ಪುಸ್ತಕದ ಶೀರ್ಷಿಕೆ : ಕಾಸನೋವ
ಲೇಖಕರು : ಮನೋಜ್ ಪಿ.ಎಂ.
ಪ್ರಕಾಶಕರು : ಯೋಗಮಾಯಾ ಪಬ್ಲಿಕೇಶನ್
ಪ್ರಥಮ ಮುದ್ರಣ :2018 ನವೆಂಬರ್
ಪುಟಗಳು : 232
ಬೆಲೆ :200 ರೂ.
ಕೆಲವು ಪುಸ್ತಕಗಳು ಶೀರ್ಷಿಕೆಗಳಿಂದಾಗಿಯೇ ಮನಸೆಳೆಯುತ್ತವೆ. ಅಂತಹದ್ದೇ ಒಂದು ಮನೋವೈಜ್ಞಾನಿಕ ಕಾದಂಬರಿ ಇದು. ಇದರ ಲೇಖಕರು 'ದೇವಿಪುತ್ರನ್' ಎಂಬ ಹೆಸರಿನಿಂದ ಬರೆಯುವ ಮನೋಜ್ ಪಿ.ಎಂ. ಈ ಪುಸ್ತಕದ ಶೀರ್ಷಿಕೆ 'ಕಾಸನೋವ'. ಈ ಪುಸ್ತಕದ ಓದು ಒಮ್ಮೆಗೆ ಓದಿಸಿಕೊಂಡು ಹೋಗುವುದಿಲ್ಲ. ಇದರರ್ಥ ಕ್ಲಿಷ್ಟ ಅಥವಾ ಬೇರೆಯ ಭಾವವಲ್ಲ. ಹೀಗೂ ಇರುತ್ತದಾ ? ಎಂದು ಯೋಚಿಸಿದರೆ ವಾಸ್ತವ ಹೀಗೆಯೇ ಇರುತ್ತದೆ ಎಂದು ಹೇಳುವ ಆಗಾಗ ವ್ಯಕ್ತಿತ್ವಗಳ ಕುರಿತು ಆಲೋಚಿಸುವಂತೆ ಮಾಡುವ ಜೊತೆಗೆ ಊಹಿಸಲಾಗದ ತಿರುವನ್ನು ತಂದುಕೊಡುವ ಈ ಪುಸ್ತಕದ ಕಥನ ಶೈಲಿ ವಿಭಿನ್ನ. ಕತೆಯ ಹೆಣಿಗೆ ಸೊಗಸಾಗಿದೆ. ಕಥನ ತಂತ್ರ ಹೀಗೂ ಇರಬಹುದಾ ಎನ್ನುವ ಭಾವವನ್ನು ಮೂಡಿಸುತ್ತಾ ಇದು ಇವರ ಎಷ್ಟನೇ ಕಾದಂಬರಿ ಎಂದು ಹುಡುಕಿದರೆ ಇದು ಇವರ ಮೊದಲ ಕಾದಂಬರಿ. ಈಗ 'ಭಾಮೆ' ಎನ್ನುವ ಮತ್ತೊಂದು ಕಾದಂಬರಿ ಹಾಗೂ 'ಸಣ್ಣ ಕಥೆಗಳು' ಎನ್ನುವ ಕಥಾ ಸಂಕಲನಗಳನ್ನು ಹೊರತಂದಿದ್ದಾರೆ. 'ಪತಂಗ' ಎನ್ನುವ ಕಥಾ ಸಂಕಲನ ಕೂಡಾ ಬರೆದಿದ್ದಾರೆ.
