ಪುಸ್ತಕದ ಶೀರ್ಷಿಕೆ : ಅನುರಕ್ತೆ
ಲೇಖಕರು : ವ್ಯಾಸರಾಯ ಬಲ್ಲಾಳ
ಪ್ರಕಾಶಕರು : ಲಲಿತಾ ಸಾಹಿತ್ಯ ಮಾಲೆ, ಧಾರವಾಡ
ಮೊದಲ ಮುದ್ರಣ : 1953
ಪುಟಗಳು : 282
'ಅನುರಕ್ತೆ' ವ್ಯಾಸರಾಯ ಬಲ್ಲಾಳರ ಮೊದಲ ಕಾದಂಬರಿ. ಮುಂಬಯಿಯ 'ನುಡಿ' ಎಂಬ ಸಾಪ್ತಾಹಿಕದಲ್ಲಿ ಆರಂಭದ ಕೆಲವು ಪ್ರಸಂಗಗಳು 'ಕನವರಿಸದ ಕುಂಕುಮ' ಎನ್ನುವ ಶೀರ್ಷಿಕೆಯಡಿಯಲ್ಲಿ ಮೂಡಿ ಬಂದಿದ್ದವು.
'ಅನುರಕ್ತೆ' ಕಾದಂಬರಿಯ ಶೀರ್ಷಿಕೆ ಕಂಡಾಗ ಪ್ರೇಮಕಥೆ ಇರಬಹುದಾ ಎನ್ನುವ ಊಹೆಯಿತ್ತು. ಆದರೆ, ಓದಿದ ನಂತರ ಇದು ಅಲ್ಪ ಸ್ವಲ್ಪ ಬದಲಾವಣೆಗಳೊಂದಿಗೆ ಇಂದಿನ ಕಾಲಕ್ಕೂ ಪ್ರಸ್ತುತ ಕಾದಂಬರಿ ಎನ್ನಿಸಿತು.
ಗೋಪಿಯ ಮನಸ್ಸಲ್ಲಿ ರೈಲಿನಲ್ಲಿ ನಡೆಯುತ್ತಿದ್ದ ಚರ್ಚೆಯೊಂದು ಆಲೋಚನೆಗೆ ಮುನ್ನುಡಿಯಿಟ್ಟಿತ್ತು. "ತತ್ವ ಮತ್ತು ಪ್ರೇಮ" ಎಂದು ಆಲೋಚನೆಯಲ್ಲಿ ಮುಳುಗಿರುವಾಗ ಅವನ ಆಲೋಚನೆಗೆ ಹೊಸ ರೂಪವನ್ನು ಕೊಟ್ಟಿದ್ದು ಪಕ್ಕದಲ್ಲಿ ಕುಳಿತು ನವಿರಾದ ತರಂಗಗಳನ್ನು ಎಬ್ಬಿಸಿ ಹೋದ ಯುವತಿ. ಜೊತೆಗೆ ಮಿತ್ರ ಕೃಷ್ಣಮೂರ್ತಿಯ ಪತ್ರ. ಅವನ ಮನಸ್ಸಿನಲ್ಲಿ ರೂಪು ತಳೆಯುತ್ತಿದ್ದ ವಿವಾಹದ ಆಲೋಚನೆಗೆ ಹಿಂದಿನ ಅವನ ನಡವಳಿಕೆಯಿಂದ ಅವನ ಅಣ್ಣ ಮೋಹನ ತಲೆ ಕೆಡಿಸಿಕೊಂಡಿರಲಿಲ್ಲ.
