ಪುಸ್ತಕದ ಶೀರ್ಷಿಕೆ : ನೂರು ನೆನಪು
ಲೇಖಕರು : ಸಾಯಿಸುತೆ
ಪ್ರಕಾಶಕರು :ದಿವ್ಯಚಂದ್ರ ಪ್ರಕಾಶನ
ನೆನಪುಗಳೆಂದರೆ ಜೊತೆಯಲ್ಲಿ ಇಲ್ಲದಿರುವವರದ್ದೇ ಅಲ್ಲವಾ.. ಜೊತೆಗಿರುವಾಗ ನೆನಪುಗಳನ್ನು ಸೃಷ್ಟಿಸಿಕೊಳ್ಳಲು ತೊಡಗುತ್ತೇವೆ. ಅವರೊಂದಿಗೆ ಕಳೆದ ಪ್ರತಿ ಕ್ಷಣ ಅವರಿಲ್ಲದಾಗ ಜೀವಂತಿಕೆಯಿಂದ ನೆನಪಿಸಿಕೊಳ್ಳಲು ಅವಶ್ಯಕವಲ್ಲವೇ.. ಇಲ್ಲಿ ಎಲ್ಲರಿಗೂ ನೂರು ನೆನಪುಗಳಿವೆ.
ಮೊದಲಿಗೆ ಸಮುದ್ಯತಾ ಹಾಗೂ ಚಂದ್ರಹಾಸನ ಪರಿಚಯವಾಗುತ್ತದೆ. ಕಾದಂಬರಿಯ ಪೂರ್ವಾರ್ಧ ಚಂದ್ರಹಾಸನ ನಡವಳಿಕೆಗೆ ಉತ್ತರಾರ್ಧ ವಿಭಿನ್ನವಾದ ನಡವಳಿಕೆಯನ್ನು ತೋರಿಸುತ್ತದೆ. ಮೊದಲಿಗೆ ಕಂಡ ಚಂದ್ರಹಾಸನ ನಡವಳಿಕೆ ಕಂಡು ಇದ್ಯಾಕಪ್ಪಾ ಈ ವ್ಯಕ್ತಿಯ ಸ್ವಭಾವ ಹೀಗೆ ಎನ್ನಿಸುತ್ತದೆ. ಆದರೆ, ಪ್ರತಿಯೊಬ್ಬರ ನಡವಳಿಕೆಯ ಮೇಲೆಯೂ ಗತದ ನೆನಪೊಂದರ ಛಾಯೆ ಇದ್ದೇ ಇರುತ್ತದೆ. ಅದು ಗೊತ್ತಿಲ್ಲದಾಗ ಮಾತ್ರ ನಾವು ಯಾರನ್ನಾದರೂ ಅಳೆಯಲು ಹೊರಡುವುದು. ಚಂದ್ರಹಾಸನೂ ಹಾಗೆಯೇ..
ಸಮುದ್ಯತಾ ಚಂದ್ರಹಾಸನ ಪತ್ನಿ. ಆ ಪಟ್ಟವಿಲ್ಲದಿದ್ದರೆ ಆಕೆ ಗುರುತಿಸಿಕೊಳ್ಳುವುದು ಅನಾಥೆ ಎಂದೇ.. ಚಂದ್ರಶೇಖರ್ ಹಾಗೂ ಭಾರತಿ ದಂಪತಿಗಳು ಅನಾಥಾಶ್ರಮವೊಂದನ್ನು ಶುರು ಮಾಡಿದಾಗ ಅದರಲ್ಲಿ ಬರುವ ಮೊದಲ ಕೂಸಿಗೆ ಮನೆಯ ವಾತಾವರಣ ಸಿಗಲಿ ಎಂಬ ಭಾವನೆಯಿಂದ ಆಕೆಯನ್ನು ಮನೆಯಲ್ಲಿರಿಸಿಕೊಂಡು ಸಾಕುತ್ತಾರೆ. ಆಕೆ ಅವರನ್ನು ಅತ್ತೆ , ಮಾವ ಎಂದೇ ಕರೆಯುತ್ತಿದ್ದದ್ದು. ಆಕೆಯನ್ನು ಮನೆಯ ಮಗಳಂತೆಯೇ ನೋಡಿಕೊಂಡರೂ ಪ್ರಪಂಚಕ್ಕೆ ಆಕೆಯನ್ನು ತೋರಿಸುವುದು ಅನಾಥೆ ಎಂದೇ.. ಒಂದು ದೃಷ್ಟಿಕೋನದಿಂದ ನೋಡಿದರೆ ಆಕೆಗೆ ಚಿಕ್ಕ ವಯಸ್ಸಿನಿಂದಲೇ ಸತ್ಯ ಹೇಳಿ ಬೆಳೆಸುತ್ತಿದ್ದಾರೆ ಎಂದು ಕಾಣಬಹುದು. ಆದರೆ ಆಕೆ ಅದರಿಂದಾಗಿಯೇ ಎಷ್ಟೋ ಬಾರಿ ಕೀಳಿರಿಮೆಯಿಂದ ಬಳಲಿದ್ದು ಸಹಾ ಉಂಟು.
