ಸೋಮವಾರ, ಏಪ್ರಿಲ್ 6, 2026

ಪೆರಿನಿ ತಾಂಡವ ( ಪುಸ್ತಕ ಯಾನ - 42)


 ಪುಸ್ತಕದ ಶೀರ್ಷಿಕೆ : ಪೆರಿನಿ ತಾಂಡವ

ಲೇಖಕರು : ಡಾ. ಕೆ. ಎನ್. ಗಣೇಶಯ್ಯ

ಪ್ರಕಾಶಕರು : ಅಂಕಿತ ಪುಸ್ತಕ

ಪ್ರಥಮ ಮುದ್ರಣ : 2016

ತೃತೀಯ ಮುದ್ರಣ : 2020 ( ನಾನು ಓದಿದ್ದು )

ಬೆಲೆ : 130 ರೂ.

ಪುಟಗಳು : 144


ಇದು 3 ಕತೆಗಳುಳ್ಳ ಕಥಾ ಸಂಕಲನ. ಭೋಗ ನಿರ್ಭಾಗ್ಯ, ಗೌರವರಾಧನೆ ಹಾಗೂ ತಾಂಡವ ಶಿಲ್ಪ.


ಮೊದಲಿಗೆ ಈ ಕಥಾ ಸಂಕಲನದ ಶೀರ್ಷಿಕೆಯ ಕುರಿತು ಹೇಳುತ್ತೇನೆ. ಮೂರನೆಯ ಕತೆ ತಾಂಡವ ಶಿಲ್ಪದಲ್ಲಿ ಬಹು ಮುಖ್ಯ ಪಾತ್ರ ವಹಿಸುವುದು ಪೆರಿನಿ ಎಂಬ ಶಾಸ್ತ್ರೀಯ ನೃತ್ಯ ರೂಪ. ಉಳಿದೆರಡು ಕಥೆಗಳಲ್ಲಿ ಬದುಕಿನ ಸುಂದರ ನಡೆಗಳು ಹೇಗೆ ತಾಂಡವ ರೂಪ ಪಡೆಯುತ್ತವೆ ಎನ್ನುವುದಕ್ಕೆ ಉಪಮೇಯವಾಗಬಹುದು ಎಂದು ' ಪೆರಿನಿ ತಾಂಡವ ' ಎನ್ನುವುದು ಇದರ ಶೀರ್ಷಿಕೆಯಾಗಿದೆ.


"ಭೋಗ ನಿರ್ಭಾಗ್ಯ" ಕಥೆಯು ವಿವಾದಿತ ಕಥೆಯೊಂದು ಪತ್ರಿಕೆಯಲ್ಲಿ ಪ್ರಕಟವಾಗುವ ಸಂದರ್ಭದಲ್ಲಿ ಅದರ ಹಿಂದಿನ ಘಟನಾವಳಿಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಬೇರೆಯದ್ದೇ ಆಯಾಮವೊಂದು ತೆರೆದುಕೊಳ್ಳುತ್ತದೆ. ಕಥೆಯೂ ಹಾಗೂ ಕಥೆ ಬರೆದವರ ಬದುಕು ತೀರಾ ವಿಭಿನ್ನವಾಗಿಲ್ಲದೆ ಕಥೆಯ ಮೂಲಕ ನೇರಾನೇರವಾಗಿ ತಮ್ಮ ವಿಷಯವನ್ನು ತೆರೆದಿಡುತ್ತಾರೆ. ಪ್ರಾಣಿ ಪ್ರಪಂಚಕ್ಕೂ ಹಾಗೂ ಮಾನವ ಸಂಕುಲಕ್ಕೂ ವಿಭಿನ್ನ ಎನಿಸುವ ಬಹು ಪತ್ನಿತ್ವ ಹಾಗೂ ಏಕ ಪತ್ನಿತ್ವದ ಕುರಿತ ಕಥೆ ಎನ್ನಿಸಿದರೂ ಕಥೆಯ ಆಳಕ್ಕಿಳಿದರೆ ವಿಭಿನ್ನ ವಿಚಾರಗಳನ್ನು ಒರೆಗೆ ಹಚ್ಚುವಂತೆ ಮಾಡುತ್ತದೆ. ಸೂಕ್ಷ್ಮ ವಿಚಾರದ ವಾಸ್ತವದ ನೆಲೆಗಟ್ಟಿನ ಧಾರ್ಮಿಕ ಹಾಗೂ ವೈಚಾರಿಕ ನೆಲೆಗಟ್ಟಿನ ಕಥೆ ಇದು.


