ಪುಸ್ತಕದ ಹೆಸರು : ಚಂದ್ರಗಿರಿ ತೀರದಲ್ಲಿ
ಲೇಖಕಿ : ನಾಡೋಜ ಡಾ. ಸಾರಾ ಅಬೂಬಕ್ಕರ್
ಪ್ರಕಾಶಕರು : ಚಂದ್ರಗಿರಿ ಪ್ರಕಾಶನ
ಮೊದಲ ಮುದ್ರಣ :1984
12 ನೇ ಮುದ್ರಣ : 2017
ಬೆಲೆ : 120 ರೂಪಾಯಿ
ನಾನು ಪಿ.ಯು.ಸಿ ಯಲ್ಲಿದ್ದಾಗ ಕನ್ನಡ ಪಠ್ಯದಲ್ಲಿ 'ನಿಯಮ ನಿಯಮಗಳ ನಡುವೆ..' ಎನ್ನುವ ಪಾಠವಿತ್ತು. ಆಗ, ಹೆಚ್ಚಿನ ಓದಿಗಾಗಿ.. ಪೂರಕ ಪುಸ್ತಕವಾಗಿ ನಮಗೆ ಸೂಚಿಸಿದ್ದ ಪುಸ್ತಕ "ಚಂದ್ರಗಿರಿ ತೀರದಲ್ಲಿ". ಆಗಲೇ ನನ್ನ ಕುತೂಹಲಕ್ಕೆಂದು ನಮ್ಮ ಕನ್ನಡ ಲೆಕ್ಚರರ್ ಧರ್ಮೇಂದ್ರ ಸರ್ ಬಳಿ ಪುಸ್ತಕ ಎರವಲು ಪಡೆದು ಓದಿದ್ದೆನಾದರೂ ಆ ದಿನಗಳಲ್ಲಿ ಈ ಪುಸ್ತಕ ಅಷ್ಟು ಅರ್ಥವಾಗಿರಲಿಲ್ಲ. ಬಹುಶಃ, ಕೆಲವು ಪುಸ್ತಕಗಳ ಓದಿಗೆ ಹಾಗೂ ಆಳಕ್ಕಿಳಿಯಲು ಸೂಕ್ತ ಸಮಯ ಬರಬೇಕು. ಮತ್ತೆ ಈ ಪುಸ್ತಕ ಓದಿದ್ದು 2017 ರಲ್ಲಿ.. ಆಗ ಫೇಸ್ಬುಕ್ ನಲ್ಲಿ ಟ್ರೆಂಡ್ ಗೆ ಬಂದಿದ್ದ 7 ದಿನ 7 ಪುಸ್ತಕ ಅಭಿಯಾನಕ್ಕೆ. ಆಗ ಕೊಂಡ ಪುಸ್ತಕ.. ಓದಿದಾಗ ಬೇರೆಯದ್ದೇ ಅರ್ಥ, ಆಳಕ್ಕಿಳಿದು ಓದಿದಷ್ಟು ತಳಮಳವಾಯಿತು. ನಾನು ಓದುವಾಗಲೇ ಆ ಭಾವ ಹುಟ್ಟಿದ್ದರೆ ಅದನ್ನು ಅನುಭವಿಸಿದ, ಅನುಭವಿಸುತ್ತಿರುವ ಹೆಣ್ಣುಮಕ್ಕಳ ಪಾಡೇನು..??
