ಪುಸ್ತಕದ ಶೀರ್ಷಿಕೆ : ಕಾವೇರಿ ತೀರದ ಕಥೆಗಳು
ಲೇಖಕರು : ಮೇಜರ್ | ಡಾ | ಕುಶ್ವಂತ್ ಕೋಳಿಬೈಲು
ಪ್ರಕಾಶಕರು : ಮೈತ್ರಿ ಪ್ರಕಾಶನ
ಮೊದಲನೇ ಮುದ್ರಣ : 2022
ಪುಟಗಳು : 106
ಬೆಲೆ : 150 ರೂ.
ಕಾವೇರಿ ತೀರದ ಕಥೆಗಳನ್ನು ಓದುವಾಗ ಇವು ಮುಸುಕಿದ ಮಂಜು ತೆರವಾದ ಮೇಲೆ ಕಾಣುವಂತಹಾ ಕತೆಗಳಂತೆ ಭಾಸವಾದವು. ಒಂದು ಪ್ರಾಂತ್ಯದ ಕಥೆಗಳನ್ನು ಕಟ್ಟಿಕೊಡುವಾಗ ವೈಭವೀಕರಿಸಿ, ರೋಚಕವಾಗಿ ಕಟ್ಟಿ ಕೊಡುವುದೇ ಹೆಚ್ಚು. ಆದರೆ, ಇಲ್ಲಿ ವೈಭವೀಕರಣ ಮುಗಿದು ವಾಸ್ತವತೆಯನ್ನು ತೆರೆದಿಟ್ಟಿರುವ ಕಥೆಗಳಿವೆ. ಹಿಂದಿನ ಕಾಲದ ವೈಭೋಗಗಳು ಮರೆಯಾಗುತ್ತಿರುವ ಕಾಲಘಟ್ಟದ ಇಂದಿನ ಪೀಳಿಗೆಯ ಕಥೆಗಳು ಕಾಣುತ್ತಿವೆ. ಕಾವೇರಿ ತೀರದಲ್ಲಿ ಮಾತ್ರವಲ್ಲದೇ ಬೇರೆ ಪ್ರಾಂತ್ಯಗಳಲ್ಲಿಯೂ ಈ ಕಥೆಗಳು ಕಾಣಸಿಗುತ್ತವಾದರೂ ಇಲ್ಲಿ ಪ್ರಾದೇಶಿಕತೆಯ ಎಳೆಯ ಜೊತೆಗೆ ಇಲ್ಲಿನ ಪರಿಸರದಲ್ಲಿಯೇ ಕಂಡು ಬರುವ ವ್ಯಕ್ತಿಗಳ ಸೂಕ್ಷ್ಮ ನಡವಳಿಕೆಗಳನ್ನು ಕಾಣಬಹುದು. ಹೆಣ್ಣು ಮಕ್ಕಳೇ ಸ್ಟ್ರಾಂಗ್ ಎನ್ನುವ ಭಾವನೆ ಬಂದರೂ ಆ ಗಟ್ಟಿತನದ ಜೊತೆ ಜೊತೆಗೆ ತಾಳ್ಮೆಯ ಎಳೆಯನ್ನು ಸಹಾ ತೆರೆದಿಡುತ್ತಾರೆ. ಗಂಡಿನ ಅಸೂಯೆ, ಸೋಮಾರಿತನ, ಹೊಣೆಗಾರಿಕೆಯಿಂದ ಕಳಚಿಕೊಳ್ಳುವ ಪರಿ ಹೀಗೆ ಕಾಣಸಿಕ್ಕ ಚಿತ್ರಣಗಳು ಕೇವಲ ವೀರನಂತೆ ನಾವು ಕಲ್ಪಿಸಿಕೊಳ್ಳುವ ಪಾತ್ರಕ್ಕಿಂತ ವಿಭಿನ್ನವಾಗಿದ್ದು ವಾಸ್ತವಕ್ಕೆ ಎಳೆತರುತ್ತವೆ. 11 ಕಥೆಗಳ ಕಥಾ ಸಂಕಲನ ಇವರ ಹಿಂದಿನ ಕಥಾಸಂಕಲನ 'ಕೂರ್ಗ್ ರೆಜಿಮೆಂಟ್'ಗಿಂತ ಕಥಾ ಹಂದರದಲ್ಲಿ ಕೊಂಚ ವಿಸ್ತಾರವಾಗಿದೆ.
