ಪುಸ್ತಕದ ಶೀರ್ಷಿಕೆ : ಕೆಂದಾವರೆಯ ಮಾಲೆ
ಕನ್ನಡಕ್ಕೆ : ಯತಿರಾಜ ವೀರಾಂಬುಧಿ
ತೆಲುಗಿನ ಲೇಖಕರು : ಡಾ. ಯಂಡಮೂರಿ ವೀರೇಂದ್ರನಾಥ್
ಪ್ರಕಾಶಕರು : ಸಾಹಿತ್ಯ ಪ್ರಕಾಶನ
ಪುಟಗಳು : 136
ಬೆಲೆ : 170 ರೂ.
ಮೊದಲ ಮುದ್ರಣ : 2022
ಈ ಕಾದಂಬರಿ ಈಗ ಕನ್ನಡದಲ್ಲಿ ಓದಲು ಸಿಕ್ಕರೂ ಇದು ಯಂಡಮೂರಿಯವರು 35 ವರ್ಷ ಹಿಂದೆಯೇ ಬರೆದ ಕಾದಂಬರಿ. ಕಥಾ ವಸ್ತು ಹಳೆಯದು ಎಂದೆನಿಸಿದರೂ ಈ ಕಾಲಕ್ಕೂ ಸಲ್ಲುವಂತಹದ್ದು. ಇದರ ಕನ್ನಡ ಅನುವಾದವನ್ನು ಬಹಳ ಸುಂದರವಾಗಿ ಹಾಗೂ ಶಕ್ತಿಯುತವಾಗಿ ಅನುವಾದ ಮಾಡಿದ್ದಾರೆ ಯತಿರಾಜ್ ಸರ್.
ಕೆಲವು ವ್ಯಕ್ತಿಗಳು ಮೇಲೆ ಮೆದುವಾಗಿ ಕಂಡರೂ ಆತ್ಮಶಕ್ತಿ ಬಹಳ ಬಲಿಷ್ಠವಾಗಿರುತ್ತದೆ. ಮೃದುವಾಗಿ ಕಂಡವರೆಲ್ಲರೂ ದಡ್ಡರಲ್ಲ.. ಅಕಸ್ಮಾತ್ ಅವರನ್ನು ದಡ್ಡರು ಎಂದು ಭಾವಿಸಿಕೊಂಡರೂ ಅದು ಹಾಗೆ ಭಾವಿಸಿಕೊಂಡವರ ದಡ್ಡತನವಾದೀತು ಅಷ್ಟೇ.. ಕೆಲವೊಮ್ಮೆ ಅವರು ಮಾಗಬೇಕಿರುತ್ತದೆ. ಪರಿಪಕ್ವವಾಗಬೇಕಿರುತ್ತದೆ. ಎಷ್ಟೇ ಬುದ್ಧಿವಂತರಿದ್ದರೂ ಕೆಲವೊಮ್ಮೆ ಕಾಲದ ಎದುರಿಗೆ ಅವರ ಬುದ್ಧಿವಂತಿಕೆ ತಲೆಬಾಗಬೇಕಿರುತ್ತದೆ. ಅಂತಹದ್ದರಲ್ಲಿ ಇನ್ನೂ ಯುವಕನಾಗಿದ್ದ ಕೃಷ್ಣ ಮೋಸದ ಜಾಲಕ್ಕೆ ಸಿಲುಕಿ ಹಾಕಿಕೊಂಡಿದ್ದರಲ್ಲಿ ಅತಿಶಯೋಕ್ತಿ ಕಾಣದಿದ್ದರೂ ಹತ್ತಿರದವರು, ತನ್ನವರು ಎಂದು ನಂಬಿದ್ದವರಿಂದಲೇ ಆತ ಮೋಸ ಹೋಗಿ ಬಿಟ್ಟ.
