ಶೀರ್ಷಿಕೆ : ಸ್ನೇಕ್ ಟ್ಯಾಟೂ
ಲೇಖಕರು : ಬಿ. ಎಂ. ಗಿರಿರಾಜ
ಪ್ರಕಾಶಕರು : ಕಾನ್ಕೇವ್ ಮಾಧ್ಯಮ ಮತ್ತು ಪ್ರಕಾಶನ
ಮೊದಲ ಮುದ್ರಣ : 2022
ಪುಟಗಳು : 140
ಬೆಲೆ : 150 ರೂ.
ಬಿ.ಎಂ. ಗಿರಿರಾಜ್ ಇದಕ್ಕೂ ಮೊದಲು ಕಥೆಗೆ ಸಾವಿಲ್ಲ ಎನ್ನುವ ಕಾದಂಬರಿ ರಚಿಸಿದ್ದಾರಾದರೂ, ಇದು ನಾನು ಓದಿದ ಈ ಲೇಖಕರ ಮೊದಲ ಪುಸ್ತಕ. ಗಿರಿರಾಜ್ ರವರು ದಿಟ್ಟ ಪ್ರಯೋಗಶೀಲ ನಿರ್ದೇಶಕರಾಗಿ ಪರಿಚಿತರಾಗಿರುವವರು. ಜಟ್ಟ, ಮೈತ್ರಿ, ಕನ್ನಡಿಗ ಚಿತ್ರಗಳ ಮೂಲಕ ಸಿನಿಮಾ ರಂಗದಲ್ಲಿ ಹೆಸರು ಮಾಡಿರುವವರು. ಲೇಖಕರು 22 ವರ್ಷಗಳಲ್ಲಿ ಬರೆದ ಕತೆಗಳಲ್ಲಿ 9 ಆಯ್ದ ಕತೆಗಳು ಈ ಕಥಾ ಸಂಕಲನದಲ್ಲಿವೆ. ಈ ಕಥಾ ಸಂಕಲನ ಇಷ್ಟವಾದಷ್ಟೇ ಇಷ್ಟವಾಗದ್ದು ಎಂದು ಹೇಳಬಲ್ಲೆ. ಏಕೆ ಎನ್ನುವುದನ್ನು ಕೊನೆಯಲ್ಲಿ ಹೇಳುವೆ.
'ಅಹಂ ಬ್ರಹ್ಮಾಸ್ಮಿ' ಪತ್ತೇದಾರಿ ಶೈಲಿಯ ಕಥೆಯಾದರೂ ಮಾನಸಿಕ ಸ್ಥಿತಿಗಳ ಜೊತೆಯಲ್ಲಿ ಆಟವಾಡುವಂತಹಾ ಕಥೆಯಂತೆಯೂ ಅನ್ನಿಸಿತು. ಎಲ್ಲರೂ ನಿಗೂಢವೆನಿಸಿದ ನಡವಳಿಕೆಯ ವ್ಯಕ್ತಿಗಳಂತೆ ಕಂಡರೂ ಒಡೆದ ರಹಸ್ಯದಲ್ಲಿಯೂ ಮತ್ತೊಂದು ರಹಸ್ಯವಿತ್ತು. ಏನೇ ಆದರೂ.. ಒಬ್ಬ ವ್ಯಕ್ತಿ ತಾನೇ ಎಲ್ಲವನ್ನೂ ಬದಲಿಸಲು ಹೊರಟಾಗ.. ಹಣ, ಆಸ್ತಿ ಏನನ್ನಾದರೂ ಮಾಡಿಸಬಲ್ಲದು ಎಂಬುದಕ್ಕೆ ಜ್ವಲಂತ ಸಾಕ್ಷಿಯಂತಿದೆ ಈ ಕತೆ.
2150 ರ ದಿನಗಳ ಕಥೆ 'ಭವಿಷ್ಯವಿಲ್ಲದ ಭವಿಷ್ಯದಲ್ಲಿ'. ಇಡೀ ದೇಶ, ಸುತ್ತಮುತ್ತಲಿನ ದೇಶಗಳು ಜಾಗತಿಕವಾಗಿ, ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಬದಲಾದ ಕತೆ ಇದು. ಮ್ಯಾಕ್ ಅಲಿಯಾಸ್ ಮುಕುಂದನ ಬದುಕಿನ ಬವಣೆಯ ಮೂಲಕ ಅವನ ಬದುಕು, ಕೆಲಸ, ಸಂಸಾರದ ಚಿತ್ರಣವನ್ನು ತೋರಿಸುವ ಕತೆ. ಇದರಲ್ಲಿ "ನಿಮ್ಮೊಡನಿದ್ದು ನಿಮ್ಮಂತಾಗದೆ" ಎನ್ನುವ ಕವಿತೆಯಾದ ಪರಿ ಇಷ್ಟವಾಯಿತು.