ಅತ್ತೆಯ ಮಗಳು ಲಕ್ಷ್ಮಿ ಅವನ ಬಾಳು ಬೆಳೆಗಬೇಕಾಗಿದ್ದ ಹುಡುಗಿ. ಆದರೆ, ಬಿ. ಎಸ್. ಸಿ ಓದಲು ದುಡ್ಡು ಕೊಡದ ಮಾವನ ಕಾರಣದಿಂದ ಲಕ್ಷ್ಮಿಯನ್ನು ನಿರಾಕರಿಸಿದ್ದ ಗೋಪಿ. ಹಾಗೆಂದು, ಗೋಪಿಯ ಮನೆಯಲ್ಲಿ ಬಡತನವಿತ್ತು ಎಂದಲ್ಲ. ಅವನ ಅಣ್ಣ ಮೋಹನರಾಯರು ಡಾಕ್ಟರ್. ಅಹಂಗೆ ಬಿದ್ದ ಪೆಟ್ಟಾಗಿತ್ತು ಗೋಪಿಗೆ ಅದು. ಅದಾದ ನಂತರ ಮೋಹನರಾಯರು ಗೋಪಿಯ ಮದುವೆಯ ಕುರಿತು ತಲೆ ಕೆಡಿಸಿಕೊಳ್ಳಲು ಹೋಗಲಿಲ್ಲ. ಹಾಗಾಗಿಯೇ ಗೋಪಿ ಇನ್ನೂ ಒಂಟಿಯಾಗಿದ್ದ. ಕೃಷ್ಣಮೂರ್ತಿ ಪತ್ರದಲ್ಲಿ ಅವನಿಗೆ ಮಂಗಳೂರಿಗೆ ಬರಲು ಆಹ್ವಾನವಿತ್ತಿದ್ದ.
ಕೃಷ್ಣಮೂರ್ತಿ ಹಾಗೂ ಗೋಪಿ ಇಬ್ಬರೂ ಗೆಳೆಯರಾದರೂ ಕೃಷ್ಣಮೂರ್ತಿ ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಮೀರೆಯನ್ನು ಮದುವೆಯಾಗಿ ನಗರದ ಜಂಜಾಟ ಬೇಡವೆಂದು ಇದ್ದುದರಲ್ಲಿಯೇ ಸುಖವಾಗಿ ಮಂಗಳೂರಿನಲ್ಲಿದ್ದರೆ ಗೋಪಿ 'ಅಕೌಂಟೆನ್ಸಿ' ಓದಿ ಕೆಲಸ ಹಿಡಿದ. ಅಣ್ಣ ಡಾಕ್ಟರ್ ಆಗಲು ಹೇಳಿದರೂ ಒಪ್ಪಿರಲಿಲ್ಲ. ಎರಡೂ ಕಾರಣಗಳಿಂದ ಅಣ್ಣ - ತಮ್ಮನ ಮಾತುಕತೆ ಅಷ್ಟಕ್ಕಷ್ಟೇ..
ಕೃಷ್ಣಮೂರ್ತಿ ಅವನಿಗೆ ಪತ್ರ ಬರೆದಿದ್ದಕ್ಕೆ ಕಾರಣ ಅವನ ಶಾಲೆಯ ಕನ್ನಡ ಪಂಡಿತರಾದ ಶ್ರೀನಿವಾಸರಾಯರು. ಅವರಿಗೆ ಇಬ್ಬರು ಹೆಣ್ಣು ಮಕ್ಕಳು. ದೊಡ್ಡವಳು ಸುಮಿತ್ರೆ, ಎರಡನೆಯವಳು ಪದ್ಮಾವತಿ. ಸುಮಿತ್ರೆಯ ವರ ಶೋಧನೆಗಾಗಿಯೇ ಆ ಪತ್ರ. ಎಷ್ಟೇ ಪ್ರಯತ್ನಿಸಿದರೂ ಸುಮಿತ್ರೆಯ ಮದುವೆಗೆ ಒಂದಲ್ಲಾ ಒಂದು ಅಡ್ಡಿ. ಹೆಚ್ಚಿನವರು ಸುಮಿತ್ರೆಯನ್ನು ನೋಡಲು ಬಂದು ಪದ್ಮಾವತಿಯನ್ನು ಒಪ್ಪುತ್ತಿದ್ದರು. ಆ ಕುಟುಂಬಕ್ಕೆ ಪರಮಾಪ್ತನಾಗಿದ್ದ ಮೂರ್ತಿ ಈಗ ತಾನೇ ವರ ಶೋಧನೆಗೆ ಮುಂದಾಳತ್ವ ವಹಿಸಿಕೊಂಡಿದ್ದ. ಮೊದಲೇ ತಾಯಿಯಿಲ್ಲದ ಮಕ್ಕಳು, ಈಗ ಶ್ರೀನಿವಾಸರಾಯರಿಗೂ ಅನಾರೋಗ್ಯ. ಹಾಗಾಗಿಯೇ, ಇನ್ನೂ ಎಸ್.ಎಸ್.ಎಲ್.ಸಿ ಓದುತ್ತಿದ್ದ ಸುಮಿತ್ರೆಗೆ ಮದುವೆಗೆ ಪ್ರಯತ್ನ ಮಾಡುತ್ತಿದ್ದರು.
