ಸೋಮವಾರ, ಏಪ್ರಿಲ್ 6, 2026

ಅವನು.. ಶಾಪಗ್ರಸ್ತ ಗಂಧರ್ವ (ಪುಸ್ತಕ ಯಾನ - 25)


 ಪುಸ್ತಕದ ಹೆಸರು : ಅವನು.. ಶಾಪಗ್ರಸ್ತ ಗಂಧರ್ವ

ಲೇಖಕರು : ಸಂತೋಷಕುಮಾರ ಮೆಹೆಂದಳೆ

ಪ್ರಕಾಶಕರು : ಸ್ನೇಹ ಬುಕ್ ಹೌಸ್

ಬೆಲೆ : 160 ರೂ

ಪುಟಗಳು : 200 


ಇಂದು ನಾನು ಪರಿಚಯಿಸ ಹೊರಟಿರುವ ಪುಸ್ತಕ ಕತೆ ಪುಸ್ತಕವೂ ಅಲ್ಲ ಅಥವಾ ಕಾದಂಬರಿ ಕೂಡಾ ಅಲ್ಲ. ಇದೊಂದು ಮನೋ-ವೈಜ್ಞಾನಿಕ ಕೃತಿ. 

ಹಾಗಾದರೆ ಬೋರಿಂಗ್ ಆಗಿರಬಹುದು ಅಂತೇನಾದರೂ ನೀವು ಭಾವಿಸುತ್ತಿದ್ದರೆ ಆ ಪೂರ್ವಾಗ್ರಹಪೀಡಿತ ಮನಸ್ಥಿತಿಯಿಂದ ಆಚೆಗೆ ಬನ್ನಿ. ಏಕೆಂದರೆ, ಎಂಥಹದ್ದೇ ವಿಚಾರಗಳನ್ನು ಮನಮುಟ್ಟುವ ಹಾಗೆ, ಎಲ್ಲಿಯೂ ಬೋರಾಗದ ಹಾಗೆ ಹೇಳುವ ನನ್ನಿಷ್ಟದ ಲೇಖಕರು ಇವರು. ಇವರೇ ಸಂತೋಷ್ ಕುಮಾರ್ ಮೆಹೆಂದಳೆ. ಮತ್ತು ಈ ಪುಸ್ತಕದ ಹೆಸರು

ಅವನು... ಶಾಪಗ್ರಸ್ತ ಗಂಧರ್ವ...


ಇದು ಗಂಡಿನ ಸಾಮ್ರಾಜ್ಯ ಹಾಗೂ ಆತನ ಕುರಿತೇ ಪರಿಚಯಿಸುವ ಕೃತಿ. ಸಾಮಾನ್ಯವಾಗಿ, ಹೆಣ್ಣಿನ ಬಗ್ಗೆ ಬರೆಯುವಷ್ಟು ಸಲೀಸಾಗಿ, ಆರ್ದ್ರತೆಯಿಂದ, ಅಂತಃಕರಣದಿಂದ ಗಂಡಿನ ಬಗ್ಗೆ ಬರೆಯಲಾರರು. ಅಂತಹಾ ಕೃತಿಗಳು ಬಹಳವೇ ಕಡಿಮೆ. ಹಾಗೆಂದು, ಗಂಡಿಗೆ ಅಂತಃಕರಣವಿಲ್ಲ, ಮಮತೆಯಿಲ್ಲ, ಆರ್ದ್ರ ಮನಸ್ಸಿಲ್ಲ ಎಂದು ಹೇಳಲಾಗುತ್ತದೆಯೇ..?? ಖಂಡಿತಾ ಇಲ್ಲ.. ಆದರೆ, ಅದನ್ನು ಪರಿಚಯಿಸಿದರು ಕಡಿಮೆಯೇ.. ಅಂತಹಾ ಅಪರೂಪದ ಪುಸ್ತಕದ ಪಟ್ಟಿಯಲ್ಲಿ ಈ ಪುಸ್ತಕವಿದೆ.