ಮಡಿಕೇರಿ ಎಂದರೆ ಈಗ ರೆಸಾರ್ಟ್ ಗಳು ನೆನಪಾದರೂ ಕೊಂಚ ಹಿಂದೆ ನೆನಪಾಗುತ್ತಿದ್ದದ್ದು ಎಸ್ಟೇಟ್ ಗಳು. ಅಂತಹಾ 'ಬೀಟಿ ಕಾಡು ಎಸ್ಟೇಟ್' ರಾವ್ ಬಹದ್ದೂರ್ ಚೆಂಗಪ್ಪನವರ ಕಾಲಕ್ಕಿಂತ ಮೊಮ್ಮಗ ಉತ್ತಯ್ಯನ ಕಾಲಕ್ಕೆ ಕೈ ತಪ್ಪಿದ್ದು.. ಈಗ ಉತ್ತಯ್ಯ ಅದೇ ಎಸ್ಟೇಟಿನಲ್ಲಿ ಬ್ಯಾನರ್ಜಿ ಸಾಹೇಬರ ಕೈಕೆಳಗಿನ ಕೆಲಸಗಾರ. ಕೆಲಸಗಾರನೇ ಆದರೂ ಉಳಿದವರಿಗಿಂತ ಕೊಂಚ ಹೆಚ್ಚಿನ ಸೌಲಭ್ಯವಿತ್ತು. ಎಸ್ಟೇಟ್ ಮಾರಾಟವಾದ ನಂತರವೂ ಅಲ್ಲಿನ ಗುಳಿಗದ ಕಲ್ಲು ಹಾಗೂ ಬೀಟಿ ಮರದ ತಂಟೆಗೆ ಹೋಗಿರಲಿಲ್ಲ. ಆದರೆ, ಕಾಲಕ್ರಮೇಣ ಆದ ಬದಲಾವಣೆಗಳು ಎಷ್ಟೆಲ್ಲಾ ಪರಿಣಾಮಕ್ಕೆ ಕಾರಣವಾಯಿತು. ಕೇವಲ ಬೀಟಿ ಕಾಡು ಎಸ್ಟೇಟ್ ಮಾತ್ರವಲ್ಲ.. ಸಂಗಮ್ ಬಾರು ಕೂಡಾ ಬದಲಾಗಿತ್ತು. ಪ್ರಾದೇಶಿಕವಾಗಿ ಬದಲಾವಣೆಗಳನ್ನು ಮಾಡುವಾಗ ಅಲ್ಲಿನ ಜನರ ಮೇಲೆ ಆಗುವ ಬದಲಾವಣೆಗಳು ಹಾಗೂ ಬೀರುವ ಪರಿಣಾಮಗಳನ್ನು ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಟ್ಟಿದ್ದಾರೆ. ಸ್ಥಳ, ವೇಷ, ಭಾಷೆ, ನೋಟ ಎಲ್ಲವೂ ಬದಲಾದರೂ ಬದಲಾಗದ್ದು ಮನಸ್ಸಿನ ನಂಬಿಕೆಯ ಆಚರಣೆಗಳು. ಅಲ್ಲವಾ..?
'ಕೊರೊನಾ ವಾರಿಯರ್' ಕಥೆಯಲ್ಲಿ ಮಿಲಿಟ್ರಿ ಮುತ್ತಣ್ಣ ಊರಿಗೆ ಬಂದಾಗ ಅವನ ತಾಯಿ ಹೆಣ್ಣು ನೋಡಲು ಶುರು ಮಾಡುವ ಪ್ರಸಂಗವಿದೆ. 'ಕೊಡಗಿನಲ್ಲಿ ಕದನ ಪ್ರಿಯರಾದ ಮಿಲಿಟರಿ ಹುಡುಗರ ಮೊದಲ ಆಯ್ಕೆ ಎಂದಾದರೂ ಶಾಂತಿಯ ಸಂಕೇತವಾದ ಬಿಳಿಯುಡುಗೆಯುಡುವ ಸಿಸ್ಟರ್ ಗಳಾಗಲು ಸಾಧ್ಯವೇ ?!' ಎನ್ನುವ ಪ್ರಶ್ನೆಯೊಂದಿಗೆ ಶುರುವಾದರೂ ಸಾಮಾನ್ಯವಾಗಿ ಅಲ್ಲಿರುವ ಪದ್ದತಿ ಮಿಲಿಟರಿಯವರಿಗೆ ಟೀಚರ್ ಹಾಗೂ ಸಿಸ್ಟರ್ ಗಳಿಗೆ ಪೋಲೀಸ್ ಅಥವಾ ಸರ್ಕಾರಿ ಕೆಲಸದಲ್ಲಿ ಇರುವವರೆನ್ನುವ ಅಲಿಖಿತ ನಿಯಮದ ಹಿಂದಿನ ಕಾರಣವನ್ನು ಹೇಳುತ್ತಲೇ.. ಮಿಲಿಟ್ರಿ ಮುತ್ತಣ್ಣ ಅಮ್ಮ ಮೆಚ್ಚಿದ ಸಿಸ್ಟರ್ ಅನ್ನು ನೋಡಲು ಪರದಾಡುವ ಪ್ರಸಂಗಗಳಿವೆ. ಆಕೆ ಕೊರೊನಾ ವಾರಿಯರ್. ತಿಳಿ ಹಾಸ್ಯದ ಲೇಪದ ಈ ಕತೆ ಓದಲು ಮಜವೆನಿಸುತ್ತದೆ.
