ಸೋಮವಾರ, ಏಪ್ರಿಲ್ 6, 2026

ಎಂದೋ ಕಟ್ಟಿದ ಪುಷ್ಪಮಾಲೆ (ಪುಸ್ತಕ ಯಾನ - 41)


ಪುಸ್ತಕದ ಶೀರ್ಷಿಕೆ : ಎಂದೋ ಕಟ್ಟಿದ ಪುಷ್ಪಮಾಲೆ

ಲೇಖಕಿ : ಹೆಚ್. ಜಿ. ರಾಧಾದೇವಿ

ಪ್ರಕಾಶಕರು : ಶ್ರೀ ಲಕ್ಷ್ಮೀವೆಂಕಟೇಶ್ವರ ಪ್ರಕಾಶನ

ಮೊದಲನೆಯ ಮುದ್ರಣ : 1995

ಎರಡನೆಯ ಮುದ್ರಣ : 2016 ( ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 188

ಬೆಲೆ : 125 ರೂ.


ನಾನು ಓದಿದ ಪುಸ್ತಕಗಳಲ್ಲಿ ವಿಭಿನ್ನವಾದ ಆರಂಭದೊಂದಿಗೆ ಮನಸೆಳೆದು ಸರಾಗವಾದ ಓದಿಗೆ ದಕ್ಕಿದ ಕಾದಂಬರಿ ಹೆಚ್. ಜಿ. ರಾಧಾದೇವಿಯವರ 'ಎಂದೋ ಕಟ್ಟಿದ ಪುಷ್ಪಮಾಲೆ'. ಕೌಟುಂಬಿಕ ಹಾಗೂ ಪ್ರೇಮ ಮಿಶ್ರಿತವಾದ ಈ ಕಾದಂಬರಿ ಕುಟುಂಬದ ಸಹಕಾರದೊಂದಿಗೆ, ಆ ಮನುಷ್ಯನಿಗೆ ದಕ್ಕುವ ಪ್ರೇಮದ ಸ್ಥೈರ್ಯವೂ ಸಿಕ್ಕಿದರೆ ಆತನ ಸಂತೋಷಕ್ಕೆ ಮಿಗಿಲೇ ಇಲ್ಲ. ಆದರೆ, ಆ ಕೌಟುಂಬಿಕ ಸಂತಸ ಹಾಗೂ ಪ್ರೇಮಗಳೆರಡೂ ಮಿಳಿತಗೊಂಡು ನಂತರ ಅದು ಕನಸೋ ಎಂಬಂತೆ ವಿರುದ್ಧ ದಿಕ್ಕಿನಲ್ಲಿ ಸಾಗಿ ಹೋದರೆ.. 'ಎಂದೋ ಕಟ್ಟಿದ ಪುಷ್ಪಮಾಲೆ' ಅರ್ಪಿತವಾಗಲೇ ಬೇಕು. ಆದರೆ, ಅರ್ಪಿಸಿದ ನಂತರ.. ಮುಗಿದ ನಂತರವೂ ಕಾಡಿದ ಕತೆ ಇದು.


ಕಾದಂಬರಿಯ ಆರಂಭದಲ್ಲಿ ಒಂದು ವಿವಾಹದ ಸಂಧರ್ಭದಲ್ಲಿ ಶುರುವಾಗುವ ರಂಜನೀಯ ಕಾರ್ಯಕ್ರಮಗಳಲ್ಲಿ ಬೀಗರು ಹಾಗೂ ಬೀಗರ ನಡುವೆ ನಡೆಯುವ ವಿನೋದಮಯ ಕಾರ್ಯಕ್ರಮದಲ್ಲಿ ಅದರಲ್ಲೂ ನಕಲಿ ಉಡುಗೊರೆಯ ಉಪಚಾರದಲ್ಲಿ ಎಲ್ಲರ ಮನಸೆಳೆದದ್ದು ರೇಷ್ಮೆ ಗೂಡಿನಿಂದ ಮಾಡಿದ ದುಂಡು ಮಲ್ಲಿಗೆಯ ಹಾರ. ಅದನ್ನು ಮಾಡಿದ್ದು ಅನುರಾಧಾ. ಆಕೆ ಹೆಣ್ಣಿನ ಕಡೆಯವಳು. ವಧುವಿನ ಸೋದರ ಸಂಬಂಧಿಯ ಗೆಳತಿ. ಆಕೆ ಕುಶಲ ಕಲೆಯಲ್ಲಿ ಮಾತ್ರವಲ್ಲದೇ ಓದಿನಲ್ಲಿಯೂ ಮುಂದು. 


