ಪುಸ್ತಕದ ಶೀರ್ಷಿಕೆ : ವಚನ ವೈಭವ
ವಚನಗಳ ವಿಶ್ಲೇಷಣೆ : ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ಮೊದಲ ಮುದ್ರಣ : 2009
ದ್ವಿತೀಯ ಮುದ್ರಣ : 2017
ಪ್ರಕಾಶಕರು : ಕನ್ನಡ ಸಾಹಿತ್ಯ ಪರಿಷತ್ತು
ಬೆಲೆ : 65 ರೂಪಾಯಿಗಳು
ಇಂದು ಆದರ್ಶಗಳು ಒಬ್ಬೊಬ್ಬರ ಪಾಲಿಗೆ ಒಂದೊಂದು ಇದ್ದರೂ ಅದರ ಮೂಲ ಬೇರು ಹಿಂದಿನವರದ್ದು. ವಚನ ಸಾಹಿತ್ಯದ ಮೂಲಕ ಹಲವಾರು ವಚನಕಾರರು ಆದರ್ಶಗಳನ್ನು, ಬುದ್ಧಿ ಮಾತುಗಳನ್ನು ತಮ್ಮ ತಮ್ಮ ಅಂಕಿತನಾಮದ ವಚನಗಳ ಮೂಲಕ ತಮ್ಮದೇ ರೀತಿಯಲ್ಲಿ ನಮಗಾಗಿ ಕೊಟ್ಟಿದ್ದಾರೆ. ಕೆಲವರ ರೀತಿ ಸರಳ, ಮತ್ತೆ ಕೆಲವರು ಉಪಮೆಗಳನ್ನು ನೀಡಿದರೆ, ಮತ್ತೆ ಕೆಲವರದ್ದು ವಿಡಂಬನೆ. ಈ ಪುಸ್ತಕದಲ್ಲಿ ಆಯ್ದ 52 ವಚನಗಳಿದ್ದು ಅವುಗಳ ವಿಶ್ಲೇಷಣೆಯನ್ನು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಇಂದಿನ ದಿನಮಾನಕ್ಕೆ ಅನುಕೂಲವಾಗುವಂತೆ ಮತ್ತು ಅನ್ವಯಿಸುವಂತೆ ಹೇಳಿದ್ದಾರೆ. ಈ 52 ವಚನಗಳು 2008 ಅಕ್ಟೋಬರ್ 6 ರಿಂದ ನವೆಂಬರ್ 2 ರ ವರೆಗೆ 'ಕಸ್ತೂರಿ' ವಾಹಿನಿಯಲ್ಲಿ ವಚನಗಳ ಸುಶ್ರಾವ್ಯ ಗಾಯನಗಳ ಮೂಲಕ ಈಗಾಗಲೇ ಬಿತ್ತರವಾಗಿವೆ.
ದಾಸಿಮಯ್ಯ, ಬಸವಣ್ಣ, ಪ್ರಭುದೇವ, ಅಕ್ಕಮಹಾದೇವಿ, ಸತ್ಯಕ್ಕ, ನೀಲಮ್ಮ, ಆಯ್ದಕ್ಕಿ ಲಕ್ಕಮ್ಮ ಮತ್ತು ಮಾರಯ್ಯ, ನೀಲಮ್ಮ, ಅಕ್ಕಮಹಾದೇವಿ, ಸತ್ಯಕ್ಕ, ಅಕ್ಕ ನಾಗಮ್ಮ , ಮುಕ್ತಾಯಕ್ಕ, ಉರಿಲಿಂಗಪೆದ್ದಿ ಹೀಗೆ ಹಲವಾರು ವಚನಕಾರರ ಆಯ್ದ ವಚನಗಳಿವೆ.
ಹರಿದ ಗೋಣಿಯಲೊಬ್ಬ ಕಳವೆಯ ತುಂಬಿದ
ಇರುಳೆಲ್ಲಾ ನಡೆದನಾ ಸುಂಕಕಂಜಿ
ಕಳವೆಯೆಲ್ಲಾ ಹೋಗಿ ಬರಿಗೋಣಿ ಉಳಿಯಿತ್ತು !
