ಮಂಗಳವಾರ, ಏಪ್ರಿಲ್ 7, 2026

ತಲ್ಲಣಕ್ಕೆ ಬಾಯಿಲ್ಲವಯ್ಯಾ (ಪುಸ್ತಕ ಯಾನ - 57)


 ಪುಸ್ತಕದ ಶೀರ್ಷಿಕೆ : ತಲ್ಲಣಕ್ಕೆ ಬಾಯಿಲ್ಲವಯ್ಯಾ

ಲೇಖಕರು : ವಸುಮತಿ ಉಡುಪ

ಪ್ರಕಾಶಕರು : ಅಂಕಿತ ಪುಸ್ತಕ

ಮೊದಲನೇ ಮುದ್ರಣ : 2020

ಪುಟಗಳು : 128

ಬೆಲೆ : 120 ರೂ


ತಲ್ಲಣಕ್ಕೆ ಬಾಯಿಲ್ಲವಯ್ಯಾ.. ಎಂಬುದು ವಸುಮತಿ ಉಡುಪ ಇವರ ಕಥಾ ಸಂಕಲನ. ಕ್ಲಿಷ್ಟವಲ್ಲದ ಸರಳ ಸುಂದರ ನಿರೂಪಣೆಗಳಿಂದ ಮನೆಸೆಳೆಯುವ ಕಥೆಗಳಿವು. ಈ ಕಥೆಗಳು ನಮ್ಮ ನಿಮ್ಮ ಸುತ್ತಲೇ ನಡೆದಿರಬಹುದಂತಹದ್ದಾ ಎನ್ನಿಸಬಹುದು. ಮಹಿಳೆಯರು ಕೇಂದ್ರ ಪಾತ್ರಗಳಾದರೂ ಯಾವುದೇ ರೀತಿಯ ವೈಭವೀಕರಣವಿಲ್ಲದೆ ಕಂಡದ್ದನ್ನು ಕಂಡ ಹಾಗೆ ಬರೆದಿರುವರೇನೋ ಎನ್ನಿಸುವಂತೆ ಮಾಡುವ ಕಥೆಗಳು. 


ಈ ಕಥಾ ಸಂಕಲನದಲ್ಲಿ 11 ಕಥೆಗಳಿವೆ. 


ಪ್ರಾರಬ್ಧ : ಚಿಕ್ಕಂದಿನಲ್ಲಿ ದೊರೆತ ಅವಮಾನಗಳು, ಅಸಡ್ಡೆ.. ತನ್ನ ಮನೆಯಲ್ಲದ ಮನೆಯಲ್ಲಿ ಬೆಳೆದು ನಿಲ್ಲುವವಳ.. ತನ್ನ ಮನೆಯಿದ್ದೂ ತಾನು ಅಲ್ಲಿಯವಳಾಗದ ರೀತಿ ಅವಳನ್ನು ಎಲ್ಲರ ಬದುಕಲ್ಲಿ ಪ್ರಾರಬ್ಧವೆನಿಸಿದ್ದರೂ ಪಟ್ಟ ಸಂಕಟಗಳ ಫಲವಾಗಿ ಗಂಡನ ಮನೆ ನೆಮ್ಮದಿಯ ನೆಲೆಯಾದರೂ ಹೊಟ್ಟೆಯಲ್ಲಿ ಮಗುವನ್ನು ಹೊತ್ತ ಗರ್ಭಿಣಿಯ ತಲ್ಲಣಗಳ ಕಥೆ. ಅವಳ ಹಳಹಳಿಕೆಗೆ ಕೊನೆ ಸಿಕ್ಕಿತೇ..? ಅವಳನ್ನು ಪ್ರಾರಬ್ಧ ಎಂದು ಭಾವಿಸದೆ ಅವಳನ್ನು ಪ್ರೀತಿಸಿದ್ದ ಜೀವವೊಂದು ಅವಳ ಜೊತೆಯಲ್ಲಿತ್ತೇ..?? 


ತಲೆಮಾರು : ತಲೆಮಾರುಗಳು ಬದಲಾದರೂ ಮನಸ್ಸುಗಳು ಆರ್ದ್ರತೆ ಬದಲಾಗದ ಕತೆ ಇದು. ಅಮ್ಮ ಪಟ್ಟ ನೋವು, ಕಷ್ಟ ಇಂದಿಗೆ ಕೊನೆಯಾಗಲಿ ಎನ್ನುತ್ತಾ ಕೆಲಸಕ್ಕೆ ಸೇರಿದ ತಕ್ಷಣ ಹೇಳುವ ಹೆಣ್ಣುಮ್ಮಕ್ಕಳ ಹೆಣ್ಮನದ ಕತೆಯಿದೆ. ಆದರೆ, ವಾಸ್ತವ ತಲೆಮಾರುಗಳ ಕೆಲಸಕ್ಕೆ ಕಷ್ಟಕ್ಕೆ ಕೊನೆಗಾಣಿಸುವುದೇ..?