'ಹಳ್ಳಿ ರೇಡಿಯೋ' ರಾಂಪಣ್ಣನ ಮುಗ್ಧತನದಿಂದ ಸೆಳೆಯಿತು. ಮೌನವಾಗಿರುವವರಲ್ಲಿ ಮೂಡುವ ಕನಸೊಂದು ಅದೆಷ್ಟು ಸುಂದರ.. ಅವರಿಗೆ ಆಸೆ, ಕನಸುಗಳೇ ಇಲ್ಲವೇನೋ ಎನ್ನುವಷ್ಟರ ಮಟ್ಟಿಗೆ ತಮ್ಮಷ್ಟಕ್ಕೆ ತಾವಿದ್ದರೂ ಅದೊಂದು ಕನಸಿನ ನನಸಿಗೆ ಅದೆಷ್ಟು ಪರದಾಡಬಲ್ಲರು ಎಂದೂ ಕಾಣುವ ಕಥೆ. ಸದಾ ರೇಡಿಯೋವನ್ನೇ ಜೀವದಂತೆ ಪ್ರೀತಿಸುವ ರಾಂಪಣ್ಣನ ಧ್ವನಿ ರೇಡಿಯೋದಲ್ಲಿ ಮೂಡಿ ಬಂದಿತಾ ? ಓದಿ ನೋಡಿ. ಕೃಷಿ, ಕೃಷಿಕರ ಜೊತೆಗೆ ಚುನಾವಣೆ ಹಾಗೂ ತನ್ನ ವರ್ಚಸ್ಸಿಗೆ ಮುಗ್ಧರನ್ನು ಉಪಯೋಗಿಸಿಕೊಳ್ಳುವ ಕೃಷ್ಣಾನಂತಹವರೂ ಕಾಣುತ್ತಾರೆ.
ನನಗೆ ಈ ಕಥಾ ಸಂಕಲನದಲ್ಲಿ ಇಷ್ಟವಾದ ಕಥೆ 'ಒದ್ದೆ ಹಾಸಿಗೆ'. ಶಾಂತ ಸಿಸ್ಟರ್ ನ ಶಾಂತತೆಗೆ ಬೆಳ್ಳಿಯಪ್ಪನಂತಹವನಾ..? ಎನ್ನಿಸಿತು. ಆತನ ಸಿಟ್ಟು, ಹೊಣೆಗೇಡಿತನಕ್ಕೆ ಅವನು ಉಪಯೋಗಿಸಿಕೊಳ್ಳುವ ಅಸ್ತ್ರ ಮಗುವಿನ 'ಒದ್ದೆ ಹಾಸಿಗೆ'. ಮಗುವಿನ ಮಾನಸಿಕ ಸ್ಥಿತಿಯ ಜೊತೆಗೆ ಶಾಂತ ಸಿಸ್ಟರ್ ನ ಮಾನಸಿಕ ಸ್ಥಿತಿಯ ಚಿತ್ರಣವೂ ಇದೆ. ಈ ಕಥೆ ಓದಿದಾಗ ಬೇಸರ, ಸಿಟ್ಟಿಗಿಂತ ಬೆಳ್ಳಿಯಪ್ಪನಂತಹವರ ಕುರಿತು ಅಸಹ್ಯ ಮೂಡಿತು.