" ಗೌರವಾರಾಧನೆ " ಕಥೆಯಲ್ಲಿ ಗೌರವ, ಆರಾಧನೆ, ಪ್ರೀತಿ, ಪ್ರೇಮಗಳ ಚೌಕಟ್ಟನ್ನು ಒಂದು ಗಡಿಯಲ್ಲಿ ನಿಲ್ಲಿಸಿದರೆ ಅಥವಾ ನಿಲ್ಲಿಸದಿದ್ದರೆ ಉಗ್ರ ರೂಪ ತಳೆಯುವ ಸಾಧ್ಯತೆಯ ಕುರಿತ ಕಥೆ ಇದು. ಮನೋ ವೈಜ್ಞಾನಿಕ ವಿಶ್ಲೇಷಣೆಯಲ್ಲಿ ಸ್ನೇಹ, ಬದ್ಧತೆ, ವ್ಯಾಮೋಹ, ಅನುರಾಗ, ಅನ್ಯೋನ್ಯತೆ, ಪ್ರೇಮ ಸಾಕ್ಷಾತ್ಕಾರಗಳ ಪರಿಧಿಗಳಲ್ಲಿ ಶೂನ್ಯ ಪ್ರೇಮ, ರೋಮಾಂಚಕ ಪ್ರೇಮ, ಸಂಗಾತಿ ಪ್ರೀತಿ, ಬೆಪ್ಪು/ ಮೊದ್ದು ಪ್ರೀತಿಗಳು ವಿಭಿನ್ನವೇ.. ಒಬ್ಬರು ಪ್ರಾಧ್ಯಾಪಕರ ಕುರಿತು ಒಬ್ಬಳು ವಿದ್ಯಾರ್ಥಿನಿ ಹುಟ್ಟಿಸಿಕೊಂಡ ಭಾವನೆಗಳನ್ನು ಅರ್ಥೈಸಿಕೊಳ್ಳುವಿಕೆಯಲ್ಲಿ ವಿಫಲವಾದಾಗ ಉಂಟಾಗುವ ಪರಿಣಾಮಗಳ ಸೂಚಕವಾಗಿ ಬಿಂಬಿತವಾಗಿದೆ ಈ ಕಥೆ.


" ತಾಂಡವ ಶಿಲ್ಪ " ಇತಿಹಾಸದ ನೆಲೆಗಟ್ಟಿನಲ್ಲಿ ಬರೆದಿರುವ ಕಥೆ. ಪೆರಿನಿ ಎನ್ನುವುದು ಕ್ರಿ.ಶ. ಹನ್ನೆರಡನೆಯ ಶತಮಾನದಲ್ಲಿ ದಕ್ಷಿಣ ಭಾರತದಲ್ಲಿ ರೂಢಿಯಲ್ಲಿದ್ದ ಒಂದು ಶಾಸ್ತ್ರೀಯ ನೃತ್ಯರೂಪ. ಪುರುಷ- ಪೌರುಷವನ್ನು ಸೌಂದರ್ಯದಲ್ಲಿ ಸೆರೆ ಹಿಡಿಯುವುದು ಈ ನೃತ್ಯದ ವಿಶೇಷತೆ. ಕಾಕತೀಯರ ಕಾಲದಲ್ಲಿ ನಡೆದ ವಾರಂಗಲ್ ನಿಂದ 77 ಕಿ.ಮೀ ದೂರದಲ್ಲಿರುವ ಪಾಲಂಪೇಟೆ ಎಂಬಲ್ಲಿ ಕ್ರಿ.ಶ. 1231 ರಲ್ಲಿ ನಿರ್ಮಿಸಲಾದ ಶಿವ ದೇವಾಲಯದ ಸುತ್ತ ಭಿತ್ತಿಯಲ್ಲಿ, ಶಿಲ್ಪ ರೂಪದಲ್ಲಿ ಬಿಡಿಸಲಾಗಿರುವ ಈ ನೃತ್ಯದ ಭಂಗಿಗಳ ಹಿಂದೆ ಒಂದು ಲೋಕಕ್ಕೆ ಮರೆಯಾಗಿರುವ ಕಥೆ ಇದೆ. ಈ ದೇವಾಲಯದ ನಿರ್ಮಾಣಕ್ಕೆ ತನ್ನ ಬದುಕಿನ ಹತ್ತು ವರ್ಷಗಳನ್ನು ವ್ಯಯ ಮಾಡಿದ ಶಿಲ್ಪಿಯೊಬ್ಬ ಅದರ ಹಿಂದಿನ ಸತ್ಯಗಳನ್ನು ತಿಳಿದುಕೊಳ್ಳದೆ ತನ್ನ ಬದುಕನ್ನು ದಾರುಣವಾಗಿ ಅಂತ್ಯ ಮಾಡಿಕೊಂಡ ಕಥೆಯನ್ನು ಓದಿಯೇ ತಿಳಿಯಬೇಕು.


~ ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