ಇದು ನಾಡೋಜ ಡಾ. ಸಾರಾ ಅಬೂಬಕ್ಕರ್ ಅವರು ಬರೆದಿರುವ ಪುಸ್ತಕ. ಇದು ಮುಸಲ್ಮಾನ ಹೆಣ್ಣು ಮಕ್ಕಳ ಬದುಕಿನ ಕುರಿತ ಪುಸ್ತಕ. ಲಂಕೇಶ್ ಪತ್ರಿಕೆಗಾಗಿ ಲಂಕೇಶರು ಸಾರಾ ಅಬೂಬಕ್ಕರ್ ಅವರನ್ನು "ನಿಮ್ಮ ಜನಾಂಗದ ವಿಷಯ ಒಂದು ಸಣ್ಣ ಕತೆ ಅಥವಾ ಚಿಕ್ಕ ಅಧ್ಯಾಯಗಳ ಒಂದು ಪುಟ್ಟ ಕಾದಂಬರಿ ಬರೆದರೆ ನಮಗೆ ಅನುಕೂಲವಾಗುತ್ತದೆ." ಎಂದು ಬರೆದಾಗ ಬರೆದ ಕಾದಂಬರಿ ಇದು. ಈ ಕತೆ ತಮಿಳಿನಲ್ಲಿ ಚಲನ ಚಿತ್ರವಾಗಿದೆ. ಕನ್ನಡದಲ್ಲಿ ರಂಗ ಪ್ರಯೋಗಕ್ಕೂ ಒಳಗಾಗಿದೆ. ಮಲಯಾಳಂ,ತಮಿಳು, ತೆಲುಗು, ಓರಿಯಾ, ಮರಾಠಿ, ಹಿಂದಿ ಭಾಷೆಗಳಿಗೆ ಅನುವಾದಗೊಂಡಿದ್ದು.. ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಚಂದ್ರಗಿರಿ ನದಿ ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಪಶ್ಚಿಮಾಭಿಮುಖವಾಗಿ ಹರಿದು ಅರಬ್ಬಿ ಸಮುದ್ರವನ್ನು ಸೇರುತ್ತದೆ. ಕಡಲನ್ನು ಸೇರುವುದಕ್ಕೆ ಮೊದಲು ಒಂದು ಕಡೆ ಇದು ಪಾತ್ರವನ್ನು ಬದಲಿಸಿ ಉತ್ತರದಿಂದ ದಕ್ಷಿಣಕ್ಕೆ ಒಂದೆರಡು ಮೈಲಿ ಹರಿದು ಪುನಃ ಪಶ್ಚಿಮಕ್ಕೆ ತಿರುಗಿ ಮತ್ತೂ ಒಂದೆರಡು ಮೈಲಿ ಹರಿದು ಕಡಲನ್ನು ಸೇರುತ್ತದೆ. ಈ ಉತ್ತರ ದಕ್ಷಿಣವಾಗಿ ಹರಿಯುವ ಜಾಗದ ಪೂರ್ವಕ್ಕಿರುವ ಊರು ಕಿಳಿಯೂರು. ಪಶ್ಚಿಮ ಭಾಗದಲ್ಲಿರುವುದು ಬಾಗೋಡು ಗ್ರಾಮ.
ಮಹಮ್ಮದ್ ಖಾನರ ಮನೆ ಇರುವುದು ಬಾಗೋಡಿನಲ್ಲಿ. ಅವರ ಪತ್ನಿ ಫಾತಿಮ್ಮ. ಈ ದಂಪತಿಗಳಿಗೆ ಇಬ್ಬರು ಮಕ್ಕಳು. ನಾದಿರಾ ಹಾಗೂ ಜಮೀಲಾ. ಮಹಮ್ಮದ್ ಖಾನ್ ಸ್ವಭಾವ ತೀರಾ ಒರಟು, ಮುಂಗೋಪಿ ಕೂಡಾ. ಒಂದು