'ಕಾಸನೋವ' ಎಂದರೇನು ? ಎಂಬ ಪ್ರಶ್ನೆಯ ಹಿಂದೆ ಬಿದ್ದಾಗ ಅದು ಇಟಲಿಯ ಒಬ್ಬ ವ್ಯಕ್ತಿಯ ಹೆಸರಾದರೂ ಈಗ ವ್ಯಕ್ತಿತ್ವಕ್ಕೆ ನೀಡುವ ಹೆಸರಾಗಿದೆ. ಈ ಮನಸ್ಥಿತಿ ಇದ್ದಾಗ ಯಾವುದೇ ಹೆಣ್ಣನ್ನು ತನ್ನೆಡೆಗೆ ಸೆಳೆಯಲು ಯತ್ನಿಸುವ ಅವನು ಅದಕ್ಕಾಗಿ ಎಂತಹಾ ತ್ಯಾಗವನ್ನಾದರೂ ಮಾಡಲು ಪ್ರಯತ್ನಿಸುತ್ತಾನೆ. ಅವಳು ಸಿಗದಿದ್ದಾಗ ಕೊಲೆ ಬೇಕಾದರೂ ಮಾಡಬಲ್ಲ. ಆತ ಇಚ್ಛಿಸಿದ ಹುಡುಗಿ ಅನ್ಯರನ್ನು ಸಮರ್ಥನೆ ಮಾಡಿದರೂ ದ್ವೇಷಿಸುವಂತಾಗುತ್ತಾನೆ.
ಇಲ್ಲಿ ಕೇವಲ ಒಬ್ಬನೇ 'ಕಾಸನೋವ' ಇಲ್ಲ. ಎರಡು ವಿಭಿನ್ನ ನಾಯಕರಿದ್ದಾರೆ. ಅವರಿಬ್ಬರೂ 'ಕಾಸನೋವ' ಮನಸ್ಥಿತಿಯವರೇ.. ಸಮಾಜದಲ್ಲಿ ಇಂತಹಾ ಎಷ್ಟು ಮಂದಿ ಇರಬಹುದು ? ಅಥವಾ ಪ್ರತಿಯೊಬ್ಬರಲ್ಲಿಯೂ ಆಂಶಿಕವಾಗಿ 'ಕಾಸನೋವ' ಮನಸ್ಥಿತಿ ಇರಬಹುದಾ ಎಂದನ್ನಿಸಿದರೂ ಕಾದಂಬರಿ ಮುಗಿದಾಗ ಕೇವಲ ಧನಾತ್ಮಕ ಆಲೋಚನೆ ಮಾತ್ರ ಇರುವಂತೆ ಮಾಡುತ್ತದೆ.
ಚಿಕ್ಕಂದಿನದಲ್ಲಿ ಮಕ್ಕಳನ್ನು ಗಮನಿಸುತ್ತಾ ಅವರಿಗೆ ಒಳಿತಿನೆಡೆಗೆ ಮಾರ್ಗ ತೋರದಿದ್ದರೆ ಅವರು ಎಲ್ಲದರಲ್ಲಿಯೂ ಋಣಾತ್ಮಕ ಅಂಶವನ್ನೇ ಕಾಣಬಹುದಾ ? ಅಥವಾ ನಿಯತಿಯಲ್ಲಿ ಅವರು ಹೀಗೆಯೇ ಆಗಬೇಕೆಂದೇ ಅವರ ಕಣ್ಣಿಗೆ ಕೇವಲ ಕೆಟ್ಟದ್ದೇ ಕಾಣುತ್ತದಾ..?? ಗೊತ್ತಿಲ್ಲ. ಆದರೆ, ಅಂತಹಾ ಕೆಡುಕುತನಗಳನ್ನೇ ನೋಡುತ್ತಾ ಬೆಳೆದ ನಚಿಕೇತ ಮೊದಲಿಗೆ ಪರಿಚಿತನಾಗುವ ನಾಯಕ. ಬೆಳೆಯುತ್ತಾ ಹೋದಂತೆ ಕೇವಲ ಕೆಡುಕುಗಳೇ ಕಣ್ಣಿಗೆ ಬೀಳಲು ಆತನೂ ಅದೇ ಮನಸ್ಥಿತಿಯನ್ನು ಬೆಳೆಸಿಕೊಳ್ಳುತ್ತಾ ಹೋಗುತ್ತಾನೆ.
