ಸೋಮವಾರ, ಏಪ್ರಿಲ್ 6, 2026

ಕತೆಪುಸ್ತಕ ( ಪುಸ್ತಕ ಯಾನ - 40)

 

ಪುಸ್ತಕದ ಶೀರ್ಷಿಕೆ : ಕತೆಪುಸ್ತಕ

ಲೇಖಕರು : ಜೋಗಿ

ಪ್ರಕಾಶಕರು : ಅಂಕಿತ ಪುಸ್ತಕ

ಮೊದಲ ಮುದ್ರಣ : 2021

ಪುಟಗಳು : 128

ಬೆಲೆ : 130 ರೂ.


'ಜೋಗಿ' ಎಂಬ ಕಾವ್ಯನಾಮದಲ್ಲಿ ಬರೆಯುವ ಗಿರೀಶ್ ರಾವ್ ಹತ್ವಾರ್ ರವರ ಸಣ್ಣ ಕತೆಗಳು ನನಗಿಷ್ಟವಾಗುವುದು ಅವುಗಳ ಅಂತ್ಯದಿಂದ. ಅವುಗಳ ಅಂತ್ಯಗಳು ವಿಭಿನ್ನ. ಅವು ಹೀಗೆಯೇ ಅಂತ್ಯಗೊಳ್ಳುತ್ತವೆ ಎಂಬುದನ್ನು ಲೇಖಕರು ಕಟ್ಟಿ ಕೊಡುವುದಕ್ಕಿಂತ ಓದುಗರಿಗೆ ಬಿಡುವ ರೀತಿ ಇಲ್ಲವೇ ಅಲ್ಲೊಂದು ಮಾಂತ್ರಿಕತೆಯ ಸ್ಪರ್ಶದಂತಹಾ ಅಂತ್ಯ ಕತೆಗಳನ್ನು ಬೇರೆಯೇ ನಿಟ್ಟಿನಲ್ಲಿ ನೋಡುವಂತೆ ಮಾಡುತ್ತವೆ. ಈ ಕತೆಪುಸ್ತಕದಲ್ಲಿ ಇಂತಹಾ 11 ಕತೆಗಳಿವೆ.


'ಸದಾಶಿವ ಲವ್ಸ್ ನೂತನ್' ಶೀರ್ಷಿಕೆ ಕಂಡಾಕ್ಷಣ ಇದು ಪ್ರೇಮ ಕತೆಯಾಗಿರಬಹುದಾ ಎಂದು ಕುತೂಹಲ ಹುಟ್ಟಿಸಿದರೂ ಮನುಷ್ಯ ಹಾಗೂ ಬೆಕ್ಕಿನ ನಡುವಿನ ನವಿರಾದ ಬಾಂಧವ್ಯದ ಕತೆಯೊಂದು ತೆರೆದುಕೊಳ್ಳುತ್ತದೆ. ಆದರೆ, ಆ ಬಾಂಧವ್ಯ ಎಷ್ಟು ಕಾಲ ಬಾಳುತ್ತದೆ ಎನ್ನುವುದನ್ನು ಓದಿಯೇ ತಿಳಿಯಿರಿ. ಓದುತ್ತಿದ್ದ ಹಾಗೆಯೇ ಒಮ್ಮೆ 'ಚಾರ್ಲಿ' ಸಿನಿಮಾ ನೆನಪಾಯಿತು. ಬೆಕ್ಕು ಬಂದ ನಂತರ ಅವರಿಗೆ ಆ ಮನೆಯಲ್ಲಿ ತಾನೊಬ್ಬನೇ ಇಲ್ಲ ಎನ್ನುವುದು ಸುಸ್ಪಷ್ಟವಾಗಿ ಅನುಭವಕ್ಕೆ ಬಂದದ್ದು ನಮ್ಮ ಅನುಭವಕ್ಕೂ ದಕ್ಕುವಂತಿದೆ.