'ದೇವರ ಗದ್ದೆ'ಯ ಬೋಜಮ್ಮ ಸುಬೇದಾರ್ ಸುಬ್ಬಯ್ಯನವರ ಮಗಳು. ಲಿಂಗರಾಜ ಅವಳ ತಮ್ಮ..ಬೋಜಮ್ಮನ ಡೇರ್ ಡೆವಿಲ್ ನಡವಳಿಕೆ ಕಂಡಾಗ ಅವಳ ಆ ಮನಸ್ಸಿನಲ್ಲಿ ಇರುವ ಕಾಳಜಿ ಮೊದಲು ಕಾಣದಿದ್ದರೂ ನಂತರ ಸುಸ್ಪಷ್ಟವಾಗಿ ಕಂಡಿತು. ಅವಳು ಉಳಿಸಿದ್ದು ಕೇವಲ ದೇವರ ಗದ್ದೆಯನ್ನು ಮಾತ್ರವಲ್ಲ. ಸುಬೇದಾರ್ ಸುಬ್ಬಯ್ಯನ ಮಗಳಿಗೆ ಇರುವಷ್ಟು ಗಂಡಸುತನ ಉಳಿದವರಿಗೂ ಇರಬೇಕಿತ್ತು ಎನ್ನುವ ಮಾತನ್ನೂ.. ಹೆಣ್ಣು ಮಕ್ಕಳೆಂದರೆ ಹೀಗಿರಬೇಕು ಎನ್ನುವಂತಹಾ ಮೆಚ್ಚುಗೆಯ ಭಾವವನ್ನು ಹುಟ್ಟಿಸುವುದರ ಜೊತೆಗೆ ಅವರ ಬಲಿಷ್ಠತೆಯನ್ನು ಸಹಾ ತೋರಿಸಿದ ಕಥೆ ಇದು.
'ದೇವರಪುರ' ಅಲ್ಲಿನ ಸ್ಥಳೀಯತೆಯ ಮತಾಂತರದ ಸಮಸ್ಯೆಯನ್ನು ತೆರೆದಿಡುತ್ತದೆ. ಇದುವರೆಗೆ ನಾನು ಓದಿದ ಈ ರೀತಿಯ ಸಮಸ್ಯೆಯನ್ನು ತೆರೆದಿಡುವ ಕಥೆಗಳಲ್ಲಿಯೇ ವಿಭಿನ್ನವೆನಿಸಿತು. ಹರಿಭಟ್ಟರ ಆತಂಕ ಹಾಗೂ ಕ್ರೈಸ್ತ ಧರ್ಮಕ್ಕೆ ಮತಾಂತರವಾದ ಜವನ ಕಾಣೆಯಾಗುವ ಕತೆಯ ಹಿಂದೆ ಊಹಿಸಲಾಗದ ತಿರುವು ಕಂಡಿತು.
ಕೊಡಗಿನ ಮದುವೆಗಳೆಂದರೆ ನೆನಪಾಗುವುದು ಓಲಗ, ವಾದ್ಯ, ಮೋಜು, ಮಸ್ತಿಗಳು. ಆದರೆ, ಅಲ್ಲಿನ ಮೋಜು ಮಸ್ತಿ ಹೆಚ್ಚಾಗಿ ಮದುವೆ ಮನೆಯಲ್ಲಿ ಆಗುವ ಗಲಾಟೆಗಳ ನಂತರ ಏನೂ ಆಗಿಯೇ ಇಲ್ಲವೆಂಬಂತೆ ಇರುವ ಮದುವೆಗಳಲ್ಲಿ ಹಾನಿಯಾಗಿ, ತೊಂದರೆಯಾಗುತ್ತಿದ್ದದ್ದು ಕೊಡವ ಸಮಾಜ ಹಾಗೂ ಗೌಡ ಸಮಾಜ ಎಂದೇ ಹೆಸರಾಗಿದ್ದ ಮದುವೆ ಛತ್ರಗಳಲ್ಲಿ. ಅಂತಹಾ ಮಡಿಕೇರಿ ಗೌಡ ಸಮಾಜದ ಮ್ಯಾನೇಜರ್ ಆಗಿದ್ದ ಕೂರ್ಗ್ ರೆಜಿಮೆಂಟ್ ನ ನಿವೃತ್ತ ಹವಾಲ್ದಾರ್ ಕುಶಾಲಪ್ಪನ ಸುಪರ್ದಿಯಲ್ಲಿ ಇಂತಹಾ ಮದುವೆಗಳು ನಿರಾತಂಕವಾಗಿ ಸಾಗುತ್ತಿದ್ದರೂ.. ಮೂರು ದಶಕಗಳ ನಂತರ ಈಗ ಬದಲಾವಣೆಯ ಸಮಯ. ಇದರಲ್ಲಿ ಇಷ್ಟವಾಗಿದ್ದು ಕುಶಾಲಪ್ಪನವರು ಬದಲಾವಣೆಗೆ ಹೊಂದಿಕೊಂಡ ಪರಿ.
