ಸೋಮವಾರ, ಏಪ್ರಿಲ್ 6, 2026

ಪರಿಧಿ (ಪುಸ್ತಕ ಯಾನ - 23)


ಪುಸ್ತಕದ ಹೆಸರು : ಪರಿಧಿ

ಲೇಖಕಿ : ಸುಧಾ ಮೂರ್ತಿ

 ಪ್ರಕಾಶಕರು : ಸ್ವಪ್ನ

ಪುಟಗಳು :-320

ಬೆಲೆ : 190 ರೂ


'ಪರಿಧಿ' ಸುಧಾಮೂರ್ತಿಯವರ ಕಾದಂಬರಿ. ಈ 'ಪರಿಧಿ'ಯನ್ನು ಸುಧಾ ಮೂರ್ತಿಯವರು ಅರ್ಪಿಸಿರುವುದು 

ಮನದಲ್ಲಿ ಬೆಂದುಹೋದರೂ ಸಮಾಜದ ಬಂಧನದಲ್ಲಿ ಸಿಕ್ಕು ತಮ್ಮ ದುಃಖವನ್ನು ಯಾರೊಡನೆಯೂ ಹಂಚಿಕೊಳ್ಳಲಾರದೇ ಮನೋರೋಗಿಯಾಗಿಯಾಗಿ ಕಷ್ಟಪಟ್ಟು, ಪಡುತ್ತಿರುವ ನೂರಾರು 'ಮೃದುಲೆ'ಯಂಥ ಮಹಿಳೆಯರಿಗೆ ಆತ್ಮೀಯ ಅರ್ಪಣೆ.


ಹೌದು, ಮೃದುಲೆ 'ಪರಿಧಿ'ಯ ಪ್ರಮುಖ ಪಾತ್ರ. ಮೃದುಲೆ ಎಂದರೆ ಆತ್ಮವಿಶ್ವಾಸದ ಪ್ರತೀಕ. ಅವಳು ಹೇಗಿದ್ದಳೆಂದರೆ..


ಜೋಕಾಲಿಯಿಂದಲೇ ಮೃದುಲಾ ತನ್ನ ಮನೆಯನ್ನು ನೋಡುತ್ತಿದ್ದಳು. ಅವಳಿಗೆ ಅತೀವ ಜೀವನದ ಉತ್ಸಾಹ. ಅವಳಿಗೆ ಪ್ರತಿಯೊಂದರಲ್ಲಿಯೂ ಅಪರಿಮಿತವಾದ ಆಸಕ್ತಿ. ಅದು ಓದೇ ಇರಲಿ, ಅಡುಗೆಯೇ ಇರಲಿ, ಹೊಲಿಗೆಯೇ ಇರಲಿ. ಜೀವನವನ್ನು ಪ್ರತಿ ನಿಮಿಷವೂ ಅವಳು ನೋಡುವ ರೀತಿಯೇ ಬೇರೆ. ಬೆಳಗಿನ ಸೂರ್ಯ ಕೇವಲ ತನಗಾಗಿಯೇ ಹುಟ್ಟುತ್ತಾನೆ ಎನ್ನುವ ಭರವಸೆ! ಕಾಮನಬಿಲ್ಲು ಅವಳಿಗಾಗಿಯೇ ಮೂಡಿದೆ ಎನ್ನುವ ತವಕ! ಜೀವನದಲ್ಲಿ ಯಾವ ಮಾಸವೂ ಅವಳಿಗೆ ಮುಗಿಯದ ಆನಂದ. ಯಾವ ಅಳತೆಗೋಲಿನಿಂದಲೂ ಅವಳ ಉತ್ಸಾಹ ಅಳೆಯಲು ಸಾಧ್ಯವಿಲ್ಲ.


