ಮಂಗಳವಾರ, ಏಪ್ರಿಲ್ 7, 2026

ವಿಶೇಷಾಂಕದ ವಿಶೇಷಗಳು


ವಿಶೇಷಾಂಕ ಎಂದರೆ ನನಗೆ ಮೊದಲು ನೆನಪಾಗುವುದು 'ತರಂಗ' ವಿಶೇಷಾಂಕ. ಹಳ್ಳಿಯ ತೋಟದಲ್ಲಿದ್ದ ನಮ್ಮ ಮನೆಗೆ ಪೇಪರ್ ತರುತ್ತಿದ್ದರೂ.. ಅದನ್ನು ಹೊರತುಪಡಿಸಿ ಆಗಾಗ ತರುತ್ತಿದ್ದ ತರಂಗ, ಕರ್ಮವೀರ, ಕಸ್ತೂರಿ ಇವೆಲ್ಲವೂ ಇದ್ದರೂ.. ದೀಪಾವಳಿಯ ವಿಶೇಷವಾಗಿ ತರುತ್ತಿದ್ದದ್ದು ತರಂಗ ವಿಶೇಷಾಂಕವೇ. ಆಗಿನ ಮಕ್ಕಳ ಕತೆ ಪುಸ್ತಕಗಳು ಈ ರೀತಿ ವಿಶೇಷಾಂಕವನ್ನು ಹೊಂದಿರದಿದ್ದರೂ.. ಆ ಪಾಕ್ಷಿಕ ಅಥವಾ ಮಾಸದಲ್ಲಿ ಆ ಹಬ್ಬದ ಕುರಿತು ಕತೆಗಳಿರುತ್ತಿದ್ದವು. ತುಂತುರು ಹಾಗೂ ಚಂಪಕ ಹಾಗೆ ನೆನಪಿನಲ್ಲಿ ಉಳಿದಿವೆ. 2013- 15 ರ ಸಮಯದಲ್ಲಿ ಓದುತ್ತಿದ್ದ ವಿಜಯ ನೆಕ್ಸ್ಟ್ ಎನ್ನುವ ವಾರ ಪತ್ರಿಕೆಯ ವಿಶೇಷಾಂಕ ಬಹಳ ಇಷ್ಟವಾಗಿದ್ದವು. ಆ ವಾರಪತ್ರಿಕೆ ಹೆಚ್ಚು ವರ್ಷ ಪ್ರಕಟವಾಗಲಿಲ್ಲ. 


ಪುಟ್ಟ ಕಥೆ ಪುಸ್ತಕಗಳಿಂದ ಬಡ್ತಿ ಹೊಂದಿ ತರಂಗ, ಕಸ್ತೂರಿ, ಕರ್ಮವೀರ, ಮಯೂರ, ಮಂಗಳ ಹಿಡಿಯುವಂತಾದರೂ ಅಲ್ಲಿನ ಕಥೆಗಳು ಬೇಗ ಮುಗಿದು ಯಾವುದಾದರೂ ಹೆಚ್ಚಿನ ಕಥೆಗಳಿರುವ ಪುಸ್ತಕ ಸಿಕ್ಕರೆ.. ಎನ್ನಿಸುತ್ತಿತ್ತು. ಗ್ರಂಥಾಲಯದ ಖಾಯಂ ಓದುಗಳಾದ ನಂತರ ಅಲ್ಲಿ ಇದ್ದ ಹಳೆಯ ವಿಶೇಷಾಂಕಗಳನ್ನೂ ತಿರುವಿ ಹಾಕಿದೆ.


