ಪುಸ್ತಕದ ಶೀರ್ಷಿಕೆ : ಸ್ವ್ಯಾಪಿಂಗ್
ಲೇಖಕರು : ಸುಪ್ರೀತ್ ಕೆ. ಎನ್
ಪ್ರಕಾಶಕರು : ಕಾದಂಬರಿ ಮೀಡಿಯಾ ಪಬ್ಲಿಕೇಶನ್ಸ್
ಮೊದಲ ಮುದ್ರಣ : 2013
ದ್ವಿತೀಯ ಮುದ್ರಣ : 2015 ( ನನ್ನ ಓದಿಗೆ ಸಿಕ್ಕಿದ್ದು)
ಪುಟಗಳು : 138
ಬೆಲೆ : 120 ರೂ.
ಸುಪ್ರೀತ್ ರವರ "ಉತ್ತರಾ" ಕಾದಂಬರಿಯನ್ನು ಆತ್ಮೀಯರೊಬ್ಬರು ಸಜೆಸ್ಟ್ ಮಾಡಿದಾಗ ಅದನ್ನು ಓದುವ ಮೊದಲ ಅವರ ಬೇರೆ ಪುಸ್ತಕವನ್ನೊಮ್ಮೆ ಟ್ರೈ ಮಾಡೋಣ ಎಂದು ಈ ಪುಸ್ತಕವನ್ನು ತರಿಸಿಕೊಂಡದ್ದು. ಅಲ್ಲಿಯವರೆಗೂ ನನಗೆ ಗೊತ್ತಿದ್ದ ಸ್ವ್ಯಾಪಿಂಗ್ ಎಂಬ ಪದದ ಅರ್ಥ ಅದಲು - ಬದಲು ಎಂದಷ್ಟೇ. ನಮ್ಮ ಇಂಜಿನಿಯರಿಂಗ್ ನಲ್ಲಿ ಅದರಲ್ಲೂ ಸಿ ಪ್ರೋಗ್ರಾಮಿಂಗ್ ನಲ್ಲಿ ಸ್ವ್ಯಾಪಿಂಗ್ ಪ್ರೋಗ್ರಾಮ್ ಎಂದು ಹೇಳಿ ಹೇಳಿ ಸ್ವ್ಯಾಪಿಂಗ್ ಎಂದರೆ ಅದನ್ನಷ್ಟೇ ಯೋಚಿಸುತ್ತಿತ್ತು ಮನಸ್ಸು. ಪುಸ್ತಕ ಬಂದಾಗ ಬೆನ್ನುಡಿಯ ಈ ಸಾಲುಗಳು ಕಂಡವು.
"ಕಾಮ ಕೂಡಾ ಅಗ್ನಿಯಂತೆ. ಅಗ್ನಿಗೆ ಬೆಳಗುವ ಶಕ್ತಿಯೂ ಇದೆ. ಸುಡುವ ಶಕ್ತಿಯೂ ಇದೆ. ಕಾಮವೆಂಬ ಅಗ್ನಿಗೆ ಬೆಳಗುವಷ್ಟು ಸಲುಗೆಯನ್ನು ಮಾತ್ರ ಕೊಡಬೇಕು, ಸುಡುವಷ್ಟು ಕೊಡಬಾರದು !"
ಈ ಸಾಲುಗಳು ಕಣ್ಣಿಗೆ ಬಿದ್ದ ನಂತರ ಮುನ್ನುಡಿ ಓದಿದಾಗ ಅರಿವಾಗಿದ್ದು ಇದು "ವೈಫ್ ಸ್ವ್ಯಾಪಿಂಗ್" ವಿಷಯದ ಕುರಿತ ಪುಸ್ತಕ ಎಂಬುದಾಗಿ. ಮೊದಲಿಗೆ ಈ ಟಾಪಿಕ್ ಆರಿಸಿಕೊಂಡ ಲೇಖಕರ ಕುರಿತು ಅಚ್ಚರಿ ಎನ್ನಿಸಿತು. ಕಾರಣವೆಂದರೆ, ಲೇಖಕರು ಈ ಪುಸ್ತಕವನ್ನು ಬರೆದದ್ದು 2013 ರಲ್ಲಿ. ಆಗ ಈ ಕುರಿತು ಕೇಳಿ ಬರುತ್ತಿದ್ದದ್ದೇ ಕಡಿಮೆ. ಅಥವಾ ನಾನು ಕೇಳಿದಂತೆ ಭಾರತದಲ್ಲಿ ಈ ವಿಚಾರ ಅಪರೂಪದಲ್ಲಿ ಅಪರೂಪ. ಇಂತಹಾ ಕ್ಲಿಷ್ಟ ವಿಷಯವನ್ನು ಆಯ್ದುಕೊಳ್ಳಲು ಗಟ್ಟಿತನ ಬೇಕು. ಭವಿಷ್ಯದ ದಿನಗಳ ಕುರಿತು ಬರೆಯಲು ಅನುಭವವಿರಬೇಕು. ಪುಸ್ತಕ ಓದಿ ಮುಗಿಸಿದ ನಂತರ ನನಗನ್ನಿಸಿದ್ದು ಲೇಖಕರ ಬರಹದಲ್ಲಿ ಗಟ್ಟಿತನವಿದೆ. ಭವಿಷ್ಯದ ವಾಸ್ತವತೆಯನ್ನು ಕಟ್ಟಿಕೊಡುವ ಶಕ್ತಿಯಿದೆ. ಅನುಭವಕ್ಕೆ ವಯಸ್ಸು ಬೇಕಿಲ್ಲ ಎಂಬುದು. ಯುವ ಬರಹಗಾರರು ಆಯ್ದುಕೊಳ್ಳುವ ವಿಷಯಕ್ಕಿಂತ ವಿಭಿನ್ನ ಎಂದು ಹೇಗನ್ನಿಸಿತೋ ಹಾಗೆಯೇ ಅಶ್ಲೀಲತೆಯನ್ನು ಇನ್ನೂ ಕಡಿಮೆ ಮಾಡಬಹುದಾಗಿತ್ತು ಎಂಬುದಾಗಿ.