ಪದ್ಮಾವತಿಗೂ ತಾನು ಅಕ್ಕನ ಮದುವೆಗೆ ಅಡ್ಡಿಯಾಗುತ್ತಿರುವ ವಿಚಾರ ತಿಳಿದು ತಾನು ಆ ಸಮಯದಲ್ಲಿ ಮನೆಯಲ್ಲಿರಲಾರೆನೆಂದು ಹೇಳಿದರೂ ವಿಧಿಯ ನಿಯಮವೇನೋ ಎಂಬಂತೆ ಗೆಳೆಯನ ಮನೆಯಲ್ಲಿ ಗೋಪಿ ಮೊದಲು ನೋಡಿದ್ದು ಪದ್ಮಾವತಿಯನ್ನೇ.. ಪದ್ಮಾವತಿ ಹೇಳಿದ ವರ್ಣನೆಯಿಂದ ಈಗಾಗಲೇ ಗೋಪಿ ಸುಮಿತ್ರೆಯ ಮನದಲ್ಲಿ ಬೇರೂರಿಬಿಟ್ಟಿದ್ದ. ಆದರೆ, ಗೋಪಿ ಒಪ್ಪಿ ವಿವಾಹವಾದದ್ದು ಪದ್ಮಾವತಿಯನ್ನೇ.. ಮೊದಲು ಶ್ರೀನಿವಾಸರಾಯರು ಒಪ್ಪಿಗೆ ನೀಡದಿದ್ದರೂ ಸುಮಿತ್ರೆ ಹಾಗೂ ಕೃಷ್ಣಮೂರ್ತಿಯ ಅಗ್ರಹದ ಮೇರೆಗೆ ಒಪ್ಪಿದ್ದರು. ಕಾರಣ, ಅವರ ಟ್ಯೂಮರ್ ಗೆ ಮುಂಬಯಿಯಲ್ಲಿ ಚಿಕಿತ್ಸೆಯ ವ್ಯವಸ್ಥೆಯಾಗುತ್ತದೆ ಎಂದು. ಈಗ, ಗೋಪಿಗೆ ಹಣದ ಮೋಹವಿರಲಿಲ್ಲ.. ಇನ್ನೂ ಲಕ್ಷ್ಮಿಗೆ ಮದುವೆಯಾಗದೇ ಇದ್ದಿದ್ದರೆ ಅವನು ಅವಳನ್ನಾದರೂ ಮದುವೆಯಾಗುತ್ತಿದ್ದ. ಹಾಗಾಗಿಯೇ, ಬಡತನ ನೋಡದೆ ಪದ್ಮಾವತಿಯ ಕೈ ಹಿಡಿದದ್ದು.
ಅವರಿಬ್ಬರ ಜೊತೆಗೆ ಶ್ರೀನಿವಾಸರಾಯರು ಮುಂಬಯಿಗೆ ಹೋಗಬೇಕೆಂದಿದ್ದರೂ ಸುಮಿತ್ರೆಯ ಅರೆಮನಸ್ಸಿನ ಮಾತಿಗೆ ಒಪ್ಪಿ ಮುಂದೂಡಿದರು. ಶ್ರೀನಿವಾಸರಾಯರ ಸಹೋದ್ಯೋಗಿ ಒಬ್ಬರ ಅಸೂಯೆಯಿಂದ ಅವಳ ಕುರಿತು ಒಡಕು ಮಾತು ಹರಡಿದವು. ಮದುವೆಯೂ ಆಗಲಿಲ್ಲ. ರಾಯರ ಸಾವು ಹತ್ತಿರದಲ್ಲಿಯೇ ಇದ್ದಿತು. ಸುಮಿತ್ರೆ ಒಬ್ಬಂಟಿಯಾದಳು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿಯೂ ಅನುತ್ತೀರ್ಣಳಾಗಿ ಬದುಕಿನ ಸೋಲುಗಳಲ್ಲಿ ಮುಳುಗಿದಳು.