 ಚೆಂದದ ಮನಸೆಳೆಯುವ ಮುಖಪುಟ.. ಅದೂ ಸಾಂಪ್ರದಾಯಿಕ ಶೈಲಿಯಲ್ಲಿರುತ್ತಿತ್ತು. ಪುಟದ ಗಾತ್ರದಲ್ಲಿ ಹೆಚ್ಚಿದ್ದ ಪುಟಗಳನ್ನು ತೆರೆಯುವಾಗ ಯಾರು ಯಾರ ಬರಹವಿದೆ ಎನ್ನುವ ಪರಿವಿಡಿ ಓದಬೇಕೆಂದು ಅನ್ನಿಸುತ್ತಿರಲಿಲ್ಲ. ಮೊದಲ ಆದ್ಯತೆ ಕಥೆಗಳಿಗೆ. ನಂತರ ಹಾಸ್ಯ ಬರಹಗಳಿಗೆ.. ನಂತರ ಲೇಖನಗಳು ,ಕವಿತೆ ಹಾಗೂ ವ್ಯಂಗ್ಯ ಚಿತ್ರಗಳೆಲ್ಲವೂ ನಂತರಕ್ಕೆ. ಜಾಹೀರಾತುಗಳ ಸಂಖ್ಯೆಯೂ ಹೆಚ್ಚಿರುತ್ತಿತ್ತು. ಅಲ್ಲದೇ, ಜಾಹೀರಾತುಗಳ ಶೈಲಿ ಕೂಡಾ ವಿಭಿನ್ನವಾಗಿರುತ್ತಿತ್ತು. ಆ ಲೇಖಕರ ಹೆಸರುಗಳು ಈಗ ಅಷ್ಟು ನೆನಪಿನಲ್ಲಿ ಉಳಿದಿಲ್ಲ. ಆಗ ಲೇಖಕರ ಹೆಸರಿನ ಹಂಗಿಲ್ಲದೇ ಓದುತ್ತಿದ್ದ ಸಮಯ.


ಈಗಿನ ವಿಶೇಷಾಂಕಗಳಲ್ಲಿ ಮುಖಪುಟದ ಜೊತೆಗೆ ಸ್ಪರ್ಧಾ ವಿಜೇತ ಕಥೆಗಳು ಎಂಬ ಅಂಶ ಕುತೂಹಲದಿಂದ ಆ ಕಥೆಗಳು ಹೇಗಿರಬಹುದು ಎಂದು ಓದುವಂತೆ ಮಾಡುತ್ತವೆ. ಮೊದಲಿನಂತೆ ಹೆಚ್ಚಿನ ವೈವಿಧ್ಯಮಯ ಕಥೆಗಳು ಈಗ ಸಿಗದಿದ್ದರೂ ಸಮಕಾಲೀನ ಬರಹಗಾರರ ಹೆಸರುಗಳು ಚಿರಪರಿಚಿತ. ಅವರ ಬರಹದ ಶೈಲಿ ಪರಿಚಿತವಾಗಿರುವಂತೆ ಕಂಡರೂ ಅಪ್ರಕಟಿತ ಕಥೆ, ಕವಿತೆಗಳು ಹೊಸ ಓದಿಗೆ ದಾರಿ ಮಾಡಿಕೊಡುತ್ತವೆ. ಈಗಿನ ವಿಶೇಷಾಂಕಗಳಲ್ಲಿಯೂ ಜಾಹೀರಾತು ಹೆಚ್ಚೇ ಕಾಣುತ್ತದೆ. ಈಗಿನ ಆದ್ಯತೆ ಮೊದಲು ಸಂಪಾದಕರ ಮಾತು, ಕತೆ , ಕವಿತೆ ಹಾಗೂ ಲೇಖನಗಳಿಗೆ ಸಾಗುತ್ತದೆ. ಈಗೀಗ ಪುಟ್ಟಕತೆ, ನ್ಯಾನೋ ಕತೆಗಳು ಸಹಾ ಕಾಣುತ್ತವೆ. ಅನುವಾದಿತ ಕತೆ/ಕವಿತೆ,ಪ್ರವಾಸ, ಅಡುಗೆ, ಪದಬಂಧ, ಸುಡೊಕು, ಹನಿಗವನ ಹೀಗೆ ಒಂದೊಂದು ವಿಶೇಷಾಂಕದಲ್ಲಿ ಅವರದ್ದೇ ಆದ ವಿಶೇಷ. ಈ ಬಾರಿಯ ವಿಜಯ ಕರ್ನಾಟಕದ ಯುಗಾದಿ ವಿಶೇಷಾಂಕದಲ್ಲಿ ನಾಲ್ವರು ಬರಹಗಾರರು ಸೇರಿ ಬರೆಯುವ ಕಥೆ.. ಎಂದರೆ, ಒಬ್ಬರು ಬರೆದ ಕತೆಯನ್ನು ಅವರೊಂದಿಗೆ ಚರ್ಚಿಸದೆ ಮತ್ತೊಬ್ಬ ಬರಹಗಾರರು ಮುಂದುವರಿಸಿಕೊಂಡು ಹೋಗುವ ರೀತಿ. ಹೀಗೆ ನಾಲ್ವರು ಬರಹಗಾರರು ಸೇರಿ ಬರೆದ ಕತೆ ಇದೆ ಎಂಬ ಅಂಶ ಗಮನಿಸಿದೆ. 


