ಮಂಗಳವಾರ, ಏಪ್ರಿಲ್ 7, 2026

ನಿರಂಜನ ಕೆಲವು ಸಣ್ಣ ಕತೆಗಳು (ಪುಸ್ತಕ ಯಾನ - 59)


ಪುಸ್ತಕದ ಶೀರ್ಷಿಕೆ : ನಿರಂಜನ ಕೆಲವು ಸಣ್ಣ ಕತೆಗಳು

ಲೇಖಕರು : ನಿರಂಜನ (ಕುಳಕುಂದ ಶಿವರಾಯ)

ಪ್ರಕಾಶಕರು : ಐ.ಬಿ.ಹೆಚ್ ಪ್ರಕಾಶನ

ಮೊದಲನೇ ಮುದ್ರಣ : 1986

ಮೂರನೇ ಮುದ್ರಣ : 2015 ( ನನ್ನ ಓದಿಗೆ ಸಿಕ್ಕಿದ್ದು )

ಪುಟಗಳು : 96

ಬೆಲೆ : 110


ನಿರಂಜನರು ಬರೆದಿರುವ ಕತೆಗಳ ಸಂಖ್ಯೆ ಆ ಕಾಲದ ಲೇಖಕರಿಗೆ ಹೋಲಿಸಿದರೆ ಹೆಚ್ಚು. ಅವರ ಕತೆಗಳೆಲ್ಲವೂ ಸಮಗ್ರವಾಗಿ "ಧ್ವನಿ" ಎಂಬ ಕಥಾಸಂಕಲನದ ಹೆಸರಿನಲ್ಲಿ ಲಭ್ಯವಿದೆ. ಅದು 156 ಕಥೆಗಳನ್ನು ಒಳಗೊಂಡಿರುವ ಕಥಾ ಸಂಕಲನ. ಇಲ್ಲಿರುವುದು ಆಯ್ದ ಹತ್ತು ಕತೆಗಳು ಮಾತ್ರವೇ. 1941 ರಿಂದ 1965 ರ ಕಾಲಘಟ್ಟದ ಕತೆಗಳು. 25 ವರ್ಷದ ಆಯ್ದ ಹತ್ತು ಕತೆಗಳು ಕಾಲಘಟ್ಟ ಹಾಗೂ ಕಥಾವಸ್ತುವಿನಿಂದ ವಿಭಿನ್ನ. ಇವರ ಕಾದಂಬರಿಯ ಓದಿಗಿಂತ ಕಥೆಗಳ ಓದು ಕೊಂಚ ಕ್ಲಿಷ್ಟ ಎನ್ನಿಸಿತು. ಕಾರಣವೆಂದರೆ, ಹೇಳಬೇಕಾಗಿರುವುದನ್ನು ಹೆಚ್ಚು ಎಳೆಯದೆ, ಅತ್ಯಂತ ಚುಟುಕಾಗಿ ಕಟ್ಟಿ ಕೊಟ್ಟಿರುವ ಶೈಲಿ. ಕಥೆಗಳು ಸಹಾ ನೇರ ಹಾಗೂ ದಿಟ್ಟವಾಗಿವೆ. ಅಲ್ಲದೇ, ನಾನು ಗಮನಿಸಿದಂತೆ ಹೆಚ್ಚು ಭಾವುಕತೆಯಿಲ್ಲದಿದ್ದರೂ.. ಮಾನವೀಯತೆಯಿಂದ ಮನಮುಟ್ಟುವ, ಮನಸೆಳೆವ ಕತೆಗಳು. 


ಈ ಕತೆಗಳ ಜೊತೆಗೆ.. ಆ ಕತೆಗಳು ಹುಟ್ಟಿದ ಸಂಧರ್ಭ, ಬಗೆಯನ್ನು ಚುಟುಕಾಗಿ ಹೇಳಿರುವುದು ಓದುಗರಿಗೆ ಕತೆಗಳ ಓದಿಗೆ ಸೇತುವೆಯಂತಿದೆ. 