ಮೃದುಲಾ ಹುಟ್ಟಿದ್ದು ಬೆಳೆದದ್ದು ಎಲ್ಲವೂ ಹುಬ್ಬಳ್ಳಿಯಿಂದ ಶಿಗ್ಗಾವಿಗೆ ಹೋಗುವ ಮಾರ್ಗದಲ್ಲಿ ಸಿಗುವ ಆಲದಹಳ್ಳಿಯಲ್ಲಿ. ಆಕೆ ಎಷ್ಟು ಉತ್ಸಾಹಿಯೋ ಅಷ್ಟೇ ವಾಚಾಳಿ. ವಾಚಾಳಿ ಎಂದರೆ ಸುಮ್ಮನೆ ವಟವಟ ಎಂದು ಹರಟುತ್ತಿರುವವಳು ಸಹಾ ಅಲ್ಲ. ಮುಕ್ತ ಮನಸ್ಸಿನ ಮಾತುಗಾತಿ. ಭೀಮಪ್ಪ ಮತ್ತು ರುಕುಮಾಬಾಯಿಯವರ ಮುದ್ದಿನ ಮಗಳು. ಆದರ್ಶಗಳನ್ನು ಮೈ ತುಂಬಿಸಿಕೊಂಡ ಹುಡುಗಿ. ಇದ್ದುದರಲ್ಲಿ ತೃಪ್ತಿ ಹಾಗೂ ನೆಮ್ಮದಿಯನ್ನು ಅಪೇಕ್ಷಿಸುವವಳು.. ಅದಕ್ಕಾಗಿಯೇ ಅವಕಾಶಗಳಿದ್ದರೂ ತನ್ನಿಷ್ಟದ ಆಯ್ಕೆಯ ಹಾಗೆ ಶಿಕ್ಷಕಿ ವೃತ್ತಿಯನ್ನು ಆಯ್ಕೆ ಮಾಡಿಕೊಂಡವಳು. ಪರೋಪಕಾರಿಯೂ ಹೌದು. 


ಸಂಜಯ ಟಿ.ನರಸೀಪುರದವನು. ತಂದೆ ಅದೇ ಹಳ್ಳಿಯಲ್ಲಿ ಪಂಡಿತರಾಗಿ ಖಾಯಿಲೆಗೆ ಮದ್ದು ಕೊಡುತ್ತಿದ್ದವರು.. ರೋಗಿಗಳ ಸೇವೆಗೆ ಒತ್ತು ಕೊಡುತ್ತಿದ್ದವರು. ಅಪ್ಪ ಈಗಿಲ್ಲ. ಆದರೆ, ಅಮ್ಮ ರತ್ನಮ್ಮ ದೇವಾಲಯದ ಹತ್ತಿರವೇ ಪುಟ್ಟ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದರೂ ಬಡ್ಡಿ ವ್ಯವಹಾರ ನಡೆಸುತ್ತಿದ್ದವರು. ಹಣಕ್ಕೆ ಮೊದಲ ಒತ್ತು ನೀಡುತ್ತಿದ್ದವರು. ಅಕ್ಕ ಲಕ್ಷ್ಮಿ ಹಾಗೂ ಭಾವ ಶಂಕರ. ಈ ಇಬ್ಬರಿಗೂ ಹಣವೆಂದರೆ, ಖರ್ಚು ಎಂದರೆ ಅಪ್ಯಾಯಮಾನ. ಬರುವ ಹಣಕ್ಕಿಂತಲೂ ಖರ್ಚು ಮಾಡುವುದೇ ಹೆಚ್ಚು. ಇವರಾರ ಸಹಾಯವೂ ಇಲ್ಲದೆ ತನ್ನ ಬುದ್ಧಿವಂತಿಕೆಯಿಂದಲೇ ಎಂ.ಬಿ.ಬಿ.ಎಸ್ ಮಾಡಿ ಡಾಕ್ಟರ್ ಆಗಿದ್ದವನು ಸಂಜಯ. ಅಮ್ಮನ ಮೇಲೆ ಅತಿ ಪ್ರೀತಿ ಇಲ್ಲ. ಒಂದು ರೀತಿ ಮಾತು ಕಡಿಮೆಯೇ.. ಎಲ್ಲರೊಡನೆಯೂ... ಅಕ್ಕನ ಮನೆಯಲ್ಲಿ ಕೊಂಚ ದಿನ ಇದ್ದು ಪಿ.ಯು.ಸಿ ಓದಿದ್ದರಿಂದ ಆಕೆಯ ಋಣ ಸಂಜಯನ ಮೇಲಿತ್ತು.


