ಸೋಮವಾರ, ಏಪ್ರಿಲ್ 6, 2026

ಬೆಳ್ಳಿ ಮೋಡ (ಪುಸ್ತಕ ಯಾನ -34)


ಪುಸ್ತಕದ ಶೀರ್ಷಿಕೆ : ಬೆಳ್ಳಿ ಮೋಡ

ಲೇಖಕಿ : ತ್ರಿವೇಣಿ

ಎರಡನೇ ಮುದ್ರಣ : 1987 (ನನ್ನ ಓದಿಗೆ ಸಿಕ್ಕಿದ್ದು)


'ಬೆಳ್ಳಿ ಮೋಡ' ಮತ್ತು 'ಮಿನುಗು ತಾರೆ' ಎಂಬ ಹೆಸರನ್ನು ಕಂಡಾಗ ಮೊದಲಿಗೆ ಮನಸ್ಸಿಗೆ ಹೊಳೆಯುವುದು ಕಲ್ಪನಾರವರು. ಆದರೆ, ತ್ರಿವೇಣಿಯವರ ಈ ಕಾದಂಬರಿ 'ಬೆಳ್ಳಿ ಮೋಡ' ಎಂದಾಗ ನೆನಪಾಗುವುದು ಕಥಾ ನಾಯಕಿ ಇಂದಿರಳ ಸುಪರ್ದಿಯಲ್ಲಿ ನಳನಳಿಸುತ್ತಿರುವ ಎಸ್ಟೇಟ್ ಹಾಗೂ ಆಕೆ ವಾಸಿಸುತ್ತಿದ್ದ ಮನೆ 'ಮಿನುಗು ತಾರೆ'. ಇದಕ್ಕೆಲ್ಲಾ ಕಲಶವಿಟ್ಟಂತೆ ಕಾಣುವುದು ಇಂದಿರಾಳ ವ್ಯಕ್ತಿತ್ವ. ಆಡಂಬರವಿಲ್ಲದೆ ತನ್ನ ಸರಳತೆಯಲ್ಲಿಯೇ.. ರೂಪದಿಂದಲ್ಲ, ಗುಣದಿಂದ ಮನಸೆಳೆಯುವ ನಾಯಕಿ. ನಾಯಕಿ ಎಂಬುದು ಕಥಾ ನಾಯಕಿ ಎಂಬರ್ಥ ಮಾತ್ರವಲ್ಲ. ಎಸ್ಟೇಟ್ , ಕಾಫಿ ಗಿಡಗಳ ಮೇಲ್ವಿಚಾರಣೆ ನಡೆಸುತ್ತಾ ಕೈಯ್ಯಲ್ಲೊಂದು ಕತ್ತಿ ಹಿಡಿದು ತೋಟಕ್ಕೆ ಹೊಕ್ಕಳು ಎಂದರೆ ಕೆಲಸಗಾರರಂತೆ ತಾನೂ ಕೆಲಸ ಮಾಡುತ್ತಾ.. ಜೊತೆ ಜೊತೆಗೆ ಕೆಲಸಗಾರರಿಗೂ ಮಾರ್ಗದರ್ಶನ ಮಾಡಿ ಮೇಲ್ವಿಚಾರಣೆ ಮಾಡುವ ನಾಯಕಿ. ಈಗಿನ ಟೀಮ್ ಲೀಡ್ ಮಾಡುವ ಗುಣ ಈಗಿರಬೇಕು ಎಂದು ಹೇಳುತ್ತೇವಲ್ಲಾ ಅಂತಹದ್ದೇ ಗುಣ. ತಾನು ಬರೀ ಆಜ್ಞೆ ಮಾಡದೆ.. ತಾನೂ ಕೆಲಸ ಮಾಡುತ್ತಾ ಕೆಲಸ ಮಾಡಿಸುವಂತಹದ್ದು.


ಸದಾಶಿವರಾಯರು ಹಾಗೂ ಲಲಿತಮ್ಮನವರ ಏಕಮಾತ್ರ ಪುತ್ರಿಯಾಗಿದ್ದರೂ ಇಂದಿರಳಲ್ಲಿ ಆಡಂಬರವಿರಲಿಲ್ಲ. ಅಪ್ಪನಂತೆಯೇ ಗಟ್ಟಿಗಿತ್ತಿ ಹಾಗೂ ಆರೋಗ್ಯವಂತೆ. ಲಲಿತಮ್ಮನವರಿಗೆ ಮಗಳು ಸರಳವಾಗಿರುವುದು, ಸೀದಾ ಸಾದಾ ಇರುವುದರಲ್ಲಿ ಕೊಂಚ ಆಕ್ಷೇಪ.