ನಂತರ.. ಇದ್ದ ಒಬ್ಬ ಬಂಧು ಚಿಕ್ಕಪ್ಪನ ಮನೆಗೆ ಆಕೆ ಹೋಗಲಿಲ್ಲ. ಮೂರ್ತಿಯ ಮನೆಯಲ್ಲಿಯೂ ಇರಲು ಒಪ್ಪದೇ, ತಂಗಿಯ ಆಗ್ರಹಕ್ಕೆ ಮಣಿದು ಮುಂಬಯಿಗೆ ಹೊರಟಳು. ಗೋಪಿಯ ಮನೆಯಲ್ಲಿ ಅದುವರೆಗೂ ಅಣ್ಣ - ತಮ್ಮ ಹಾಗೂ ಶೀಲೆ - ಪದ್ಮಾವತಿ ಹೊಂದಿಕೊಂಡು ಬಾಳುತ್ತಿದ್ದರೂ ಮೋಹನರಾಯರು ಸುಮಿತ್ರೆಯ ಬರುವನ್ನು ವಿರೋಧಿಸಿದಾಗ ಗೋಪಿ ಬೇರೆ ಮನೆ ಮಾಡಿ ಅವರನ್ನು ಕರೆತಂದ. ನಂತರ, ಸ್ವಾವಲಂಬಿಯಾಗಿ ಬದುಕಲು ಸುಮಿತ್ರೆ ಕೆಲಸಕ್ಕೆ ಸೇರಿದಳು. ಪದ್ಮಾವತಿಗೆ ಮೊದಮೊದಲು ಅದು ಇಷ್ಟವಿಲ್ಲದೇ ಹೋದರೂ ನಂತರ ಸುಮಿತ್ರೆಯ ಮನಸ್ಸನ್ನರಿತು ಒಪ್ಪಿದಳು. ಪದ್ಮಾವತಿ ಗರ್ಭಿಣಿಯಾಗಿದ್ದ ಸಮಯದಲ್ಲಿ ಒಲ್ಲದ ಮನಸ್ಸಿನಿಂದ ಕೆಲಸಕ್ಕೆ ಹೊರಟಳು ಸುಮಿತ್ರೆ.
ಸುಮಿತ್ರೆಗೆ ಸಂಪಾದನೆ ಆತ್ಮಸ್ಥೈರ್ಯ ನೀಡಿತ್ತು ಎಂದರೂ ತಪ್ಪಾಗಲಾರದು. ಮೊದಮೊದಲು ಅಂಜಿದರೂ.. ನಂತರ ಎಲ್ಲರೊಡನೆ ಬೆರೆತಳು. ಆಗ ಅವಳ ಸಹೋದ್ಯೋಗಿ ಮುಖರ್ಜಿ ಯಾರೊಡನೆಯೂ ಬೆರೆಯದವನು ತನ್ನ ಅತ್ತಿಗೆಯ ಹೋಲಿಕೆ ಸುಮಿತ್ರೆಯಲ್ಲಿದೆಯೆಂದು ಹತ್ತಿರವಾದನು. ನಂತರ, ಒಂದು ವಿಷಗಳಿಗೆಯಲ್ಲಿ ಕಾಮ ಪ್ರೇರಿತನಾದವನನ್ನು ಕಂಡು ತಾನೂ ದುಡುಕಲಿದ್ದವಳು ಎಚ್ಚೆತ್ತಳು. ಆದರೆ, ಆಗಲೇ ಅವಳಿಗೆ ಅರಿವಾಗಿದ್ದು ತಾನು 'ಉದ್ದ, ಸಪೂರ, ಬೆಳ್ಳಗಿನ' ಎಂದರೆ ಗೋಪಿನಾಥನಲ್ಲಿ ಅನುರಕ್ತೆಯಾಗಿದ್ದೇನೆಂದು.