ಈ ಎರಡು ವಿರುದ್ಧ ಧ್ರುವಗಳು ಒಂದಾಗಿದ್ದು ವಿವಾಹ ಬಂಧನದಿಂದ. ಹೆಚ್ಚಿನ ಹಣವಿಲ್ಲದಿದ್ದರೂ, ಅವನ ಕೈ ಕೊಂಚ ಮೊಂಡಾಗಿದ್ದರೂ ಅವನ ಒಳ್ಳೆಯತನಕ್ಕೆ, ಸೇವಾ ಮನೋಭಾವಕ್ಕೆ ಸೋತ ಮೃದುಲಾ ತನ್ನ ಸಮನಾಗಿ ಶ್ರೀಮಂತಿಕೆಯಿಂದ ಇರದಿದ್ದರೂ ತನ್ನ ಆದರ್ಶಕ್ಕೆ ಹೊಂದುವ ವ್ಯಕ್ತಿಯಾಗಿ ಒಪ್ಪಿಗೆಯಾದ್ದರಿಂದ ಈ ಮದುವೆಗೆ ಮನಸಾರೆ ಒಪ್ಪಿದಳು. ಇಬ್ಬರ ಊರುಗಳು, ಕುಟುಂಬಗಳು, ಬೆಳೆದ ರೀತಿ, ವೃತ್ತಿಗಳು, ಮನೋಭಾವ ಎಲ್ಲವೂ ವಿಭಿನ್ನವೇ.. ಹೆಚ್ಚು ಕಡಿಮೆ ವಿರುದ್ಧ ಎಂದರೂ ಅತಿಶಯೋಕ್ತಿಯಲ್ಲ. ಇಂತಹಾ ಇಬ್ಬರ ನಡುವೆಯೂ ಇದ್ದ ಆದರ್ಶವೇ ಸೇವಾ ಮನೋಭಾವ.


ಮದುವೆಯ ನಂತರ ಇಬ್ಬರೂ ಬಂದದ್ದು ಬೆಂಗಳೂರಿಗೆ. ಸರ್ಕಾರಿ ಉದ್ಯೋಗದಲ್ಲಿದ್ದ ಇಬ್ಬರೂ ನಂತರ ವೃತ್ತಿ ಬದುಕಿನಲ್ಲಿ ಏಳಿಗೆ ಹೊಂದಿದ್ದರು. ಹಾಗೆಯೇ, ಕುಟುಂಬ ಕೂಡಾ ಮುಂದುವರಿಯಿತು. ಶಿಶಿರ ಹುಟ್ಟಿದ. ಮೃದುಲಾಗೆ ಮುಖ್ಯೋಪಾಧ್ಯಾಯಿನಿಯಾಗಿ ಬಡ್ತಿ ಸಿಕ್ಕಿತ್ತು. ಸಂಜಯ್ ಗೆ ಅವನು ಬಯಸಿದ ಹಾಗೆ ಗೈನೋಕಾಲಜಿಯಲ್ಲಿಯೇ ಎಂ.ಡಿ ಮಾಡುವ ಅವಕಾಶವೂ ದೊರೆಯಿತು. ತನ್ನ ಅಪ್ಪ ಅಮ್ಮನ ಹಾಗೆ ಸಹಾಯ ಮಾಡಿ ಮಾರ್ಗದರ್ಶನ ಮಾಡಿದವರು ಮುನಿಯಪ್ಪ ಹಾಗೂ ಕಾಂತಮ್ಮ ದಂಪತಿಗಳು. ಶಿಶಿರನನ್ನು ಸ್ವಂತ ಮೊಮ್ಮಗನ ಹಾಗೆಯೇ ಬೆಳೆಸಿದರು.


