ಪುಸ್ತಕದ ಶೀರ್ಷಿಕೆ : ಮಿಸ್ ಲೀಲಾವತಿ
ಲೇಖಕರು : ಶ್ರೀನಿವಾಸರಾವ್ ಕೊರಟಿ
ಮೊದಲನೇ ಮುದ್ರಣ : 1954
ಪುಟಗಳು : 278
ಮಿಸ್ ಲೀಲಾವತಿ ಎನ್ನುವ ಶೀರ್ಷಿಕೆಯನ್ನು ಮೊದಲು ಕಂಡಾಗ ಆಕೆ ಕೊನೆಯವರೆಗೂ ಮದುವೆಯಾಗದೇ ಹಾಗೆಯೇ ಉಳಿದಿರಬಹುದಾ.. ಎಂಬ ಊಹೆಯಿಂದ ಓದಲು ಹಿಡಿದೆ. ಆದರೆ, ನಂತರ ತಿಳಿದದ್ದು ಅವಳಿಗೆ ಆ ಆಶಯವಿತ್ತಾದರೂ ಅದು ನೆರವೇರದೆ ಶೀಲ ಕಳೆದುಕೊಂಡು, ಪಾಡು ಪಟ್ಟ ಲೀಲಾವತಿಯ ದುರಂತ ಕತೆ ಎಂದು.
ಹೆಣ್ಣಿನ ಬದುಕು ವಿವಾಹವಾದರೆ ಮಾತ್ರ ಸಾರ್ಥಕವೇ ?? ಎನ್ನುವ ಮನೋಭಾವದಲ್ಲಿದ್ದ ಲೀಲಾವತಿಯ ಬದುಕಲ್ಲಿ ವಿವಾಹ ಎನ್ನುವ ಕನಸೇ ಇರಲಿಲ್ಲ. ಅಂದ ಮಾತ್ರಕ್ಕೆ ಅವಳ ಬದುಕಲ್ಲಿ ಪ್ರೇಮಕ್ಕೆ, ಕಾಮಕ್ಕೆ ಆಸ್ಪದವಿಲ್ಲದೆ ಸಂಯಮದ ಬದುಕನ್ನು ಬದುಕಲು ಇಚ್ಛಿಸುತ್ತಿದ್ದಳೇ ಎಂದರೆ ಅದೂ ಇಲ್ಲ. ಲೀಲಾವತಿಯ ಪ್ರಕಾರ "ಪ್ರೇಮವೆನ್ನುವುದು ಹೆಚ್ಚಲ್ಲ, ಕಾಮವೆನ್ನುವುದು ತುಚ್ಛವಲ್ಲ. ದೇಹಕ್ಕೆ ಹಸಿವಾದರೆ ಉಣ್ಣುವಂತೆ, ನೀರಡಿಕೆಯಾದರೆ ಜಲಪಾನ ಮಾಡುವಂತೆ, ದೇಹ ಬಯಸಿದಾಗ ಕಾಮಕ್ಕೂ ಓ ಗೊಡುವ" ಮನಸ್ಸು. ಹಾಗೆಂದ ಮಾತ್ರಕ್ಕೆ ಸಿಕ್ಕ ಸಿಕ್ಕವರ ಬಳಿಯೆಲ್ಲಾ ಸ್ವೇಚ್ಛೆಯ ಬದುಕು ಬದುಕಿದಳಾ ಎಂದರೆ ಅದೂ ಇಲ್ಲ. ಆಕೆಗಿದ್ದದ್ದು ಸ್ವತಂತ್ರವಾಗಿರುವ, ಗಂಡಿನಂತೆಯೇ ತಾನೂ ಬದುಕುವ ಇಚ್ಛೆ. ಶಾಲೆ, ಕಾಲೇಜಿನಲ್ಲಿ ಅವಳ ನಡೆ ಕೂಡಾ ಹಾಗೆಯೇ ಇದ್ದಿತು. ಎಷ್ಟೋ ಮಂದಿ ಗಂಡುಬೀರಿ ಎಂದೇ ಕರೆಯುತ್ತಿದ್ದರು. ಆದರೆ, ಅದೆಲ್ಲವನ್ನೂ ಮೀರಿ ಅವಳಲ್ಲಿ ಹೆಣ್ತನದ, ಪ್ರೇಮದ ಕಳೆಯನ್ನು ತುಂಬಿದ್ದು ಸೋದರತ್ತೆ ಕನಕಲಕ್ಷ್ಮಮ್ಮನವರ ಮಗ ದಿವಾಕರ.