ಲೇಖಕರು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಈ ವಿಚಾರವಾಗಿ ಬರೆಯುವಾಗ ಅದು ಅವಶ್ಯಕವಾಗಿತ್ತು ಎಂಬುದಾಗಿ. ಲೇಖಕರ ದೃಷ್ಟಿಯಿಂದ ಅದು ಸರಿ ಎಂದೆನಿಸಿದರೂ.. ಈ ವಿಚಾರವನ್ನು ಒಬ್ಬಳು ಓದುಗಳಾಗಿ ಅರಗಿಸಿಕೊಳ್ಳಲು ಕಷ್ಟವೇ. ಕಾಮದ ಕುರಿತು ಗಟ್ಟಿ ದನಿಯಲ್ಲೇ ಮಾತನಾಡಲು ಹಿಂಜರಿಯುವ ಮನಸ್ಥಿತಿಯಲ್ಲಿ ಇರುವಾಗ ಈ ಬರಹ ಬಹಳ ಬೋಲ್ಡ್ ಎನ್ನಿಸಿತು.
ದಾಂಪತ್ಯ ಎನ್ನುವುದು ಭಾರತೀಯ ಸಂಸ್ಕೃತಿಯಲ್ಲಿ ಬಹಳ ಶ್ರೇಷ್ಠವಾದದ್ದು. ತಾನು ಪ್ರೀತಿಸುತ್ತಿರುವ ಹುಡುಗಿ ಮತ್ತೊಬ್ಬರೊಡನೆ ಹೆಚ್ಚು ಸಲುಗೆಯಿಂದ ಮಾತನಾಡುವುದನ್ನೇ ಅರಗಿಸಿಕೊಳ್ಳಲು ಕಷ್ಟವಾಗುವಾಗ ತನ್ನ ಹೆಂಡತಿ/ ಗಂಡ ಮತ್ತೊಬ್ಬರ ಜೊತೆಗೆ ಸುಖಿಸುವುದನ್ನು ಕಲ್ಪಿಸಿಕೊಳ್ಳಲೂ ಕಷ್ಟವೇ.. ಹೀಗಿರುವ ಪರಿಸ್ಥಿತಿಯಲ್ಲಿ ಇಂದಿನ ಜನಾಂಗ ಮಾಡರ್ನ್ ಎಂದೋ.. ಕಾರ್ಪೊರೇಟ್ ಕಲ್ಚರ್ ನಲ್ಲಿ ಕಾಮನ್ ಎಂದೋ ಸಮರ್ಥನೆ ಮಾಡಿಕೊಳ್ಳುವುದು ಅಸಹ್ಯತನದ ಪರಮಾವಧಿ ಎನ್ನಿಸುತ್ತದೆ. ಈ ಕಾದಂಬರಿಯಲ್ಲಿ ಕಿಶೋರ್ ಹಾಗೂ ಸೋನು ಎಂಬ ದಂಪತಿಗಳು ಇದೇ ಸಾಲಿನಲ್ಲಿ ಬರುವವರು.