ಈ ಕಥಾ ಸಂಕಲನದಲ್ಲಿ ನನಗೆ ಬಹಳ ಇಷ್ಟವಾದ ಹಾಗೂ ಮುಂದೇನಾಗಬಹುದು.. ಮುಂದೇನಾಯಿತು.. ಎನ್ನುವ ಕುತೂಹಲದಿಂದ ಉಸಿರು ಬಿಗಿ ಹಿಡಿದು ಓದುವಂತೆ ಮಾಡಿದ ಕಥೆ 'ಅನಾಹತ'. ವಾಣಿ ತನ್ನ ಮಗಳು ಸ್ಪಂದನಳಿಗೆ ಅವನಿಂದ ಏನಾದರೂ ಆದರೆ.. ಎನ್ನುವ ಮಾನಸಿಕ ತೊಳಲಾಟದಲ್ಲಿ ಬಳಲುತ್ತಾ, ಸ್ಪಂದನಾಳಿಗೆ ಆ ಪುಟ್ಟ ವಯಸ್ಸಿಗೆ ಏನನ್ನೂ ಹೇಳಲೂ ಆಗದೆ, ಮಗಳನ್ನು ಎಷ್ಟೇ ಕಾಯ್ದರೂ ಸಾಧ್ಯವಾಗದ ಸ್ಥಿತಿಯಲ್ಲಿ ವಿಚ್ಛೇದನವಾಗಿದ್ದ ಗಂಡನ ಜೊತೆ ಮತ್ತೆ ಹೊಂದಿಕೊಂಡು ಬಾಳುವ ನಿರ್ಧಾರ ಮಾಡುತ್ತಾಳೆ. ಇವಳ ಈ ಚಿಂತೆಗೆ ಕಾರಣವೇನು ಎಂದು ತಿಳಿದಾಗ ಅವಳಷ್ಟೇ ದಿಗಿಲುಗೊಳ್ಳುವ ಮಹೇಶ ಏನು ಮಾಡುತ್ತಾನೆ ? ಅಷ್ಟಕ್ಕೂ ಅವನು ಯಾರು ? ಮಗುವಿಗೆ ಏನಾದರೂ ತೊಂದರೆಯಾಯಿತೇ ? ವಾಣಿ ಹಾಗೂ ಮಹೇಶನ ಸಂಬಂಧ ಸುಧಾರಿಸಿತೇ ? ತಿಳಿಯಲು ಕತೆ ಓದಿ. ಆದರೆ, ಅಂತ್ಯದಲ್ಲಿ ಸತ್ಯ ಗೊತ್ತಾದಾಗ ಆಗುವ ಶಾಕ್ ಕೇವಲ ವಾಣಿ, ಮಹೇಶನಿಗೆ ಮಾತ್ರವಲ್ಲ. ಓದುಗನಿಗೂ ತಟ್ಟಬಹುದು. ಈ ಕತೆ ಕೇವಲ ಕೌಟುಂಬಿಕ ಕಥನ ಮಾತ್ರವಲ್ಲ. ಕ್ರೈಂ, ರೋಚಕ, ನಿಗೂಢದ ಪರಿಧಿಗೆ ಬರುತ್ತದೆ. ಅಂದ ಹಾಗೆ, ಈ ಕತೆ ಬೆಂಗಾಲಿ ಹಾಗೂ ಸಂಸ್ಕೃತಕ್ಕೂ ತರ್ಜುಮೆಯಾಗಿದೆ.
