ಪುಸ್ತಕದ ಶೀರ್ಷಿಕೆ : ಅಂಡಮಾನ್ ಕನಸು
ಲೇಖಕರು : ರಹಮತ್ ತರೀಕೆರೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ
ಪ್ರವಾಸ ಎಂಬುದು ಎಲ್ಲರಿಗೂ ಒಂದು ಕನಸಿನಂತೆಯೇ.. ವಾಸ್ತವದ ಚಿತ್ರಣ ಹೇಗೆಯೇ ಇದ್ದರೂ ಸಹಾ ಕನಸು ಕಂಡದ್ದು.. ಈ ಜಾಗವನ್ನು ಹೀಗೆಯೇ ನೋಡಬೇಕು. ಇಲ್ಲಿಗೇ ಹೋಗಬೇಕು.. ಇಂತಹದ್ದನ್ನು ತಿನ್ನಬೇಕು ಎನ್ನುತ್ತಾ ಹಲವಾರು ಕನಸುಗಳನ್ನು ಪೋಣಿಸಿಕೊಂಡಿರುತ್ತೇವೆ. ಆದರೆ , ಇದ್ಯಾವುದೂ ಇಲ್ಲದ ದಿನಗಳಲ್ಲಿ ಅಂಡಮಾನ್ ನಿಂದ ಅನುಭವಗಳ ಮೂಟೆಯನ್ನೇ ಹೊತ್ತು ತಂದು ನಮ್ಮ ಮುಂದೆ ತೆರೆದಿಟ್ಟಿರುವ ಪುಸ್ತಕ ಇದು. ಇದು ರಹಮತ್ ತರೀಕೆರೆ ಅವರ 'ಅಂಡಮಾನ್ ಕನಸು' ಎನ್ನುವ ಪ್ರವಾಸ ಕಥನ.ಇದು ನವಕರ್ನಾಟಕ ಪ್ರಕಾಶನ ಪ್ರಕಟಿಸಿರುವ ಪುಸ್ತಕ. 2002 ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೃತಿ.
ಲೇಖಕರು ಹಾಗೂ ಅವರ ಹೆಂಡತಿ ಬಾನು, ಹಂಪಿ ಕನ್ನಡ ವಿಶ್ವವಿದ್ಯಾಲಯದ ಚಿತ್ರ ಕಲಾವಿದರಾಗಿದ್ದ ಜಯಕುಮಾರ್, ಅವರ ಹೆಂಡತಿ ಅರುಣಾ, ಮೈಸೂರಿನ ಕಲಾ ಶಾಲೆಯ ಅಧ್ಯಾಪಕರಾಗಿದ್ದ ಗಣನಾಥ್ ಸೇರಿ ಐವರು ಅಂಡಮಾನ್ ಪ್ರವಾಸಕ್ಕೆ ಹೊರಡುತ್ತಾರೆ. ಪ್ರವಾಸದಲ್ಲಿ ಇವರೆಲ್ಲರ ಕುರಿತ ಘಟನೆಗಳು ಎಷ್ಟೋ ಬಾರಿ ನಗೆಯುಕ್ಕಿಸುತ್ತವೆ. ಇವರೆಲ್ಲರ ಗುಣ ವಿಶೇಷಣಗಳು ಹೋಗುತ್ತಾ ಹೋಗುತ್ತಾ ಪರಿಚಯವಾಗುತ್ತವೆ
ಮದರಾಸಿನ ಹಡಗು ಕಟ್ಟೆಯಿಂದ ಹೊರಡುವ ಹಡಗಿನಿಂದ ಅಂಡಮಾನ್ ಸೇರುವವರೆಗೂ , ನಂತರ ಅಲ್ಲಿನ ಎರಡು ವಾರಗಳ ಪ್ರವಾಸ ಮುಗಿಸಿ ಹಿಂದಿರುಗಿ ವಿಶಾಖಪಟ್ಟಣದ ಬಂದರು ಸೇರುವವರೆಗಿನ ಘಟನೆಗಳನ್ನು ಒಳಗೊಂಡಿದೆ ಈ ಪುಸ್ತಕ.
ನಾನು ಪಿ.ಯು.ಸಿ ಯಲ್ಲಿರುವಾಗ ಈ ಪುಸ್ತಕ ಪುಟ್ಟ ಭಾಗವೊಂದನ್ನು ಪಠ್ಯದ ರೂಪದಲ್ಲಿ ಓದಿದ್ದೆ. ಅದು ಇಲ್ಲಿನ ಮ್ಯಾನ್ಗ್ರೋವ್ ಕಾಡುಗಳ ಕುರಿತದ್ದು. ಅದರೆ, ಅದು ಕೇವಲ ಒಂದು ಹನಿ ಅಷ್ಟೇ ಎನ್ನಿಸಿತು ಈ ಪುಸ್ತಕ ಓದಿದ ನಂತರ.