ಯಾರನ್ನಾದರೂ ಬದುಕಿರುವಾಗಲೇ ಸಾಯಿಸಿದರೆ.. ಅರೆ ! ಬದುಕಿರುವಾಗ ಸಾಯಿಸುವುದು ಸಾಧ್ಯವಾ..?? ಇದು ಅಕ್ಷರದಲ್ಲಿ.. ಅಂದರೆ ಕತೆಗಳಲ್ಲಿ ಮಾತ್ರವೇ ಸಾಧ್ಯವಾಗುವ ಪರಿಕಲ್ಪನೆ. ಅದರಲ್ಲಿಯೂ ಪ್ರಸಿದ್ಧ ವ್ಯಕ್ತಿಯೋರ್ವನ ಕುರಿತು ಆ ರೀತಿಯ ಕತೆ ಬರೆಯಲು ಎದೆಗಾರಿಕೆಯ ಜೊತೆಗೆ ಭವಿಷ್ಯದ ಗಾಢ ಆಲೋಚನೆ, ದೂರದರ್ಶಿತ್ವವೂ ಮುಖ್ಯ. ಅದರಲ್ಲೂ ಗಂಭೀರ ಕತೆಗಳಲ್ಲಿ ಆ ಪರಿಸ್ಥಿತಿಯನ್ನು ಕಟ್ಟಿಕೊಡುವುದು ಕ್ಲಿಷ್ಟಕರ. 1941 ರಲ್ಲಿ ಅಂತಹಾ ಕತೆಯನ್ನು ಬರೆದರು ನಿರಂಜನರು. ಆಗಲೇ, ಈ ಕತೆಯಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿತ್ತು. ಜೊತೆಗೆ, ಬಾಪೂಜಿ ಸತ್ತಿದ್ದರು. ಜಗತ್ತನ್ನು ಎಚ್ಚರಿಸುವಂತಹಾ ಆ ಕತೆ 'ಬಾಪೂಜಿ..! ಬಾಪು..!'


ಬ್ರಿಟಿಷ್ ಸರ್ಕಾರದ ಕೆಂಗಣ್ಣಿಗೆ ಗುರಿಯಾದ ಮೊದಲ ಕನ್ನಡದ ಕತೆ ಎಂಬ ಹೆಗ್ಗಳಿಕೆ ಹೊತ್ತ ಈ ಕತೆ 'ಎಣ್ಣೆ! ಚಿಮಿಣಿ ಎಣ್ಣೆ!'. ಯುದ್ಧ ಹಾಗೂ ಎಮರ್ಜೆನ್ಸಿಯ ಕಾಲದ ಈ ಕತೆಯ ಪ್ರಭಾವ ಹೇಗಿತ್ತೆಂದರೆ ಮೊದಲು 1942 ಅಚ್ಚಾಗಿದ್ದ ಈ ಕತೆಯನ್ನು 1975 ರಲ್ಲಿ ಪುನರ್ಮುದ್ರಿಸಲು ಸಹಾ ಪರ್ಮಿಶನ್ ಸಿಗಲಿಲ್ಲ. ಯುದ್ಧ ಹಾಗೂ ಎಮರ್ಜೆನ್ಸಿ ಕಾಲಘಟ್ಟದಲ್ಲಿ ನರಳುವವರು ಗ್ರಾಹಕರು ಹಾಗೂ ಪುಟ್ಟ ಅಂಗಡಿಯವರು. ಅಂತಹದ್ದೇ ಪುಟ್ಟ ಅಂಗಡಿಯಿದ್ದ ಸೋಮ ದೊಡ್ಡ ಅಂಗಡಿಗೆ ಗ್ರಾಹಕನಾಗಿ ಹೋದಾಗ ಅಲ್ಲಿನ ದೌರ್ಜನ್ಯ ಕಂಡು ಪ್ರತಿಭಟಿಸಲು ನಿಲ್ಲುತ್ತಾನೆ. ಆದರೆ, ಆ ಪ್ರತಿಭಟನೆಗೆ ಅಷ್ಟು ಬಲವಿರಲಿಲ್ಲ. ಇವೆಲ್ಲಕ್ಕೂ ಕಾರಣವಾಗಿದ್ದು ಕೇವಲ ಎಣ್ಣೆ.. ಚಿಮಿಣಿ ಎಣ್ಣೆ. ಬಡವನ ಕೋಪ, ಉಳ್ಳವರ ದಬ್ಬಾಳಿಕೆ, ಸರ್ಕಾರದ ನಿರ್ಲಕ್ಷ್ಯದ ಕುರಿತ ಕತೆ ಇದು.