ಅಳಿಮನದವನ ಭಕ್ತಿ ಇಂತಾಯಿತ್ತು ! ರಾಮನಾಥ
ಇದು ಜೇಡರ ದಾಸಿಮಯ್ಯನವರ ನನ್ನ ಇಷ್ಟದ ವಚನ. ಸುಂಕ ಎಂದರೆ ತೆರಿಗೆ ನೀಡಬೇಕೆಂದು ಹಣ ನೀಡುವುದಕ್ಕೆ ಹೆದರಿ ಒಬ್ಬ ಬೇರೆಯೇ ದಾರಿ ಹಿಡಿಯುತ್ತಾನೆ. ಬೆಳಿಗ್ಗೆ ಬೇರೆ ದಾರಿಯಲ್ಲಿ ಅಥವಾ ಆ ದಾರಿಯಲ್ಲಿ ಹೋಗಲು ಕಷ್ಟ ಎಂದು ತಿಳಿದು ರಾತ್ರಿ ಪ್ರಯಾಣ ಮಾಡುತ್ತಾನೆ. ಆದರೆ, ಕಳವೆ ಎಂದರೆ ಭತ್ತ ತುಂಬಿದ ಗೋಣಿಚೀಲ ಹರಿದು ಹೋಗಿದ್ದು ಆತನ ನಡಿಗೆಯ ಭರಾಟೆ ಹಾಗೂ ಭಯದಲ್ಲಿ ಆತನ ಗಮನಕ್ಕೇ ಬಂದಿರುವುದಿಲ್ಲ. ಅಲ್ಲದೇ, ರಾತ್ರಿಯಾಗಿದ್ದರಿಂದ ತಿರುಗಿ ನೋಡಿದರೂ ಕತ್ತಲು ಬಿಟ್ಟು ಬೇರೆ ಏನೂ ಕಾಣಿಸದು. ಬೆಳಿಗ್ಗೆ ನೋಡಿದರೆ ಭತ್ತವೆಲ್ಲಾ ಸೋರಿ ಹೋಗಿ ಬರೀ ಗೋಣಿಚೀಲ ಮಾತ್ರ ಉಳಿದಿರುತ್ತದೆ. ಒಂದು ರೂಪಾಯಿ ಸುಂಕದ ಬದಲಾಗಿ ನೂರು ರೂಪಾಯಿ, ಶ್ರಮ , ಸಮಯ ಎಲ್ಲವೂ ನಷ್ಟವೇ. ಅಡ್ಡ ದಾರಿ ಹಿಡಿದರೆ ನಾವೇನೋ ಸಾಧಿಸುತ್ತೇವೆ ಎಂದುಕೊಂಡರೂ ನಮಗೆ ಅಡ್ಡದಾರಿಯಿಂದ ಲಾಭವಾಗುವುದಿಲ್ಲ. ಬದಲಿಗೆ, ಆಗುವುದೆಲ್ಲಾ ನಷ್ಟವೇ.. ಇದು ಬರೀ ಕಾಯಕದಲ್ಲಿ ಮಾತ್ರವಲ್ಲ ಭಕ್ತಿಯಲ್ಲಿಯೂ ಹೀಗೆಯೇ ಎನ್ನುತ್ತಾರೆ. ಅಳಿ ಮನದವನ ಭಕ್ತಿ ಎಂದರೆ ಚಂಚಲ ಸ್ವಭಾವದವನ ಭಕ್ತಿ ಎಂದರ್ಥ. ಅಳಿ ಎಂದರೆ ದುಂಬಿ. ದುಂಬಿ ಸದಾ ಜೇನು ಹೀರುವ ಕಾಯಕ ಮಾಡುತ್ತಿದ್ದರೂ ಇಲ್ಲಿ ಅದರ ಹೂವಿಂದ ಹೂವಿಗೆ ಹಾರುವ ಚಂಚಲ ಸ್ವಭಾವವನ್ನು ವರ್ಣಿಸಲಾಗಿದೆ.
ಭಕ್ತಿ ಹೇಗಿರಬೇಕು ಎಂಬುದಕ್ಕೆ ಮತ್ತೊಂದು ವಚನದ ಮೂಲಕ ಹೇಳುತ್ತಾರೆ ವಚನಕಾರ್ತಿ ಶಿವಶರಣೆ ಮುಕ್ತಾಯಕ್ಕ.