ಗಂಡಸಿನ ಪ್ರಪಂಚವೇ ವಿಭಿನ್ನ. ಆತ ಹೆಣ್ಣಿನ ಹಾಗೆ ಹೊರಜಗತ್ತಿಗೆ ಕಾಣುವಂತೆ ಕಣ್ಣೀರು ಹಾಕಲಾರ. ಸಮಾಜ ಅವನನ್ನು ಮತ್ತೊಂದು ಹೆಸರಿನಲ್ಲಿ ಗುರುತಿಸಿಬಿಡುತ್ತದೆ. ಅಷ್ಟೇ ಅಲ್ಲ, ಆತ ಹೆಚ್ಚಿನ ಬಾರಿ ನಮಗೆ ಪರಿಚಿತವಾಗಿರುವುದೇ ಆತನ ಕೋಪದಿಂದ.. ಸಿಟ್ಟು, ಕೂಗಾಟ, ಚೀರಾಟ ಇಲ್ಲವೇ ಕಾಷ್ಠ ಮೌನ. ಮಾತೇ ಬರುವುದಿಲ್ಲವೆನ್ನುವ ಭಾವ ಹೊತ್ತಂತಹಾ ನಿರ್ಲಿಪ್ತ ಮೌನ. ಆದರೆ, ಅವನು ಸಂಸಾರಕ್ಕಾಗಿ ದುಡಿಯುವ ಪರಿಯೇ ಅನನ್ಯ. ಸಂಪೂರ್ಣ ಧ್ಯಾನಮಗ್ನನಂತೆ ಅದರಲ್ಲಿಯೇ ಕಳೆದು ಹೋಗುತ್ತಾನೆ. ತನ್ನವರಿಗಾಗಿ ದುಡಿಯುತ್ತಾ ದುಡಿಯುತ್ತಾ ಹಣ್ಣಾಗಿ ಬಿಡುತ್ತಾನೆ. ಒಂದಿಡಿ ಪ್ರೀತಿಗೆ ಹಪಹಪಿಸುತ್ತಾನೆ.. ಆದರೆ, ಬಾಯಿ ಬಿಟ್ಟು ಕೇಳಲಾರ. ವಿಪರ್ಯಾಸವೆಂದರೆ, ಅದು ಅವನಿಗೆ ಕೇಳದೇ ದಕ್ಕುವ ಪರಿಸ್ಥಿತಿಯಲ್ಲಿಯೂ ಇರುವುದಿಲ್ಲ. 


*********

ಅದನ್ನೇ ಲೇಖಕರ ಮಾತಿನಲ್ಲಿ ಹೇಳುವುದಾದರೆ..


ಬದುಕಿನ ನಿಷ್ಕಾರುಣ ಸತ್ಯಗಳು ಮತ್ತು ದುರಂತಗಳು ಕೇವಲ ಹೆಣ್ಣುಮಕ್ಕಳ ಸ್ವತ್ತಲ್ಲ. ವಿಪರೀತತೆಗಳು, ಅಸಹ್ಯ, ಕೆಟ್ಟಾತಿಕೆಟ್ಟ ಕೊಳಕುತನಗಳಿಂದ ಕೂಡಿದ್ದು ಮತ್ತು ಭರಿಸಲಾಗದಂತಹ ಅನುಭವ ಎಂದಿದ್ದರೆ ಅದನ್ನು ಕೇವಲ ಗಂಡಸೊಬ್ಬ ಭರಿಸಿರುತ್ತಾನೆ ಮತ್ತದನ್ನು ಅವನು ಮಾತ್ರ ಭರಿಸಬಲ್ಲ. 


ಅದಕ್ಕಾಗೇ ಪ್ರತಿಯೊಬ್ಬ ಗಂಡಸೂ ತನ್ನವಳಿಗಾಗಿ ಭೂಮಿಯ ಮೇಲೆ ಒಂದು ಸ್ವರ್ಗ ಸೃಷ್ಟಿಸುತ್ತೇನೆಂದು ಹೊರಟು ನಿಂತಿರುತ್ತಾನೆ. ಆ ಒಂದು ಧಾವಂತವೇ ಅವನ ಅರ್ಧ ಆಯಸ್ಸು, ಸತ್ವ ಮತ್ತು ಸಂಪೂರ್ಣ ತಾಕತ್ತನ್ನು ತಿಂದುಹಾಕುತ್ತಿದ್ದರೆ, ಉಳಿದದ್ದನ್ನು ಅವನಿಗೆ ಗೊತ್ತಿಲ್ಲದೆಯೋ ಗೊತ್ತಿದ್ದೋ ಹೆಣ್ಣೊಬ್ಬಳು ತಿಂದು ಹಾಕಿರುತ್ತಾಳೆ. 


ಅದು ಹೆಂಡತಿಯ ರೂಪದಲ್ಲೂ, ಆಕೆ ದುರ್ಲಭವಾದಾಗ ಅನಿವಾರ್ಯತೆಗೆ ಕದ ತೆರೆವ ಇನ್ನೊಬ್ಬಾಕೆಯೋ ಒಟ್ಟಾರೆ ಗಂಡಸೊಬ್ಬನ ಜೀವನದ ಸಂತೆಯಲ್ಲಿ ಕಪ್ಪು-ಬಿಳುಪುಗಳದ್ದೇ ರಾಜ್ಯ.


