ಪುಸ್ತಕದ ಶೀರ್ಷಿಕೆ : ಲಿಪಿಯ ಪತ್ರಗಳು
ಲೇಖಕಿ : ಮೇಘನಾ ಸುಧೀಂದ್ರ
ಪ್ರಕಾಶಕರು : ಸಾವಣ್ಣ ಎಂಟರ್ಪ್ರೈಸಸ್
ಮೊದಲನೇ ಮುದ್ರಣ : 2020
ಪುಟಗಳು : 156
ಬೆಲೆ : 200 ರೂ
ಲಿಪಿಯ ಪತ್ರಗಳು ಪುಸ್ತಕವನ್ನು ಬರೆದಿರುವವರು ಮೇಘನಾ ಸುಧೀಂದ್ರ. "ಜಯನಗರದ ಹುಡುಗಿ ", "ಬೆಂಗಳೂರು ಕಲರ್ಸ್", "ಪಾಥೇರಸ್", "ಅಂಗಳದಿಂದ ಬೈನರಿವರೆಗೂ", "ಪ್ರೀತಿ ಗೀತಿ ಇತ್ಯಾದಿ", AI ಕಥೆಗಳು" ಇವುಗಳು ಇವರ ಇನ್ನುಳಿದ ಪುಸ್ತಕಗಳು.
ಲಿಪಿಯ ಪತ್ರಗಳು
ಮನಸ್ಸು . ಮಸ್ತಕ . ಮಾತುಕತೆ
ಎಂಬ ಅಡಿಬರಹದೊಂದಿಗೆ ಶುರುವಾಗುತ್ತದೆ. ಲಿಪಿ ಮತ್ತು ಲಿಖಿತಾ ಎಂಬ ಇಬ್ಬರು ಅವಳಿಗಳ ನಡುವೆ ನಡೆಯುವ ಪತ್ರಗಳು ನಮ್ಮ ಮುಂದೆ ಹರವಿಕೊಳ್ಳುತ್ತವೆ. ಪತ್ರಗಳು ಹಾಗೂ ಅದರ ಪ್ರತ್ಯುತ್ತರಗಳೇ ಈ ಪುಸ್ತಕದ ಜೀವಾಳ.
ಈ ಕಾಲದಲ್ಲಿಯೂ ಪತ್ರ ಬರೆದಿದ್ದರೇ..?? ಎಂಬ ಪ್ರಶ್ನೆ ಮೂಡಿದರೂ ಆ ಪತ್ರಗಳಲ್ಲಿನ ಪಾತ್ರಗಳು ಹಾಗೂ ಆಪ್ತತೆ ಕಾಡದೆ ಇರಲಾರದು. ನಾನೂ ಹೀಗೆಯೇ ಪತ್ರ ಬರೆದರೆ, ಪತ್ರಕ್ಕೆ ಪ್ರತ್ಯುತ್ತರ ಪಡೆದುಕೊಂಡರೆ ಅದೆಷ್ಟು ಸೊಗಸಾಗಿರುತ್ತದೆ. ಅಲ್ಲವೇ..??ಎಂಬ ಭಾವ ಕಾಡಿದ್ದಂತೂ ಸುಳ್ಳಲ್ಲ.
ಲಿಪಿ ಹಾಗೂ ಲಿಖಿತಾ ಒಂದೇ ನಾಣ್ಯದ ಎರಡು ಮುಖಗಳಂತಹಾ ಅವಳಿ- ಜವಳಿಗಳು. ಒಬ್ಬಳು ಭಾವುಕತೆಯಲ್ಲಿ ಆಲೋಚನೆ ಮಾಡುವವಳಾದರೆ ಮತ್ತೊಬ್ಬಳು ಪ್ಯೂರ್ ಪ್ರಾಕ್ಟಿಕಲ್ ಆಗಿ ಯೋಚನೆ ಮಾಡುವವಳು. ಹುಟ್ಟಿನಲ್ಲಿ ಕೇವಲ 5 ನಿಮಿಷಗಳ ವ್ಯತ್ಯಾಸ ಮಾತ್ರ ಎಂದು ಹೇಳುವವರು ಬೆಳೆದದ್ದು ಒಂದೇ ಪರಿಸರದಲ್ಲಿ, ಓದಿದ್ದು ಒಂದೇ ಶಾಲೆಯಲ್ಲಿ. ಆದರೆ, ವಿಚಾರಗಳಲ್ಲಿ, ಗುಣಗಳಲ್ಲಿ, ಬದುಕುವ ರೀತಿಯಲ್ಲಿ ಅದೆಷ್ಟು ವಿಭಿನ್ನತೆ.. ಬಾಲ್ಯದ ಅನುಭವಗಳು ಒಬ್ಬರನ್ನು ಮೆದು ಮಾಡಿದರೆ, ಮತ್ತೊಬ್ಬರನ್ನು ಗಟ್ಟಿಗೊಳಿಸಿತು. ಬುದ್ಧಿ ಹಾಗೂ ಹೃದಯಗಳಲ್ಲಿ ಆಲೋಚನೆ ಮಾಡುವಾಗ ಲಿಪಿ ಎಲ್ಲವನ್ನೂ ಹೃದಯದ ಪರಿಧಿಯಿಂದ ಆಚೆಗಿಟ್ಟು ನೋಡಿದರೆ ಲಿಖಿತಾ ಎಲ್ಲವನ್ನೂ ಮನದಾಳದಿಂದ ವಿಶ್ಲೇಷಣೆ ಮಾಡುತ್ತಾಳೆ.