ಮಾಳವಿಕಾ ಕತೆ ಕೊರೋನಾ ಕಾಲದ ಕತೆಯಂತೆ ಭಾಸವಾದರೂ ಆ ಕವಿತೆಗಳು ಅವಳಲ್ಲಿ ಹುಟ್ಟಿಸುವ ಪ್ರಶ್ನೆಗಳು ಹಾಗೂ ಭಾವಗಳು ನಮಗೂ ದಾಟುತ್ತವೆ. ಅಲ್ಲದೆ, ಕತೆಯ ಶೀರ್ಷಿಕೆ "ಕೆಟ್ಟ ಕವಿತೆಯ ಕಡೆಯ ಸಾಲು" ಎಂದು ಓದಿದಾಗ ಕವಿತೆ ಬರೆಯುವವರು ತಮ್ಮ ಕವಿತೆಯನ್ನು ಕೆಟ್ಟ ಕವಿತೆ ಎಂದುಕೊಳ್ಳುತ್ತಾರಾ ? ಎಂಬ ಪ್ರಶ್ನೆಯೊಂದು ಮೂಡಿ ಮಾಯವಾಯಿತು. ಈಗ ನಾನೂ ಕವಿತೆಗಳ ಕಡೆಯ ಸಾಲುಗಳನ್ನು ಹೆಚ್ಚು ಗಮನಿಸುವಂತನಿಸುತ್ತದೆ. ಅಷ್ಟಕ್ಕೂ ಮಾಳವಿಕಾ ಸಮಸ್ಯೆ ಕೂಡಾ ಸಮಸ್ಯೆಯಾ ? ಆ ಅಪೂರ್ಣ ಕವಿತೆಗಳ ಮುಂದಿನ ಕತೆ ಏನು ? ನೀವೇ ಓದಿ. ನನಗಂತೂ ಅದು ಕೆಟ್ಟ ಕವಿತೆ ಎಂದೆನಿಸಲಿಲ್ಲ.


ಒಂದು ಕವಿತೆ, ಕಾವ್ಯ ಮತ್ತೊಬ್ಬರ ಬದುಕಲ್ಲಿ ಜೀವನ್ಮುಖಿಯಾಗಬಲ್ಲದೋ ಹೊರತು ಸಾವಿನಂಚಿಗೆ ದೂಡಲಾರದು ಎಂದುಕೊಂಡಿದ್ದೆ. "ಕವಿತೆ ಮತ್ತು ಆತ್ಮಹತ್ಯೆ" ಹೀಗೂ ಇದ್ದಿರಬಹುದಾ ಎಂದು ಯೋಚಿಸುವಂತೆ ಮಾಡಿದ ಕತೆ.


ಶ್ರೀಪತಿಯ ಊಹೆಯಲ್ಲಿದ್ದ ವೈಕುಂಠವನ್ನು ಆತ ಕಡೆಗೂ ಕಂಡಿದ್ದ. ಆದರೆ, ಆತನ ತಂದೆ ಶ್ರೇಷ್ಠಿಗಳು ಹೋಗಬೇಕೆಂದಿದ್ದ ವೈಕುಂಠ, ಅವರ ಊಹೆಯ ವೈಕುಂಠ ಅದೇ ಆಗಿತ್ತಾ..?? ನಮ್ಮ ಊಹೆಗೂ, ವಾಸ್ತವಕ್ಕೂ ಹೊಂದಿಕೆ ಇರುತ್ತದಾ..?? ಈಗೊಂದು ಹೊಳಹು ಹುಟ್ಟಿಸಿದ ಕತೆ "ಇಷ್ಟು ದಿನ ಈ ವೈಕುಂಠ".


ನಮ್ಮ ದೃಷ್ಟಿಯಲ್ಲಿ ಅತ್ಯುತ್ತಮ ಎಂದುಕೊಳ್ಳುವ ಕತೆಗಳು ಹೇಗಿರುತ್ತವೆ ? ಅಂತಹಾ ಕತೆಗಳು ಜಗತ್ತಿನ ಅತ್ಯುತ್ತಮ ಕತೆಗಳೂ ಆಗಿರುತ್ತವಾ ? ಹಾಗಿದ್ದರೆ, ಅಂತಹಾ ಕತೆಗಳನ್ನು ಆಯ್ಕೆ ಮಾಡುವವರು ಯಾರು ? ಹೀಗೆ "ಜಗತ್ತಿನ ಅತ್ಯುತ್ತಮ 60 ಕತೆಗಳು" ನಮ್ಮ ಮುಂದಿದೆ. ಆಯ್ಕೆ ಸಮಿತಿಯ ಕೇಶವಮೂರ್ತಿಯ ಗೊಂದಲಕ್ಕೆ ನೀವೂ ಉತ್ತರಿಸಬಹುದು ನೋಡಿ.