ಎಲ್ಲೆಡೆ ಅನಾದರಗಳಿದ್ದರೂ ಆತನಿಗೆ ಬದುಕಲ್ಲಿ ಸಿಗುವ ಒಳ್ಳೆಯ ಸ್ನೇಹಿತ ವೀರಪುತ್ರ. ವೀರಪುತ್ರನಿಗೊಂದು ಹಿನ್ನೆಲೆಯಿದೆ. ಆತನೂ ಬದುಕಲ್ಲಿ ಕಷ್ಟ, ನೋವು, ಕೆಡುಕನ್ನು ಅನುಭವಿಸಿಯೇ ಬಂದಿರುತ್ತಾನೆ. ಆದರೆ, ಆತನನ್ನು ಒಳ್ಳೆಯ ಪಥದಲ್ಲಿ ನಡೆಯುವಂತೆ ಮಾಡುವುದು ಸಲೀನಾ ಎಂದರೆ ತಪ್ಪಾಗಲಾರದು. ಸಲೀನಾ ಹಾಗೂ ವೀರಪುತ್ರರ ಸ್ನೇಹ ಸಂಬಂಧ ಪದಗಳನ್ನು ಮೀರಿದ್ದು. ಈಕೆ ಮುಸಲ್ಮಾನಳಾದರೂ ಇವರಿಬ್ಬರ ನಂಟಿಗೆ ಅದು ಒಂದು ತಡೆಯೇ ಅಲ್ಲ. ಈಕೆಯ ಮನಸ್ಥಿತಿ ಹಾಗೂ ಆಲೋಚನೆ ಬಹಳ ಪ್ರಬುದ್ಧವಾದದ್ದು. ಆಕೆ ಮನಃಶಾಸ್ತ್ರ ವಿಷಯದಲ್ಲಿ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪಡೆದವಳು. ಆಕೆ ಬದುಕಿನ ಸವಾಲುಗಳ ಬಗ್ಗೆ ಹಲವು ಆಯಾಮಗಳಿಂದ ಚಿಂತಿಸಬಲ್ಲಳು. ಇಂತಹಾ ಸಲೀನಾಳ ಬಳಿ ವೀರಪುತ್ರ ತನ್ನ ಗೆಳೆಯ ನಚಿಕೇತನ 'ಕಾಸನೋವ' ಮನಸ್ಥಿತಿ ಕುರಿತು ತಿಳಿಸಿ ಆತನನ್ನು ಸರಿಪಡಿಸಲು ಕೋರುತ್ತಾನೆ.
ಅಷ್ಟರಲ್ಲಾಗಲೇ ನಚಿಕೇತನ ಬದುಕಲ್ಲಿ ಸುಹಾಸಿನಿ, ಸಂಭ್ರಮ, ಸಮಕ್ಷಮ, ಕಲ್ಪಕಂ ಹಾಗೂ ಕೀರ್ತನಾ ಬಂದು ಆಗಿರುತ್ತದೆ. ಈಗ ಸಲೀನಾಳನ್ನು ಹಾಗೆಯೇ ಭಾವಿಸಲು ಹೊರಟರೂ ಅಲ್ಲಿ ಹಾಗಾಗುವುದಿಲ್ಲ.
ನಚಿಕೇತನ ಮನಸ್ಸಿನಲ್ಲಿ ಏನೇ 'ಕಾಸನೋವ' ಮನಸ್ಥಿತಿ ಇದ್ದರೂ ಸಿಂಧೂರಿ ತನ್ನ ಗೆಳೆಯ ವೀರಪುತ್ರನನ್ನು ಪ್ರೇಮಿಸಿದಾಗ ಆತ ಆ ದ್ವೇಷಿಸುವ, ಕೊಲೆ ಮಾಡುವ ಮನಸ್ಥಿತಿಯನ್ನು ಕಷ್ಟವಾದರೂ ನಿಗ್ರಹಿಸಿಕೊಳ್ಳುತ್ತಾನೆ. ನಚಿಕೇತನ ಈ ಸ್ವಭಾವವನ್ನು ಆತ ನಿಗ್ರಹಿಸಿಕೊಳ್ಳಬಲ್ಲ. ಮನಸ್ಸಿನ ನಿಗ್ರಹದ ಮುಂದೆ ಯಾವುದು ದೊಡ್ಡದಿದೆ ಅಲ್ಲವಾ ?
