ಪುಸ್ತಕದ ಶೀರ್ಷಿಕೆ : 'ಅಕ್ಕಯ್ ಪದ್ಮಶಾಲಿ' ಆತ್ಮ ಕಥನ
ನಿರೂಪಣೆ : ಡಾ. ಡೊಮಿನಿಕ್ ಡಿ
ಪ್ರಕಾಶಕರು :ಬಹುರೂಪಿ
'ಕರುಣೆಗೆ ಸವಾಲು' ಹಾಕುವ ಅಕ್ಕಯ್
ಅಕ್ಕಯ್ ಎಂಬ ಹೆಸರೇ ವಿಭಿನ್ನವಾಗಿದ್ದು ಕುತೂಹಲ ಮೂಡಿಸುತ್ತದೆ. ನಾನೀಗ ಹೇಳಲು ಹೊರಟಿರುವುದು 'ಅಕ್ಕಯ್ ಪದ್ಮಶಾಲಿ' ಅವರ ಆತ್ಮ ಕಥನದ ಕುರಿತು ಇದರ ನಿರೂಪಣೆ ಮಾಡಿರುವುದು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರಾಗಿರುವ ಡಾ. ಡೊಮಿನಿಕ್ ಡಿ.
ಇದು ಜಗದೀಶ್ 'ಅಕ್ಕಯ್ಯಮ್ಮ' ಆದದ್ದು ಮತ್ತು ಅಕ್ಕಯ್ಯಮ್ಮ 'ಅಕ್ಕಯ್ ಪದ್ಮಶಾಲಿ' ಆದುದರ ವಿಸ್ಕೃತ ಘಟಾನಾವಳಿ.
ಬರಾಕ್ ಒಬಾಮ ಭಾರತಕ್ಕೆ ಭೇಟಿ ನೀಡಿದ್ದಾಗ 'ಒಬಾಮ ಫೌಂಡೇಷನ್' ದೇಶವನ್ನು ಬದಲಿಸುವ ಕನಸುಳ್ಳ ಯುವ ಜನರನ್ನು ಭೇಟಿ ಮಾಡಲು ಬಯಸಿತು. ಹಾಗೆ 'ಕಣ್ಣಲ್ಲಿ ಕನಸುಳ್ಳವರು' ಎಂದು ಆಯ್ಕೆಯಾದದ್ದು 'ಅಕ್ಕಯ್'. ಈಕೆ ಒಬ್ಬಳು ಲೈಂಗಿಕ ಅಲ್ಪಸಂಖ್ಯಾತೆ. ಈಗ ಅದೇ ಸಮುದಾಯದ ಹಕ್ಕುಗಳಿಗಾಗಿ ಹೋರಾಡುತ್ತಿರುವ ಆಕ್ಟಿವಿಸ್ಟ್. ಬರಾಕ್ ಒಬಾಮರಲ್ಲಿ ಪ್ರಶ್ನೆ ಹಾಗೂ ಕೋರಿಕೆಯೊಂದನ್ನು ಇಡುತ್ತಾರೆ. "ನಾನು ಒಬ್ಬ ಲೈಂಗಿಕ ಅಲ್ಪಸಂಖ್ಯಾತೆ. ನಾನು ಬೀದಿಯಲ್ಲಿ ಸೆಕ್ಸ್ ಮಾಡಲೆಂದು ಹುಟ್ಟಿದವಳಲ್ಲ, ಮಕ್ಕಳನ್ನು ಕದಿಯುವ ವ್ಯಕ್ತಿಯಲ್ಲ. ನನ್ನ ಬದುಕನ್ನು ನರಕ ಮಾಡಿದ್ದು ಯಾರು..? ನನ್ನ ಬದುಕುವ ಹಕ್ಕನ್ನು ಕಸಿದದ್ದು ಯಾರು?" ಎಂದು ಪ್ರಶ್ನಿಸುತ್ತಾರೆ. ಅದಾದ ನಂತರ "ಮಿಸ್ಟರ್ ಪ್ರೆಸಿಡೆಂಟ್ ಕ್ಯಾನ್ ಐ ಹಗ್ ಯು" ಎನ್ನುತ್ತಾರೆ. ಒಬಾಮಾ ಒಪ್ಪಿ ಅಪ್ಪುತ್ತಾರೆ.