ಲೀಲಾವತಿಯ ಮನಸ್ಸಲ್ಲಿ ಇದ್ದ ವಿವಾಹದ ಕುರಿತ ಅಭಿಪ್ರಾಯಕ್ಕೆ ಕಾರಣ ಆಕೆಯ ತಾಯಿ ಗಂಗಮ್ಮ ಹಾಗೂ ತಂದೆ ವಿಶ್ವನಾಥರಾಯರ ನಡುವೆ ಇದ್ದ ಹೊಂದಾಣಿಕೆಯ ಕೊರತೆ ಎನ್ನಬಹುದಾದರೂ.. ಆಕೆಯ ತಂದೆ ಅವಳನ್ನು ಬೆಳೆಸಿದ ರೀತಿ ಹಾಗೂ ನೀಡಿದ ಅತಿಯಾದ ಅಭಿಪ್ರಾಯ ಸ್ವಾತಂತ್ರ್ಯ ಕೂಡಾ ಒಂದರ್ಥದಲ್ಲಿ ಅವಳ ಮೊಂಡಾಟವನ್ನು ಹೆಚ್ಚಿಸಿತು ಎಂದರೆ ತಪ್ಪಾಗಲಾರದು. ಹೆಣ್ಣು ಮಕ್ಕಳನ್ನು ಹೆಚ್ಚು ಓದಿಸಿದ ಕಾಲಘಟ್ಟದಲ್ಲಿ ಆಕೆಯ ಓದಿಗೆ ಭಂಗ ತರದೆ ಆಕೆಯ ವ್ಯಕ್ತಿತ್ವಕ್ಕೆ ಹೊಳಪು ನೀಡಿದ ತಂದದ್ದು ಹೌದಾದರೂ ಮಗಳ ಮೇಲೆ ಅತಿ ವ್ಯಾಮೋಹ ಕೂಡಾ ಇದ್ದಿತು. ತಾಯಿ - ಮಗಳ ನಡುವೆ ಅಷ್ಟು ಸಲುಗೆ, ಬಾಂಧವ್ಯ ಇಲ್ಲದ್ದು ಗಂಗಮ್ಮನವರ ಹಳೆಯ ಕಾಲದ ಧೋರಣೆಗಳಿಂದಲೇ ಹೌದಾದರೂ ತಂದೆ - ಮಗಳಿಗಿಂತ.. ತಾಯಿ - ಮಗಳ ಬಂಧ ನಿಕಟವಾಗಿಲ್ಲದ್ದು ಯಾಕೋ ಒಂದು ರೀತಿ ವಿಭಿನ್ನವೆನ್ನಿಸಿತು. ಮಕ್ಕಳು ಧಿಕ್ಕರಿಸುವ ಮನೋಭಾವದಲ್ಲಿದ್ದಾಗ ಈ ರೀತಿಯ ಅಂತರ ಉಂಟಾಗುತ್ತದಾದರೂ.. ಇದಕ್ಕೆ ಶ್ರೀಮಂತಿಕೆ ಕೂಡಾ ಕಾರಣವಾಗಿರಬಹುದು ಎನ್ನಿಸುತ್ತದೆ.
