ಸೋಮವಾರ, ಏಪ್ರಿಲ್ 6, 2026

ಬೆಂಗಳೂರು Y2K50 - Y2K64 (ಪುಸ್ತಕ ಯಾನ - 37)


ಪುಸ್ತಕದ ಶೀರ್ಷಿಕೆ : ಬೆಂಗಳೂರು Y2K50 - Y2K64

ಲೇಖಕರು : ಡಾ. ಎಂ. ವೆಂಕಟಸ್ವಾಮಿ

ಪ್ರಕಾಶಕರು : ಜಾಗೃತಿ ಪ್ರಿಂಟರ್ಸ್

ಮೊದಲನೇ ಮುದ್ರಣ : 2009

ಪುಟಗಳು : 148

ಬೆಲೆ : 90 ರೂ.


ಈ ವೈಜ್ಞಾನಿಕ ಕಾದಂಬರಿ ಮುದ್ರಣಕ್ಕೂ ಐದು ವರ್ಷ ಮುಂಚೆಯೇ ಕನ್ನಡ ಪ್ರಭ ಪತ್ರಿಕೆಯಲ್ಲಿ ಧಾರಾವಾಹಿ ರೂಪದಲ್ಲಿ ಪ್ರಕಟವಾಗಿದೆ. ಭೂ ವಿಜ್ಞಾನಿ ಹಾಗೂ ಲೇಖಕರಾಗಿ ಹೆಸರಾಗಿರುವ ಡಾ. ಎಂ. ವೆಂಕಟಸ್ವಾಮಿಯವರು ಕೋಲಾರ ಜಿಲ್ಲೆಯ ಬಂಗಾರಪೇಟೆಯ ಬ್ಯಾಟರಾಯನಹಳ್ಳಿಯವರು. ಇವರು ಕತೆ, ಕವನ, ಕಾದಂಬರಿ, ವಿಮರ್ಶೆ, ಪ್ರವಾಸ ಕಥನ, ವೈಚಾರಿಕ ಹೀಗೆ ಎಲ್ಲಾ ಕ್ಷೇತ್ರದಲ್ಲಿಯೂ ತಮ್ಮ ಬರಹದ ಛಾಪು ಮೂಡಿಸಿದ್ದಾರೆ. ಎಲ್ಲವೂ ಸೇರಿ 20 ಕೃತಿಗಳನ್ನು ಪ್ರಕಟಿಸಿದ್ದಾರೆ. 


ಈ ಕಾದಂಬರಿಯ ಹೆಸರು ವಿಭಿನ್ನವಾಗಿದೆಯಲ್ಲಾ ಎಂದುಕೊಂಡು ಪುಸ್ತಕ ಕೈಯ್ಯಲ್ಲಿ ಹಿಡಿದಾಗ ಇದನ್ನು ಡಿ- ಕೋಡ್ ಮಾಡಬಹುದಾ ಎಂದು ಆಲೋಚಿಸಿದೆ. ಅದು ಸರಿಯಾಗಿತ್ತು ಸಹಾ. Y ಎಂಬುದು ಇಯರ್ (ವರ್ಷ) ಅನ್ನು ಸೂಚಿಸುತ್ತಿದ್ದರೆ 2K ಎಂದರೆ 2000 ಎಂದು. 2050 ರಿಂದ 2064 ರ ವರೆಗೆ ಏನೆಲ್ಲಾ ಬದಲಾವಣೆಯಾಗಬಹುದು ಎಂಬುದನ್ನು ವೈಜ್ಞಾನಿಕವಾಗಿ ಕಟ್ಟಿಕೊಟ್ಟಿರುವ ಕಾದಂಬರಿ ಇದು. ಹಾಗೆ ನೋಡಿದರೆ ಈ ಕಾದಂಬರಿ ಇಡೀ ದೇಶದಲ್ಲಿಯೇ ಆಗುವ ಬದಲಾವಣೆಗಳನ್ನು ಕಟ್ಟಿ ಕೊಟ್ಟರೂ ನಮಗೆ ಹತ್ತಿರವಾದ ಎಂದರೆ ಕನ್ನಡಿಗರಿಗೆ 'ಸಿಲಿಕಾನ್ ಸಿಟಿ' ಎನ್ನಿಸಿಕೊಳ್ಳುವ ಬೆಂಗಳೂರು ಮನಸ್ಸಿಗೆ ಹತ್ತಿರವಾಗಬಹುದು ಎಂಬ ಉದ್ದೇಶ ಇರಬಹುದು ಎಂಬುದು ನನ್ನ ಅನಿಸಿಕೆ.