ಇಂತಹಾ ದಿಟ್ಟ ನಿಲುವಿನ ಧೈರ್ಯಶಾಲಿ ಅಕ್ಕಯ್. ಅವರ ಸಮುದಾಯವನ್ನು ಜಗತ್ತು ತುಂಬು ಹೃದಯದಿಂದ, ನಿಷ್ಕಲ್ಮಶವಾಗಿ ಒಪ್ಪಿ ಅಪ್ಪಿಕೊಳ್ಳಲಿ ಎಂದು ಹಲವು ವರ್ಷಗಳಿಂದ ಹೋರಾಡುತ್ತಿರುವಾಕೆ.
ಇಲ್ಲಿ ಬರೀ ನೋವಿಲ್ಲ. ಅದನ್ನು ಮೆಟ್ಟಿ ನಿಂತ ಛಾಯೆಯಿದೆ. ದಿಟ್ಟತನದಿಂದ ಎಲ್ಲರಿಗೂ ಎದುರು ನಿಂತು ಬಿದ್ದಷ್ಟೇ ವೇಗದಲ್ಲಿ ಎದ್ದು ನಿಂತ ಬದುಕು ಕಣ್ಣ ಮುಂದಿದೆ. ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. ಇವರು ಬಯಸುತ್ತಿರುವುದು ಸಿಂಪಥಿಯನ್ನಲ್ಲ. ಬದಲಾಗಿ, ಎಲ್ಲರಂತೆ ಬದುಕುವ ಹಕ್ಕನ್ನು.
ಈಕೆ ಇವರ ದೇಹದಾನ ಮಾಡಿದ್ದಾರೆ. ಅದರ ಹಿಂದೆ ಇರುವ ಆಲೋಚನೆ ಈ ರೀತಿಯದ್ದು.. "ಒಂದು ಗಂಡಿನ ದೇಹದೊಳಗೆ ಒಂದು ಹೆಣ್ಣು ಮನಸ್ಸು ಬಂದು ಕೂಡುತ್ತಲ್ಲ ಅದು ಹೇಗೆ ಎನ್ನುವ ವಿಸ್ಮಯವನ್ನು ಈ ವಿಜ್ಞಾನವಾದರೂ ಅರಿಯಲಿ. ಯಾರಿಗೆ ಗೊತ್ತು ನಾಳೆ ವಿಜ್ಞಾನ ಇದನ್ನು ವಿವರಿಸುವ ಸ್ಥಿತಿಗೆ ಬಂದಾಗ ನನ್ನ ಸಮುದಾಯದ ನಿಟ್ಟುಸಿರು ಒಂದಿಷ್ಟಾದರೂ ಕಡಿಮೆಯಾಗಬಹುದೇನೋ.. " ಎನ್ನುತ್ತಾರೆ.
