂತೆ ಹುಡುಕಿಕೊಂಡು ಹೋಗುವ ಆ ಪ್ರಚಲಿತ ವಿಷಯವನ್ನು ಕಂಡಾಗ.. ಅದಾಗಲೇ ನಾನು ಇಂತಹಾ ಸನ್ನಿವೇಶವನ್ನು ಕಥೆಯಲ್ಲೋ.. ಕಾದಂಬರಿಯಲ್ಲೋ.. ಇಂತಹವರ ಜೀವನ ಚರಿತ್ರೆಯಲ್ಲೋ.. ಕಂಡಿದ್ದೇನಲ್ಲಾ ಎಂಬ ಭಾವ ಮೂಡುವುದೂ ಹೌದು. ನಾವು ಹೆಚ್ಚೆಚ್ಚು ಬರೆಯಬೇಕಾದರೆ.. ಸಂಶೋಧನೆಗಳನ್ನು ಮಾಡಬೇಕಾಗುತ್ತದೆ. ಓದಬೇಕಾಗುತ್ತದೆ. ನಾವು ಮತ್ತೊಬ್ಬರಿಗೆ ನಮ್ಮ ವಿಚಾರಗಳನ್ನು ದಾಟಿಸಬೇಕು ಎಂದರೆ ನಮ್ಮ ಅನುಭವದ ಜೊತೆಗೆ ನಮ್ಮ ಅಧ್ಯಯನ ಕೂಡ ಅಷ್ಟೇ ಮುಖ್ಯವಾಗುತ್ತದೆ. 


ಹೀಗೆ ಓದಿನ ಸುಖಕ್ಕೆ ಒಮ್ಮೆ ನಮ್ಮನ್ನು ತೆರೆದುಕೊಂಡರೆ, ಖಂಡಿತವಾಗಿಯೂ ಅದರಿಂದ ಹೊರಬರುವುದು ಕಷ್ಟವೇ ಕಷ್ಟ. ಓದುಗರಾಗಿರುವವರಿಗೆ ಇದರ ಕುರಿತು ತಿಳಿದಿರುತ್ತದೆ. ಎಷ್ಟೋ ಬಾರಿ ಪಠ್ಯಪುಸ್ತಕದ ಓದು, ಏಕಾಗ್ರತೆ ಮೂಡಿಸದೆ ಹೋಗಿದ್ದಾಗ ಅಥವಾ ಪರೀಕ್ಷೆಗಾಗಿಯೇ ಓದುವ ಸಂದರ್ಭದಲ್ಲಿ ಏಕಾಗ್ರತೆ ಮೂಡದಿದ್ದಾಗ ಫಿಕ್ಷನ್ ಗಳನ್ನು ಹಿಡಿದು ಕೂತು ಒಂದೇ ಗುಕ್ಕಿನಲ್ಲಿ ಮುಗಿಸಿರುವುದೂ ಇಲ್ಲದಿಲ್ಲ. ಓದು ಎನ್ನುವುದು ನನ್ನ ಪಾಲಿಗೆ ನಿರಂತರ ಕಲಿಕೆ. ಅದು ಎಂದಿಗೂ ಮುಗಿಯುವುದು ಸಾಧ್ಯವೇ ಇಲ್ಲ. ಶೈಕ್ಷಣಿಕ ಓದು ಮುಗಿದಿದೆ ಅಷ್ಟೇ.. ಆದರೆ, ನಾವೆಷ್ಟು ತಿಳಿದುಕೊಂಡಿದ್ದೇವೆ ಹಾಗೂ ಅದರಲ್ಲಿ ಎಷ್ಟು ನೆನಪಿದೆ ಎಂದು ಹುಡುಕುತ್ತಾ ಹೊರಟರೆ ನಮಗೆ ಎಷ್ಟು ದಕ್ಕುತ್ತದೆ..? ಹಾಗೆಂದು ನಾವು ಹವ್ಯಾಸಕ್ಕೆಂದು ಓದುವ ಓದಿನಲ್ಲಿಯೂ ಕೆಲವೊಂದು ಕಾದಂಬರಿಗಳ ಕಥೆ ನೆನಪಿದ್ದರೆ ಅವುಗಳ ಪಾತ್ರಗಳ ನೆನಪಿಲ್ಲದಿರಬಹುದು ಅಥವಾ ಪಾತ್ರಗಳ ಹೆಸರು ಥಟ್ ಅಂತ ಹೊಳೆದರೂ.. ಸ್ಥಳಗಳ ಹೆಸರುಗಳು ಮಿಸ್ ಆಗಿ ಬಿಡಬಹುದು. ಅಥವಾ ಆ ಓದು ಇನ್ನಷ್ಟು ದಿನಗಳ ನಂತರ ಮತ್ತೆ ಓದಿದಾಗ ಹೊಸ ಓದು ಎನಿಸಬಹುದು. 


ಹೊಸ ಓದು ಹಾಗೂ ಮರು ಓದು ಎರಡರಲ್ಲಿಯೂ ಸಹಾ ಬಹಳ ವ್ಯತ್ಯಾಸವಿದೆ. ಕೆಲವು ಪುಸ್ತಕಗಳ ಮರು ಓದು ಸಹ ನಮ್ಮಲ್ಲೇನೋ ಹೊಸತನವನ್ನು, ಹೊಸ ಆಲೋಚನೆಯನ್ನು ಮೂಡಿಸಬಹುದು. ಹೀಗೆ ನನ್ನ ಓದು.. ಹೊಸ ಓದು ಹಾಗೂ ಮರು ಓದಿನ ಸಮ್ಮಿಲನ. ಎಷ್ಟೋ ಪುಸ್ತಕಗಳ ಕುರಿತು ಓದಿ ಸುಮ್ಮನಾಗಿ ಅದನ್ನು ದಾಖಲಿಸದೆ ಬಿಟ್ಟಿದ್ದೆ. ಆದರೆ, ನಾನು ಓದಿದ ಪುಸ್ತಕಗಳ ಕುರಿತು ಕೊಂಚವಾದರೂ ಬರೆದರೆ ನನ್ನ ಮರು ಓದಿನಲ್ಲಿ, ಹಿಂದೆ ಬರೆದಿದ್ದ ಟಿಪ್ಪಣಿಗಳು ನನ್ನ ಆಲೋಚನಾ ಶೈಲಿಯನ್ನು ಹಾಗೂ ಗ್ರಹಿಕೆಯ ಶಕ್ತಿಯನ್ನು ನನಗೆ ಪರಿಚಯಿಸುತ್ತವೆ ಎಂಬುದು ಅರಿವಾಯಿತು. 


ನನ್ನ ಓದಿನ ಪಯಣ ಹಾಗೂ ನನ್ನ ಓದಿನ ಟಿಪ್ಪಣಿಗಳನ್ನು ನಾನು ನಿಮಗೆ ತಲುಪಿಸುತ್ತೇನೆ. ನೀವು ಇದನ್ನು ಓದಿದ ನಂತರ, ನೀವು ಆ ಪುಸ್ತಕವನ್ನು ಈಗಾಗಲೇ ಓದಿದ್ದರೆ, ನಿಮಗೆ ಹೇಗನಿಸಿತ್ತು ಎಂಬುದನ್ನು ಹಂಚಿಕೊಳ್ಳಬಹುದು ಅಥವಾ ನೀವಿನ್ನೂ ಆ ಪುಸ್ತಕವನ್ನು ಓದಿರದಿದ್ದರೆ.. ಅದು ಕುತೂಹಲ ಮೂಡಿಸಿತು ಎನ್ನುವ ರೀತಿಯಲ್ಲಿ ಭಾಸವಾದರೆ ಅಥವಾ ನಿಮಗೆ ಇಷ್ಟವಾಯಿತು ಎನ್ನುವ ಅಂಶವಿದ್ದರೆ ನಿಮ್ಮ ಮುಂದಿನ ಓದಿನ ಪಟ್ಟಿಯಲ್ಲಿಯೂ ಸಹಾ ನೀವು ಈ ಪುಸ್ತಕಗಳನ್ನು ಸೇರಿಸಿಕೊಳ್ಳಬಹುದು. ನಾನಂತೂ ಸದಾ ಬರವಣಿಗೆಯ ಮೂಲಕ ನಿಮ್ಮ ಜೊತೆ ಇರುತ್ತೇನೆ. ನೀವು ನಿಮ್ಮ ಪ್ರೋತ್ಸಾಹದ ಮೂಲಕ ನನ್ನ ಜೊತೆ ಇರುತ್ತೀರಿ ಅಲ್ಲವೇ..??


ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