ವಜ್ರದುಂಗುರ : ವಜ್ರ ಅಥವಾ ಬೆಲೆಬಾಳುವುದು ಹೀಗೆ ಏನಿದ್ದರೂ ಅದು ಮಗ್ಗುಲ ಮುಳ್ಳೇ.. ಸಂಬಂಧಗಳು ಹಣದ ಮೇಲೆ ನಿಂತಿಲ್ಲವೆಂದರೂ ಅನುಮಾನದ ಪಿಶಾಚಿ ಒಳ ಹೊಕ್ಕು ಕಾಡಿದರೆ ಎಲ್ಲವೂ ಸಹಾ ನಂಬಿಕೆಯ ಬುಡ ಅಲುಗಾಡುವುದಂತೂ ಖಚಿತ. ಆ ನಂಬಿಕೆಯ ನಡುವಿನ ಕತೆಯೇ ವಜ್ರದುಂಗುರ


ಎಂಜಲು : ಎಂಜಲಾದ ಬದುಕು ಬೇಡವೆಂದು ನಿರ್ಧರಿಸಿ ನಡೆದ ಹೆಣ್ಣು ತನ್ನ ಬಾಳನ್ನು ತಾನೇ ಕಟ್ಟಿಕೊಂಡರೂ ಕೊನೆಯಲ್ಲಿ ವಿಲ್ ಮಾಡಿಡದೆ ತಪ್ಪು ಮಾಡಿದಳೇ..? 

ಬದುಕು ಎಂಜಲೆಂದು ಧಿಕ್ಕರಿಸಿ ನಿಂತವಳ ಸ್ವಯಾರ್ಜಿತ ಆಸ್ತಿ ಎಂಜಲಾಯಿತೇ..?? 


ಪತಿವ್ರತೆಗೆ ಕಿರೀಟಗಳೆಷ್ಟು? : ಪತಿವ್ರತೆಗೆ ಎಷ್ಟು ಕಿರೀಟಗಳು? ಕಂಡವರು ಮಾತ್ರವಲ್ಲ, ಕೇಳಿದವರಿಂದಲೂ ಪ್ರಶಂಸೆಯ ಮಾತು. ಅನುಭವಿಸುತ್ತಾ ಇರುವವರಿಗೆ ಮಾತ್ರ ಗೊತ್ತು ಅದು ರಾಜ ಕಿರೀಟವೇ ಅಥವಾ ಮುಳ್ಳಿನದ್ದೇ ಎಂದು.. 

ಕಥೆಗಾರ್ತಿ ಕೊನೆಯಲ್ಲೊಂದು ಪ್ರಶ್ನೆ ಕೇಳಿದ್ದಾರೆ. 

ಏನೆಲ್ಲಾ ಕಷ್ಟ ಸೋಸಿ , ನರಕಯಾತನೆ ಅನುಭವಿಸಿಯೂ ಪತಿಪರಮೇಶ್ವರನನ್ನು ಅನುಸರಿಸಿಕೊಂಡು, ಆರಾಧಿಸಿಕೊಂಡು ಹೋಗುವವರಿಗಷ್ಟೇ ಪತಿವ್ರತೆಯ ಪಟ್ಟವೇ? ಸತೀವ್ರತರು ಸಿಕ್ಕಾರೆಯೇ ?ಅಥವಾ ಕಿರೀಟದ ಹಂಗಿಲ್ಲವೇ..??

ಏನೆಂದು ಉತ್ತರಿಸುವುದು ಇದಕ್ಕೆ


ಮುಯ್ಯಿಗೆ ಮುಯ್ಯಿ : ಸ್ವಾಭಿಮಾನದಿಂದ ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳುವವರ ಕತೆ ಇದು. ಅಂದ ಹಾಗೆ ಮನುಷ್ಯರ ಆಲೋಚನೆಯಾದರೂ ಮನುಷ್ಯರ ಕತೆಯಲ್ಲವಿದು.


ತಲ್ಲಣಕ್ಕೆ ಬಾಯಿಲ್ಲವಯ್ಯಾ : ಗಂಡ ಸತ್ತ ನಂತರ ಇರುವ ಒಬ್ಬಳೇ ಮಗಳ ಮನೆಗೆ ಹೋಗಿ ಉಳಿಯುವುದಕ್ಕೆ ಸ್ವಾತಂತ್ರ್ಯ ಹಾಗೂ ಸ್ವಾಭಿಮಾನದ ಅಡ್ಡಿ. ಒಬ್ಬಂಟಿಯಾಗಿಯೇ ಉಳಿಯುವ ರೂಢಿಯಾದ ನಂತರ ನಂಬಿದವರೇ ಕತ್ತು ಕೊಯ್ದರೆ.. ಹೆದರುತ್ತಾ ಹೋದರೆ ಹೆದರಿಸುತ್ತಾರೆ. ಆದರೂ, ಒಬ್ಬಂಟಿಯಾಗಿ ಆ ಸಮಸ್ಯೆಯ ಜೊತೆ ಬದುಕಲು ಸಾಧ್ಯವೇ.. ಒಟ್ಟಿನಲ್ಲಿ ತಲ್ಲಣಕ್ಕೆ ಬಾಯಿಲ್ಲವಯ್ಯಾ..