ಒಟ್ಟು 18 ಪತ್ರಗಳಿವೆ. ಪ್ರತಿ ಪತ್ರಕ್ಕೂ ಮತ್ತೊಂದು ಪ್ರತಿಯುತ್ತರದ ಪತ್ರ ಇದ್ದೇ ಇದೆ.
ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದು ಅಲ್ಲೇ ನೆಲೆಸುವ ಲಿಖಿತಾ ತುಂಬು ಕುಟುಂಬವನ್ನು ಪ್ರೀತಿಯಿಂದ ಒಪ್ಪಿ ಅಪ್ಪಿ ಅಲ್ಲೇ ಉಳಿದರೆ, ಲಿಪಿ ತನ್ನನ್ನು ತಾನು ಕಂಡುಕೊಳ್ಳಲು ಬಾರ್ಸಿಲೋನಾಗೆ ಹೋಗುತ್ತಾಳೆ. ಅವರ ಬಾಲ್ಯದ ದಿನದ ನೆನಪುಗಳಿಂದ ಶುರುವಾಗುವ ಪತ್ರ, ಟೀನೇಜಿನಲ್ಲಿ ನೋಡಿದ ವಿಷಯಗಳು, ಅನುಭವಿಸಿದ ಕಿರುಕುಳಗಳು, ಪ್ರೀತಿ, ಮದುವೆ, ಸೆಕ್ಸ್, ಒಂಟಿತನ, ಪೀರಿಯೆಡ್ಸ್, ಮಕ್ಕಳು, ಸಂಪ್ರದಾಯ, ದೇವರು, ಸಾವು, ಸೋಲೋ ಟ್ರಾವೆಲಿಂಗ್, ಅಡುಗೆ, ಕೂಡು ಕುಟುಂಬ, ಆಧ್ಯಾತ್ಮ, ಡ್ರೆಸ್ ಕೋಡ್, ಹವ್ಯಾಸಗಳು ಹೀಗೆ ಎಲ್ಲದರ ಕುರಿತು ಸಹಾ ಬರೆಯುತ್ತಾರೆ.
ಕೆಲವೊಮ್ಮೆ ನಾನು ಲಿಪಿಯ ಪರವಾದರೆ, ಹಲವೊಮ್ಮೆ ಲಿಖಿತಾಳ ಪರ. ಇಲ್ಲಿ ಲಿಖಿತಾ ಒಳಗೆ ಲಿಪಿ ಇದ್ದಾಳೆ, ಲಿಪಿ ಒಳಗೆ ಲಿಖಿತಾ ಇದ್ದಾಳೆ.
ನಿಗಾ ಇರಲಿ ಎಂದು ಬರೆಯುವ ಲಿಪಿಯ ಪತ್ರದಲ್ಲಿ ಕೇರಿಂಗ್ ಕಂಡರೆ, ಅಪಾರ ಅಕ್ಕರೆಯ ಎನ್ನುವ ಲಿಖಿತಾ ಪತ್ರದಲ್ಲಿ ಆಪ್ತತೆ ಕಾಣುತ್ತದೆ.
ಪತ್ರಗಳಲ್ಲಿ ಅತ್ಯಂತ ಇಷ್ಟವಾಗುವ ಕೆಲವು ಟಿ.ವಿ ಶೋ ಗಳ ಹೆಸರು, ಜೋಗಿಯವರ ಪುಸ್ತಕದ ಹೆಸರು, ಕಾಮಿಕ್ಸ್ ಸರಣಿಗಳು, ಆಪ್ತವೆನಿಸುವ ಹಾಡುಗಳ ಹೆಸರು, ಹಾಡುಗಾರರ ಹೆಸರು ಕಂಡಾಗ ಯಾಕೋ ನನ್ನ ಬಿಂಬವನ್ನೇ ಕಂಡಂತಾಯಿತು ನನಗೆ. ಅದರಲ್ಲಿಯೂ ರಾಜು ಅನಂತಸ್ವಾಮಿಯವರ ಹಾಡುಗಳ ಕಲೆಕ್ಷನ್ ಬೇಕು ಎಂದು ಲಿಪಿ ಕೇಳುವಾಗ ಮನಸ್ಸು ಗರಿಗೆದರಿತು.
ಕೊನೆಗೊಮ್ಮೆ ಲಿಖಿತಾ ಹೇಳುತ್ತಾಳೆ. ಲಿಪಿಯನ್ನು ಬಿಟ್ಟು ಲಿಖಿತಾ ಇಲ್ಲ. ಆದರೆ, ಲಿಖಿತಾಳನ್ನು ಬಿಟ್ಟು ಲಿಪಿ ಇದ್ದಾಳೆ ಎಂದು.. ಅದಕ್ಕೆ ಈ ಪುಸ್ತಕಕ್ಕೆ ಲಿಪಿಯ ಪತ್ರಗಳು ಎಂಬ ಶೀರ್ಷಿಕೆ ಇರಬಹುದಾ ಎನ್ನಿಸಿತು.
ಅಚಾನಕ್ಕಾಗಿ ಸಿಕ್ಕ ಪತ್ರಗಳನ್ನು ಓದಿ ಮತ್ತೇನನ್ನೋ ಕಂಡ ಹಾಗೆ ಭಾಸವಾದಾಗ, ನಮ್ಮ ಮನೆಯಲ್ಲೇ ಹಳೆಯ ಪತ್ರಗಳು ಸಿಕ್ಕವೇನೋ ಎನ್ನಿಸಿದ್ದಂತೂ ಸುಳ್ಳಲ್ಲ.
~ ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