ಪುಸ್ತಕದ ಹೆಸರು : ಆಮ್ರಪಾಲಿ
ಲೇಖಕರು : ಗಾಯತ್ರಿ ರಾಜ್
ಪ್ರಕಾಶನದ ಹೆಸರು : ರಾಜ್ ಪ್ರಕಾಶನ
ಬೆಲೆ : 125 ರೂಪಾಯಿಗಳು
ಬಹುಶಃ ಆಮ್ರಪಾಲಿ ಎಂಬ ಹೆಸರನ್ನು ಕೇಳಿದಾಕ್ಷಣ ಒಂದು ಬಾರಿ ಮನದ ಮೂಲೆಯಲ್ಲೆಲ್ಲೋ ಈ ಹೆಸರು ಕೇಳಿದ್ದೇನೆ ಎಂದೆನಿಸಬಹುದು. ಹೌದು, ಇವಳು ಅದೇ ಆಮ್ರಪಾಲಿ ಒಂದಾನೊಂದು ಕಾಲದ ಅಪ್ರತಿಮ ಸೌಂದರ್ಯವತಿ. ನಂತರ ಎಲ್ಲವನ್ನೂ ತೊರೆದು ಬುದ್ಧನ ಹಿಂಬಾಲಕಿಯಾಗಿ ಶಾಂತಿಯುತ ಬದುಕು ನಡೆಸಿದವಳು.
ಇದಿಷ್ಟೇ ಆಗಿದ್ದರೆ ಆಮ್ರಪಾಲಿ ಕಾಡುತ್ತಿರಲಿಲ್ಲ. ಕಾಡುವ ಈ ಆಮ್ರಪಾಲಿಯ ಬದುಕನ್ನು ಐತಿಹಾಸಿಕ ಕಾದಂಬರಿಯಾಗಿ ಕೈಗಿಟ್ಟು ಅವಳೊಳಗನ್ನು ತಿಳಿಸಿದವರು ಗಾಯತ್ರಿ ರಾಜ್ ಅವರು.
ಆಮ್ರಪಾಲಿಯನ್ನು ಓದುವ ಮೊದಲು ನನಗೊಂದು ಪ್ರಶ್ನೆ ಕಾಡುತ್ತಿತ್ತು. ಆ ಪ್ರಶ್ನೆಗೆ ತಾರ್ಕಿಕ ಉತ್ತರವಂತೂ ದೊರೆಯಿತು. ಆ ಪ್ರಶ್ನೆಯ ಕುರಿತು ಮುಂದೆ ಹೇಳುತ್ತೇನೆ.
ಆಮ್ರಪಾಲಿಯ ಕಥೆ ನಡೆದದ್ದು ಕ್ರಿಸ್ತ ಪೂರ್ವ 500-600 ರಲ್ಲಿ. ಬಹು ಪತ್ನಿತ್ವ ಜಾರಿಯಲ್ಲಿದ್ದ ಕಾಲವದು. ಸ್ತ್ರೀಯರಿಗೆ ಸ್ವತಂತ್ರ ಆಯ್ಕೆಯೇ ಇಲ್ಲದ ಕಾಲವದು. ಜನಪದ ಕಲ್ಯಾಣಿ, ನಗರ ವಧುವಿನ ಹೆಸರಲ್ಲಿ ಭೋಗವನ್ನೂ ಕಾನೂನಿನ ಅಡಿಯಲ್ಲಿಟ್ಟಿದ್ದ ಕಾಲ. ಅಂತಹಾ ಹೆಣ್ಣು ಮಕ್ಕಳನ್ನು ಆಯ್ಕೆ ಮಾಡಲು ಸ್ಪರ್ಧೆ ಕೂಡಾ ನಡೆಯುತ್ತಿತ್ತು. ಸೌಂದರ್ಯದ ಅಳತೆಗೋಲು ಮಾತ್ರವಲ್ಲ ಬದಲಿಗೆ ಪ್ರತಿಭಾ ಪ್ರದರ್ಶನ ಕೂಡಾ ನಡೆಯುತ್ತಿತ್ತು. ಅಲ್ಲಿ ಗೆದ್ದವರದ್ದು ಮುಳ್ಳಿನ ಸಿಂಹಾಸನದಂತಹಾ ಬದುಕು. ಎಲ್ಲವೂ ಇದ್ದರೂ ಎಲ್ಲರಂತೆ ಬದುಕು ಸಾಗಿಸುವ ಸುಯೋಗವಿಲ್ಲ. ತಾನು ಬಯಸಿದವನೊಡನೆ ಮದುವೆಯಿಲ್ಲ.. ಆಕೆ ಎಲ್ಲರ ಸ್ವತ್ತು. ಒಗ್ಗಟ್ಟಿನ ಹೆಸರಿನಲ್ಲೊಂದು ಹೇಯ ಕೃತ್ಯ.
