ಸೋಮವಾರ, ಏಪ್ರಿಲ್ 6, 2026

ಕೂರ್ಗ್ ರೆಜಿಮೆಂಟ್ (ಪುಸ್ತಕ ಯಾನ - 39)


 ಪುಸ್ತಕದ ಶೀರ್ಷಿಕೆ :  ಕೂರ್ಗ್ ರೆಜಿಮೆಂಟ್

ಲೇಖಕರು : ಮೇಜರ್ ಡಾ| ಕುಶ್ವಂತ್ ಕೋಳಿಬೈಲು

ಪ್ರಕಾಶಕರು : ಮೈತ್ರಿ ಪ್ರಕಾಶನ

ಮೊದಲ ಮುದ್ರಣ : 2020

ಬೆಲೆ : 100 ರೂ.


ಬಂದೂಕು ಹಿಡಿದವರ ನಾಡಿಮಿಡಿತ ಎನ್ನುವ ಅಡಿ ಬರಹ ಇಲ್ಲಿರುವ ಪ್ರತಿ ಕಥೆಗಳಿಗೂ ಸುಂದರವಾಗಿ ಹೊಂದಿಕೆಯಾಗುತ್ತದೆ. ಸೈನಿಕರ ಬದುಕನ್ನು ಸೈನ್ಯದಲ್ಲಿರುವಾಗ ಮತ್ತು ಹುತಾತ್ಮರಾದಾಗ ಹೆಚ್ಚು ನೆನೆಯುವ ನಾವು ಸೈನಿಕರ ನಿವೃತ್ತ ಬದುಕಿನ ಕುರಿತು ಅಷ್ಟು ತಿಳಿದಿರುವುದಿಲ್ಲ. ಇಲ್ಲಿರುವ ಕಥೆಗಳು ಕೇವಲ ಕಥೆಗಳಂತೆ ಭಾಸವಾಗುವುದಿಲ್ಲ. ಬದಲಿಗೆ, ಈ ಕಥೆಗಳು ವಾಸ್ತವದ ದೃಶ್ಯಗಳಂತೆ ಕಣ್ಣಿಗೆ ಕಟ್ಟುತ್ತವೆ. 


"ಕೂರ್ಗ್ ರೆಜಿಮೆಂಟ್" ವಂಶ ಪಾರಂಪರ್ಯವಾಗಿ ಸೈನ್ಯಕ್ಕೆ ಸೇರುವವರ ಮನೆಯವರ ಮನದಾಳವನ್ನು ತೆರೆದಿಡುತ್ತದೆ. ತನ್ನ ಹಿಂದಿನ ತಲೆಮಾರಿನವರು ಯುದ್ಧದಲ್ಲಿ ಹುತಾತ್ಮರಾಗಿದ್ದರೂ ಜಗ್ಗದೇ ಮುಂದೆ ಹೋಗುವ ಮುಂದಿನ ತಲೆಮಾರನ್ನು ಸೆಳೆಯುವ ಗುಣ ಯಾವುದು..? ಎಂಬ ಪ್ರಶ್ನೆಯೊಂದಿಗೆ ಕೂರ್ಗ್ ರೆಜಿಮೆಂಟ್ ನ ಸೆಳೆಯುವ ಕಥೆ ಸೆಳೆಯುತ್ತದೆ.


"ಬೊಳ್ಳಮ್ಮ" ಕಥೆಯು ಕೂರ್ಗ್ ರೆಜಿಮೆಂಟ್ ಪ್ರಪಂಚ ಎಂದುಕೊಂಡು ಹೊರಟ ಮುತ್ತಣ್ಣನ ಪ್ರೇಮ ಕಥೆಯಿದೆ. ಹೇಳದೆ ಉಳಿದ ಪ್ರೇಮವೊಂದು ಅವನು ಪ್ರೇಮವನ್ನು ಬಯಸುವ ಹೊತ್ತಿಗೆ ಅವನ ಕೈಗೆ ದಕ್ಕಿತೇ ಅಥವಾ ಕೈ ಜಾರಿತೇ ಎಂದು ತಿಳಿಯಲು ಈ ಕಥೆ ಓದಿ