ಶಾಮಸುಂದರ ಕತೆ ಹೇಳುತ್ತಿದ್ದಾನಾ..?? ಕಥೆ ಕೇಳುತ್ತಿದ್ದಾನಾ..?? ಶಾಮಸುಂದರನ ಕತೆ ನಿಮಗೂ ತಿಳಿಯಬೇಕಾ..?? "ಅನ್ ಲೆಸ್" ಕತೆಯ ಒಳಗಿಳಿಯದೆ ನೀವು ಈಗ ಶಾಮಸುಂದರನ ಕತೆ ತಿಳಿಯಲಾರಿರಿ ಬಿಡಿ.


ನೇರಂಬಳ್ಳಿ ಲಕ್ಷ್ಮೀನಾರಾಯಣರ ಮುಸ್ಸಂಜೆಯ ಕತೆಯಾಗಬೇಕಾಗಿದ್ದ ಇದು "ವಾರುಣಿಯ ಮುಸ್ಸಂಜೆ"ಯಾದದ್ದು ಏಕೆ ? ನೇರಂಬಳ್ಳಿಯವರ ಪಾತ್ರವಿಲ್ಲದೇ ಈ ಕತೆ ಎಷ್ಟು ಅಪೂರ್ಣವೆನಿಸುತ್ತದೆಯೋ.. ವಾರುಣಿಯ ನಿರ್ಧಾರ ಕಂಡೂ ಕಾಣದಂತೆ ಕಂಡು ಬಂದರೂ ಅದೂ ಕತೆಯ ಮುಖ್ಯ ಜೀವಾಳವೇ ಆಗಿ ಹೋಗಿದೆ.


ದೇವರ ಮೂರ್ತಿಯನ್ನು ಮಾತ್ರ ಕೆತ್ತುತ್ತಿದ್ದ ಚಂದ್ರಾಚಾರಿಗೆ ಈಗ ಹೊಸ ಸಮಸ್ಯೆಯೊಂದು ಎದುರಾಗಿತ್ತು. ಸದಾ ದೇವರ ಮೂರ್ತಿಯನ್ನು ಮಾತ್ರ ಕೆತ್ತುತ್ತೇನೆ ಎಂದು ಪಣ ತೊಟ್ಟಿದ್ದವನು ಈಗ ಮುಖ್ಯಮಂತ್ರಿ ಗೋಪಾಲಕೃಷ್ಣ ನಾಯಕರ ಮೂರ್ತಿಯನ್ನು ಕೆತ್ತನೆ ಮಾಡಬೇಕಾದ ಪರಿಸ್ಥಿತಿ. ಅವನಲ್ಲದಿದ್ದರೆ, ಅವನ ಶಿಷ್ಯರಾದರೂ ಮಾಡುತ್ತಾರೆ ಎಂದರೆ ಅದಕ್ಕೂ ಈತನ ಅಡ್ಡಗಾಲು. "ನಾಯಕರ ಮೂರ್ತಿ" ಸಿದ್ಧವಾಯಿತೇ ? ಚಂದ್ರಾಚಾರಿಯ ಸಮಸ್ಯೆಗೆ ಪರಿಹಾರ ಸಿಕ್ಕಿತೇ ? ನೀವೇ ಓದಿ ತಿಳಿಯಿರಿ.


ಎಪ್ಪತ್ತೆಂಟು ವರ್ಷದ ಪರೇಶ್ ಲಾಲ್ ಜೀವನ್ ಲಾಲ್ ಮಕಮಲ್ ಜೀ ಯ ಮನೆಯ ಕತೆ ಎನ್ನಿಸಬಹುದಾದಂತಹಾ ಕಥನ ಆ ಮನೆಯ ಸೊಸೆ ಪದ್ಮಿನಿಯಿಂದಾಗಿ ಬೇರೆಯದ್ದೇ ರೀತಿ ಭಾಸವಾಗುವ ಕತೆ 'ಲಾಲ್ ಕಿತಾಬ್'.