ಮೊದಲಿಗೆ ಮೋಹನ ಸಹಾಯವನ್ನು ಯಾಚಿಸಿ ಸದಾಶಿವರಾಯರನ್ನು ಹುಡುಕಿಕೊಂಡು 'ಬೆಳ್ಳಿಮೋಡ'ಕ್ಕೆ ಬಂದಾಗ ಇಂದಿರ ಮಾತ್ರ ಸಿಗುವುದು. ಅದೂ ತೋಟದಲ್ಲಿ.. ಅತಿಥಿ ಸತ್ಕಾರದಲ್ಲಿ ಪುಟ್ಟಯ್ಯನೂ ಮುಂದೆಯೇ.. ಪುಟ್ಟಯ್ಯನ ನೇತೃತ್ವದಲ್ಲಿ ಮೋಹನನಿಗೆ ಅಲ್ಲಿನ ಪರಿಚಯವಾದರೂ ಇಂದಿರಳ ಸಾಮಾನ್ಯ ರೂಪು ಮೊದಮೊದಲು ನಿರಾಸಕ್ತಿ ಉಂಟು ಮಾಡುತ್ತದೆ. ಜೊತೆಗೆ ಅವಳ ಗಾಂಭೀರ್ಯ, ಕ್ಲುಪ್ತ ಮಾತುಗಳೂ ಅಷ್ಟು ಸಲುಗೆ ಮೂಡಿಸುವುದಿಲ್ಲ. ಅವನ ಅಮೆರಿಕಾದ ಓದಿಗೆ ಬೇಕಾದ ಸಹಾಯ ದಕ್ಕುವುದು ಬೇರೆ ರೀತಿಯಲ್ಲಿ.


ಲಲಿತಮ್ಮನವರ ಆಸೆ, ಕನಸುಗಳು ಸುತ್ತುತ್ತಿದ್ದದ್ದು ಇಂದಿರ ಮದುವೆ ಕುರಿತು. ಮೋಹನನನ್ನು ಕಂಡು ಅದಕ್ಕೆ ಸ್ಪಷ್ಟ ರೂಪು ಬಂದಿತ್ತು. ಸದಾಶಿವರಾಯರ ಅನುಭವದ ನೋಟವೋ ಅಥವಾ ಅವರ ಮನಸ್ಸಿನ ಯಾವುದೋ ಮೂಲೆಯಲ್ಲಿ ಮುಂಬರುವ ನೋಟವಿತ್ತೋ ಗೊತ್ತಿಲ್ಲ.. ಆದರೆ, ಮೋಹನ ತಮ್ಮ ಮುದ್ದಿನ ಮಗಳು ಇಂದಿರೆಗೆ ಸರಿಯಾದ ವರನಲ್ಲ ಎಂದು ಭಾವಿಸಿದ್ದರೂ ಇಂದಿರ ಒಪ್ಪಿದಾಗ ಮಗಳ ಸಂತೋಷಕ್ಕೆ ಅವರೂ ಒಪ್ಪುತ್ತಾರೆ.


ಆತ ಅಮೇರಿಕಾಕ್ಕೆ ಹೋಗಿ ಬಂದ ನಂತರ ಮದುವೆ ಎಂಬ ತೀರ್ಮಾನವಾದರೂ.. ಎರಡು ವರ್ಷ ಎನ್ನುವುದು ಅದೆಷ್ಟು ಬದಲಾವಣೆಗಳನ್ನು ತರಬಲ್ಲದಾಗಿತ್ತು.. 


ಮಗಳ ಮದುವೆ ಮಾಡುವ ಕಾಲದಲ್ಲಿ ಲಲಿತಮ್ಮ ಬಹಳ ವರ್ಷಗಳ ನಂತರ ಲಲಿತಮ್ಮ ಗರ್ಭಿಣಿಯಾಗಿ ಆರೋಗ್ಯದ ಸಮಸ್ಯೆಯಿಂದ ತೀರಿ ಹೋಗುವುದು , ಇಂದಿರ ತನ್ನ ತಾಯಿಗೆ ತಾಯಿಯಾಗಿ ನೋಡಿಕೊಳ್ಳುವುದು, ಮಗು 'ಗಿರಿರಾಜ'ನ ಹೊಣೆ ಹೊತ್ತು ತಾಯಿಗಿಂತ ಮಿಗಿಲಾಗಿ ಪೋಷಿಸುವುದು, ಮೋಹನನ ಬದಲಾದ ಭಾವನೆಗಳನ್ನು ಗುರುತಿಸುವುದು.. 