ಒಬ್ಬ ಹುಡುಗ ಹುಡುಗಿಯಾಗಿ ವರ್ತಿಸುವುದು, ಹಾಗೆ ಬಡಲಾಗುವುದೆಂದರೆ ಇಂದಿಗೂ ಕುಟುಂಬಗಳಲ್ಲಿ ಅವಮಾನಕರ ಸಂಗತಿಗಳೇ.. ಆ ರೀತಿ ವರ್ತಿಸುವವರನ್ನು ಕಂಡಾಗ ಸುತ್ತಮುತ್ತಲಿನ ಎಷ್ಟೋ ಜನರು 'ಸಂಗ, ಚಕ್ಕ, ಒಂಬತ್ತು' ಈ ರೀತಿಯ ಹೆಸರಿನಿಂದ ಗುರುತಿಸಲು ತೊಡಗುತ್ತಾರೆ. ಶಾಲೆಯಲ್ಲಿಯೂ ಸಹಾ ಈ ರೀತಿಯ ತೊಂದರೆಗಳಾಗುತ್ತವೆ. ಜಗದೀಶ್ ಅನುಭವಿಸಿದ್ದೂ ಇದನ್ನೇ.. ಹುಡುಗಿಯರೊಡನೆ ಆಡಲು, ಅವರಂತೆ ಬಟ್ಟೆ ಹಾಕಲು ನೂರೆಂಟು ಸಮಸ್ಯೆ. ಹುಡುಗರೊಂದಿಗೆ ಮುಕ್ತವಾಗಿ ಬೆರೆಯಲೂ ಆಗದು. ಒಬ್ಬಳು ಅಕ್ಕ, ತಮ್ಮ ಇರುವ ಜಗದೀಶ್ ಹುಡುಗಿಯಾಗಲು ಹವಣಿಸುತ್ತಿದ್ದರೆ ತಂದೆ ಇದಕ್ಕೆ ತಡೆಗೋಡೆಯಾಗಿ ನಿಂತಿದ್ದರು. ಆಟ ಆಡಲು , ಪಾಠ ಕೇಳಲು, ಶೌಚಾಲಯಕ್ಕೆ ಹೋಗಲು ಹೀಗೆ ಎಲ್ಲೆಡೆಯೂ ಸಮಸ್ಯೆಯೇ..
ಜೊತೆಗೆ ಮನೆಯಲ್ಲಿ ಪ್ರತಿಷ್ಠೆಯದ್ದು. ಈ ರೀತಿಯ ಪರಿಸ್ಥಿತಿಯಲ್ಲಿ ದ್ವಿಪಾತ್ರವಾಗಿ ನಟಿಸುವ ಅನಿವಾರ್ಯತೆಯಿತ್ತು ಅವರಿಗೆ. ಇದಕ್ಕಾಗಿ ಎರಡು ಮೂರು ಆತ್ಮಹತ್ಯೆಯ ಪ್ರಯತ್ನವನ್ನೂ ಮಾಡಿದ್ದರು.
ಒಮ್ಮೆ ಹುಡುಗಿಯ ವರ್ತನೆ ಹೆಚ್ಚಾದಾಗ ಅವರ ತಂದೆ ಅವರನ್ನು ಮನೆಯಿಂದ ಹೊರಗಟ್ಟಿದಾಗ ಹತ್ತು ದಿನ ಅಕ್ಷರಶಃ ಬೀದಿಗೆ ಬಿದ್ದು ಲೈಂಗಿಕ ಕಿರುಕುಳ ಅನುಭವಿಸಿದ್ದರು.. ಹೊರಗಿನವರು ಹಾಗೂ ಪೋಲೀಸರಿಂದಲೂ... ನಂತರ ಬೇರೆ ದಾರಿ ಕಾಣದೆ ಕಷ್ಟ ಅನುಭವಿಸಲಾಗದೆ ಮನೆಗೆ ವಾಪಾಸಾದರು. ಕುಟುಂಬದೊಡನೆ ರಾಜಿ ಮಾಡಿಕೊಂಡು ಗಂಡಾಗಿ ಬದುಕಲು ಆರಂಭಿಸಿದರು. ಆದರೆ ಎಷ್ಟು ದಿನ..??
ಹದಿನಾರನೇ ವಯಸ್ಸಿನಲ್ಲಿ ತಾನಿರುವುದೇ ಹೀಗೆ ಎನ್ನುತ್ತಾ ದಿಟ್ಟವಾಗಿ ಹೇಳುತ್ತಾರೆ. ತಮ್ಮನಿಗೆ ನಿಧಾನವಾಗಿ ಅರ್ಥ ಮಾಡಿಸುತ್ತಾರೆ. ಇಂದಿನವರೆಗೂ ಇವರ ಬೆನ್ನೆಲುಬಾಗಿ ನಿಂತಿರುವುದು ಆತನೇ..