ಬಂದರಿನಿಂದ ಹಡಗು ಹೊರಡುವುದು, ಅದರಲ್ಲಿನ ಅನುಭವಗಳು, ಅಂಡಮಾನ್ ತಲುಪುವುದು, ಅಲ್ಲಿನ ಬೀಚ್, ನದಿ, ಅಲ್ಲಿನ ಆಚಾರ - ವಿಚಾರ, ಓಡಾಟ, ಅಲ್ಲಿನ ಜನಗಳು, ಆದಿವಾಸಿಗಳು, ಕಾಲಾಪಾನಿ ಹೀಗೆ ಎಲ್ಲವೂ ಇದರಲ್ಲಿ ಅಡಕವಾಗಿದೆ. ಅಲ್ಲಿನ ಬುಡಕಟ್ಟು ನಿವಾಸಿಗಳು, ಇಲ್ಲಿಂದ ಅಲ್ಲಿಗೆ ಹೋಗಿ ವಾಸ ಮಾಡಿರುವ ಜನಾಂಗದವರು, ಅಲ್ಲಿನ ಜನರ ವಸತಿ ಸ್ಥಿತಿ, ಅಲ್ಲಿನ ನದಿ, ಕಡಲ ತಡಿಯಲ್ಲಿಯೇ ಇದ್ದರೂ ನೀರಿಗಾಗಿ ಪರದಾಡುವ ಪ್ರಸಂಗ, ಅಲ್ಲಿನ ಏಕೈಕ ನದಿ ಹೇಗಿದೆ, ಅಲ್ಲಿನ ಮೀನುಗಳು, ಕಡಲ ಜಲಚರಗಳು.. ಇದರೊಟ್ಟಿಗೆ ಅಲ್ಲಿ ಸಿಕ್ಕ ಇವರಿಗೆ ವಿಭಿನ್ನ ಎನಿಸಿದ ವ್ಯಕ್ತಿಗಳು, ಅವರ ಜೊತೆಗಿನ ಒಡನಾಟ, ಅಲ್ಲಿನ ಮನೆಗಳು, ಖಾದ್ಯಗಳು, ಅಲ್ಲಿನ ದುಬಾರಿ ಎನಿಸುವ ಮತ್ತು ಚೆಂದವೆನಿಸುವ ವಸ್ತುಗಳು.
ಅಷ್ಟೇ ಅಲ್ಲ.. ಇಲ್ಲಿ ಕತೆಯಂತೆ ಹಾಸ್ಯ ಮಿಶ್ರಿತವಾದ ನಿರೂಪಣಾ ಶೈಲಿ ಜೊತೆಗೆ ಕೆಲವೊಮ್ಮೆ ವಿಷಾಧದ ಭಾವ, ಮತ್ತೊಮ್ಮೆ ತುಂಟತನ, ಹುಚ್ಚುಚ್ಚು ಕನಸುಗಳು, ಒಂದಷ್ಟು ಊಹೆಗಳು, ಅಲ್ಲಿನ ಜಾರವಾ ಆದಿವಾಸಿಗಳು ಇವರನ್ನು ಎಳೆದೊಯ್ದ ಹಾಗೆ ಇವರುಗಳು ಅಲ್ಲಿಯೇ ಉಳಿದು ಹೋಗುವ ಆಲೋಚನೆ.. ಅದರೊಟ್ಟಿಗೆ ಅಲ್ಲಿನ ಕೆಲವು ಫೋಟೋಗಳು, ಅವರ ಪಡಿಪಾಟಲುಗಳು ಎಲ್ಲವನ್ನೂ ಮೋಡಿ ಮಾಡುವಂತೆ ಬರೆದಿದ್ದಾರೆ. ರೂಪಕ, ಉಪಮೆಗಳು ಜೊತೆಗೆ ಕೆಲವು ಭೂಗೋಳದ ವಿಚಾರ, ಸಸ್ಯಶಾಸ್ತ್ರ, ಜೀವಶಾಸ್ತ್ರ, ಇತಿಹಾಸ, ಕತೆಗಳು , ಪ್ರಸಿದ್ಧ ಲೇಖಕರ ಅನುಭವಗಳ ಉದಾಹರಣೆಗೆ ಇವರ ಸ್ಥಿತಿಯ ಹೋಲಿಕೆ, ಹಳೆಯ ನೆನಪುಗಳು, ಭಾರತಕ್ಕೂ ಅದರಲ್ಲೂ ಇಲ್ಲಿನ ಸ್ಥಳೀಯರಿಗೂ ಎಲ್ಲಿಗೂ ಹೋಲಿಕೆ ಎಲ್ಲವೂ ತುಂಬಿದೆ. ಅಂಡಮಾನ್ ನ ಕೆಲವು ಘಟನೆಗಳು ಕಾಲಾನುಕ್ರಮದಲ್ಲಿಲ್ಲ. ಆದರೆ, ಅದರಿಂದ ಓದಿನ ಓಘಕ್ಕೆ ವ್ಯತ್ಯಾಸವಾಗದು.
ಕೊನೆಗೆ, ಅಂಡಮಾನ್ ನಲ್ಲಿ ನೋಡದ ಪ್ರದೇಶ ಹಾಗೂ ಅಲ್ಲಿನ ಯಾರಿಗೂ ಪ್ರವೇಶವಿಲ್ಲದ ಸೆಂಟನಿಸ್ ದ್ವೀಪದ ಕುರಿತು ಅಚ್ಚರಿಯ ಜೊತೆಗೆ ಕುತೂಹಲವನ್ನೂ ಮೂಡಿಸುತ್ತಾರೆ.
ಸಂಪೂರ್ಣ ಸ್ವಾರಸ್ಯಕರ ಸಂಗತಿಗಳು ತುಂಬಿರುವ ಪ್ರವಾಸ ಕಥನವೇ 'ಅಂಡಮಾನ್ ಕನಸು'. ಓದಿದ ನಂತರ ಮತ್ತೊಮ್ಮೆ ಓದುವಂತೆ ಹಾಗೂ ಅಲ್ಲಿಗೆ ಹೋಗುವಂತೆ ಪ್ರೇರೇಪಿಸಿದ ಪುಸ್ತಕ ಇದು
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