ಇದಕ್ಕೆ ಕಾರಣ ಪ್ರೀತಿ ಎಂದು ಹೇಳಬಹುದಾದರೂ.. ಮೇಲ್ನೋಟಕ್ಕೆ ಆದಷ್ಟೇ ಕಂಡರೂ ಅದಕ್ಕೆ ವಿಧಿಯ ಕಾರಣಗಳೂ ಇಲ್ಲದಿಲ್ಲ. ಏಕೆಂದರೆ, ಆತ ಬೆಳೆದದ್ದು ತನ್ನ ಸಾಕು ತಾಯಿಯ ಬಳಿ. ಆಕೆ ಹಳ್ಳಿಯೊಂದರ ಮುಗ್ಧ ಹೆಂಗಸು. ಒಬ್ಬಂಟಿಯಾಗಿಯೇ ತನ್ನ ಮಗನನ್ನು ಸಾಕಿದವಳು. ಒಮ್ಮೆ ರಾಜ ಪರಿವಾರವೊಂದು ಆ ಹಳ್ಳಿಯ ಸಮೀಪ ಡಕಾಯಿತರ ದಾಳಿಗೆ ಸಿಕ್ಕಾಗ ಅಲ್ಲಿ ಸಿಕ್ಕ ಮಗುವೇ ಈತ. ಆತನನ್ನು ಸಾಕಿ ದೊಡ್ಡವನನ್ನಾಗಿ ಮಾಡಿದ್ದರೂ ಆಕೆ ಎಂದೂ ಆ ಸತ್ಯವನ್ನು ಮರೆ ಮಾಚಿರಲಿಲ್ಲ. ಹಾಗೆಂದು, ಆತ ರಾಜ ಪರಿವಾರಕ್ಕೆ ಸೇರಿದವನೆಂಬ ಸತ್ಯ ಆಕೆಗೆ ತಿಳಿದಿರಲೂ ಇಲ್ಲ. ಕಾಡಿನಲ್ಲಿ ಸಿಕ್ಕ ಮಗು ಆತ ಎಂಬುದಷ್ಟೇ ಆಕೆಯ, ಆತನ ಅರಿವಿನಲ್ಲಿದ್ದ ವಿಷಯ.
ಈ ಎಲ್ಲದರ ಅರಿವಿದ್ದೂ ಆತನನ್ನು ಬಹಳವಾಗಿ ಪ್ರೀತಿಸಿದವಳು "ಪಾರ್ವತಿ". ಪಾರ್ವತಿ ಆತನನ್ನು ಪ್ರೀತಿಸಿದಷ್ಟೇ ಆತನ ತಾಯಿಯನ್ನೂ ಚೆನ್ನಾಗಿ ನೋಡಿಕೊಳ್ಳುತ್ತಿದ್ದಳು. ಕೃಷ್ಣನ ಮನೆಯಿಂದ ಈ ಮದುವೆಗೆ ಏನೂ ತಕರಾರಿರಲಿಲ್ಲ. ಇದರ ನಡುವೆ ಪಾರ್ವತಿಯ ಸೌಂದರ್ಯ ಕೂಡಾ ಆತನ ಪಾಲಿಗೆ ಆತನಿಗೆ ಅರಿವಿರದೇ ಉಂಟಾದ ಸಮಸ್ಯೆ.
ಈ ಸಮಸ್ಯೆಯ ಮೂಲ ಯಾರು ? ಸಮಸ್ಯೆ ಉಂಟಾದದ್ದು ಯಾರಿಂದ ? ಆತನಿಗೆ ಮೋಸ ಮಾಡಿದ್ದು ಯಾರು ? ಅದು ಪಾರ್ವತಿಯ ಅರಿವಿರದೇ ಆಗಿದ್ದಾ ಅಥವಾ ಅವಳೂ ಇದರಲ್ಲಿ ಭಾಗಿಯಾಗಿದ್ದಳಾ..?? ಈ ಸಮಸ್ಯೆಯಿಂದ ಕೃಷ್ಣನ ಬದುಕಲ್ಲಿ ಮಾತ್ರವಲ್ಲ ಆತನ ತಾಯಿ ಹಾಗೂ ಪಾರ್ವತಿಯ ಬದುಕಲ್ಲಿಯೂ ಬಹಳ ಬದಲಾವಣೆಗಳು ಉಂಟಾದವು. ಕೃಷ್ಣನೇನೋ ಜೈಲಿಗೆ ಹೋದ. ಸಾಕ್ಷಿಗಳು ಪ್ರತಿಕೂಲವಾಗಿದ್ದುದರಿಂದ ಆತನಿಗೆ 12 ವರ್ಷಗಳ ಜೈಲು ಶಿಕ್ಷೆಯೂ ಆಯಿತು. ಉಳಿದವರ ಗತಿ ಏನಾಯಿತು..??