ಆದರೆ, ಆಕೆಯ ಆ ಕೀಲಿರಿಮೆಯ ಭಾವವನ್ನು ಹೋಗಲಾಡಿಸಲು ಪ್ರಯತ್ನಿಸಿ ಅವಳಲ್ಲಿ ಧೈರ್ಯ ತುಂಬಿದ್ದು ಭಾರತಿ ಹಾಗೂ ಚಂದ್ರಶೇಖರ್ ಮಗ ವಿನೋದ್. ಬಿ.ಕಾಂ ಮುಗಿಸಿದ ಸಮುದ್ಯತಾ ಮುಂದಕ್ಕೆ ಓದಲು ಆಸಕ್ತಿ ತೋರಲಿಲ್ಲ. ಅಷ್ಟರಲ್ಲಾಗಲೇ ವಿನೋದ್ ಅಮೇರಿಕಾಕ್ಕೆ ಹಾರಿದ್ದ. ಆತನಲ್ಲಿ ಸಮುದ್ಯತಾ ಕುರಿತು ಪ್ರೀತಿ ಇದ್ದರೂ ಕೆಲವು ಸಂಧರ್ಭಗಳ ಕೈಗೊಂಬೆಯಾಗಿ ಆತ ಆಕೆಯನ್ನು ಮದುವೆಯಾಗಲು ಸಾಧ್ಯವಾಗುವುದಿಲ್ಲ. ವಿವಾಹಕ್ಕೂ ಋಣಾನುಬಂಧ ಬೇಕಲ್ಲವೇ.. ವಿನೋದ್ ಮನಸ್ಸಿನಲ್ಲಿ ಅಂತಹಾ ಭಾವನೆ ಇದೆ ಎಂದು ಸಮದ್ಯತಾಳಿಗೆ ಅರಿವೇ ಇರುವುದಿಲ್ಲ. ಆಕೆ ಆತನನ್ನು ನೋಡಿದ್ದು ಆರಾಧನಾ ಭಾವದಿಂದ, ಗೌರವಾ ಭಾವದಿಂದ ಮಾತ್ರ.
ಚಂದ್ರಹಾಸ ಸಮುದ್ಯತಾಳನ್ನು ನೋಡಿ ಇಷ್ಟಪಟ್ಟು ಮದುವೆಯಾಗುತ್ತಾನೆ. ಆಕೆ ಅನಾಥೆ ಎಂದು ಹಂಗಿಸಬಾರದು, ಕೀಳಾಗಿ ಕಾಣಬಾರದು ಎಂಬ ಷರತ್ತುಗಳನ್ನು ಹಾಕಿಯೇ ಆಕೆಯನ್ನು ಆತನಿಗೆ ಮದುವೆ ಮಾಡಿಕೊಡುತ್ತಾರೆ ಚಂದ್ರಶೇಖರ್ ಹಾಗೂ ಭಾರತಿ ದಂಪತಿಗಳು. ಆತ ಆಕೆಯನ್ನು ಮದುವೆಯಾಗಿ ಚೆನ್ನಾಗಿಯೇ ನೋಡಿಕೊಳ್ಳುತ್ತಿರುತ್ತಾನೆ. ಒಮ್ಮೊಮ್ಮೆ ಈ ಚೆನ್ನಾಗಿ ಎಂಬ ಪದಕ್ಕೆ ಅರ್ಥವೇ ಇಲ್ಲವೇನೋ ಎನ್ನಿಸುತ್ತದೆ. ಹಲವು ಬಾರಿ ಆಕೆಯನ್ನು ತನಗೆ ಮಾತ್ರ ಸ್ವಂತ ಎಂದು ಭಾವಿಸಿ ಆಕೆಯ ಆಸೆ-ಆಕಾಂಕ್ಷೆಗಳಿಗೆ ಬೆಲೆ ಕೊಡುವುದಿಲ್ಲ. ಆಕೆಗೆ ತನ್ನನ್ನು ಬೆಳೆಸಿದವರ ಋಣ ತೀರಿಸಲು ಅವರು ನಡೆಸುತ್ತಿದ್ದ ಅನಾಥಾಶ್ರಮಕ್ಕೆ ಹೋಗಲು ಆಸೆ. ಆದರೆ, ಚಂದ್ರಹಾಸ ಅದಕ್ಕೆ ಬಿಲ್ ಕುಲ್ ಒಪ್ಪುತ್ತಿರಲಿಲ್ಲ. ಅಷ್ಟೇ ಅಲ್ಲ ಆಕೆಯನ್ನು ಒಂಟಿಯಾಗಿ ಎಲ್ಲಿಗೂ ಕಳುಹಿಸಲಾರ. ಭಾರತಿ ಹಾಗೂ ಚಂದ್ರಶೇಖರ್ ಮನೆಗೂ ಕಳುಹಿಸಲು ಒಪ್ಪನು. ವಿನೋದ್ ಬಂದ ಸಂಧರ್ಭದಲ್ಲಿ ಕೂಡಾ ಮನೆಗೆ ಹೋಗುವುದಿಲ್ಲ. ಆತ ಸಮುದ್ಯತಾಳನ್ನು ಮದುವೆಯಾಗುವಾಗ ಆತನಿಗೆ ಮತ್ತೊಂದು ವಿಚಾರವನ್ನೂ ಹೇಳಿದ್ದರು. ವಿನೋದ್ ನಿಗೆ ಸಮುದ್ಯತಾಳನ್ನು ತಂದುಕೊಳ್ಳುವ ಆಸೆ ಇತ್ತು ಎಂದು.