ಅಂತಹಾ ಪದವಿಗೆ ತನಗಿಷ್ಟವಿಲ್ಲದೆಯೇ ಆಯ್ಕೆಯಾದವಳು ಆಮ್ರಪಾಲಿ.
ಶೀಲವೇ ತನ್ನ ಬದುಕು ಎಂಬಂತೆ ಬದುಕುವ, ಶೀಲ ಹೋದರೆ ಬದುಕು ನಾಶವಾಯಿತು ಎನ್ನುವ ಕಾಲದಲ್ಲಿ ಆಕೆ ಅಂತಹಾ ಪದವಿಗೆ ಒಪ್ಪಿದ್ದಾದರೂ ಏಕೆ..?? ಆಕೆ ಸಾವನ್ನು ಆಯ್ದುಕೊಳ್ಳದ್ದು ಯಾಕೆ..?? ಎಂಬ ಪ್ರಶ್ನೆ ಮನದಲ್ಲಿತ್ತು.
ತನ್ನ ಬದುಕನ್ನು ದೇಶಕ್ಕಾಗಿ, ದೇಶದ ಐಕ್ಯತೆಗಾಗಿ ಮುಡಿಪಿಟ್ಟ ಅಪ್ರತಿಮ ದೇಶಭಕ್ತೆ ಕಂಡಾಗ ನನಗಿನ್ನು ಪ್ರಶ್ನೆ ಉಳಿದಿರಲಿಲ್ಲ.
ಆಕೆ ಬರಿಯ ಹೆಣ್ಣಾಗಿರಲಿಲ್ಲ. ಆಮ್ರವನದಲ್ಲಿ ಉಳಿದ ತ್ಯಜಿಸಿದ ಮಗಳಾಗಿ, ಪ್ರೀತಿಯ ಮಗಳಾಗಿ, ನೃತ್ಯಗಾತಿಯಾಗಿ, ಅಸಹಾಯಕ ಮಗಳಾಗಿ, ಅಪ್ರತಿಮ ದೇಶಭಕ್ತೆಯಾಗಿ, ಅಪ್ಪಟ ಹೆಣ್ಮನದ ಪ್ರೇಮಿಯಾಗಿ, ತಾಯಿಯಾಗಿ ಹಲವು ಪಾತ್ರಗಳಾಗಿ ಕಂಡರೂ ಕೊನೆಯಲ್ಲೊಮ್ಮೆ ಜನರ ಕಣ್ಣಿಗೆ ದೇಶ ವಿದ್ರೋಹಿಯಂತೆ ಕಂಡದ್ದು ವಿಷಾಧವೇ ಸರಿ.
ನಗರ ವಧುವಾಗಿ ಒಲ್ಲದ ಬದುಕನ್ನು ಸಹಾ ದೇಶಪ್ರೇಮದಿಂದ ಜೀವಿಸಿ ತನ್ನ ಸುತ್ತಮುತ್ತಲಿನ ಜನರನ್ನು ರಕ್ಷಿಸಿದ್ದು ಅಚ್ಚರಿಯ ಪರಿಯೇ ಸರಿ. ನಾವಿಂದು ಒಲ್ಲದ ಬದುಕನ್ನು 5 ನಿಮಿಷವೂ ಸಹಿಸದೆ ಸಿಡಿದು ನಿಲ್ಲುವಾಗ ಇಡೀ ಬದುಕನ್ನು ಒಪ್ಪಿ ಅಪ್ಪಿದವಳು ಅವಳು.
ದೇಶ ಭಕ್ತಿ, ದೇಶ ಪ್ರೇಮವೆಂದರೆ ಬರೀ ಯುದ್ಧ, ರಕ್ತಪಾತ ಎನ್ನುವ ನಮಗೆ ಅಪ್ಪಟ ದೇಶಪ್ರೇಮ ಈ ಪ್ರೇಮದೇವತೆಯ ಮೂಲಕ ಕಂಡು ಬರುತ್ತದೆ. ಬಿಂಬಸಾರ, ಅಜಾತಶತ್ರು, ದೇವದತ್ತ, ಬುದ್ಧ ಎಲ್ಲರ ನಡುವೆ ಆಮ್ರಪಾಲಿಯ ಜೊತೆಗೆ ನನಗಿಷ್ಟವಾದ ಪಾತ್ರ ಸುಪ್ರಭಾ. ಸುಪ್ರಭಾ ಇಲ್ಲದಿದ್ದರೆ ಅವಳ ಬದುಕು ಮತ್ತೆಷ್ಟು ದುಸ್ತರವೆನ್ನಿಸುತ್ತಿತ್ತು ಎನ್ನಿಸಿದ್ದು ಸಹಾ ಸುಳ್ಳಲ್ಲ.