'ಮೈಖೇಲ್ ಮಾಸ್ ಪಿಕ್ನಿಕ್' ಎನ್ನುವ ಕತೆಯ ಶೀರ್ಷಿಕೆ ವಿಭಿನ್ನವಾಗಿ ಸೆಳೆಯಿತು. ಇದು ಕ್ರಿಸ್ತಿಯ ಬದುಕು, ಆಚಾರ- ವಿಚಾರ, ಎರಡು ವರ್ಗಗಳನ್ನು ಗಮನಿಸಿ ಬರೆದ ಇಟ್ಟ ಶೀರ್ಷಿಕೆ. ಇದು ಎಲ್ಲಾ ವರ್ಗಗಳಲ್ಲಿಯೂ ಇದೆಯಾದರೂ ಕತೆಯಲ್ಲಿ ಬರುವುದು ಲಿಲ್ಲಿ ಹಾಗೂ ಮೇರಿ. ಶ್ರೀಮಂತ ಹಾಗೂ ಬಡತನದ ಕತೆಯೆಂದು ಮೇಲ್ನೋಟಕ್ಕೆ ತೋರುವುದಾದರೂ.. ಪೋಷಕರು ಕೂಡಾ ಇಲ್ಲಿ ಮಗುವನ್ನು ತಿದ್ದುವಲ್ಲಿ ಸೋತ ಪರಿ ಹಾಗೂ ಶಾಲೆಗಳ ಏಕ ಶಿಕ್ಷಣ ನೀತಿಯನ್ನು ಕಾಣಬಹುದು.


'ರಕ್ತ ಸರೋವರ' ಮೈ ನಡುಗುವಂತೆ ಮಾಡುವ ಕಥನ. 1947 ರಲ್ಲಿ, ಡೋಗ್ರಾ ಅರಸೊತ್ತಿಗೆ ವಿರುದ್ಧ ದಂಗೆ ಎದ್ದ ಜನ ಹಾಗೂ ಅವರ ಬಲಿಯಾದ ಪರಿ ಅಲ್ಲಿನ 'ದಲ್ ತಟಾಕ' ಎನ್ನುವ ಸರೋವರವನ್ನು ರಕ್ತದಿಂದ ಮೀಯಿಸಿದ ಕತೆ. ಮರಳಿ ಬರುತ್ತೇನೆಂದು ಹೇಳಿ ಕೆಂದಾವರೆ ತುಂಬಿದ ಸರೋವರಕ್ಕೆ ಹೋದವನ ರಕ್ತ ತರ್ಪಣದ ಕತೆ.


'ಕೊನೆಯ ಗಿರಾಕಿ' ಕಾಡುವ ಕತೆ. ಹೆಣ್ಣು ಎಂದರೆ ಭೋಗಕ್ಕೆಂದೇ ಕಾಣುವ ಜನರಿರುವ ಕಡೆಯಲ್ಲಿ, ಹದ್ದಿನಂತೆ ಅವಳನ್ನು ಕುಕ್ಕಿ ತಿನ್ನುವ ಗಂಡಿನ ಕೈಗೆ ಸಿಕ್ಕ 'ಕಾಣಿ' ಎನ್ನುವ ಮೂಕ ಹೆಣ್ಣಿನ ಬದುಕಿನ ನರಕ ದರ್ಶನ. ಅವಳ ನಿರ್ಲಿಪ್ತತೆ ಕಂಡು ಹೇಸಿಗೆ ಹುಟ್ಟುವಂತಾಗುತ್ತದೆ. ಆದರೆ, ಅವಳ ಪ್ರತಿಭಟನೆಗೆ ಬೆಲೆ ಇಲ್ಲವಾಗುವುದು ವಿಪರ್ಯಾಸ. ಮಾತು ಬರುವವರಿಗೇ ನ್ಯಾಯ ಸಿಗದ ಕಾಲದಲ್ಲಿ ಮಾತು ಬಾರದ ಕಾಣಿಗೆ ಆದ ಅನ್ಯಾಯಕ್ಕೆ ಕೇವಲ ಕೊನೆಯ ಗಿರಾಕಿ ಕಾರಣವೇ ಎನ್ನುವಂತಾದರೂ.. ಅವನ ಘೋರ, ಹೇಯ ಕೃತ್ಯ ಖಂಡನಿಯವೇ..