ಹೆಣ್ಣು ಪ್ರೌಢಾವಸ್ಥೆ ತಲುಪುದಕ್ಕೆ ಹೆಚ್ಚು ಕಾಲವೇ ಬೇಕಿಲ್ಲವೇನೋ ಎನ್ನಿಸಿತು. ಹೆಣ್ಣನ್ನು ಪ್ರೌಡೆಯನ್ನಾಗಿ ಮಾಡುವುದು ವಯಸ್ಸಲ್ಲ.. ಬದುಕು, ಕಾಲ ಅಷ್ಟೇ. ಇಂದಿರಳ ಎಷ್ಟೋ ನಡತೆಗಳಲ್ಲಿ ಇದು ಕಂಡಿತು. ತನ್ನ ತಮ್ಮನನ್ನು ತನ್ನ ಪೈಪೋಟಿ ಎಂದು ತಿಳಿದುಕೊಳ್ಳದೆ, ಅಪ್ಪ-ಅಮ್ಮನ ಕುರಿತು ತಪ್ಪು ಭಾವಿಸದೆ ಅಮ್ಮನನ್ನು ಅಮ್ಮನಾಗಿ ಪೋಷಿಸುವ ದೊಡ್ಡ ಗುಣ ಕಂಡಿತು. 


ಮೋಹನ ಇಂದಿರೆಯಿಂದ ತನಗೆ ಬಿಡುಗಡೆ ಬೇಕೆಂದಾಗ ಅದಕ್ಕೆ ಆಕೆ ಪ್ರತಿಕ್ರಿಯೆ ನೀಡಿದ ರೀತಿಯೂ ತಣ್ಣಗಿನ ಪ್ರತಿಕ್ರಿಯೆಯೇ.. ಎರಡು ವರ್ಷ ಅದೆಷ್ಟು ಅನುಭವ ನೀಡಿತ್ತೆಂದರೆ ಆಕೆ ಕೋಪಿಸಿಕೊಂಡು, ಅತ್ತು ಗೋಗರೆದು.. ಬೇಡಬಹುದಾಗಿತ್ತು. ಆದರೆ, ಮತ್ತೊಬ್ಬರ ಸುಖವನ್ನು ಬಯಸುವ ತಾಯಿಯಾಗಿ ನಿಂತಳು. ವಯಸ್ಸಿನಲ್ಲಿ ಅಂತರವಿದ್ದರೂ ನೀವು ಹಾಗೂ ಗಿರಿಯನ್ನು ಒಂದೇ ರೀತಿ ಭಾವಿಸುತ್ತೇನೆ ಎಂದು ಅವಳಾಡಿದ ಮಾತೇ ಅದಕ್ಕೆ ಸಾಕು. ಆತನನ್ನು ಆರಿಸಿದ್ದು ಹುಡುಗತನದ ಕನಸು ಎಂದುಕೊಂಡಳು.


ಸ್ವಾಭಿಮಾನದ ಸಂಕೇತವಾಗಿ ಕೊನೆಗೆ ಆತ ಒಲಿದರೂ, ಬದಲಾದರೂ ಒಪ್ಪಿಕೊಳ್ಳದ ದಿಟ್ಟೆಯಂತೆ ಕಂಡಳು. ಅಲ್ಲಿ ಕಂಡದ್ದು ಹಠಮಾರಿತನವಲ್ಲ.. ಬದಲಾಗಿ ಆಕೆಯ ಗಟ್ಟಿತನ, ಬದುಕನ್ನು ನೋಡುವ ದೃಷ್ಟಿಕೋನ. ಪ್ರತಿ ಗಂಡಿನ ಯಶಸ್ಸಿನ ಹಿಂದೆ ಒಬ್ಬ ಹೆಣ್ಣಿರುತ್ತಾಳೆ ಎನ್ನುವ ಮಾತು ಹೇಗೋ ಪ್ರತಿ ದಿಟ್ಟ ಮಗಳ ಹಿಂದೆ ಆಕೆಗೆ ಬೆಂಬಲವಾಗಿ ನಿಲ್ಲುವ ತಂದೆ ಇರುತ್ತಾರೆ ಎನ್ನುವ ಮಾತನ್ನು ಇಲ್ಲಿ ಹೇಳಬಹುದು.


ಮುದುಕಿಯ ಪಾಲಿಗೆ ಯೌವ್ವನ ಇನ್ನು ಕನಸು ಮಾತ್ರ ಎಂದು ಹೇಳುವುದು ಹಾಗೂ ಬೆಳ್ಳಿ ಕರಗಿ ಹೋಯಿತು.. ಇನ್ನು ನನಗುಳಿದಿರುವುದು ಮೋಡ ಮಾತ್ರ ಎಂದು ಹೇಳುವುದು ನೆಗೆಟಿವ್ ಆಲೋಚನೆ ಇರಬಹುದಾ ಎನ್ನಿಸಿದರೂ ಅಷ್ಟು ಭಾವುಕತೆ , ವಿಷಾದವೂ ಇರಬಾರದೇ ಎಂಬ ಪ್ರಶ್ನೆಯೂ ಮೂಡಿತು. ಅಲ್ಲದೆ.. ಗಿರಿ ಅವಳ ಬಾಳಿನ ಆಶಾ ಕಿರಣದಂತೆ ಕಂಡನು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