ಒಬ್ಬ ಮನುಷ್ಯನ ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಅದೆಷ್ಟು ಬದಲಾವಣೆಗಳಾಗುತ್ತವೆ ಎಂಬುದು ನಮ್ಮ ತಂದೆ- ತಾಯಿ ಹಾಗೂ ನಮ್ಮ ಮಕ್ಕಳನ್ನು ನಮ್ಮ ಜೊತೆ ಇಟ್ಟು ನೋಡಿದರೆ ಆ ಬದಲಾವಣೆ ಸುಲಭವಾಗಿ ಗೋಚರವಾಗುತ್ತದೆ. ಅಂತಹದ್ದರಲ್ಲಿ ಒಂದು ಪ್ರದೇಶವನ್ನು ಹಾಗೂ ದೇಶವನ್ನು ಮುಂದುವರಿದ ದಿನಗಳಲ್ಲಿ ಹೀಗಿರಬಹುದು ಎಂದು ಕಟ್ಟಿ ಕೊಡುವುದು ಸುಲಭದ ಮಾತಲ್ಲ.


ಕಥೆಯ ಮೊದಲಿಗೆ ಸ್ಥಳ : ಬೆನ್ ನಗರ ಎಂದಿದೆ. ಬೆನ್, ಡೆಲ್ ಎಂಬ ನಗರಗಳು ಎಂದಾಗ ಯಾವುದೋ ವಿದೇಶದ ಕಲ್ಪನೆ ಬಂದಿತ್ತು. ಆದರೆ, ಬೆಂಗಳೂರು, ದೆಹಲಿ ಎಂಬ ಪದಗಳ ಮೊದಲ ಮೂರು ಅಕ್ಷರಗಳ ರೂಪವೇ ಜನರ ಬಾಯಿಯಲ್ಲಿ ಆ ರೂಪ ತಳೆದಿದೆ ಎಂದು ತಿಳಿದಾಗ ಲೇಖಕರ ಸೃಜನಶೀಲತೆ ಕಂಡು ಬಂದಿತು.


ಐಯಾನ್ ಹಾಗೂ ಅಶ್ವಿನಿ ದಂಪತಿಗಳ ಮಗು ಪುಟ್ಟ ಕಾಸ್ಮೋರಾ.  ಮೊದಲಿಗೆ 2050 ರಿಂದ ಆರಂಭವಾಗುವ ಕಥೆಯಲ್ಲಿ ಮನೆಯಲ್ಲಿ ಕೆಲಸಗಾರರ ಬದಲಾಗಿ ರೋಬೋಟ್ ಗಳು ಕಾರ್ಯ ನಿರ್ವಹಿಸುವುದು ಹಾಗೂ ಮನೆಗಳು ಇರುವ ಪ್ರದೇಶಗಳ ಕುರಿತು ಹೇಳುತ್ತಾರೆ. ಮನೆಗಳು ವಲಯಗಳಾಗಿ ವಿಭಜಿತವಾಗಿರುತ್ತವೆ. ಆಯಾ ವಲಯಗಳು ವಿಭಜಿತವಾಗಿರುವುದು ಆಯಾ ವ್ಯಕ್ತಿಗಳ ಆದಾಯಗಳ ಆಧಾರದ ಮೇಲೆ. ಎ, ಬಿ , ಸಿ , ಡಿ ವಲಯಗಳು. ಇಲ್ಲಿನ ಕಾದಂಬರಿಯಲ್ಲಿ ಹೆಚ್ಚಿನ ಚಿತ್ರಣ ಸಿಗುವುದು ವಲಯ ಎ ಕುರಿತು. ಹೆಚ್ಚಿನ ಟೆಕ್ನಾಲಜಿ ಹಾಗೂ ವಿಜ್ಞಾನದ ಆವಿಷ್ಕಾರಗಳು ಬಳಕೆಯಾಗುವುದು ಇಲ್ಲಿಯೇ. ಹಾಗೆಂದು, ಎಲ್ಲಾ ಆವಿಷ್ಕಾರಗಳೂ ಪರಿಪೂರ್ಣವೇನಲ್ಲ. ಇಲ್ಲಿ ಆಗುವ ತೊಂದರೆಗಳು ಆಗಲೂ ಹೊಸದು. ವಿಜ್ಞಾನ ಎಷ್ಟೇ ಮುಂದುವರಿದರೂ ಹೊಸ ಹೊಸ ಸವಾಲುಗಳು ಇದ್ದೇ ಇರುತ್ತವೆ. ಮತ್ತು, ವಿಜ್ಞಾನಿಗಳು ಹಾಗೂ ತಂತ್ರಜ್ಞಾನ ಗೊತ್ತಿರುವವರು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಲೇ ಇರುತ್ತಾರೆ ಎಂಬುದು ಸಾಬೀತಾಗುತ್ತದೆ.