ಕಥಾ ಸಂಕಲನದ 'ಸ್ನೇಕ್ ಟ್ಯಾಟೂ' ಶೀರ್ಷಿಕೆಯ ಕಥೆ ಶ್ರವಣನ ಚಿಕ್ಕಂದಿನ ಕಹಿ ಘಟನೆಯನ್ನು ನೆನಪಿಸುತ್ತಿದ್ದ ಲತೀಫಾಳ ಸೊಂಟದ ಮೇಲಿನ ಸ್ನೇಕ್ ಟ್ಯಾಟೂವಿನಿಂದ ಶುರುವಾಗಿ ಧರ್ಮ, ರಾಜಕೀಯ, ಪ್ರೇಮ ಎಲ್ಲವನ್ನೂ ಒಳಗೊಳ್ಳುತ್ತದೆ. ಹಾವು ಮೊದಲೆಲ್ಲಾ ತನ್ನ ಸೋಲು ಎಂದೇ ತಿಳಿದುಕೊಳ್ಳುತ್ತಿದ್ದವನ ಬದುಕಲ್ಲಿ ಗೆಲುವು ತಂದಿತೇ ? ಓದಿ ನೋಡಿ.
ಒಬ್ಬರನ್ನು ಮುಟ್ಟಿದರೆ ಅವರ ಜೀವನದ ರಹಸ್ಯಗಳು ತಿಳಿದು ಹೋಗುತ್ತಿದ್ದ ಒಂದು ಅಲೌಕಿಕ ಶಕ್ತಿ ಬಂದರೆ ? ಅಂಥಹದ್ದೊಂದು ಶಕ್ತಿ ಬಂದಿತ್ತು ಕೆ.ಇ.ಬಿ ನೀಲಕಂಠನಿಗೆ. ಹಾಸ್ಯ ಮಿಳಿತ ವಿಷಾಧಬರಿತ ಮ್ಯಾಜಿಕ್ ರಿಯಾಲಿಸಮ್ ನಂತಹಾ ಕಥೆ ಇದು. ಮುಂದೇನಾಗಬಹುದು ? ಎಂಬ ಕುತೂಹಲದೊಂದಿಗೆ ಹಾಗಾಗದಿರಲಿ ಎನ್ನುವ ಭಾವ ಮೂಡಿಸುವ ಕಥೆ. ನೀಲಕಂಠನ ಪಾಲಿಗೆ ಶಾಪದ ರೂಪದ ವರ ಅವನನ್ನು 'ಅನ್ ಟಚೆಬಲ್' ಮಾಡಿದ್ದಂತೂ ಸುಳ್ಳಲ್ಲ.
'ಗಲೀಜು' ಕಥೆಯ ಆ ಮುಗ್ಧ ಹುಡುಗ ಪ್ರಬುದ್ಧನಾಗದೇ ಇದ್ದಿದ್ದರೆ ? ಅಥವಾ ಆ ಮುಗ್ಧತೆ ಬೇರೆ ರೀತಿಯಲ್ಲಿ ಜಾಹೀರಾಗಿದ್ದರೆ ? ಅಂತೂ ಅವನು ಶಣಿಯಾರ ಹೇಳುವ ಗಲೀಜು ಕಥೆಯ ಪಾತ್ರವಾದನು. ಇದಕ್ಕೆ ಕಾರಣ ಹುಡುಕುತ್ತಾ ಹೊರಟರೆ ಅದೆಷ್ಟು ತಪ್ಪಿತಸ್ಥರ ಪಾತ್ರವಿದೆ ಇಲ್ಲಿ..
'ರತಿ ಎಂಬ ದೇಶದ್ರೋಹಿ' ಕಥೆಯ ರತಿ ಧಿಕ್ಕರಿಸಿ ನಿಂತು ತನ್ನತನವನ್ನು ಹುಡುಕಿಕೊಳ್ಳಲು ಹೊರಟವಳು. ಅವಳ ಆ ಹಾದಿ ಸರಾಗವಾಗಿದ್ದಿದ್ದರೆ ಬಹುಶಃ ಪವನನ ಜೊತೆ ಸಿಗುತ್ತಿರಲಿಲ್ಲವೇನೋ.. ಕೆಲವೊಮ್ಮೆ ಸೌಂದರ್ಯ, ಶ್ರೀಮಂತಿಕೆ, ಮಾತಿನ ಚತುರತೆ ಎಲ್ಲವೂ ಜೊತೆಯಾದರೂ ಸಮಯ ಸಾಥ್ ನೀಡದಿದ್ದರೆ.. ಜೊತೆಗಿದ್ದವರೇ ವಿರೋಧಿಗಳಾದರೆ.. ಯಾವ ಪಟ್ಟ ಬೇಕಾದರೂ ಸಿಗಬಹುದು. ರತಿ ಎಂಬ ಸ್ವಾಭಿಮಾನಿ ಹುಡುಗಿ ಬದಲಾದ ಬಗೆಯ ಜೊತೆಗೆ ಬದಲಾಗದಂತೆ ಕಂಡರೂ ಬದಲಾದ ಪವನ ಕೂಡಾ ಕಾಣಸಿಗುತ್ತಾನೆ. ಕಡೆಗೆ ಗೆದ್ದದ್ದು ಪ್ರೀತಿಯಾ ? ದೇಶದ್ರೋಹಿ ಎಂಬ ಪಟ್ಟವಾ ? ಅಥವಾ ಮತ್ತೊಂದು ಹೊಸ ಸುದ್ದಿಯಾ ? ಓದಿ ನಿರ್ಧರಿಸಿ.
