ಪುಸ್ತಕದ ಶೀರ್ಷಿಕೆ : ಮರ ಹತ್ತದ ಮೀನು
ಲೇಖಕರು : ವಿನಾಯಕ ಅರಳಸುರಳಿ
ಪ್ರಕಾಶಕರು : ಸಾಹಿತ್ಯಲೋಕ ಪಬ್ಲಿಕೇಷನ್ಸ್
ಮೊದಲನೇ ಮುದ್ರಣ : 2023
ಪುಟಗಳು : 136
ಬೆಲೆ : 165 ರೂ.
ಈ ಕಥಾ ಸಂಕಲನವನ್ನು ಓದಿ ಕೆಳಗಿಟ್ಟು ಮರೆಯಲಾಗುವುದಿಲ್ಲ. ಇಲ್ಲವೇ.. ತಕ್ಷಣಕ್ಕೆ ಮತ್ತೊಂದು ಪುಸ್ತಕವನ್ನೂ ಎತ್ತಿಕೊಳ್ಳಲಾಗಲಿಲ್ಲ. ಹೆಚ್ಚೇ ಎನ್ನಿಸುವಂತೆ ಭಾವುಕವಾಗಿ ಆವರಿಸಿದ ಕತೆಗಳಿವು. ವಿನಾಯಕವರ ಎರಡನೇ ಪುಸ್ತಕವಾದರೂ ಇದು ಅವರ ಮೊದಲ ಸಂಕಲನ. 2023 ನೇ ಸಾಲಿನ ಈ ಹೊತ್ತಿಗೆ ಪ್ರಶಸ್ತಿ ಪಡೆದಿರುವ ಕೃತಿ. ಇರುವುದು 10 ಕತೆಗಳಾದರೂ ಊರಿನ, ಬೆಂಗಳೂರಿನ ಕತೆಗಳನ್ನು ಇಲ್ಲೇ ಎಲ್ಲೋ ನಡೆದಂತಿವೆ ಎಂಬಂತೆ ಚಿತ್ರಿಸಿರುವ ಕತೆಗಳು.
'ಗೋಪಿಯ ಅಜ್ಜಿ' ಹಾಗೂ ಗೋಪಿಯ ಸಂಬಂಧದ ಆಪ್ತತೆಯ ಜೊತೆಗೆ ಕಂಡದ್ದು ಒಂದಾನೊಂದು ಕಾಲದಲ್ಲಿ ಜೋರು, ಜಬರ್ದಸ್ತಿನಿಂದ ಮೆರೆದಿದ್ದ ಅಜ್ಜಿಯ ಕೊನೆಯ ದಿನಗಳು. ಇಂತಹಾ ಅಜ್ಜಿಯರು ಹಳ್ಳಿಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತಾರೆ. ಸೊಸೆಯ ಜೊತೆಗಿನ ಸಂಬಂಧ ಸರಿಯಿಲ್ಲದಿದ್ದರೂ ಮೊಮ್ಮಕ್ಕಳ ಮೇಲೆ ಹೆಚ್ಚು ಅನ್ನಿಸುವಷ್ಟು ಪ್ರೀತಿ ತೋರುವ ಇಂತಹಾ ಜೀವಗಳು ಮೊಮ್ಮಕ್ಕಳ ಮನಃಪಟಲದಲ್ಲಿ ಅಚ್ಚಾಗಿ ಉಳಿಯುತ್ತಾರೆ. ವಯಸ್ಕರಾದರೆ ಅವರ ಒಳ್ಳೆಯತನ, ಕೆಟ್ಟತನಗಳನ್ನು ಅಳೆಯಬಲ್ಲರು. ಆದರೆ, ಮಕ್ಕಳು ನೆನಪಿಡುವುದು ತಮಗೆ ದಕ್ಕಿದ ಅವರ ಒಳ್ಳೆಯತನಗಳನ್ನು ಮಾತ್ರವೇ.. ಹೀಗೆ ಗೋಪಿಗೆ ದಕ್ಕಿದ ಅಜ್ಜಿಯ ಕತೆ ನಮಗೂ ಸಿಕ್ಕಿತು.