ಒಬ್ಬಳೇ ಮಗಳಾದ ರಶ್ಮಿ ಸಾಂಸ್ಕೃತಿಕ ಪರಿಸರದಲ್ಲಿ ಬೆಳೆದು ತನ್ನ ತಂದೆ - ತಾಯಿಯ ಆಸೆಯಂತೆ ತಂದೆಯ ಆಸೆಯಂತೆ ತಂದೆಯ ಗೆಳೆಯರ ಮಗನಾದ ಪ್ರಶಾಂತ್ ಜೊತೆಗೆ ವಿವಾಹವಾಗುತ್ತಾಳೆ. ಅವಳಿಗೆ ಮಾತ್ರವಲ್ಲ, ಅವಳ ತಂದೆ - ತಾಯಿ , ಪ್ರಶಾಂತ್ ತಂದೆ - ತಾಯಿಯರಿಗೂ ಆತನ ನಿಜ ಸ್ವರೂಪ ಗೊತ್ತಿರುವುದಿಲ್ಲ. ಎಷ್ಟೋ ಜನರ ನಿಜ ಸ್ವರೂಪ ಹಾಗೆಯೇ ಇರುತ್ತದಲ್ಲಾ.. ನೋಡಲು ಮಾತ್ರ ಸುಭಗರಂತೆ. ಆದರೆ, ಮನಸ್ಸು, ಹಿಂದಿನ ಜೀವನವೆಲ್ಲಾ ಅಸಹ್ಯತನದ ಪರಮಾವಧಿ. ಆತನ ಕುರಿತು ಎಲ್ಲವೂ ಗೊತ್ತಿದ್ದದ್ದು ಆತನ ಸತ್ತು ಹೋಗಿದ್ದ ಅಣ್ಣನ ಗೆಳೆಯ ಚೇತನ್ ಗೆ ಮಾತ್ರವೇ.. ಚೇತನ್ ನ ಮೌನ ಕೂಡಾ ಇದರಲ್ಲಿ ಅಪರಾಧಿಯಂತೆ ಗೋಚರವಾಯಿತು.
ಇದನ್ನು ಬಿಟ್ಟರೆ ಈತನ ಕೆಲವು ಸತ್ಯಗಳ ಅರಿವಿದ್ದದ್ದು ಈತನ ಮಾಜಿ ಪ್ರೇಯಸಿ ಸ್ವಾತಿಗೆ. ಸ್ವಾತಿ ಬೇರಾರೂ ಅಲ್ಲದೆ ರಶ್ಮಿಯ ದೊಡ್ಡಮ್ಮನ ಮಗಳೇ. ಈತನ ಬದುಕಿನ ಕೆಲವು ಸತ್ಯಗಳ ಅರಿವಾಗಿದ್ದು ಅನುರಾಧಾಳಿಗೆ. ಅದೂ ಚೇತನ್ ಮೂಲಕ.
ಸ್ವಾತಿ ರಶ್ಮಿಯ ಮದುವೆಯನ್ನು ತಡೆಯದ್ದು ಏಕೆ ? ಎಲ್ಲಾ ಗೊತ್ತಿದ್ದ ಚೇತನ್ ಮೌನವಾಗಿದ್ದು ಯಾಕೆ ? ಸ್ವ್ಯಾಪಿಂಗ್ ಆದದ್ದಾದರೂ ಏಕೆ ? ಇದಕ್ಕೆ ರಶ್ಮಿಯ ಒಪ್ಪಿಗೆ ಇತ್ತೇ ? ಮೋಸದ ಜಾಲದಲ್ಲಿ ಸಿಲುಕಿದ್ದು ಪ್ರಶಾಂತ್ ನಾ ಅಥವಾ ರಶ್ಮಿಯಾ ? ಎಲ್ಲದಕ್ಕೂ ಉತ್ತರ ತಿಳಿಯಲು ಕಾದಂಬರಿ ಓದಿ.
ಅನುರಾಧಾ, ಸ್ವಾತಿ , ರಶ್ಮಿ ಮೂವರೂ ಮೂರು ಬೇರೆಯದ್ದೇ ಆಲೋಚನೆಯ ಪಾತ್ರಗಳು. ಅನುರಾಧಾ ವಾಸ್ತವಕ್ಕೆ ಹೊಂದಿಕೊಂಡಳು ಎಂಬುದಕ್ಕಿಂತ ವಾಸ್ತವ ಅವಳನ್ನು ಒಗ್ಗಿಕೊಳ್ಳುವಂತೆ ಮಾಡಿದರೆ. ಸ್ವಾತಿ ಒಂದು ಭರವಸೆಯಂತೆ ಕಂಡಳು. ರಶ್ಮಿಯ ಸೂಕ್ಷ್ಮ ಆಲೋಚನೆ ಅವಳನ್ನು ಅಂಧಕಾರದಲ್ಲಿ ಮುಳುಗಿಸಿತೇ ಎಂದುಕೊಂಡರೂ ಅದಕ್ಕಿಂತಲೂ ವಿಭಿನ್ನವಾಗಿ ಬದುಕಿದ್ದರೆ ಆಕೆಯೇ ಈ ಕಥೆಯ ನಾಯಕಿಯಾಗುತ್ತಿದ್ದಳು ಎನ್ನಿಸುತ್ತಿದೆ. ಇನ್ನು ಸೋನು ಭಂಡ ಬದುಕಿನ, ಸ್ವೇಚ್ಛೆಯ ಹೆಣ್ಣಾಗಿ ಒಂದು ರೀತಿಯ ಅಸಹ್ಯ ಮೂಡಿಸಿದಳು. ಇಲ್ಲಿ ಯಾರೂ ನಾಯಕರೆಂಬಂತೆ ಕಂಡು ಬರಲಿಲ್ಲ.
