ಸೋಮವಾರ, ಏಪ್ರಿಲ್ 6, 2026

ದ್ವೈತ - ಕಥೆಗಾರನೆ ಕಥೆಯಾದ ಕಥೆ (ಪುಸ್ತಕ ಯಾನ - 31)


ಪುಸ್ತಕದ ಹೆಸರು : ದ್ವೈತ - ಕಥೆಗಾರನೆ ಕಥೆಯಾದ ಕಥೆ

ಲೇಖಕರು : ರಾಘವ್

ಪ್ರಕಾಶಕರು : ವೀರಲೋಕ ಬುಕ್ಸ್ 

ಪುಟಗಳು : 104

ಬೆಲೆ : 140

ಮೊದಲ ಮುದ್ರಣ : 2022


"ದ್ವೈತ"ದ ಮೊದಲ ಕೆಲವು ಭಾಗಗಳನ್ನು ಪ್ರತಿಲಿಪಿಯ ಕಥಾ ಸರಣಿ ಸ್ಪರ್ಧೆಗೆ ಬರೆದಿದ್ದಾಗ ಓದಿದ್ದೆ. ಆದರೆ, ಸಮಗ್ರವಾದ ನಂತರ ಓದೋಣ ಎಂದುಕೊಂಡು ಸುಮ್ಮನಾಗಿದ್ದೆ. ವೈಯಕ್ತಿಕವಾಗಿ ನನಗೆ ಡಿಜಿಟಲ್ ಓದಿಗಿಂತ ಪುಸ್ತಕ ಕೈಯ್ಯಲ್ಲಿಡಿದು ಓದುವುದೇ ಪ್ರಿಯ. ಹಾಗೆಂದು ಡಿಜಿಟಲ್ ಓದಿನ ವಿರೋಧಿ ಎಂದಲ್ಲ. ಆದರೂ..ಪುಸ್ತಕದ ಓದು ವಿಭಿನ್ನವೇ. ಹಾಗಾಗಿ, ದ್ವೈತ ಕೈಯ್ಯಲ್ಲಿಡಿದ ಹೊತ್ತಲ್ಲಿ ನನಗನ್ನಿಸಿದ್ದು ಹೀಗೆ.


'ಕಥೆಗಾರನೇ ಕಥೆಯಾದ ಕಥೆ' ಎನ್ನುವ ಟ್ಯಾಗ್ ಲೈನ್ ನೋಡಿದಾಗ..  ಅರೆ..! ಪ್ರತಿ ಕಥೆಗಾರನೂ ಕತೆಯೊಳಗೆ ಪಾತ್ರ ಪೋಷಿಸಬೇಕು ಎಂದಾಗ ಆತ ಅದರೊಳಗೆ ಕಥೆಯಾಗಲೇ ಬೇಕು ಅಲ್ಲವಾ.. ಎಂದುಕೊಂಡರೂ ಆ ರೀತಿಯ ಕಥೆಗಾರನೇ ಬೇರೆ. ಇಲ್ಲಿ ಆರ್. ವಿ ಎನ್ನುವ ಕಥೆಗಾರನ ಪರಿಯೇ ಬೇರೆ. ಎರಡೂ ಹೇಗೆ ವಿಭಿನ್ನ ಎಂಬುದನ್ನು 'ದ್ವೈತ'ದಲ್ಲಿ ಲೇಖಕರೇ ಹೇಳುತ್ತಾರೆ.