ಇದರೊಟ್ಟಿಗೆ ಬೆಸೆದುಕೊಳ್ಳುವ ಮತ್ತೊಂದು ಕುಟುಂಬ ಶಮಿ ಹಾಗೂ ತೇಜಸ್ ರದ್ದು. ಈ ಕುಟುಂಬಗಳು ಹೀಗೆಯೇ ಇರುತ್ತವಾ ಎಂಬುದಕ್ಕಿಂತ ಮುಂದುವರಿದ ವಿಜ್ಞಾನ ಯುಗದಲ್ಲಿ ಕುಟುಂಬದ ಪರಿಕಲ್ಪನೆ ಹಾಗೆಯೇ ಇರುತ್ತದಾ ಎನ್ನುವುದು ಕೂಡಾ ಮುಖ್ಯವೇ.. ಏಕೆಂದರೆ, ರೋಬೋಟ್ ಗಳು ಸಂಗಾತಿಯಾಗಿ ಇರಬಹುದಾದಂತಹಾ ಕಾಲದಲ್ಲಿ ಮನುಷ್ಯರ ನಡುವಿನ ಬಾಂಧವ್ಯ ಹೇಗಿರಲಿದೆ ? ಅವರ ಮಕ್ಕಳು, ಅವರ ಬೆಳವಣಿಗೆ ಹಾಗೂ ನಡವಳಿಕೆಗಳ ಹೇಗಿರಬಹುದು ? ವಲಯಗಳು ಇದ್ದ ಹಾಗೆ ಹಳ್ಳಿಗಳೂ ಉಳಿದು ಇದ್ದವು. ಅವು ಹಾಗೆಯೇ ಉಳಿದು ಹೋಗಿದ್ದಕ್ಕೆ ಕಾರಣವೇನು ? 


ಇಲ್ಲಿನ ಸಾರಿಗೆ ವ್ಯವಸ್ಥೆಯ ಬದಲಾವಣೆ, ಇಂಧನದ ಬದಲಾಗಿ ಬಳಸುವ ಪರ್ಯಾಯ ವ್ಯವಸ್ಥೆ, ಇಲ್ಲಿ ಬಳಸಲಾಗುವ ವೈದ್ಯಕೀಯ ವ್ಯವಸ್ಥೆಯಲ್ಲಿ ಮೊದಲಿನಂತೆ ಚಿಕಿತ್ಸೆಗೆ ಹೆಚ್ಚಿನ ದಿನಗಳು ಬೇಕಿಲ್ಲ. ಮುಪ್ಪನ್ನು ಮುಂದೂಡಬಹುದು. ಆದರೆ, ಆರೋಗ್ಯವನ್ನು ವೃದ್ಧಿಸುವುದು ಸಾಧ್ಯವೇ ? ಮುಪ್ಪನ್ನು ತಡೆದರೂ ಎಷ್ಟು ಕಾಲ ? ಸಾವನ್ನು ಸಹಾ ತಡೆಯಬಹುದೇ ? ಅದೆಲ್ಲವೂ ಹೇಗೆ ಸಾಧ್ಯ ? ಈಗಾಗಲೇ ಕಸಿ ತಂತ್ರಜ್ಞಾನದಿಂದ ತದ್ರೂಪಿಯನ್ನು ಸೃಷ್ಟಿಸಬಹುದು. ಅದನ್ನು ಅವರು ಹೇಗೆ ಉಪಯೋಗಿಸಿಕೊಂಡರು ?


ಪ್ರತಿಯೊಬ್ಬ ವ್ಯಕ್ತಿಯ ಚರ್ಯೆ, ಡಿ.ಎನ್.ಎ, ವೈಯಕ್ತಿಕ ಮಾಹಿತಿಗಳೆಲ್ಲವೂ ಸಿಗುವಾಗ ಭದ್ರತೆ ಉನ್ನತ ಮಟ್ಟದಲ್ಲಿ ಇದ್ದಾಗ ಅಲ್ಲಿನ ಜನಗಳ ಪ್ರೈವೇಸಿ ಹೇಗಿತ್ತು..?? ನ್ಯಾಯ ವ್ಯವಸ್ಥೆ ಹಾಗೂ ಪೊಲೀಸ್ ಹೇಗಿದ್ದರು ? ಭಯೋತ್ಪಾದನೆ ಇತ್ತೇ ? 