ಭರ್ತಿ ಹದಿನೆಂಟು ವರ್ಷಗಳ ಸೇನಾ ಜೀವನದ ನಂತರ ತನ್ನ ಮೂವತ್ತೈದನೆಯ ವಯಸ್ಸಿನಲ್ಲಿ ಹೊಸ ಜೀವನ ಆರಂಭಿಸಲು ಹೊರಟ "ಗಣಿ ಬೋಪಣ್ಣ" ನಿಗೆ ಎಲ್ಲಾ ಮಾಜಿ ಸೈನಿಕರಿಗೂ ಇರುವಂತೆ ಸೆಕೆಂಡ್ ಹ್ಯಾಂಡ್ ಜೀಪಿನ ಮೇಲೆ ಎಲ್ಲಿಲ್ಲದ ಮೋಹ. ಜೀಪಿನ ವ್ಯಾಮೋಹಕ್ಕೆ ಒಳಗಾಗಿ ವಿಚಾರಣೆ ನಡೆಸದ ಫಲವಾಗಿ ಜೀಪು ಕೇಸು ಹಾಗೂ ಕುಡಿತ, ನಾಲಿಗೆಯ ಹಿಡಿತದ ತಪ್ಪಿದ ಫಲವಾಗಿ ಗಣಿ ಬೋಪಣ್ಣನ ಬದುಕೇ ಬದಲಾಯಿತು. ಬದಲಾವಣೆ ಹೀಗೂ ಇರಬಹುದಾ ಎನ್ನಿಸಿದರೂ ವಾಸ್ತವ ಹೀಗೆಯೇ ಇರುತ್ತದೆ ಎಂದೆನಿಸುವಂತೆ ಮಾಡಿದ ಕಥೆ ಇದು.


ಯಾವಾಗಲೂ "ಅವ್ವ" ಒಬ್ಬಳೇ.. ಅವಳ ಆಲೋಚನೆಗಳು ಮಕ್ಕಳನ್ನು ತಟ್ಟಲಾರವು ಎಂಬುದು ಮತ್ತೆ ಮತ್ತೆ ನಿರೂಪಿತವಾಗುವಂತಹಾ ಕಥೆ ಇದು. 

"ಅವ್ವ ಇತ್ತೀಚಿನ ಕೆಲವು ವರ್ಷಗಳಿಂದ ಹಳೆ ಸಾವಿರ ರೂಪಾಯಿ ನೋಟಿನ ತರ ಚಲಾವಣೆಯಲ್ಲಿ ಇಲ್ಲದಾಗಿದ್ದಾರೆ" ಎಂಬ ಮಾತು ಗಾಢವಾಗಿ ಆಲೋಚನೆಗೆ ಹಚ್ಚುತ್ತದೆ.


"ಒಂದು ಬೊಗಸೆ ಮಣ್ಣು" ಸೈನಿಕನ ಬದುಕಿನ ಜೊತೆಗೆ ಅವನ ಬದಲಾದ ವೈಯಕ್ತಿಕ ಹಿನ್ನೆಲೆಯನ್ನು ಸಹಾ ಬಿಂಬಿಸುತ್ತದೆ. ದೇಶದ ಒಂದು ಹಿಡಿ ಮಣ್ಣಿಗಾಗಿ ಅವನು ಅಲ್ಲಿ ಜೀವದ ಹಂಗು ತೊರೆದು ಹೋರಾಟ ನಡೆಸುತ್ತಿದ್ದರೆ ಇಲ್ಲಿ "ಉಳುವವನೆ ಹೊಲದೊಡೆಯ" ಎಂಬ ಕಾನೂನಿನಡಿ ತನ್ನ ವೈಯಕ್ತಿಕ ಹಿಡಿ ಮಣ್ಣನ್ನು ಕಳೆದುಕೊಂಡ ಕತೆ ಇದು.