ಸುಮ್ಮನೇಕೆ ದಿನಕಳೆವಿರಿ, ಸುಮ್ಮನೇಕೆ ಹೊತ್ತುಗಳೆವಿರಿ ?
ಸುಮ್ಮನೇಕೆ ಹೊತ್ತುಗಳೆವಿರಿ ಸ್ವಾಮಿಗಳಿರಾ ?
ಮಾಡಬನ್ನಿ ದಿನ ಶಿವರಾತ್ರಿಯ , ಕೇಳ ಬನ್ನಿ ಶಿವಾನುಭವವ,
ನೋಡಬನ್ನಿ ಅಜಗಣ್ಣನಿರವ ಬಸವಣ್ಣ ತಂದೆ.
ಜನರು ಸುಖಾ ಸುಮ್ಮನೆ ಕಾಲ ಕಳೆಯುವುದನ್ನು ನೋಡಿ, ಯಾವುದೇ ಒಳ್ಳೆಯ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳದ್ದನ್ನು ಕಂಡ ಮುಕ್ತಾಯಕ್ಕ ಸುಮ್ಮನೆ ದಿನ ಕಳೆಯುವ ಹೊತ್ತು ಕಳೆಯುವ , ದಿನ ದೂಡುವ ಬದಲಿಗೆ ದಿನಾ ಶಿವರಾತ್ರಿ ಮಾಡಿರಿ ಎನ್ನುತ್ತಾರೆ.
ಅರೆ! ದಿನಾ ಶಿವರಾತ್ರಿ ಮಾಡಲು ಸಾಧ್ಯವೇ ಎನ್ನುವುದು ನಮ್ಮ ಮನದಲ್ಲಿ ಮೂಡುವ ಸಂದೇಹ. ನಮಗೆ ಗೊತ್ತಿರುವ ಶಿವರಾತ್ರಿಯಂದು ಉಪವಾಸ , ಜಾಗರಣೆ ಮಾಡಿ ,ಪೂಜೆ, ಧ್ಯಾನದಲ್ಲಿ ನಿರತರಾಗಿ ಶಿವಪೂಜೆ ಮಾಡುವುದು.
ಆದರೆ, ಇಲ್ಲಿ ಮುಕ್ತಾಯಕ್ಕ ಹೇಳುವುದು ಅಜಗಣ್ಣನನ್ನು ನೋಡಿ ಅವನ ಹಾಗೆ ದಿನವೂ ಶಿವರಾತ್ರಿ ಮಾಡಿ ಎಂಬುದಾಗಿ. ಅಜಗಣ್ಣ ಯಾರು ಎಂಬುದನ್ನು ತಿಳಿಯುವುದಾದರೆ ಆತ ಮುಕ್ತಾಯಕ್ಕನ ಸಹೋದರ. ಅಜಗಣ್ಣ ಯಾವತ್ತೂ ಕೆಲಸವನ್ನು ಬಿಟ್ಟು ಶಿವಪೂಜೆ ಮಾಡುತ್ತಾ ಕುಳಿತವರಲ್ಲ. ತಾವು ಪಡೆದ ಅನುಭವದ ಕುರಿತು ಲೋಕಕ್ಕೆ ಸಾರಿದವರೂ ಅಲ್ಲ. ತಮ್ಮ ಪಾಡಿಗೆ ತಾವು ಕಾಯಕದಲ್ಲಿ ನಿರತರಾಗಿ ಭಕ್ತಿಯನ್ನು ಆ ಮೂಲಕ ತೋರುತ್ತಿದ್ದವರು. ಅಣ್ಣನ ಈ ರೀತಿಯ ಗುಪ್ತ ಭಕ್ತಿ, ಮೌನ ಭಕ್ತಿ ಮುಕ್ತಾಯಕ್ಕನಿಗೆ ಆತ ತನ್ನ ಪ್ರತಿ ಉಸಿರಿನಲ್ಲಿಯೂ ಶಿವಧ್ಯಾನ ಮಾಡುವಂತೆ ಕಾಣುತ್ತಿತ್ತು. ಈ ರೀತಿಯ ಭಕ್ತಿ ಇರಲಿ ಎನ್ನುತ್ತಾರೆ ಮುಕ್ತಾಯಕ್ಕ.
