ಸೋಮವಾರ, ಏಪ್ರಿಲ್ 6, 2026

ಪಾ.ವೆಂ ಆಚಾರ್ಯ - ಆಯ್ದ ನಗೆ ಬರಹಗಳು (ಪುಸ್ತಕ ಯಾನ - 26)


ಪುಸ್ತಕದ ಹೆಸರು : ಪಾ.ವೆಂ ಆಚಾರ್ಯ - ಆಯ್ದ ನಗೆ ಬರಹಗಳು

ಲೇಖಕರು : ಲಾಂಗುಲಾಚಾರ್ಯ ( ಪಾ. ವೆಂ. ಆಚಾರ್ಯ )

ಸಂಪಾದಕರು : ಡಾ. ಶ್ರೀನಿವಾಸ ಹಾವನೂರ, ಪ್ರೊ. ಅ. ರಾ. ಮಿತ್ರ

ಪ್ರಕಾಶಕರು : ಪ್ರಿಸಮ್ ಬುಕ್ಸ್ ಪ್ರೈವೇಟ್ ಲಿಮಿಟೆಡ್

ಮೊದಲ ಮುದ್ರಣ : 2000

ಎರಡನೇ ಮುದ್ರಣ : 2003

ಪುಟಗಳು : 120

ಬೆಲೆ : 60 ರೂ.

ಪಾ. ವೆಂ. ಆಚಾರ್ಯರು 1915 ಫೆಬ್ರವರಿ 6 ರಂದು ಉಡುಪಿಯಲ್ಲಿ ಜನಿಸಿದರು. ಇವರು ಆಗಿನ ಕಾಲದ ಪ್ರಸಿದ್ಧ ಪತ್ರಿಕೆ "ಅಂತರಂಗ"ದಲ್ಲಿ, "ಕರ್ಮವೀರ" , "ಸಂಯುಕ್ತ ಕರ್ನಾಟಕ" ಹಾಗೂ "ಕಸ್ತೂರಿ" ಡೈಜೆಸ್ಟ್ ನಲ್ಲಿ ಹೀಗೆ ಮುದ್ರಣ ಮೇಲ್ವಿಚಾರಣೆ ನಡೆಸಲು ಕೆಲಸಕ್ಕೆ ಸೇರಿ ನಂತರ ಸಹ ಸಂಪಾದಕರು ಹಾಗೂ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕಸ್ತೂರಿಯಲ್ಲಿ 18 ವರ್ಷ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 


ಚಿಕ್ಕ ವಯಸ್ಸಿನಲ್ಲಿಯೇ ಔಷಧಿ ಬಾಟಲಿಯ ಜಾಹೀರಾತಿನ ಮೂಲಕ ಬಂಗಾಲೀ ಕಲಿತರು. ಇದಕ್ಕೆ ಮೂಲ ಕಾರಣ ರವೀಂದ್ರನಾಥ ಟಾಗೂರ್ ರವರ 'ಗೀತಾಂಜಲಿ' ಕೃತಿಯನ್ನು ಅನುವಾದಿಸಬೇಕೆಂಬುದು. ನಂತರ ಇವರು ಲಾಂಗುಲಾಚಾರ್ಯರಾಗಿ 'ಹರಟೆ'ಗಳನ್ನು , ಸಹಾಯಕ ಸಂಪಾದಕರಾಗಿ ಪುಸ್ತಕ ವಿಮರ್ಶೆ, ರಾಜಕೀಯ ಟೀಕೆ - ಟಿಪ್ಪಣಿಗಳನ್ನು ಬರೆದಿದ್ದಾರೆ. 


ಈ ಪುಸ್ತಕದಲ್ಲಿ ಅದೆಲ್ಲದರ ಸಮ್ಮಿಶ್ರಣವಿದೆ. ನಗೆ ಬರಹಗಳೆಂದರೆ ಸಾಮಾನ್ಯವಾಗಿ ಆ ಕ್ಷಣಕ್ಕೆ ನಗು ಹಗುರಾಗುತ್ತೇವೆ ಎಂಬ ಮಾತ್ರದ ಅಭಿಪ್ರಾಯ ಈ ಪುಸ್ತಕದಿಂದ ದೂರವಾಯಿತು. ಹಾಸ್ಯ ತೀರಾ ಹೆಚ್ಚಾಗಿ ಅವಹೇಳನಕಾರಿಯಾದರೂ ಕಷ್ಟವೇ.. ಆದರೆ, ಇಲ್ಲಿನ ಹರಟೆ ಹಾಗೂ ನಗೆ ಬರಹಗಳು ಶೀರ್ಷಿಕೆಗಳಿಂದಲೇ ಒಂದು ರೀತಿಯ ಕುತೂಹಲ ಮೂಡಿಸಿದ್ದು ಹೊಸ ಪದಗಳ ಪರಿಚಯದೊಂದಿಗೆ ಸಾಹಿತ್ಯಾತ್ಮಕವಾಗಿ ಹೇಗೆ ಮುಗುಳ್ನಗು, ಮೆಲು ನಗು ಮೂಡಿಸುತ್ತದೆಯೋ ಹಾಗೆಯೇ ಆಯಾ ಬರಹಗಳಿಂದ ಚಿಂತನೆಗೂ ಹಚ್ಚುತ್ತದೆ. 