'ಮರ ಹತ್ತದ ಮೀನು' ಎಂಬ ಶೀರ್ಷಿಕೆ ಕಂಡಾಗ ಕತೆಯನ್ನು ಊಹಿಸಿಕೊಂಡದ್ದೇ ಬೇರೆಯಾಗಿ. ಶಿಕ್ಷಣ ವ್ಯವಸ್ಥೆಯಲ್ಲಿ ವೈಫಲ್ಯವಾಗುವ ಆದರೆ ಬೇರೆ ರಂಗದಲ್ಲಿ ಸಾಧನೆ ಮಾಡುವ ಮಕ್ಕಳಿಗೆ ಸಾಮಾನ್ಯವಾಗಿ ಈ ರೀತಿಯ ಮಾತನ್ನಾಡುತ್ತೇವೆ. ಆದರೆ, ದೊಡ್ಡವರಾದ ನಂತರವೂ ಕೆಲಸದಲ್ಲಿಯೂ ಇದೇ ಪರಿಸ್ಥಿತಿ ಎದುರಾದರೆ ? ಹವ್ಯಾಸ ಹಾಗೂ ಹೊಂದಾಣಿಕೆಯ ಕೆಲಸದ ನಡುವೆ ತಮ್ಮದಲ್ಲದ ಬದುಕನ್ನು ಬದುಕುವವರೆಷ್ಟೋ.. ಇಲ್ಲಿನ ಗೌತಮ್ ಟಿ.ಕೆ ಹಾಗೂ ಗೌತಮ್ ತಾರೆಹಿತ್ಲು ಇವರಿಬ್ಬರಲ್ಲಿ ಅವನು ಅವನ ವ್ಯಕ್ತಿತ್ವ ಅವನಿಗೆ ಅನ್ನಿಸುವುದು ಹೇಗೆ ? ಎಷ್ಟೋ ಪ್ರತಿಭೆಗಳು ಒಂದು ರಂಗದಲ್ಲಿ ಸಾಧನೆ ಮಾಡಿ ಇನ್ನೊಂದರಲ್ಲಿ ಹಿಂದೆ ಬಿದ್ದಾಗ ಅವರಲ್ಲಿ ಉಂಟಾಗುವ ಅಂತರ್ಮಥನ ಕಾಡುವಂತಿದೆ.
'ಕೆಂಪು ಕುಂಕುಮ - ಕಪ್ಪು ಕುಂಕುಮ'ದ ನಾಗರಕೊಡಿಗೆ ನಾಗರಯ್ಯನ ಕೆಲಸ ಇಂಥದ್ದೇ ಎಂದು ಹೇಳಲಾಗದಿದ್ದರೂ 'ಕೆಲಸವಿಲ್ಲದವನಿಗೆ ಮಾಡಿದ್ದೆಲ್ಲವೂ ಉದ್ಯೋಗವೇ' ಆದಾಗ ಅವರು 'ಶಣ್ ಪಾಂಡುರಂಗ'ನ ಕಣ್ಣಿಗೆ ಬಿದ್ದ ರೀತಿ ಮಕ್ಕಳ ನಿಷ್ಕಲ್ಮಶ ಮನದಿಂದ ಹೆಣೆದ ಕತೆಯಾಗಿ ತೋರುತ್ತದೆ. ಇಲ್ಲಿ ಬರುವ ನಾಗರಯ್ಯ ಪೋಲೀಸ್ ಸ್ಟೇಶನ್ ಮೆಟ್ಟಿಲೇರಿದಾಗ ಯಾರೂ ಆತನ ಸಹಾಯಕ್ಕೆ ಬಾರದ್ದು ಕೇವಲ ಅಸಹಾಯಕತೆಗೆ ಹಿಡಿದ ಕನ್ನಡಿಯಂತೆ ಕಾಣಲಿಲ್ಲ. ಬದಲಾಗಿ, ಕಳೆದು ಹೋಗುತ್ತಿರುವ ಮಾನವೀಯತೆಯನ್ನೂ ನೆನಪಿಸಿದಂತಾಯಿತು. ಆದರೆ, ನಾಗರಯ್ಯನಿಗೂ ಅವನ ಕುಂಕುಮಕ್ಕೂ ಅದೇನು ಅವಿನಾಭಾವ ನಂಟೋ.. ಈ ಕತೆಯ ಕೊನೆ ನಾಗರಯ್ಯನ ಚಿತ್ರವನ್ನಂತೂ ಹಾಗೆಯೇ ಉಳಿಸಿತು. ಆತ ಆಡುವ ಭಾಷೆಯ ಶೈಲಿ ಸೊಗಸಾಗಿದೆ.