ದಿವಾಕರ ಹಾಗೂ ಲೀಲಾವತಿ ಇಬ್ಬರ ನಡುವಿನ ಮದುವೆಯ ಕನಸು ಕಂಡು ಹಿರಿಯರು ಆಶಾ ಗೋಪುರ ಕಟ್ಟಿದ್ದರಾದರೂ.. ಅದು ತಿಳಿಯದಷ್ಟೇನೂ ಚಿಕ್ಕ ವಯಸ್ಸಲ್ಲ ಇಬ್ಬರಿಗೂ. ಕಾಲೇಜಿಗೆ ಹೋಗುವಾಗ ಇಬ್ಬರ ನಡುವಿನ ಬಂಧ ಪ್ರೇಮಕ್ಕೆ ತಿರುಗಿದರೂ ಲೀಲಾವತಿ ಅದನ್ನು ಮದುವೆಯಾಗಿ ಮಾರ್ಪಡಲು ಬಿಡಲಿಲ್ಲ. ದಿವಾಕರನದ್ದು ಕವಿ ಹೃದಯ, ಹೆಚ್ಚೆನಿಸುವಷ್ಟು ಭಾವುಕತೆ. ಲೀಲಾವತಿ ವಾಸ್ತವದಲ್ಲಿ ಯೋಚಿಸುತ್ತಾ, ನಿಖರವಾದ ವಾದ ಸರಣಿಯನ್ನು ಮುಂದಿಡುವವಳು. ಅವಳ ಪ್ರಕಾರ ದಿವಾಕರನ ಮೇಲಿದ್ದದ್ದು ಪ್ರೀತಿಯೇ ಆದರೂ.. ಕಾಮಭರಿತ ಪ್ರೀತಿಯಲ್ಲ. ಮೊದಲಿನಿಂದಲೂ ದಿವಾಕರನಿಗೆ ಅವಳು ತನ್ನನ್ನು ಮದುವೆಯಾಗುವಳೋ ಇಲ್ಲವೋ ಎಂಬುದರ ಕುರಿತು ಅನುಮಾನವಿದ್ದರೂ, ಅವಳು ಮದುವೆ ಬೇಡ ಎನ್ನುವುದು ಲಜ್ಜೆಯಿಂದಲ್ಲ.. ಬದಲಾಗಿ ಪ್ರಬುದ್ಧ ಆಲೋಚನೆಯಿಂದ ಎಂದೂ ಅರಿತಿದ್ದ. ಕನಕಲಕ್ಷ್ಮಮ್ಮ ಅತ್ತೆಯಾದರೂ ಲೀಲಾಳಿಗೆ ಸಿಗದ ತಾಯಿ ಪ್ರೀತಿ ತೋರಿದವರು. ದಿವಾಕರನನ್ನು ಅಲ್ಲದಿದ್ದರೆ ಬೇರೆ ಯಾರನ್ನಾದರೂ ವಿವಾಹವಾಗು ಎನ್ನುವ ಅವರ ಮಾತು ಅವಳ ಕಾಳಜಿ, ಪ್ರೀತಿಯನ್ನು ತೋರುತ್ತಾ ನಿಸ್ವಾರ್ಥ ಮಮತಾಮಯಿಯನ್ನು ತೋರುತ್ತದೆ.
ಲೀಲಾಳ ಸ್ನೇಹಿತೆ ಸುಮಿತ್ರೆ ಹಾಗೂ ಸದಾಶಿವರದ್ದು ಅನುರೂಪದ ದಾಂಪತ್ಯ. ಸುಮಿತ್ರೆ ಇಲ್ಲದ ಸಮಯದಲ್ಲಿ ಸದಾಶಿವನನ್ನು ಕಾಮಿಸಿದರೂ ಆತನ ಸಂಯಮ ಹಾಗೂ ಕಾಳಜಿ ಲೀಲಾವತಿಯನ್ನು ಆಗುವ ಅವಘಡದಿಂದ ತಪ್ಪಿಸಿತು. ಇಂದಿನ ಕಾಲದಲ್ಲಿ ತಾನಾಗಿಯೇ ಬೇಡಿ ಬಂದ ಹೆಣ್ಣನ್ನು ತಿರಸ್ಕರಿಸುವವರು ಎಷ್ಟು ಮಂದಿ ಕಾಣಸಿಗುತ್ತಾರೆ ? ಅಕಸ್ಮಾತ್ ಸಂಯಮ ತಪ್ಪಿ ಆ ತಪ್ಪು ನಡೆದೇ ಹೋಗಿದ್ದರೂ ಸುಮಿತ್ರೆ ಹಾಗೂ ಅವಳ ಬಾಂಧವ್ಯ ಹೇಗಿರುತ್ತಿತ್ತು ? ಕಾಮಾತುರಾಣಾಂ ನ ಭಯಂ, ನ ಲಜ್ಜಂ ಎನ್ನುವಂತೆ ತನ್ನ ಆಪ್ತ ಮಿತ್ರೆ ಹಾಗೂ ಅವಳ ಬದುಕನ್ನು ಆಲೋಚಿಸದೆ ಸ್ವಾರ್ಥ, ಕಾಮದಿಂದ ಕುರುಡಾಗಿದ್ದವಳಿಗೆ ಅದು ತನ್ನ ಪರಾಜಯವೆಂದೇ ತೋರಿತು.
