ಸೋಮವಾರ, ಏಪ್ರಿಲ್ 6, 2026

ಸಾರ್ಥಕ ಮನಗಳು (ಪುಸ್ತಕ ಯಾನ - 3)



ಪುಸ್ತಕದ ಶೀರ್ಷಿಕೆ : ಸಾರ್ಥಕ ಮನಗಳು

ಲೇಖಕರು :ಸುಪ್ರೀತಾ ವೆಂಕಟ್

"ಸಾರ್ಥಕ ಮನಗಳು" ಇದು ಸುಪ್ರೀತಾ ವೆಂಕಟ್ ಎಂಬ ಉದಯೋನ್ಮುಖ ಬರಹಗಾರ್ತಿಯೊಬ್ಬರ ಚೊಚ್ಚಲ ಕಥಾ ಸಂಕಲನ. ಈ ಪುಸ್ತಕಕ್ಕೆ ಮತ್ತೊಂದು ವಿಶೇಷವೂ ಇದೆ. ಇವರು ಬರಹಗಾರ್ತಿ ಮಾತ್ರವಲ್ಲ ಈ ಪುಸ್ತಕದ ಮುಖಪುಟ, ಒಳಪುಟಗಳ ವಿನ್ಯಾಸ ಮಾಡಿ ಸ್ವಪ್ರಕಾಶನ ಮಾಡಿದ್ದಾರೆ. ಮಾಹಿತಿ   ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಇವರು ಇದರ ಮತ್ತೊಂದು ಧ್ರುವದಂತೆ ಭಾಸವಾಗುವ ಬರಹ ಕ್ಷೇತ್ರದಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. 


ಇದು ಐದು ಕತೆಗಳನ್ನು ಹೊಂದಿರುವ ಕಥಾ ಸಂಕಲನ. ಕೆಲವು ಬಹುಮಾನಿತ ಕತೆಗಳೂ ಇದ್ದು ಒಂದಕ್ಕಿಂತ ಒಂದು ವಿಭಿನ್ನವಾದ ಕತೆಗಳನ್ನು ಒಳಗೊಂಡಿದೆ.


ಬದುಕಲ್ಲಿ ಛಲ ಎಂಬುದು ಎಷ್ಟು ಮುಖ್ಯ ಅಲ್ಲವಾ..?? ಅವರು ಹೊಗಳಲಿಲ್ಲ, ಇವರು ತೆಗಳಿದರು, ಅವರು ನಿಂದಿಸಿದರು, ಇವರು ಆಡಿಕೊಂಡರು, ಅವರು ನಕ್ಕರು, ಇವರು ಕಾಲೆಳೆದರು.. ಹೀಗೆ ಎಷ್ಟೆಲ್ಲಾ ಕಾರಣ ಕೊಟ್ಟು ನಮ್ಮ ಹವ್ಯಾಸಗಳಿಂದ, ಇಷ್ಟವಾದ ಕೆಲಸಗಳಿಂದ ಮನಸ್ಸಿದ್ದರೂ ಹಿಂದೆ ಉಳಿದು ಬಿಡುತ್ತೇವೆ. ಇಲ್ಲವೇ, ನಮ್ಮೊಳಗೇ ಇರುವ ಭಯ, ಹಿಂಜರಿಕೆ, ಸ್ಟೇಜ್ ಫಿಯರ್ ಹೀಗೆ ಹಿಂದೆ ಉಳಿಯುವುದಕ್ಕೆ ಹಲವು ಕಾರಣಗಳನ್ನು ಹುಡುಕುತ್ತೇವೆ. ಆದರೆ, ಛಲಗಾತಿಯಾದರೆ ಎಂಥಹದ್ದೇ ಕೆಲಸವಿರಲಿ ಸಾಧಿಸಬಹುದು. ಸುಪ್ರಿಯಾಳ ಆಸೆ,ಕನಸು ಯಾವುದು..? ಅದನ್ನು ಸಾಧಿಸಲು ಅವಳಿಗಿದ್ದ ತೊಡಕೇನು..? ಆಕೆ ಅದನ್ನು ಸಾಧಿಸಿದಳೇ..? ತಿಳಿಯಲು ಓದಿ ಮೊದಲ ಕತೆ "ಅವಳ ಛಲ"