"ಆಹಾರ - ಆರೋಗ್ಯ ಹಾಗೂ ಶಿಕ್ಷಣ - ಈ ಮೂರು ವಿಷಯಗಳಲ್ಲಿ ಮನುಷ್ಯ ಚೌಕಾಶಿ ಮಾಡಲಾರ. ಅದಕ್ಕೇ ಐಟಿ, ಆಟೋಮೊಬೈಲ್, ಹಣಕಾಸು.. ಅಷ್ಟೇ ಯಾಕೆ, ಕೊನೆಗೆ ಕೃಷಿಗೂ ಬಡಿಯುವ ನಷ್ಟವೆಂಬ ಸಿಡಿಲು ಈ ಮೂರರ ಮೇಲೆ ಸುಮ್ಮನೆ ನೆರಳನ್ನಷ್ಟೇ ಸೋಕಿಸಿ ಹಾದು ಹೋಗುತ್ತದೆ. ಇದೇ.. ಇದೇ ನಮ್ಮ ಬಂಡವಾಳವಾಗಬೇಕಾಗಿರುವುದು!" ಎಂಬ ಮಾತು ಬರುವುದು 'ಚಿಕಿತ್ಸೆ' ಕತೆಯಲ್ಲಿ. ಹೌದಲ್ಲವಾ.. ಇದು ವಾಸ್ತವವನ್ನು ಕನ್ನಡಿಯಂತೆ ತೋರುವ ವಿಷಯ. ಆದರೆ, ಆರೋಗ್ಯಕ್ಕಾಗಿ ಮನುಷ್ಯ ಅದೇನು ಬೇಕಾದರೂ ಮಾಡಬಲ್ಲ.. ಅದೆಷ್ಟೇ ಅಹಂಕಾರವನ್ನೂ ತೊರೆಯಬಲ್ಲ.. ಮನುಷ್ಯನನ್ನು ಮತ್ತೆ ಮನುಷ್ಯನನ್ನಾಗಿಸುವುದು ಪ್ರಕೃತಿಯ ಪಾಠವೇ.. ಸಾವಿನ ಹೊಸ್ತಿಲಲ್ಲಿ ನಿಂತಾಗ ಉಂಟಾಗುವ ಜ್ಞಾನೋದಯ ಅವನ ಮನಸ್ಸಿಗೆ ಉಂಟಾದ ಚಿಕಿತ್ಸೆಯ ಪರಿಣಾಮ. 'ಕೇರ್ ಫಾರ್ ಹೆಲ್ತ್'ನಿಂದ ಹಳ್ಳಿಯ ಪುಟ್ಟ ಹೆಂಚಿನ ಮನೆಯ ಚಿಕಿತ್ಸೆಗೆ ಬಂದ ಸುಧಾಕರ್ ಗೆ ಸಿಕ್ಕ ಚಿಕಿತ್ಸೆ ಯಾವುದು ? ಓದಿ ನೋಡಿ.
ಬದುಕು ಎಷ್ಟೇ ಬದಲಾದರೂ ಬದಲಾಗದ್ದು ಹೆಣ್ಣಿನ ತಾಳ್ಮೆ ಹಾಗೂ ತ್ಯಾಗ ಮಾತ್ರವಾ..?? 'ಭೂಮಿ'ಯಲ್ಲಿ ಕಂಡದ್ದು ಭೂಮಿ ತೂಕದ ಹೆಣ್ಣು ಹಾಗೂ ಅಷ್ಟೇ ನಿಷ್ಕಲ್ಮಶ ಸ್ನೇಹ. ಇಪ್ಪತ್ತಾರು ವರ್ಷದ ಅವಳ ಪರಾವಲಂಬಿ ಬದುಕು ಕೊನೆಯಾಗಿ ಹೊಸ ಕನಸೊಂದು ಚಿಗುರಿತ್ತು. ಆದರೆ, ಭೂಮಿ ಆಯ್ದುಕೊಂಡದ್ದು ಅಮ್ಮನನ್ನು. ಮನುವಿನ ನಿರೂಪಣೆ ಕೇಳುತ್ತಾ ಕೇಳುತ್ತಾ ಅವರಿಬ್ಬರು ಒಂದಾದರೆ ಎಂಬ ಆಸೆ ನನ್ನ ಮನಸ್ಸಿನಲ್ಲಿ ಮುಡಿಸಿಕೊಂಡು ಇನ್ನೇನು ಒಂದಾಗುತ್ತಾರೆ ಎಂಬ ತವಕದಲ್ಲಿಯೇ ಕತೆ ಓದಿದೆ. ಆದರೆ, ಅಲ್ಲಿ ಕಂಡದ್ದು ಪ್ರೀತಿಯಲ್ಲ.. ಆತ್ಮೀಯ ನಿಷ್ಕಲ್ಮಶ ಸ್ನೇಹ. ಭೂಮಿಯಷ್ಟೇ ನಿಸ್ಸಹಾಯಕನಾದ ಮನು ಆವರಿಸಿಕೊಂಡ.