ಸ್ವಾತಂತ್ರ್ಯ ದಿನದ ವಿಶೇಷಾಂಕ ಓದಿ ಸ್ವಾತಂತ್ರ್ಯದ ಕತೆಗಳು, ವಿಚಾರಗಳು ಇರುತ್ತವೆ ಎಂದು ಗಮನಿಸಿದ್ದವಳಿಗೆ

 ದೀಪಾವಳಿ ಅಥವಾ ಯುಗಾದಿ ವಿಶೇಷಾಂಕ ಎಂದರೆ ದೀಪಾವಳಿ ಅಥವಾ ಯುಗಾದಿಯ ಕುರಿತಾಗಿ ಮಾತ್ರ ಇರುತ್ತವೆ ಎಂಬ ತಪ್ಪು ತಿಳುವಳಿಕೆ ದೂರವಾಗಿದೆ. ಈಗ ಆನ್ಲೈನ್ ವೆಬ್ಸೈಟ್ ಹಾಗೂ ಪತ್ರಿಕೆಗಳು ಕೂಡಾ ಈ ವಿಶೇಷಾಂಕದ ಬಿಡುಗಡೆ ಮಾಡುತ್ತವೆ. ಮೊದಲೆಲ್ಲಾ ಓದಿನ ದೃಷ್ಟಿಯಿಂದ ಮಾತ್ರ ಅವಲೋಕಿಸುತ್ತಿದ್ದ ವಿಶೇಷಾಂಕಗಳು ಈಗ ನಾನು ಬರೆಯಲು ಶುರು ಮಾಡಿದ ನಂತರ ಕೊಂಚ ಸೂಕ್ಷ್ಮವಾಗಿ ಅವಲೋಕಿಸಲು ಶುರು ಮಾಡಿದ್ದೇನೆ. ಯುಗಾದಿ ವಿಶೇಷಾಂಕದಲ್ಲಿ ನಾನು ಸ್ಕಿಪ್ ಮಾಡುವ ಪುಟಗಳು ಎಂದರೆ ವರ್ಷ ಭವಿಷ್ಯ. ನಂಬಿಕೆ, ಅಪನಂಬಿಕೆಯ ಕಾರಣ ಎಂದಲ್ಲ.. ಮುಂದಾಗುವುದನ್ನು ಓದಿ ಸುಮ್ಮನೆ ಏಕೆ ತಲೆಕೆಡಿಸಿಕೊಳ್ಳಬೇಕೆಂಬುದು. 


ವಿಶೇಷಾಂಕಗಳನ್ನು ನಾನು ತಿರುವಿ ಹಾಕದೆಯೂ ನೆನಪಾಗುವ ಇತ್ತೀಚಿನ ಕೆಲವು ಕತೆ, ಕವಿತೆಗಳಿವೆ. ಈಗೀಗ ಚಿತ್ರತಾರೆಯರ ಸಂದರ್ಶನಗಳೂ ಹೆಚ್ಚಾಗಿ ಬರುತ್ತಿವೆ. ಕರ್ಮವೀರ,ಪ್ರಭಾತ ಹಾಗೂ ಸಂಚಯದ ಹಳೆಯ ಕೆಲವು ವಿಶೇಷಾಂಕಗಳು ಆನ್ಲೈನ್ ನ ಈ ಲಿಂಕ್ ನಲ್ಲಿ ಉಚಿತವಾಗಿ ಲಭ್ಯವಿವೆ. ( https://archive.org/search?query=%E0%B2%B5%E0%B2%BF%E0%B2%B6%E0%B3%87%E0%B2%B7%E0%B2%BE%E0%B2%82%E0%B2%95 )  ಆಸಕ್ತರು ಓದಬಹುದು.


ಪ್ರತಿಯೊಂದು ಪತ್ರಿಕೆ ಅಥವಾ ವಾರಪತ್ರಿಕೆಯ ವಿಶೇಷಾಂಕಗಳೂ ತಮ್ಮದೇ ರೀತಿಯಲ್ಲಿ ವಿಶೇಷವೇ ಆಗಿವೆ. ನಮಗೆ ಗೊತ್ತಿಲ್ಲದ ಕೆಲವು ಪ್ರಾದೇಶಿಕ ಪತ್ರಿಕೆಗಳ ವಿಶೇಷಾಂಕಗಳೂ ವಿಶಿಷ್ಟವೇ.. ಈ ಮೇಲಿನ ಅಭಿಪ್ರಾಯ ಕೇವಲ ನಾನು ಓದಿ ಕಂಡಂತೆ ಅಷ್ಟೇ.. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