ಹೆಣ್ಣಿಗೆ ಹೆಣ್ಣೇ ಶತ್ರು ಎನ್ನುತ್ತಾರೆ. ಬದುಕಲ್ಲಿ ಅದರಲ್ಲೂ ಮನೆಯಲ್ಲಿ ಒಬ್ಬರಿಗೊಬ್ಬರು ಪರಸ್ಪರ ಸಹಕಾರಿಯಾಗಿದ್ದರೆ ಮನೆ ಸಾಮರಸ್ಯದಿಂದ ತುಂಬಿರುವುದರಲ್ಲಿ ಸಂಶಯವೇ ಇಲ್ಲ. ಮನೆ- ಮನ ಎರಡರಲ್ಲಿಯೂ ನೆಮ್ಮದಿ ನೆಲೆಸಿರುತ್ತದೆ. ಹೊರಗಿನಿಂದ ಬಂದವಳು ಎಂಬ ಭಾವವೋ ಅಥವಾ ತನ್ನಿಂದ ತನ್ನವರನ್ನು ಕಿತ್ತುಕೊಂಡುಬಿಡುತ್ತಾಳೆ ಎನ್ನುವ ಅಸೂಯೆಯೋ ಹೆಚ್ಚಿನ ಬಾರಿ ಅತ್ತೆ-ಸೊಸೆಯರ ನಡುವಿನ ಅಂತರ್ಯುದ್ಧಕ್ಕೆ ಕಾರಣವಾಗಿಬಿಡುತ್ತದೆ. ಅತ್ತೆ-ಸೊಸೆಯರ ನಡುವಿನ ಅಂತರ್ಯುದ್ಧ ಅಮ್ಮ-ಮಗಳ ಸಂಬಂಧದ ಮೇಲೆ ಪರಿಣಾಮ ಬೀರಿದರೆ..?? ಸಂಬಂಧಗಳ ನಡುವಿನ ಹಣಾಹಣಿಗಳಲ್ಲಿ "ಶೃತಿ ಸೇರುವಳೇ ಪಲ್ಲವಿ?" ತಿಳಿಯಲು ಓದಿ ಈ ಕತೆ.