ಅದಾದ ನಂತರ ಅವಳ ಬದುಕಲ್ಲಿ ಬಂದದ್ದು ಸುರೇಂದ್ರ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಅವಳ ಪತಿಯಾಗಬೇಕಿದ್ದವನು. ಅವನಾದರೂ ಲೀಲಾವತಿಗೆ ಅನುರೂಪನಾ ಅಥವಾ ಆಕೆ ಮೆಚ್ಚಿದವನಾ ಎಂದುಕೊಂಡರೆ ಅದೂ ಇಲ್ಲ. 3 ಮಕ್ಕಳ ತಂದೆ, ವಿದುರ, ಇಂಟರ್ ಮೀಡಿಯೆಟ್ ಅಷ್ಟೇ ಓದಿದ್ದವನು. ಆದರೆ, ಅಂತಸ್ತು, ಇಕ್ಕಟ್ಟು.. ತಂದೆಯ ಅನಾರೋಗ್ಯದ ಕಾರಣ ಎಲ್ಲವೂ ಮದುವೆಗೆ ಅಸ್ತು ಎನ್ನುವಂತೆ ಮಾಡಿತ್ತು.
ತನ್ನ ತಂದೆಯ ಜೊತೆಗೆ ಉಳಿಯುವ ಕಾರಣಕ್ಕಾಗಿ.. ತನ್ನ ಟ್ರಾನ್ಸ್ಪರ್ ಅನ್ನು ತಪ್ಪಿಸುವ ಕಾರಣಕ್ಕಾಗಿ ಆಕೆ ಮೊರೆ ಹೋಗಿದ್ದು ತಾನು ದ್ವೇಷಿಸುತ್ತಿದ್ದ ಪ್ರೊಫೆಸರ್ ಕಪನೀಪತಿಯನ್ನು. ಆತನ ಬಣ್ಣದ ಮಾತುಗಳಿಗೆ , ಆಲೋಚನೆಗೆ ಆ ಕ್ಷಣಕ್ಕೆ ಕುರುಡಾಗಿ ತಾನು ಮದುವೆಗೂ ಮೊದಲೇ ಶೀಲ ಕಳೆದುಕೊಂಡಳು. ಆದರೆ, ಆ ಕ್ಷಣಕ್ಕೆ ಅದು ತಪ್ಪು ಎಂದಾಗಲಿ ಅಥವಾ ಅನೈತಿಕ ಎಂದಾಗಲಿ ಅನ್ನಿಸದೇ ದೇಹಕ್ಕೆ ಅದು ಸ್ವಾಭಾವಿಕವೆಂದೇ ತಿಳಿದಿದ್ದಳು. ಅವಳಲ್ಲಿ ಆ ಕುರಿತು ಪಾಪಪ್ರಜ್ಞೆ ಕಿಂಚಿತ್ತೂ ಇರಲಿಲ್ಲ. ಆದರೆ, ಅದರ ಪರಿಣಾಮ ಗೊತ್ತಾಗಿದ್ದು ಆಕೆ ಗರ್ಭವತಿಯಾದಾಗ.
ಸುರೇಂದ್ರನ ಜೊತೆಗೆ ಮದುವೆಯಾದರೆ ತಾನು ಆ ಮಗುವಿಗೆ ಭವಿಷ್ಯ ಕೊಡಬಹುದು ಎಂಬ ಆಲೋಚನೆಯಲ್ಲಿದ್ದರೂ ಅದು ಸುರೇಂದ್ರನಿಗೆ ತಿಳಿದು ಆತ ಮದುವೆಗೆ ತಡೆಯಾದ. ನನಗೆ ಕಾಡುವ ಒಂದು ಪ್ರಶ್ನೆ ಎಂದರೆ ಲೀಲಾವತಿ ವಿಧವೆಯಾಗಿ ಒಂದು ಮಗು ಹೊಂದಿದ್ದು.. ವಿದುರ ಹಾಗೂ 3 ಮಕ್ಕಳ ತಂದೆಯಾದ ತನ್ನನ್ನು ಮದುವೆಯಾಗಲು ಒಪ್ಪಿದ್ದರೆ ಸುರೇಂದ್ರ ಆಗ ಒಪ್ಪುತ್ತಿದ್ದನೇ..? ಲೀಲಾವತಿ ಸುರೇಂದ್ರನ ಮಕ್ಕಳಿಗೆ ಅಂತಹಾ ತಾಯಿ ಮಮತೆಯೇನೂ ತೋರಿರಲಿಲ್ಲ. ಹಾಗಾದರೆ, ಸುರೇಂದ್ರನಿಗೆ ಲೀಲಾವತಿ ಮೇಲೆ ನಿಜಕ್ಕೂ ಪ್ರೀತಿ ಇತ್ತೇ ಅಥವಾ ಅದು ಆಕರ್ಷಣೆಯೇ ಎಂದೂ ಆಲೋಚಿಸುವಂತಾಗುತ್ತದೆ.
ಇನ್ನು ಕಪನೀಪತಿಯವರನ್ನೇ ಮದುವೆಯಾಗುವಂತಾಗುವ ಲೀಲಾವತಿಯ ಬದುಕು ಅವನ ಕಾಮ ಪಿಪಾಸುತನಕ್ಕೆ ನರಕವಾಗುತ್ತದೆ. ಅಲ್ಲದೇ, ನನಗೆ ಬಂದ ಆಲೋಚನೆ ಎಂದರೆ.. ಅತ್ಯಾಚಾರ ಮಾಡಿದವರನ್ನೇ ಮದುವೆಯಾಗುವುದೇ ಅದಕ್ಕೆ ಪರಿಹಾರ ಎಂಬುತಾಯಿತು ಈ ಪರಿಸ್ಥಿತಿ. ಅದು ಅತ್ಯಾಚಾರವಲ್ಲವಾದರೂ.. ಅದರಷ್ಟೇ ಪಾತಕದಂತೆಯೇ ಭಾಸವಾಯಿತು.
ಲೀಲಾವತಿಯ ನಡೆಗಳು ಅಪ್ಪನಿಗಾಗಿಯೇ ಎನ್ನುವಂತಿದ್ದರೂ.. ಅಪ್ಪನ ಆಸೆಯಂತೆ ದಿವಾಕರನನ್ನೇ ಮದುವೆಯಾಗಬಹುದಿತ್ತಲ್ಲವೇ ? ಬಹುಶಃ, ಅದು ಹರೆಯದ ಬಿಸಿರಕ್ತದ ತೀರ್ಮಾನ ಕೂಡಾ ಆಗಿದ್ದಿರಬಹುದು.