'ಪ್ರಕಾಶನ ಹುಡುಗಿ' ಒಂದು ಕಡೆಯಿಂದ ಉಂಟಾದ ನವಿರಾದ , ಮುಗ್ಧ ಪ್ರೇಮದ.. ತಲ್ಲಣಿಸುವಂತೆ ಮಾಡುವ ಪ್ರೇಮ ಕಥನ. ಈ ಪ್ರೇಮ ಕಥನದ ಕಾಲ ಕೊರೋನಾ ಕಾಲಘಟ್ಟ. ಪ್ರೇಮದ ಆಳ ಅರಿವಾಗುವುದು ಕಥೆಯ ಕೊನೆಯಲ್ಲಿ.
ಪ್ರಾದೇಶಿಕತೆಯನ್ನು, ಸ್ವದೇಶಿ ಜನರನ್ನೂ ಈಗ ವಿದೇಶಿಯರು ಆವರಿಸಿಕೊಳ್ಳುತ್ತಿರುವ ಕಾಲ. ಅಂತಹಾ ಪ್ರತಿಭಟನೆ ಮಾಡಲು ಬೆಂಗಳೂರಿಗೆ ಹೋಗಿ ನಂತರದ ಪರಿಣಾಮವನ್ನು ಅನುಭವಿಸುವ ಕತೆ 'ಬೆಂಗಳೂರು ಚಲೋ'. ಅಂಗಡಿ ರಾಜಣ್ಣ ರಾಜಕೀಯವನ್ನು ಬಿಡಬೇಕೆಂದು ಬಯಸುತ್ತಿದ್ದರೂ.. ರಾಜಕೀಯವೇ ಅವನನ್ನು ಬಿಡದಿದ್ದ ಕಾಲದಲ್ಲಿ ಇದೊಂದು ಘಟನೆ ಅವನನ್ನು ಬದಲಾಯಿಸಿತು. ವೈಯಕ್ತಿಕವಾಗಿ ಘಾಸಿಯಾದಾಗಲಷ್ಟೇ ನೋವು, ತಲ್ಲಣಗಳು ಅರಿವಾಗುವುದು ಎನ್ನುತ್ತಾರಲ್ಲಾ ಅಂತಹದ್ದೇ ಪರಿಸ್ಥಿತಿ ಎದುರಾಯಿತು ರಾಜಣ್ಣನಿಗೆ. ಇಲ್ಲಿ ಕಂಡ ಪಾಸಿಟಿವ್ ಅಂಶವೆಂದರೆ ಸುಜಾತ ದಿನಸಿ ಅಂಗಡಿಯನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುವುದು. ಬಂದ ಪ್ರತಿಕೂಲ ಪರಿಸ್ಥಿತಿಯನ್ನೂ ಅನುಕೂಲಕರವಾಗಿ ಮಾರ್ಪಡಿಸಿಕೊಳ್ಳುವ ಕಲೆ ತಿಳಿದವರು ಗೆಲ್ಲುವ ಬಗೆ, ಆಶಾಕಿರಣ ತೋರುವ ಸುಜಾತ ಚಿಕ್ಕ ಪಾತ್ರವಾದರೂ ದೊಡ್ಡವಳಾಗಿ ಭಾಸವಾದಳು.