ಭಕ್ತಿ ತೋರುವುದಾದರೆ ಕಾಯಕದ ಮೂಲಕ ತೋರಿ ಎನ್ನುವ ಬಸವಣ್ಣನವರ ಮಾತು "ಕಾಯಕವೇ ಕೈಲಾಸ" ಎಂಬುದು ಹೆಚ್ಚಿನಂಶ ಎಲ್ಲಾ ವಚನಕಾರರ ಮಾತೂ ಆಗಿದೆ. ಕಾಯಕ ಮಾಡುತ್ತಾ ಪೂಜೆಗೆ ಲೋಪವಾದರೆ ?? ಕಾಯಕ ಶ್ರದ್ದೆಗೆ ಹೆಸರಾದ ನುಲಿಯ ಚಂದಯ್ಯನವರ ಒಂದು ವಚನ ಹೀಗಿದೆ.
ಗುರುವಾದಡೂ ಕಾಯಕದಿಂದಲೇ ಜೀವನ್ಮುಕ್ತಿ
ಲಿಂಗವಾದಡೂ ಕಾಯಕದಿಂದಲೇ ಶಿಲೆಯ ಕುಲ ಹರಿವುದು
ಜಂಗಮವಾದಡೂ ಕಾಯಕದಿಂದಲೇ ವೇಷದ ಪಾಶ ಹರಿವುದು
ಗುರುವಾದಡೂ ಚರಸೇವೆಯ ಮಾಡಬೇಕು
ಲಿಂಗವಾದಡೂ ಚರಸೇವೆಯ ಮಾಡಬೇಕು
ಜಂಗಮವಾದಡೂ ಚರಸೇವೆಯ ಮಾಡಬೇಕು
ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗದ ಅರಿವು
ಈ ಕುರಿತು ಒಂದು ದಂತಕಥೆ ಸಹಾ ಇದೆ. ನುಲಿಯ ಚಂದಯ್ಯ ದಿನವೂ ಹುಲ್ಲು ಕೊಯ್ದು ಹಗ್ಗ ಮಾಡಿ ಅದರಿಂದ ಜೀವನ ಸಾಗಿಸುತ್ತಿದ್ದವರು. ಹಾಗೆ ಒಂದು ದಿನ ಅವರು ಕೆಲಸ ಮಾಡುವಾಗ ಅವರ ಕೊರಳಲ್ಲಿದ್ದ ಇಷ್ಟಲಿಂಗ ಬಿದ್ದು ಹೋಗುತ್ತದೆ. ಇಷ್ಟಲಿಂಗವನ್ನು ಕಳೆದರೆ ಪ್ರಾಣವನ್ನೇ ಬಿಡಬೇಕು ಎನ್ನುವ ನಂಬಿಕೆಯೊಂದಿರುತ್ತದೆ. ಆದರೆ, ಚಂದಯ್ಯ ಅದನ್ನು ಗಣನೆಗೆ ತೆಗೆದುಕೊಳ್ಳದೆ ಕಾಯಕವೇ ಕೈಲಾಸ. ನಾನು ಕೆಲಸ ಮಾಡುವಾಗ ಬಿದ್ದದ್ದು ಅದರದ್ದೇ ತಪ್ಪು ಎನ್ನುತ್ತಾ ಅದನ್ನು ಹುಡುಕಲು ಹೋಗದೆ ತಮ್ಮ ಪಾಡಿಗೆ ತಾವು ಕೆಲಸಕ್ಕೆ ತೊಡಗುತ್ತರಂತೆ. ಇದಾದ ನಂತರ ಇಷ್ಟಲಿಂಗವು ಲಿಂಗಯ್ಯನ ವೇಷ ಧರಿಸಿ ಮತ್ತೆ ತನ್ನನ್ನು ಧರಿಸಲು ಕೇಳಿದಾಗಲೂ ಅವರು ನಿರಾಕರಿಸುತ್ತಾರೆ. ಅದು ಅನುಭವ ಮಂಟಪದಲ್ಲಿ ಚರ್ಚೆಗೆ ಬಂದಾಗ ಹಿರಿಯರು ಲಿಂಗಯ್ಯನದ್ದೇ ತಪ್ಪು. ಆ ತಪ್ಪನ್ನು ಮನ್ನಿಸಿ ಲಿಂಗವನ್ನು ಧರಿಸಲು ಕೇಳಿಕೊಳ್ಳುತ್ತಾರೆ. ಆಗ ಚಂದಯ್ಯ, ತಪ್ಪಿಗೆ ತಕ್ಕ ಶಿಕ್ಷೆಯೂ ಆಗಬೇಕು ಎನ್ನುತ್ತಾ ಲಿಂಗಯ್ಯನಿಗೆ ಒಂದು ದಿನ ಹುಲ್ಲು ಕೊಯ್ದು ಮಾರಿ ದುಡ್ಡು ತರಲು ಹೇಳುತ್ತಾರೆ. ಲಿಂಗಯ್ಯನೂ ಹಾಗೆಯೇ ಮಾಡಿ ಹೆಚ್ಚಿನ ದುಡ್ಡು ತಂದು ಕೈಯ್ಯಲ್ಲಿಟ್ಟಾಗ ಅದನ್ನು ಒಪ್ಪದೇ ಈ ಹೆಚ್ಚಿನ ದುಡ್ಡು ಮೋಸ ಮಾಡಿ ತಂದಿರುವುದು. ಹೀಗೆ ಮತ್ತೊಬ್ಬರಿಗೆ ಮೋಸ ಮಾಡಿ ಹೆಚ್ಚಿನ ಹಣ ಸಂಪಾದನೆ ಮಾಡುವುದು ಕಾಯಕಕ್ಕೆ ಮಾಡುವ ಮೋಸ ಎಂದೂ ಹೇಳುತ್ತಾರೆ.
ಆಗ ಈ ವಚನ ಬಂದದ್ದು. ಗುರು, ಲಿಂಗ, ಜಂಗಮ ಯಾರೇ ಆದರೂ ತಪ್ಪು ಮಾಡಬಾರದು. ಗುರುವೆಂದು ಗರ್ವದಿಂದ ಬೀಗಿದರೆ ಸಾಲದು. ಅದರ ಬದಲಾಗಿ, ನಿಷ್ಠೆಯಿಂದ ಕಾಯಕ ಮಾಡಬೇಕು. ಗುರುವಿಗೆ ಮುಕ್ತಿ ದೊರೆಯುವುದು, ಶಿಲೆಯ ಕುಲ ಹರಿಯುವುದು, ವೇಷದ ಪಾಶ ಕಳಚಲು ಸಾಧ್ಯವಾಗುವುದು ಈ ಕಾಯಕದಿಂದ ಮಾತ್ರವೇ ಎಂಬುದನ್ನು ಒತ್ತಿ ಹೇಳಿದ್ದಾರೆ ಚಂದಯ್ಯನವರು.
ಹೀಗೆ ಹಣಕ್ಕಿಂತ ಕಾಯಕಕ್ಕೆ ಹೆಚ್ಚಿನ ಮಹತ್ವ ನೀಡಿದವರಲ್ಲಿ ಆಯ್ದಕ್ಕಿ ಲಕ್ಕಮ್ಮ ಕೂಡಾ ಮಾನ್ಯಳು.
ಮನಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ
ಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿ
ಸದ್ಭಕ್ತನಿಗೆ ಎತ್ತ ನೋಡಿದಡತ್ತ ಲಕ್ಷ್ಮಿ ತಾನಾಗಿಪ್ಪಳು
ಮಾರಯ್ಯಪ್ರಿಯ ಅಮಲೇಶ್ವರಲಿಂಗದ ಸೇವೆಯುಳ್ಳನ್ನಕ್ಕರ
ಇವತ್ತು ನಾವು ಎಷ್ಟೇ ಇದ್ದರೂ.. ಅದಿಲ್ಲ, ಇದಿಲ್ಲ ಎನ್ನುತ್ತಾ ಒಂದಲ್ಲಾ ಒಂದು ಕೊರತೆಯಿಂದ ಬಳಲುತ್ತಿರುತ್ತೇವೆ. ಆದರೆ, ಆಯ್ದಕ್ಕಿ ಲಕ್ಕಮ್ಮನ ಅಂದಿನ ಬದುಕು ಹೇಗಿತ್ತು ಎಂದರೆ ಅಕ್ಕಮ್ಮನ ಪತಿ ಮಾರಯ್ಯ ಅಕ್ಕಿಯನ್ನು ಆಯ್ದು ತಂದ ನಂತರ ಈಕೆ ಅದನ್ನು ಪ್ರಸಾದ ಮಾಡಿ ಬೇರೆಯವರಿಗೆ ಎಡೆ ಮಾಡಿ ನಂತರ ಸತಿ ಪತಿಗಳಿಬ್ಬರೂ ಸ್ವೀಕಾರ ಮಾಡುವಂತಹವರು. ಒಮ್ಮೆ ಮಾರಯ್ಯ ಹೀಗೆ ಅಕ್ಕಿಯನ್ನು ಹೆಚ್ಚು ತಂದಾಗ ಅಗತ್ಯವಿಲ್ಲದೇ ಅಕ್ಕಿಯನ್ನು ಹೆಚ್ಚು ತಂದದ್ದು ಏಕೆ ಎಂದು ಪ್ರಶ್ನಿಸಿ ಹೆಚ್ಚಿನ ಅಕ್ಕಿಯನ್ನು ಅಲ್ಲಿಯೇ ಚೆಲ್ಲಲು ಹೇಳಿ ಹೆಚ್ಚಿನ ಶರಣರನ್ನು ಅಂದು ಊಟಕ್ಕೆ ಕರೆದುಕೊಂಡು ಬರುವಂತೆ ಹೇಳುತ್ತಾಳೆ. ಅವರೆಲ್ಲರ ಊಟ ಮುಗಿದ ನಂತರ ಇದೆಲ್ಲವೂ ಹೇಗೆ ಸಾಧ್ಯ ಎನ್ನುವ ಶರಣರೊಬ್ಬರ ಪ್ರಶ್ನೆಗೆ ಈ ಮೇಲಿನ ವಚನವೇ ಉತ್ತರ. ಮನಸ್ಸು ಶುದ್ಧ ಇಲ್ಲದವರಿಗೆ ಬಡತನವೇ ಹೊರತು ನಮಗಲ್ಲ. ಚಿತ್ತ ಶುದ್ಧಿ ಇದ್ದಾಗ ಮನಸ್ಸಿನ ಸಿರಿತನವೇ ತೃಪ್ತಿ ತರುತ್ತದೆ ಎನ್ನುತ್ತಾಳೆ.
ಈ ಸಂಧರ್ಭವನ್ನು ನೆನದಾಗ ಬಸವಣ್ಣನವರ ಒಂದು ವಚನದ ಎರಡು ಸಾಲು ನೆನಪಾಗುತ್ತದೆ.
ಹರನೀವ ಕಾಲಕ್ಕೆ ಸಿರಿಯು ಬೆನ್ನಲಿ ಬರ್ಕು
ಹರಿದು ಹೆದ್ದೊರೆಯ ಕೆರೆ ತುಂಬಿದಂತಯ್ಯಾ
ನೆರೆಯದ ವಸ್ತು ನೆರೆವುದು ನೋಡಯ್ಯ
ಶಿವನು ನೀಡುವ ಕಾಲಕ್ಕೆ ಎಲ್ಲವನ್ನೂ ನೀಡುತ್ತಾನೆ. ಆದರೆ, ನಾವಾಗಿಯೇ ಆಶಿಸಿಯೇ , ಅತಿ ಆಸೆಯಿಂದ ಅತೃಪ್ತಿ ತಂದುಕೊಳ್ಳುತ್ತೇವೆ. ಅಲ್ಲವೇ ? ಈ ಆಸೆಯ ಬಲೆಯೊಳಗೆ ನಾವಾಗಿಯೇ ಸಿಲುಕಿಕೊಂಡು ಬಿಡುತ್ತೇವೆ.
ಇದಕ್ಕೆ ಅಕ್ಕನ ವಚನವೊಂದು ಕೈಗನ್ನಡಿಯಂತಿದೆ.