ಜೈಲಿಗೆ ಹೋದ ಕೃಷ್ಣನ ಬಾಳಿನಲ್ಲಿ ಬಂದದ್ದು ಠಾಕೂರ್. ತಾತ - ಮೊಮ್ಮಗನ ಸಂಬಂಧದ ಹಾಗೆ ಕಂಡರೂ ಗುರುವಿನ ಕೈ ಕೆಳಗೆ ಉತ್ತಮವಾಗಿ ಪಳಗಿದ ಶಿಷ್ಯನಾದ ಆತ. ಜೈಲು ಕೂಡಾ ಗುರುಕುಲದಂತಿತ್ತು. ಕಠಿಣ ಶ್ರಮ, ಶಿಕ್ಷೆಯ ಮೂಲಕ ಕೃಷ್ಣನನ್ನು ತಿದ್ದಿ ತೀಡಿ ಒಂದು ರೂಪು ಕೊಟ್ಟಿದ್ದೇ ಠಾಕೂರ್.
ಕೃಷ್ಣ 12 ವರ್ಷದ ಶಿಕ್ಷೆ ಮುಗಿಸಿಕೊಂಡು ಜೈಲಿನಿಂದ ಹೊರ ಬಂದ ನಂತರ ಏನಾಯಿತು ? ಕೃಷ್ಣ ಠಾಕೂರ್ ನ ಪಾಠದಿಂದ ಕಲಿತದ್ದೇನು ? ಆತನ ಬದುಕು ದ್ವೇಷವನ್ನೇ ಮುಂದುವರಿಸಿತೇ ಅಥವಾ ಎಲ್ಲವನ್ನೂ ಮರೆತು, ಕ್ಷಮಿಸಿ ಹೊಸ ಬದುಕನ್ನು ಪ್ರಾರಂಭ ಮಾಡಿದನೇ ? ಠಾಕೂರ್ ಏನಾದ ? ಪಾರ್ವತಿ ಎಲ್ಲಿದ್ದಳು ? ಆತನ ತಾಯಿ ಏನಾದಳು ? ಆತನ ಜನ್ಮ ರಹಸ್ಯ ಬಯಲಾದದ್ದು ಹೇಗೆ ? ಆತನನ್ನು ಜೈಲಿಗೆ ಕಳುಹಿಸಿದರು ಏನಾದರು ?
ಈ ಎಲ್ಲಾ ರಹಸ್ಯಗಳನ್ನೂ ಬಿಡಿಸಲು ಓದಿ "ಕೆಂದಾವರೆ ಮಾಲೆ". ಅಂದ ಹಾಗೆ, ಈ ಪುಸ್ತಕದ ಶೀರ್ಷಿಕೆ "ಕೆಂದಾವರೆ ಮಾಲೆ" ಎಂದೇ ಏಕಿದೆ ಎಂಬುದನ್ನು ನೀವು ಪುಸ್ತಕ ಓದಿಯೇ ಅರಿಯಬೇಕು.
ನನಗನ್ನಿಸಿದ ಮತ್ತೊಂದು ವಿಚಾರವನ್ನು ನಿಮ್ಮ ಮುಂದೆ ಹಂಚಿಕೊಳ್ಳುತ್ತೇನೆ. ಠಾಕೂರ್ ಕೃಷ್ಣನಿಗೆ ಶಿಕ್ಷಣ ನೀಡುವಾಗ ಆತನಿಗೆ.. ಠಾಕೂರ್ ಎಲ್ಲೋ ಒಂದು ಕಡೆ ಬಯಾಸ್ಡ್ ಎನ್ನಿಸುತ್ತಾರೆ. ಅಲ್ಲದೆ, ಆತನ ಮೇಲೆ ತನ್ನ ನಿರ್ಧಾರಗಳನ್ನು ಹೇರಲು ಪ್ರಯತ್ನಿಸುತ್ತಿದ್ದಾರೆ ಎನ್ನಿಸುತ್ತದೆ. ಆದರೆ, ಕೊನೆಗೆ ಆತ ಠಾಕೂರ್ ಮಾರ್ಗವನ್ನೇ ಅನುಸರಿಸಲು ಬಯಸುತ್ತಾನೆ. ಅಂತಹಾ ಬದಲಾವಣೆಯ ಕಾರಣವನ್ನೂ ತಿಳಿಯಲು ನೀವೇ ಈ ಪುಸ್ತಕ ಓದಿ ನೋಡಿ. ಹೆಚ್ಚಿನ ಆಡಂಬರವಿಲ್ಲದೆ ಸಾಗುವ ಈ ಪುಸ್ತಕ ರೋಚಕತೆಗೇನೂ ಕೊರತೆ ಮಾಡುವುದಿಲ್ಲ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