ಈ ಪುಸ್ತಕದಲ್ಲಿ ಸಸ್ಪೆನ್ಸ್ ಇದೆ. ಥ್ರಿಲ್ಲರ್ ಕೂಡಾ ಇದೆ. ಜೊತೆಗೆ ಇನ್ಫರ್ಮೇಷನ್ ಕೂಡಾ ಇದೆ. ಯತಿರಾಜ್ ಸರ್ ಹೇಳುವ ಎಂಟರ್ಟೈನ್ ಮೆಂಟ್ + ಇನ್ಫರ್ಮೇಷನ್ ಅಂದರೆ ಇನ್ಫೋ ಎಂಟರ್ಟೈನ್ ಮೆಂಟ್ ವಿಭಾಗಕ್ಕೆ ಸೇರಿಸಬಹುದಾದ ಪುಸ್ತಕ. ಇಲ್ಲಿ ವಾಸ್ತವದಂತೆ ಕಾಣುವ ಎಳೆಗಳಿಂದ ಕಥೆ ವಾಸ್ತವದ ಚಿತ್ರಣವನ್ನು ಬಿಚ್ಚಿಡುತ್ತಿದೆ ಎನ್ನಿಸಿದರೂ ಕೊಂಚ ಸಿನಿಮೀಯ ರೀತಿಯ ಸಸ್ಪೆನ್ಸ್ ಗಳು ನಾವು ಕತೆಯನ್ನು ಊಹಿಸಲಾರದಂತೆ.. ಮತ್ತೆ ಮತ್ತೆ ಟ್ವಿಸ್ಟ್ ನೋಡಿ ಓದುಗರಿಗೆ ಬರಹಗಾರನ ಚಾಕಚಕ್ಯತೆಯನ್ನು ಮನದಟ್ಟು ಮಾಡಿ ಓದುಗನ ತಲೆಗೂ ಹೆಚ್ಚು ಕೆಲಸ ಕೊಡುತ್ತವೆ. ಈ ಟ್ವಿಸ್ಟ್ ಗಳು 'ದ್ವೈತ'ವನ್ನು ಮತ್ತಷ್ಟು ರೋಚಕ ಎನ್ನಿಸುವಂತೆ ಮಾಡಿವೆ. 


ಆರ್. ವಿ ಬರೆಯುವ ಮುನ್ನುಡಿಯನ್ನು ತನ್ನ ಸ್ನೇಹಿತರು ಹಾಗೂ ದಿವಂಗತ ಪತ್ನಿ ಲಾವಣ್ಯಳಿಗೆ ಅರ್ಪಿಸುತ್ತಾ ಶುರುವಾಗುವ ಕಥೆಯೇ ಒಂದು ಕುತೂಹಲವನ್ನು ಹುಟ್ಟು ಹಾಕುತ್ತದೆ. ಕೊನೆಯ ಪುಟದವರೆಗೂ ನನ್ನ ಆಲೋಚನೆಯಲ್ಲೇ ಕಥೆ ಸಾಗುವುದೆಂದು ಹೇಳಿದರೂ ಅದು ಸಾಧ್ಯವಾಗದೇ ಹೋದರೆ ಎನ್ನುವ ಮತ್ತೊಂದು ಸಾಧ್ಯತೆಯನ್ನೂ ಹೇಳುವಾಗ.. ಆರ್.ವಿ ಗೆ ಏನಾಗಿರಬಹುದು ಅಥವಾ ಏನಾಗಬಹುದು ಎನ್ನುವ ಸಂದೇಹ ಹುಟ್ಟುತ್ತದೆ. 


ಇದು ಲೇಖಕ ರಾಜೀವ್ ವರ್ಮನ ಬದುಕಿನ ಕಥೆಯೇ ? ಅಥವಾ ಆತ ಮತ್ತೊಬ್ಬರ ಬದುಕಿನೊಳಗೆ ಪರಕಾಯ ಪ್ರವೇಶ ಮಾಡಿದ ಕತೆಯೇ ? 


ಲೇಖಕ ಎಂದ ಮೇಲೆ ಅವನಿಗೆ ಅಭಿಮಾನಿಗಳು , ಓದುಗರೂ ಇರಬೇಕಲ್ಲಾ.. ಇಲ್ಲಿ ರಾಜೀವ್ ವರ್ಮನ ದೊಡ್ಡ ಅಭಿಮಾನಿ ಪರಶು.


ದ್ವೈತ ಎಂದರೆ ಎರಡು. ಇಲ್ಲಿ ಆ ದ್ವೈತ ಆರ್.ವಿ ಹಾಗು ಪರಶುವಾ ? ಅಥವಾ ಆರ್.ವಿ ಯ ಎರಡು ವ್ಯಕ್ತಿತ್ವವಾ ? ಅಥವಾ ಪರಶುವಿನ ಎರಡು ವ್ಯಕ್ತಿತ್ವವಾ ?