ತೆರಣಿಯ ಹುಳು ತನ್ನ ಸ್ನೇಹದಿಂದ ಮನೆಯ ಮಾಡಿ
ತನ್ನ ನೂಲು ತನ್ನನೇ ಸುತ್ತಿ ಸಾವಂತೆ,
ಮನಬಂದುದನು ಬಯಸಿ ಬೆವುತ್ತಿದ್ದೇನಯ್ಯಾ
ಎನ್ನ ಮನದ ದುರಾಶೆಯ ಮಾಣಿಸಿ
ನಿಮ್ಮತ್ತ ತೋರಾ ಚೆನ್ನಮಲ್ಲಿಕಾರ್ಜುನ
ತೆರಣಿಯ ಹುಳು ಎಂದರೆ ರೇಷ್ಮೆಯ ಹುಳು. ತನ್ನ ಜೊಲ್ಲಿನಿಂದಲೇ ತನ್ನದೇ ಗೂಡು ನಿರ್ಮಿಸಿಕೊಂಡು ಸುಖವಾಗಿದ್ದೇನೆಂದು ಭ್ರಮಿಸುವ ಹುಳು ಕೊನೆಗೆ ಅದರಲ್ಲಿಯೇ ಸತ್ತು ಹೋಗುತ್ತದೆ. ತನ್ನನ್ನು ಈ ಎಲ್ಲಾ ಆಶೆಗಳಿಂದ ಹೊರ ತಂದು ನಿನ್ನತ್ತ ಬರುವ ದಾರಿ ತೋರು ಎನ್ನುತ್ತಾರೆ ಅಕ್ಕಮಹಾದೇವಿ. ಅಕ್ಕನ ಎಲ್ಲಾ ವಚನಗಳಲ್ಲಿಯೂ ಹೀಗೆಯೇ 'ಶರಣ ಸತಿ - ಲಿಂಗ ಪತಿ' ಎನ್ನುವ ಭಾವವೊಂದು ಮೂಡಿರುತ್ತದೆ.
ಏನೇ ಇದ್ದರೂ ಕೊನೆಗೆ ಬರುವುದು ಸಾವು ಅಲ್ಲವೇ, ಎಷ್ಟಿದ್ದರೂ ತೊರೆಯಲೇ ಬೇಕು. ಇದಕ್ಕೆ ಅಕ್ಕನ ವಚನವೊಂದು ಧ್ವನಿಯಾಗುತ್ತದೆ.
ಆವ ವಿದ್ಯೆಯ ಕಲಿತಡೇನು ? ಸಾವ ವಿದ್ಯೆ ಬೆನ್ನಬಿಡದು
ಆಶನವ ತೊರೆದಡೇನು , ವ್ಯಸನವ ಮರೆದಡೇನು ?
ಉಸಿರ ಹಿಡಿದಡೇನು , ಬಸುರ ಕಟ್ಟಿದಡೇನು ?
ಚೆನ್ನಮಲ್ಲಿಕಾರ್ಜುನದೇವಯ್ಯಾ,
ನೆಲ ತಲವಾರನಾದೆಡೆ ಕಳ್ಳನೆಲ್ಲಿಗೆ ಹೋಹನು ?
ಎಷ್ಟೇ ವಿದ್ಯೆ ಕಲಿತರೂ ಸಾವನ್ನು ಮುಂದೂಡುವ ವಿದ್ಯೆ ಇನ್ನೂ ಯಾರಿಗೂ ಕರಗತವಾಗಿಲ್ಲ. ಆಹಾರವನ್ನು ತ್ಯಜಿಸಿದರೂ, ಕಲಿತ ವ್ಯಸನಗಳನ್ನು ಬಿಟ್ಟು ಒಳ್ಳೆಯ ಚಾಳಿ ರೂಢಿಸಿಕೊಂಡರೂ.. ಸಾವು ತಪ್ಪುವುದಿಲ್ಲ.
ನೆಲವೆ ಕಾಯುವ ಕೆಲಸ ಮಾಡಿದರೆ ಕಳ್ಳ ತಪ್ಪಿಸಿಕೊಳ್ಳಲು ಸಾಧ್ಯವೇ ಎನ್ನುವ ಉಪಮೆಯನ್ನು ಸಹಾ ನೀಡುತ್ತಾರೆ.