ಸಂಬಂಧಗಳಲ್ಲಿಯೇ ಆಗಲಿ, ಸ್ನೇಹದಲ್ಲಿಯೇ ಆಗಲಿ ಅಥವಾ ವ್ಯವಹಾರದಲ್ಲಿಯೇ ಆಗಲಿ ನಂಬಿಕೆ ಎನ್ನುವುದು ಎಷ್ಟು ಮುಖ್ಯ ಅಲ್ಲವಾ.. ಯಾರನ್ನಾದರೂ ನಂಬುವಾಗ ಹೇಗೆ ನಂಬುವುದು ಎಂಬ ಅನುಮಾನ ಬಂದರೂ ಮತ್ತೊಮ್ಮೆ ಅವರನ್ನು ನಂಬದೇ ವಿಧಿ ಇರುವುದಿಲ್ಲ. ಎಲ್ಲರನ್ನೂ ನಂಬದೇ ಬದುಕುವುದಾದರೂ ಹೇಗೆ.. "ಬೆಳ್ಳಗಿರುವುದೆಲ್ಲ ಹಾಲಲ್ಲ" ಎಂಬುದು ಹೌದೇ ಆದರೂ ಹಾಲು ಬಿಳುಪು ಎಂಬುದನ್ನು ಅಲ್ಲಗಳೆಯಲು ಸಾಧ್ಯವೇ? ಚಿಕ್ಕಂದಿನಿಂದಲೂ ಮಹತ್ವಾಕಾಂಕ್ಷಿ, ಎಷ್ಟು ಸಾಧನೆ ಮಾಡಿದರೂ ಅತೃಪ್ತಿ ಪಟ್ಟುಕೊಂಡು ಮೊದಲ ಸ್ಥಾನಕ್ಕೇರುವ ಭರದಲ್ಲಿ ತನಗೆ ತಾನೇ ಸಮಸ್ಯೆಗಳನ್ನು ಹೇರಿಕೊಳ್ಳುತ್ತಿದ್ದ ಅಲೋಕ್ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಪ್ರಾರಂಭಿಸಿದ ನಂತರವೂ ಹೆಚ್ಚು ಕಡಿಮೆ ಹೀಗೆಯೇ ಇದ್ದ. ಆಗಲೇ ಪರಿಚಯವಾಗಿದ್ದು ಪಕ್ಕದ ಡೆಸ್ಕ್ ಗೆ ಹೊಸದಾಗಿ ಬಂದ ಪಂಗೇಶ್. ಇಬ್ಬರ ನಡುವೆ ಸ್ನೇಹ, ಸಲುಗೆ, ನಂಬಿಕೆ ಬೆಳೆದಂತೆ ವ್ಯವಹಾರವೂ ಬೆಳೆಯಿತು. ಅಲೋಕ್ ನ ನಂಬಿಕೆ ಉಳಿಸಿಕೊಂಡನಾ ಪಂಗೇಶ್ ಅಥವಾ ಅಲೋಕ್ ನಿಗೆ ಉಂಡೆ ನಾಮ ತಿಕ್ಕಿ ಪಂಗನಾಮೇಶ್ ಆದನಾ..?ತಿಳಿಯಲು ಓದಿ ಕತೆ "ಎಲ್ಲಾ ಬುರುಡೆ".


ಓದು, ಪದವಿಗೂ ಜ್ಞಾನಕ್ಕೂ ಒಂದಕ್ಕೊಂದು ಸಂಬಂಧವಿದೆಯಾ..? ವಿದ್ಯೆ ವಿನಯವನ್ನು ಕಲಿಸಬೇಕು. ಆದರೆ, ಅದು ಅಹಂಕಾರವನ್ನು ತುಂಬಿಸಿದರೆ ಅದಕ್ಕೆ ಬೆಲೆ ಇದೆಯಾ? ಜ್ಞಾನ ಪುಸ್ತಕಕ್ಕೆ ಮಾತ್ರ ಸೀಮಿತವಾ ಹಾಗಾದರೆ ಅನುಭವದಿಂದ ಬರುವ ಜ್ಞಾನ? 

ಕೃಷಿಯ ಕುರಿತು ಮಾಹಿತಿ ಇರುವ ಸೊಗಸಾದ ಕತೆ ಈ ಕಥಾ ಸಂಕಲನದ ನನ್ನಿಷ್ಟದ ಕತೆ. 

ಸುರಭಿಯಲ್ಲಿದ್ದ ಜ್ಞಾನದ ಬಗೆಗಿನ ಅಜ್ಞಾನ, ಅಹಂಕಾರವನ್ನು ಹೋಗಲಾಡಿಸಲು ಸಫಲನಾದನೇ ನಾಣಿ..?? ಪುಟ್ಟ ಊರಿನ ಒಂದು ಪುಟ್ಟ ಕತೆ ಅರ್ಥೈಸಿಕೊಂಡವರಿಗೆ ಬಹು ದೊಡ್ಡ ಪಾಠ ಹೇಳುತ್ತದೆ. ಓದಿ ನೋಡಿ "ಜ್ಞಾನವೆಂಬ ಸಂಪತ್ತು".