ತನಗೆ ಕಾಮವಿಲ್ಲದ ಪ್ರೇಮ ಬೇಕು. ಹಾಗಿದ್ದರೆ, ದಿವಾಕರನನ್ನು ಮದುವೆಯಾಗುತ್ತೇನೆ ಎಂದು ಕನಕಲಕ್ಷ್ಮಮ್ಮನವರ ಬಳಿ ಹೇಳಿದ ಲೀಲಾವತಿ ಮಾತಿಗೆ ಕನಕಲಕ್ಷ್ಮಮ್ಮನವರಿಗೆ ಮೊದಲು ಬಂದದ್ದು ಮಗನ ಸಾಂಸಾರಿಕ ಜೀವನದ ಚಿತ್ರಣ. ಅಕಸ್ಮಾತ್, ಈ ಮಾತನ್ನು ಆಕೆ ದಿವಾಕರನ ಬಳಿ ಹೇಳಿ ಆತ ಒಪ್ಪಿ ಈ ವಿಚಾರ ಮನೆಯವರಿಂದ ಮುಚ್ಚಿಟ್ಟು ಮದುವೆಯಾಗಿದ್ದರೆ.. ಆತನ ಭಾವುಕ ಮನಸ್ಥಿತಿ ಕಂಡು ಈ ಮಾತು ಬಂದಿತು. ಹರೆಯದಲ್ಲಿ ಹಿಗನ್ನುತ್ತಿರಬಹುದು, ಮುಂದೆ ಅವಳ ಮನಸ್ಥಿತಿ ಅದಕ್ಕೆ ಹೊಂದಿಕೊಳ್ಳುತ್ತದೆ ಎನ್ನುತ್ತಾ ಹಿರಿಯರು ಅವರಿಬ್ಬರಿಗೂ ವಿವಾಹ ನಿಶ್ಚಯ ಮಾಡಿದ್ದರೆ ..??
ಇನ್ನು ಆಕೆ ಗರ್ಭಪಾತಕ್ಕೆ ಒಪ್ಪದ್ದು ತನ್ನ ಸೌಂದರ್ಯ ಪ್ರಜ್ಞೆಯಿಂದ.. ಸುಮಿತ್ರೆಯ ಬದುಕಿಗೆ ಹಾಗೂ ದಿವಾಕರನ ಹೆಂಡತಿ ನಿರ್ಮಲೆಯ ಬದುಕಿಗೆ ತನ್ನನ್ನು ಹೋಲಿಸಿಕೊಳ್ಳುವಾಗಲೂ ಲೀಲಾವತಿಯ ಸೌಂದರ್ಯ ಪ್ರಜ್ಞೆಯೇ ಎದ್ದು ಕಂಡಿತು. ಅವರುಗಳು ಸಂಸಾರ, ಮಕ್ಕಳು ಎಂಬ ಜಂಜಾಟದಲ್ಲಿ ವಯಸ್ಸಾದವರಂತೆ ಕಂಡರೂ.. ಅವರುಗಳಿಗೆ ಸಂತೃಪ್ತ ಬದುಕು ಕಾಯುತ್ತಿತ್ತು. ಸುಮಿತ್ರೆ ತನ್ನ ಮಗು ಬಾಲಚಂದ್ರನಿಗೆ ಹಾಲೂಡಿಸುವಾಗ ನಿನ್ನ ಸೌಂದರ್ಯ ಹಾಳಾಗುವುದಿಲ್ಲವಾ..?? ಎಂದು ಬಾಯಿ ಬಿಟ್ಟು ಸಹಾ ಕೇಳಿದ್ದಳು.