ಕೆಲಸದ ಜಾಗದಲ್ಲಿಯೂ ಅನುಭವಿಸಿದ್ದು ಕಿರುಕುಳವನ್ನೇ.. ನಂತರ ಅನಿವಾರ್ಯವಾಗಿ ಲೈಂಗಿಕ ಕೆಲಸಕ್ಕಿಳಿದರು. ನಂತರ ತಮ್ಮ ರೀತಿಯೇ ಇರುವ ಸಮುದಾಯವನ್ನು ಹುಡುಕಿಕೊಂಡು ಹೊರಟರು. 'ಹಿಜ್ಡಾ' ಅಲ್ಲ 'ಹಿಜ್ರಾ' (ಇದೇ ಸರಿಯಾದ ಪದ) ಸಮುದಾಯಕ್ಕೆ ಜರಿನಮ್ಮ ಎನ್ನುವ ಗುರುವಿನ ಕೆಳಗೆ ಶಿಷ್ಯೆಯಾಗುತ್ತಾರೆ.. ತಾಯಿ-ಮಗಳಾಗುತ್ತಾರೆ. ಆಗಲೇ ಜಗದೀಶ್ 'ಅಕ್ಕಯ್ಯಮ್ಮ' ಆಗಿದ್ದು.
ನಂತರ ಕಾಲಾನುಕ್ರಮದಲ್ಲಿ ಲಿಂಗ ಬದಲಾವಣೆಯ ಶಸ್ತ್ರ ಚಿಕಿತ್ಸೆ ಕೂಡಾ ಆಯಿತು. ಆಗ ಜನರಿಗೆ ಕರೆಯಲು ಸುಲಭವಾಗಲಿ ಎಂದು ಅಕ್ಕಯ್ ಎಂದು ಮಾಡಿಕೊಂಡರು. ಅವರ ತಂದೆಯ ಎರಡನೇ ಹೆಸರು, ನೇಕಾರ ಸಮುದಾಯದ ಹೆಸರು ಪದ್ಮಶಾಲಿ ಕೂಡಾ ಸೇರಿಕೊಂಡಿತು.
ಹಿಜ್ರಾ ಸಮುದಾಯದ ರೀತಿ- ನೀತಿಗಳು, ಲಿಂಗ ಬದಲಾವಣೆಯ ಚಿಕಿತ್ಸೆ, ಅದರ ಸಾಧಕ-ಭಾದಕಗಳು, ಮನೆಯವರ ಒಪ್ಪಿಗೆ, ಅತ್ಯಾಚಾರ, ಕೆಲವೊಮ್ಮೆ ಹಿಜ್ರಾ ಸಮುದಾಯದ ರೀತಿ-ನೀತಿಗಳನ್ನು ಧಿಕ್ಕರಿಸಿ ನಿಂತದ್ದು, ದೈಹಿಕ ನೋಟ, ಆಕರ್ಷಣೆಯ ಅಗತ್ಯತೆ, ಹೋರಾಟಗಾರ್ತಿಯಾಗಿ ರೂಪುಗೊಂಡ ಬಗೆ, 'ಸ್ವಸ್ತಿ' ಸಂಶೋಧನಾ ಯೋಜನೆಯಲ್ಲಿ ಕಾರ್ಯಕರ್ತೆ, 'ವಿವಿಧಾ', 'ಸ್ವಭಾವ', 'ಗುಡ್-ಆಸ್-ಯು', 'ನವೋದಯ' ಗುಂಪುಗಳಲ್ಲಿನ ಅನುಭವ, ಅಲ್ಲಿನ ಒಳಜಗಳ, ಆಂತರಿಕ ರಾಜಕೀಯ, ಸೆಕ್ಷನ್ 377, ನ್ಯಾಯಾಲಯದ ತಿರುಗಾಟ, ನ್ಯಾಯದ ಹೋರಾಟ, ಹಕ್ಕುಗಳಿಗಾಗಿ ಗುದ್ದಾಟ, ಪ್ರೀತಿ, ಮದುವೆ, ವೈವಾಹಿಕ ಜೀವನ, ನಡುವಿನ ಸಂಘರ್ಷ, ಮಗು, ಸ್ತ್ರೀವಾದ.. ಹೀಗೆ ಬದುಕಿನ ಹಲವಾರು ಮಜಲುಗಳನ್ನು ಒಂದೊಂದಾಗಿ ಪದರು ಪದರಾಗಿ ಬಿಡಿಸಿಡುತ್ತಾ ಹೋಗುತ್ತಾರೆ. ಇನ್ನೂ ಹೆಚ್ಚಿನ ವಿಚಾರಗಳು ಅಡಕವಾಗಿವೆ. ತುಂಬಾ ನೇರಾನೇರವಾಗಿ ಬರೆದಿದ್ದಾರೆ.. ಅರಗಿಸಿಕೊಳ್ಳುವುದು ಕಷ್ಟವೇ..