ಇತ್ತ ಪದ್ಮಾವತಿ ಮಗುವನ್ನು ಹೆತ್ತು ಸತ್ತಿದ್ದಳು. ಅಂತ್ಯ..?? ಅಂತ್ಯ ನೀವೇ ಓದಿ ತಿಳಿಯಿರಿ.
ಅಂತ್ಯ ನನಗೆ ನಿಜಕ್ಕೂ ಅಚ್ಚರಿಯೆನಿಸಿತು. ಮೋಹನರಾಯರ ಉದಾತ್ತ ಚಿಂತನೆ ಕಂಡು ಈ ಮನುಷ್ಯನಲ್ಲಿ ಎಷ್ಟೊಂದು ಮಾನವೀಯತೆ, ಆಲೋಚಿಸಿ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಇದೆಯೇ ಎನ್ನಿಸಿತು. ಕೆಲವು ಸಂಧರ್ಭದಲ್ಲಿ ಮನುಷ್ಯನನ್ನು ಆತನ ನಡವಳಿಕೆಗಳನ್ನು ಆಧರಿಸಿ ಇಲ್ಲವೇ ಕಟು, ಕಹಿ ಮಾತುಗಳನ್ನು ಆಧರಿಸಿ ನಿರ್ಧರಿಸಿಬಿಡುತ್ತೇವೆ. ಕಹಿ ಮಾತಿನ ಹಿಂದೆ ಎಷ್ಟು ಒಳ್ಳೆಯ ಗುಣವಿರುತ್ತದೆ ಎಂದೆನಿಸಿತು. ಅಷ್ಟೇ ಅಲ್ಲ.. ಅವರ ಆ ಕಟು ಮಾತು, ಕಹಿ ನಡವಳಿಕೆಗಳನ್ನು ಬದಿಗಿಟ್ಟು ನೋಡಿದರೆ ಅವರ ಗಮನಿಸುವಿಕೆ ಹಾಗೂ ತೆಗೆದುಕೊಳ್ಳುವ ತೀರ್ಮಾನದ ಹಿಂದಿರಬಹುದಾದ ಅವರ ದೂರಾಲೋಚನೆ ಅರಿವಾಗುತ್ತದೆ.
ಗೋಪಿಯ ನಡವಳಿಕೆಗಳನ್ನು ಗಮನಿಸಿದಾಗ ತನ್ನ ಹಿಂದಿನ ನಿರ್ಧಾರದ ಪ್ರಭಾವ ಅವನ ಮುಂದಿನ ನಡೆಯಲ್ಲಿ ಕಾಣುತ್ತದೆ. ಲಕ್ಷ್ಮಿಯನ್ನು ದುಡ್ಡಿನ ಕಾರಣಕ್ಕಾಗಿ ನಿರಾಕರಿಸಿದ್ದವನು ಮುಂದೆ ಅದರಂತೆ ಮಾಡಬಾರದು ಎಂದು ತನ್ನ ಸಂಗಾತಿಯನ್ನು ಕೈ ಹಿಡಿಯಲು ಒಪ್ಪುತ್ತಾನೆ. ನಂತರ, ಸುಮಿತ್ರೆಯನ್ನು ನಿರಾಕರಿಸಿದಕ್ಕೆ, ಅವಳ ಭವಿಷ್ಯವನ್ನು ರೂಪಿಸಲು ಪ್ರಯತ್ನಿಸುವವನಂತೆ ಕಾಣುತ್ತಾನೆ. ಎಲ್ಲೋ ಒಂದು ಕಡೆ ಸುಮಿತ್ರೆಯನ್ನು ಒಪ್ಪದಿರುವುದು ಮನಸ್ಸಿನ ಮೂಲೆಯಲ್ಲೆಲ್ಲೋ ಕೊರೆಯುವಂತೆ ಅನ್ನಿಸಿತು. ಅಲ್ಲದೇ, ಸುಮಿತ್ರೆಯನ್ನು ನಿರಾಕರಿಸಲು