ಪುಸ್ತಕದ ಹೆಸರು : ಹರಿದಾಸರ ಜೋಗುಳ ಪದಗಳು
ಸಂಪಾದಕರು : ಡಾ. ಕೆ ರಾಘವೇಂದ್ರ ಆರ್ ಪೈ
ಪುಟಗಳು : 80
ಹರಿದಾಸರು ಎಂದರು ಯಾರು ಎಂಬ ಸಂದೇಹಕ್ಕೆ ಹೀಗೆ ಉತ್ತರಿಸಬಹುದೋ ಏನೋ.. ಹರಿಯನ್ನು ಯಾರು ದಾಸ್ಯ ಭಾವದಿಂದ ಭಜಿಸುತ್ತಾ, ಪೂಜಿಸುತ್ತಾ, ಹರಿಗೆ ಸಮರ್ಪಿಸಿಕೊಳ್ಳುತ್ತಾರೋ ಅವರನ್ನೇ ಹರಿದಾಸರೆನ್ನುವರು. ಹಾಗೆ ನೋಡಿದರೆ ಲಕ್ಷ್ಮಿ ದೇವಿ ಈ ದಿಶೆಯಲ್ಲಿ ಅತ್ಯಂತ ಅದೃಷ್ಟಶಾಲಿ ಎನ್ನಬಹುದು. ಆಕೆಯ ಸೇವೆಯನ್ನು ಕುರಿತು ಪುರಂದರದಾಸರು ತಮ್ಮ ಕೀರ್ತನೆಯಲ್ಲಿ ಹೀಗೆ ಸೊಗಸಾಗಿ ವರ್ಣಿಸಿದ್ದಾರೆ.
ಏನು ಧನ್ಯಳೋ ಲಕುಮಿ ಎಂಥ ಮಾನ್ಯಳೋ
ಸಾನುರಾಗದಿಂದ ಹರಿಯ ತಾನೆ ಸೇವೆ ಮಾಡುತಿಹಳೋ |
ಛತ್ರ ಚಾಮರ ವ್ಯದನ ಪರ್ಯಂತ ಪಾತ್ರರೂಪದಲ್ಲಿ ನಿಂತು
ಚಿತ್ರ ಚರಿತ್ರನಾದ ಹರಿಯ ನಿತ್ಯ ಸೇವೆ ಮಾಡುತಿಹಳೋ
ಕೃತಯುಗದಲ್ಲಿ ಧ್ಯಾನ, ತ್ರೇತಾಯುಗದಲ್ಲಿ ಯಜ್ಞ ಯಾಗಗಳು, ದ್ವಾಪರಯುಗದಲ್ಲಿ ಅರ್ಚನೆ ಮತ್ತು ಕಲಿಯುಗದಲ್ಲಿ ಕೀರ್ತನೆಗಳಿಂದ ಮುಕ್ತಿ ಸಿಗುತ್ತದೆ ಎಂದು ಪುರಂದರದಾಸರು ತಮ್ಮ ಒಂದು ಕೀರ್ತನೆಯಲ್ಲಿ ಉಲ್ಲೇಖಿಸಿದ್ದಾರೆ.
ಭಕ್ತಿ ಬೇಕು, ವಿರಕ್ತಿ ಬೇಕು
ಸರ್ವ ಶಕ್ತಿ ಬೇಕು
ಮುಂದೆ ಮುಕ್ತಿಯ ಬಯಸುವವಗೆ ಎನ್ನುತ್ತಾ ಹೇಳಿದ್ದಾರೆ ಶ್ರೀಪಾದರಾಯರು.
ಮುಕ್ತಿ ಪಡೆವುದಕೆ ಪುರಂದರ ವಿಠಲನ ಭಕ್ತನಾಗುವುದೊಂದೇ ಸಾಕ್ಷಿ
ಭಕ್ತಿಯಲಿ ಪುರಂದರ ವಿಠಲನ ನೆನೆದರೆ ಮುಕ್ತಿ ಸಾಧನ
ಎನ್ನುತ್ತಾ ಭಕ್ತಿಯ ಪ್ರಾಮುಖ್ಯತೆಯನ್ನು ಮತ್ತಷ್ಟು ಸರಳವಾಗಿ ತಲುಪಿಸುತ್ತಾರೆ ಪುರಂದರದಾಸರು.