ವಿನೋದಮಯವಾಗಿ ಶುರುವಾಗುವ ಈ ಕಾದಂಬರಿಯ ಆರಂಭದಲ್ಲಿ ನನ್ನ ಮನಸೆಳೆದದ್ದು ಇದರ ನಂತರದಲ್ಲಿ ನಡೆಯುವ ಮತ್ತೆರಡು ಕಾರ್ಯಕ್ರಮಗಳು. ಅಂತ್ಯಾಕ್ಷರಿ ಸ್ಪರ್ಧೆ. ಆದರೆ, ಈ ಅಂತ್ಯಾಕ್ಷರಿ ಸ್ಪರ್ಧೆ ಕೇವಲ ದೇವರನಾಮಗಳನ್ನು ಒಳಗೊಂಡದ್ದು. ಅದೆಷ್ಟು ವಿಭಿನ್ನ ಹಾಗೂ ಕ್ರಿಯಾತ್ಮಕ ಆಲೋಚನೆ ಎಂದೆನಿಸಿತು. ನಂತರ ಪ್ರತಿಯೊಂದು ಅಕ್ಷರಗಳಿಂದ ಶಬ್ಧಾವಳಿಯಿಂದ ದೇವರನ್ನು ಹೊಗಳುವ ಸ್ಪರ್ಧೆ, ದಾಸ ಸಾಹಿತ್ಯದ ಕುರಿತು ಪ್ರಶ್ನಾವಳಿಗಳು.. ಅಬ್ಬಾ..! ವಿನೋದದ ಹೆಸರಲ್ಲಿ ಬುದ್ಧಿಗೆ ಕಸರತ್ತು ನೀಡುವ ಸ್ಪರ್ಧಾ ಮಾಲಿಕೆಗಳು ನನಗೆ ಬಹಳಷ್ಟು ಇಷ್ಟವಾದವು.


ಹೀಗೆ ವಧುವಿನ ಕಡೆಯಿಂದ ಎಲ್ಲದರಲ್ಲೂ ಹೈಲೈಟ್ ಆದದ್ದು ಅನುರಾಧಾ ಆದರೆ ಗಂಡಿನ ಕಡೆಯಲ್ಲಿ ಹೈಲೈಟ್ ಆದದ್ದು ಮನಮೋಹನ.


ವಾರುಣಿಯ ಕಡೆಯಿಂದ ಹರಿಣಿಯ ಮದುವೆಗೆ ಹೋಗಿ ಬಂದ ಸರಳ ವ್ಯಕ್ತಿತ್ವದ ಅನುರಾಧಾ ಥೇಟ್ ಅವಳ ತಂದೆಯ ಹಾಗೆಯೇ.. ಆಕೆಯ ತಂದೆ ರಾಜಾರಾಯರು ಹಳ್ಳಿಯಲ್ಲಿ ಶ್ರೀಮಂತರು. ಆದರೂ, ಇಬ್ಬರಿಗೂ ಶ್ರೀಮಂತಿಕೆಯ ಮಾಡವಿಲ್ಲ.. ತೋರ್ಪಡಿಸುವಿಕೆಯ ಅಹಂಕಾರವಿಲ್ಲ. ಆದರೆ, ಆಕೆಯ ತಾಯಿ ಜಯಮ್ಮ ಅದಕ್ಕೆಲ್ಲಾ ತದ್ವಿರುದ್ಧ. ಆಕೆ ರಾಜಾರಾಯರ ಎರಡನೇ ಹೆಂಡತಿ. ಮೊದಲ ಹೆಂಡತಿ ಮಕ್ಕಳಿಲ್ಲದೇ ತೀರಿ ಹೋದಾಗ ಜಯಮ್ಮನ ತಾಯಿ ಸುಂದರಮ್ಮ ರಾಯರನ್ನು ಹೇಗೇಗೋ ಮಾಡಿ ಒಪ್ಪಿಸಿ ತನ್ನ ಮಗಳನ್ನು ಗಂಟು ಹಾಕಿದ್ದರು. ಅನುರಾಧಾಳಿಗೆ ಒಬ್ಬ ತಮ್ಮ ರಾಜಗೋಪಾಲ. ಆತ ಸಹಾ ತಂದೆ ಹಾಗೂ ಅಕ್ಕನ ಪಾರ್ಟಿಯೇ. ಜಯಮ್ಮನ ತಾಯಿ ಸುಂದರಮ್ಮನ ಜಬರ್ದಸ್ತು ಹಾಗೂ ಜಯಮ್ಮನ ಕಾರುಬಾರಿನಿಂದ ತನ್ನ ತವರು ಮನೆಯ ಪಾರುಪತ್ಯ ನೋಡುತ್ತಾ ನಾಲ್ಕು ಸೋದರಿಯರ ಜೊತೆ ತಮ್ಮ ಶಶಿಧರನನ್ನು ಎಂ.ಬಿ.ಬಿ.ಎಸ್ ಮಾಡಿಸುತ್ತಿದ್ದುದಲ್ಲದೇ ಮಗಳಿಗೇ ಆತನನ್ನೇ ವಿವಾಹ ಮಾಡಿಸುವ ಇಚ್ಛೆ ಜಯಮ್ಮನವರದ್ದು.