ರೀತಿಯ ಸರ್ವಾಧಿಕಾರಿ ಮನೋಭಾವ. ಹೀಗಾಗಿ ಗೆಳೆಯರು ಕಡಿಮೆ. ಕಷ್ಟಪಟ್ಟು ಕೆಲಸ ಮಾಡಿದವರೂ ಅಲ್ಲ. ಎಲ್ಲಾ ಕೆಲಸ ಫಾತಿಮ್ಮರದ್ದೇ.. ಮಗಳು ಜಮೀಲ ಬೀಡಿ ಕಟ್ಟುವ ಕೆಲಸ ಮಾಡುತ್ತಿದ್ದಳು. ನಾದಿರಾಳಿಗೆ ಮದುವೆಯಾಗಿತ್ತು. ಬಾಗೋಡು ಗ್ರಾಮದಲ್ಲಿ ಇಳಿದು ಉತ್ತರಕ್ಕೆ ಒಂದೆರಡು ಮೈಲಿ ನಡೆದರೆ ಅಲ್ಲಿ ಮಣಿಪುರ. ಅಲ್ಲಿಂದ ಮೂರು ಮೈಲಿ ಕಾವಳ್ಳಿ. ಕಾವಳ್ಳಿಯ ರಶೀದ್ ನಾದಿರಾಳ ಗಂಡ. ಅವರಿಗೆ ಒಬ್ಬ ಗಂಡು ಮಗ ಕೂಡಾ ಇದ್ದನು. ರಶೀದ್ ಗೆ ಇದ್ದದ್ದು ಅಮ್ಮ ಮಾತ್ರ. ರಶೀದ್ ಮಣಿಪುರದಲ್ಲಿ ಒಂದು ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಾ ಕಾವಳ್ಳಿಯ ತೋಟದಲ್ಲಿ ಬಂದ ಆದಾಯದಿಂದಲೂ ನೆಮ್ಮದಿಯ ಜೀವನ ನಡೆಸುತ್ತಿದ್ದರು.
ಫಾತಿಮ್ಮಳಿಗೆ ಮದುವೆಯಾದಾಗ 11 ವರ್ಷ. ಮಹಮ್ಮದ್ ಖಾನರಿಗೆ 28 ವರ್ಷ ತುಂಬಿತ್ತು. ಫಾತಿಮ್ಮಳ ದಾಂಪತ್ಯ ಶುರುವಾದದ್ದು ಒರಟಾಗಿಯೇ.. ತುಳಿದದ್ದು ಕಲ್ಲು ಮುಳ್ಳಿನ ಹಾದಿಯೇ..
ಆದರೆ, ನಾದಿರಾಳ ಬದುಕು ಇದ್ದುದರಲ್ಲೇ ನೆಮ್ಮದಿಯಾದ ಬದುಕು. ಅವಳಿಗೆ ಮದುವೆಯಾದಾಗ 14 ವರ್ಷ.. ರಶೀದ್ ಗೆ 23 ವರ್ಷ ದಾಟಿತ್ತು. ಸಂಯಮ, ತಿಳುವಳಿಕೆಯಿಂದ ತನ್ನ ದಾಂಪತ್ಯವನ್ನು ಸುಂದರವಾಗಿ, ಸರಾಗವಾಗಿ, ಪ್ರೀತಿ-ಅನ್ಯೋನ್ಯತೆಯ ಸಾಗರವನ್ನಾಗಿ ರೂಪಿಸಿಕೊಂಡಿದ್ದ. ನಾದಿರಾ ಅವನ ಮನದಿಚ್ಛೆ ಅರಿತು ನಡೆವ ಪತ್ನಿ. ಅವಳದ್ದು ಹಾಗೂ ಅವಳ ಅತ್ತೆಯದ್ದೂ ಮಧುರ ಬಾಂಧವ್ಯ.
ಎರಡು ವರ್ಷದ ನಂತರ ನಡೆದ ಘಟನೆಗಳು ಎಲ್ಲರ ಬದುಕಿನ ಗತಿಯನ್ನೇ ಬದಲಾಯಿಸಿಬಿಟ್ಟವು.