'ತಿರುಕಣ್ಣನ ಮತದಾನ' ಈ ಕಥಾ ಸಂಕಲನದಲ್ಲಿ ಬಹಳ ವಿಭಿನ್ನ ಕಥೆ ಎನ್ನಿಸಿತು. ಓದು -ಬರಹ ಬಾರದವರಿಗೆ ಮಾಡುವ ಮೋಸ, ನೀಡುವ ವಾಗ್ದಾನ, ಆಶ್ವಾಸನೆ, ವೋಟಿನ ಬೆಲೆ ಹೀಗೆ ರಾಜಕೀಯದವರ ದೊಂಬರಾಟವಿದೆ.

"ತಿರುಕಣ್ಣ ಈ ಸಾರಿ ಓಟು ಪೋಲು ಮಾಡಲಿಲ್ಲ" ಎಂಬ ವಾಕ್ಯದಲ್ಲಿ ಇಡೀ ಕತೆಯ ಜೀವಾಳವೇ ಇದೆ ಎನ್ನಿಸಿತು.


ಪ್ರಥಮ ಪುರುಷದಲ್ಲಿ 'ಒಂದೇ ನಾಣ್ಯದ ಎರಡು ಮೈ' ಕತೆಯನ್ನು ಕಟ್ಟಿರುವ ಲೇಖಕರು ಈ ಕತೆಯ ಎರಡನೇ ಭಾಗ ಕಲ್ಪನೆ ಎಂದಿದ್ದಾರೆ. ಆದರೆ, ಕಾಲಘಟ್ಟದ ಸೆಳೆತದಲ್ಲಿ ಎರಡೂ ವಾಸ್ತವವೇ ಎಂದೆನಿಸುವಂತಾಯಿತು. ಕಾರವಾರಕ್ಕೆ ಹೋದ ಎರಡೂ ಸಂಧರ್ಭದಲ್ಲಿ ಅದೆಷ್ಟು ಬದಲಾವಣೆ ? ಇಲ್ಲಿ ಕೇವಲ ಯುದ್ಧ, ದಂಗೆ, ಹೋರಾಟವಷ್ಟೇ ಅಲ್ಲದೆ ಪ್ರಕೃತಿಯ ವರ್ಣನೆಯೂ ಇದೆ. 


ಒಂದೊಳ್ಳೆ ಚಲನಚಿತ್ರದಂತೆ ಕಾಣುವ ಈ ಕತೆಯಲ್ಲಿ ಹೆಚ್ಚು ಕಂಡದ್ದು ನಂಬಿಕೆ. ಹಿಂದಿನ ಕಾಲದ ನಂಬಿಕೆ ಹೆಚ್ಚಾಯಿತೋ.. ಕುಸಿಯಿತೋ.. ಅಥವಾ ತನ್ನ ಮುಂದಿನ ತಲೆಮಾರಿನ ಜೊತೆ ರಾಜಿಯಾಯಿತೋ.. ಅಣೆಕಟ್ಟು ಕಟ್ಟಲು ಹೊರಟಾಗ ಅಂದಿನ ಹಿರಿಯ ತಲೆಮಾರು ಅನುಭವಿಸಿರಬಹುದಾದ ತುಮುಲ ಕಂಡಿತು. ಜೀವದ್ರವ್ಯ ಜಲದ ಹರಿವಿನಂತಾಯಿತು ಈ ಕಥೆಯ ಸುಖಾಂತ್ಯ ಕಂಡಾಗ. 'ಒಂಟಿ ನಕ್ಷತ್ರ ನಕ್ಕಿತು' ಅಷ್ಟೇ ಅಲ್ಲ.. ನಿರಾಳವಾಗಿಸಿತು.


