ಪುಸ್ತಕದ ಶೀರ್ಷಿಕೆ : ಅಗಮ್ಯ
ಲೇಖಕರು : ಪೂರ್ಣಿಮಾ ಮಾಳಗಿಮನಿ
ಪ್ರಕಾಶಕರು : ಸಪ್ನ ಬುಕ್ ಹೌಸ್
ಮೊದಲನೇ ಮುದ್ರಣ : 2022
ಪುಟಗಳು : 129
ಬೆಲೆ : 140 ರೂ.
ಬದುಕಿನಲ್ಲಿ ಗಮ್ಯ ಮುಖ್ಯವೇ ಅಥವಾ ಹೋಗುವ ದಾರಿ ಮುಖ್ಯವೇ ಎನ್ನುವ ಪ್ರಶ್ನೆಯೊಂದು ಎದುರಾಗುತ್ತದೆ. ಆದರೆ, ಇಲ್ಲಿನ ಶೀರ್ಷಿಕೆ 'ಅಗಮ್ಯ' ಎನ್ನುವುದು ವಿಭಿನ್ನವಾಗಿದ್ದು ಸೆಳೆಯಿತು. ಹಾಗಾದರೆ, ಗಮ್ಯದೆಡೆಗೆ ಸಾಗುವ ದಾರಿ ಮುಖ್ಯ ಎಂದರ್ಥವಿರಬಹುದೇ ಎಂದೆನಿಸಿದರೂ ಗಮ್ಯಕ್ಕೆ ಸೇರಲಾಗದೇ ಇದ್ದಾಗ ಅದೊಂದು ಪರಿಪೂರ್ಣ ಪಯಣವಾಗಬಲ್ಲದೇ? ಎಂಬ ಸಂಶಯವೂ ಮೂಡಿತು.
ಆದರೆ , ಈ ಕಾದಂಬರಿಯಲ್ಲಿ ಬರುವ ಸಾಲು "ಪಯಣದಲ್ಲಿ ಗಮ್ಯ ಮುಖ್ಯವಲ್ಲ ನಿಜ, ಆದರೆ ಅಗಮ್ಯದ ಪಯಣದಲ್ಲಿ ಹೇಗೆ ನಡೆದರೂ ದಾರಿ ತಪ್ಪದಿರುವುದು ಸಾಧ್ಯವಿಲ್ಲ" ಅಗಮ್ಯದ ಕುರಿತ ನಿಶ್ಚಿತತೆ ಹಾಗೂ ಅನಿಶ್ಚಿತತೆಯನ್ನು ಬಿಚ್ಚಿಡುತ್ತದೆ.
ಕಾದಂಬರಿ ಗಾತ್ರದಲ್ಲಿ ಅಷ್ಟೇನೂ ದೊಡ್ಡದಲ್ಲವಾದರೂ ಕಥಾ ಹಂದರ ಮನಸ್ಸಿನಲ್ಲಿ ಉಳಿಯುತ್ತದೆ. ಹಿರಿಯರು ಹಾಗೂ ಯುವ ಜನಾಂಗದ ನಡುವಿನ ಹೊಂದಾಣಿಕೆ, ಆಲೋಚನೆ, ಬದುಕಿನ ಬಂಧನಗಳು, ಸಂತಸ, ಗಮ್ಯದ ಕನಸುಗಳು ಎಲ್ಲವೂ ತುಂಬಿವೆ. ಮುನ್ನುಡಿ ಓದುತ್ತಾ ಹೆಚ್ಚಿನಂಶ ಈ ಕಾದಂಬರಿ ಹಿರಿಯ ಜೀವಗಳಿಗೆ ಕನೆಕ್ಟ್ ಆಗಬಹುದೇನೋ ಎನ್ನಿಸಿಯೇ ಶುರು ಮಾಡಿದರೂ ಅದ್ಯಾವ ಮಾಯದಲ್ಲೋ ನಿರೂಪಣೆಯಲ್ಲಿಯೇ ತಮ್ಮ ತಮ್ಮ ಬದುಕನ್ನು ಬಿಚ್ಚಿಡುವ ಜಾನಿ ಹಾಗೂ ಬೃಂದಾ ಕನೆಕ್ಟ್ ಆಗಿ ಬಿಟ್ಟರು. ಇಲ್ಲಿನ ಕಥೆ ವಯಸ್ಸಿನದ್ದಲ್ಲ.. ಮನಸ್ಸಿನದ್ದು ಎನ್ನಿಸಿತು. ಹಿರಿಯರು ಹಾಗೂ ಕಿರಿಯರಲ್ಲಿ ಅದೆಷ್ಟು ಆಲೋಚನಾ ಶೈಲಿಯ ವಿಭಿನ್ನತೆ ಕಂಡು ಬಂದಿತೆಂದರೆ ಜೀವನಪ್ರೀತಿ ಹಿರಿಯರಿಗೇ ಹೆಚ್ಚು ಎನ್ನಿಸಿತು. ಇಲ್ಲಿನ ಕಿರಿಯರಲ್ಲಿ ನಾನು ಕಂಡದ್ದು ಜೀವನಪ್ರೀತಿ, ಉತ್ಸಾಹಕ್ಕಿಂತ ಹೆಚ್ಚು ಹಣ ಹಾಗೂ ಆಸ್ತಿಯ ಹಪಾಹಪಿ. ಮನುಷ್ಯ ಅದರ ಕಡೆಗೆ ಹೆಚ್ಚು ಗಮನ ಕೊಟ್ಟು ಗಮ್ಯದೆಡೆಗಿನ ಆಸಕ್ತಿಯನ್ನೇ ಕಳೆದುಕೊಳ್ಳುತ್ತಾನೇನೋ ಎಂದುಕೊಳ್ಳುವಾಗಲೇ ಅದು ಭದ್ರತೆಯ ಮುಂದಾಲೋಚನೆ ಕೂಡಾ ಆಗಿರಬಹುದಲ್ಲವಾ ಎನ್ನಿಸಿತು. ನಿರೂಪಣಾ ಶೈಲಿ ಹಾಗೂ ಕಥಾ ವಸ್ತುಗಳೆರಡೂ ವಿಭಿನ್ನ ಹಾಗೂ ವಿಶಿಷ್ಟ. ಮುಖಪುಟ ಕೂಡಾ ಅರ್ಥಪೂರ್ಣವಾಗಿದ್ದು ಮನಮುಟ್ಟುವಂತೆ ಚಿತ್ರಿತವಾಗಿದೆ. ಮುಖಪುಟ ಚಿತ್ರಿಸಿರುವುದು ಲೇಖಕಿ ಪೂರ್ಣಿಮಾರವರ ಮಗಳು ಪೂರ್ವಿ ಮಾಳಗಿಮನಿ. ಜೊತೆಗೆ, ಪ್ರತಿ ಅಧ್ಯಾಯಕ್ಕೂ ಮುನ್ನ ಬರುವ ಆಯ್ದ ಕವಿಗಳ ಸಾಲುಗಳು ಕೂಡಾ ಇಷ್ಟವಾದವು.
ಬೆಂಗಳೂರಿನ ಹೊರ ವಲಯದ ಕಾಸ್ಟ್ಲಿ ಜಗತ್ತಿನ ಅಪಾರ್ಟ್ಮೆಂಟ್ ನಲ್ಲಿ ತೆರೆದುಕೊಳ್ಳುವ ಜಗತ್ತು ಜನಾರ್ಧನ ಅಲಿಯಾಸ್ ಜಾನಿಯ ಕಣ್ಣಲ್ಲಿ ದುಬಾರಿ ಹಾಗೂ ಅಚ್ಚರಿಯ ಜೊತೆಗೆ ಒಂದಿಷ್ಟು ತಳಮಳಗಳನ್ನು ಸಹಾ ಮೂಡಿಸಿತು. ಮಿಲಿಟರಿ ಡಾಕ್ಟರ್ ಸರ್ವಿಸ್ ನಿಂದ ರಿಟೈರ್ಡ್ ಆಗಿದ್ದ ಅವರ ಬದುಕು ಈಗ ಮಗ, ಸೊಸೆ, ಮೊಮ್ಮಕ್ಕಳ ಜೊತೆಗೆ. ಇಳಿ ವಯಸ್ಸಿನಲ್ಲಿ ಸಂಗಾತಿಯನ್ನು ಕಳೆದುಕೊಂಡ ಸಂಧರ್ಭದಲ್ಲಿ ಜೊತೆಯಾದ ಮೊಮ್ಮಕ್ಕಳು ಜೊತೆಗೆ ತನ್ನಿಷ್ಟದಂತೆ ಫೋಟೋಗ್ರಾಫಿ ಮಾಡಲು ಕೊಂಡ ಕ್ಯಾಮೆರಾ ಸದ್ಯಕ್ಕೆ ಅವರ ನಿಕಟ ಸಹವರ್ತಿಗಳು. ಸಂಬಂಧಿಗಳ ಮನೆಗೆ ಬಂದಾಗ ಆ ಅಪಾರ್ಟ್ಮೆಂಟ್ ನಲ್ಲಿ ತಿರುಗಾಡುತ್ತಿರುವಾಗ ಕಂಡ ಆ ಮುಖ ಅವರಿಗೆ ಬೇರೆಯದ್ದೇ ಕತೆ ಹೇಳುವಂತಿತ್ತು.