"ಬೆನಜೀರ್ ಕೊಂಚವೇ ಕತ್ತು ಹೊರಳಿಸಿ ತಿರುಗಿ ನೋಡಿದಂತಾಯ್ತು. ನಿರಂಜನ ಆಸೆಯಿಂದ ಕಾಯುತ್ತಿದ್ದ. ಕಣ್ಣು ಕಣ್ಣು ಈಗ ಒಂದಾಗುತ್ತದೆ ಅಂತ ಕಾತರಿಸಿದ. ಬೆನಜೀರ್ ಇನ್ನೇನು ನಗುತ್ತಾಳೆ ಅಂತ ಹಾರೈಸಿದ. ಬೆನಜೀರ್ ಕತ್ತು ಹೊರಳಿಸಿದಳು. ಅವಳ ಕಣ್ಣು ನಿರಂಜನನತ್ತ ಹಾಯಲಿಲ್ಲ. ಅವಳು ಎತ್ತ ನೋಡುತ್ತಿದ್ದಾಳೆ ಅಂತ ನಿರಂಜನ ಅವಳ ಕಣ್ಣೋಟವನ್ನೇ ಹಿಂಬಾಲಿಸಿದ. ಅವಳು ನಿರಂಜನನ ಕಾರಿನ ಎದುರಿನಲ್ಲಿರುವ ಕಾರಲ್ಲಿ ಕೂತವನನ್ನೇ ನೋಡಿದಂತಿತ್ತು. " 


ಇದು 'ಬೆನಜೀರಳ ಮುಗುಳುನಗೆ' ಎಂಬ ಕತೆಯ ಒಂದು ಭಾಗವಷ್ಟೇ.. ಈ ಬೆನಜೀರ್ ಯಾರು ? ಅವಳ ಈ ನಡೆಯ ಕಾರಣವೇನು ತಿಳಿದು ನೀವೂ ಈ ಬೆನಜೀರ್ ನೋಟಕ್ಕೆ ಹಂಬಲಿಸದಿರಿ ಮತ್ತೆ.


ದೇಶಭಕ್ತ ದೇಸಾಯಿ ಸಾವಿರದ ಎಂಟು ಬಾರಿ ಭಗವದ್ಗೀತೆಯ ಹದಿನೆಂಟೂ ಅಧ್ಯಾಯಗಳನ್ನು ಬರೆದು ಮಠಕ್ಕೆ ತರುತ್ತಾರೆ. ಇದಾದ ನಂತರ ಏನಾಯಿತು ? ಭಗವದ್ಗೀತೆ ಕುರಿತು ನಮಗೆಲ್ಲಾ ಅರಿವಿದೆ. 'ದೇಸಾಯಿಯ ಭಗವದ್ಗೀತೆ' ಕುರಿತು ತಿಳಿಯಲು ಓದಿ ಈ ಕತೆ.


ಇತ್ತೀಚೆಗೆ ಜೋಗಿಯವರ ಕೆಲವು ಪುಸ್ತಕಗಳನ್ನು ಓದಿದಾಗ ಕೆಲವೊಮ್ಮೆ ಕೆಲವೊಂದು ವಿಚಾರ ಅಥವಾ ಕತೆಗಳು ಚರ್ವಿತ ಚರ್ವಣವಾಗಿರುತ್ತಿದ್ದವು ಎಂದೆನಿಸುತ್ತಿತ್ತು. ಆದರೆ, ಈ ಕತೆ ಪುಸ್ತಕ ಹಾಗೆನಿಸಲಿಲ್ಲ. ಓದಿರದ ಹೊಸ ಕತೆಗಳಿವೆ ಇಲ್ಲಿ. 'ಕತೆಪುಸ್ತಕ' ಎನ್ನುವುದಕ್ಕಿಂತ ಶೀರ್ಷಿಕೆ ಬೇರೆ ಇದ್ದಿದ್ದರೆ ಮತ್ತಷ್ಟು ಓದುಗರನ್ನು ತನ್ನತ್ತ ಸೆಳೆಯುವಂತಹಾ ಪುಸ್ತಕ. ತಾಜಾ ಕಥಾ ಸಂಕಲನ ಓದುವವರಿಗೆ ಇಲ್ಲಿದೆ ಚೆಂದದ ಕತೆಗಳ ಗುಚ್ಛ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