ಕಿಳಿಯೂರಿನ ಗಂಡೇ ಜಮೀಲಳಿಗೆ ನಿಶ್ಚಯವಾದಾಗ ಆ ಸಂಬಂಧವನ್ನು ಕಳೆದುಕೊಳ್ಳಲು ಇಚ್ಛಿಸದ ಮಹಮ್ಮದ್ ಖಾನ್ ಹಣ ಹೊಂದಿಸಲು ತೊಡಗುತ್ತಾನೆ. ರಶೀದ್ ಬಳಿ ಹೋಗಿ ಕೇಳಿದಾಗ ಅವನೂ ಮಾತಿನ ಭರದಲ್ಲಿ ಇಲ್ಲವೆಂದು ಗಟ್ಟಿ ಮಾತನಾಡುತ್ತಾನೆ. ಮಾವ ಅಳಿಯನಿಗೆ ಅವಮಾನ ಮಾಡಿ ಅಲ್ಲಿಂದ ಹೊರಡುತ್ತಾನೆ. ಅಷ್ಟೇ ಅಲ್ಲದೇ, ಮಗಳನ್ನು ತನ್ನ ಮನೆಗೆ ಕರೆ ತಂದರೆ ಅವಳನ್ನು ಕರೆದುಕೊಂಡು ಹೋಗಲು ಬರುವಾಗ ಹಣ ಕೊಡುತ್ತಾನೆ ಎಂದು ಕುತಂತ್ರದಿಂದ ತನ್ನ ಮಗಳು ಹಾಗೂ ಮೊಮ್ಮಗುವನ್ನು ಕರೆದೊಯ್ಯುತ್ತಾನೆ. ನಾದಿರಾ ಅಪ್ಪನನ್ನು ನಂಬಿ ಹೊರಡುತ್ತಾಳೆ.. ಆತನ ಮೋಸದ ಅರಿವಿಲ್ಲದೆ.. ಇದಾದ ನಂತರ ಜಮೀಲ ಕೂಡಾ ಗಂಡನ ಮನೆ ಸೇರುತ್ತಾಳೆ.. ತೋಟ ಮಾರಿ ಹೇಗೋ ಹಣ ಹೊಂದಿಸುತ್ತಾರೆ..
ಆದರೆ, ಮಾವ ಹಾಗೂ ಅಳಿಯ ಇಬ್ಬರ ಶೀತಲ ಸಂಘರ್ಷ ಬಲಿ ತೆಗೆದುಕೊಂಡದ್ದು ನಾದಿರಾಳನ್ನು. ಆತ ಒಮ್ಮೆ ಆಚೆ ದಂಡೆಯಲ್ಲಿ ಕಾಯುತ್ತಿದ್ದಾಗ ಈಕೆ ಒಬ್ಬಳೇ ನದಿ ದಾಟುವ ಧೈರ್ಯ ಇಲ್ಲದೆ ಉಳಿದು ಹೋಗಿದ್ದು ಆತನಿಗೆ ಸಿಟ್ಟು ತರಿಸುತ್ತದೆ. ಅಪ್ಪನ ಅನುಮತಿ ಇಲ್ಲದೆ.. ಅಪ್ಪ ಅಥವಾ ಗಂಡನಿಲ್ಲದೆ ನದಿ ದಾಟಬೇಕೆಂದರೆ ಹೇಗೆ..?? ನಿಯಮಗಳನ್ನು ಮುರಿಯಲಾಗದೇ ನರಳುತ್ತಾಳೆ. ನಂತರ ರಶೀದ್ ತಾಯಿ ಬಂದು ತಮ್ಮ ಮೊಮ್ಮಗುವನ್ನು ಯಾರಿಗೂ ಗೊತ್ತಾಗದಂತೆ ಕರೆದೊಯ್ಯುತ್ತಾರೆ. ಆಗಲಾದರೂ, ಧೈರ್ಯ ಮಾಡಿ ನಾದಿರಾ ಬರುವಳೇನೋ ಎಂದು.. ನಾದಿರಾ ಧೈರ್ಯವಂತೆಯಾಗಿದ್ದರೆ ಅದರ ಚಿತ್ರಣವೇ ಬದಲಾಗುತ್ತಿತ್ತು. ಆದರೆ, ಹಾಗಾಗಲಿಲ್ಲ.