ಹಳ್ಳಿಯವರು ಕಾಣುವ ಸಿಟಿಯ ಬದುಕಿಗೂ.. ಅಲ್ಲಿ ಹೋಗಿ ಅವರು ಅನುಭವಿಸುವ ಸಿಟಿಯ ಬದುಕಿಗೂ.. ಸಿಟಿಯವರು ಕಾಣುವ ಹಳ್ಳಿಯ ಜೀವನದ ಕನಸಿಗೂ.. ಹಳ್ಳಿಗೆ ಬಂದ ನಂತರ ಅವರಿಗೆ ದೊರೆತ ಬದುಕಿಗೂ ಅದೆಷ್ಟು ಅಜಗಜಾಂತರ ವ್ಯತ್ಯಾಸ. ಶಿಶಿರ ಹಾಗೂ ಸುರೇಶ ಇಂತಹವರ ಪ್ರತಿನಿಧಿಗಳು. ಇಲ್ಲಿರಲಾರೆ.. ಅಲ್ಲಿಗೆ ಹೋಗಲಾರೆ ಎನ್ನುವ ಮನಸ್ಥಿತಿಯ ಜೊತೆಗೆ ಮಲೆನಾಡು ಹಾಗೂ ಬೆಂಗಳೂರು ಕೂಡಾ ಚಿತ್ರಿತವಾಗಿರುವ ಕಥೆ 'ನೆಲೆ'.
ಎಷ್ಟೋ ಬಾರಿ ಅನಾರೋಗ್ಯದ ಜಾಡು ಹಿಡಿದು ಹೊರಟಾಗ.. ಅದರಲ್ಲೂ ಮತ್ತೊಬ್ಬರ ಅನಾರೋಗ್ಯದ ಹಿಂದಿನ ಕುರಿತು ವಿಚಾರಿಸುತ್ತಾ ಹೊರಟಾಗ ನಾವು ಕೂಡಾ ಮಿನಿ ಪತ್ತೇದಾರರಂತೆಯೇ ಆಗಿ ಹೋಗುತ್ತೇವೆ. ಆದರೆ, ನಮ್ಮ ಪತ್ತೇದಾರಿಕೆಗೂ ವಾಸ್ತವಕ್ಕೂ ಕೆಲವೊಮ್ಮೆ ವ್ಯತ್ಯಾಸವಿರುತ್ತದೆ. ನಾರಾಯಣ ಮಾವನ ಅನಾರೋಗ್ಯದ ಕಾರಣ ಗೊತ್ತಾದಾಗ ನಿಜಕ್ಕೂ ಅಚ್ಚರಿ. 'ಸ್ವಯಂ' ಕತೆ ಓದಿದಾಗ ನಮ್ಮ ನಡುವಿನಲ್ಲೂ ಇರುವ ಇಂತಹವರೇ ನೆನಪಾದರು. ಆಸ್ಪತ್ರೆಯ ಹಾಗೂ ಆರೋಗ್ಯದ ಕುರಿತು ನೀಡಿರುವ ಮಾಹಿತಿ ಸರಳವಾಗಿ ಎಂಥವರಿಗೂ ಅರ್ಥವಾಗುವಂತನ್ನಿಸಿತು. ಅನಿರೀಕ್ಷಿತ ಅಂತ್ಯವೆನಿಸಿದ ಕತೆ ಇದು.