ಸೈನಿಕರ ಬದುಕು ಅದೆಷ್ಟು ತ್ಯಾಗ, ಬಲಿದಾನಗಳಿಂದ ಕೂಡಿರುತ್ತದೆ. ಈಗ ಎಷ್ಟೋ ಕಡೆ ಇಂಟರ್ನೆಟ್ ವ್ಯವಸ್ಥೆ ಇದ್ದು ಮೊದಲು ಮನೆಯವರನ್ನು ಸಂಪರ್ಕಿಸಲು ಅದೆಷ್ಟು ಕಷ್ಟ.. ಈಗಲೂ ಕಷ್ಟವಿದ್ದರೂ.. ಮೊಬೈಲ್ , ವಿಡಿಯೋ ಕಾಲ್ ಆ ಕಷ್ಟವನ್ನು ಕೊಂಚ ಹಗುರಾಗಿಸಿದೆ. ಆದರೆ, ಜೊತೆಗಿರುವಂತೆ ಬಯಸುವ ಸಂದರ್ಭದಲ್ಲಿ ಅವರು ಜೊತೆಗಿರದಾಗ.. ಆ ಕನಸುಗಳನ್ನು ಹೊತ್ತು ಬರುವ ಒಬ್ಬ ಸೈನಿಕನ ಕತೆ "ತೊದಲು ಬದಲು".
ಮಧುಮಗಳನ್ನು ಒಪ್ಪಿಸುವಾಗ "ಎಮ್ಮ ಮನೆಯಂಗಳದಿ" ಎನ್ನುವ ಹಾಡು ಎಂತಹದ್ದೇ ಕಲ್ಲು ಹೃದಯದವರನ್ನು ಸಹಾ ಕಲಕುವಂತಹಾ ಹಾಡು. ಅಂತಹಾ ಸೊಗಸಾದ ಹಾಡು ಹಾಡುತ್ತಿದ್ದವಳು ಗಾಯತ್ರಿ. ಅಂತಹಾ ಕಂಠ ಸೊಬಗಿನ ಜೊತೆಗೆ ಅವಳ ಸರಳತೆ ಕೂಡಾ ಎಂಥಹವರನ್ನೂ ನೋಡುವಂತೆ ಮಾಡಬಲ್ಲದು. ಆದರೆ, ಅಂತಹಾ ಗಾಯಕಿ ಇನ್ನುಮುಂದೆ ಹಾಡಲೇ ಆಗಲಿಲ್ಲ. ಅದೃಷ್ಟವಂತ ಹೆಂಡತಿಯನ್ನು ಪಡೆದ ಬೆಳ್ಯಪ್ಪನ ಸಂಕುಚಿತ ಮನಸ್ಥಿತಿಗೆ ಶಪಿಸುವಂತಾಗುತ್ತದೆ.
ಇಲ್ಲಿನ ಕೆಲವು ಕತೆಗಳ ಅಂತ್ಯವನ್ನು ಸೂಚ್ಯವಾಗಿ ಸೂಚಿಸಿದ್ದಾರೆ ಲೇಖಕರು. ಇನ್ನು ಕೆಲವು ಕಥೆಗಳ ಅಂತ್ಯ ಊಹೆಗೆ ಬಿಟ್ಟದ್ದು.. ಕೆಲವು ಕತೆಗಳಿಗೆ ನೀಳ್ಗತೆ ಅಥವಾ ಕಾದಂಬರಿಯಾಗುವ ಶಕ್ತಿಯಿದೆ. ಕೊರೋನಾ ಕಾಲಘಟ್ಟದಲ್ಲಿಯೂ ಹೆಕ್ಕಿರುವ ಸುಂದರ ಕತೆಗಳ ಜೊತೆಗೆ, ಆಸ್ಪತ್ರೆಯ ವಾತಾವರಣ ಸಶಕ್ತವಾಗಿ ಮೂಡಿಬಂದಿದೆ. ಇಲ್ಲಿನ ಕತೆಗಳೆಲ್ಲವನ್ನೂ ಒಗ್ಗೂಡಿಸಿದ ಒಂದು ಕಾಮನ್ ಪಾಯಿಂಟ್ ಎಂದರೆ ಬದಲಾವಣೆ ಹಾಗೂ ಪರಿವರ್ತನೆಗಳು. ಒಂದು ಪ್ರಾಂತ್ಯದ ಜೀವಿಸುವಿಕೆಯನ್ನು, ವಿವಿಧ ಅಂಶಗಳನ್ನು ಬಹಳ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಮುಂಜಾನೆಯ ಮಂಜು ಕರಗಿ, ಎಳೆಬಿಸಿಲಿನ ಹದ ಸಿಗುವಂತಹಾ ಕತೆಗಳೆಲ್ಲವೂ ಇಷ್ಟವಾದವು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