ಗಂಡ, ಅತ್ತೆ ಮಾಡಿದ ಮೋಸದಿಂದ ಕಂಗೆಟ್ಟ ನಾದಿರಾ ಅಕ್ಷರಶಃ ಜೀವಚ್ಛವವಾಗುತ್ತಾಳೆ. ಖಾನ್ ಮೋಸದಿಂದ ನಾದಿರಾ ತನಗೆ ತಲಾಖ್ ಬೇಕೆಂದು ಹೇಳಿದ್ದಾಳೆ ಎಂದು ಹೇಳಿ ತ್ರಿವಳಿ ತಲಾಖ್ ಕೊಡುತ್ತಾನೆ ರಶೀದ್. ಅವನೂ ಕೋಪದ ಕೈಗೆ ಬುದ್ದಿ ಕೊಟ್ಟು ತಲಾಖ್ ನೀಡುತ್ತಾನೆ.
ಮುಸಲ್ಮಾನರಲ್ಲಿ ತಲಾಖ್ ಎಂಬ ಶಬ್ದವನ್ನು ಮೂರು ಬಾರಿ ಹೇಳಿದರೆ ವಿಚ್ಛೇದನವಾದಂತೆ. ಆದರೆ, ಆ ಮೂರು ಶಬ್ಧ ಒಂದೊಂದು ತಿಂಗಳ ಅವಧಿಯ ಅಂತರದಲ್ಲಿ ಹೇಳಬೇಕು. ಹಾಗೆ ಹೇಳುವವರೆಗೂ ಆಕೆ ಗಂಡನ ಮನೆಯಲ್ಲೇ ಇರಬೇಕು. ಪುನರ್ಮೈತ್ರಿ ಸಾಧ್ಯವಾಗದಿದ್ದರೆ ಮಾತ್ರ ಮೂರನೇ ತಲಾಖ್ ಉಚ್ಚರಿಸಿ ಶಾಶ್ವತವಾಗಿ ಸಂಬಂಧ ಕಡಿದುಕೊಳ್ಳಬಹುದು. ಆದರೆ, ಇತ್ತೀಚೆಗೆ ಮೂರು ತಲಾಖ್ ಅನ್ನು ಒಟ್ಟಿಗೆ ಹೇಳಿಬಿಡುತ್ತಾರೆ. ನಿಯಮಬದ್ಧವಾಗಿ ಹೇಳದೆ ಹೀಗೆ ಮಾಡಿ ಅದರ ಅರ್ಥವನ್ನೇ ಬೇರೆ ಮಾಡಿದ್ದಾರೆ.
ನಾದಿರಾ ಎರಡನೇ ಮದುವೆಗೆ ಒಪ್ಪಲಿಲ್ಲವಾದಾಗ, ಖಾನರ ಆರೋಗ್ಯ ಹದಗೆಟ್ಟಾಗ ನಾದಿರಾ ಆಸೆಯಂತೆ ಮತ್ತೆ ರಶೀದ್ ಜೊತೆ ವಿವಾಹಕ್ಕೆ ಒಪ್ಪುತ್ತಾರೆ. ಅತ್ತ, ಆತನಿಗೂ ಇದರಲ್ಲಿ ನಾದಿರಾ ತಪ್ಪಿಲ್ಲ ಎಂದು ಅರಿವಾಗುತ್ತದೆ. ಅವರಿಬ್ಬರ ಮರುಮದುವೆಗೆ ಈಗ ಧರ್ಮದ ನಿಯಮ ಒಂದರ ಅಡ್ಡಿ.