ಕಾರಣ

ಅವನೆಂದರೆ

ಶಾಪಗ್ರಸ್ತ ಗಂಧರ್ವ..


******


ಈ ಟೈಟಲ್ ನೋಡಿದಾಕ್ಷಣ ನನಗೆ ನೆನಪಿಗೆ ಬಂದದ್ದು ಅಪ್ಪ. ಆದರೆ ಪುಸ್ತಕದ ಒಳಹೊಕ್ಕು ನೋಡಿದಾಗ ತರಹೇವಾರಿ ಪಾತ್ರಗಳು ಕಂಡವು. ಅಪ್ಪ , ಗಂಡ, ಮೇಷ್ಟ್ರು ಎಲ್ಲಾ ಪಾತ್ರಗಳೂ ಒಂದರ್ಥದಲ್ಲಿ ಅರ್ಥವಾಗದೇ ಉಳಿದವರೇ.. ಅಪ್ಪನಾಗಿ ಅರ್ಥವಾದವನು ಗಂಡನಾಗಿ ಅರ್ಥವೇ ಆಗದೆ ಉಳಿದು ಹೋಗಿರುತ್ತಾನೆ.


ನನ್ನ ಅಪ್ಪ ಎಂದರೆ ನನ್ನ ಅಭಿಪ್ರಾಯ ಇಲ್ಲಿನದ್ದಲ್ಲ.. ಆದರೆ, ಇಲ್ಲಿ ಉಲ್ಲೇಖವಾಗಿರುವ ಕುರಿತು ಎಷ್ಟೋ ಜನರು ಹೇಳುವುದನ್ನು ಕೇಳಿದ್ದೇನೆ.. 


ಎಷ್ಟೋ ಜನರಿಗೆ ಅಪ್ಪ ಕೆಟ್ಟವನು.. ಎಷ್ಟೋ ಜನರಿಗೆ ತನ್ನ ಅಪ್ಪನ ಮುಖವನ್ನೇ ಕಂಡರೆ ಆಗುವುದಿಲ್ಲ, ಕೆಲವರ ಮನೆಯಲ್ಲಿ ಆತ ಅಸಹಾಯಕತನದ ಪರಮಾವಧಿಯಂತಿರುವ ಬೇಜವಾಬ್ದಾರಿಯ ಮನುಷ್ಯ. ಅಪ್ಪ ಅದನ್ನು ಮಾಡಲಿಲ್ಲ, ಅಪ್ಪ ಇದನ್ನು ಮಾಡಲಿಲ್ಲ ಎನ್ನುವವರೇ ಹೆಚ್ಚು. ಹೆಣ್ಣುಮಕ್ಕಳಿಗೆ ಹಿಡಿ ಪ್ರೀತಿ ಸಿಕ್ಕರೆ ಸಾಕು ಅಪ್ಪನಿಂದ.. ಅವನೇ ಅವಳ ಪಾಲಿನ ದೈವ. ಆದರೆ, ಎಷ್ಟೋ ಗಂಡುಮಕ್ಕಳಿಗೆ ಅಪ್ಪನ ಕುರಿತ ದೂರು ಇದ್ದದ್ದೇ.. ಅದರಲ್ಲೂ ಅಪ್ಪನೆನ್ನುವ, ಸಿಡುಕ, ಒರಟ ಮನುಷ್ಯನ ಕುರಿತು. 


ಅಪ್ಪ ಯಾಕೆ ಹೀಗೆ..?? 

ಅಪ್ಪನನ್ನು ಆಕಾಶ ಮಾಡಿದ ಮೇಲೆ ಅವನು ಕೈಗೆ ಸಿಗದೆ ಹೋಗಿಬಿಟ್ಟನಾ..??

ಅಪ್ಪ ಯಾಕೆ ಯಾವುದಕ್ಕೂ ಬೇಡಿಕೆ ಇಡದೆ ಸುಮ್ಮನಾಗಿಬಿಟ್ಟ..??


ಅವನು ಮನೆಯಿಂದ ಹೊರಗೆ ಎಲ್ಲದರ ಕುರಿತು ಮಾತನಾಡುವವನು. ಮನೆಯಲ್ಯಾಕೆ ಅಷ್ಟು ಮೌನಿ..??

ಮೌನಿಯಾಗಿದ್ದೇ ಖಳನಾಯಕನಾಗಿಬಿಟ್ಟನಾ..??