ಕಾರಣ ಆಕೆಯ ದಿಟ್ಟತನವನ್ನು ಕಂಡು ಹೆದರಿದ್ದ ಗೋಪಿ. ತನಗಿಂತ ಆಕೆ ಪ್ರಬುದ್ಧಳೆಂದೇ.. ಅಥವಾ ಆ ದಿಟ್ಟತನವನ್ನು ಎದುರಿಸುವ ಸ್ಥೈರ್ಯವಿರಲಿಲ್ಲವೇ ಅವನಿಗೆ ? ಅಥವಾ ಅವಳೇ ತನಗಿಂತ ಮೇಲು ಎಂದೆನಿಸಿತ್ತೇ..?? ಮುಂದೆ ಒಮ್ಮೆ ಅವಳು ತನ್ನ ಹಂಗಿನಲ್ಲಿಯೇ ಇರಲಿ ಎಂದೂ ಆಲೋಚಿಸಿದ್ದ ಗೋಪಿ ತನ್ನ ನಿರ್ಧಾರವನ್ನು ಬದಲಾಯಿಸಿಕೊಂಡರೂ.. ಏಕೋ ಸುಮಿತ್ರೆ ತನಗಿಂತ ಹೆಚ್ಚಿನ ಅರ್ಹತೆಯುಳ್ಳವಳು ಎಂದು ಭಾವಿಸಿದ್ದನೇನೋ ಎನ್ನಿಸಿತು. ಪುರುಷಾಧಿಕಾರದ ಅಹಂ ಕಂಡಿತು.
ಪದ್ಮಾವತಿ, ಮೀರೆ, ಶೀಲಾ ಎಲ್ಲರೂ ಮಾತೃ ಸ್ವರೂಪದಂತೆ, ಹೊಂದಿ ಬಾಳುವ, ಸಹಕರಿಸುವ ಗುಣದವರಂತೆ ಕಂಡರು. ಒಮ್ಮೆ ಪದ್ಮಾವತಿ ಸುಮಿತ್ರೆ ಕೆಲಸಕ್ಕೆ ಹೋಗುವುದನ್ನು ವಿರೋಧಿಸಿದ್ದು ಮತ್ಸರ ಎಂಬಂತೆ ಕಂಡರೂ ಅದು ಅಕ್ಕ - ತಂಗಿಯ ಬಾಂಧವ್ಯ. ಆಕೆ ಕಷ್ಟ ಪಡಬಾರದು ಎನ್ನುವ ಹಾರೈಕೆ, ಪೊಸೆಸಿವ್ ನೆಸ್ ಕಾಣಿಸಿತು.
ಮುಖ್ಯ ಪಾತ್ರ ಸುಮಿತ್ರೆ ಆಯ್ದುಕೊಂಡ ಸ್ವಾವಲಂಬನೆಯ ಹಾದಿ ಇಷ್ಟವಾಯಿತು. ಮದುವೆಯಷ್ಟೇ.. ಆರ್ಥಿಕ ಸ್ವಾವಲಂಬನೆ ಕೂಡಾ ಮುಖ್ಯವೇ. ಅವಳ ಖಿನ್ನತೆಯಿಂದ ಅವಳು ತನ್ನನ್ನು ತಾನು ಬದಲಾಯಿಸಿಕೊಂಡು ಗಟ್ಟಿಯಾಗಿ ನಿಲ್ಲುವ ಬಗೆ ಧೀಮಂತ ನಡೆ ಎನ್ನಿಸಿದರೂ.. ಅಣ್ಣನ ಸ್ಥಾನದಲ್ಲಿ ನಿಂತು ಮೂರ್ತಿ ಹೇಳಿದಾಗ ಇನ್ನೂ ಮುಂದಿನ ಓದಿಗೆ ಯಾಕೆ ಒಪ್ಪಲಿಲ್ಲ ಎಂಬ ಪ್ರಶ್ನೆಯೂ ಕಾಡದಿರದು. ಮನಸ್ಸಿನ ಮೂಲೆಯಲ್ಲೆಲ್ಲೋ ಗೋಪಿ ಇದ್ದುದಕ್ಕೇ ಅವರೊಟ್ಟಿಗೆ ಮುಂಬಯಿಗೆ ಬಂದಳಾ ಎಂದೂ ಅನ್ನಿಸಿತು. ಬೇರೆ ಯಾರಿಗೂ ಹೊರೆಯಾಗಲಿಚ್ಛಿಸದ, ಮತ್ತೊಬ್ಬರ ಹಂಗಿಗೆ ಒಳಪಡದೆ ಬದುಕಲು ಇಚ್ಛಿಸಿದ್ದವಳು, ತನ್ನಿಂದ ಅಣ್ಣ - ತಮ್ಮ ಬೇರೆಯಾದರು ಎಂದು ತಿಳಿದು ಅಲ್ಲೇ ಉಳಿದದ್ದಾದರೂ ಏಕೆ ?