ಅವರಿಬ್ಬರೂ ಮರು ವಿವಾಹವಾಗಬೇಕಿದ್ದಲ್ಲಿ.. ಹೆಣ್ಣು ಮತ್ತೊಂದು ಮದುವೆಯಾಗಿ ಕಡೇಪಕ್ಷ ಒಂದು ರಾತ್ರಿಯ ಮದುವೆ, ಆತನೊಡನೆ ರಾತ್ರಿ ಕಳೆದು ಮೂರು ತಿಂಗಳ ನಂತರ ಆತನಿಂದ ಯಾವ ಗರ್ಭವನ್ನೂ ಧರಿಸಿಲ್ಲವೆಂದರೆ, ಆತ 'ತಲಾಖ್' ನೀಡಿದರೆ ಮಾತ್ರ ಮೊದಲ ಪತಿಯನ್ನು ವಿವಾಹವಾಗಬಹುದು.
ಈ ನಿಯಮವಿರದಿದ್ದರೆ.. ತಲಾಖ್ ಹಾಗೂ ಮರು ವಿವಾಹ ಆಟದಂತಾಗಿ ಹೋಗುತ್ತಿತ್ತು ಎನ್ನುವುದಕ್ಕಾಗಿ ಈ ನಿಯಮ.
ರಶೀದ್ ಹಾಗೂ ಆತನ ತಾಯಿ ಇದಕ್ಕೆ ಒಪ್ಪಿದರೇ..?
ನಾದಿರಾ ಇದನ್ನು ಒಪ್ಪಿದಳೇ..??
ಹಾಗೆ, ಒಪ್ಪಿದರೂ ಆಕೆಯ ಮನಸ್ಸು ಇದನ್ನು ಒಪ್ಪುವುದೇ..?
ಅಥವಾ ಆಕೆ ಮುದುಕ ಸೆಲಿಮ್ ನನ್ನೇ ಮದುವೆಯಾದಳೇ..??
ಜಮೀಲಳ ವೈವಾಹಿಕ ಬದುಕಾದರೂ ಸುಖಮಯವಾಗಿತ್ತಾ..??
ಚಂದ್ರಗಿರಿ ದಾಟಲು ನಿಯಮವಿತ್ತು. ಈ ನಿಯಮವನ್ನು ಕಿತ್ತೆಸೆದು ಒಂದಾದರೇ ನಾದಿರಾ ಹಾಗೂ ರಶೀದ್.
ಇವೆಲ್ಲಕ್ಕೂ ಉತ್ತರ ಬೇಕಾದಲ್ಲಿ ಓದಿ 'ಚಂದ್ರಗಿರಿ ತೀರದಲ್ಲಿ'
ನಾನು ಈ ಕಾದಂಬರಿಯ ಸ್ಥೂಲ ಪರಿಚಯ ಮಾಡಿಕೊಟ್ಟಿದ್ದೇನಷ್ಟೇ.. ಅದರ ಪ್ರತಿ ಅಕ್ಷರವೂ ಓದಿ ತಿಳಿದರಷ್ಟೇ ಈ ವ್ಯಥೆ ಅರಿವಾಗುವುದು. ರಶೀದ್ ನ ವ್ಯಕ್ತಿತ್ವ ವಿಭಿನ್ನವಾಗಿ ಮನಸೆಳೆಯುತ್ತದೆ. ಜೈನಾಬಿ, ಮೀನು ಮಾರುವ ಪಾರು, ಮೌಲ್ವಿಗಳು, ನಿಯಮಗಳು, ಕಾದರ್ ಹೀಗೆ ಎಲ್ಲದರ ಸಂಪೂರ್ಣ ಚಿತ್ರಣವಿದೆ ಇಲ್ಲಿ. ಮುಖ್ಯವಾಗಿ ಚಂದ್ರಗಿರಿಯದ್ದೂ..
ನದಿ ಮೂಲ ಹುಡುಕಬಾರದಂತೆ.. ನಾವು ಹುಡುಕಿ ಹೋಗದಿದ್ದರೂ ಸಿಕ್ಕರೆ..??