ಮದುವೆಯ ನಂತರ ಆತ ಬದಲಾದುದ್ದೇಕೆ..??

ಭಾವ-ಪ್ರಾಯೋಗಿಕ ಸಿದ್ದಾಂತ ಅವನ ಬಗ್ಗೆ ಹೇಳುವುದೇನು..??


ಅವನಿಗೂ ಹೆಣ್ಣಿಗೂ ದೇಹ ಪ್ರಕೃತಿಯಲ್ಲಿ ಬಹಳಷ್ಟು ವಿಭಿನ್ನತೆ.. ಅದು ನಿಸರ್ಗ ಆತನಿಗೆ ಮಾಡಿದ ಅನ್ಯಾಯವಾ..??

ಶೀಲ ಎಂಬುದು ಹೆಣ್ಣಿಗೆ ಮಾತ್ರವಾ..?? ಗಂಡಿಗೂ ಅಲ್ಲವಾ..?? 

ಹೊರಗಿನ ಸಂಬಂಧವನ್ನು ಆತ ಬಯಸುವುದಾದರೂ ಯಾಕೆ..??

ಅತ್ಯಾಚಾರಕ್ಕೆ ಇಳಿಯುವ ಆತನ ಉದ್ದೇಶವೇನು..??


ಇವೆಲ್ಲವೂ ಈ ಪುಸ್ತಕ ಓದಿದ ಬಳಿಕ ಪ್ರಶ್ನೆಗಳಾಗಿ ಉಳಿಯಲಾರವು. ಪ್ರತಿಯೊಂದು ಪ್ರಶ್ನೆಗೂ ಸಮರ್ಪಕ ಉತ್ತರ ದೊರೆತೇ ದೊರೆಯುತ್ತದೆ. 


14 ಅಧ್ಯಾಯದ ಈ ಪುಸ್ತಕದಲ್ಲಿ ಮುನ್ನುಡಿ, ಉಪಸಂಹಾರಗಳನ್ನು ಹೊರತು ಪಡಿಸಿದರೆ 2 ರಿಂದ 5 ನೇ ಅಧ್ಯಾಯಗಳಲ್ಲಿ ಮೇಲಿನ ಪ್ರಶ್ನೆಗಳಿಗೆ ಉತ್ತರ ಸಿಕ್ಕಿ ಬಿಡುತ್ತದೆ. ಆನಂತರದ್ದು ಅಂದರೆ 6 ರಿಂದ 13 ನೇ ಅಧ್ಯಾಯದವರೆಗೂ ಬದುಕಿನ ಕಥೆಗಳಿವೆ. ನಮ್ಮ ಸುತ್ತಮುತ್ತಲೇ ನಡೆಯುವ ವಿದ್ಯಮಾನಗಳಿವೆ. ಇಲ್ಲಿ ಬರೀ ವೈಜ್ಞಾನಿಕ ಪುರಾವೆಗಳಿಲ್ಲ. ಮನಸ್ಸಿನ ಮಾತು ಆರ್ದ್ರ ಭಾವ ಮಿಶ್ರಿತ ಬದುಕಿದೆ. ಒಮ್ಮೆ ಒಳಹೊಕ್ಕರೆ ಹೊರಬರಲು ಒಂದಷ್ಟು ಸಮಯ ಹಿಡಿಯುತ್ತದೆ.


ಹಾಗೆಂದು, ಇದು ಎಲ್ಲರಿಗೂ ಅನ್ವಯವಾಗುವುದಿಲ್ಲ. ಇದರಾಚೆಗೆ ಇದಕ್ಕೆ ದಕ್ಕದೇ ಉಳಿದ ಎಷ್ಟೋ ಜನರಿರಬಹುದು. ಇದು ಸಾಮಾನ್ಯ ಹಾಗೂ ನಿರ್ದಿಷ್ಟ ತಲೆಮಾರನ್ನು ಲಕ್ಷ್ಯದಲ್ಲಿರಿಸಿಕೊಂಡು ಸಮೀಕ್ಷೆ ಮಾಡಿ ರಚಿಸಿರುವ ಪುಸ್ತಕ.


ನಾನು ಈ ಪುಸ್ತಕವನ್ನು ಮುಖ್ಯವಾಗಿ ಮದುವೆಗೆ ತಯಾರಾಗಿರುವ ಅಥವಾ ಮದುವೆಯಾಗುವ ಹೆಣ್ಣು ಮಕ್ಕಳಿಗೆ ಓದಲು ಸಜೆಸ್ಟ್ ಮಾಡುವೆ. ಏಕೆಂದರೆ, ಅಪ್ಪ ಹೇಳದಿದ್ದರೂ ಅರ್ಥವಾಗುತ್ತಾರೆ. ಗಂಡನನ್ನು ಅರ್ಥೈಸಿಕೊಳ್ಳಲು ಬೇರೆಯದ್ದೇ ಮಾಪನವಿದೆ.. ಇಬ್ಬರನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗಲು ಸಾಧ್ಯವಿಲ್ಲ. 