'ದ್ವೈತ' ಪುಸ್ತಕ ಪೂರ್ಣವಾಗಿತ್ತಾ..?? ಅಥವಾ ಅದನ್ನು ಬೇರೆ ಯಾರಾದರೂ ಪೂರ್ಣಗೊಳಿಸುವರಾ..?? ಎಷ್ಟೇ ದೂರವಿಟ್ಟರೂ ಪರಶು ಬದುಕಿನಲ್ಲಿ 'ದ್ವೈತ' ಮತ್ತೆ ಮತ್ತೆ ಬರುತ್ತಿದ್ದುದು ಏಕೆ ? ಆರ್.ವಿ ಹಾಗೂ ಪರಶು ಸಂಬಂಧ ಲೇಖಕ ಹಾಗೂ ಓದುಗನನ್ನು ಮೀರಿದ್ದಾ..?? ಇದು ಮಾನಸಿಕ ಸಮಸ್ಯೆಯ ಕುರಿತು ಇರುವುದೇ ಅಥವಾ ಮಾಟ - ಮಂತ್ರದ ಕತೆಯೋ ? ಕಥೆಗಾರನಿಗೆ ಕಥೆ ಬರೆಯಲು ಹಾಗೂ ಕಥೆಯಾಗಲು ಇದ್ದ ಕಾರಣವೇನು ? ಕೇವಲ ಕಥಾವಸ್ತುವೇ ? ಕುತೂಹಲವೇ ? ಅಥವಾ ಅದಕ್ಕೂ ಮೀರಿದ ಕಾರಣವೇ ? ಎಲ್ಲದಕ್ಕೂ ಉತ್ತರ ತಿಳಿಯಲು ಓದಿ 'ದ್ವೈತ'. 


ಈ ಊಹಿಸಲಸಾಧ್ಯವಾದ ಕಥೆಯಲ್ಲಿ ಆರ್.ವಿ ಹಾಗೂ ಪರಶು ಮುಖ್ಯ ಪಾತ್ರಗಳಂತೆ ಇಲ್ಲಿ ಪ್ರತಿಯೊಂದು ಪಾತ್ರಕ್ಕೂ ಅದರದ್ದೇ ಆದ ಮಹತ್ವಗಳಿವೆ. ಪೂರಕ ಪಾತ್ರಗಳಾಗಿ ಮಾತ್ರವಲ್ಲ ಅವಶ್ಯಕವಾಗಿ ಬರುವ ಸ್ನೇಹಿತರಾದ ತೇಜ್, ಓಂಕಾರ್, ಕವನ, ಪೃಥ್ವಿ, ಧವನ್, ತರುಣ್ ,ಗೌರವ್ ಎಲ್ಲರೂ ಸ್ನೇಹಿತರ ಬಳಗವೆಂದರೆ ಹೀಗಿರಬೇಕು ಎನ್ನುವ ಆಸೆ ಹುಟ್ಟಿಸುವಂತಿವೆ. ಮಾಂತ್ರಿಕ ಅಮೇರ, ಡಾಕ್ಟರ್ ಹೇಮಂತ್ ಹಾಗೂ ಡಾಕ್ಟರ್ ನವೀನ್, ಪ್ರಿನ್ಸಿಪಾಲ್ ಫರ್ನಾಂಡಿಸ್, ಸಬ್ ಇನ್ಸ್ಪೆಕ್ಟರ್ ಗೌರೀಶ್ ಹೀಗೆ ಎಲ್ಲರೂ ಒಂದರ್ಥದಲ್ಲಿ ಮುಖ್ಯ ಪಾತ್ರಗಳೇ ಎನ್ನಿಸುತ್ತಾರೆ.


ಮನುಷ್ಯನ ಕುತೂಹಲ, ಅನುಮಾನ, ವಾಂಛೆ, ಮೋಸ, ನಂಬಿಕೆ ದ್ರೋಹ, ಪ್ರಭಾವ ಏನೆಲ್ಲಾ ಇದ್ದರೂ ಎಲ್ಲಕ್ಕೂ ಮೀರಿದ ಪ್ರಭಾವ ಮನುಷ್ಯನ ಮನಸ್ಸಿನ ಮೇಲಾದರೂ ಅದನ್ನೂ ಮೀರಿದ ಟ್ವಿಸ್ಟ್ ಕಥೆಯಲ್ಲಿದೆ. ಮುಖಪುಟ ಸೊಗಸಾಗಿದ್ದು ಮುಖಪುಟದಿಂದಲೇ ಕುತೂಹಲ ಗರಿಗೆದರುತ್ತದೆ. ತನ್ನ ಚೊಚ್ಚಲ ಕಾದಂಬರಿಯಲ್ಲೇ ಭರವಸೆ ಮೂಡಿಸಿದ್ದಾರೆ ರಾಘವ್. ಇನ್ನಷ್ಟು ಸೊಗಸಾದ ಪುಸ್ತಕಗಳು ನಿಮ್ಮಿಂದ ಹೊರಬರಲಿ ರಾಘವ್. 

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