ರಾಜಕೀಯ ವಿಚಾರಗಳಿವೆ.. ಕೆಲ ಹಸಿ ಹಸಿ ಕ್ರೌರ್ಯ, ಲೈಂಗಿಕ ದೌರ್ಜನ್ಯವನ್ನು ಬಿಡಿಸಿಟ್ಟಿದ್ದಾರೆ. ಇದನ್ನು ಓದಿ ಅರಗಿಸಿಕೊಳ್ಳಲು ಸಮಯ ಹಿಡಿಯಿತು ಎಂದರೂ ಸುಳ್ಳಾಗಲಾರದು. ಅಕ್ಕಯ್ ನಂತಹಾ ಎಷ್ಟೋ ಜನರನ್ನು ಕಾಣುತ್ತೇವೆ. ಅವರನ್ನು ಗೌರವಿಸೋಣ.
ಅಕ್ಕಯ್ ರವರ ಹೋರಾಟಕ್ಕೆ ಇನ್ನಷ್ಟು ಶಕ್ತಿ, ಬೆಂಬಲ ಸಿಗಲಿ.
ಡಾ.ಡೊಮಿನಿಕ್ ಹೇಳಿರುವಂತೆ ಈ ಪುಸ್ತಕಕ್ಕೆ ಆಕರ ಇದ್ದದ್ದು ಮೂರು ಬಗೆಯಲ್ಲಿ.. ಸಹಾಯಕ ಪ್ರಾಧ್ಯಾಪಕಿಯಾದ ಡಾ. ಗೌರಿ ವಿಜಯಕುಮಾರ್ ಅವರ 'ಅಕ್ಕಯ್' ಆತ್ಮಕಥನದ ಇಂಗ್ಲೀಷ್ ಕರಡು ಪ್ರತಿ. ಇಂಗ್ಲಿಷ್ ಸಂದರ್ಶನಗಳು ಹಾಗೂ ನೇರವಾಗಿ ಹಂಚಿಕೊಂಡ ಅನುಭವಗಳು ಹಾಗೂ ವಿಚಾರಗಳು.
ಇದನ್ನು ಯಾಕೆ ಹೇಳುತ್ತಿದ್ದೇನೆ ಎಂದರೆ ಸಲೀಸಾದ ಕನ್ನಡದ ನೇಟಿವಿಟಿಯಲ್ಲಿ ನಿರೂಪಣೆ ಇಲ್ಲ. ಅಲ್ಲಲ್ಲಿ ಓದಿನ ಓಘಕ್ಕೆ ಅಡ್ಡಿಯಾಗಬಹುದು. ಆದರೆ, ಇದ್ದುದರಲ್ಲಿ ಅರ್ಥಮಾಡಿಸಲು ಸಫಲವಾಗುತ್ತದೆ. ಕನ್ನಡದ ಲೇಖಕರು ಬರೆದ ಆತ್ಮ ಕಥನದಂತಿಲ್ಲ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ಓದಲು ತೊಡಗಿದರೆ ನಿರಾಶೆಯಾಗದು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