"ಹುಲಿಮದುವೆ"ಯು ಶಿಕಾರಿಯ ಹಿಂದಿನ ದಿನಗಳ ವೈಭೋಗವನ್ನು ನೆನಪಿಸಿ ಈಗಿನ ದಿನಗಳನ್ನು ಸಹಾ ತುಲನೆ ಮಾಡುತ್ತದೆ. ಆ ಊರಿನಲ್ಲಿ ಕೊನೆಯ ಹುಲಿ ಮದುವೆ ನಡೆದದ್ದು ಸ್ವಾತಂತ್ರ್ಯ ಬರುವುದಕ್ಕೂ ಹತ್ತು ವರ್ಷ ಮೊದಲು ಎಂದು ನೆನಪಿಸಿಕೊಂಡ ಅಪ್ಪಿ ತನ್ನ ಧೈರ್ಯವನ್ನು ಪ್ರದರ್ಶಿಸಹೊರಟ. ಹುಲಿಮದುವೆಯಾದನೋ.. ಹುಲಿ ಬಾಯಿಗೆ ಸಿಕ್ಕನೋ ಅಥವಾ ಹುಲಿ ಬಾಯಿಂದ ತಪ್ಪಿಸಿಕೊಂಡನೋ ತಿಳಿಯಲು ಈ ಕಥೆ ಓದಬೇಕು.


"ಮುತ್ತಿನ ಹಾರ" ಸಿನಿಮಾ ಕಥೆಯಂತೆ ಬಾವುಕ ಕತೆಯಲ್ಲ. ಬದಲಿಗೆ ದಿಟ್ಟ ಸಂಭಾಷಣೆಗಳಿಂದ ಈ ಕತೆ ಇಷ್ಟವಾಯಿತು. ವಾಸ್ತವಕ್ಕೆ ತೀರಾ ಹತ್ತಿರವೆನಿಸಿದ ಕತೆ. ಭಾವನೆಗಳು ಅರ್ಥವಾಗಲು ಭಾಷೆ ಬೇಕಾಗಿಲ್ಲವೆಂದು ಅನ್ನಿಸುವಂತೆ ಮಾಡಿದ ಕಥೆ ಇದು.


"ಬಾಲ" ಇಂದಿನ ದಿನಗಳ ಪ್ರತಿನಿಧಿಯಂತೆ ಭಾಸವಾಗುತ್ತಾನೆ. ವಿವಿಧ ಕೆಲಸಗಳನ್ನು ಮಾಡುತ್ತಾ, ಅದರಲ್ಲಿಯೂ ಪ್ರಾಮಾಣಿಕತೆಯಿಲ್ಲದೆ ಅತಿ ಎತ್ತರಕ್ಕೆ ಏರಿದ ಅಪ್ರಾಮಾಣಿಕ ವ್ಯಕ್ತಿಯಾಗಿ ಭಾಸವಾಗುತ್ತಾನೆ. ಅನ್ಯಾಯಕ್ಕೆ ಹೆಚ್ಚಿನ ಆಯಸ್ಸು ಇರುವುದಿಲ್ಲ ಎಂಬಂತೆ ಕತೆಯ ಅಂತ್ಯವಿದೆ. 


"ಡಾ ಮುತ್ತಮ್ಮ" ವೈದ್ಯಳಾಗಿ ಹಗಲು ರಾತ್ರಿಯ ಓಡಾಟದಲ್ಲಿ ಉರಿದು ಹೋಗುತ್ತಿರುವ ತನ್ನ ಈ ವ್ಯಸ್ತ ಜೀವನಕ್ಕೆ ಒಂದು ಹೊಸ ಕಾಯಕಲ್ಪ ಕೊಡಲು ಬಯಸುತ್ತಾಳೆ. ಎಲ್ಲರಂತೆ ತಾನೂ ಸಹಾ ದಿನಕ್ಕೆ ಎಂಟು ಗಂಟೆಗಳ ಕಾಲ ಕೆಲಸ ಮಾಡಿ ಬಾಕಿ ಸಮಯವನ್ನು ತನಗಾಗಿ ಮೀಸಲಾಗಿಟ್ಟುಕೊಳ್ಳಬೇಕು ಎಂಬ ನಿರ್ಧಾರ ಮಾಡುವ ಹೊತ್ತಲ್ಲಿ ನಡೆಯುವ ಸಣ್ಣ ಘಟನೆ ಅವಳ ಆಲೋಚನೆಯ ಬುಡವನ್ನೇ ಅಲುಗಾಡಿಸುತ್ತದೆ. ಅವಳು ಅವಳ ಶೋಷಿತ ಪ್ರಜ್ಞೆಯಲ್ಲಿಯೇ ಮುಂದುವರಿಯುತ್ತಾಳಾ ಅಥವಾ ಅದನ್ನು ತೊರೆಯುವಳಾ..?? ಎಂಬುದು ಕತೆಯ ಕೊನೆಯವರೆಗೂ ಕುತೂಹಲವನ್ನು ಉಳಿಸಿಕೊಂಡು ಹೋಗುತ್ತದೆ.