ಇದರ ಹೊರತುಪಡಿಸಿ.. ಅಪ್ಪನನ್ನು ಯಾರಾದರೂ ದ್ವೇಷಿಸುವವರಿದ್ದರೆ ಅವರಿಗೂ ಈ ಪುಸ್ತಕ ಓದಲು ಸಜೆಸ್ಟ್ ಮಾಡುವೆ. ಯಾಕೆಂದರೆ, ದ್ವೇಷದ ಹಿಂದಿನ ಮನಸ್ಥಿತಿ ಹಾಗೂ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಲಿದೆ ಈ ಪುಸ್ತಕ.


ಎಲ್ಲರೂ ಓದುವುದು ಒಳ್ಳೆಯದು. ಆದರೆ, ಈ ಎರಡು ಘಟ್ಟದಲ್ಲಿರುವವರಿಗೆ ಈ ಪುಸ್ತಕ ಅತ್ಯಂತ ಉಪಯುಕ್ತ ಎಂಬುದು ನನ್ನ ಭಾವನೆ. ಒಂದೊಂದು ಕಾಲಘಟ್ಟದಲ್ಲಿ ಮನಸ್ಸು ಒಂದೊಂದು ರೀತಿಯ ಗ್ರಹಿಕೆಗೆ ಒಳಪಡುತ್ತದೆ. ವೈಜ್ಞಾನಿಕ ವಿಶ್ಲೇಷಣೆ ಇರುವ ಈ ಪುಸ್ತಕದ ಮರು ಓದಿನಲ್ಲಿ ಕೂಡಾ ಎಷ್ಟೋ ಹೊಳಹುಗಳು ಹೊಳೆಯುತ್ತದೆ. ಮನೋವೈಜ್ಞಾನಿಕ ಕ್ಷೇತ್ರದ ಆಸಕ್ತರು ಅವಶ್ಯವಾಗಿ ಈ ಪುಸ್ತಕವನ್ನು ಓದಿ. 


ಪುಸ್ತಕವನ್ನು ಓದಿ ಅರ್ಥ ಮಾಡಿಕೊಂಡ ಹಾಗೆ ಅವನನ್ನೂ ಅರ್ಥ ಮಾಡಿಕೊಂಡಾಗಲಾದರೂ ಶಾಪಗ್ರಸ್ತ ಗಂಧರ್ವನ ಶಾಪ ವಿಮೋಚನೆ ಆಗಬಹುದಾ..? ಕಾಲವೇ ಉತ್ತರಿಸಬೇಕಿದೆ


ಇವರು ಇಲ್ಲಿಯವರೆಗೂ ಸುಮಾರು 25 ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.. ಇವರ ಬರವಣಿಗೆಯ ಶೈಲಿಯೇ ವಿಭಿನ್ನ. ಒಂದು ರೀತಿಯ ಸಿಗ್ನೇಚರ್ ಶೈಲಿ ಇದೆ ಎಂದರೂ ತಪ್ಪಾಗಲಾರದು. ಎಲ್ಲಾ ಕಾದಂಬರಿ, ಕತೆಗಳು ಸರಾಗವಾಗಿ ಹಾಗೂ ರೋಚಕವಾಗಿ ಓದಿಸಿಕೊಂಡು ಹೋಗುತ್ತವೆ. ಒಂದೊಂದು ಪುಸ್ತಕದಲ್ಲಿಯೂ ಒಂದೊಂದು ವಿಭಿನ್ನತೆ ಕಾಣುತ್ತದೆ. ನಾನು ಇವರ ಈ ಪುಸ್ತಕವನ್ನು ಪರಿಚಯಿಸುವುದಕ್ಕೆ ಆಯ್ದುಕೊಂಡಿರುವುದಕ್ಕೆ ಕಾರಣ ಈ ವಿಚಾರದ.. ಗಂಡಿನ ಕುರಿತ ಅದರಲ್ಲೂ ಮನೋವೈಜ್ಞಾನಿಕ ವಿಶ್ಲೇಷಣೆಯ ಪುಸ್ತಕ ಅಪರೂಪದಲ್ಲಿ ಅಪರೂಪ.


~ ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