'ಮಂಗಳಂಗೆ ಮೊದಲಿನಿಂದಲೂ ಹಾಗೆ' ಕಥೆಯ ಮಂಗಳಾ ಹತ್ತಿರವಾಗಿದ್ದು ಎರಡು ಕಾರಣಕ್ಕೆ. ಅಪ್ಪನಿಗೆ ತಾನು ಕೆಟ್ಟ ಹೆಸರು ತರದೆ, ತೊಂದರೆ ಕೊಡದೆ ಒಳ್ಳೆಯ ಸ್ಥಾನಮಾನ ತಂದುಕೊಡಬೇಕು ಎನ್ನುವ ಅವಳ ಆಲೋಚನೆಯಿಂದ. ಮತ್ತೊಂದು
ಅವಳಲ್ಲಿ ಎಲ್ಲದಕ್ಕೂ ಉತ್ತರವಿದ್ದರೂ ಅವಳು ಕಾಲ್ಪನಿಕದಲ್ಲಷ್ಟೇ ಲಾಜಿಕ್ ಮಾತನಾಡಿ ಯಾರನ್ನಾದರೂ ಸೋಲಿಸಬಲ್ಲಳು. ಅವಳ ಎದುರಿಗೆ ಮಾತನಾಡುವವರ ಮುಂದೆ, ತಾನು ಅಭಿಪ್ರಾಯ ವ್ಯಕ್ತಪಡಿಸುವಾಗೆಲ್ಲಾ ಮೌನಿ.
ಇದು ಮಂಗಳನ ಕಥೆಯೇ ಆದರೂ ಅವಳ ಅಪ್ಪ ತನ್ನ ವಾದ ಸರಣಿಯಿಂದ ಮಗಳನ್ನು ಸಮರ್ಥನೆ ಮಾಡಿಕೊಳ್ಳುವ ಪರಿಯಿಂದ ಹೀರೋ.. ಆದರೆ, ಇದು ವಾಸ್ತವಕ್ಕೆ ಬಹಳ ದೂರ ಎನ್ನಿಸಿತು. ಆಕೆಯ ಅಪ್ಪ ಮಗಳನ್ನು ಮಾತ್ರವಲ್ಲ ಸಮರ್ಥಿಸಿದ್ದು ಇಡೀ ಹೆಣ್ಣು ಮಕ್ಕಳನ್ನು.
ಅಂತಹಾ ರಕ್ಷಣೆ, ಹೀರೋಹಿಸಮ್ ಅನ್ನು ಹೆಣ್ಣು ಮಕ್ಕಳ ತಂದೆಯಲ್ಲಿ ಅದರಲ್ಲೂ ಭಾರತೀಯ ಮನಸ್ಥಿತಿಯಲ್ಲಿ ಕಾಣುವುದು ಬಹಳ ಕಷ್ಟ. ಕಥೆ ಇಷ್ಟವಾದರೂ , ಪಾತ್ರ ಹತ್ತಿರವಾದರೂ ಕಥಾ ವಸ್ತುವಿನ ಕುರಿತು ಅಷ್ಟು ಮುಕ್ತವಾಗಿ ಮತ್ತೊಬ್ಬರಿಗೆ ದಾಟಿಸಲು ಕಷ್ಟವೆನಿಸುತ್ತಿದೆ.
'ಪ್ರೀತಿಗೊಂದು ಆಯುರ್ವೇದಿಕ್ ಮದ್ದು' ಕಥೆ ಹೇಳದೆಯೂ ಧರ್ಮವನ್ನೂ ಮೀರಿದ ಮಾನವೀಯತೆಯನ್ನು ತೋರಿತು. ನಂಬಿಕೆಯೊಂದೇ ಚಿಕಿತ್ಸೆಯನ್ನು ಸಫಲಗೊಳಿಸಬಲ್ಲದ್ದು.