ಇಲ್ಲಿನ ಹರಟೆ ಅಥವಾ ನಗೆ ಬರಹಗಳಲ್ಲಿ ಕೆಲವು ಆಯಾ ಸಂಧರ್ಭಗಳಿಂದ, ಪರಿಸ್ಥಿತಿಗಳಿಂದ ಹುಟ್ಟಿದ್ದವುಗಳಾದರೆ ಮತ್ತೆ ಕೆಲವು ತಮ್ಮ ಇಡೀ ಜೀವನವನ್ನು ಒಮ್ಮೆ ಅವಲೋಕಿಸಿ ಅಲ್ಲಿಂದ ಹೆಕ್ಕಿ ಬರೆದಂತೆ ಅನ್ನಿಸುತ್ತವೆ. ರಾಜಕೀಯ ವಿಡಂಬನೆ, ಬಸ್ಸು, ಗಡ್ಡ, ಅಮ್ಮಾವ್ರ ಗಂಡ, ಮದುವೆ, ಸಂಸಾರ ಹೀಗೆ ವಿಸ್ತಾರ ವಿಚಾರಗಳಿಂದ ಹಿಡಿದು ಸೊಳ್ಳೆ, ಮಂಗಗಳ ಕುರಿತೂ ಇವೆ. ಪುರಾಣದ ಕೆಲ ಕತೆಗಳೂ ಹೀಗಾಗಿರಬಹುದೇ ಎಂದನ್ನಿಸುವುದುಂಟು.


ಒಂದೇ ವಿಚಾರದ ಮೇಲೆ ವಿಭಿನ್ನವಾಗಿ ಬರೆಯುತ್ತಾ ಪದ ಪ್ರಯೋಗಗಳನ್ನೂ ಪುನರಾವರ್ತಿಸದಂತೆ ಬರೆಯುವ ಕಲೆಯನ್ನು ಇಲ್ಲಿ ಕಾಣಬಹುದು. ಮಂಗಾಯಣಂ, ವಾನರಾಯಣ ಎಂಬ ಎರಡೂ ಬರಹಗಳನ್ನು ಆ ನಿಟ್ಟಿನಲ್ಲಿ ಕಾಣಬಹುದಾಗಿದೆ. ರಾಮಾಯಣದ ನಂತರ ಆ ವಾನರರು ಏನಾಗಿರಬಹುದು ಎನ್ನುತ್ತಲೇ ನಡೆಯುವ ಶಿವ - ಪಾರ್ವತಿಯ ನಡುವಿನ ರಹಸ್ಯ ಹರಟೆ ಲೇಖಕರಿಗೆ ತಿಳಿದದ್ದು ಸಹಾ ವಿಭಿನ್ನವೇ..


ಅಮ್ಮಾವ್ರ ಗಂಡಾಯಣ, ಹೆಂಗಸರನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು, ಮದುವೆಯಾದರೂ ಸುಖ ಪಡುವುದು ಹೇಗೆ ಎನ್ನುವ ಬರಹಗಳು ಮದುವೆ ಹಾಗೂ ಸಂಸಾರದ ಕುರಿತು ಬರೆದವು.


ಮಶಕ ಪುರಾಣ ಎಂದರೆ ಏನಿರಬಹುದು ಎಂದೇ ಓದಲು ಶುರುವಿಟ್ಟ ಬರಹ ಸೊಳ್ಳೆಗಳ ಕುರಿತ ಲೋಕವನ್ನೇ ಪರಿಚಯಿಸಿತು. ಸೊಳ್ಳೆಗಳ ಸಂಗೀತ ಹಾಗೂ ಕಚ್ಚುವಿಕೆಯ ಹಿತ ಅನುಭವ ಮೂಡಿಸಿದಂತಿತ್ತು. ಗುಂಯ್ ಗುಡುವ ಸೊಳ್ಳೆಗಳನ್ನು ಓಡಿಸುವ ಹಲವು ಮುಂಬರುವ ವಿಧಾನಗಳು, ಸಂಶೋಧನೆಗಳು,  ಹೆಣ್ಣು ಮತ್ತು ಗಂಡು ಸೊಳ್ಳೆ,  ಮಶಕವಾರಣ ಎನ್ನುವ ಸಂಸ್ಕೃತದ ಪದ ಸೊಳ್ಳೆ ಪರದೆ ಕೂಡಾ ಸೊಳ್ಳೆಯ ಸಂಗೀತದಿಂದ ಮುಕ್ತಿ ಕೊಡದ್ದು ಹೀಗೆ ಎಲ್ಲವೂ ಇದರಲ್ಲಿದೆ. 


ಯಾರಿಗಾಗಿ ಬದುಕುತ್ತೇವೆ, ಸವಿಗನಸುಗಳು ಎರಡೂ ಬದುಕಿನ ಕುರಿತು ತೆಳು ಹಾಸ್ಯದೊಂದಿಗೆ ಬದುಕನ್ನೂ ಒರೆ ಹಚ್ಚಿ ನೋಡುವಂತಿದೆ.