ಎಲ್ಲವೂ ಹಾಗೆಯೇ ಉಳಿಯಲಿಲ್ಲ. ಮೃದುಲಾ ತನ್ನ ವಿಧೇಯತೆ ಹಾಗೂ ನಿಷ್ಕಲ್ಮಶ ಸ್ವಭಾವದಿಂದ ಉಳಿದವರ ಕಣ್ಣಲ್ಲಿ ವಿಭಿನ್ನವಾಗಿ ಕಂಡರೂ ಸಂಜಯನ ಗೆಳೆಯ ಅಲೆಕ್ಸ್ ಪತ್ನಿ ಅನಿತಾ ಜೊತೆಯಲ್ಲಿ ಮಾತ್ರ ಒಳ್ಳೆಯ ಸ್ನೇಹ.. ತನ್ನ ಅಂತರಂಗದ ಮಾತುಗಳನ್ನು ಹೇಳಿಕೊಳ್ಳುವಷ್ಟು.. ಸಂಜಯನಿಗೆ ತನ್ನ ಸೇವಾ ಮನೋಭಾವ, ಕಡಿಮೆ ಮಾತಿನ ಸ್ವಭಾವದಿಂದ ಸಹಾಯಕ್ಕಿಂತ ತೊಂದರೆಗಳಾಗಿದ್ದೇ ಹೆಚ್ಚು. ಬಹಳ ತೊಂದರೆಗಳನ್ನು ಅನುಭವಿಸಿದ ನಂತರ ಬುದ್ಧಿ ಕಲಿತೆನೆಂದು ಭಾವಿಸಿ ಎಲ್ಲರಂತೆ ಸರ್ಕಾರಿ ಕೆಲಸ ಬಿಟ್ಟು ಅಲೆಕ್ಸ್ ಜೊತೆಗೂಡಿ ಪ್ರೈವೇಟ್ ಹಾಸ್ಪಿಟಲ್ ಶುರು ಮಾಡುತ್ತಾನೆ.


ಕಾಲ ಕ್ರಮೇಣ ಎಲ್ಲವೂ ಬದಲಾಗುತ್ತದೆ.


ಹಣ ಬಂದಾಗ ಮನುಷ್ಯ ಏಕೆ ಬದಲಾಗುತ್ತಾನೆ..??

ಅಂತರಂಗದಲ್ಲಿ ಅವಗುಣ ಹೊರ ಬರುವುದಾದರೂ ಏಕೆ..??

ಸಂಜಯ್ ಬದಲಾಗುವುದಕ್ಕೆ ಕಾರಣ ಹಣವಾ..? ಅಥವಾ ಅವನಿಗಾದ ಕಹಿ ಅನುಭವಗಳೇ..??

ಅಪ್ಪನ ಸೇವಾ ಮನೋಭಾವವನ್ನೇ ನಂಬಿ ಸೇವೆ ಸಲ್ಲಿಸುತ್ತಿದ್ದ ಸಂಜಯನಿಗೆ ಅಮ್ಮನ ತತ್ವ ಸರಿಯೆನಿಸ ತೊಡಗಿದ್ದು ಯಾಕೆ..??

ಇದರಿಂದ ಮೃದುಲಾ ಮೇಲಾದ ಪರಿಣಾಮಗಳೇನು..??

ಬದಲಾದ ಜೀವನಶೈಲಿ ಶಿಶಿರನನ್ನು ಭಾಧಿಸಿತೇ..??

ಅಲೆಕ್ಸ್ ಜೊತೆ ಇದ್ದ ಸ್ನೇಹ ಹಾಗೂ ವ್ಯಾವಹಾರಿಕ ಸಂಬಂಧಗಳು ಹಾಗೆಯೇ ಉಳಿದವೇ..??

ಅನಿತಾ ಎಲ್ಲದರಿಂದ ವಿಮುಖಳಾದದ್ದು ಏಕೆ..??

ಲಕ್ಷ್ಮಿ ಹಾಗೂ ಶಂಕರರ ಬದುಕು ಸುಧಾರಿಸಿತೇ..??

ಮೃದುಲಾ ಸಹಾಯ ಮಾಡಿ ಓದಿಸಿದ್ದ ವಾಣಿ ಮತ್ತೆ ಅವಳಿಗೆ ಹೇಗೆ ಸಹಾಯ ಮಾಡಿದಳು..??

ಮನಬಿಚ್ಚಿ ಮಾತನಾಡುತ್ತಿದ್ದ ಮೃದುಲಾ ಮನೋರೋಗಿಯಾದದ್ದಾದರೂ ಏಕೆ..??

ಅವಳ ಮನೋರೋಗಕ್ಕೆ ಮದ್ದು ಸಿಕ್ಕಿತೇ..?? 


ಎಲ್ಲದಕ್ಕೂ ಉತ್ತರ ಇರುವುದು 'ಪರಿಧಿ'ಯಲ್ಲಿ. ಸರಳ, ಸತೀಶ, ವತ್ಸಲಾ, ಡಾ. ಜೋಗ್, ಲತಾ, ಡಾ. ಕಮಲಾ, ಚಂಪಕ್ಕ ಮಾವಶಿ, ಜೂಲಿ, ರೋಸ್ ಮೇರಿ ಎಲ್ಲರೂ ಇದ್ದಾರೆ. ಕೆಲವರ ಪಾತ್ರಗಳು ಪುಟ್ಟವಾದರೂ ಅವರ ಬದುಕಿನ ನೋಟ ವಿಭಿನ್ನ ಹಾಗೂ ಮನಸ್ಸಿನಲ್ಲಿ ನಿಲ್ಲುವಂತವು.