ಕೆಲವರಿರುತ್ತಾರೆ. ಎಂತಹಾ ಕೆಲಸವಾದರೂ ನಾನು ಸಿದ್ದ ಎನ್ನುವವರು. ಆದರೆ, ಅವರ ಪ್ರತಿಭೆಗೆ ತಕ್ಕ ಕೆಲಸ ಅವರ ಕೈ ಹಿಡಿದಿರುವುದಿಲ್ಲ. ಅಂತಹಾ 'ಸಕಲಕಲಾವಲ್ಲಭ'ರು ಮಾಡುವ ಪ್ರಯತ್ನಗಳು ಒಂದೆರಡಲ್ಲ. ನಷ್ಟವಾದಾಗ ಏನೇ ಪಾಠ ದೊರೆತರೂ.. ಮನೆಯವರ ಕಣ್ಣಿಗೆ ಅಪ್ರಯೋಜಕರಂತೆಯೇ ಕಾಣುವವರು. ಆದರೆ, ಮಕ್ಕಳ ಕಣ್ಣಿಗೆ ಅಂತಹವರೇ ಹೀರೋಗಳಾಗಿ ಕಾಣುವವರು. ಅಂತಹಾ ಅನಿಲ್ ಕಾಕಾ ಕತೆ ಇದು. ಅನಿಲ್ ಕಾಕಾ ಜೀವನದಲ್ಲಿ ಅದೃಷ್ಟ ಕೈ ಹಿಡಿಯುತಾ ಎಂದು ತಿಳಿಯಲು ಕತೆ ಓದಿ ನೋಡಿ.
ಹಳ್ಳಿಯ ಮುಗ್ಧನೊಬ್ಬನ ನಂಬಿಕೆಯೊಂದು ಮುರಿದಾಗ ಮನಸ್ಸಿಗೆ ಆಗುವ ಆಘಾತ ಜೊತೆಗೆ ಮುಚ್ಚಿದ ರೆಪ್ಪೆಯೊಳಗೆ ಕಂಡ ಸ್ವಲ್ಪ ಹೊತ್ತಿನ ಸವಿ ಸಂಭ್ರಮ ಎರಡೂ ಮಗ್ಗುಲನ್ನೂ ತೆರೆದಿಡುವ ಕತೆ 'ಒಣ ಮರದ ಹಸಿರೆಲೆ'.
'ಬದುಕಿನ ಸಕಲ ಸಂಭ್ರಮಗಳೂ ಮುಗಿದು, ಬುಡದಿಂದ ತುದಿಯ ತನಕ ಬಾಡಿ ಹೋಗಿರುವ ಮರ.. ಅದರ ತುತ್ತ ತುದಿಯಲ್ಲಿ ಒಂದೇ ಒಂದು ಎಲೆಯಿದೆ. ಇನ್ನೂ ಹಸಿರಾಗಿಯೇ ಇದೆ ! ಅದು ಮರ ಬಾಡಿದ ಮೇಲೆ ಮತ್ತೆ ಚಿಗುರಿರುವ ಮೊಟ್ಟ ಮೊದಲ ಎಲೆಯೇ ? ಅಥವಾ ಒಣಗಿ ಬೀಳಬೇಕಿರುವ ಕಟ್ಟ ಕಡೆಯ ಎಲೆಯೇ ?' ಎಂಬ ಪ್ರಶ್ನೆ ಮೂಡಿಸಿದ ಸಾಲುಗಳು. ಜೊತೆಗೆ, ಓಪನ್ ಎಂಡೆಡ್ ಎನ್ನಿಸುವ ಅಂತ್ಯ.
'ಹುಟ್ಟು ಹುಟ್ಟುತ್ತಾ ಅಣ್ಣ ತಮ್ಮಂದಿರು. ಬೆಳೆ ಬೆಳೆಯುತ್ತಾ ದಾಯಾದಿಗಳು' ಎಂಬ ಮಾತಿನಂತೆ ಅಪ್ಪ - ದೊಡ್ಡಪ್ಪನ ಜಗಳ ನೋಡಿ ಬೆಳೆದ ರವಿ ಹಾಗೂ ಅಭಿ. ತಮ್ಮ ತಮ್ಮ ಅಪ್ಪಂದಿರ ಕಾಲದಲ್ಲಿ ಗೋಡೆ ಎದ್ದಾಗ ಗೋಡೆ ಯಾಕಾದರೂ ಇರಬೇಕು ಎಂದು ಆಲೋಚಿಸಿದ ಮಕ್ಕಳು ದೊಡ್ಡವರಾದ ನಂತರವೂ ಗೋಡೆ ಮತ್ತೆ ಕಟ್ಟಲ್ಪಟ್ಟಿತು. 'ಗೋಡೆ' ಕೇವಲ ಮನುಷ್ಯರ ನಡುವಲ್ಲ.. ಮನಸ್ಸಿನ ನಡುವೆಯೂ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿತ್ತು. ಬದಲಾಗಬೇಕು ಎಂದುಕೊಂಡ ಮನುಷ್ಯ ಬದಲಾಗದ್ದಕ್ಕೆ ಕಾರಣ ಹೀಗೆಯೂ ಇರಬಹುದು ಎನ್ನಿಸಿತು.