ಬಾಲಚಂದ್ರನನ್ನು ನೋಡಿ ತನಗೂ ಮಗುವಿದ್ದಿದ್ದರೆ ಎನ್ನುವ ಆಸೆ ಅವಳಿಗೆ ಸುಳಿದು ಹೋಗಿದ್ದರೂ ಅಂತಹಾ ತಾಯಿ ಹೃದಯ ಎಲ್ಲಿಯೂ ಅಷ್ಟಾಗಿ ಕಾಣಲಿಲ್ಲ. ದಿವಾಕರನ ಅಣ್ಣ ಸುಧಾಕರ ಹಾಗೂ ರಾಜಮಣಿಯ ಮಗುವನ್ನು ಕಂಡಾಗ ಮಣ್ಣಲ್ಲಿ ಆಡಿ, ಸಿಂಬಳ ಸುರಿಸುತ್ತಾ ಬಂದ ಅದನ್ನು ದೂರವಿಡಲು ನೋಡಿದ್ದೇ ಹೆಚ್ಚು. ಇನ್ನು ಸುರೇಂದ್ರನನ್ನು ಮದುವೆಯಾದರೂ ಆಕೆ ಅವನ ಮೂರು ಮಕ್ಕಳಿಗೆ ತಾಯಿಯ ಸ್ಥಾನ ತುಂಬುತ್ತಿದ್ದದ್ದೂ ಸಂದೇಹವೇ. ಈ ನಿಟ್ಟಿನಲ್ಲಿ ಆಲೋಚಿಸಿದಾಗ ಆಕೆ ಒಂದು ಆಯಾಮ ಅಥವಾ ಏನೋ ಒಂದು ಮಗ್ಗುಲಿನಿಂದ ಬದುಕನ್ನು ಕಂಡು ಅದರಂತೆಯೇ ಮನಸ್ಸಿನಲ್ಲಿ ಆ ಕುರಿತು ನಿರ್ಣಯಿಸುತ್ತಿದ್ದಳೇ ಎನ್ನಿಸುತ್ತದೆ.
ಇದಕ್ಕೆ ಪೂರಕ ಎನ್ನಿಸುವಂತೆ.. ಅಪ್ಪ - ಅಮ್ಮನ ಹೊಂದಾಣಿಕೆ ಕೊರತೆಯನ್ನು ಗುರುತಿಸುವ ಲೀಲಾವತಿ ಅತ್ತೆ - ಮಾವ, ಸುಮಿತ್ರೆ - ಸದಾಶಿವರ ಹೊಂದಾಣಿಕೆಯ ದಾಂಪತ್ಯವನ್ನು ನೋಡಿ ಗುರುತಿಸದಾದಳೇ ? ಎನ್ನಿಸಿತು.
ಒಬ್ಬಳು ಲೆಕ್ಚರರ್ ಆಗಿ, ದಿಟ್ಟ ನಡೆ - ನುಡಿಯ ಹೆಣ್ಣಾಗಿ ಮಗುವಿಗೋಸ್ಕರ ಮದುವೆಯಾಗುವ ಅವಶ್ಯಕತೆ ಕಾಣಲಿಲ್ಲ. ಏಕೆಂದರೆ, ಲೋಕಾಪವಾದಕ್ಕೆ ಆಕೆ ಹೆದರುತ್ತಿರಲಿಲ್ಲ. ಹಾಗೆ ಹೆದರಿದ್ದೇ ಆಗಿದ್ದರೆ ಎಲ್ಲರಂತೆ ಮದುವೆಯಾಗಿ ಬದುಕು ನಡೆಸುತ್ತಿದ್ದಳೇನೋ.. ಆಕೆ ಹೆದರಿದ್ದು ಅಪ್ಪನಿಗಾಗಿಯೇ ಎಂದರೂ ತಪ್ಪಿಲ್ಲ. ಆಕೆಯ ಬಲ ಹಾಗೂ ದೌರ್ಬಲ್ಯ ಎರಡೂ ಅಪ್ಪನೇ ಆದದ್ದು ವಿಪರ್ಯಾಸ.
ತಾನು ಮದುವೆಯಾದರೂ ತಾನು ಸುಖವಾಗಿರಲಾರೆ ಎಂದು ಮದುವೆಯಾಗು ಎನ್ನುವಾಗ ನಿರಾಕರಿಸಲು ಆಡುತ್ತಿದ್ದ ಮಾತು ಅವಳ ಪಾಲಿಗೆ ಸತ್ಯವೇ ಆದದ್ದು ಬೇಸರದ ಸಂಗತಿ.