ಕಾದಂಬರಿಯ ಎರಡನೇ ಅಧ್ಯಾಯದಲ್ಲಿ ಅಧಿಕೃತವಾಗಿ ಪರಿಚಿತನಾಗುವವನು ಎರಡನೇ ನಾಯಕ ಚಾರುದತ್ತ. ಆತನ ಸುಳಿವನ್ನು ಬಿಟ್ಟುಕೊಡದೆ ಆತನ ಕುರಿತು ಹೇಳಿದ್ದರೂ ಆ ಎಲ್ಲಾ ವ್ಯಕ್ತಿತ್ವಗಳೂ ಚಾರುದತ್ತನದ್ದೇ ಎಂಬುದು ತಿಳಿಯುವಾಗ ಅಚ್ಚರಿ ಮೂಡುತ್ತದೆ. ಚಾರುದತ್ತ ಹೀಗೆ ಬಾಲ್ಯದಿಂದ ಕೆಡುಕನ್ನು ಕಂಡವನಲ್ಲ. ಆದರೆ, ಆ ಒಂದು ಘಟನೆ ಆತನನ್ನು 'ಕಾಸನೋವ' ನನ್ನಾಗಿ ಮಾಡುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕೆಲವೊಮ್ಮೆ ಸುತ್ತಮುತ್ತಲಿನ ಘಟನೆಗಳೇ ಅಲ್ಲದೇ ಅನುವಂಶಿಕ ಕಾರಣಗಳು ಸಹಾ ಆತನ ಈ ಮನಸ್ಥಿತಿಗೆ ಕಾರಣವಾಗಿದ್ದಿರಬಹುದಾ ಎಂದು ಪ್ರಶ್ನೆ ಮೂಡುತ್ತದೆ.
ಚಾರುದತ್ತ, ನಚಿಕೇತ ಇಬ್ಬರ ಬದುಕು ಒಂದು ಘಟ್ಟದಲ್ಲಿ ಒಟ್ಟುಗೂಡುತ್ತದೆ. ಅಲ್ಲಲ್ಲ, ಇಬ್ಬರ ವ್ಯಕ್ತಿತ್ವದ ಎರಡು ಆಯಾಮಗಳು ಇಬ್ಬರಿಗೂ ಅರಿವಿಲ್ಲದಂತೆ ಒಂದೇ ನಾಣ್ಯದ ಎರಡು ಮುಖಗಳಂತಾಗಿದೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದದ್ದು ಅವರೊಳಗೆ ನಡೆಯುವ ಒಳತೋಟಿ, ಆಂದೋಲನಗಳನ್ನು..
ಅಷ್ಟು ದಿನ ಹಾಗೆ ಬದುಕಿದ್ದವರು ಬದಲಾಗುವುದು ಅಷ್ಟು ಸುಲಭವಾಗಿತ್ತಾ..?? ಸಲೀನಾ ನಚಿಕೇತನನ್ನು ಬದಲಿಸಲು ಒಪ್ಪುತ್ತಾಳಾ ?? ಇಲ್ಲಿ ಬದಲಾಗಿದ್ದು ಯಾರು ? ಚಾರುದತ್ತನಿಗಾಗಿದ್ದ ತಪ್ಪು ತಿಳುವಳಿಕೆ ಸರಿಯಾಗಿದ್ದರೆ ಕತೆಗೆ ಬೇರೆಯದ್ದೇ ಆಯಾಮ ಸಿಗುತ್ತಿತ್ತಾ ?? ಸಾವು ಎಲ್ಲದಕ್ಕೂ ಉತ್ತರವಾ..?? ಕೆಲವೊಮ್ಮೆ ಬದುಕಿ ಸಾಧಿಸದ್ದನ್ನು ಸತ್ತ ನಂತರ ಸಾಧಿಸುವ ಬಗೆ ಹೀಗಿರಬಹುದಾ ? ಸಿಂಧೂರಿಗೂ ಚಾರುದತ್ತನಿಗೂ ಇದ್ದ ಸಂಬಂಧ ಏನು ? ಉತ್ತರ ಕಂಡುಕೊಳ್ಳಲು 'ಕಾಸನೋವ' ಓದಿ.