ಮದುವೆ ಎಂದರೆ ಮೂರು ದಿನದ ರೇಷ್ಮೆ ಸೀರೆಯ ಸಂಭ್ರಮವಲ್ಲ.  ಅದಕ್ಕೂ ಹಿರಿದಾದದ್ದು ಮಾತು ಕೊಟ್ಟದ್ದನ್ನು ನೆರವೇರಿಸುವುದು. 


ಪತ್ನಿಗೆ ಪತಿಯ ಹಣ, ಪದವಿ, ಗೌರವ, ಎಲ್ಲಕ್ಕಿಂತ ಸ್ವಾತಂತ್ರ್ಯವೇ ಹೆಚ್ಚು ಪ್ರಿಯ. ಇದನ್ನು ಅರ್ಥ ಮಾಡಿಕೊಳ್ಳದೇ ಹೋದಲ್ಲಿ ಅವಳ ಜೊತೆ ಬದುಕುವುದು ಕಷ್ಟವೇ..

ನಮ್ಮ ದೇಶದಲ್ಲಿ ಒಬ್ಬ ವಿವಾಹಿತ ಸ್ತ್ರೀಯ ಜೀವನದ ಸುಖದ ಪರಿಧಿ ಪತಿಯ ಪ್ರೇಮದ ಅಂತಃಕರಣದ ಮೇಲಿದೆ. ಅದರ ಪರಿಧಿಯನ್ನು ವಿಸ್ತರಿಸುವುದು ಅಥವಾ ಸಂಕುಚಿತಗೊಳಿಸುವುದು ಎರಡೂ ಗಂಡಿಗೆ ಬಿಟ್ಟದ್ದು. 


ಮೊದಮೊದಲಿಗೆ ನಾನು ಓದಿದ್ದು ಸುಧಾ ಮೂರ್ತಿಯವರ ಇಂಗ್ಲಿಷ್ ಪುಸ್ತಕಗಳನ್ನು. ಇವತ್ತಿಗೂ ಮೊದಮೊದಲಿಗೆ ಇಂಗ್ಲಿಷ್ ಪುಸ್ತಕಗಳ ಓದನ್ನು ಶುರು ಮಾಡುವುದಿದ್ದರೆ ಇವರ ಪುಸ್ತಕಗಳ ಹೆಸರನ್ನೇ ಹೇಳುತ್ತೇನೆ. ಇವರ ಈ ಪುಸ್ತಕ ಇಷ್ಟವಾಗಿದ್ದು ವಾಸ್ತವ ಹಾಗೂ ಆದರ್ಶಗಳನ್ನು ಮಿಳಿತಗೊಳಿಸುವುದಕ್ಕೆ. ಕೆಲವರಿಗೆ ಸಂಜಯನ ವಾಸ್ತವವಾದ ಇಷ್ಟವಾಗಬಹುದು ಇನ್ನು ಕೆಲವರಿಗೆ ಮೃದುಲಾಳ ಆದರ್ಶ. ನನಗೆ ಇಷ್ಟವಾಗಿದ್ದು ಮೃದುಲಾ ಬದುಕು ಹಾಗೂ ಅವಳ ಆತ್ಮವಿಶ್ವಾಸ. ನನ್ನನ್ನು ನಾನು ಆಕೆಯ ಪಾತ್ರಕ್ಕೆ ಸಮೀಕರಿಸಿಕೊಂಡು ಓದಿದ ಕತೆ ಇದು. ಹುಬ್ಬಳ್ಳಿ-ಧಾರವಾಡ ಶೈಲಿಯ ಕನ್ನಡವೂ ಇದೆ. ಆಡು ಮಾತಿನ ಮೈಸೂರು ಹಾಗೂ ಬೆಂಗಳೂರಿನ ಕನ್ನಡವೂ ಇದೆ. ಪುಸ್ತಕ ಮುಗಿಸುವಾಗ ಭಾವುಕತೆಯಂತೂ ಕಾಡುತ್ತದೆ.


~ ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