'ಹಮಾಲ ಇಮಾಮ್ ಸಾಬಿ' ಕತೆಯ ಅಂತ್ಯವನ್ನು ಹಿಂದಿನ ಕತೆಯ ಕಥೆಯ ನಿರಾಳತೆಯಿಂದ ಓದಲು ಹೊರಟಾಗ ಆಗಲಿಲ್ಲ..ಆತನ ಕನಸು ಎಂಬಂತೆ ಹಿಂದಿನ ನೆನಪಿನಾಳದ ರೈಲು ಆಕ್ಸಿಡೆಂಟ್ ಕಾಡಿದಂತೆ ಕಾಡಿತು. ಇಲ್ಲಿ ಕಂಡದ್ದು ಮುಗ್ಧತೆ. ಅಗತ್ಯಕ್ಕಿಂತ ಹೆಚ್ಚು ಹಣ ತೆಗೆದುಕೊಳ್ಳದ ಪ್ರಾಮಾಣಿಕತೆ, ರೈಲು ಅವಘಡದಲ್ಲಿ ದುಡ್ಡನ್ನು ನಿರಾಕರಿಸಿ ಮಾಡಿದ ಮಾನವೀಯ ಸೇವೆ. ಆದರೆ, ಹಮಾಲ ಇಮಾಮ್ ಸಾಬಿಯ ಜೀವನವಿಡೀ ನಿರಾಶೆಯೇ ಇದ್ದರೂ ಆತನ ಬದುಕಿನ ಆಲೋಚನೆಯೇ ಆತನ ಜೀವದ್ರವ್ಯ ಎನ್ನಿಸಿತು. ಇಡೀ ಬದುಕು ರೈಲ್ವೆ ಮನೆಯಲ್ಲೇ ಕಳೆದರೂ ಆತ ರೈಲು ಹತ್ತಿ ಪ್ರಯಾಣಿಸಿರಲಿಲ್ಲ ಎಂಬುದು ಅದೆಷ್ಟೋ ಇಂತಹಾ ಜೀವಗಳ ಯಾವುದೋ ಆಸೆಯಿರಬಹುದಾ ಎನ್ನಿಸಿತು.


ಸೃಜನಶೀಲ ಬರಹಗಾರ ಪ್ರೇತಗಳಿಗೆ ಜೀವ ತುಂಬಲು ಯತ್ನಿಸಿದಾಗ ಇಂತಹಾ ಕತೆ ಮೂಡುತ್ತದೆ ಎನ್ನುತ್ತಾರೆ ಲೇಖಕರು. 'ಹರಕೆಯ ಖಡ್ಗ' ಭಾರತದ ಸ್ವಾತಂತ್ರ್ಯ ಸಂಗ್ರಾಮದ ಧೊನ್ಡಿಯಾ ವಾಫ್ ನ ವೀರಗಾಥೆ. ಇತಿಹಾಸದಲ್ಲಿ ಮರೆಯಾಗಿರುವ ವೀರನೊಬ್ಬನ ಕಥೆ.


ವೀರತ್ವ, ಮಾನವೀಯತೆ, ಪ್ರಾಮಾಣಿಕತೆ, ನಂಬಿಕೆ, ವಿಶ್ವಾಸ, ಪ್ರತಿಭಟನೆ, ಸ್ವಾತಂತ್ರ್ಯ, ಬಡತನ, ಸಿರಿತನ ಹೀಗೆ ಎಲ್ಲವೂ ಮಿಳಿತವಾಗಿ ಅಲ್ಲಲ್ಲಿ ಹರಿತವಾಗಿ, ಅಲ್ಲಲ್ಲಿ ಮಾನವೀಯತೆಯ ಸೆಲೆ ಉಕ್ಕಿಸುವ ಕಥೆಗಳು. ಒಂದಕ್ಕಿಂತ ಒಂದು ವಿಭಿನ್ನ. ಬದುಕು ಕಂಡ ಬಗೆ ಕಥೆಗಳಲ್ಲಿ ವ್ಯಕ್ತವಾಗಿರುವ ಪರಿ ಇಲ್ಲಿದೆ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