ಮದನ್ ಸಿ.ಪಿ ಯವರು ಮಾಡಿರುವ ಕವರ್ ಪೇಜ್ ತುಂಬಾ ಇಷ್ಟವಾಯಿತು. ನೈಜವೆನಿಸುವಂತೆ ಬಂದಿದೆ. ಫೋಟೋಗಿಂತ ಪುಸ್ತಕ ಕೈಯ್ಯಲ್ಲಿ ಹಿಡಿದಾಗ ದಿಟ್ಟಿಸಿ ನೋಡಲು ಕೊಂಚ ಭಯವೇ ಎನ್ನಿಸಿತು.
ಇದರಲ್ಲಿ ಕೆಲವು ಕಥೆಗಳು ಕೆಲವು ಈ ಮೊದಲೇ ಪತ್ರಿಕೆ ಅಥವಾ ಕೆಲ ವೇದಿಕೆಗಳಲ್ಲಿ ಪ್ರಕಟಿತವಾದವು ಮತ್ತೆ ಕೆಲವು ತಿರಸ್ಕೃತವಾದವು. ಲೇಖಕರು ಹೇಳುವಂತೆ ಮೊದಲೆಲ್ಲಾ ಓ ಹೆನ್ರಿ, ಮೊಪಾಸಾ ಕಥೆಗಳ ಹಾಗೆ ಕೊನೆಗೊಂದು ಟ್ವಿಸ್ಟ್ ನಿಂದ ಓದುಗನನ್ನು ಬೆಚ್ಚಿಸಲು ಬರೆದವು ಎನ್ನುತ್ತಾರೆ. ಈ ಕಥಾ ಸಂಕಲನದ ಕೆಲವು ಕತೆಗಳಲ್ಲಿ ಈ ರೀತಿಯ ಕಥೆಗಳಿವೆ. ತಿರಸ್ಕೃತವಾದ ಕಥೆಗಳು ಓದಲಿಕ್ಕೆ ತುಂಬಾ ಚೆನ್ನಾಗಿದೆ. ಆದರೆ, ಪ್ರಕಟಿಸಲಿಕ್ಕಾಗುವುದಿಲ್ಲ ಎಂದು ಹೇಳಿದ ಕತೆಗಳು. ತಿರಸ್ಕೃತಗೊಂಡ ಕತೆಗಳು ಎಂದು ಹೇಳಿದ ಕತೆಗಳ ಪಟ್ಟಿ ನೋಡಿ ಅವುಗಳನ್ನು ಓದಿದಾಗ ನನಗನ್ನಿಸಿದ್ದು ಹಾಗೆಯೇ. ಕಥೆಗಳ ಶೈಲಿ ರೋಚಕವಾಗಿ ಪತ್ತೇದಾರಿ ಶೈಲಿಯಂತಿದ್ದರೂ ಹೇಳುವ ಭಾಷೆ ತೀರಾ ರಾ ಅನ್ನಿಸಿತು. ನನ್ನ ಓದಿಗೆ ದಕ್ಕಿದಂತೆ ಒಟ್ಟು ಕತೆಗಳು ಸಾರಾಂಶ ಹಾಗೂ ಕಥಾವಸ್ತುವಿನಿಂದ ಇಷ್ಟವಾದರೂ ಇಷ್ಟವಾಗದ್ದು ಹೇಳಿದ ರೀತಿ. ಜೊತೆಗೆ ಧಾರ್ಮಿಕ ಹಾಗೂ ರಾಜಕೀಯ ನಿಲುವು, ಘರ್ಷಣೆಗಳಿವೆ. ಲೋಕದ ವಿಕಾರಗಳನ್ನು ಚಿತ್ರಿಸಿದ್ದರೂ ಇಷ್ಟು ಹಸಿ ಎನ್ನಿಸಿದ್ದನ್ನು ಅರಗಿಸಿಕೊಳ್ಳಲು ಕಷ್ಟವೆನಿಸಿತು. ಬಹುಶಃ ಅಂತಹಾ ಕತೆಗಳನ್ನು ಓದಿ ಅರಗಿಸಿಕೊಳ್ಳುವ ಸಾಮರ್ಥ್ಯ ನನಗಿಲ್ಲವೋ ಏನೋ.. ವಿಚಿತ್ರ ಭಾವ ಹುಟ್ಟಿಸಿದ ಪುಸ್ತಕ ಎಂದಷ್ಟೇ ಹೇಳಬಲ್ಲೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