ಆಕೆಯ ಹೃದಯಾಂತರಾಳದ ಪ್ರೀತಿಯೇ ಇದಕ್ಕೆ ಕಾರಣವಾ.. ಅದನ್ನು ತಪ್ಪು ಎಂದೂ ಹೇಳಲಾಗದು. ಮೊದಲ ಪ್ರೇಮವೆಂಬುದು ಒಬ್ಬರ ಬದುಕಲ್ಲಿ ಮರೆಯಲಾಗದ್ದು. ಅವಳು ಗೋಪಿಯಲ್ಲಿ ಅನುರಕ್ತೆಯಾದರೂ ಎಲ್ಲಿಯೂ ಎಲ್ಲೆ ಮೀರಲಿಲ್ಲ. ಸೌಜನ್ಯದ ಗಡಿ ದಾಟಲಿಲ್ಲ. ಅವರ ಸಂಸಾರದ ಒಳ ಪ್ರವೇಶಿಸಲಿಲ್ಲ. ಅವನು ಸುಖವಾಗಿರಲೆಂಬ ನಿಸ್ವಾರ್ಥ ಅನುರಕ್ತೆ ಅವಳು.
ಕಥಾವಸ್ತು ಈ ಕಾಲಕ್ಕೂ ಪ್ರಸ್ತುತ. ಪ್ರೇಮ ವಿವಾಹಗಳನ್ನು ಹೊರತುಪಡಿಸಿ ಇಂದಿಗೂ ಕೆಲವು ವಿವಾಹಗಳ ವರಪರೀಕ್ಷೆ ಅಥವಾ ವಧುಪರೀಕ್ಷೆ ನಡೆಯುವಾಗ ಅಕ್ಕನನ್ನು ಬಿಟ್ಟು ತಂಗಿಯನ್ನು ಒಪ್ಪುವುದು, ಅಣ್ಣನ ಬದಲಿಗೆ ತಮ್ಮನನ್ನು ಒಪ್ಪುವುದು ಆಗುತ್ತಲೇ ಇದೆ.
ಮೊದಲ ಪ್ರೇಮವನ್ನು ಮರೆಯಲಾಗದೆ, ಅವರನ್ನು ಪಡೆದುಕೊಳ್ಳಲು ಸಹಾ ಆಗದೇ.. ಆಪ್ತರಿಗೆ ಮೋಸ ಮಾಡಲೂ ಆಗದೆ ಪ್ರೇಮಿಸುವವರು ಚೆನ್ನಾಗಿರಲಿ ಎಂಬುವವರೂ ಇದ್ದಾರೆ. ವಿವಾಹ, ಸ್ವಾವಲಂಬನೆ, ಸ್ಥೈರ್ಯ ಎಲ್ಲವೂ ಪ್ರಸ್ತುತಕ್ಕೆ ಹೋಲುತ್ತದೆ. ಒಳ್ಳೆಯದನ್ನು, ಒಳ್ಳೆಯ ಆಯಾಮದಿಂದ ನೋಡುವಂತೆ ಮಾಡಿದ ಕಾದಂಬರಿ. ಕೆಟ್ಟತನವೇ ಇರಲಿಲ್ಲವಾ..?? ಎಂದರೆ, ಇತ್ತು. ಆದರೆ, ಕೆಡುಕು ಮಾಡಿದವರಿಗೆ ಸಮಯವೇ ಉತ್ತರಿಸಿತ್ತು ಇಲ್ಲಿ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