ಸಾವು ತಪ್ಪಿದ್ದಲ್ಲ ಎಂದು ಅಕ್ಕ ಹೇಳಿದರೂ..
ಬಸವಣ್ಣನವರು ಒಂದು ವಚನದಲ್ಲಿ
"ಎಮ್ಮವರಿಗೆ ಸಾವಿಲ್ಲ, ಎಮ್ಮವರು ಸಾವನರಿಯರು. ಸಾವೆಂಬುದು ಸ್ವಯವಲ್ಲ.." ಎಂದೂ ಹೇಳಿದ್ದಾರೆ. ಹಾಗಾದರೆ ಈ ಎರಡೂ ವಚನಗಳ ಅರ್ಥ ಪರಸ್ಪರ ವಿರುದ್ಧವೇ ಎಂದರೆ ಖಂಡಿತ ಅಲ್ಲ. ಬಸವಣ್ಣನವರ ಪ್ರಕಾರ ಶರಣರಿಗೆ ಸಾವಿಲ್ಲ ಎಂದರೆ ಅವರುಗಳು ಲಿಂಗದಿಂದ ಉದಯಿಸಿ ಲಿಂಗದಲ್ಲಿಯೇ ಐಕ್ಯವಾಗುತ್ತಾರೆ ಎಂದು. ಹಾಗಾಗಿಯೇ ಮರಣವನ್ನು ಮಹಾನವಮಿ ಎಂದಿರುವುದು.
ಆದರೆ, ಬಸವಣ್ಣನವರ ನಂತರ ಅವರ ಪತ್ನಿ ನೀಲಾಂಬಿಕೆ ಹೇಳುತ್ತಾರೆ.
ಕಲ್ಯಾಣವಿಲ್ಲ ಕೈಲಾಸವಿಲ್ಲ , ಬಸವಾ
ಕಲ್ಯಾಣವಿಲ್ಲದ ಕಾರಣ ಕೈಲಾಸವಿಲ್ಲವೆನಗೆ, ಬಸವಾ
ಆ ಕಲ್ಯಾಣ ಕೈಲಾಸವಾಯಿತ್ತು ಬಸವಾ.
ಆ ಕಲ್ಯಾಣವಳಿದು ಕೈಲಾಸವಾದ ಬಳಿಕ,
ಬಸವನ ಮೂರ್ತಿಯಿಲ್.
ಬಸವನ ಮೂರ್ತಿಯನರಿಯದ ಕಾರಣ
ಕೈಲಾಸವಿಲ್ಲ, ಕಲ್ಯಾಣವಿಲ್ಲ, ಸಂಗಯ್ಯ.
ತನ್ನ ಸರ್ವಸ್ವವೂ ಆಗಿದ್ದವರನ್ನು ಕಳೆದುಕೊಂಡಾಗ ಬಂದ ವಚನವಿದು. ಇಲ್ಲಿ ಕೈಲಾಸ ಎಂದರೆ ಕಲ್ಯಾಣವೇ. ಅವರ ವಿಚಾರಗಳನ್ನು ಆರ್ಥ ಮಾಡಿಕೊಂಡು ಬರಿ ಬಾಯಿ ಮಾತಲ್ಲಿ ನುಡಿದರೆ ಅಲ್ಲಿ ಕಲ್ಯಾಣ, ಕೈಲಾಸ ಯಾವುದೂ ಇಲ್ಲ ಎಂದರ್ಥ.
ಇಲ್ಲಿ ವಚನಗಳು ಬದುಕಿನ, ಬದುಕಿದ ರೀತಿ ಸಂಧರ್ಭದಿಂದ ಸೃಷ್ಟಿಯಾಗಿವೆ. ಇವುಗಳು ಬರೀ ಓದಿ ಮರೆಯಲು ಅಲ್ಲ. ಅಳವಡಿಸಿಕೊಳ್ಳಲು.
ಇಂತಹಾ ಹಲವಾರು ವಚನಗಳನ್ನು ಸವಿಯಲು ಈ ಪುಸ್ತಕವನ್ನು ಓದಿ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