ಮಾಸಿದ ದುಬಾರಿ ಸೀರೆ, ಬರಿಗಾಲು, ಕೆಂಪು ಶಾಲು ಸುತ್ತಲೂ ಕೆಟ್ಟ ವಾಸನೆ , ಕತ್ತಿನಲ್ಲಿ 'ಡಿಸೌನ್ಡ್' ಎನ್ನುವ ಬೋರ್ಡ್, ನಿಶ್ಚಲವಾಗಿ ಕುಳಿತಿದ್ದವಳ ಕಣ್ಣಲ್ಲಿ ಅದೇನೋ ಛಲ. ನಿಶ್ಚಲವಾಗಿ ಶೂನ್ಯವನ್ನು ದಿಟ್ಟಿಸುತ್ತಾ ಕುಳಿತಿದ್ದವಳ ಕಣ್ಣಲ್ಲಿ ಅದೆಷ್ಟು ಭಾವಗಳು. ಕೇವಲ ಭಾವರಹಿತವಾಗಿ ಅವಳನ್ನು ಕೇವಲ ಮನುಷ್ಯಳನ್ನಾಗಿ ನೋಡಿದರೆ ಆಕೆಯನ್ನು ಹುಚ್ಚಿ ಎಂದೇ ಕರೆಯುತ್ತಿದ್ದರೋ ಏನೋ.. ಇಲ್ಲಾ ಅಂತಹಾ ದುಬಾರಿ ಅಪಾರ್ಟ್ಮೆಂಟ್ ನಲ್ಲಿ ಇಲ್ಲದಿದ್ದರೆ ಅವಳನ್ನು ಖಂಡಿತ ಹುಚ್ಚಿಯೆಂದೇ ಭಾವಿಸಿಕೊಳ್ಳುತ್ತಿದ್ದದ್ದು. ಹೂಂ, ಹೂಂ.. ಅವಳು ಖಂಡಿತ ಹುಚ್ಚಿಯಲ್ಲ. ಆಕೆ ಪ್ರಸ್ತುತವಾಗಿ ಕಾಲೇಜೊಂದರ ಪ್ರಿನ್ಸಿಪಾಲ್. ಅವಳೇ ಬೃಂದಾ. ಇದು ಮಗನ ವಿರುದ್ಧ ಆಕೆಯ ಆಕ್ರೋಶ, ಪ್ರತಿಭಟನೆ.
ಆಕೆಯ ಮಗನನ್ನು ಆಕೆ ಗುರುತಿಸಿದ್ದೇ ಹಾಗೆ 'ಪ್ಯಾರಸೈಟ್' ಎಂದು. ಮದುವೆಯಾಗಿದ್ದರೂ ದುಡಿಯಲು ಯತ್ನಿಸದೆ, ತಾಯಿಯನ್ನೇ ಅವಲಂಬಿಸಿಕೊಂಡಿರುವ ಮಗ , ಸೊಸೆ. ಅವಳನ್ನೇ ಮನೆಯಿಂದ ಹೊರ ಹಾಕಬೇಕೆಂದು ಕಾಯುತ್ತಿದ್ದರು. ಇಬ್ಬರೂ ಅವಳ ಇರುವನ್ನೇ ದ್ವೇಷಿಸುವಾಗ ಆಕೆಗೆ ಯಾವ ಸವಲತ್ತುಗಳಿದ್ದರೂ ನೆಮ್ಮದಿಯ ಕೊರತೆ. ಮಗನ ಮೇಲಿನ ಆಕ್ರೋಶಕ್ಕೆ, ಈಗ ಆತ ಮಾಡುತ್ತಿದ್ದ ಕಿರಿಕಿರಿಗೆ ಇದು ಆಕೆಯ ಪ್ರತಿಕ್ರಿಯೆ. ವಯಸ್ಸಿರುವಾಗ ಪ್ರೇಮಿಸಿ ಮನೆಯನ್ನು ತ್ಯಜಿಸಿ ಹೊರಬಂದವಳು. ಈಗ ಮಗ ಬೃಂದಾ ಅಣ್ಣ ಮಾರಲು ಹೊರಟಿರುವ ಮನೆಯನ್ನು ಪಿತ್ರಾರ್ಜಿತ ಆಸ್ತಿಯಲ್ಲಿ ನನಗೂ ಪಾಲಿದೆ ಎನ್ನುತ್ತಾ ಅಡ್ಡಗಾಲಾಗಿದ್ದ. ಸ್ವಾಭಿಮಾನಿ ಅಮ್ಮನಿಗೆ ಪರಾವಲಂಬಿ ಮಗ.