ಇಲ್ಲಿ ವೈಫ್ ಸ್ವ್ಯಾಪಿಂಗ್ ಜೊತೆಗೆ ಇನ್ನೊಂದು ಕರಾಳ ಪದ್ದತಿ "ಸೆಕ್ಸ್ ಟೂರಿಸಮ್" ಕುರಿತು ಸಹಾ ಬರೆದಿದ್ದಾರೆ. ಹೀಗೆಂದರೆ ವಿದೇಶಿಯರು ತಾತ್ಕಾಲಿಕವಾಗಿ ಭಾರತಕ್ಕೆ ಪ್ರವಾಸಕ್ಕೆ ಬಂದಾಗ ಅಷ್ಟು ದಿನಗಳಿಗೆ ತಾತ್ಕಾಲಿಕ ಸಂಗಾತಿಯನ್ನು ತನ್ನ ಸುಖಕ್ಕಾಗಿ ಬಳಸಿಕೊಳ್ಳುವುದು. ಅದು ತಾತ್ಕಾಲಿಕ ವಿವಾಹ ಎಂಬ ಹೆಸರಿನಲ್ಲಿ ಇಲ್ಲವೇ ಏನೂ ಹಣೆ ಪಟ್ಟಿ ಇಲ್ಲದೆಯೂ.. ಇದರ ಕುರಿತು ಹೆಚ್ಚು ಇರದಿದ್ದರೂ ಇದೇ ಒಂದು ರೀತಿಯ ಅಸಹ್ಯ ಭಾವ ಮೂಡಿಸಿತು. ಏನೆಲ್ಲಾ ಇರಬಹುದು ಎಂದು ವಿಷಾಧವೂ ಮೂಡಿತು.
ಸ್ವ್ಯಾಪಿಂಗ್ ಕುರಿತು ಸಮರ್ಥನೆ ಮಾಡಿಕೊಳ್ಳುವವರಿಗೆ ಸರಿಯಾದ ಉತ್ತರವಿದೆ ಇಲ್ಲಿ. ಅಂತ್ಯ ವಿಷಾಧ ತರುತ್ತದೆ ಎಂಬುದು ಹೌದಾದರೂ ಇಡೀ ಕಾದಂಬರಿಯನ್ನು ಅವಲೋಕಿಸಿದಾಗ ಕಥಾ ವಸ್ತುವೇ ಜಿಗುಪ್ಸೆ ತಂದು ಬಿಡುತ್ತದೆ. ನೈತಿಕ ಮೌಲ್ಯಗಳು ಕುಸಿಯುತ್ತಿರುವಾಗ ಎಲ್ಲಿಗೆ ಬಂದು ನಿಂತಿದ್ದೇವೆ ನಾವು ಎಂಬ ಪ್ರಶ್ನೆ ಮೂಡಿದೆ. ಇನ್ನು ಮುಂದಿನ ಪೀಳಿಗೆಗಳು ಇದೇ ಹಾದಿ ಹಿಡಿದರೆ ಗತಿಯೇನು ಎಂಬ ಆತಂಕ ಕಾಡುತ್ತಿದೆ.
ಮಡಿವಂತಿಕೆ ಇರುವ ಮನಸ್ಥಿತಿಯವರಿಗೆ ನಾನು ಈ ಪುಸ್ತಕವನ್ನು ಸಜೆಸ್ಟ್ ಮಾಡುವುದಿಲ್ಲ. ಓದು ಮುಗಿದ ನಂತರ ಅಸಹ್ಯ, ಜಿಗುಪ್ಸೆ ಮೂಡಿದರೂ ಅದು ಕಥಾ ವಸ್ತುವಿನ ಕಾರಣದಿಂದ ಹೊರತು ನಿರೂಪಣೆಯಿಂದಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇನೆ. ಈಗಿನ ವಾಸ್ತವವೂ ಹೀಗೆಯೇ ಇರುವಾಗ ಅಂತಹಾ ಬದುಕು ಕಂಡರೆ ಇನ್ನೆಷ್ಟು ಅಸಹ್ಯ ಮೂಡಬಲ್ಲದು ?
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