ಈ ಕತೆಯ ನಂತರ 'ಮುಸ್ಲಿಮ್ ಹುಡುಗಿ ಅಕ್ಷರ ಕಲಿತದ್ದು' ಎಂಬ ಅಧ್ಯಾಯವಿದೆ. ಒಂದರ್ಥದಲ್ಲಿ ಸೂಕ್ಷ್ಮವಾದ ಲೇಖಕಿಯ ಆತ್ಮಕಥನ. ಅಲ್ಲಿ ತಿಳಿಯುತ್ತದೆ ಈ ಚಂದ್ರಗಿರಿ ತೀರದಲ್ಲಿ ಕತೆ ಹುಟ್ಟಿದ ಬಗ್ಗೆ.. ಈ ನಿಯಮಗಳನ್ನು ಮೀರಲಾಗದ ಬಗ್ಗೆ..
ಅವರೇ ಹೇಳುವಂತೆ 2017 ರಲ್ಲಿ ಈ ಕಾದಂಬರಿ 11 ನೇ ಮುದ್ರಣ ಕಂಡಿದ್ದು.. ಈ ಕಾದಂಬರಿ ಬರೆದದ್ದು ಅದಕ್ಕೂ 37 ವರ್ಷ ಮುಂಚೆ. ಆಗಿಗೂ, ಈಗಿಗೂ ಮುಸ್ಲಿಂ ಮಹಿಳೆಯರ ಬದುಕಲ್ಲಿ ಹೆಚ್ಚಿನ ಬದಲಾವಣೆಗಳೇನೂ ಆಗಿಲ್ಲವೆನ್ನುತ್ತಾರೆ. ನಾನು ಕಂಡಂತೆ ಹಳ್ಳಿಗಳಲ್ಲಿ ಇಂದಿಗೂ ಪರಿಸ್ಥಿತಿ ಹೆಚ್ಚೇನೂ ಬದಲಾಗಿಲ್ಲ. ಇನ್ನಾದರೂ ಈ ಪರಿಸ್ಥಿತಿ ಬದಲಾಗಲಿ.
ಆದರೂ, ಚಂದ್ರಗಿರಿ ತೀರದಲ್ಲಿ ಓದಿದ ನಂತರ ಒಂದು ರೀತಿಯ ವಿಷಾಧ ಹೆಪ್ಪುಗಟ್ಟಿದ್ದಂತೂ ಸತ್ಯ.
ನಾನು ಸ್ಥೂಲವಾಗಿ ಕತೆ ವಿವರಿಸುವಾಗ ನಮ್ಮ ಆಡುಭಾಷೆಯ ಶಬ್ದಗಳನ್ನು ಬಳಸಿದ್ದೇನೆ. ಆದರೆ, ಕತೆಯಲ್ಲಿ ಮುಸಲ್ಮಾನರು ಬಳಸುವ ಶಬ್ಧಗಳೇ ಇವೆ. ಉದಾ: ನಿಖಾಹ್ ( ನಾನು ಮದುವೆ ಎಂದು ಬಳಸಿದ್ದೇನೆ ). ಸಂಪೂರ್ಣ ಕಾವಳ್ಳಿ ಹಾಗೂ ಕಿಳಿಯೂರು ಆವರಿಸಿಕೊಂಡು ಬಿಡುತ್ತದೆ. ಮತ್ತು ನಾದಿರಾ ಮನಃಪಟಲದಲ್ಲಿ ಉಳಿದು ಹೋಗುತ್ತಾಳೆ.
ಧೈರ್ಯದಿಂದ ಸಾಮಾಜಿಕ ಕಳಕಳಿಗಾಗಿ ಆಗಲೇ ಧೈರ್ಯದಿಂದ ಪುಸ್ತಕ ಬರೆದು ತಮ್ಮ ಜನಾಂಗದಲ್ಲಿ ಮಹಿಳೆಯರಿಗೆ ಆಗುತ್ತಿರುವ ಅನ್ಯಾಯವನ್ನು ಲೇಖಕಿ ತೆರೆದಿಟ್ಟ ಪರಿ ಅನನ್ಯ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