ಸ್ಪೇಸ್ ಸೆಂಟರ್ ಈಗ ಮೊದಲಿನಷ್ಟು ಕ್ಲಿಷ್ಟಕರವಲ್ಲದಿದ್ದರೂ ಅದು ಹೇಗಿತ್ತು ? ಅಲ್ಲಿಗೆ ಯಾರು ಯಾರು ಹೋಗಬಹುದಾಗಿತ್ತು ? ಸ್ಪೇಸ್ ಸೆಂಟರ್ ಮಹತ್ವವೇನು ? 


ಭೂಮಿಗೆ ಅಂತ್ಯವಿದೆಯಾ..?? ಹಾಗಾದರೆ, ಅದು ಯಾವ ರೂಪದಲ್ಲಿ ಆಗಬಹುದು ? ಇಲ್ಲಿ ಕಾದಂಬರಿ 2064 ರಲ್ಲೇ ಕೊನೆಯಾಗಿದ್ದು ಏಕೆ ? ಇವೆಲ್ಲಕ್ಕೂ ಉತ್ತರ ಕಾದಂಬರಿಯಲ್ಲಿದೆ.


ಇಲ್ಲಿ ವಿಜ್ಞಾನ ಮುಂದುವರಿದಂತೆ ಕಾಮ, ಸ್ವೇಚ್ಛೆ, ಸ್ವಾತಂತ್ರ್ಯದ ಪರಿಕಲ್ಪನೆಗಳು ಭಿನ್ನವಾಗಿ ಮೂಡಿಬಂದಿದ್ದರೂ ಅವು ಈಗಿನ ವಾಸ್ತವಕ್ಕಿಂತ ಬೇರೆ ಏನಿಲ್ಲ ಎನ್ನಿಸಿತು. ಇಂದು ಹಾರುವ ವಾಹನಗಳು, ಸೋಲಾರ್ ಕಲ್ಪನೆಗಳು ಕಲ್ಪನೆಗಳಾಗಿ ಮಾತ್ರ ಉಳಿದಿಲ್ಲ. ಇಂದು ನಾವು ಹೆಸರಿಟ್ಟಿರುವ ರೋಬೋಟಿಕ್ಸ್, ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಇಂಟರ್ನೆಟ್ ಆಫ್ ಥಿಂಗ್ಸ್ ಗಳು ಕಾದಂಬರಿಯಲ್ಲಿ ಮೂಡಿ ಬಂದರೂ.. ಈ ಹೆಸರುಗಳಿಂದ ಉಲ್ಲೇಖವಾಗಿಲ್ಲ. ಲೇಖಕರು ಕಾದಂಬರಿ ಬರೆಯುವಾಗ ಈ ಟೆಕ್ನಾಲಜಿಗಳು ಇನ್ನೂ ಅಷ್ಟು ಪರಿಚಿತವಾಗಿರಲಿಲ್ಲ. ಇದನ್ನು ಅವರು ಕಾಲ್ಪನಿಕವಾಗಿ ಕಟ್ಟಿ ಕೊಟ್ಟಿದ್ದರೂ ಸಹಾ ಈಗ ಈ ಕಾದಂಬರಿಯನ್ನು ಓದಿ ನನಗನ್ನಿಸಿದ್ದು ಈ ಕಾದಂಬರಿಯ ಕಲ್ಪನೆಗಳು ನಿಜವಾಗುತ್ತಿವೆ. 2050 ರಿಂದ ಅಲ್ಲ.. ಇನ್ನೂ ಮುಂಚೆಯೇ ಯುನೈಟೆಡ್ ಸ್ಟೇಟ್ಸ್ ಆಫ್ ಇಂಡಿಯಾ ಈ ರೀತಿ ಬದಲಾಗಬಹುದೇನೋ ಎನ್ನಿಸಿತು.


ಒಂದೊಳ್ಳೆ ವೈಜ್ಞಾನಿಕ ಕಾದಂಬರಿ ಈಗಿನ ವಾಸ್ತವಕ್ಕೆ ಕಲ್ಪನೆಯನ್ನು ಮಿಶ್ರ ಮಾಡಿದಂತೆ ಭಾಸವಾಯಿತು. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