ಬೀದಿ ಕಾಮಣ್ಣರು ಹಾಗೂ ಇಮ್ಮಡಿ ತೊಗಲಖ ಇವೆರಡೂ ಸಮಾಜದಲ್ಲಿ ಇರುವ ಇಂತಹಾ ಜನರ ಒಂದು ಮುಖ ಪರಿಚಯ ಮಾಡಿಸಿದರೆ ಮತ್ತೊಮ್ಮೆ ಇಂತಹವರನ್ನು ಹೇಗೆ ನಿಭಾಯಿಸಬಹುದು ಎಂದೂ ಹೇಳಿದಂತಿದೆ. ಗಂಭೀರ ಸಂಧರ್ಭದಲ್ಲಿ ಕೂಡಾ ಹಾಸ್ಯ ಹುಟ್ಟುವ ಪರಿ ಇದೆ. 


ಯದ್ವಾತದ್ವಾ ಯೆಂಕಣ್ಣಯ್ಯನವರು ನಮ್ಮ ಸುತ್ತಲೂ ಇದ್ದಿರಬಹುದಾದಂತಹಾ ಇಂತಹಾ ಯೆಂಕಣ್ಣನ್ನನ್ನು ಹಾಗೂ ಆತನ ಜಿಪುಣಾಗ್ರೇಸರ ಹಿಂದಿನ ತಲೆಮಾರಿನವರನ್ನು ನೆನಪಿಸಿತು. ಹಾಸ್ಯದ ಜೊತೆಗೆ ಒಳ್ಳೆಯ ಮನಸ್ಸಿನ ವ್ಯಕ್ತಿಯೊಂಬ್ಬನ ಸಾಧುತನ, ಬೋಳೆತನಗಳನ್ನೂ ಪರಿಚಯಿಸಿತು.


ಕಪ್ಪು ಕಪ್ಪೆಂದೇಕೆ ಬೀಳುಗಳೆಯುವಿರಿ ಓದುವಾಗ ಹೊಸತೇನಿದ್ದೀತು ಎಂದೇ ಓದಲು ಶುರುವಿಟ್ಟೆ. ಆದರೆ, ಹಣ ವಿಚಾರದಲ್ಲಿ ಎಂದರೆ ಕಪ್ಪು ಹಣದ ಕುರಿತು ಓದಿದಾಗ ಎಂತಹಾ ಅದ್ಭುತ ಪ್ರಶ್ನೆಯಿದೆ ಎನ್ನಿಸಿತು.


ಭಾವೀ ಜಗತ್ತಿನಲ್ಲಿ ಮಹಿಳೆಯರ ಸ್ಥಾನ ಲಾಂಗುಲಾಚಾರ್ಯರ ಹರಟೆ ಹಾಗೂ ಹಾಸ್ಯ ಮೀಮಾಂಸೆ ಕೂಡಾ ಇಂತಹಾ ಲಘು ನಗೆ ಬರಹ.


ಶ್ರೀ ಗಣೇಶಾಯ ನಮಃ, ಮಹಾಭಾರತ ಮತ್ತು ಸೀರೆ ಪುರಾಣ ಕತೆ ಗೊತ್ತಿದ್ದವರನ್ನೂ ಮತ್ತೊಂದು ಮಜಲಿಗೆ ಕರೆದೊಯ್ದು ಅಲ್ಲಿನ ದರ್ಶನ ಮಾಡಿಸುವ ಬರಹಗಳು.


ಸಾಯಲಿಕ್ಕೆ ಪುರುಸೊತ್ತೊತ್ತಾಗಲಿಲ್ಲ ಹಾಗೂ ಮಶಕ ಪುರಾಣ ಬಹಳ ಇಷ್ಟವಾದವು. ಅದರಲ್ಲೂ ಸಾಯಲಿಕ್ಕೆ ಪುರುಸೊತ್ತು ಯಾಕಾಗಲಿಲ್ಲ ಎನ್ನುತ್ತಾ ಇಂಗ್ಲಿಷ್ ಕವಿಗಳನ್ನೂ ಪರಿಚಯಿಸುವ ಪರಿ ಅನನ್ಯ.


ಸಾಮಾನ್ಯವಾಗಿ ನಾನು ಹಾಸ್ಯಕ್ಕಿಂತ ಗಂಭೀರ ಸಾಹಿತ್ಯದ ಓದಿಗೆ ಹೊರಳುವವಳು. ಇಲ್ಲಿ ಅವೆರಡರ ಮಿಶ್ರಣ ಕಂಡಿತು. ಯಾರಿಗೂ ಅಪಹಾಸ್ಯ ಮಾಡದಂತೆ, ಲಘುವಾಗಿ ನಗಿಸುವ ಈ ಪುಸ್ತಕದ ಓದು ಇಷ್ಟವಾಯಿತು.


ಡಿಜಿಟಲ್ ಲೈಬ್ರರಿಯಲ್ಲಿ ಈ ಪುಸ್ತಕ ಓದಲು ಉಚಿತವಾಗಿ ಲಭ್ಯವಿದೆ. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