ಇಲ್ಲಿನ ಕತೆಗಳನ್ನು ನೋಡಿದಾಗ ಇಲ್ಲಿನ ಹೆಚ್ಚಿನ ಕತೆಗಳ ನಿರೂಪಣೆ ಮಕ್ಕಳ ಅಥವಾ ಮುಗ್ಧ ಮನಗಳದ್ದು. ಪೂರ್ವಾಗ್ರಹವಿಲ್ಲದ ಮನಸ್ಸಿನಿಂದ ಬಿಚ್ಚಿಡುವ ಕತೆಗಳು. ಕತೆಗಳಲ್ಲಿ ಇದು ಕೆಟ್ಟ ಪಾತ್ರ ಅಥವಾ ದುಷ್ಟತನದ ಪಾತ್ರ ಎಂದು ಕಂಡ ಪಾತ್ರಗಳು ಒಂದೋ ಎರಡೋ ಅಷ್ಟೇ.. ನೋವುಗಳನ್ನೇ ಅಕ್ಷರವಾಗಿಸಿ ಬರೆದ ಬದುಕಿನ ಕತೆಗಳಿವು. ಭಾವುಕತೆ ಹೆಚ್ಚೇ ಎನ್ನಿಸುವಷ್ಟು ತುಂಬಿದೆ. ವೈಯಕ್ತಿಕ ನೋವುಗಳು ಕತೆಗಳಾಗಿ ಬದಲಾಗುವಾಗ ಹೀಗೆ ಆಗುತ್ತದಾ..?? ನೋವಿನಲ್ಲಿ ಮಿಂದೆದ್ದರೂ ಯಾರಿಗೂ ಕೇಡು ಬಯಸದ, ಕೆಟ್ಟದ್ದು ಬಯಸದ ಪಾತ್ರಗಳು. ಹೆಚ್ಚಿನ ಆಡಂಬರವಿಲ್ಲದ ಸೀದಾ ಸಾದಾ ಪಾತ್ರಗಳು. ದ್ವಂದ್ವದ ಮನಸ್ಥಿತಿಯ ಕೆಲ ಪ್ರಶ್ನೆಗಳು ನಮ್ಮಲ್ಲಿಯೂ ಪ್ರಶ್ನೆಯನ್ನು ಮೂಡಿಸಿಟ್ಟು ಉತ್ತರ ಹುಡುಕುವಂತೆ ಮಾಡುತ್ತವೆ. ಒಳ್ಳೆಯದ್ದನ್ನೇ ದಾಟಿಸುವ ಕತೆಗಳು ಮನದ ತಲ್ಲಣಗಳಿಗೆ ಕೆಲವೊಮ್ಮೆ ಮತ್ತಷ್ಟು ಪ್ರಶ್ನೆಗಳನ್ನು ದಾಟಿಸಿದರೆ.. ಕೆಲವೊಮ್ಮೆ ಸಾಂತ್ವಾನವೂ ಆದವು. ಈ ಕತೆಗಳ ಭಾವುಕತೆಯಿಂದ ಹೊರ ಬರಲು ನನಗಂತೂ ಸಮಯ ಹಿಡಿಯಿತು. ಸೂಕ್ಷ್ಮ ಮನಸ್ಸಿನವರಿಗೆ ಭಾವುಕತೆಯಿಂದ ಹತ್ತಿರವಾದ ಕತೆಗಳು.
ಇನ್ನಷ್ಟು ಪ್ರಶಸ್ತಿಗಳು ಅರಸಿ ಬರಲಿ ಎಂಬ ಹಾರೈಕೆಯ ಜೊತೆಗೆ ಮುಂದಿನ ಪುಸ್ತಕವೂ ಆದಷ್ಟು ಬೇಗ ಬರಲಿ ಎನ್ನುವ ಹಾರೈಕೆಯೂ ಜೊತೆಗಿದೆ. ಈ ಕಥಾ ಸಂಕಲನ ಮತ್ತಷ್ಟು ಮುದ್ರಣಗಳಾಗಲಿ ಎನ್ನುವ ಶುಭ ಹಾರೈಕೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