ಶ್ರವಣಮ್ ಕೀರ್ತನಮ್ ವಿಷ್ಣೋ ಸ್ಮರಣಂ ಪಾದಸೇವನಂ
ಅರ್ಚನಮ್ ವಂದನಂ ದಾಸ್ಯಮ್ ಸಖ್ಯಮ್ ಆತ್ಮನಿವೇದನಂ
ಎನ್ನುತ್ತಾ ನವವಿಧ ಭಕ್ತಿಗಳ ಕುರಿತು ವಿಶ್ಲೇಷಣೆ ಮಾಡಿರುವವರು ಪ್ರಹ್ಲಾದರು.
ಭಕ್ತಿಯ ಈ ವಿಧಗಳು ಹರಿನಾಮವನ್ನು ಭಜಿಸಲು ಪೂರಕವಾಗುತ್ತವೆ. ಹೆಚ್ಚಿನ ದೇವಾಧಿದೇವತೆಗಳಿಗೆ ಬೆಳಿಗ್ಗೆ ಸುಪ್ರಭಾತ ಹಾಡುವುದು ಹೇಗೆ ಪರಿಪಾಠವೋ ಜೋಗುಳ ಹಾಡುವುದು ಸಹಾ ನಮ್ಮ ಹರಿದಾಸರಿಗೆ ಪ್ರಿಯ ಪರಿಪಾಠ.
ಏಳು ನಾರಾಯಣ ಏಳು ಲಕ್ಷ್ಮಿ ರಮಣ
ಏಳು ಗಿರಿಯೊಡೆಯ ವೆಂಕಟೇಶ
ಏಳಯ್ಯಾ ಬೆಳಗಾಯಿತು ಎಂದು ಸುಪ್ರಭಾತ ಹಾಡುವಂತೆ ವಿಧವಿಧವಾಗಿ ಜೋಗುಳ ಹಾಡುತ್ತಾರೆ.
ಇಲ್ಲಿ ಹರಿಯ ಅವತಾರವಾದ ಕೃಷ್ಣನ ರೂಪ ಹೆಚ್ಚು ಪ್ರಿಯ. ಅದರಲ್ಲೂ ಬಾಲಕೃಷ್ಣ ಅತಿ ಹೆಚ್ಚು ಪ್ರಿಯ. ಆತನ ಮುದ್ದು ಬಾಲಲೀಲೆಗಳನ್ನು ಕಂಡು ಆತನಿಗಾಗಿ ಬರೆದ ಜೋಗುಳದ ಹಾಡುಗಳು, ಯಶೋದೆ ಲಾಲಿ ಹಾಡುವಂತೆ, ಗೋಪಿಕೆಯರು ಆಟನಿಗಾಗಿ ಹಾಡುವಂತಹಾ ಜೋಗುಳಗಳು, ತಾವೇ ಲಾಲಿ ಹಾಡುವಂತೆ, ದಶಾವತಾರಗಳನ್ನೂ ಸೇರಿಸಿ ಹಾಡುವ ಜೋಗುಳಗಳು ಇಲ್ಲಿವೆ. ಜಗದ್ದೋದ್ದಾರ ಮೈ ಮರೆತು ನಿದ್ರಿಸುವುದುಂಟೇ.. ಆತನನ್ನು ಮಲಗಿಸಲು ಲಾಲಿ ಹಾಡಿದರೆ ಆತ ಮೈ ಮರೆತು ಮಲಗುವುದುಂಟೇ..?? ಇಲ್ಲಿ ಭಕ್ತಿಯಲ್ಲಿ ಎಲ್ಲವೂ ಹೌದು. ಅರ್ಥಪೂರ್ಣ ಹಾಗೂ ಚೆಂದದ ಜೋಗುಳಗಳಿವೆ ಇಲ್ಲಿ.ವಾತ್ಸಲ್ಯಪೂರ್ಣ ಜೋಗುಳಕ್ಕೆ ಮನಸೋಲದವರಾರು ಹೇಳಿ..
ಪುರಂದರದಾಸರು 'ತೂಗಿರೆ ರಂಗನ' ಎನ್ನುತ್ತಾ ನಾಗಲೋಕ, ಇಂದ್ರಲೋಕ, ಆಲದ ಎಲೆಯ ಮೇಲೆ ಮಲಗಿರುವ ಶ್ರೀಲೋಲನ ಎನ್ನುತ್ತಾ ಸಕಲ ಲೋಕಗಳಲ್ಲಿಯೂ ಇರುವವನಿಗೆ ಆಯಾ ಲೋಕಗಳಲ್ಲಿಯೇ ಜೋಗುಳ ಹಾಡುತ್ತಿದ್ದಾರೆ.