ಇನ್ನು ಸುಮಿತ್ರೆ ಜೊತೆಗೆ ಮಾತನಾಡುವಾಗ ಪ್ರಕೃತಿ ನಿಯಮಗಳನ್ನು ಮೀರಿಯೂ ಬದುಕುವ ಕುರಿತು ಮಾತನಾಡಿದ್ದಳು ಲೀಲಾವತಿ. ಮನುಷ್ಯ ತನ್ನ ನೈಸರ್ಗಿಕ ನಿಯಮಗಳನ್ನು ಮೀರಿ ನಡೆಯಲು ನೋಡಿದಾಗ ತಕ್ಕ ಪಾಠ ಕಲಿಸುತ್ತದೆ ಪ್ರಕೃತಿ. ಲೀಲಾವತಿಯ ಬದುಕು ಸಾವಿನಲ್ಲಿ ಅಂತ್ಯವಾದದ್ದು ಮಾತ್ರ ದುರಂತ. ಹಾಗೆಂದು ಮಕ್ಕಳಿಲ್ಲದ ವಿಧವೆಯರು ಅಥವಾ ಸನ್ಯಾಸಿನಿಯರು ಅಥವಾ ಕನ್ಯೆಯರು ಇಲ್ಲದಿಲ್ಲ. ಆದರೆ, ಕಾಮವನ್ನು ಮೀರಿ ಸಂಯಮದ ಬದುಕು ರೂಢಿಸಿಕೊಳ್ಳಬೇಕು.
ಮಿಸ್ ಲೀಲಾವತಿ ಎನ್ನುವ ಶೀರ್ಷಿಕೆ ಕುರಿತು ಆಲೋಚಿಸುವಾಗ ಆಕೆ ತ್ರಿಕರಣಪೂರ್ವಕವಾಗಿ ಒಪ್ಪಿ ಮದುವೆಯಾಗಲಿಲ್ಲ. ಹಾಗಾಗಿ ಅದು ಅವಳ ಪಾಲಿಗೆ ಮದುವೆ ಎನ್ನಿಸಲಿಲ್ಲ ಎಂಬರ್ಥದಲ್ಲಿ ಆಗಿರಬಹುದಾ.. ಅಥವಾ ಹುಚ್ಚು ಹಠ, ಬದುಕಿನ ಪ್ರಮುಖ ಘಟ್ಟವೊಂದನ್ನು ಸೂಚ್ಯವಾಗಿ ಹೇಳುತ್ತಿರಬಹುದಾ..
ಆ ಕಾಲಘಟ್ಟದಲ್ಲಿಯೇ ಇಂತಹಾ ಕಥಾವಸ್ತು ಬಂದಿದೆ ಎಂದರೆ ನಿಜಕ್ಕೂ ಶ್ಲಾಘನೀಯ. ಈ ಕಾಲದಲ್ಲಿ ಸಹಾ ಮದುವೆ ಆಗದೆ ಉಳಿಯುವ ಹೆಣ್ಣಿನ ನಿರ್ಧಾರ ವಿರೋಧವೇ.. ಅದಕ್ಕೇ ಎಂಬಂತೆ ವಿವಾಹದ ಬದಲಾಗಿ ಲಿವಿಂಗ್ ರಿಲೇಶನ್ ಕಂಡು ಕೊಳ್ಳುತ್ತಿದ್ದಾರೆ ಯುವ ಜನತೆ. ಬಹಳ ನಿಧಾನವಾಗಿ ಮದುವೆಯಾಗುವುದು ಅಥವಾ ಮದುವೆಯಾಗದೇ ಉಳಿಯುವುದು ಈಗೀಗ ಟ್ರೆಂಡ್ ಆಗುತ್ತಿದೆ. ಸಂಪಾದನೆ, ಸ್ವಾತಂತ್ರ್ಯ, ಆದರ್ಶ ಎಂಬ ಕಾರಣ ನೀಡಿ ನೈತಿಕ ಅಧಃಪತನದತ್ತ ಸಾಗುವ ಈ ಜನತೆಗೂ , ವಿವಾಹದ ಸಾರ್ಥಕತೆ ಕಂಡುಕೊಂಡ ಜನತೆಗೂ ವ್ಯತ್ಯಾಸವಿದೆ. ಲೀಲಾವತಿ ಹಾಗೂ ಸುಮಿತ್ರೆಯರಂತೆ.. ಆಯ್ಕೆ ಅವರವರದ್ದು ಅಷ್ಟೇ..
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