ಶಾಂತಿಗಾಗಿ ಹಂಬಲಿಸಿದ ಆಮ್ರಪಾಲಿ ಕಡೆಗಾದರೂ ಉಪಸಂಪದ ನಡೆದು ಅಂಬಾಪಾಲಿಯಾಗಿ ನಿಂತಿದ್ದರೂ ಅವಳು ಬದುಕಿದ, ಅವಳನ್ನು ನಡೆಸಿಕೊಂಡ ರೀತಿಗೆ ನನ್ನದೊಂದು ವಿಷಾದವಿದೆ. ಅವಳು ಅವಳ ನೆನಪುಗಳನ್ನು ಅಳಿಸಿಕೊಂಡು ಬದುಕಿದ್ದರೂ, ಉಪಸಂಪದ ಪ್ರಾಪ್ತವಾದರೂ ಅವಳಿಗೆ ಇನ್ನಷ್ಟು ಗೌರವ ದೊರಕಬೇಕಿತ್ತು ಎನ್ನುವುದು ಕಾಡುತ್ತದೆ.
ಪ್ರೀತಿ, ದ್ವೇಷ, ತಂತ್ರ, ವೈಭೋಗ, ಒಳಸಂಚು, ದೇಶದ್ರೋಹ, ದೇಶಪ್ರೇಮ ಎಲ್ಲವೂ ಕಾಡುತ್ತದೆ.
ಇದೆಲ್ಲದರ ಜೊತೆಗೆ ತಮ್ಮ ಕನ್ಯತ್ವವನ್ನು ಬಲಿಕೊಟ್ಟು, ತನ್ನತನವನ್ನು ಕಳೆದುಕೊಂಡು ಬಾಳುವ, ನಿತ್ಯಮುತ್ತೈದೆಯರಂತೆ ಬಲವಂತದ ಬದುಕನ್ನು ಬಾಳುವ ಆಧುನಿಕ ಆಮ್ರಪಾಲಿಯರ ನೆನಪಾಗುತ್ತದೆ. ಬರೆಯದ ಇತಿಹಾಸವೊಂದು, ಬರೆಯದ ವರ್ತಮಾನವೊಂದು, ಬರೆಯದೆ ಉಳಿದು ಹೋಗುವ ಭವಿಷ್ಯವೊಂದು ಎದುರು ನಿಂತು ಆಮ್ರಪಾಲಿಗೆ ಸಿಕ್ಕ ಶಾಂತಿ ನಮಗೂ ಸಿಗಬಹುದೇ ಎಂದು ಕೇಳಿದಂತಾಗುತ್ತದೆ.
ಮನದಲ್ಲಿ ಆಮ್ರಪಾಲಿಯ ನಿನಾದ ಕೇಳಿಸುತ್ತಲೇ ಇರುತ್ತದೆ. ಅವಳ ಕಂಪು ಬೀರುತ್ತಲೇ ಇರುತ್ತದೆ.
ಮತ್ತೊಂದು ಉಲ್ಲೇಖಾರ್ಹ ವಿಷಯವೆಂದರೆ , ಕನ್ನಡ ಸಾಹಿತ್ಯ ಪರಿಷತ್ತಿನ ಈ ವರ್ಷದ ಶ್ರೀಮತಿ ಕೆ. ಎಸ್. ಭಾರತಿ ರಾಜಾರಾಮ್ ಮಧ್ಯಸ್ಥ ದತ್ತಿ ಪ್ರಶಸ್ತಿಗೆ "ಆಮ್ರಪಾಲಿ" ಕಾದಂಬರಿ ಪಾತ್ರವಾಗಿದೆ. ಹಾಗೂ, ಅಡ್ವೈಸರ್ ಪತ್ರಿಕೆಯು ನಡೆಸಿದ "೧೪ ನೇ ರಾಜ್ಯಮಟ್ಟದ ಅಡ್ವೈಸರ್ ಸಾಹಿತ್ಯ ಪ್ರಶಸ್ತಿ" ಸ್ಪರ್ಧೆಯಲ್ಲಿ 'ಆಮ್ರಪಾಲಿ' ಗೆ ಈ ವರ್ಷದ ' ಪುಸ್ತಕ ಸಾಹಿತ್ಯ' ಪ್ರಶಸ್ತಿ ದೊರೆತಿದೆ. ಹಾರ್ದಿಕ ಅಭಿನಂದನೆಗಳು ಮೇಡಂ. ಇನ್ನಷ್ಟು ಪುಸ್ತಕಗಳು ನಿಮ್ಮಿಂದ ಮೂಡಿ ಬರಲಿ.
~ ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