ದುರುಳ ಶಕಟನನು ಮುರಿದ ಕೋಮಲದ
ಚರಣಕಮಲಗಳು ಉರಿಯುತಲಿದ್ದರೂ |
ಮರೆಯಲದನು ಸುವಿನೋದವನಿಯುವ
ಸರಸಪದಗಳನು ಪರಿಪರಿಯರುಹುವೇನೋ
ಎನ್ನುತ್ತಾ 'ಮಲಗೋ ಮಲಗೆಲೋ ಸುಮ್ಮನೆ ಸುಕುಮಾರ' ಎನ್ನುವ ಜೋಗುಳದಲ್ಲಿ ಶಕಟಾಸುರನನ್ನು ಕೊಂದ ಕೃಷ್ಣನ ಪಾದಗಳ ನೋವನ್ನು ಶಮನಗೊಳಿಸಲು ಮಲಗುವಂತೆ ರಮಿಸುತ್ತಿದ್ದರೆ ಅದೇ ಜೋಗುಳದ ಮತ್ತೊಂದು ಚರಣದಲ್ಲಿ
ಎನ್ನೆಯ ಕರಗಳು ನೋಯುತಲಿರುವವು
ಚಿನ್ಮಯ ರೂಪನೆ ನಿದ್ರೆಯ ಮಾಡೊ |
ಚಿಣ್ಣ ನಿನಗೆ ಸವಿಯಾದ ದಧಿಪಯ
ಬೆಣ್ಣೆಯ ಕೊಡುವೆ ಪ್ರಸನ್ನ ಸಹೃದಯದಲಿ
ಎನ್ನುತ್ತಾ ತನ್ನ ಕಷ್ಟವನ್ನು ತೋಡಿಕೊಳ್ಳುತ್ತಾ ಆಸೆ ತೋರಿಸುತ್ತಿರುವುದನ್ನೂ ಗಮನಿಸಬಹುದು.
ಹೀಗೆ ಹಲವಾರು ಜೋಗುಳಗಳನ್ನು ಕಾಣಬಹುದು. ಹೆಚ್ಚಿನ ಜೋಗುಳಗಳು ಹರಿಯನ್ನು , ಬಾಲಕೃಷ್ಣನನ್ನು ಕುರಿತು ಇದ್ದರೆ ಕೆಲವು ಮಹಾಲಕ್ಷ್ಮಿ, ರಾಮ, ವಾಯುದೇವ, ಧ್ರುವ, ರಾಯರ ಕುರಿತಾಗಿಯೂ ಇವೆ.
ಸಾಮಾನ್ಯವಾಗಿ ದಾಸ ಸಾಹಿತ್ಯದ ಭಕ್ತಿ ಗೀತೆಗಳನ್ನು ಕೇಳಿದ್ದ ನನಗೆ ಇಷ್ಟೆಲ್ಲಾ ಜೋಗುಳಗಳಿವೆಯಾ.. ಇಷ್ಟೆಲ್ಲಾ ಬಗೆ ಬಗೆಯಾಗಿ ಜೋಗುಳದ ರೂಪದಲ್ಲಿ ಸ್ತುತಿಸಬಹುದಾ ಎನ್ನಿಸಿತು. ಇಲ್ಲಿನ ಸಂಗ್ರಹಗಳಲ್ಲಿ ಹೆಚ್ಚಿನ ಹರಿದಾಸರ ಜೋಗುಳಗಳು ಇಂತಹವರಿಂದಲೇ ರಚಿತವಾದದ್ದು ಎಂದಿದ್ದರೂ ಇನ್ನು ಕೆಲ ರಚನೆಗಳಿಗೆ ಬರೆದವರ ಹೆಸರಿಲ್ಲ. ಒಂದು ಕೊಂಕಣಿಯ ಜೋಗುಳ ಹಾಗೂ ಒಂದೆರಡು ಸುಳಾದಿಗಳೂ ಇಲ್ಲಿವೆ.
ದಾಸ ಸಾಹಿತ್ಯದ ಈ ಹರಿದಾಸರ ಜೋಗುಳ ಪದಗಳ ಪರಿಚಯದ ಈ ಪುಸ್ತಕ ಡಿಜಿಟಲ್ ರೂಪದಲ್ಲಿ ಉಚಿತವಾಗಿ ಲಭ್ಯವಿದೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