ಸಂಕಲ್ಪ : ನಂದಗೋಕುಲದಂತಹಾ ಮನೆಗೆ ಬಂದೆರಗಿದ ಬರಸಿಡಿಲು ಬದುಕನ್ನೇ ಬುಡಮೇಲು ಮಾಡಿದರೂ ಬದುಕು ಅದರಲ್ಲಿಯೂ ಆಶಾಕಿರಣವನ್ನು ಗೋಚರಿಸುವಂತೆ ಮಾಡುವುದಾ..? ಬದುಕುವಂತೆ, ಜೀವಂತಿಕೆಯಿಂದ ಬದುಕುವಂತೆ ಮಾಡಿದ ಆ ವೃದ್ಧರ ಸಂಕಲ್ಪವಾದರೂ ಯಾವುದು..?


ಓಟ : ಬಾಗುತ್ತ, ತಗ್ಗುತ್ತಾ ಸಂಬಂಧದ ಎಳೆಗಳು ಹರಿದು ಹೋಗದಿರಲಿ ಎಂದು ಬಯಸುತ್ತಾ ಬಯಸುತ್ತಾ ಬದುಕಲ್ಲಿ ನಿಲ್ಲದೆಯೇ ಓಡುವುದನ್ನು ರೂಢಿಸಿಕೊಂಡಿರುತ್ತೇವೆ. ನಾವು ಮಾಡಿದ ಅಥವಾ ನಮ್ಮದಲ್ಲದ ತಪ್ಪುಗಳಿಗೂ ಸಹಾ ಓಟವೇ ಪರಿಹಾರ ಎಂದು ಭಾವಿಸಿರುತ್ತೇವೆ. ಆದರೆ, ಓಟದ ನಿಲುಗಡೆ ಎಂದಿಗೆ..? ಅಹಲ್ಯಾ ಬದುಕಿನ ಓಟ ನಿಂತಿತೇ..??


ಬೆಳೆದ ಮೇಲೂ ಅಣ್ಣ ತಮ್ಮಂದ್ರು.. : ಈ ಕಥಾ ಸಂಕಲನದಲ್ಲಿ ನನ್ನ ಮೆಚ್ಚಿನ ಕತೆ ಇದು. ಹುಟ್ಟುತ್ತಾ ಅಣ್ಣ ತಮ್ಮಂದ್ರು, ಬೆಳೆಯುತ್ತಾ ದಾಯಾದಿಗಳು ಎನ್ನುವ ಗಾದೆಯನ್ನು ಸುಳ್ಳು ಮಾಡಿರುವಂತಹಾ ಕತೆ. ಹಾಗೆಂದು, ಇವರಲ್ಲಿ ಭಿನ್ನಾಭಿಪ್ರಾಯ ಇರಲೇ ಇಲ್ಲವಾ..? ಎಂದರೆ ಅದೆಲ್ಲವನ್ನು ಮೀರಿ ನಿಲ್ಲುವ ಕತೆ ಇದು. 


ನೆರೆ ಬಂದ ಕಾಲಕ್ಕೆ : ನೆರೆ ಪೀಡಿತ ಪ್ರದೇಶಗಳಲ್ಲಿ ಮಾತ್ರವೇ ನೆರೆ ಬರಬೇಕು ಎಂದೇನೂ ಇಲ್ಲವಲ್ಲಾ.. ನೆರೆ ಬಂದ ಕಾಲಕ್ಕೆ ನೆನಪಾದ ಗತದ ಬದುಕನ್ನು ಎದುರಿಸಿದ ಹಾಗೂ ದಿಟ್ಟತನದಿಂದ ಕಟ್ಟಿಕೊಂಡ ಬಗೆ.. ನೆಮ್ಮದಿಯನ್ನು ಕಲಕುವ ಚಿತ್ರಣದ ಕತೆ. 


ಎಲ್ಲಾ ಕಥೆಗಳು ಸಹಾ ವಿಭಿನ್ನ ಹಾಗೂ ವಿಶಿಷ್ಟ. ಓದಿಯೇ ತಿಳಿಯಿರಿ ಇಲ್ಲಿಯ ತಲ್ಲಣಗಳನ್ನು


~ ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