ಆತ ಯೋಗ್ಯನಾಗಿದ್ದರೆ ರಾಜಾರಾಯರ ಅಭ್ಯಂತರವೇನೂ ಇರುತ್ತಿರಲಿಲ್ಲ. ಆದರೆ, ಆತ ಅದಕ್ಕೆ ಅರ್ಹನಲ್ಲ. ಆತನ ಕಣ್ಣಿದದ್ದು ಅನುರಾಧಾಳಿಗೆ ಬರುವ ಎರಡು ಲಕ್ಷ ಹಾಗೂ ಅವಳ ಪಾಲಿನ ಆಸ್ತಿ.  ಅಲ್ಲದೇ, ಗುಣ, ನಡತೆ ಕೂಡಾ ಸರಿಯಿರಲಿಲ್ಲ.. ಅಲ್ಲದೆ, ಜೊತೆಯ ಡಾಕ್ಟರ್ ಚಂದ್ರಿಕಾ ಜೊತೆಗೆ ಅಗತ್ಯಕ್ಕಿಂತ ಸಲುಗೆ ಹೆಚ್ಚಿತ್ತು. 


ಈ ಮಧ್ಯೆ ವಿವಾಹದ ದೆಸೆಯಿಂದ ಬಡವನಾದರೂ ಮನಮೋಹನ ಅನುರಾಧಾಳಿಗೆ ತಕ್ಕ ವರ ಎನ್ನಿಸಿದ್ದನ್ನು ಆಕೆ ತನ್ನ ತಂದೆಗೆ ತಿಳಿಸಿದಾಗ ಅವರೂ ಪರೀಕ್ಷಿಸಿ ಒಪ್ಪಿದ್ದರು. ಬಡವನಾದರೂ ಸದ್ಗುಣವಂತ ವರನಿಗೆ ಮಗಳನ್ನು ನಿಶ್ಚಿಯಿಸಬೇಕೆಂದಾಗ ಅಡ್ಡಿಯಾಗಿದ್ದು ಅವಳ ತಾಯಿ ಜಯಮ್ಮ. ಆಕೆಯನ್ನು ನೋಡಿದರೆ ಆಕೆ ನಿಜವಾಗಲೂ ಅನುರಾಧಾಳ ತಾಯಿಯೇ..?? ಅಥವಾ ಅನುರಾಧಾ ಮೊದಲ ಹೆಂಡತಿ ಮಗಳೇನಾದರೂ ಆಗಿದ್ದಿರಬಹುದಾ ಎನ್ನುವ ಪ್ರಶ್ನೆ ಮೂಡುತ್ತದೆ. 


ಅನುರಾಧಾಳ ಹಣೆಯ ಬರಹವೇ ರಾಧೆಯಂತೆ ಇದ್ದಿರಬಹುದಾ..?? ಆಕೆಯ ಪಾಲಿಗೆ ಮನಮೋಹನನೂ ದಕ್ಕಲಿಲ್ಲ. ಇತ್ತ ಅಮ್ಮನಿಗೂ ತನ್ನ ತಮ್ಮನ ಕಲ್ಯಾಣ ಗುಣಗಳು ತಿಳಿದು ಗಿರಿಧರನನ್ನು ಸಹಾ ದೂರವಿಟ್ಟಳು. ಎಂದೋ ಕಟ್ಟಿದ ಹಾರ ಮನಮೋಹನನಿಗೆ ಎಂದಾದರೂ ದಕ್ಕಬಹುದೇ ? ಅಥವಾ ಮದುವೆಯ ವಿನೋದಾವಳಿಯಲ್ಲಿ ಆತ ಅದನ್ನು ಗೆದ್ದು ಅದು ಆತನ ಪಾಲಿಗೆ ಇಲ್ಲವಾದಂತೆ ಆಗಬಹುದೇ ? ಮನಮೋಹನ ಹಾಗೂ ಅನುರಾಧಾರ ಮುಂದಿನ ಭವಿಷ್ಯವೇನು ? ಅನುರಾಧಾಳ ಬದುಕು ರಾಧೆಯ ಹಾಗಾಯಿತಾ..?


ಇನ್ನು ಹೆಚ್ಚು ಹೇಳಿ ಪುಸ್ತಕದ ಸ್ವಾರಸ್ಯವನ್ನು ಹಾಳು ಮಾಡಲಾರೆ. ಓದಿಯೇ ಅಘ್ರಾಣಿಸಬೇಕು ಈ 'ಪುಷ್ಪಮಾಲೆ'ಯ ಸೌಗಂಧವನ್ನು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