ಕೆಲವರು ಪರೀಕ್ಷೆಯ ಅಂಕವನ್ನೇ ಬದುಕೆಂದುಕೊಂಡು ಬದುಕುತ್ತಿರುತ್ತಾರೆ. ಇನ್ನು ಕೆಲವರು ಬದುಕನ್ನು ಬದುಕುತ್ತಾ ಅದಕ್ಕೆ ಬೇಕಾದಷ್ಟು ಪರೀಕ್ಷೆಗಳನ್ನು ಮಾತ್ರ ತೆಗೆದುಕೊಳ್ಳುತ್ತಿರುತ್ತಾರೆ. ಹಾಗಾದರೆ, ಬದುಕಲ್ಲಿ ಸಫಲರಾಗುವವರು ಯಾರು? ಅಂಕಗಳೇ ಮಾಪನವೆಂದು ಕೆಲವೊಮ್ಮೆ ಪೋಷಕರು ಕೂಡಾ ನಿರ್ಧರಿಸಿರುತ್ತಾರೆ. ಮೊದಲ ಸ್ಥಾನ ಪಡೆದ ಟಾಪರ್ ಗೆ ಸಿಗದ ಕೆಲಸ ಕೊನೆಯ ಬೆಂಚಿನ ಅಂಕ ಗಳಿಸುವುದರಲ್ಲಿ ಕೊಂಚ ಎಡವಿದ್ದ ವಿದ್ಯಾರ್ಥಿಗೆ ಸಿಗುತ್ತದೆ. ಹಾಗಾದರೆ ಕೆಲಸದ ಮಾಪನ ಯಾವುದು? ಬದುಕಲು ಮುಖ್ಯವಾದದ್ದು ಯಾವುದು? 

ಇಂತಹದ್ದೇ ಸವಾಲುಗಳನ್ನು ಎದುರಿಸುವ ಶಿಖರ್ ಹಾಗೂ ಅನ್ವಿತ್ ಎಂಬ ಇಬ್ಬರು ಹುಡುಗರ ಕತೆ ಇದು. "ಜೀವನ ಕಲೆ" ಕಲಿತದ್ದು, ಕಲಿಯುವುದು ಹೇಗೆ ಎಂಬುದನ್ನು ತಿಳಿಸಿಕೊಡುವ ಕತೆ ಇದು. 


ಇಲ್ಲಿನ ಕತೆಗಳಲ್ಲಿ ಭಾವವಿದೆ, ವಾಸ್ತವತೆ ಇದೆ. ನಗರದ, ಹಳ್ಳಿಯ ಎರಡೂ ಚಿತ್ರಣವಿದೆ. ಓದುತ್ತಿರುವಷ್ಟು ಹೊತ್ತು ನಮ್ಮನ್ನು ಹಿಡಿದಿಟ್ಟುಕೊಳ್ಳುವಂತಿದೆ. ಸಕಾರಾತ್ಮಕತೆ ತುಂಬಿಸುತ್ತದೆ. ಆದರೆ, ಇಷ್ಟು ಬೇಗ ಮುಗಿದು ಹೋಯಿತಾ ಎಂದೂ ಅನ್ನಿಸುತ್ತದೆ.


ಮತ್ತಷ್ಟು ಕತೆಗಳು, ಮಗದಷ್ಟು ಪುಸ್ತಕಗಳನ್ನು ಬರೆಯುತ್ತಾ ಇರಿ. ನಿಮ್ಮ ಸಾಹಿತ್ಯ ಪಯಣಕ್ಕೆ ಶುಭವಾಗಲಿ. 


ಓದುವ ಆಸಕ್ತಿ ಇದ್ದವರಿಗೆ ಪುಸ್ತಕ ದೊರೆಯುವ ಕುರಿತು ಮಾಹಿತಿ : ಇದು ಸ್ವಪ್ರಕಾಶನ ಪುಸ್ತಕವಾಗಿರುವುದರಿಂದ ಪುಸ್ತಕ ಕೊಳ್ಳಲು ಲೇಖಕಿಯನ್ನೇ ಸಂಪರ್ಕಿಸಬೇಕು.

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