ಒಟ್ಟಿನಲ್ಲಿ ಯುವ ಮನಸ್ಸುಗಳ ಶಕ್ತಿಗಳ ಧನಾತ್ಮಕ ಹಾಗು ಋಣಾತ್ಮಕ ಗುಣವನ್ನು ತೋರಿಸಿ, ನೈಜ ಪಾತ್ರಗಳ ಒಳತೋಟಿಗಳನ್ನು ಅನಾವರಣಗೊಳಿಸುವಲ್ಲಿ ಲೇಖಕರಾದ ಮನೋಜ್ ಪಿ.ಎಂ ಗೆದ್ದಿದ್ದಾರೆ.
ಇಲ್ಲಿ ವ್ಯಕ್ತಿಯ ವ್ಯಕ್ತಿತ್ವ ರೂಪುಗೊಳ್ಳುವುದೇ ಮನಸ್ಸಿನಿಂದ. ಒಂದು ವಿಭಿನ್ನ ಕಥೆಯ ಎಳೆಯನ್ನು ಇಟ್ಟುಕೊಂಡು ಸಾಗುವ ಈ ಮನೋವೈಜ್ಞಾನಿಕ ಕಾದಂಬರಿ ವಾಸ್ತವವಾ ಎಂದು ಕೇಳಿದಿರಾ ? ವಾಸ್ತವಕ್ಕೂ ಅಗೋಚರವಾದ ಗುಪ್ತಗಾಮಿನಿಯಂತಹಾ ಮನಸ್ಸುಗಳ ಕತೆ ಇದು. ಇಲ್ಲಿ ನಚಿಕೇತ, ಚಾರುದತ್ತ ಪಾತ್ರಗಳಷ್ಟೇ ಗಟ್ಟಿತನವಿರುವ ಪಾತ್ರ ಸಲೀನಾಳದ್ದು. ವೀರಪುತ್ರ ಹಾಗೂ ಸಿಂಧೂರಿಯ ಪಾತ್ರವೂ ಅಷ್ಟೇ ಮುಖ್ಯವೆನಿಸುತ್ತದೆ.
ಓದುವವರಲ್ಲಿ ಮತ್ತೊಂದು ವಿಚಾರ ಹೇಳುತ್ತೇನೆ. ತೀರಾ ಮಡಿವಂತಿಕೆ ಮನಸ್ಸಿನ ಓದುಗರಾಗಿದ್ದರೆ, ಕ್ರೌರ್ಯ, ಕೆಡುಕನ್ನು ಇಷ್ಟಪಡದವರಾಗಿದ್ದರೆ ಮೊದಲ ಕೆಲವು ಪುಟಗಳ ಓದು ನಿಮಗೆ ಇಷ್ಟವಾಗದು. ಹಾಗೆಂದು, ಅದಿಲ್ಲದಿದ್ದರೆ ಕತೆಯ ಹಿಡಿತ ತಪ್ಪುತ್ತದೆ. ಬದುಕಲ್ಲಿ ಒಳಿತನ್ನು ಮಾತ್ರ ಕಾಣಲಾಗದು. ಹಾಗೆಯೇ, ಓದಿನಲ್ಲಿ ಬರಿ ಒಳ್ಳೆಯದ್ದನೇ ಅರಸಿದರೆ ಓದಿನ ಅನುಭವದಲ್ಲಿ ಎಲ್ಲೋ ಕೊರತೆಯಾಗಬಹುದು. ಹಾಗಾಗಿ, ಎಲ್ಲವನ್ನೂ ಓದಿ. ಒಳ್ಳೆಯದ್ದನ್ನು ಮನಸ್ಸಿನಲ್ಲಿಟ್ಟುಕೊಂಡು ಧನಾತ್ಮಕ ಆಲೋಚನೆಯನ್ನು ತುಂಬಿಕೊಳ್ಳಿ.
ಒಂದೊಳ್ಳೆ ಓದನ್ನು ತಪ್ಪಿಸಿಕೊಳ್ಳದಿರಿ. ಪುಸ್ತಕ ಬೇಕಾದವರು ಲೇಖಕರನ್ನು ಸಂಪರ್ಕಿಸಿ ತರಿಸಿಕೊಳ್ಳಬಹುದು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