ಬೆಳ್ಳಿಯಪ್ಪನ ಮನೆಯ "ಬೊಳ್ಳು" ಇತರ ನಾಯಿಗಳಿಗಿಂತ ಭಿನ್ನವಾಗಿ ಹೇಗೆ ಎಲ್ಲರ ಮನಗೆದ್ದಿತ್ತು ಎಂಬುದು ಹಾಗೂ ಬೊಳ್ಳುವಿನ ಪ್ರತಿ ಚರ್ಯೆ ಕೂಡಾ ದಾಖಲಾದಂತಿದೆ. ಬೊಳ್ಳು -೧ ಹಾಗೂ ಬೊಳ್ಳು -೨ ಎರಡು ಕಥೆಗಳು ಇಲ್ಲಿ ಅದರ ಪ್ರಾಮುಖ್ಯತೆಯನ್ನು ತೆರೆದಿಡುತ್ತವೆ. 


"ಸ್ವರ್ಗಕ್ಕೆ ಏಣಿ" ಕಥೆಯ ವಿಷಯ ಆಲೋಚನೆಗೆ ಹಚ್ಚಿತು. ಕಾಶ್ಮೀರದ ಗಡಿ ಕಾದು ಬಂದವನ ಆಸ್ತಿಯನ್ನು ಊರಿನಲ್ಲಿ ಕಾಯುವವರಿಲ್ಲದ ಕಾರಣ ಅನೇಕ ಬಾರಿ ಅದು ಅಕ್ರಮ ಒತ್ತುವರಿಗೆ ಈಡಾಗುತ್ತದೆ. ಹಾಗೂ, ಸೇನೆಯಿಂದ ಬಂದ ನಂತರ ಉಳಿತಾಯದ ಕೊರತೆಗೋ ಅಥವಾ ಸಂಸಾರವನ್ನು ಸಾಗಿಸಲು ಅವಶ್ಯವಾದಷ್ಟು ಹಣ ಇಲ್ಲದ್ದಕ್ಕೋ ಕೃಷಿ ಅನಿವಾರ್ಯವಾಗುತ್ತದೆ.  ಇಂತಹದ್ದೇ ಅಕ್ಕಪಕ್ಕದ ಜಮೀನಿನ ಕುಟುಂಬಗಳ ಒಳ ಜಗಳದ ಅನಾವರಣವಾಗಲು ಒಂದು ಕ್ಷುಲ್ಲಕ ಕಾರಣ ಸಾಕಾಗುತ್ತದೆ. ಇಂತಹ ಜಗಳವನ್ನು ಮುಗಿಸಿದ ಸ್ವರ್ಗಕ್ಕೆ ಏಣಿ ಹಾಕಿಕೊಟ್ಟ ಒಂದು ಏಣಿಯ ಕಥೆ ಇದೆ ಇಲ್ಲಿ.


ರೆಜಿಮೆಂಟ್ ನ ಗೇಟು ಕಾಯುವುದರಿಂದ ಶುರು ಮಾಡಿ, ಹಂತ ಹಂತವಾಗಿ ಮೇಲೇರಿ ಕಮಾಂಡಿಗ್ ಆಫಿಸರ್ ಪಕ್ಕದಲ್ಲಿ ನಿಲ್ಲುವ ಸುಬೇದಾರ್ ಮೇಜರ್ ಪ್ರತಿ ರೆಜಿಮೆಂಟಿನ ಅಂತರಾತ್ಮ. ಅಂತಹಾ ಸುಬೇದಾರ್ ಮೇಜರ್ ಕುಶಾಲಪ್ಪನ ನಿವೃತ್ತಿಯ ಸೇವೆಯ ಕೊನೆಯ ದಿನದ ಕಥೆ " ಸರ್ವರತ ಈಝತ್ ಓ ಇಕ್ಬಾಲ್ " .


~ ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