ವಿನೋದ್ ಹಾಗೂ ಚಂದ್ರಹಾಸನ ಮುಖಾಮುಖಿ ಹೇಗಾಯಿತು ? ಅವರ ಒಡನಾಟ ಹೇಗಿತ್ತು ? ಸಮುದ್ಯತಾ ದಾಂಪತ್ಯದಲ್ಲಿ ಭಾವಗಳ ಹೊಂದಾಣಿಕೆ ಇರಲಿಲ್ಲ. ಮುಂದೆ ಅವರ ದಾಂಪತ್ಯ ಹೇಗಿತ್ತು ? ವಿನೋದ್ ಸಮುದ್ಯತಾಳನ್ನು ಪ್ರೀತಿಸುತ್ತಿದ್ದದ್ದು ಸಮುದ್ಯತಾಳಿಗೆ ತಿಳಿಯಿತೇ ? ಅವಳ ಪ್ರತಿಕ್ರಿಯೆ ಹೇಗಿತ್ತು ? ಅನಾಥಾಶ್ರಮದ ಕತೆ ಏನಾಯಿತು ? ಚಂದ್ರಹಾಸನ ಹಿಂದಿನ ಜೀವನದ ಕತೆ-ವ್ಯಥೆ ಏನು ? ಕೊನೆಗೆ 'ನೂರು ನೆನಪು' ಉಳಿದದ್ದು ಯಾರಿಗೆ ? ತಿಳಿಯಲು ಓದಿ 'ನೂರು ನೆನಪು' ಕಾದಂಬರಿಯನ್ನು.
ರಾಜಗೋಪಾಲ್ ಇಲ್ಲಿ ವಿಧಿಯ ಅಜ್ಞಾನುವರ್ತಿಯಂತೆ ಕಂಡು ಬಂದರೆ, ಶಾಂತಿ ಎಂಬ ಅನಾಥ ಹುಡುಗಿ ಹೀಗೆ ಬಂದು ಹೀಗೆ ಮರೆಯಾಗುತ್ತಾಳೆ. ಅನಾಥಾಶ್ರಮದ ಸುಮನಾಬಾಯಿ ಹಾಗೂ ತಂಗ್ಯವ್ವ ಬೇರೆಯದ್ದೇ ರೀತಿಯ ನಡವಳಿಕೆಗಳಿಂದ ಅನುಮಾನ ಮೂಡಿಸುತ್ತಿರುತ್ತಾರೆ.
ಹೆಚ್ಚು ಪ್ರಾತ್ರಗಳಿಲ್ಲದ ಅಚ್ಚುಕಟ್ಟಾದ ಕತೆ ಇಲ್ಲಿದೆ. ಅದರಲ್ಲಿಯೂ ಅನಾಥ ಮಗುವಿನ ಜೀವನದ ಕತೆಯನ್ನು ಕಟ್ಟಿಕೊಟ್ಟಿದ್ದಾರೆ ಇದರಲ್ಲಿ. ಈ ಕತೆ ಇಂದಿಗೂ ಪ್ರಸ್ತುತ ಎನ್ನಿಸುತ್ತದೆ. ಸಾಯಿಸುತೆ ಮೇಡಂರವರ ಎಲ್ಲಾ ಕಾದಂಬರಿಗಳೂ ಅಷ್ಟೇ ಔಟ್ ಡೇಟೆಡ್ ಎನ್ನಿಸುವುದಿಲ್ಲ. ಅಲ್ಲದೆ, ಜೀವನ ಮೌಲ್ಯಗಳನ್ನು ತುಂಬಿದ ಹೂರಣಗಳೇ.. ಅಂತಹಾ ಅಚ್ಚುಕಟ್ಟಾದ ನಿರೂಪಣೆಯ ಸೊಗಸಾದ ಕಾದಂಬರಿ ಇದು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