ಜನಾರ್ದನರ ಮಗ ಒತ್ತಾಯಿಸದಿದ್ದರೂ ಅಪ್ಪನಿಂದ ಮತ್ತೆ ಡಾಕ್ಟರ್ ಆಗಿ ಮರು ವೃತ್ತಿಯನ್ನು ಶುರು ಮಾಡಿಸಿ ಹಣ ಬಂದರೆ ಅದರಿಂದ ಸಂತೃಪ್ತಿಗೊಳ್ಳುವಾತ. ವೆಲ್ ಸೆಟಲ್ಡ್ ಎನ್ನುವ ಬೃಂದಾಳಿಗೇ ಎಲ್ಲಾ ಇದ್ದು ನೆಮ್ಮದಿಯಿಲ್ಲ. ಇನ್ನು ಅಷ್ಟು ವೆಲ್ ಸೆಟಲ್ಡ್ ಅಲ್ಲದ ಜನಾರ್ಧನ್ ನಂತಹವರು ಕೇಳಬೇಕೇ ? ಇದ್ದುದರಲ್ಲೇ ತೃಪ್ತಿ ಪಡುವ ಸಂಧರ್ಭಗಳು ಕಡಿಮೆಯಾಗುತ್ತಾ , ಖುಷಿಯಾಗಿರುವ ಸಂಧರ್ಭಗಳು ಕಡಿಮೆಯಾಗುತ್ತಾ ಸ್ವಾತಂತ್ರ್ಯ ಕೂಡಾ ಕಡಿಮೆಯಾಗುತ್ತಿತ್ತು. ತೀರಾ ವೆಲ್ ಸೆಟಲ್ಡ್ ಎನ್ನದಿದ್ದರೂ ಮಕ್ಕಳ ಹಂಗಿನಲ್ಲಿ ಬದುಕದಿದ್ದರೂ , ನಿವೃತ್ತರಾದ ಆ ಅಪಾರ್ಟ್ಮೆಂಟ್ ನ ಕೆಲವು ನಾಗರೀಕರ ಸಮಸ್ಯೆಗಳು ಇದಕ್ಕಿಂತ ಭಿನ್ನವಾಗಿರಲಿಲ್ಲ.
ಇವರೆಲ್ಲರ ಪಾಲಿಗೆ ಆಪ್ತ ಬಂಧುವಂತೆ ಬಂದವನೇ ಆಯುಷ್. ಅವನ ಕೆಲ ಮಾತುಗಳ ಸ್ಫೂರ್ತಿ ಹಾಗೂ ಆತ ತುಂಬಿದ ಧೈರ್ಯದಿಂದ ಹೊಸ ಬದುಕಿನ ಕನಸು ಕಾಣುತ್ತಾರೆ. ಆದರೆ, ಅದಕ್ಕೆ ಅಡ್ಡ ನಿಲ್ಲುವುದು ಬೃಂದಾ. ಇನ್ನೇನು ಎಲ್ಲವೂ ಸರಿಯಾಗಿ ಗಮ್ಯ ತಲುಪಿದರು ಎನ್ನುವಾಗ ನಡೆಯುವ ಅಚಾನಕ್ ಘಟನೆಗಳು ಅವರೆಲ್ಲರ ಬದುಕಿನಲ್ಲಿ ಬೇಡದ ತಿರುವನ್ನು ನೀಡಿ ಬಿಡುತ್ತದೆ. ಗಮ್ಯ ಸಿಗದ ಅವರ ಪಯಣ ಹಾಗೂ ಅವರ ಬದುಕು ನಮ್ಮಲ್ಲಿ ಮಿಶ್ರ ಭಾವವನ್ನು ಮೂಡಿಸಬಹುದು. ಇದೆಲ್ಲವನ್ನು ಓದಿಯೇ ಸವಿಯಿರಿ.
ಕಥಾವಸ್ತು ಮೇಲೆ ಕಾಣುವಷ್ಟು ಸರಳವಿಲ್ಲ. ಓದುಗರು ಊಹೆಯೇ ಮಾಡಲಾಗದ ತಿರುವುಗಳನ್ನು ನೀಡುತ್ತಾ ಓದುಗರ ಮುಕ್ತಾಯದ ಗಮ್ಯವನ್ನು ಸಹಾ ಅಗಮ್ಯ ಮಾಡುವಂತಹಾ ಕಾದಂಬರಿ. 'ಇಜಯಾ'ದಷ್ಟೇ ಇಷ್ಟವಾಯಿತು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